My Books
(1) ಮ್ಯಾನುವಲ್ ಆನ್ ಬ್ಯಾಂಕಿಂಗ್ (ಸಂಪಾದಿತ ಕೃತಿ), 1985 (5 ಪರಿಷ್ಕೃತ ಮುದ್ರಣ), ಕಾರ್ಪೊರೇಷನ್ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ (ಸಿಬಿಓಓ), ಮಂಗಳೂರು
(2) ಇಂಗ್ಲಿಷ್ ಮೇಡ್ ಈಸಿ (ಸಂಪಾದಿತ ಕೃತಿ) 1985 (5 ಮುದ್ರಣ), ಸಿಬಿಓಓ
(3) ಮೋಜಿನ ಗಣಿತ, 2000 (11ಮುದ್ರಣಗಳು), ನವಕರ್ನಾಟಕ ಪ್ರಕಾಶನ, ಬೆಂಗಳೂರು
(4) ಜನಜಾಗೃತಿಯ ಸಾಧನ: ಮಾಹಿತಿ ಮಂಥನ, 2002, ಬಳಕೆದಾರರ ವೇದಿಕೆ (ರಿ.), ಬಸ್ರೂರು
(5) ಎಂಬತ್ತರ ಕೊಯ್ಲಿನ ಕಾಳುಗಳು, 2004, ಮಿತ್ರ ಮಾಧ್ಯಮ, ಬೆಂಗಳೂರು
(6) ಹಸುರು ಹೆಜ್ಜೆ, 2005, ಕೃಷಿ ಅನುಭವ ಕೂಟ, ಅಡ್ಡೂರು, ಮಂಗಳೂರು
(7) ಬಳಕೆದಾರರ ಸಂಗಾತಿ, 2005, ಬಳಕೆದಾರರ ವೇದಿಕೆ (ರಿ.), ಮಂಗಳೂರು
(8) ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳು (ಸಂಪಾದಿತ ಕೃತಿ) 2006,
(12 ಮುದ್ರಣಗಳು) ಕೃತಿ ಪ್ರಕಾಶನ, ಮಂಗಳೂರು
(9) ಉತ್ತಮ ಆಳ್ವಿಕೆ: ಪ್ರೇರಕರ ಕೈಪಿಡಿ (ಸಂಪಾದಿತ ಕೃತಿ) 2008,
ಕರ್ನಾಟಕ ರೀಜಿನಲ್ ಓರ್ಗನೈಸೇಷನ ಫಾರ್ ಸೋಶಿಯಲ್ ಸರ್ವಿಸ್, ಬೆಂಗಳೂರು
(10) ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್, 2009, ಕಾಂತಾವರ ಕನ್ನಡ ಸಂಘ (ರಿ.)
(11) ಪದ್ಮಭೂಷಣ ಡಾ. ಬಿ. ಎಮ್. ಹೆಗ್ಡೆ, 2012, ಕಾಂತಾವರ ಕನ್ನಡ ಸಂಘ (ರಿ.)
(12) ಮನರಂಜನೆಗಾಗಿ ಬೀಜಗಣಿತ, 2013, ನವಕರ್ನಾಟಕ ಪ್ರಕಾಶನ
(13) ಮನಸ್ಸಿನ ಮ್ಯಾಜಿಕ್, 2014 (4 ಮುದ್ರಣ), ನವಕರ್ನಾಟಕ ಪ್ರಕಾಶನ
(14) ವಿಷಮುಕ್ತ ಊಟದ ಬಟ್ಟಲು ಆಂದೋಲನ ಕಥನ 2015-16, ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)
ಪುಸ್ತಕ: ಉಲ್ಲಾಸಕ್ಕೆ ದಾರಿ ನೂರಾರು
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2023 ಪುಟ: 128 ಬೆಲೆ: ರೂ. 150/-
ದಿನದಿನವೂ ಕ್ಷಣಕ್ಷಣವೂ ಉಲ್ಲಾಸದಿಂದ ಇರಬೇಕೆಂಬುದು ನಮ್ಮೆಲ್ಲರ ಬಹು ದೊಡ್ಡ ಆಶೆ. ಆದರೆ ಬಹುಪಾಲು ವ್ಯಕ್ತಿಗಳಿಗೆ ಹಾಗಿರಲು ಸಾಧ್ಯವಾಗುತ್ತಿಲ್ಲ. ಏನೋ ಸಂಕಟ, ಏನೋ ಆತಂಕ, ಏನೋ ಹತಾಶೆ, ಏನೋ ನಿರಾಶೆ, ಏನೋ ಒತ್ತಡ ನಮ್ಮನ್ನು ಬಾಧಿಸುತ್ತಲೇ ಇರುತ್ತದೆ.
