ಬೆಂಗಳೂರಿನ ಹೆಬ್ಬಾಳದ ವೆಟರ್ನರಿ ಕಾಲೇಜ್ ಹಾಸ್ಟೆಲಿಗೆ ನನ್ನನ್ನು ತಂದೆಯವರು ಸೇರಿಸಿದ್ದು ಜೂನ್ ೧೯೭೩ರಲ್ಲಿ - ಹೆಬ್ಬಾಳದ ಕೃಷಿಕಾಲೇಜಿನಲ್ಲಿ ನಾಲ್ಕು ವರುಷಗಳ ಬಿ.ಎಸ್ಸಿ.(ಎಗ್ರಿ) ಕೋರ್ಸಿನ ಕಲಿಕೆಗಾಗಿ. ಮೊದಲ ದಿನವೇ ಚಳಕು ಹುಟ್ಟಿಸಿದ ಗಾಳಿಸುದ್ದಿಯೊಂದು ಕಿವಿಗೆ ಬಿತ್ತು - ಹಾಸ್ಟೆಲಿನಲ್ಲಿ ಆ ದಿನ ರಾತ್ರಿ ರಾಗಿಂಗ್ ನಡೆಯಲಿದೆ ಎಂದು.
ಆ ಬಗ್ಗೆ ನನ್ನ ರೂಂಮೇಟ್ಸ್ ಚಿಕ್ಕಬಳ್ಳಾಪುರದ ಶ್ರೀನಿವಾಸ ಮತ್ತು ಉದಯ ಪಿಲಾರ್ ಜೊತೆ ಗುಸುಗುಸು ಮಾತು. ರಾತ್ರಿ ಊಟವಾದ ನಂತರ ಬಿಸಿಬಿಸಿ ಚರ್ಚೆ. ರಾಗಿಂಗ್ ಮಾಡಲು ಯಾರಾದರೂ ಬಂದರೆ ಒಂದು ಕೈ ನೋಡೇ ಬಿಡೋಣ ಎಂಬ ನಿರ್ಧಾರ.
ನಾವು ಮಲಗಿದ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕೋಣೆಯ ಬಾಗಿಲು ಬಡಿದ ಸದ್ದು. ನಾವು ಮೂವರೂ ನಮ್ಮ ಮಂಚಗಳಿಂದ ದಡಕ್ಕನೆ ಎದ್ದೆವು. "ಯಾರೋ ಅದು, ಮಲಗಲಿಕ್ಕೂ ಬಿಡೋಲ್ಲ?" ಶ್ರೀನಿವಾಸ ದನಿಯೇರಿಸಿ ಕೇಳಿದ. ಹೊರಗಿದ್ದವರಿಂದ ಉತ್ತರವಿಲ್ಲ. ಪುನಃ ಜೋರಾಗಿ ನಮ್ಮ ಕೋಣೆಯ ಬಾಗಿಲು ಬಡಿದರು. "ಯಾರಂತ ನೋಡೇ ಬಿಡ್ತೀನಿ" ಎನ್ನುತ್ತಾ ಶ್ರೀನಿವಾಸ ಎದ್ದು ಹೋಗಿ ಬಾಗಿಲು ತೆಗೆದ. ಮೂವರು ಹೊರಗೆ ನಿಂತಿದ್ದರು. ಯಾರದೋ ಹೆಸರು ಹೇಳಿ, "ಅವನು ಈ ರೂಂನಲ್ಲಿದ್ದಾನಾ?" ಕೇಳಿದರು. "ಆ ಹೆಸರಿನವನು ಯಾವನೂ ಇಲ್ಲಿಲ್ಲ" ಎಂದು ಶ್ರೀನಿವಾಸ ಗಡುಸಾಗಿ ಹೇಳಿದ. ಬಂದಿದ್ದವರು ಮರು ಮಾತಾಡದೆ, ಹಾಸ್ಟೆಲಿನ ಕಾರಿಡಾರಿನ ಮಂದಬೆಳಕಿನಲ್ಲಿ ನಡೆದು ಹೋದರು. ಅವರೊಂದಿಗೆ ರಾಗಿಂಗಿನ "ಭೂತ"ವೂ ನಡೆದು ಹೋದಂತಾಯಿತು. ಅನಂತರ ನಮ್ಮ ಬ್ಯಾಚಿನ ಕೆಲವರಿಗೆ ಸೀನಿಯರ್ಸ್ ಕಿರುಕುಳ ನೀಡಿದ ಸುದ್ದಿ ಬಂತು. ಆದರೆ ನಮ್ಮ ತಂಟೆಗೆ ಯಾರೂ ಬರಲಿಲ್ಲ.
