HRM

ಯುಗಾದಿಯ ಸಂದರ್ಭದಲ್ಲಿ ನೆನಪಾಗುವ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡು:
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ”

ಯುಗಯುಗಗಳ ಮುಂಚೆ ಆಚರಿಸುತ್ತಿದ್ದ ಯುಗಾದಿಯೇ ಮತ್ತೆ ಬಂದಿದೆಯಾದರೂ ಅದರಲ್ಲಿ ಹೊಸತನ್ನು ಕಾಣುವ, ಕಂಡು ಸಂಭ್ರಮಿಸುವ ತುಡಿತ ಇದೆಯಲ್ಲ, ಅದುವೇ ನಮರೆಲ್ಲರಿಗೂ ಹೊಸ ಹರುಷದ ಭರವಸೆಯ ಬೆಳಕು. ಎಂತಹ ಸಂದೇಶ!

ಕರ್ನಾಟಕದ ಕರಾವಳಿಯಲ್ಲಿ ಎಪ್ರಿಲ್ ತಿಂಗಳಿನಲ್ಲಿ ಯುಗಾದಿ ಹಬ್ಬದ ಸಂಭ್ರಮ. ತುಳುವರಿಗೆ ಇದು “ಬಿಸು ಹಬ್ಬ" (ತುಳುವಿನಲ್ಲಿ ಬಿಸು ಪರ್ಬ).

ಭಾರತದಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಯುಗಾದಿಯ ಆಚರಣೆ ಒಂದೇ ದಿನ ನಡೆಯುವುದಿಲ್ಲ. ವಿಂಧ್ಯಾ ಪರ್ವತದ ಉತ್ತರ ಭಾಗದಲ್ಲಿ “ಬಾರ್ಹಸ್ಪತ್ಯಮಾನ" ಪಂಚಾಂಗದ ಅನುಸಾರ ನಿಗದಿತ ದಿನದಂದು ಯುಗಾದಿಯ ಆಚರಣೆ. ವಿಂಧ್ಯಾ ಪರ್ವತದ ದಕ್ಷಿಣ ಭಾಗದಲ್ಲಿ ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗದ ಪ್ರಕಾರ ಯುಗಾದಿಯ ದಿನ ನಿಗದಿ. ತಮಿಳುನಾಡಿನಲ್ಲಿ ಸೌರಮಾನ ಯುಗಾದಿ ಆಚರಣೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಚಾಂದ್ರಮಾನ ಯುಗಾದಿಯ ಆಚರಣೆ.

ಚೈತ್ರ ಮಾಸದ ಮೊದಲ ದಿನ (ಅಂದರೆ ಅಮವಾಸ್ಯೆಯ ನಂತರದ ದಿನ) ಶುಕ್ಲ ಚಂದ್ರನ ಆಗಮನ. 2024ರಲ್ಲಿ ಎಪ್ರಿಲ್ 8ರಂದು ಅಮವಾಸ್ಯೆ. ಹಾಗಾಗಿ ಬೆಳಗುವ ಚಂದ್ರ ಕಾಣಿಸುವುದು ಎಪ್ರಿಲ್ 9ರಂದು. ಆದ್ದರಿಂದ ಅದೇ ದಿನ ಚಾಂದ್ರಮಾನ ಯುಗಾದಿಯ ಆಚರಣೆ. (2024ರಲ್ಲಿ ಎಪ್ರಿಲ್ 8ರ ಪೂರ್ವಾಹ್ನ ಚೈತ್ರಮಾಸದ ಮೊದಲ ತಿಥಿ ಶುರುವಾಗಿ ಎಪ್ರಿಲ್ 9ರ ಮಧ್ಯಾಹ್ನ 12 ಗಂಟೆಗೆ ಮುಕ್ತಾಯ.)  

ಸೌರಮಾನ ಪಂಚಾಂಗದಂತೆಯೂ ಹೊಸ ವರುಷದ ಮೊದಲ ದಿನ ಯುಗಾದಿ. ಅದರಂತೆ 2024ರಲ್ಲಿ ಎಪ್ರಿಲ್ 14 ಯುಗಾದಿ. ದೇವರಿಗೆ “ಕಣಿ” (ವಿಷು ಕಣಿ) ಸಮರ್ಪಣೆ ಯುಗಾದಿಯ ವಿಶೇಷ. ಕೃಷಿಕರಾದರೆ ತಮ್ಮ ಜಮೀನಿನಲ್ಲಿ ಬೆಳೆದ ಭತ್ತ, ಹೂ, ಹಣ್ಣು, ತರಕಾರಿಗಳನ್ನು ತಂದು ದೇವರಿಗೆ ಅರ್ಪಿಸಿ ಕೈಮುಗಿಯುತ್ತಾರೆ. ಈಗ ನಗರಗಳಲ್ಲಿ ವಿವಿಧ ಧಾನ್ಯ, ಹೂ, ಹಣ್ಣು, ತರಕಾರಿಗಳನ್ನು ಖರೀದಿಸಿ ತಂದು ದೇವರ ಮೂರ್ತಿಯೆದುರು ಇಟ್ಟು ನಮಿಸುತ್ತಾರೆ.

ಕರಾವಳಿಯಲ್ಲಿ ಯುಗಾದಿಯಂದು ಬೆಳಗ್ಗೆ ಎದ್ದೊಡನೆ ಯುಗಾದಿ "ಕಣಿ" ನೋಡಿ, ಕಣ್ತುಂಬಿಸಿಕೊಂಡು ಅದಕ್ಕೆ ನಮಿಸುವುದು ವಾಡಿಕೆ. ಅದಕ್ಕಾಗಿ ಮುಂಚಿನ ದಿನ ರಾತ್ರಿಯೇ "ಕಣಿ" ಜೋಡಿಸುತ್ತಾರೆ.

ಅಂದರೆ, ದೇವರ ಮೂರ್ತಿಯೆದುರು ಮರದ ಮಣೆ ಇಟ್ಟು, ಅದರ ಮೇಲೆ ಜೋಡಿ ಬಾಳೆಲೆ. ಬಾಳೆಲೆಯಲ್ಲಿ ಬಾಳೆಹಣ್ಣು, ಮಾವು, ಪೇರಳೆ, ಕಿತ್ತಳೆ, ಲಿಂಬೆ, ಮುಸುಂಬಿ, ನೆಲ್ಲಿ, ಪಪ್ಪಾಯಿ, ಕಲ್ಲಂಗಡಿ, ಪುನರ್ಪುಳಿ, ರಾಮಫಲ, ಸೀತಾಫಲ, ಅನಾನಸ್ ಇತ್ಯಾದಿ ಹಣ್ಣುಗಳು. ಜೊತೆಗೆ ಸೌತೆ, ಮುಳ್ಳುಸೌತೆ, ಬದನೆ, ಬೆಂಡೆ, ತೊಂಡೆ, ಅಲಸಂಡೆ, ಬೀನ್ಸ್, ರೆಕ್ಕೆ ಬೀನ್ಸ್, ಚೀನಿಕಾಯಿ, ಕುಂಬಳಕಾಯಿ, ಹೀರೆಕಾಯಿ, ಪಡುವಲಕಾಯಿ, ಹಾಗಲಕಾಯಿ ಇತ್ಯಾದಿ ತರಕಾರಿಗಳು. ಎಲ್ಲವನ್ನೂ ಚಂದವಾಗಿ ಜೋಡಿಸಿ ಹೂಗಳಿಂದ ಅಲಂಕಾರ. ಅಕ್ಕಿ, ಹಾಲು, ತೆಂಗಿನಕಾಯಿ, ಅಡಿಕೆ ಮತ್ತು ವೀಳ್ಯದೆಲೆಗಳ ಸಮರ್ಪಣೆ. ಹೀಗೆ ಜೋಡಿಸಿಟ್ಟ "ಕಣಿ" ಆಯಾ ಕುಟುಂಬದ ಸಮೃದ್ಧಿಯ ಹಾರೈಕೆಯ ಸಂಕೇತ. ಈ "ಕಣಿ"ಯನ್ನು ತುಳಸಿಕಟ್ಟೆ ಅಥವಾ ಭೂತಾರಾಧನೆ ನಡೆಯುವ ಮನೆಗಳಲ್ಲಿ ಭೂತದ ಕೋಣೆಯಲ್ಲಿ ಇರಿಸುವುದೂ ಸಂಪ್ರದಾಯ.

ಯುಗಾದಿಯ ದಿನ ಬೆಳಗ್ಗೆ ಬೇಗನೇ ಎದ್ದು, ಮನೆಯನ್ನು ಶುಚಿ ಮಾಡಿ, ಮಾವು-ಬೇವಿನ ಎಲೆಗಳಿಂದ ಮನೆಗೆ ತೋರಣ ಕಟ್ಟುವುದು ವಾಡಿಕೆ. ಅನಂತರ ಎಣ್ಣೆ-ಸ್ನಾನ ಮಾಡಿ, ಹೊಸ ಉಡುಪು ಧರಿಸುವ ಸಂಭ್ರಮ. ನಂತರ ಮನೆಯ ಹಿರಿಯರಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವ ಸಂಪ್ರದಾಯ. ಯುಗಾದಿಯಂದು ಬೇವು-ಬೆಲ್ಲ ಸವಿಯಲೇ ಬೇಕು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲೇ ಬೇಕು. ಯುಗಾದಿಯ ದಿನ ಮನೆಯ ಯಜಮಾನ ಹಣದ ಪೆಟ್ಟಿಗೆ ತೆರೆಯಬಾರದು; ಯಾರಿಗೂ ಹಣ ಅಥವಾ ಬೀಜ ಕೊಡಬಾರದು ಎಂಬ ನಿಷೇಧಗಳಿವೆ.

ಕೃಷಿಕರಿಗಂತೂ ಕೃಷಿಯ ಆರಂಭದ ದಿನ ಯುಗಾದಿ. ಎತ್ತುಗಳನ್ನು ಹಳ್ಳಿಯ ಹಲವಾರು ಕೃಷಿಕರು ಸಾಕುತ್ತಿದ್ದ ಕಾಲದಲ್ಲಿ, ಮುಂಜಾನೆ ಅವನ್ನು ಹೊಲಕ್ಕೆ ಕರೆದೊಯ್ಯುತ್ತಿದ್ದರು. ಅನಂತರ ಹೊಲದಲ್ಲಿ ಬೀಜ ಬಿತ್ತುವ ವಾಡಿಕೆ ಇತ್ತು. ಇದಕ್ಕೆ ತುಳುವಿನಲ್ಲಿ "ಕೈ ಬಿತ್ತ್ ಬಿತ್ತುನ” ಎನ್ನುತ್ತಾರೆ.

ಕರ್ನಾಟಕದ ಹಳ್ಳಿಗಳಲ್ಲಿ ಯುಗಾದಿಯ ದಿನ ಇಳಿಹೊತ್ತಿನಲ್ಲಿ ಹೊನ್ನಾರು ಕಟ್ಟುವ ಪದ್ಧತಿಯಿದೆ. ಉಳುಮೆಯ ಪ್ರಾರಂಭದ ದಿನವಾದ ಯುಗಾದಿ ಹೊನ್ನಿಗೆ ಸಮನಾದ ಶುಭದಿನ. ಹಾಗಾಗಿ ಅದು “ಹೊನ್ನಾರು". ಆರಂಭ (ಕೃಷಿ)ಕ್ಕೆ ನೇಗಿಲಿಗೆ ನೊಗ ಹೂಡಿದ ಎತ್ತು ಕಟ್ಟಬೇಕು. ಅವನ್ನೆಲ್ಲ ಅಲಂಕರಿಸಿ ಮಂಗಲವಾದ್ಯದೊಂದಿಗೆ ಆರು ಹೂಡುವುದು ಸಂಪ್ರದಾಯ. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಶುರುವಾಗುವ ಹೊನ್ನಾರು, ಹಳ್ಳಿಯ ಎಲ್ಲ ಮನೆಗಳನ್ನು ಮೂರು ಸಲ ಸುತ್ತು ಹಾಕಿ ಮುಗಿಯುತ್ತದೆ.
(ಈಗ ಟ್ರಾಕ್ಟರ್, ಪವರ್-ಟಿಲ್ಲರುಗಳ ಭರಾಟೆಯಲ್ಲಿ ಇವೆಲ್ಲ ಯುಗಾದಿ ಆಚರಣೆಗಳು ಮರೆಯಾಗುತ್ತಿವೆ.)