ಹಾಗಿರುವಾಗ, ಅವನ್ನೆಲ್ಲ ಎದುರಿಸುತ್ತ, ಅವನ್ನೆಲ್ಲ ನಿಭಾಯಿಸುತ್ತ ಉಲ್ಲಾಸದಿಂದಿರಲು ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಲೇಖಕರು ಇಪ್ಪತ್ತೈದು ವರುಷಗಳಿಂದ ನಡೆಸಿದ ಅಧ್ಯಯನ, ತನ್ನ ಮೇಲೇಯೇ ಮಾಡಿಕೊಂಡ ಪ್ರಯೋಗಗಳ ಫಲವೇ ಈ ಅಪೂರ್ವ ಪುಸ್ತಕ.
ಇದರ 40 ಅಧ್ಯಾಯಗಳಲ್ಲಿ, ಪ್ರತಿಯೊಂದರಲ್ಲಿಯೂ ಒಂದು ಚಿಂತನೆಯನ್ನು ಅಡಿಪಾಯವಾಗಿ ಇರಿಸಿಕೊಂಡು, ಆ ನೆಲೆಯಲ್ಲಿ ಉಲ್ಲಾಸದಿಂದಿರಲು ಏನು ಮಾಡಬೇಕೆಂದು ಲೇಖಕರು ವಿವರಿಸಿದ್ದಾರೆ. ಉದಾಹರಣೆಗೆ, ಮೊದಲ ಹತ್ತು ಅಧ್ಯಾಯಗಳು:
1)ದಿನದ ಆರಂಭದಲ್ಲಿ ಉಲ್ಲಾಸ
2)ಉಲ್ಲಾಸಕ್ಕಾಗಿ ದಿನದ ಮೊದಲ ಹತ್ತು ನಿಮಿಷಗಳ ತಯಾರಿ
3)ಎಳೆಬಿಸಿಲು ಚುರುಕಾಗುವಾಗ ಉಲ್ಲಾಸ
4)ಬೆಳಗ್ಗೆ ನಮ್ಮೊಳಗೆ ಉತ್ಸಾಹ ತುಂಬಿಕೊಳ್ಳುವ ದಾರಿಗಳು
5)ಮಾನಸಿಕ ಒತ್ತಡದಿಂದ ಬಿಡುಗಡೆಗೆ ದಾರಿಗಳು
6)ಸಮಸ್ಯೆಯಿಂದುಂಟಾದ ಆತಂಕ ಪರಿಹಾರದ ದಾರಿಗಳು
7)ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದಾಗ…
8)ಸಮಸ್ಯಾ ಪರಿಹಾರಕ್ಕೆ ಮಾನಸಿಕ ಚಿತ್ರಣಗಳು
9)ಉಲ್ಲಾಸಕ್ಕಾಗಿ ಚಿಂತನೆಯ ದಿಕ್ಕು ಬದಲಾಯಿಸಿ
10)ನಿಮ್ಮ ಉಲ್ಲಾಸಕ್ಕೆ ನೀವೇ ಜವಾಬ್ದಾರಿ ವಹಿಸಿ
ಪುಸ್ತಕ: ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು
ಮೊದಲ ಮುದ್ರಣ: ಅಕ್ಟೋಬರ್ 2022 2ನೇ ಮುದ್ರಣ: ಎಪ್ರಿಲ್ 2023 ಪುಟ: 32 ಬೆಲೆ: ರೂ. 15/-
“ನೀವು ತಿನ್ನುವ ಆಹಾರದಲ್ಲಿ ವಿಷವಿದೆ” ಎಂದಾಗ ಬಹುಪಾಲು ಜನರು “ಇಲ್ಲ, ಸಾಧ್ಯವೇ ಇಲ್ಲ. ನಾವು ಎಷ್ಟೋ ವರುಷಗಳಿಂದ ಒಂದೇ ಮಳಿಗೆಯಿಂದ ಆಹಾರಧಾನ್ಯ ಖರೀದಿಸುತ್ತಿದ್ದೇವೆ. ಅದರಲ್ಲಿ ಯಾವತ್ತೂ ಹುಳ ಆಗಿಲ್ಲ. ಮನೆಯ ಹತ್ತಿರದ ಅಂಗಡಿಯಿಂದಲೇ ತರಕಾರಿ ತರುತ್ತಿದ್ದೇವೆ. ಇಲ್ಲಿಯ ವರೆಗೆ ನಮಗೇನೂ ತೊಂದರೆಯಾಗಿಲ್ಲ” ಎಂದು ವಾದ ಮಾಡುತ್ತಾರೆ.