ಹಾಸ್ಟೆಲಿನ ಅನ್ನ-ಆಹಾರ
ಹಾಸ್ಟೆಲಿನ ಸಾರು-ಸಾಂಬಾರಿನ ವಿಶೇಷ ಏನು ಗೊತ್ತೇ? ಅದರ "ರುಚಿ" ಎಂದಿಗೂ ಬದಲಾಗದು. ದಿನದಿನವೂ ಒಂದೇ ರುಚಿಯ ಸಾರು-ಸಾಂಬಾರಿನಲ್ಲಿ ಅನ್ನ ಕಲಸಿ ಉಣ್ಣುವಾಗ ರುಚಿರುಚಿಯಾದ ಮನೆಯೂಟದ ನೆನಪು.
ಹಾಸ್ಟೆಲಿನಲ್ಲಿ ಬೆಳಗ್ಗೆ ಎದ್ದಾಗಿನಿಂದ ಗಡಿಬಿಡಿ. ಯಾಕೆಂದರ ಸ್ನಾನಕ್ಕಾಗಿ ಬಾತ್-ರೂಂಗೆ ಹೋದರೆ ಅಲ್ಲಿಯೂ ಕ್ಯೂ. ಅಂತೂ ಸ್ನಾನ ಮುಗಿಸಿ ಮೆಸ್ಸಿಗೆ (ಭೋಜನಾಲಯ) ಬಂದರೆ ಕೆಲವು ದಿನ ನುಂಗಲಾಗದ ತಿಂಡಿತಿನಸು. ಅಡಿಗೆಭಟ್ರು ಇಡ್ಲಿ, ದೋಸೆ ಮಾಡಿದ ದಿನಗಳಲ್ಲಿ ತಿನ್ನಲು ಕಷ್ಟವಾಗುತ್ತಿರಲಿಲ್ಲ. ಉಪ್ಪಿಟ್ಟು ಅಥವಾ ಚಿತ್ರಾನ್ನ ಕೊಟ್ಟಾಗ ಕಷ್ಟ ಪಟ್ಟು ತಿನ್ನುತ್ತಿದ್ದೆವು. ದಪ್ಪಸಿಪ್ಪೆಯ ಕಡಲೆ ಬೇಯಿಸಿ ತಟ್ಟೆಗೆ ಹಾಕಿದ ದಿನಗಳಲ್ಲಿ ನಮ್ಮ ತಲೆಯೊಳಗೆ ಏಳುತ್ತಿದ್ದ ಗಹನವಾದ ಪ್ರಶ್ನೆ, "ನಾವೇನು ಮನುಷ್ಯರೋ ಕುದುರೆಗಳೋ?" ಅದರ ಉತ್ತರದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ಕುಳಿತರೆ, ಕೃಷಿಕಾಲೇಜಿನ ಪಾಠಕ್ಕೆ ತಡವಾಗುತ್ತಿತ್ತು. ಯಾಕೆಂದರೆ ವೆಟರ್ನರಿ ಕಾಲೇಜ್ ಹಾಸ್ಟೆಲಿನಿಂದ ನಮ್ಮ ಕೃಷಿಕಾಲೇಜು ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ನಾವು ನಡೆದೇ ಹೋಗಬೇಕಾಗಿತ್ತು.
ಮಧ್ಯಾಹ್ನ ಮತ್ತು ರಾತ್ರಿ ನಮ್ಮ ಊಟಕ್ಕೆ ಕ್ಯಾರೆಟ್ ಅಥವಾ ಬೀನ್ಸ್ ಪಲ್ಯ ಬಡಿಸಿದ ದಿನ ನಮ್ಮ ಅದೃಷ್ಟಕ್ಕಾಗಿ ನಮಗೇ ಆನಂದ. ಆದರೆ ನಮ್ಮ ಅದೃಷ್ಟ ಆಗಾಗ ಕೈಕೊಡುತ್ತಿತ್ತು. ಅಂದರೆ ಬಹುಪಾಲು ದಿನಗಳಲ್ಲಿ ಊಟದ ತಟ್ಟೆಯಲ್ಲಿ ಕೆಸುವಿನ ಗೆಡ್ಡೆಯ ಪಲ್ಯ ಪ್ರತ್ಯಕ್ಷ. ಆಗ "ತಿನ್ನುವುದೋ ಬಿಡುವುದೋ" ಎಂಬ ಸಮಸ್ಯೆ ನಮಗೆ. ಅದನ್ನು ತಿನ್ನದೆ ಬಿಟ್ಟದೆ ಹೊಟ್ಟೆ ತುಂಬದ ಸಂಕಟ. ಒಂದು ವೇಳೆ ತಿಂದರೆ, ಒಂದೊಂದು ತುತ್ತು ಜಗಿಯುವಾಗಲೂ ನುಂಗುವಾಗಲೂ ಸಂಕಟ.