ಹಬ್ಬ ಅಂದ ಮೇಲೆ ಹಬ್ಬದೂಟ ಇರಬೇಡವೇ? ಕರಾವಳಿಯಲ್ಲಿ ಯುಗಾದಿ ಹಬ್ಬದೂಟಕ್ಕೆ ಬಿಸಿಬಿಸಿ ಅನ್ನದ ಜೊತೆಗೆ ಸೌತೆ ಸಾಂಬಾರು, ಕಡಲೆ ಗಸಿ, ತೊಂಡೆ ಪಲ್ಯ, ಕಡಲೆ ಬೇಳೆ ಅಥವಾ ಹೆಸರುಬೇಳೆ ಪಾಯಸ, ಹಪ್ಪಳ , ಸಂಡಿಗೆ, ಉಪ್ಪಿನಕಾಯಿ ಇದ್ದರೆ ಅದುವೇ ಭರ್ಜರಿ ಊಟ. ಇಲ್ಲಿ ಯುಗಾದಿಯ ವಿಶೇಷ ತಿನಿಸು ಮೂಡೆ. ಹಲಸಿನ ಮೂರು ಎಲೆಗಳನ್ನು ಕಡ್ಡಿಯಿಂದ ಚುಚ್ಚಿ ಮಾಡಿದ ಲೋಟಕ್ಕೆ ಹಿಟ್ಟು ಹೊಯ್ದು, ಹಬೆಯಲ್ಲಿ ಬೇಯಿಸಿ ತಯಾರಿಸುವ ತಿನಿಸು. ಇದರ ಜೊತೆ ಮಾವಿನಕಾಯಿ ಚಟ್ನಿ ಇದ್ದರಂತೂ ಮೂರ್ನಾಲ್ಕು ಮೂಡೆ ತಿನ್ನದೆ ಏಳಲಾಗದು.

ಯುಗಾದಿಯ ದಿನ “ಬೇವು-ಬೆಲ್ಲ ಸವಿಯಬೇಕು” ಎಂಬ ರೂಢಿಯನ್ನು ಗಮನಿಸಿ. ಅದಕ್ಕಾಗಿ ಎಲ್ಲರೂ ಎಳ್ಳು-ಬೆಲ್ಲ ಹಂಚಿಕೊಳ್ಳುತ್ತಾರೆ. ಬೆಲ್ಲ ಸವಿ, ತಿನ್ನಲು ಸಿಹಿ. ಆದರೆ, ಬೇವು ಕಹಿ. ಇದನ್ನೂ “ಸವಿಯಬೇಕು" ಎಂದು ವಿಧಿಸುತ್ತದೆ ತಲೆತಲಾಂತರದಿಂದ ನಡೆದು ಬಂದ ರೂಢಿ. ಯಾಕೆ? ಯಾಕೆಂದರೆ, ಬದುಕಿನಲ್ಲಿ ಕೇವಲ ಬೆಲ್ಲವೇ ಇದ್ದರೆ ಬದುಕು ಪರಿಪೂರ್ಣವಾಗದು. ಬೆಲ್ಲದ ಜೊತೆಗೆ ಬೇವು ಇರಲೇ ಬೇಕು (ಬೇವು ಮೊದಲು, ನಂತರ ಬೆಲ್ಲ.) ಆಗಲೇ ಬದುಕಿನಲ್ಲಿ ಕಹಿ-ಸಿಹಿಗಳ ಬಗ್ಗೆ ಅಂದರೆ ನೋವು-ನಲಿವುಗಳ ಬಗ್ಗೆ ಸಮಭಾವ ಬೆಳೆಯಲು ಸಾಧ್ಯ. ಕಷ್ಟ ಅನುಭವಿಸಿದರೆ ಮಾತ್ರ ಸುಖದ ನಿಜವಾದ ಬೆಲೆ ಅರ್ಥವಾಗುತ್ತದೆ, ಅಲ್ಲವೆ?

ಅಂದ ಹಾಗೆ ಯಾವುದೇ ಮಂಗಳ ಕಾರ್ಯವನ್ನು ಮಾಡಲು ಯುಗಾದಿಯ ದಿನ ಅತ್ಯಂತ ಶುಭ ದಿನ. ಗೃಹಪ್ರವೇಶ, ಮನೆಗೆ ಅಡಿಪಾಯ ಹಾಕುವುದು, ವಾಹನ ಖರೀದಿ, ಕಿವಿ ಚುಚ್ಚುವುದು ಇತ್ಯಾದಿ ಶುಭಕಾರ್ಯಗಳಿಗೆ ಯುಗಾದಿ ಮಂಗಳಕರ ದಿನ.

ಮತ್ತೆ ನೆನಪಾಗುತ್ತದೆ ದ. ರಾ. ಬೇಂದ್ರೆಯವರ ಮಾಂತ್ರಿಕ ಹಾಡಿನ ಸಾಲುಗಳು:
"ಹೊಂಗೆ ಹೂವ ತೊಂಗಳಲಿ ಭೃಂಗದ ಸಂಗೀತ ಕೇಳಿ
ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ"

ಈ ಹಾಡಿನ ಅಮರ ಸಂದೇಶದಂತೆ ಕಳೆದ ವರುಷದ ಎಲ್ಲ ನೋವುಗಳನ್ನು, ಸೋಲುಗಳನ್ನು ಮರೆತು, "ಹೊಸ ವರುಷದಲ್ಲಿ ಎಲ್ಲವೂ ಒಳಿತಾಗಲಿದೆ” ಎಂಬ ಭರವಸೆಯಿಂದ ಮುಂದೆ ಸಾಗೋಣ.

ಫೋಟೋ: ಯುಗಾದಿ ಕಣಿ
(ಎಪ್ರಿಲ್ 2024)

ವಾಲ್ಮೀಕಿ ಮಹರ್ಷಿ ಬರೆದ ಶ್ರೀ ರಾಮಾಯಣದ ಕತೆ ನಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮನ ರಾಮರಾಜ್ಯವಂತೂ ಜಗತ್ತಿಗೆ ಆದರ್ಶವೆಂದು ಹೆಸರಾಗಿದೆ. ಭರತ ಖಂಡದಲ್ಲಿ ಧರ್ಮಸಂಸ್ಥಾಪನೆ ಮಾಡಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಅನುಕರಣೀಯ ಗುಣಗಳೆಲ್ಲವೂ ಮನೆಮಾತಾಗಿವೆ. ಆ ಮಹಾಕಥನದಿಂದ ನಾವು ಕಲಿಯಬೇಕಾದ ಜೀವನ ಪಾಠಗಳು ಹಲವು. ಈಗಿನ ಬದುಕಿಗೆ ಪ್ರಸ್ತುತವಾದ ಒಂದು ಪಾಠವಂತೂ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾದ್ದು.

ಅದೇನು? ಮಹಾರಾಜ ದಶರಥನು "ಶ್ರೀ ರಾಮನಿಗೆ ನಾಳೆ ಪಟ್ಟಾಭಿಷೇಕ" ಎಂದು ಘೋಷಿಸಿದ ದಿನ ಏನಾಯಿತೆಂದು ನೆನಪು ಮಾಡಿಕೊಳ್ಳೋಣ. ಭರತನ ತಾಯಿ ಕೈಕೇಯಿಯ ದಾಸಿ ಮಂಥರೆ ಧಾವಿಸಿ ಬಂದು, ಕೈಕೇಯಿಗೆ ಆ ಸುದ್ದಿ ತಿಳಿಸುತ್ತಾಳೆ. "ಹೌದೇನು! ನಾನು ಭರತನಿಗಿಂತಲೂ ಹೆಚ್ಚಾಗಿ ಶ್ರೀ ರಾಮನನ್ನು ಪ್ರೀತಿಸುತ್ತೇನೆ. ಅವನಿಗೆ ನಾಳೆ ಪಟ್ಟಾಭಿಷೇಕ ಆಗುವುದು ಸಂತೋಷದ ಸಂಗತಿ" ಎನ್ನುತ್ತಾಳೆ ಕೈಕೇಯಿ.

ಆದರೆ, ಅದಾಗಲೇ ದುಷ್ಟ ಯೋಚನೆಗಳಲ್ಲಿ ಮುಳುಗಿದ್ದ ಮಂಥರೆ, ಶುದ್ಧ ಮನಸ್ಸಿನ ಕೈಕೇಯಿಯ ತಲೆಯಲ್ಲಿ ಅವನ್ನು ತುಂಬಲು ಶುರು ಮಾಡುತ್ತಾಳೆ. "ಶ್ರೀ ರಾಮ ರಾಜನಾದರೆ, ಅವನ ತಾಯಿ ಕೌಸಲ್ಯೆಯ ದಾಸಿಯರು ನಿನ್ನನ್ನು ಹೀನಾಯವಾಗಿ ಕಾಣುತ್ತಾರೆ. ನಿನ್ನ ಮಗ ಭರತನಿಗಂತೂ ಭವಿಷ್ಯವೇ ಇರುವುದಿಲ್ಲ" ಎಂಬಂತಹ ಮಾತುಗಳಿಂದ ಮತ್ತೆಮತ್ತೆ ಚುಚ್ಚುತ್ತಾಳೆ. ಅವನ್ನು ಕೇಳಿಕೇಳಿ ಕ್ರಮೇಣ ಕೈಕೇಯಿಯ ತಲೆಯಲ್ಲೂ ವಿಷ ತುಂಬಿಕೊಳ್ಳುತ್ತದೆ. "ಹಾಗಾದರೆ ನಾನೀಗ ಏನು ಮಾಡಬೇಕು?" ಎಂದು ಕೇಳುತ್ತಾಳೆ ಕೈಕೇಯಿ.

ಇದೇ ಅವಕಾಶಕ್ಕಾಗಿ ಕಾದಿದ್ದ ಮಂಥರೆ ತಕ್ಷಣವೇ ವಿಷಭರಿತ ಸಲಹೆ ನೀಡುತ್ತಾಳೆ, "ಅಂದೊಮ್ಮೆ ದಶರಥ ಮಹಾರಾಜನಿಗೆ ಯುದ್ಧದಲ್ಲಿ ನೀನು ಸಹಾಯ ಮಾಡಿದ್ದೆ. ಆಗ ನಿನಗೆ ಎರಡು ವರ ನೀಡುವುದಾಗಿ ಮಹಾರಾಜ ಮಾತು ಕೊಟ್ಟಿದ್ದ. ಅವನ್ನು ನೀನು ಈಗ ಕೇಳು. ಮೊದಲನೆಯದು ಭರತನಿಗೆ ನಾಳೆ ಪಟ್ಟಾಭಿಷೇಕ ಮಾಡಬೇಕೆಂದು; ಎರಡನೆಯದು ಶ್ರೀ ರಾಮ ಹದಿನಾಲ್ಕು ವರುಷಗಳ ವನವಾಸಕ್ಕೆ ನಾಳೆಯೇ ಹೊರಡಬೇಕೆಂದು."

ಅದೇ ದಿನ ರಾತ್ರಿ, ದಶರಥ ಮಹಾರಾಜ ಕೈಕೇಯಿಯ ಬಳಿ ಬಂದಾಗ, ಆಕೆ ಇವೆರಡು ವರಗಳನ್ನು ಕೇಳುತ್ತಾಳೆ. ದಶರಥ ಮಹಾರಾಜ ಕುಸಿದು ಬೀಳುತ್ತಾನೆ. ಆತ ಕೈಕೇಯಿಯ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ, "ಭರತನಿಗೆ ಬೇಕಾದರೆ ಪಟ್ಟಾಭಿಷೇಕ ಮಾಡೋಣ. ಆದರೆ, ಶ್ರೀ ರಾಮ ವನವಾಸಕ್ಕೆ ಹೋಗಬೇಕೆಂಬ ಪ್ರಸ್ತಾಪ ಹಿಂತೆಗೆದುಕೊ. ಯಾಕೆಂದರೆ ನಾನು ಶ್ರೀ ರಾಮನನ್ನು ಬಿಟ್ಟು ಬದುಕಿರಲಾರೆ." ಆದರೆ ಕೈಕೇಯಿ ತನ್ನ ಹಠ ಸಾಧಿಸುತ್ತಾಳೆ.

ಮುಂದೇನಾಯಿತೆಂಬುದು ನಮಗೆಲ್ಲರಿಗೂ ಕಣ್ಣಿಗೆ ಕಟ್ಟಿದಂತಿದೆ. ತಂದೆಯ ಮಾತಿನ ಪಾಲನೆಗಾಗಿ ಶ್ರೀ ರಾಮ ವನವಾಸಕ್ಕೆ ಹೊರಡುತ್ತಾನೆ. ಪತ್ನಿ ಸೀತೆ ಅವನನ್ನು ಹಿಂಬಾಲಿಸುತ್ತಾಳೆ. ತಮ್ಮ ಲಕ್ಷ್ಮಣನೂ ಹೋಗುತ್ತಾನೆ. ರಾಜನಾಗಬೇಕಾಗಿದ್ದ ಪುತ್ರ ಶ್ರೀ ರಾಮ ಕಾಡಿನ ಪಾಲಾದ ದುಃಖ ಸಹಿಸಲಾಗದೆ ದಶರಥನ ಮರಣ. ರಾಜ್ಯದ ಸಿಂಹಾಸನವೇರಲು ಸುತಾರಾಂ ಒಪ್ಪದ ಭರತ, ಶ್ರೀ ರಾಮನ ಪಾದುಕೆಗಳನ್ನು ತಂದಿಟ್ಟು, ಶ್ರೀ ರಾಮನ ಹೆಸರಿನಲ್ಲೇ ರಾಜ್ಯವಾಳುತ್ತಾನೆ.  