ಆದರೆ, ಅವರಿಗೆ ತೊಂದರೆಯಾದಾಗ ಕಾಲ ಮಿಂಚಿರುತ್ತದೆ. ವಿಷಭರಿತ ಆಹಾರ ತಿಂದರೆ ಏನಾಗುತ್ತದೆ? ಎಂಬುದಕ್ಕೆ ಇತ್ತೀಚೆಗಿನ ಉದಾಹರಣೆ ಕೊರೋನಾ ವೈರಸ್ (ಕೋವಿಡ್ 19) ಧಾಳಿಯಿಂದಾಗಿ ಲಕ್ಷಗಟ್ಟಲೆ ಜನರ ಸಾವು. 13.09.2022ರ ವರೆಗಿನ ಇದರ ಅಂಕೆಸಂಖ್ಯೆಗಳು ಇಲ್ಲಿವೆ: (ಆಕರ: www.worldometers.info)
ಸೋಂಕಿತರ ಸಂಖ್ಯೆ ನಿಧನರಾದವರ ಸಂಖ್ಯೆ
ಜಗತ್ತಿನಲ್ಲಿ 61,44,04,344 65,18,291
ಭಾರತದಲ್ಲಿ 4,45,04,949 5,28,185
ಈ ಲಕ್ಷಗಟ್ಟಲೆ ಸಾವುಗಳಿಗೆ ಮುಖ್ಯ ಕಾರಣ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಎಂಬುದು ನಿರ್ವಿವಾದ. ನಮ್ಮ ದೈಹಿಕ ಆರೋಗ್ಯ ಮತ್ತು ಅದರ ಅಂಗವಾದ ರೋಗನಿರೋಧಕ ಶಕ್ತಿ ನಾವು ತಿನ್ನುವ ಆಹಾರವನ್ನು ಅವಲಂಬಿಸಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆದ್ದರಿಂದ, ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ.
ಪುಸ್ತಕ: ನಮ್ಮ ಹೆಮ್ಮೆಯ ಭಾರತ
ಲೇಖಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವ್ಯ ಸಂಪದ, “ಸುಮ", 5ನೇ ಕ್ರಾಸ್, ಬಿಜೈ ನ್ಯೂ ರೋಡ್, ಮಂಗಳೂರು 575004
ಮೊದಲ ಮುದ್ರಣ: 2022 ಪುಟ: 128 ಬೆಲೆ: ರೂ. 100/-
ಭಾರತದ ಜನಸಂಖ್ಯೆ ಎಪ್ರಿಲ್ 2023ರಲ್ಲಿ 144 ಕೋಟಿ ದಾಟಿದ್ದು, ನಮ್ಮ ದೇಶವೀಗ ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಭವಿಷ್ಯದ ಭರವಸೆಯಿತ್ತಿರುವ ಈ ಮಹಾನ್ ದೇಶದ ಬಗ್ಗೆ ಹೆಮ್ಮೆ ಪಡಲು ಒಂದೆರಡಲ್ಲ, ನೂರಾರು ಕಾರಣಗಳಿವೆ.