ಕೆಲವು ದಿನ ಸಂಜೆ ನಾವು ಕಾಲೇಜಿನಿಂದ ಹಾಸ್ಟೆಲಿಗೆ ನಡೆದು ಹಿಂತಿರುಗಿದಾಗ ಫಿಲ್ಟರಿನಲ್ಲಿ ಕಾಫಿ ಮತ್ತು ಟೀ ಖಾಲಿ. ಮುಂಚೆ ಬಂದಿದ್ದ ವಿದ್ಯಾರ್ಥಿಗಳು ಹಲವರು ಎರಡೆರಡು ಕಪ್ ಕುಡಿದು ನಮಗಿಲ್ಲವಾಗುತ್ತಿತ್ತು. ಅಂತಹ ದಿನಗಳಲ್ಲಿ ರಾತ್ರಿಯೂಟದ ತನಕ ನಮ್ಮ ಹೊಟ್ಟೆಯಲ್ಲಿ ತಾಳಗಳ ಏಳುಬೀಳು.
ನಾವೆಲ್ಲರೂ ಪ್ರಥಮ ವರುಷದ ಕಲಿಕೆ ಮುಗಿಸಿ, ಎರಡನೇ ವರುಷಕ್ಕಾಗಿ ಕಾತರದಿಂದ ಕಾಯುತ್ತಿದ್ದೆವು. ಯಾಕೆಂದರೆ ಎರಡನೇ ವರುಷದಿಂದ ಹೆಬ್ಬಾಳದ ಕೃಷಿಕಾಲೇಜಿನ ಹಾಸ್ಟೆಲಿನಲ್ಲಿ ನಮ್ಮ ವಾಸ. ಆ ದಿನ ಬಂದೇ ಬಂತು. ಅಂದು ನಮಗೆಲ್ಲ ಬಹಳ ಖುಷಿ: ಪ್ರತಿದಿನ ನಾಲ್ಕು ಸಲ ಹಾಸ್ಟೆಲ್-ಕಾಲೇಜಿನ ನಡುವಣ ತಲಾ ಅರ್ಧ ಕಿಲೋಮೀಟರಿನ ನಡೆದಾಟ ತಪ್ಪಿದ್ದಕ್ಕಾಗಿ ಮತ್ತು ವೆಟರ್ನರಿ ಕಾಲೇಜು ಹಾಸ್ಟೆಲಿನ ಅಡುಗೆಯವರ ಊಟ-ತಿಂಡಿಯ "ರುಚಿ" ತಪ್ಪಿದ್ದಕ್ಕಾಗಿ.
ಹೆಬ್ಬಾಳ ಹಾಸ್ಟೆಲ್ ಸೇರಿದ ಮೊದಲ ದಿನವೇ ನಮ್ಮ ಸಂತೋಷ ಅರ್ಧಕ್ಕರ್ಧ ಇಳಿಯಿತು. ಯಾಕೆಂದರೆ ಇಲ್ಲಿನ ಹಾಸ್ಟೆಲಿನ ಅಡುಗೆಭಟ್ರ ಅಡುಗೆಯ ರುಚಿ ಬೇರೆಯಾಗಿರಲಿಲ್ಲ. ವೆಟರ್ನರಿ ಕಾಲೇಜ್ ಹಾಸ್ಟೆಲಿನ ಅಡುಗೆಯವರೇ ಇಲ್ಲಿಗೆ ವರ್ಗವಾಗಿದ್ದಾರೋ ಎಂಬ ಅನುಮಾನ ನಮಗೆ.