ಶ್ರೀ ರಾಮ ವನವಾಸಕ್ಕೆ ತೆರಳಿದ ಸಂದರ್ಭವನ್ನು ಪರಿಶೀಲಿಸೋಣ. ಸಂಭ್ರಮ ತುಂಬಿತುಳುಕಾಡುತ್ತಿದ್ದ ಅಯೋಧ್ಯೆ ದುಃಖದ ಕಡಲಿನಲ್ಲಿ ಮುಳುಗುತ್ತದೆ. ಅಯೋಧ್ಯೆಯ ಜನರೆಲ್ಲಾ ಸರಯೂ ನದಿಯ ವರೆಗೆ ಶ್ರೀ ರಾಮನನ್ನು ಹಿಂಬಾಲಿಸುತ್ತಾರೆ. ರಾತ್ರಿ ಕಳೆದು ಬೆಳಗಾಗುವಾಗ ಅಯೋಧ್ಯೆ ಎಂಬ ಸಮೃದ್ಧ ರಾಜ್ಯದ ರಾಜಧಾನಿಯಲ್ಲಿ ಎಲ್ಲವೂ ತಲೆಕೆಳಗಾಗಿತ್ತು. ಗಮನಿಸಿ: ಒಬ್ಬಳು ನೀಚ ಬುದ್ಧಿಯ ದುಷ್ಟ ವ್ಯಕ್ತಿಯ ಕುತಂತ್ರದಿಂದಾಗಿ ಮಹಾಸಾಮ್ರಾಜ್ಯ, ಮಹಾರಾಜ, ಮಹಾಮಂತ್ರಿ, ಮಹಾಸೇನಾನಿ ಸಹಿತ ಸಮಾಜ ಹಾಗೂ ಆಡಳಿತ ವ್ಯವಸ್ಥೆ ಅಸಹಾಯಕವಾಗಿ ತತ್ತರಿಸಿ ಹೋಯಿತು.

ಶ್ರೀ ರಾಮಾಯಣದ ಹತ್ತುಹಲವು ಜೀವನ ಪಾಠಗಳ ಜೊತೆಗೆ ಇಂತಹ ಪಾಠಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ ಅಲ್ಲವೇ? ಅಂದರೆ, ದೊಡ್ಡ ಸಂಸ್ಥೆ, ಕಂಪೆನಿ, ಆಡಳಿತ ವ್ಯವಸ್ಥೆ ಅಥವಾ ದೇಶವನ್ನು ಬುಡಮೇಲು ಮಾಡಲು ವಿಷಪೂರಿತ ಯೋಚನೆ ತುಂಬಿದ ಯಾವುದೇ ಸ್ತರದ ಒಬ್ಬ ವ್ಯಕ್ತಿ ಸಾಕು. ಅಂತಹ ದುಷ್ಟ ಯೋಚನೆಗಳನ್ನು ಶುದ್ಧ ಮನಸ್ಸಿನವರಲ್ಲಿ ತುಂಬಿ, ದುಷ್ಟ ಯೋಜನೆಗಳನ್ನು ಕಾರ್ಯಗತಗೊಳಿಸಲು ತಯಾರು ಮಾಡುವ (ಅಂದರೆ ಬ್ರೈನ್ ವಾಷ್ ಮಾಡುವ) ಅಪಾಯಕಾರಿ ವ್ಯಕ್ತಿಗಳು ನಮ್ಮ ಸುತ್ತಮುತ್ತ ಇದ್ದಾರೆ, ಅಲ್ಲವೇ? ಆದ್ದರಿಂದ ಅಂಥವರ ಜೊತೆ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು.

ಸರಿ, ಶ್ರೀ ರಾಮಾಯಣದ ಕತೆಯನ್ನು ನಮ್ಮ ಮಕ್ಕಳಿಗೆ ಕಲಿಸಲು ನಾವೇನು ಮಾಡಿದ್ದೇವೆ? ಈ ಉದ್ದೇಶ ಸಾಧನೆಗೆ ಎರಡು ಸರಳ ದಾರಿಗಳಿವೆ: ಮೊದಲನೆಯದು, ನಮ್ಮ ಮಕ್ಕಳಿಗೆ ನಾಲ್ಕು ವರುಷ ವಯಸ್ಸಾಗುವ ಮುಂಚೆ ಅವರಿಗೆ "ಏಕಶ್ಲೋಕೀ ರಾಮಾಯಣಂ"ಕಂಠಪಾಠ ಮಾಡಿಸುವುದು:
ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ
ವಾಲೀ ನಿಗ್ರಹಣಂ ಸಮುದ್ರ ತರಣಂ ಲಂಕಾಪುರೀ ದಹನಂ
ಪಶ್ಚಾತ್ದ್ರಾವಣ ಕುಂಭಕರ್ಣ ಹನನಂ ಹ್ಯೇತದ್ಧಿ ರಾಮಾಯಣಂ

ಈ ಶ್ಲೋಕದ ಭಾವಾರ್ಥ: ರಾಮ ಕಾಡಿಗೆ ಹೋದದ್ದು - ಚಿನ್ನದ ಜಿಂಕೆಯನ್ನು ಬೇಟಿಯಾಡಿದ್ದು -
ಸೀತೆಯ ಅಪಹರಣವಾದದ್ದು - ಜಟಾಯು ಮರಣವನ್ನಪ್ಪಿದ್ದು - ಸುಗ್ರೀವನೊಂದಿಗೆ ಸಹಚರ್ಯ -
ವಾಲಿಯನ್ನು ಸಂಹರಿಸಿದ್ದು - ಸಾಗರವನ್ನು ದಾಟಿದ್ದು - ಲಂಕೆಯು ಸುಟ್ಟದ್ದು -
ರಾವಣ ಮತ್ತು ಕುಂಭಕರ್ಣರನ್ನು ವಧಿಸಿದ್ದು - ಇವೆಲ್ಲವೂ ಸೇರಿ ಆದುದೇ ರಾಮಾಯಣ

ಎರಡನೆಯ ದಾರಿ, "ಚಿಣ್ಣರ ಚಿತ್ರ ರಾಮಾಯಣ" ಪುಸ್ತಕದ ಒಂದೊಂದು ಪುಟದ ಚಿತ್ರವನ್ನು ಮಕ್ಕಳಿಗೆ ದಿನಕ್ಕೆ ಒಂದರಂತೆ ತೋರಿಸುತ್ತಾ, ಅದರಲ್ಲಿರುವ ಕತೆಯನ್ನು ಅವರಿಗೆ ಓದಿ ಹೇಳುವುದು (ಇದಕ್ಕೆ ಪ್ರತಿ ದಿನ ಹತ್ತು ನಿಮಿಷ ಸಾಕು). ಇದು 1917ರಲ್ಲಿ ಪ್ರಕಟವಾದ ಪುಸ್ತಕ. ಇದರ ಪ್ರತಿ ಪುಟದ ಎಡಭಾಗದಲ್ಲಿ ಆಕರ್ಷಕ ಚಿತ್ರ ಹಾಗು ಬಲಭಾಗದಲ್ಲಿ ಅದರ ಕತೆಯ ಸೊಗಸಾದ ವಿವರಣೆ ಇದೆ. ಈ ವಿವರಣೆ ಬರದವರು ಪ್ರೊ. ಜಿ. ವೆಂಕಟಸುಬ್ಬಯ್ಯ. 128 ಪುಟಗಳ ಈ ಪುಸ್ತಕದಲ್ಲಿರುವ ರಾಮಾಯಣದ 60 ಘಟನೆಗಳ ಚಿತ್ರಗಳೂ ವಿವರಣೆಗಳೂ ಬಹುಕಾಲ ನೆನಪಿನಲ್ಲಿ ಉಳಿಯುತ್ತವೆ. (ಪ್ರಕಾಶಕರು: ಪ್ರಿಸಂ ಬುಕ್ಸ್, ಬೆಂಗಳೂರು, ಬೆಲೆ ರೂ. 160) "ಅಮರ ಚಿತ್ರ ಕತೆ" ಸರಣಿಯ "ರಾಮಾಯಣ" ಪುಸ್ತಕವನ್ನೂ ಮಕ್ಕಳಿಗೆ ಓದಲು ಕೊಡಬಹುದು. ಹೆತ್ತವರು ಈ ಎರಡು ಸರಳ ದಾರಿಗಳ ಮೂಲಕ ಮಕ್ಕಳ ಮನದಲ್ಲಿ ರಾಮಾಯಣದ ಕತೆಯನ್ನು ಬಾಲ್ಯದಲ್ಲೇ ದಾಖಲಿಸಲು ಖಂಡಿತ ಸಾಧ್ಯ.

ಕ್ರಮೇಣ, ಮಕ್ಕಳಿಗೆ ರಾಮಾಯಣದ ವಿವರವಾದ ಕತೆ ತಿಳಿಸಲಿಕ್ಕಾಗಿ ಯಾವುದೇ "ರಾಮಾಯಣ" ಪುಸ್ತಕವನ್ನು ಬೇಸಗೆ ರಜೆಯಲ್ಲಿ ಓದಲು ಕೊಡಬಹುದು. ರಾಜಾಜಿಯವರು ಬರೆದಿರುವ ರಾಮಾಯಣದ ಕತೆ ಸರಳವಾಗಿದೆ. ಅದಲ್ಲದೆ, ಹಲವು ಪ್ರಕಾಶಕರು ರಾಮಾಯಣವನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ. ಮಕ್ಕಳಿಗೆ ಹತ್ತು ವರುಷ ತುಂಬುವ ಮುನ್ನ, ಎರಡು ವರುಷಗಳ ಬೇಸಗೆ ರಜೆಯಲ್ಲಿ ರಾಮಾಯಣದ ಕತೆ ಓದಿ ಹೇಳಿದರೆ, ಅದರ ವಿವರಗಳು ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ.

ಹೀಗೆ, ಬಾಲ್ಯದಲ್ಲಿಯೇ ನಮ್ಮ ಮಕ್ಕಳಿಗೆ ರಾಮಾಯಣದ ಕತೆ ತಿಳಿಸಿದರೆ, ಅವರ ಬದುಕಿನುದ್ದಕ್ಕೂ ರಾಮಾಯಣದ ಜೀವನಪಾಠಗಳು ಅವರಿಗೆ ದಾರಿದೀಪವಾಗ ಬಲ್ಲವು.


ಫೋಟೋ: ಶ್ರೀರಾಮ ಮತ್ತು ಸೀತಾದೇವಿಯ ಪ್ರಾಚೀನ ಶಿಲ್ಪ … ಕೃಪೆ: ರೆಡ್ಡಿಟ್
(ಫೆಬ್ರವರಿ - ಮಾರ್ಚ್ 2024)

ಮಕ್ಕಳು ತಮ್ಮ ವರ್ತನೆಗಳನ್ನು, ಧೋರಣೆಗಳನ್ನು ಯಾರಿಂದ ಕಲಿಯುತ್ತಾರೆ? ತಮ್ಮ ಹೆತ್ತವರಿಂದಲೇ ಎಂಬುದು ವೈಜ್ನಾನಿಕ ಸಂಶೊಧನೆಗಳಿಂದ ಮತ್ತೆಮತ್ತೆ ಸಾಬೀತಾಗಿದೆ.

ಆದ್ದರಿಂದ, ಐವತ್ತು ವರುಷ ದಾಟಿದಾಗಲಾದರೂ, ಹೆತ್ತವರು ತಮ್ಮ ಕಳೆದ ಬದುಕನ್ನು ಅವಲೋಕಿಸಬೇಕು. ಆಗ ಬಹುಪಾಲು ಹೆತ್ತವರಿಗೆ,  "ಛೇ, ನಮ್ಮ ಮಕ್ಕಳಿಗೆ ಇದನ್ನು ನಾನು ಬಾಲ್ಯದಲ್ಲೇ ಕಲಿಸಬೇಕಾಗಿತ್ತು” ಎಂದು ಅನಿಸಬಹುದು. ಅಂತಹ ಕೆಲವು ಬೆಲೆ ಬಾಳುವ ಬದುಕಿನ ಪಾಠಗಳನ್ನು ಗಮನಿಸೋಣ.