ಭವ್ಯ ಭಾರತದ ಪರಿಚಯದ ಬಗ್ಗೆ ಕನ್ನಡ ಪುಸ್ತಕ ಭಂಡಾರದಲ್ಲಿ ಅನೇಕ ಪುಸ್ತಕಗಳು ಇರಬಹುದಾದರೂ ಈ ಪುಸ್ತಕವು ವಿಶಿಷ್ಟವಾಗಿದೆ. ಭೌಗೋಳಿಕವಾಗಿ ಮೂರು ದಿಕ್ಕುಗಳಲ್ಲಿ ಮೂರು ಸಮುದ್ರಗಳಿಂದ ಆವೃತವಾದ, ವಿವಿಧ ಸಂಪನ್ಮೂಲಗಳಿಂದ ಸಮೃದ್ಧವಾದ, ಅಪರೂಪದ ವನ್ಯಜೀವಿಗಳು, ಭಾಷೆ, ಜನಸಮುದಾಯಗಳಿಂದ ಕೂಡಿರುವ ನಮ್ಮ ದೇಶವು ಪ್ರಪಂಚದ ಇನ್ನಿತರ ದೇಶಗಳಿಗೆ ಹೋಲಿಸಿದರೆ ಯಾವ ಕಾರಣಗಳಿಗಾಗಿ ವಿಭಿನ್ನವಾಗಿದೆ ಎಂಬುದಕ್ಕೆ ನೂರು ಉದಾಹರಣೆಗಳನ್ನು ಈ ಪುಸ್ತಕದಲ್ಲಿ “ಕ್ಯಾಪ್ಸೂಲ್” ರೂಪದಲ್ಲಿ ನೀಡಿದ್ದಾರೆ ಲೇಖಕರು. ಇಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಇರುವ ಮಾಹಿತಿ ಸಂಕ್ಷಿಪ್ತವಾಗಿದ್ದರೂ ಸ್ವಯಂಪೂರ್ಣವಾಗಿದೆ.
ಪುಸ್ತಕ: ಕೃಷಿ ಸಿರಿ
ಸಂಪಾದಕರು: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ರಾಜ್ಯಮಟ್ಟದ ಕೃಷಿ ಮೇಳ ಆಯೋಜನಾ ಸಮಿತಿ, ಕೊಲ್ನಾಡು-ಮುಲ್ಕಿ, ದಕ್ಷಿಣ ಕನ್ನಡ
ಪ್ರಕಟಣೆ: 2022 ಪುಟ: 100 ಬೆಲೆ: ರೂ. 100/-
ಭಾರತದ ಕೃಷಿರಂಗ ಚರಿತ್ರೆಯಲ್ಲೇ ಕಂಡುಕೇಳರಿಯದ ಸಂಧಿಕಾಲವನ್ನು ಎದುರಿಸುತ್ತಿದೆ. ಒಂದೆಡೆ ಹವಾಮಾನದ ವೈಪರೀತ್ಯಗಳು ಸ್ಫೋಟಕ ಸ್ಥಿತಿ ತಲಪಿದ್ದು, ಕೃಷಿಕರ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡುತ್ತಿವೆ. ಇನ್ನೊಂದೆಡೆ, ಕೊರೋನಾ ವೈರಸ್ (ಕೋವಿಡ್ ೧೯) ಹೊಸಹೊಸ ರೂಪಾಂತರಿಗಳ ಮೂಲಕ ಮತ್ತೆಮತ್ತೆ ದಾಳಿ ಮಾಡುತ್ತಿದೆ. ಇದರಿಂದಾಗಿ ಭಾರತ ಸಹಿತ ಇಡೀ ಜಗತ್ತು ತಲ್ಲಣಿಸಿದೆ.
ಭಾರತದ ಜನಸಂಖ್ಯೆ 144 ಕೋಟಿ ದಾಟಿದೆ. ಇಂತಹ ಅಗಾಧ ಜನಸಾಗರಕ್ಕೆ ಆಹಾರ ಒದಗಿಸುವ ಪುಣ್ಯದ ಕಾಯಕವನ್ನು ಮಾಡುತ್ತಿರುವವರು ಕೃಷಿಕರು. ಅವರನ್ನು ಅನ್ನದಾತರೆಂದು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಆದರೆ, ಕೃಷಿಕರಿಗೆ ಸಿಗೋದು ಹೀನಾಯ ಮಾತ್ರವಲ್ಲ ವಿವಿಧ ರೀತಿಯ ಶೋಷಣೆ. ಇದರಿಂದಾಗಿಯೇ, 2001 - 2011ರ ದಶಕದಲ್ಲಿ 85 ಲಕ್ಷ ರೈತರು ಕೃಷಿ ತೊರೆದಿದ್ದಾರೆ ಮಾತ್ರವಲ್ಲ ಕೃಷಿಕರ ಮಕ್ಕಳು ಕೃಷಿಯಿಂದ ದೂರ ಸರಿಯುತ್ತಿದ್ದಾರೆ.