ಪ್ರತಿ ತಿಂಗಳ ಕೊನೆಯ ಭಾನುವಾರ ಮಧ್ಯಾಹ್ನ ಮೆಸ್ಸುಗಳಲ್ಲಿ ಹಬ್ಬದೂಟ (ಫೀಸ್ಟ್). ಅದು ವಿಶೇಷ ಅಡುಗೆ, ಸಿಹಿತಿನಿಸು, ಪಾಯಸಗಳ ಭೂರಿಭೋಜನ. ಆ ದಿನ ಮಧ್ಯಾಹ್ನ ಹೊಟ್ಟೆ ಬಿರಿಯುವಷ್ಟು ಉಣ್ಣುತ್ತಿದ್ದೆವು. ಅನಂತರ ಹಲವರದ್ದು ಬೆಂಗಳೂರು ನಗರಕ್ಕೆ ಸವಾರಿ - ಚಲನಚಿತ್ರ ನೋಡಲು ಅಥವಾ ಉಂಡಾಡಿಗುಂಡರಂತೆ ಬೀದಿ ಸುತ್ತಲಿಕ್ಕಾಗಿ. ಉಳಿದವರು ಹಾಸ್ಟೆಲಿನಲ್ಲಿ ಗಾಢ ನಿದ್ದೆಗೆ ಶರಣು. ಉಳಿದೆಲ್ಲ ದಿನಗಳಲ್ಲಿ ಸಂಜೆ ಸದ್ದುಗದ್ದಲ ತುಂಬಿರುತ್ತಿದ್ದ ಹಾಸ್ಟೆಲಿನಲ್ಲಿ ಆ ದಿನ ಸಂಜೆ ಮಾತ್ರ ಗಾಢ ಮೌನ.
ಮೊದಲನೆಯ ವರುಷ ನಮ್ಮ ಮೆಸ್ಬಿಲ್ ತಿಂಗಳಿಗೆ ರೂಪಾಯಿ ೭೫. ಅದು ಏರುತ್ತಾ ಏರುತ್ತಾ ಎರಡನೆಯ ವರುಷ ಹಾಸ್ಟೆಲಿನ ಚರಿತ್ರೆಯಲ್ಲೇ ಮೊದಲ ಬಾರಿ ತಿಂಗಳಿಗೆ ರೂಪಾಯಿ ೧೦೦ ದಾಟಿದಾಗ ಹಾಸ್ತೆಲಿನಲ್ಲಿ ಬಹಳ ಗುಲ್ಲು. ನಾವೆಲ್ಲ ಈ ಬೆಲೆಯೇರಿಕೆ ಪ್ರತಿಭಟಿಸಲು ಸಜ್ಜು. ಅಂತೂ ಹಾಸ್ಟೆಲಿನ ವಾರ್ಡನರಿಗೆ ಹಾಸ್ಟೆಲ್ವಾಸಿಗಳಿಂದ ಲಿಖಿತ ದೂರು ಸಲ್ಲಿಕೆ. ಮುಂದಿನ ತಿಂಗಳೂ ತಲಾ ರೂಪಾಯಿ ೧೦೦ ಮಿಕ್ಕಿದ ಮೆಸ್ಬಿಲ್ ಪ್ರಕಟವಾದಾಗ ಕೃಷಿವಿಶ್ವವಿದ್ಯಾಲಯದ ಉಪಕುಲಪತಿಗಳಿಗೂ ಲಿಖಿತ ಮನವಿ ಸಲ್ಲಿಕೆ. ಮನವಿ ಬರೆಯುವ ನಮೂನೆ ತಿಳಿದದ್ದಷ್ಟೇ ಇದರಿಂದ ನಮಗಾದ ಲಾಭ.
ಕರಾಳ ಮುಖ
ಹಾಸ್ಟೆಲ್ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು ಅಂತಲ್ಲ. ನಮ್ಮ ಹಾಸ್ಟೆಲ್ ಬದುಕಿಗೆ ಕರಾಳ ಮುಖಗಳೂ ಇದ್ದವು. ಮೆಸ್ಸಿನಲ್ಲಿ ಸರ್ವರ್ ಹುಡುಗನೊಬ್ಬನಿದ್ದ. ಒಂದು ದಿನ ಅವನು ಊಟದ ತಟ್ಟೆ ಇಡಲು ತಡ ಮಾಡಿದ ಎಂಬ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ದಬಾಯಿಸಿ, ಅವನ ಮೇಲೆ ಊಟದ ತಟ್ಟೆ ಎಸೆದರು. ಆದರೂ ಅವರ ಸಿಟ್ಟು ತಣಿಯಲಿಲ್ಲ. ಅದಾಗಿ ಕೆಲವೇ ದಿನಗಳಲ್ಲಿ ಏನೋ ಕಾರಣ ಹೇಳಿ ಅವನನ್ನು ತಮ್ಮ ರೂಮಿಗೆ ಕರೆಸಿದರು. ಅಲ್ಲಿ ಅವನಿಗೆ ಬಾಸುಂಡೆ ಬರುವಂತೆ ಥಳಿಸಿದರು. ಅವನ ಉಡುಪು ಚಿಂದಿ ಮಾಡಿದರು. ಮರುದಿನವೇ ಆತ ಹಾಸ್ಟೆಲಿನ ಕೆಲಸ ಬಿಟ್ಟು ಹೋದ. ಬಡತನದಿಂದಾಗಿ ವಿದ್ಯಾಭ್ಯಾಸ ತೊರೆದು, ಹೊಟ್ಟೆಪಾಡಿಗಾಗಿ ದುಡಿದು ತಿನ್ನುತ್ತಿದ್ದವನ ತುತ್ತು ಕಸಿದ ಕಾಲೇಜಿನ ವಿದ್ಯಾರ್ಥಿಗಳು ಎಂತಹ ಮನುಷ್ಯರು?