“ನಿನ್ನ ಕ್ಲಾಸಿಗೆ ನೀನೇ ಫಸ್ಟ್ ಬರಬೇಕು” … “ಈ ಸ್ಪರ್ಧೆಯಲ್ಲಿ ನೀನೇ ಫಸ್ಟ್ ಬರಬೇಕು" (ಓಟ, ಆಟ, ಹಾಡುವಿಕೆ, ಸಂಗೀತ, ನೃತ್ಯ ಇತ್ಯಾದಿಗಳಲ್ಲಿ) … "ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಬೇಕು” - ಬಹುಪಾಲು ಹೆತ್ತವರು ಮಕ್ಕಳಿಗೆ ಇಂತಹ ಗುರಿ ಸಾಧನೆಗಾಗಿ ಒತ್ತಡ ಹೇರುತ್ತಾರೆ. ಅದಕ್ಕೆ ಬೇಕಾದ ವ್ಯವಸ್ಥೆಗಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಮಕ್ಕಳನ್ನು ಪ್ರೋತ್ಸಾಹಿಸಲೂ ಬಹುದು. ಆದರೆ, ಆ ಗುರಿಗಳನ್ನು ಸಾಧಿಸಿದಾಗ ಮಾತ್ರ, ಮಕ್ಕಳನ್ನು ಮೆಚ್ಚುತ್ತಾರೆ; ಬಹುಮಾನಗಳನ್ನು ನೀಡುತ್ತಾರೆ; ಹಾಡಿ ಹೊಗಳುತ್ತಾರೆ. ಆದರೆ, ಸಾಧನೆಯ ಹಾದಿಯ ಸಣ್ಣಪುಟ್ಟ ಗೆಲುವುಗಳೂ ಸಂಭ್ರಮಿಸಬೇಕಾದವುಗಳೇ ಎಂಬ ಪಾಠವನ್ನು ಕಲಿಸುವುದಿಲ್ಲ. ಇದರಿಂದಾಗಿ, ತಮ್ಮ ಅತ್ಯುತ್ತಮ ಸಾಧನೆ ಮಾಡಿದ ಮಕ್ಕಳೂ ದೊಡ್ಡ ಗುರಿ ಸಾಧಿಸಲಿಲ್ಲ ಎಂಬ ನಿರಾಶೆಯಿಂದ ಬಳಲುತ್ತಾರೆ. ಇದರ ಬದಲಾಗಿ, ಅವರ ಅತ್ಯುತ್ತಮ ಪ್ರಯತ್ನಕ್ಕೆ ಸಿಕ್ಕ ಫಲವನ್ನು ಸಂಭ್ರಮಿಸುವ ನೂರಾರು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ, ಅಲ್ಲವೇ?

ಕೆಲವು ಮಕ್ಕಳು ಇತರರ ಸಣ್ಣಸಣ್ಣ ಟೀಕೆಗಳಿಗೂ ತಲೆಕೆಡಿಸಿಕೊಳ್ಳುತ್ತಾರೆ. "ಅವನು/ ಅವಳು ನನಗೆ ಹಾಗೆ ಹೇಳಬಹುದಾ?” ಎಂದು ದಿನಗಟ್ಟಲೆ ಪರಿತಪಿಸುತ್ತಾರೆ. ಈ ವರ್ತನೆಯನ್ನು ಅವರು ತಂದೆಯಿಂದ ಅಥವಾ ತಾಯಿಯಿಂದ ಕಲಿತಿರುತ್ತಾರೆ.
ಇದರಿಂದಾಗಿ, ಅವರ ಸಮಯ ಮತ್ತು ಚೈತನ್ಯ ಎರಡೂ ದೊಡ್ಡ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಈ ವರ್ತನೆ ಇರುವ ತಂದೆ ಅಥವಾ ತಾಯಿ, ಇದರ ಬದಲಾಗಿ ಏನು ಮಾಡಬಹುದಾಗಿತ್ತು? ಯಾರಾದರೂ ತಮ್ಮ ಬಗ್ಗೆ ಏನಾದರೂ ಟೀಕೆ ಮಾಡಿದಾಗ ಅದರಲ್ಲಿ ಸತ್ಯಾಂಶ ಏನಾದರೂ ಇದೆಯೇ ಎಂದು ವಿಶ್ಲೇಷಣೆ ಮಾಡಬೇಕಾಗಿತ್ತು; ಆ ಟೀಕೆಯಲ್ಲಿ ಸತ್ಯಾಂಶ ಇದೆ ಎಂದಾದರೆ ಮುಂದೆ ಅಂತಹ ಟೀಕೆಗೆ ಅವಕಾಶ ಸಿಗದಂತೆ ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕಾಗಿತ್ತು. ಉದಾಹರಣೆ: “ನೀನು ಯಾವಾಗಲೂ ಒಪ್ಪಿಕೊಂಡ ಕೆಲಸ ಮಾಡೋದಿಲ್ಲ" ಎಂಬ ಟೀಕೆ. ಆ ಟೀಕೆಯಲ್ಲಿ ಸತ್ಯಾಂಶ ಇಲ್ಲ ಎಂದಾದರೆ, ಟೀಕೆ ಮಾಡಿದವರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿ, ಆ ಟೀಕೆಯಿಂದಾಗಿ ಟೀಕೆ ಮಾಡಿದವರ ಯೋಗ್ಯತೆ ಜಾಹೀರಾಗಿದೆ ಎಂದು ಯೋಚಿಸ ಬೇಕು ವಿನಃ ತಲೆಕೆಡಿಸಿಕೊಳ್ಳಬಾರದು. (ಯಾಕೆಂದರೆ, ಟೀಕೆ ಮಾಡಿದವರಿಗೂ, ಕೆಲವೇ ದಿನಗಳ ನಂತರ ತಾವು ಮಾಡಿದ ಇಂತಹ ಟೀಕೆಗಳೆಲ್ಲ ನೆನಪೇ ಇರೋದಿಲ್ಲ.) ಇಲ್ಲವಾದರೆ, ಹೆತ್ತವರ ಈ ವರ್ತನೆಯನ್ನು ಮಕ್ಕಳೂ ಕಲಿತು ತಮ್ಮ ಜೀವಮಾನವಿಡೀ ಸಂಕಟ ಪಡಬೇಕಾದಿತು, ಅಲ್ಲವೇ?

ತಮ್ಮ ಮಕ್ಕಳು ಉತ್ತಮ ಅಂಕ ಗಳಿಸಬೇಕು ಎಂಬ ಉದ್ದೇಶದಿಂದ, ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಶಾಲೆಯ ಹೋಂವರ್ಕ್ ಮಾಡಲು ಸಹಾಯ ಮಾಡುತ್ತಾರೆ. ಇದರಿಂದಾಗಿ ಏನಾಗುತ್ತದೆ? ಎಂದು ಆ ಹೆತ್ತವರು ಯೋಚಿಸುವುದಿಲ್ಲ. ಇದರಿಂದಾಗಿ, ಅವರ ಮಕ್ಕಳು ಹಲವು ಪರಿಕಲ್ಪನೆಗಳನ್ನು, ವಿಷಯಗಳನ್ನು ಸ್ವ-ಪಯತ್ನದಿಂದ ಕಲಿಯುವ ಖುಷಿಯಿಂದ ವಂಚಿತರಾಗುತ್ತಾರೆ. ಹಾಗಾಗಿ, ಹೊಸಹೊಸ ವಿಷಯಗಳನ್ನು ತಾವಾಗಿಯೇ ಕಲಿಯುವ ಕುತೂಹಲವನ್ನೂ ಕಳೆದುಕೊಳ್ಳುತ್ತಾರೆ. ನನಗೆ ಪಿಯುಸಿ ಮೊದಲ ವರುಷದಲ್ಲಿ ಗಣಿತದಲ್ಲಿ “ಲಾಗರಿಥಮ್" ಎಂಬುದು ಅರ್ಥವಾಗಿರಲಿಲ್ಲ. ಅದೊಂದು ದಿನ, ನನ್ನ ತಂದೆ ನನಗೆ ಇಂಗ್ಲಿಷಿನ “ಡಿಕ್ಷನರಿ ಆಫ್ ಮೆಥಮ್ಯಾಟಿಕ್ಸ್” ತಂದಿತ್ತರು. ಅವತ್ತೇ ನಾನು ಅದರಲ್ಲಿ ಲಾಗರಿಥಮ್ ಬಗ್ಗೆ ಇದ್ದ ವಿವರಗಳನ್ನು ಓದಿದೆ. ಅದೆಷ್ಟು ಚೆನ್ನಾಗಿ ನನಗೆ ಅರ್ಥವಾಯಿತೆಂದರೆ, ಆ ಖುಷಿ ಈಗಲೂ (52 ವರುಷಗಳ ನಂತರವೂ) ನನಗೆ ಚೆನ್ನಾಗಿ ನೆನಪಿದೆ. ಆದ್ದರಿಂದ, ಸ್ವ-ಪ್ರಯತ್ನದಿಂದ ಕಲಿಯುವ ಖುಷಿಯನ್ನು ಮಕ್ಕಳು ಮತ್ತೆಮತ್ತೆ ಅನುಭವಿಸಲು ಹೆತ್ತವರು ಅವಕಾಶ ನೀಡಬೇಕು, ಅಲ್ಲವೇ?

ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಮಕ್ಕಳಿಗೆ ಗುರಿ ಸಾಧಿಸಲು ಸಾಧ್ಯವಾಗೋದಿಲ್ಲ. ಉದಾಹರಣೆ: ಕ್ಲಾಸಿನಲ್ಲಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸುವುದು; ಶಾಲೆಯ ಬಾಸ್ಕೆಟ್-ಬಾಲ್ ಅಥವಾ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗುವುದು; ಶಾಲೆಯ ವಾರ್ಷಕೋತ್ಸವದ ನಾಟಕ ತಂಡಕ್ಕೆ ಆಯ್ಕೆಯಾಗುವುದು. ಕೆಲವು ಹೆತ್ತವರು, ಅಂತಹ ಸಂದರ್ಭಗಳಲ್ಲಿ ಮಕ್ಕಳ ಬಗ್ಗೆ ತಿರಸ್ಕಾರ ವ್ಯಕ್ತಪಡಿಸಿ, ಮಕ್ಕಳ "ಸೋಲಿನ" ನೋವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇದರ ಬದಲಾಗಿ, "ಬದುಕಿನಲ್ಲಿ ಗೆಲುವು ಮುಖ್ಯ, ಆದರೆ ಸೋಲು ಸಹಜ” ಎಂಬುದನ್ನು ಮಕ್ಕಳಿಗೆ ಹೆತ್ತವರು ಮನದಟ್ಟು ಮಾಡಿಸಬೇಕು, ಅಲ್ಲವೇ? ಯಾಕೆಂದರೆ, ಒಂದು ಕ್ಲಾಸಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮೊದಲ ಸ್ಥಾನ ಗಳಿಸಲು ಸಾಧ್ಯವಿಲ್ಲ.

ಕೆಲವರು ಇರುತ್ತಾರೆ - ನೀವು ಏನೇ ಮಾಡಿದರೂ ಅವರು ನಿಮ್ಮನ್ನು ಮೆಚ್ಚುವುದಿಲ್ಲ. ಬದಲಾಗಿ ಅವರು ನಿಮ್ಮನ್ನು ವಿನಾಕಾರಣ ದ್ವೇಷಿಸುತ್ತಾರೆ! ಇಂಥವರು ಹಲವರು ಇರುತ್ತಾರೆ ಎಂಬ ಅರಿವನ್ನು ನಿಮ್ಮ ಮಕ್ಕಳಲ್ಲಿ ಮೂಡಿಸುವುದು ಅಗತ್ಯ. ಈಗಿನ ಸಾಮಾಜಿಕ ಮಾಧ್ಯಮಗಳು ಹುಟ್ಟು ಹಾಕಿರುವ ಒತ್ತಡದ ವಾತಾವರಣದಲ್ಲಂತೂ ಇದು ಅತ್ಯಗತ್ಯ. ಉದಾಹರಣೆ: ಅವನು/ ಅವಳು ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ; ಅವನು/ ಅವಳು ನನ್ನ ಪೋಸ್ಟ್‌ಗೆ “ಲೈಕ್" ಹಾಕಿಲ್ಲ. ಅಂಥವರು ಇದ್ದೇ ಇರುತ್ತಾರೆ ಎಂಬ ವಾಸ್ತವವನ್ನು ಒಪ್ಪಿಕೊಂಡು ನಮ್ಮ ಬದುಕಿನಲ್ಲಿ ಮುನ್ನಡೆಯಲು ಕಲಿಯಬೇಕು, ಅಲ್ಲವೇ? ಯಾಕೆಂದರೆ, ನನ್ನ ಬದುಕು ನನ್ನದು. ಪ್ರತಿಯೊಬ್ಬರನ್ನೂ “ಮೆಚ್ಚಿಸುವುದು" ನನ್ನ ಬದುಕಿನ ಉದ್ದೇಶವಲ್ಲ. ಬದಲಾಗಿ, ಪ್ರತಿಯೊಂದು ಕೆಲಸವನ್ನೂ ನನ್ನಿಂದ ಆದಷ್ಟು ಚೆನ್ನಾಗಿ ಮಾಡುವುದು ನನ್ನ ಉದ್ದೇಶ, ಅಲ್ಲವೇ?