ಭಾರತದ ಅಪರಾಧ ದಾಖಲೆ ಬ್ಯುರೋ (ಎನ್.ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 2,96,438. ಇದು ರೈತರ ಹತಾಶೆಯ ಸೂಚಕ, ಅಲ್ಲವೇ?
ಇದು, ಯಾವುದೇ ದೇಶ ಆತಂಕ ಪಡಬೇಕಾದ ಅಂಕಿಅಂಶಗಳು. ಆದ್ದರಿಂದಲೇ ನಮ್ಮ ದೇಶದ ರೈತರ ಆದಾಯವನ್ನು ಈ ವರುಷ ಇಮ್ಮಡಿಗೊಳಿಸುವ ಬಗ್ಗೆ ಮಾನ್ಯ ಪ್ರಧಾನಮಂತ್ರಿಯವರು ಕಳೆದ ಏಳು ವರುಷಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಈ ನಿಟ್ಟಿನಲ್ಲಿ, ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನು ಜ್ಯಾರಿಗೊಳಿಸಿದೆ.
ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ...
ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು. ಕೆಲವರು ಅನ್ನ ಸಹಿತ ಊಟ ತರಿಸಿ ಉಣ್ಣತೊಡಗಿದರು. ವೃದ್ಧ ದಂಪತಿ, ತಾವು ತಂದಿದ್ದ ಬುತ್ತಿ ಬಿಚ್ಚಿ ಚಪಾತಿ ತಿನ್ನುತ್ತಾ ಎರಡು ಕಾಫಿ ತರಿಸಿದರು. ಅವರು ಕಾಫಿ ಕುಡಿದು ಮುಗಿಸಿದಾಗ ಸರ್ವರ್ ಬಿಲ್ ತಂದಿತ್ತ. ಬಿಲ್ ಎಷ್ಟೆಂದು ಕೇಳಿದಾಗ, ಹಿಂದಿಯಲ್ಲಿ "ಬೀಸ್ ರುಪಿಯಾ" ಎಂದು ಉತ್ತರಿಸಿದ. ಅವರಿಗೆ ಅರ್ಥವಾಗಲಿಲ್ಲ. ಸರ್ವರ್ ಕೈಸನ್ನೆ ಮಾಡಿ ತೋರಿಸಿದ. ತಕ್ಷಣ ಅಜ್ಜಿಯ ಮುಖದ ಬಣ್ಣವೇ ಬದಲು. ಆಕೆ ಗಾಬರಿಯಾಗಿ ಕೈಗಳನ್ನಾಡಿಸುತ್ತಾ ತಮಿಳಿನಲ್ಲಿ ಉದ್ಗರಿಸಿದ್ದು, "ಅಬ್ಬಬ್ಬಾ, ಒಂದು ಕಪ್ ಕಾಫಿಗೆ ಹತ್ತು ರೂಪಾಯಿ! ನಮ್ಮ ಕಾಲದಲ್ಲಿ ಒಂದಾಣೆಗೆ ಎರಡು ಕಪ್ ಸಿಗುತ್ತಿತ್ತು." ಅವರಂತಹ ಹಿರಿಯರು ಹಳೆಯ ಕಾಲದ ರೂಪಾಯಿಯ ಪರ‍್ಚೇಸಿಂಗ್ ಪವರಿನ ಗುಂಗಿನಲ್ಲೇ ಇರುತ್ತಾರೆ. ರೂಪಾಯಿಯ ಬೆಲೆ ಕುಸಿದಿರುವುದು ಹೀಗೆ ಗಮನಕ್ಕೆ ಬಂದಾಗ ಅವರಿಗೆ ಆಘಾತ. ಮುಂದೊಂದು ದಿನ ನಮಗೂ ಹೀಗಾಗಬಹುದು, ಅಲ್ಲವೇ?
ಇಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ, ಗುಂಟೂರಿನತ್ತ ಸಾಗಿದ್ದೆ.