ಹಾಸ್ಟೆಲಿನ ಇನ್ನೊಂದು ಘಟನೆ ನನ್ನ ನಂಬಿಕೆಗಳನ್ನೇ ಅಲುಗಿಸಿತು. ಅಂದು ರಾತ್ರಿ ಊಟವಾಗಿ ಎಲ್ಲರೂ ನಮ್ಮ ನಮ್ಮ ರೂಂಗಳಲ್ಲಿದ್ದೆವು. ಆಗ ಒಮ್ಮೆಲೇ ಕತ್ತಲನ್ನು ಸೀಳಿಕೊಂಡು ಬಂತು ಕಿರುಚಾಟ, "ಒದೀರ್ರೀ, ನನ್ ಮಕ್ಳ ಕೈಕಾಲ್ ಮುರೀರ್ರೀ..." ರೂಮ್ನಿಂದ ಹೊರಬಂದು ನೋಡಿದಾಗ ಹಾಸ್ಟೆಲಿನ ಕಾರಿಡಾರಿನಲ್ಲಿ ಕೆಲವು ವಿದ್ಯಾರ್ಥಿಗಳು ದಡದಡನೆ ಓಡುತ್ತಿದ್ದದ್ದು ಕಾಣಿಸಿತು. ಅವರನ್ನು ಸುಮಾರು ಇಪ್ಪತ್ತು ವಿದ್ಯಾರ್ಥಿಗಳ ಗುಂಪೊಂದು ಆವೇಶದಿಂದ ಅಟ್ಟಿಸಿಕೊಂಡು ಹೋಗುತ್ತಿತ್ತು. ಆ ಗುಂಪಿನ ದಾಳಿಗೆ ಸಿಕ್ಕಿಬಿದ್ದು ಕಂಗೆಟ್ಟವರು "ನಿಮ್ಮ ದಮ್ಮಯ್ಯ, ಹೊಡೀಬ್ಯಾಡಿ" ಎಂದು ಅಂಗಲಾಚ ತೊಡಗಿದರು. ಆದರೂ ಹಲ್ಲೆಕೋರರು ಅವರನ್ನು ನೆಲಕ್ಕೆ ಕುಕ್ಕಿಕುಕ್ಕಿ ಥಳಿಸಿದರು, ಮನಬಂದಂತೆ ಒದೆದರು; ಹಾಕಿ ಸ್ಟಿಕ್ಗಳಿಂದ, ಕ್ರಿಕೆಟ್ ವಿಕೆಟ್ಗಳಿಂದ ಚಚ್ಚಿ ಹಾಕಿದರು; ಸೈಕಲ್ ಚೈನ್ಗಳಿಂದ ಬೀಸಿಬೀಸಿ ಬಡಿದರು. ಆ ಭಯಾನಕ ರಾತ್ರಿಯಲ್ಲಿ ಹಾಸ್ಟೆಲಿನ ಗೋಡೆಗಳು ಪ್ರತಿಧ್ವನಿಸಿದ್ದು ಎರಡು ವಿದ್ಯಾರ್ಥಿ ಪಂಗಡಗಳ ಪಾಶವೀ ಹೊಡೆದಾಟದ ಸದ್ದುಗಳನ್ನು. ಅದಕ್ಕೆಲ್ಲ ಮರುದಿನ ಸಾಕ್ಷಿಯಾಗಿ ಉಳಿದದ್ದು ಹಾಸ್ಟೆಲಿನ ಪ್ರವೇಶ ದ್ವಾರದ ನೆಲದಲ್ಲಿ ಒಣಗಿದ ರಕ್ತದ ಕಲೆಗಳು ಮಾತ್ರ. ಆ ಕಪ್ಪು ರಾತ್ರಿಯ ರಾಕ್ಷಸೀ ಘಟನೆ ನೆನೆದಾಗೆಲ್ಲ ನನಗೆ ಮತ್ತೆಮತ್ತೆ ನೆನಪಾಗುವ ಮಾತು "ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು".
ಕಾರ್ಟೂನ್ ಚಿತ್ರಣ: ಎಚ್.ಎಸ್.ವಿಶ್ವನಾಥ್
- ಅಡ್ಡೂರು ಕೃಷ್ಣ ರಾವ್