ಇವೆಲ್ಲ ಬದುಕಿನ ಅಮೂಲ್ಯ ಪಾಠಗಳು. ಇಂತಹ ಪಾಠಗಳನ್ನು ಮುಂದಿನ ತಲೆಮಾರಿಗೆ ಕಲಿಸುವ ಅವಕಾಶ ಇರುವವರೆಲ್ಲ ಆ ಅವಕಾಶವನ್ನು ಬಳಸಿಕೊಳ್ಳಿ. ಯಾಕೆಂದರೆ, ಈ ತಪ್ಪುಗಳನ್ನು ಆ ಮುಂದಿನ ತಲೆಮಾರಿನವರು ಮಾಡದಂತೆ ತಡೆಯಲು ಸಾಧ್ಯವಾದರೆ, ಅದು ಅವರಿಗೆ ನೀವು ಕೊಡಬಹುದಾದ ಬೆಲೆ ಕಟ್ಟಲಾಗದ ಸಂಪತ್ತು.

(ಡಿಸೆಂಬರ್ 2023)

"ಪ್ರಾಚೀನ ಭಾರತದ ಜ್ನಾನ ಖಜಾನೆ: 64 ಕಲೆಗಳು” ಲೇಖನದಲ್ಲಿ ಆ ಕಲೆಗಳ ಮಹತ್ವವನ್ನು ಮತ್ತು ಅವುಗಳ ಬಗ್ಗೆ ಭಾರತೀಯರು ಯಾಕೆ ಅಭಿಮಾನ ಪಡಬೇಕು? ಎಂಬುದನ್ನು ವಿವರಿಸಿದ್ದೇನೆ. ಆ ಲೇಖನಕ್ಕೆ ಪೂರಕವಾಗಿ ವಿವಿಧ ಅಧಿಕೃತ ಮೂಲಗಳ ಸಹಾಯದಿಂದ ಸಂಗ್ರಹಿಸಿದ 64 ಕಲೆಗಳನ್ನು ಈ ಲೇಖನದಲ್ಲಿ ಪಟ್ಟಿ ಮಾಡಿದ್ದೇನೆ.
 
(1)ಸಂಗೀತ ವಿದ್ಯಾ (ಸಂಗೀತ ವಿದ್ಯೆ - ಸೂತ್ರಗಳ ಅನುಸಾರ ಏಳು ಸ್ವರಗಳು, ಷಡ್ಜ, ರಿಷಭ, ಗಾಂಧಾರ ಇತ್ಯಾದಿಗಳ ಆಳವಾದ ಜ್ನಾನ)
(2) ವಾದ್ಯ ವಿದ್ಯಾ (58 ಸಂಗೀತ ವಾದ್ಯಗಳ ವಾದನ ಕಲೆ)
(3) ನೃತ್ಯ ವಿದ್ಯಾ (32 ವಿಧಗಳ ನೃತ್ಯಗಳು)
(4) ಅಲೇಖ ವಿದ್ಯಾ (ಚಿತ್ರ ಕಲೆ)
(5) ವಿಶ್ಶಕ  ಚೇದ್ಯಂ ವಿದ್ಯಾ (ಹಣೆಯಲ್ಲಿ ಹಚ್ಚಲು ವಿವಿಧ ವಿನ್ಯಾಸದ ತಿಲಕಗಳನ್ನು ರೂಪಿಸುವ ಕಲೆ)
(6) ತಂಡುಲ ಕುಸುಮ ಬಲಿ ವಿಕಾರ (ಅಕ್ಕಿ ಮತ್ತು ಹೂಗಳಿಂದ ಪೂಜಾ ಸ್ಥಳ ಅಲಂಕರಿಸುವಕಲೆ - ಮಂಡಲ ರಚನೆ)
(7) ಪುಷ್ಪಸ್ತರಣ (ಮನೆ ಮತ್ತು ಕೋಣೆಗಳನ್ನು ಹೂವಿನಿಂದ ಅಲಂಕರಿಸುವ ಕಲೆ)
(8) ದಶನ ವಸನಾಂಗ ರಾಗ (ಹಲ್ಲು, ಬಟ್ಟೆ ಹಾಗೂ ಶರೀರದಲ್ಲಿ ಬಣ್ಣದಿಂದ ಚಿತ್ರ ಬಿಡಿಸುವ ಕಲೆ)
(9) ಮಣಿಭೂಮಿಕ ಕರ್ಮ (ಗೊಂಬೆಗಳ ವಿನ್ಯಾಸ, ತಯಾರಿ ಮತ್ತು ಅವನ್ನು ಆಭರಣಗಳಿಂದ ಅಲಂಕರಿಸುವ ಕಲೆ)
(10) ಶಯನ ರಚನಂ (ಹಾಸಿಗೆ ಮತ್ತು ಮಂಚ ತಯಾರಿಸುವ ಕಲೆ)
(11) ಉದಕ ವಾದ್ಯ (ನೀರು ತುಂಬಿದ ಪಾತ್ರೆಯಿಂದ ಸಂಗೀತ ನುಡಿಸುವ ಕಲೆ - ಜಲತರಂಗ)
(12) ಉದಕ ಘಟ (ನೀರನ್ನು ಚಿಮ್ಮಿಸುವ ಕಲೆ - ಜಲಸ್ತಂಭ)
(13) ಚಿತ್ರಾಸ್ಚ್ಯ ಯೋಗ (ಔಷಧೀಯ ಸಸ್ಯ, ಔಷಧಿ ಮತ್ತು ಮಂತ್ರಗಳಿಂದ ಆರೋಗ್ಯವಂತ ವ್ಯಕ್ತಿಯನ್ನು ದುರ್ಬಲ, ರೋಗಿ, ಹುಚ್ಚನಾಗಿ ಬದಲಾಯಿಸುವ ಕಲೆ)
(14) ಮಾಲ್ಯ ಗ್ರಟನ ವಿಕಲ್ಪ (ಹೂಮಾಲೆಗಳನ್ನು ವಿನ್ಯಾಸಗೊಳಿಸುವ ಕಲೆ)
(15) ಶೇಖರಕಾಪೀಡ ಯೋಜನ (ತಲೆಯನ್ನು ಅಲಂಕರಿಸುವ ಮತ್ತು ಮುಕುಟ ಜೋಡಿಸುವ ಕಲೆ - ಶಿರಾಲಂಕಾರ)
(16) ನೇಪಥ್ಯ ಪ್ರಯೋಗ (ತನ್ನ ಹಾಗೂ ಇತರರ ಗುರುತು ಪತ್ತೆಯಾಗದಂತೆ ಉಡುಪು ಧರಿಸುವ ಕಲೆ - ಮಾರುವೇಷ)
(17) ಕರ್ಣ ಪತ್ರ ಭಂಗ (ಕಿವಿಯ ಓಲೆ ತಯಾರಿಸುವ ಕಲೆ - ದಂತ, ಚಿನ್ನ ಇತ್ಯಾದಿಗಳಿಂದ)
(18) ಸುಗಂಧ ಯುಕ್ತಿ (ಪರಿಮಳ ದ್ರವ್ಯಗಳನ್ನು ತಯಾರಿಸುವ ಕಲೆ)
(19) ಭೂಷಣ ಯೋಜನ (ಆಭರಣಗಳನ್ನು ವಿನ್ಯಾಸಗೊಳಿಸುವ, ತಯಾರಿಸುವ ಹಾಗೂ ಧರಿಸುವ ಕಲೆ)
(20) ಇಂದ್ರಜಾಲ (ಮ್ಯಾಜಿಕ್ ಕಲೆ)
(21) ಕೌಕುಮಾರ (ದುರ್ಬಲ ವ್ಯಕ್ತಿಯನ್ನು ಆರೋಗ್ಯವಂತ ಪೌರುಷವಂತ ವ್ಯಕ್ತಿಯಾಗಿ ಬದಲಾಯಿಸುವ ಚಿಕಿತ್ಸೆ ನೀಡುವ ಕಲೆ)
(22) ಹಸ್ತಲಾಘವಂ (ಕೈಚಳಕ ಮಾಡುವ ಕಲೆ)
(23) ವಿಚಿತ್ರ ಶಾಖಾಯೂಷ ಭಕ್ಶ್ಯ ವಿಕಾರ ಕ್ರಿಯಾ (ತರಕಾರಿಗಳಿಂದ ವಿವಿಧ ರುಚಿಕರ ಭಕ್ಷ್ಯ ತಯಾರಿಸುವ ಕಲೆ)
(24) ಪಾನಕ ರಸ ರಾಗಾಸವ ಯೋಜನಾ (ಸ್ವಾದಿಷ್ಟ ಪಾನೀಯ ತಯಾರಿಸುವ ಕಲೆ)
(25) ಸೂಚಿ ವಾಪ ಕರ್ಮ (ವಸ್ತ್ರವಿನ್ಯಾಸ, ಸೂಜಿಯಿಂದ ಹೊಲಿಯುವ ಮತ್ತು ನೇಯ್ಗೆ ಕಲೆ)
(26) ಸೂತ್ರ ಕ್ರೀಡಾ (ಕಸೂತಿಕಲೆ ಮತ್ತು ಗೊಂಬೆಯಾಟ)
(27) ವೀಣಾ ಡಮರುಕ ವಾದ್ಯ ವಿದ್ಯಾ (ವೀಣೆ/ ತಂತಿವಾದ್ಯ ಮತ್ತು ಡಮರು/ ಚರ್ಮವಾದ್ಯ ನುಡಿಸುವ ಕಲೆ)
(28) ಪ್ರಖೀಲಿಖ (ಒಗಟುಗಳನ್ನು ರಚಿಸುವ ಮತ್ತು ಪರಿಹರಿಸುವ ಕಲೆ ಹಾಗೂ ಗಾದೆಗಳ ಜ್ನಾನ)
(29) ಪ್ರತಿಮಾಲಾ (ಶ್ಲೋಕಗಳಿಂದ ಅಂತಾಕ್ಷರಿ ಆಡುವ ಕಲೆ)  
(30) ದುರ್ವಾಚಕ ಯೋಗ (ತರ್ಕಗಳಲ್ಲಿ ಇತರರು ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯವಾದ ಪದಗಳ ಬಳಕೆಯ ಕಲೆ)
(31) ಪುಸ್ತಕ ವಾಚನ
(32) ನಾಟಿಕಾಖ್ಯಾಯಿಕ ದರ್ಶನ (ಕಿರುನಾಟಕಗಳಲ್ಲಿ ಪಾತ್ರ ಮಾಡುವ ಮತ್ತು ಕಥೆ ಹೇಳುವ ಕಲೆ)
(33) ಕಾವ್ಯ ಸಮಸ್ಯಾ ಪೂರಣ (ದತ್ತ ಪದಗಳಿಂದ ಅರ್ಥಭರಿತ ಕವನ ರಚಿಸುವ ಕಲೆ)
(34) ಪಟ್ಟಿಕಾ ವೀತ್ರ ವನ ವಿಕಲ್ಪ (ಬೆತ್ತ ಮತ್ತು ಬಿದಿರಿನಿಂದ ಪೀಠೋಪಕರಣ ವಿನ್ಯಾಸ ಹಾಗೂ ತಯಾರಿಸುವ ಕಲೆ)
(35) ತಕ್ಷ ಕರ್ಮ (ಚಿನ್ನ, ಕಬ್ಬಿಣ ಮತ್ತು ಮರದಲ್ಲಿ ಚಿತ್ತಾರ ಕೆತ್ತುವ ಕಲೆ)
(36) ತಾಕ್ಷನ (ಮರಗೆಲಸದ ಕಲೆ)
(37) ವಾಸ್ತು ವಿದ್ಯಾ (ಕಟ್ಟಡಗಳ ಸ್ಥಳ, ರಚನೆ, ದಿಕ್ಕು, ವಸ್ತುಗಳ ಬಗ್ಗೆ ವಾಸ್ತು ಜ್ನಾನ ಮತ್ತು ಕಟ್ಟಡ ವಿನ್ಯಾಸ/ ನಿರ್ಮಾಣ ಕಲೆ)
(38) ರೂಪ್ಯ ರತ್ನ ಪರೀಕ್ಷಾ (ರತ್ನ ಮತ್ತು ಬೆಲೆಬಾಳುವ ಮಣಿ ಹಾಗೂ ನಾಣ್ಯಗಳ ಪರೀಕ್ಷಾ ಕಲೆ)
(39) ಧಾತು ವಿದ್ಯಾ (ಖನಿಜಗಳ ಮಿಶ್ರಣ ಜ್ನಾನ - ಲೋಹವಿಜ್ನಾನ)
(40) ಮಣಿ ರಾಗ ಜ್ನಾನ (ಬೆಲೆಬಾಳುವ ಮಣಿಕಲ್ಲುಗಳ ಜ್ನಾನ - ಅವುಗಳ ಬಣ್ಣಗಳು ಮತ್ತು ಗನಿಗಳ ಜ್ನಾನ)
(41) ವೃಕ್ಷಾಯುರ್ವೇದ ಯೋಗ (ಔಷಧೀಯ ಸಸ್ಯಗಳಿಂದ ಔಷಧಿ ತಯಾರಿಸುವ ಹಾಗೂ ಚಿಕಿತ್ಸೆ ನೀಡುವ ಕಲೆ)
(42) ಮೇಷ ಕುಕ್ಕುಟ ಲಾವಕ ಯುದ್ಧ ವಿಧಿ (ಟಗರು, ಕೋಳಿ ಮತ್ತು ಹಕ್ಕಿಗಳಿಗೆ ಕಾದಾಟಕ್ಕಾಗಿ ತರಬೇತಿ ನೀಡುವ ಕಲೆ)
(43) ಶುಕ ಸಾರಿಕಾ ಪ್ರಲಾಪನ (ಗಂಡು ಮತ್ತು ಹೆಣ್ಣು ಗಿಳಿಗಳಿಗೆ ಸಂಭಾಷಣೆ ಕಲಿಸುವ ಕಲೆ)
(44) ಉತ್ಸಾದನ, ಸಂವಾಹನ, ಕೇಶ ವರ್ಧನ ಕೌಶಲ (ತಲೆ ಮತ್ತು ದೇಹಕ್ಕೆ ಕೈ/ ಕಾಲುಗಳಿಂದ ಮಸಾಜ್ ಮಾಡುವ ಕಲೆ)
(45) ಅಕ್ಷರ ಮುಷ್ಟಿಕಾ ಕಥನ (ಪದಗಳ ಸರಣಿಯ ಅರ್ಥ ತಿಳಿಯುವ ಕಲೆ)
(46) ಮ್ಲೇಚ್ಛಿತ ವಿಕಲ್ಪ (ವಿವಿಧ ಭಾಷೆಗಳ ರಹಸ್ಯ/ ಸಂಕೇತ ಪದಗಳ ಜ್ನಾನ)  
(47) ದೇಶ ಭಾಷಾ ಜ್ನಾನ (ವಿವಿಧ ಪ್ರಾದೇಶಿಕ ಭಾಷೆಗಳ ಜ್ನಾನ)
(48) ಪುಷ್ಪ ಶಕಟಿಕಾ (ವಿವಿಧ ವಿನ್ಯಾಸದ ವಾಹನ ಮತ್ತು ಗಾಡಿ ತಯಾರಿಸುವ/ ಹೂಗಳಿಂದ ಅಲಂಕರಿಸುವ ಕಲೆ)
(49) ನಿಮಿತ್ತ ಜ್ನಾನ (ಶುಭ ಮತ್ತು ಅಶುಭ ಶಕುನಗಳ ಹಾಗೂ ಸಮಯದ ಜ್ನಾನ)
(50) ಯಂತ್ರ ಮಾತೃಕಾ (ಜಲಸಾರಿಗೆ ವಾಹನಗಳ/ ಯುದ್ಧ ಯಂತ್ರಗಳ, ಇತರ ಯಂತ್ರಗಳ ತಯಾರಿ ಕಲೆ)
(51) ಧಾರಣ ಮಾತೃಕಾ (ಅಷ್ಟಾವಧಾನ ಮತ್ತು ಶತಾವಧಾನ ಕಲೆ)
(52) ಸಂಪಾತ್ಯಾ (ಇನ್ನೊಬ್ಬರು ಹೇಳಿದ ಕಾವ್ಯ/ ಶ್ಲೋಕ ಕೇಳಿ ಅದನ್ನೇ ಹೇಳುವ ಕಲೆ)
(53) ಮಾನಸಿ (ಪರರ ಮನಸ್ಸಿನಲ್ಲೇನಿದೆಯೆಂದು ತಿಳಿಯುವ/ ಶಬ್ದಗಳಿಂದ ಅರ್ಥಭರಿತ ವಾಕ್ಯ ರಚಿಸುವ ಕಲೆ)
(54) ಕಾವ್ಯ ಕ್ರಿಯಾ (ಕಾವ್ಯ - ಶೃಂಗಾರ ಕಾವ್ಯ ಸಹಿತ - ರಚಿಸುವ ಕಲೆ)
(55) ಅಭಿದಾನ ಕೋಶ ಛಂದೋ ಜ್ನಾನ (ಶಬ್ದಕೋಶ, ಏಕಾಕ್ಷರ ಕೋಶ ಮತ್ತು ಛಂದಸ್ಸು ಶಾಸ್ತ್ರ ಜ್ನಾನ)
(56) ಕ್ರಿಯಾ ಜ್ನಾನ (ಯಾವುದೇ ಕಾರ್ಯಕ್ರಮ/ ಸಮಾರಂಭ ಯೋಜಿಸುವ ಕಲೆ)
(57) ಚಲಿತಕ ಯೋಗ (ಪ್ರತಿಸ್ಪರ್ಧಿಗೆ ಗೊಂದಲ ಮಾಡಿ ಅಥವಾ ಮೋಸದಿಂದ ಜೂಜಿನಲ್ಲಿ ಗೆಲ್ಲುವ ಕಲೆ)
(58) ವಸ್ತ್ರಗೋಪನ (ಚಂದ ಕಾಣುವಂತೆ ಉಡುಪು ಧರಿಸುವ ಕಲೆ)
(59) ದ್ಯೂತ ವಿಶೇಷ (ವಿವಿಧ ಜೂಜಿನ ಆಟಗಳನ್ನು ತಿಳಿದಿರುವುದು)
(60) ಆಕರ್ಷಕ ಕ್ರೀಡಾ (ಸ್ತಂಭೀಕರಣ, ವಶೀಕರಣ, ಆಕರ್ಷಣಗಳ ಜ್ನಾನ)
(61) ಬಾಲ ಕ್ರೀಡಾ (ಮಕ್ಕಳ ಆಟಗಳ ಜ್ನಾನ)
(62) ವೈನಕೀಯ ವಿದ್ಯಾ (ಈಗಿರುವ ಸ್ಥಳದಿಂದ ತಾನು ಇಚ್ಛಿಸಿದ ಸ್ಥಳಕ್ಕೆ ತಕ್ಷಣವೇ ಸ್ಥಳಾಂತರಗೊಳ್ಳುವ ಜ್ನಾನ. ಉದಾ: ಜಲಪ್ಲವನ ಅಥವಾ ಪಾದುಕಾ ಸಿದ್ಧಿ)
(63) ವೈಜಯಿಕೀಯ ವಿದ್ಯಾ (ಯಾವುದೇ ಸಂದರ್ಭದಲ್ಲಿ ಎದುರಾಳಿಯ ವಿರುದ್ಧ ಜಯ ಗಳಿಸುವ ಕಲೆ)
(64) ವ್ಯಾಯಾಮಿಕೀಯ ವಿದ್ಯಾ (ಯೋಗಾಸನಗಳ ಜ್ನಾನ)