ಸುಮಾರು ಸಾವಿರ ಕಿಲೋಮೀಟರ್ ದೂರದ ಗುಂಟೂರನ್ನು ಅಪರಾಹ್ನ ತಲಪಿದಾಗ ಗೆಳೆಯ ನೆಟ್ಟಾರ್ ಎದುರಾದರು. ಅವರ ಜೊತೆ ದಕ್ಷಿಣ ಕನ್ನಡದವರ ಹೋಟೆಲಿಗೆ ಹೋಗಿ, ಬಿಸಿಬಿಸಿ ಇಡ್ಲಿ ತರಿಸಿದೆ - ಜೊತೆಯಲ್ಲೇ ಸಾಸರ್ ತುಂಬಾ ಚಟ್ನಿ. ತಕ್ಷಣವೇ ಬಕೆಟ್ನಲ್ಲಿ ಸಾಂಬಾರು ತಂದ ಸರ್ವರ್ "ಸಾಂಬಾರ್, ಸಾಂಬಾರ್" ಎನ್ನುತ್ತಾ ಬಕೆಟಿಗೆ ಸೌಟು ಬಡಿದು ಸದ್ದು ಮಾಡಿದ. "ಇದೇನು?" ಎಂದು ನೆಟ್ಟಾರರನ್ನು ಕೇಳಿದೆ. ಕೂಡಲೇ ಆ ಸರ್ವರ್ ’ಓ, ನೀವು ಊರಿನವರಾ" ಅಂತಂದು ನಗುತ್ತಾ ಅತ್ತ ಹೋದ. "ಇಲ್ಲಿನ ಕ್ರಮ ಹೀಗೆ. ಒಂದು ಇಡ್ಲಿ ತಿನ್ನಲು ಇಲ್ಲಿನವರಿಗೆ ಒಂದು ಸಾಸರ್ ಚಟ್ನಿ ಮತ್ತು ನಾಲ್ಕು ಸೌಟು ಸಾಂಬಾರ್ ಬೇಕಾಗುತ್ತದೆ" ಎಂದು ನೆಟ್ಟಾರರಿಂದ ವಿವರಣೆ. ಚಟ್ನಿಯಲ್ಲಿ ಇಡ್ಲಿ ಅದ್ದಿ ಬಾಯಿಗಿಟ್ಟೆ. ಬಾಯೊಳಗೆ ಬೆಂಕಿಯಿಟ್ಟಾಂತಾಯಿತು; ಉರಿ ತಡೆಯಲಾಗದೆ "ಹೋ" ಎಂದೆ. "ಮಾರಾಯರೇ, ಹೇಳಲು ಮರೆತೇ ಹೋಯ್ತು. ಇಲ್ಲಿನ ಚಟ್ನಿ ಉರಿ ಖಾರ, ಹಾಗೆಲ್ಲಾ ತಿನ್ನಬೇಡಿ" ಎಂದು ಎಚ್ಚರಿಸಿದರು ನೆಟ್ಟಾರ್. ಎರಡು ಲೋಟ ನೀರು ಕುಡಿದರೂ ತಗ್ಗದ ಉರಿ. ಅನ್ನನಾಳಕ್ಕೇ ಕಿಚ್ಚಿಟ್ಟ ಅನುಭವ. "ಮಜ್ಜಿಗೆ, ಮಜ್ಜಿಗೆ" ಎಂದು ಕೂಗಿ ನೆಟ್ಟಾರ್ ಮಜ್ಜಿಗೆ ತರಿಸಿದರು. ಐಸ್ ಹಾಕಿದ್ದ ಮಂದ ಮಜ್ಜಿಗೆ. ನಿಧಾನವಾಗಿ ಹೀರಿದೆ. ರುಚಿಯಾಗಿತ್ತು. ಇನ್ನೊಂದು ಗ್ಲಾಸ್ ಮಜ್ಜಿಗೆ ತರಿಸಿ ಸವಿದೆ. ಮರುದಿನದಿಂದ ಪ್ರತಿದಿನವೂ ಬೆಳಿಗ್ಗೆ ಇಡ್ಲಿ ಜೊತೆ ಎರಡು ಗ್ಲಾಸ್ ಮಜ್ಜಿಗೆ ಕುಡಿಯತೊಡಗಿದೆ. ಗುಂಟೂರಿನ ಚಟ್ನಿಯ ಸಹವಾಸ ಅಂದಿಗೇ ಬಿಟ್ಟುಬಿಟ್ಟೆ.
ನನಗೆ ಚದುರಂಗದ ನಂಟು ಬೆಳೆದದ್ದು ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಮೂಲೆಯ ಕೋಣೆ. ವಿಶಾಲವಾದ ಆ ಕೋಣೆಯಲ್ಲಿ ನಾವು ಹನ್ನೆರಡು ವಿದ್ಯಾರ್ಥಿಗಳ ಸಹ-ವಾಸ.
ರಾತ್ರಿ ಊಟವಾದ ಬಳಿಕ ಹೊತ್ತು ಕಳೆಯಲು ಈಗಿನಂತೆ ಆಗ ಟೆಲಿವಿಷನ್ ಹಾಗೂ ನೂರಾರು ಟಿವಿ-ಚಾನೆಲ್‍ಗಳು ಇರಲಿಲ್ಲ. ರೂಂಮೇಟ್ ಸಿದ್ಧಯ್ಯನಿಂದ ನನಗೆ ಪ್ರತಿದಿನ ಆಹ್ವಾನ, "ಒಂದಾಟ ಚೆಸ್ ಆಡೋಣ, ಬನ್ನಿ". ಮಂಚದಲ್ಲಿ ಎದುರುಬದುರು ಕೂತು, ನಡುವೆ ಚದುರಂಗದ ಹಾಸು ಹಾಸಿ, ನಮ್ಮಿಬ್ಬರ ಚದುರಂಗದ ಆಟ ಶುರು. ತುಸು ಹೊತ್ತಿನಲ್ಲಿ ನಮ್ಮ ಆಟಕ್ಕೆ ರಂಗೇರುತ್ತಿತ್ತು. " ಓ, ಒಂಟೆ ಹೋಯ್ತು", "ಛೇ, ಆನೆ ಬಿತ್ತು" ಎಂಬ ನಮ್ಮ ಉದ್ಗಾರದಿಂದಾಗಿ ಇತರ ರೂಂಮೇಟ್‍ಗಳಿಗೆ ಕುತೂಹಲ.
"ನಿದ್ದೆ ಮಾಡ್ಬೇಕು ಕಣ್ರಪೋ, ಬೇಗ ಲೈಟ್ ಆರಿಸಿ" ಎನ್ನುತ್ತಿದ್ದ ರೂಂಮೇಟ್‍ಗಳೂ ತಮ್ಮ ಮಂಚದಿಂದ ಎದ್ದು ಬರುತ್ತಿದ್ದರು . ನನ್ನ ಮಂಚದ ಪಕ್ಕದ ಮಂಚದಲ್ಲಿ ಕುಳಿತು, ತಾವೂ ಚದುರಂಗದಾಟದ ನಡೆಗಳ ಗುಂಗಿನಲ್ಲಿ ಮುಳುಗುತ್ತಿದ್ದರು. ಕೆಲವು ದಿನ ನಡುರಾತ್ರಿಯ ವರೆಗೂ ನಮ್ಮ ಆಟ ಸಾಗಿದ್ದುಂಟು. ಕೆಲವರಾಗಲೇ ಮುಸುಕಿನೊಳಗೆ ಗೊರಕೆ ಹೊಡೆಯುತ್ತಿದ್ದರು. ಆಟ ಮುಗಿಯುವವರೆಗೆ ಎಚ್ಚರವಿದ್ದವರು, ಆಟದ ನಡೆಗಳನ್ನು ಚರ್ಚಿಸುತ್ತಲೇ ನಿದ್ದೆಗೆ ಜಾರುತ್ತಿದ್ದರು.
My first day at Veterinary College Hostel in UAS Hebbal Campus, after joining B.Sc. (Agri) course in June 1973, ended with a jolt. When we had finished our dinner we heard a rumour, “Seniors are coming to the hosted for ragging the new-comers.”
Srinivas from Chikkaballapur and Uday Pilar were my roommates. We talked about the menace of ragging and went to bed.
After sometime, there was a knock on the door. We got up from our beds. Srinivas shouted in a raised woice, “Who is that?” There was no reply, but again there was a loud knock on the door. Then Srinivas opened the door. Three unknown persons were standing there. One of them mentioned a name and asked whether that person is in the room. Srinivas, in a rough voice, replied, “No.” Those persons quietly walked along the corridor and went out of the hostel. The night passed without any other incident.
ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜ್ ಹಾಸ್ಟೆಲಿಗೆ ನನ್ನನ್ನು ತಂದೆಯವರು ಸೇರಿಸಿದ್ದು ಜೂನ್ ೧೯೭೩ರಲ್ಲಿ - ಹೆಬ್ಬಾಳದ ಕೃಷಿಕಾಲೇಜಿನಲ್ಲಿ ನಾಲ್ಕು ವರುಷಗಳ ಬಿ.ಎಸ್ಸಿ.(ಎಗ್ರಿ) ಕೋರ್ಸಿನ ಕಲಿಕೆಗಾಗಿ. ಮೊದಲ ದಿನವೇ ಚಳಕು ಹುಟ್ಟಿಸಿದ ಗಾಳಿಸುದ್ದಿಯೊಂದು ಕಿವಿಗೆ ಬಿತ್ತು - ಹಾಸ್ಟೆಲಿನಲ್ಲಿ ಆ ದಿನ ರಾತ್ರಿ ರಾಗಿಂಗ್ ನಡೆಯಲಿದೆ ಎಂದು.
ಆ ಬಗ್ಗೆ ನನ್ನ ರೂಂಮೇಟ್ಸ್ ಚಿಕ್ಕಬಳ್ಳಾಪುರದ ಶ್ರೀನಿವಾಸ ಮತ್ತು ಉದಯ ಪಿಲಾರ್ ಜೊತೆ ಗುಸುಗುಸು ಮಾತು. ರಾತ್ರಿ ಊಟವಾದ ನಂತರ ಬಿಸಿಬಿಸಿ ಚರ್ಚೆ. ರಾಗಿಂಗ್ ಮಾಡಲು ಯಾರಾದರೂ ಬಂದರೆ ಒಂದು ಕೈ ನೋಡೇ ಬಿಡೋಣ ಎಂಬ ನಿರ್ಧಾರ.
ನಾವು ಮಲಗಿದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕೋಣೆಯ ಬಾಗಿಲು ಬಡಿದ ಸದ್ದು. ನಾವು ಮೂವರೂ ನಮ್ಮ ಮಂಚಗಳಿಂದ ದಡಕ್ಕನೆ ಎದ್ದೆವು. "ಯಾರೋ ಅದು, ಮಲಗಲಿಕ್ಕೂ ಬಿಡೋಲ್ಲ?" ಶ್ರೀನಿವಾಸ ದನಿಯೇರಿಸಿ ಕೇಳಿದ. ಹೊರಗಿದ್ದವರಿಂದ ಉತ್ತರವಿಲ್ಲ. ಪುನಃ ಜೋರಾಗಿ ನಮ್ಮ ಕೋಣೆಯ ಬಾಗಿಲು ಬಡಿದರು. "ಯಾರಂತ ನೋಡೇ ಬಿಡ್ತೀನಿ" ಎನ್ನುತ್ತಾ ಶ್ರೀನಿವಾಸ ಎದ್ದು ಹೋಗಿ ಬಾಗಿಲು ತೆಗೆದ. ಮೂವರು ಹೊರಗೆ ನಿಂತಿದ್ದರು. ಯಾರದೋ ಹೆಸರು ಹೇಳಿ, "ಅವನು ಈ ರೂಂನಲ್ಲಿದ್ದಾನಾ?" ಕೇಳಿದರು. "ಆ ಹೆಸರಿನವನು ಯಾವನೂ ಇಲ್ಲಿಲ್ಲ" ಎಂದು ಶ್ರೀನಿವಾಸ ಗಡುಸಾಗಿ ಹೇಳಿದ. ಬಂದಿದ್ದವರು ಮರು ಮಾತಾಡದೆ, ಹಾಸ್ಟೆಲಿನ ಕಾರಿಡಾರಿನ ಮಂದಬೆಳಕಿನಲ್ಲಿ ನಡೆದು ಹೋದರು. ಅವರೊಂದಿಗೆ ರಾಗಿಂಗಿನ "ಭೂತ"ವೂ ನಡೆದು ಹೋದಂತಾಯಿತು. ಅನಂತರ ನಮ್ಮ ಬ್ಯಾಚಿನ ಕೆಲವರಿಗೆ ಸೀನಿಯರ್ಸ್ ಕಿರುಕುಳ ನೀಡಿದ ಸುದ್ದಿ ಬಂತು. ಆದರೆ ನಮ್ಮ ತಂಟೆಗೆ ಯಾರೂ ಬರಲಿಲ್ಲ.
ಹಾಸ್ಟೆಲಿನ ಅನ್ನ-ಆಹಾರ