(ಮಾಹಿತಿ: ವಿವಿಧ ಮೂಲಗಳಿಂದ. ಗಮನಿಸಿ: ಯಜುರ್ವೇದ, ಶುಕ್ರ ನೀತಿ, ಚಾಂದ್ಯೋಕ್ತ ಉಪನಿಷತ್, ಶ್ರೀ ವಿಷ್ಣು ಪುರಾಣ, ಶ್ರೀ ಲಲಿತಾ ಸಹಸ್ರನಾಮ ಇತ್ಯಾದಿ ಮೂಲಗ್ರಂಥಗಳಲ್ಲಿ 64 ಕಲೆಗಳ ಪ್ರಸ್ತಾಪ/ ವಿವರಣೆಗಳು ಇವೆ. ಆ ಕೆಲವು ಮೂಲಗಳಲ್ಲಿ ಇರುವ ಮತ್ತು ಇಲ್ಲಿ ನೀಡಲಾಗಿರುವ ಹೆಸರು ಹಾಗೂ ವಿವರಣೆಗಳಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬರಬಹುದು. ಈ 64 ಕಲೆಗಳು ಮಾತ್ರವಲ್ಲ, 4 ವೇದಗಳು, 4 ಉಪವೇದಗಳು ಮತ್ತು 6 ವೇದಾಂಗಗಳ ಸಹಿತವಾದ 14 ವಿದ್ಯೆಗಳೂ ಪ್ರಾಚೀನ ಭಾರತದ ಅಗಾಧ ಜ್ನಾನ ಖಜಾನೆಯ ಭಾಗವಾಗಿವೆ.)
ಫೋಟೋ: ಎಲ್ಲ 64 ಕಲೆಗಳ ಸಾಂಕೇತಿಕ ಪ್ರಾಚೀನ ಚಿತ್ರಗಳು … ಕೃಪೆ: ಸಂಸ್ಕೃತಿ ಮ್ಯಾಗಜೀನ್.ಕೋಮ್

ಪ್ರಾಚೀನ ಭಾರತ ನೂರಾರು ಜ್ನಾನ ಶಾಖೆಗಳ ತವರು. ಪ್ರತಿಯೊಂದು ಜ್ನಾನ ಶಾಖೆಯೂ ಹಲವಾರು ಕಲೆಗಳ ಖಜಾನೆ. ಈ ಕಲೆಗಳು “64 ವಿದ್ಯೆಗಳು” ಎಂದು ಸುಪ್ರಸಿದ್ಧ. ಸಂಸ್ಕೃತದಲ್ಲಿ "ಕಲೆ" ಎಂದರೆ ಕಾಯಕದ ಕಲೆ (ಫರ್-ಫಾರ್ಮಿಂಗ್ ಆರ್ಟ್)

ಸಂಗೀತ, ನೃತ್ಯ, ನಾಟ್ಯ, ಚಿತ್ರಕಲೆ, ಶಿಲ್ಪಕಲೆ,  ವಾಸ್ತುಕಲೆ - ಇಂತಹ ಹತ್ತಾರು ಕಲೆಗಳು ಸಾವಿರಾರು ವರುಷಗಳ ಅವಧಿಯಲ್ಲಿ ಪ್ರಾಚೀನ ಭಾರತದಲ್ಲಿ ವಿಕಾಸ ಹೊಂದಿದವು. ಇದಕ್ಕೆ ಪ್ರಧಾನ ಕಾರಣ ಇಲ್ಲಿನ ತಪಸ್ವಿಗಳ ಮೇಧಾಶಕ್ತಿ ಮತ್ತು ತ್ಯಾಗ. ಮನುಷ್ಯನ ವಿಕಾಸಕ್ಕೆ ಅಗತ್ಯವಾದ ಹಲವಾರು ಕಲೆಗಳನ್ನು ಗುರುಗಳೂ ಸಾಧಕರೂ ಉತ್ತುಂಗಕ್ಕೆ ಒಯ್ದರು. ಮಾತ್ರವಲ್ಲ, ಅವನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಲಿಕ್ಕಾಗಿ ಪರಿಣಾಮಕಾರಿ ಶಿಕ್ಷಣ ಪದ್ಧತಿಯನ್ನು ಅಭಿವೃದ್ಧಿ ಪಡಿಸಿದರು. ಇದರಿಂದಾಗಿಯೇ ಭಾರತದ ನಳಂದಾ, ತಕ್ಷಶಿಲಾ ಇತ್ಯಾದಿ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯಗಳೆಂದು ಹೆಸರು ಗಳಿಸಿದವು. ಇಲ್ಲಿ ಅಧ್ಯಯನ ಮಾಡಲಿಕ್ಕಾಗಿ ಹಲವಾರು ವಿದೇಶಗಳಿಂದ ಪ್ರತಿ ವರುಷವೂ ಸಾವಿರಾರು ಜ್ನಾನಾಕಾಂಕ್ಷಿಗಳು ಭಾರತಕ್ಕೆ ಆಗಮಿಸುತ್ತಿದ್ದರು.

ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಮಾತ್ರವಲ್ಲದೆ ದೇಶದ ಉದ್ದಗಲದಲ್ಲಿ ಹರಡಿದ್ದ ಸಾವಿರಾರು ಗುರುಕುಲಗಳಲ್ಲಿ ಗುರು-ಶಿಷ್ಯ ಪರಂಪರೆಯಲ್ಲಿ ಗುರುಗಳು ತಮ್ಮ ಜ್ನಾನವನ್ನು ಎಲ್ಲ ವಿದ್ಯಾರ್ಥಿಗಳಿಗೂ ಧಾರೆ ಎರೆಯುತ್ತಿದ್ದರು. ಮೌಖಿಕ ಪರಂಪರೆ ಮೂಲಕ ಮತ್ತು ತಾಳೆಗರಿಗಳ ಗ್ರಂಥಗಳ ಮೂಲಕ ಪ್ರಾಚೀನ ಭಾರತದ ಅಗಾಧ ಜ್ನಾನಭಂಡಾರ ಇಲ್ಲಿಯ ವರೆಗೆ ಉಳಿದು ಬಂದಿದೆ ಎಂಬುದನ್ನು ಗಮನಿಸಿ. ಅಂದರೆ, "ಜ್ನಾನ" ಎಂಬುದು ಅಳಿವಿಲ್ಲದ ಸಂಪತ್ತು ಮತ್ತು ಮುಂದಿನ ತಲೆಮಾರುಗಳಿಗೆ ಅತ್ಯಗತ್ಯವಾದ ಸಾಧನ ಎಂಬುದನ್ನು ನಮ್ಮ ಪೂರ್ವಿಕರು ಚೆನ್ನಾಗಿ ಅರಿತಿದ್ದರು. ಆದ್ದರಿಂದಲೇ, ಈ ಜ್ನಾನವನ್ನು ದುಷ್ಟ ಮತ್ತು ಅಸೂಯಾ ಮನೋಭಾವದ ಯಾವುದೇ ಧಾಳಿಕೋರರಿಗೆ ನಾಶಪಡಿಸಲು ಸಾಧ್ಯವಾಗದಂತೆ ಅದರ ಸಂರಕ್ಷಣೆಗಾಗಿ ವ್ಯವಸ್ಥೆಗಳನ್ನು ರೂಪಿಸಿದ್ದರು. ಅದು, ನಮ್ಮ ಪೂರ್ವಿಕರ “ಸರ್ವೇಜನಾಃ ಸುಖಿನೋಭವಂತು” ಎಂಬ ಉದಾತ್ತ ಚಿಂತನೆಯ ಫಲ.

ಒಬ್ಬ ಮನುಷ್ಯ ಸುಸಂಸ್ಕೃತನಾಗದಿದ್ದರೆ ಆತನ ಸಮಾಜಕ್ಕೆ, ದೇಶಕ್ಕೆ ಮತ್ತು ಇಡೀ ಜಗತ್ತಿಗೆ ಆತ ಹೇಗೆ ಕಂಟಕಪ್ರಾಯ ಆಗಬಲ್ಲ ಎಂಬುದನ್ನು ಕಳೆದ ಒಂದು ಸಾವಿರ ವರುಷಗಳ ಚರಿತ್ರೆಯಲ್ಲಿ ನಾವು ಮತ್ತೆಮತ್ತೆ ಕಾಣುತ್ತಿದ್ದೇವೆ. ಹಾಗಾದರೆ, ಒಬ್ಬ ವ್ಯಕ್ತಿ ಸುಸಂಸ್ಕೃತ ನಾಗರಿಕನಾಗಿ ಬೆಳೆದು, ಸಮಾಜದ ಒಳಿತಿಗಾಗಿ ಬದುಕಿ, ತನ್ನ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಆತ/ ಆಕೆಯಲ್ಲಿ ವಿಶಾಲ ಮನೋಭಾವದ ಉದಾತ್ತ ಚಾರಿತ್ರ್ಯದ ವ್ಯಕ್ತಿತ್ವ ಅರಳಿಸುವಂತಹ ಶಿಕ್ಷಣ ನೀಡಬೇಕು. ಅಂತಹ ಶಿಕ್ಷಣವು 64 ಕಲೆಗಳನ್ನು ಒಳಗೊಂಡಿರಬೇಕು ಎಂದು ಮಹಾಮುನಿ ವಾತ್ಸಾಯನ ದಾಖಲಿಸಿದ್ದಾರೆ.

(ಗಮನಿಸಿ: 64 ಕಲೆಗಳ ಪಟ್ಟಿ ಮುಂದಿನ ಲೇಖನದಲ್ಲಿದೆ.)

ಈ ಎಲ್ಲ ಕಲೆಗಳ ಮಹತ್ವವನ್ನು ತಿಳಿಯಬೇಕಾದರೆ, ಮಧ್ಯಪ್ರದೇಶದ ಭೀಮ್-ಬೇಟಿಕಾ ಎಂಬಲ್ಲಿ ಗುಹೆಗಳಲ್ಲಿರುವ 10,000 ವರುಷ ಹಿಂದಿನ ಚಿತ್ರಗಳನ್ನು ಕಾಣಬೇಕು. ಹರಪ್ಪಾ - ಮೊಹಂಜೋದಾರದಲ್ಲಿ ಸಾವಿರಾರು ವರುಷಗಳ ಮುಂಚೆ ಉತ್ತುಂಗಕ್ಕೆ ಏರಿದ್ದ ನಾಗರಿಕತೆಯ ಪುರಾವೆಗಳನ್ನು ಪರಿಶೀಲಿಸಬೇಕು. ಅಂತರಿಕ್ಷಜ್ನಾನ, ಜ್ಯೋತಿಷ್ಯ ಶಾಸ್ತ್ರ, ಗಣಿತ, ಆಯುರ್ವೇದ ಮತ್ತು ಯೋಗಗಳಲ್ಲಿ ಪ್ರಾಚೀನ ಭಾರತ ಸಾಧಿಸಿದ್ದ ಅದ್ಭುತ ಪ್ರಗತಿಯ ಬಗ್ಗೆ ಅಧ್ಯಯನ ಮಾಡಬೇಕು. ಅಜಂತಾ, ಎಲ್ಲೋರಾ, ಬೇಲೂರು, ಹಳೆಬೀಡು, ಹಂಪೆ, ಮಧುರೆ, ಮಹಾಬಲಿಪುರ ಇತ್ಯಾದಿ ನೂರಾರು ಸಾಂಸ್ಕೃತಿಕ ಕೇಂದ್ರಗಳಲ್ಲಿ ಇಂದಿಗೂ ಉಳಿದಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಜಗತ್ತಿನಲ್ಲೇ ಸರಿಸಾಟಿಯಿಲ್ಲದ ಮಾದರಿಗಳನ್ನು ಕಣ್ಣಾರೆ ಕಾಣಬೇಕು. ಸಂಗೀತ ಮತ್ತು ನೃತ್ಯ ಕಲೆಗಳ ಹಾಗೂ ಭಾರತದ ಉದ್ದಗಲದಲ್ಲಿ ವ್ಯಾಪಿಸಿರುವ ಸಾವಿರಾರು ಜನಸಮುದಾಯಗಳ ಸಮೃದ್ಧ ಜಾನಪದ ಕಲೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ತಿಳಿದುಕೊಳ್ಳಬೇಕು.

ಎಂತಹ ಜ್ನಾನಸಂಪನ್ನ ದೇಶ ನಮ್ಮದು! ಹತ್ತೊಂಬತ್ತನೇ ಶತಮಾನದಿಂದೀಚೆಗೆ ಭಾರತದಲ್ಲಿ ಜರಗಿದ ಹಲವಾರು ವಿದ್ಯಮಾನಗಳಿಂದಾಗಿ ಈ ಅಮೂಲ್ಯ ಜ್ನಾನಭಂಡಾರ ಹಿನ್ನೆಲೆಗೆ ಸರಿಯಿತು. "ಗುಲಾಮಿ" ಮನೋಭಾವದ ಕೆಲಸದಾಳುಗಳನ್ನು ಬೆಳೆಸಲಿಕ್ಕಾಗಿ ನಮ್ಮ ಮೇಲೆ ಹೇರಲಾದ ಶಿಕ್ಷಣ ಪದ್ಧತಿಯಿಂದಾಗಿ ನಮ್ಮ ಸಾವಿರಾರು ವರುಷಗಳ ಪರಂಪರೆಯ ಜ್ನಾನಭಂಡಾರದ ಬಗ್ಗೆ ನಮಗೆ ಮಾಹಿತಿಯೇ ಇಲ್ಲವಾಯಿತು. 1947ರಲ್ಲಿ ನಾವು ಸ್ವಾತಂತ್ರ್ಯ ಗಳಿಸಿದ ನಂತರವೂ ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿಯ ಪುನರುಜ್ಜೀವನ ಆಗಲಿಲ್ಲ.
ಕೊಲ್ಹಾಪುರದ ಕನೇರಿ ಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮಿಗಳು ನಡೆಸುತ್ತಿರುವ ಗುರುಕುಲದ 250 ವಿದ್ಯಾರ್ಥಿಗಳಿಗೆ (100 ಹೆಣ್ಣುಮಕ್ಕಳ ಸಹಿತ) ಈ 64 ಕಲೆಗಳನ್ನು ಕಲಿಸಲಾಗುತ್ತಿದೆ ಎಂಬುದು ನಾವೆಲ್ಲರೂ ಗಮನಿಸಬೇಕಾದ ಸಂಗತಿ. ಆ ವಿದ್ಯಾರ್ಥಿಗಳು ಆಯುರ್ವೇದ, ಖಗೋಲಶಾಸ್ತ್ರ ಸಹಿತ 64 ಕಲೆಗಳಲ್ಲಿ ಪರಿಣತರಾಗುತ್ತಿದ್ದಾರೆ. ಅಲ್ಲಿನ 14 - 15 ವರುಷ ವಯಸ್ಸಿನ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಾ ಏಳು ಗಂಟೆಗಳ ಅವಧಿ ಅಂತಾಕ್ಷರಿ ನಡೆಸಬಲ್ಲರು ಎಂದು ಸ್ವಾಮಿಗಳು ಅಭಿಮಾನದಿಂದ ಹೇಳುತ್ತಾರೆ. (ಅದು 29ನೆಯ ಕಲೆ)

ಇನ್ನಾದರೂ, ನಮ್ಮ ಮಕ್ಕಳಿಗೆ ಬದುಕನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಶಿಕ್ಷಣ ನೀಡಲು ತಯಾರಾಗೋಣ. ಜ್ನಾನಸಂಪನ್ನರಾಗಿ ಆತ್ಮವಿಶ್ವಾಸದಿಂದ ಬದುಕಲು ಕಲಿಸೋಣ. ಮನುಷ್ಯರನ್ನು ವಿಶಾಲ ಮನೋಭಾವದ ಮತ್ತು ಉದಾತ್ತ ಚಾರಿತ್ರ್ಯದ ನಾಗರಿಕರನ್ನಾಗಿ ರೂಪಿಸುವ ಜ್ನಾನವನ್ನು ನಮ್ಮ ಮಕ್ಕಳಿಗೆ ಧಾರೆ ಎರೆಯಲು ಮುಂದಾಗೋಣ. ಆ ಮೂಲಕ ಮುಂದಿನ ತಲೆಮಾರಿನವರು, ಭಾರತದ ಪ್ರಾಚೀನ ಜ್ನಾನಖಜಾನೆಯ ಒಂದು ಭಾಗವನ್ನಾದರೂ ತಮ್ಮದಾಗಿಸಿಕೊಂಡು, ಅದನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸಲು ಸಂಕಲ್ಪ ತೊಡುವಂತಾಗಲಿ.

ಫೋಟೋ: ಪ್ರಾಚೀನ ಭಾರತದ ಗುರುಕುಲದಲ್ಲಿ ಅಧ್ಯಯನ … ಕೃಪೆ: ಲಿಂಕ್‌ಡ್ ಇನ್

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ ಅವರ ಅಗಾಧ ಅಧ್ಯಯನ ಹಾಗೂ ಜೀವನಾನುಭವ ಭಟ್ಟಿಯಿಳಿಸಿ, ಪ್ರಚಂಡ ಪ್ರತಿಭೆಯ ಬಲದಿಂದ ರಚಿಸಿದ ಮುಕ್ತಕಗಳೇ ತುಂಬಿವೆ. ಇಲ್ಲಿನ 824 ಮುಕ್ತಕಗಳಲ್ಲಿ ನಮ್ಮ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನೂ ಒಳನೋಟಗಳನ್ನೂ ನೀಡುವ ಕೆಲವು ಮುಕ್ತಕಗಳನ್ನು ಪರಶೀಲಿಸೋಣ.

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ / ಪೂರ್ವಕರ್ಮದ ಫಲಿತಶೇಷದಿಂದ ಕಹಿ //
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ / ಆವೇಶವೇತಕೋ - ಮರುಳ ಮುನಿಯ //

ದಿನದಿನದ ನಮ್ಮ ಊಟ ಬೇವುಬೆಲ್ಲಗಳ ಉಂಡೆ ಇದ್ದಂತೆ, ಅದರಲ್ಲಿ ಕಹಿಯೂ ಇದೆ, ಸಿಹಿಯೂ ಇದೆ. ಪೂರ್ವ ಜನ್ಮಗಳಲ್ಲಿ ನಾವು ಮಾಡಿದ ಕರ್ಮದ ಫಲದಿಂದ ನಮಗೆ ಕಹಿ ಸಿಗುತ್ತದೆ. ಹಾಗೆಯೇ ದೇವರ ಕೃಪೆಯಿಂದ ಸಿಹಿ ಸಿಗುತ್ತದೆ. ಇವು ಒಂದಕ್ಕೊಂದು ವಿರುದ್ಧವಾಗಿವೆ ಅನಿಸುತ್ತದೆ. ಆದರೆ ಇವು ಪಕ್ಕಾ ತಾರ್ಕಿಕವಾಗಿವೆ. ಹಾಗಿರುವಾಗ ದಿನದಿನದ ನಮ್ಮ ಬದುಕಿನ ಕಹಿಸಿಹಿಗಳ ಬಗ್ಗೆ ಆವೇಶವೇತಕ್ಕೆ? ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು. "ದೇವರು ನನಗೇ ಯಾಕೆ ಈ ಕಷ್ಟ ಕೊಟ್ಟ?” ಎಂದು ಹಲುಬುವವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ ಏನೆಂದರೆ ಅದು ದೇವರು ಕೊಟ್ಟದ್ದಲ್ಲ ಬದಲಾಗಿ ತಾನು ಮಾಡಿದ್ದ ಕರ್ಮಗಳ ಫಲ ಎಂಬುದನ್ನು. ಆದ್ದರಿಂದ ತನಗೆ ಸಂತೋಷ ಬೇಕೆಂದರೆ ಹೆಚ್ಚೆಚ್ಚು ಒಳ್ಳೆಯ ಕಾಯಕ ಮಾಡಬೇಕು. ಈ ಅರಿವಿನ ದೀಪ ನಮ್ಮೊಳಗೆ ಬೆಳಗಿದಾಗ, ತಿಳಿವು ಮೂಡುತ್ತದೆ, ಅಲ್ಲವೇ?

ಜೀವನವೆ ಪರಮಗುರು, ಮಿಕ್ಕ ಗುರುಗಳಿನೇನು / ಭಾವಸಂಸ್ಕಾರ ಜೀವಾನುಭವಗಳಿಗೆ //
ನೋವು ನಲಿವುಗಳೊಲೆಯ ಸೆಕೆಯೆ ನಿನ್ನಾತ್ಮಕ್ಕೆ / ಪಾವಕವಿಧಾನವೆಲೊ - ಮರುಳ ಮುನಿಯ //

ಜೀವನವೆ ನಿನ್ನ ಪರಮಗುರು; ಹಾಗಿರುವಾಗ ಬೇರೆ ಯಾವುದೇ ಗುರುಗಳಿಂದ ಏನಾಗಬೇಕಾಗಿದೆ? ಎಂದು ಕೇಳುತ್ತಾರೆ ಮಾನ್ಯ ಡಿ.ವಿ.ಜಿ.ಯವರು ಈ ಮುಕ್ತಕದಲ್ಲಿ. ಜೀವನದ ಅನುಭವಗಳಿಗೆ ಭಾವಸಂಸ್ಕಾರ ನಿರಂತರವಾಗಿ ಆಗುತ್ತಲೇ ಇರುತ್ತದೆ. ನೋವು ನಲಿವುಗಳು ಎಂದರೇನು? ಅವು ನಿನ್ನ ಆತ್ಮವನ್ನು ಶುದ್ಧವಾಗಿಸುವ ಒಲೆಯ ಧಗೆ ಇದ್ದಂತೆ. ಆ ತಾಪಕ್ಕೆ ಮತ್ತೆಮತ್ತೆ ಬಿಸಿಯಾಗುತ್ತಾ ತಣಿಯುತ್ತಾ ನಿನ್ನ ಆತ್ಮ ಪುಟವಿಟ್ಟ ಚಿನ್ನದಂತಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಹೊರಜಗದೊಳೆಂತೊ ನಿನ್ನೊಳಜಗದೊಳಗಮಂತು / ಇರುಳು ಹಗಲುಗಳುಂಟು ಶಶಿರವಿಗಳುಂಟು //
ಕುರುಡು ಕತ್ತಲೆಯುಂಟು ಮುಗಿಲು ಸಿಡಿಲುಗಳುಂಟು / ಅರುಣೋದಯವುಮುಂಟು - ಮರುಳ ಮುನಿಯ //

ನೀನು ಕಾಣುವ ಹೊರ ಜಗತ್ತು ಇದೆ ಮತ್ತು ನಿನ್ನೊಳಗಿನ ಜಗತ್ತೂ ಇದೆ. ಇವೆರಡರಲ್ಲಿಯೂ ರಾತ್ರಿ-ಹಗಲುಗಳು ಮತ್ತು ಚಂದ್ರ-ಸೂರ್ಯರು ಇದ್ದಾರೆ. ಹಾಗೆಯೇ ಕಣ್ಣು ಕುರುಡಾಗಿಸುವ ಕತ್ತಲೆ ಹಾಗೂ ಮುಗಿಲು ಮತ್ತು ಸಿಡಿಲುಗಳೂ ಇವೆ. ಹಾಗಂತ ನೀನು ಕುಗ್ಗಬೇಕಾಗಿಲ್ಲ. ಯಾಕೆಂದರೆ ನಿನ್ನ ಬಾಹ್ಯ ಮತ್ತು ಅಂತರಂಗದ ಜಗತ್ತಿನಲ್ಲಿ ಬೆಳಕನ್ನೂ ಭರವಸೆಯನ್ನೂ ಕೊಡುವ ಅರುಣೋದಯವೂ ಇದೆ ಎಂದು ಬದುಕಿನ ಬಗ್ಗೆ ಮನಮುಟ್ಟುವಂತೆ ನುಡಿಯುತ್ತಾರೆ ಮಾನ್ಯ ಡಿ.ವಿ.ಜಿ.

ಜೀವನವೆ ಸಂಪತ್ತು; ಬೇರೆ ಸಂಪತ್ತೇನು? ಭೂವಿಯಚ್ಚಿತ್ರಗಳಿನಗಲ್ದ ತಿಳಿಗಣ್ಣು //
ಜೀವಲೋಕದ ದನಿಗೆ ಮರುದನಿಯ ಮಿಡಿಯುವುದೆ / ದೈವಪ್ರಸಾದವವು - ಮರುಳ ಮುನಿಯ //

ಜೀವನವೇ ಬಹು ದೊಡ್ಡ ಸಂಪತ್ತು. ಹಾಗಾಗಿ ಬೇರೆ ಯಾವ ಸಂಪತ್ತೂ ಬೇಕಾಗಿಲ್ಲ. ಭೂಮಿ ಮತ್ತು ಆಕಾಶ (ವಿಯತ್)ಗಳಲ್ಲಿ ಪ್ರಕೃತಿ ಸೃಷ್ಟಿಸಿರುವ ಚಿತ್ರಗಳನ್ನು ಕಂಡು ಬೆರಗಿನಿಂದ ಹಿಗ್ಗದಿರುವ ತಿಳಿಗಣ್ಣುಗಳು, ಈ ಜಗತ್ತಿನ ಅಸಂಖ್ಯಾತ ಜೀವಿಗಳ ದನಿಗೆ ಮರುದನಿಯಿತ್ತು ಮಿಡಿಯುವುದೇನು? ಎಂದು ಪ್ರಶ್ನಿಸುತ್ತಾ, ಈ ಜಗತ್ತಿನ ಆ ಎಲ್ಲ ಲೀಲೆಗಳೂ ದೇವರ ಪ್ರಸಾದಗಳು ಎಂದು ಸ್ಪಷ್ಟ ಪಡಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.

ಜಗದೆ ನೀಂ ಕೊಂಡದ್ದೆ ಜಗಕೆ ನೀಂ ಕೊಟ್ಟದ್ದೆ / ಮಿಗಿಲಾವುದೆರಡರೊಳು ನಿನ್ನ ಬೆಲೆ ಏನು?
ಬಗೆಯದೀ ಲೆಕ್ಕವನು ಜಗದುಣಿಸನುಂಬವನು / ಮೃಗಮಾತ್ರನಲ್ಲವೇಂ? - ಮರುಳ ಮುನಿಯ //


ಈ ಜಗತ್ತಿನಿಂದ ನೀನು ಪಡೆದದ್ದು ಎಷ್ಟು? ಈ ಜಗತ್ತಿಗೆ ನೀನು ಕೊಟ್ಟದ್ದು ಎಷ್ಟು? ಇವೆರಡರಲ್ಲಿ ಯಾವುದು ಹೆಚ್ಚು? ಅದರಲ್ಲಿ ನಿನ್ನ ಕೊಡುಗೆ ಎಷ್ಟು? ಇವೆಲ್ಲ ಲೆಕ್ಕಾಚಾರಗಳನ್ನು ಮಾಡದೆ ಈ ಜಗತ್ತಿನ ಫಲಾಫಲಗಳನ್ನು ಅನುಭವಿಸುವವನು (ಉಣಿಸನು ಉಂಬವನು) ಮೃಗಕ್ಕೆ ಸಮಾನನು ಅಲ್ಲವೇ? ಎಂಬ ನೇರ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ನಮ್ಮನ್ನು ಬೆಚ್ಚಿಬೀಳಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಕೆಲವರಿದ್ದಾರೆ - “ಈ ಜಗತ್ತು ನನಗೇನು ಕೊಟ್ಟಿದೆ? ನನಗೆ ಸಿಕ್ಕಿದ್ದು ಕೈತುಂಬ ಕಷ್ಟ, ತಲೆತುಂಬ ಸಂಕಟ” ಎಂದು ಗೊಣಗುಟ್ಟುತ್ತಲೇ ಇರುತ್ತಾರೆ. ಈ ಜಗತ್ತಿಗೆ ತಾವೇನು ಕೊಟ್ಟಿದ್ದೇವೆ ಎಂದು ಅವರು ಯಾವತ್ತೂ ಆತ್ಮನಿರೀಕ್ಷಣೆ ಮಾಡಿಕೊಳ್ಳೋದಿಲ್ಲ. ಅಂಥವರಿಗೆ ಸರಿಯಾದ ಉತ್ತರ ಈ ಮುಕ್ತಕದಲ್ಲಿದೆ, ಅಲ್ಲವೇ?
(ಸಪ್ಟಂಬರ್ 2023)
 

“ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಯೋಗವನ್ನು  ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಇದರ ಉದ್ದೇಶ.

ಈ ಹಿನ್ನೆಲೆಯಲ್ಲಿ “ಯೋಗಾಸನಗಳ ಕ್ರಮಬದ್ಧ ಅಭ್ಯಾಸದಿಂದ ಆರೋಗ್ಯ ಉತ್ತಮಪಡಿಸಲು ಸಹಾಯವಾಗುತ್ತದೆಯೇ?” ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ.

ನವದೆಹಲಿಯ ಎಐಐಎಂಎಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಮ್ಮ ದೇಶದಲ್ಲಿ ಯೋಗದ ಬಗೆಗಿನ ಸಂಶೋಧನೆಗಳ ಪ್ರಧಾನ ಕೇಂದ್ರವಾಗಿದೆ. ಇಲ್ಲಿ ವೈದ್ಯರು ಮತ್ತು ಸಂಶೋಧಕರು ಯೋಗದ ಚಿಕಿತ್ಸೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಯೋಗ ಚಿಕಿತ್ಸೆಯನ್ನು ಆಧುನಿಕ ಔಷಧಿಗಳ ಜೊತೆ ರೋಗಿಗಳಿಗೆ ನೀಡುವುದು ಮತ್ತು ಕ್ಲಿನಿಕಲ್ ಪ್ರಾಕ್ಟೀಸಿಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಇದರ ಉದ್ದೇಶ. ಯೋಗ ಭಾರತದ ಸಾಂಸ್ಕೃತಿಕ ಸೊತ್ತು ಆಗಿದ್ದು, ಎಐಐಎಂಎಸ್‌ನ ಈ ಸಂಶೋಧನೆಗಳ ಬಗ್ಗೆ ಜಗತ್ತಿನ ಎಲ್ಲೆಡೆಗಳ ವಿಜ್ನಾನಿಗಳೂ ತಜ್ನರೂ ಆಸಕ್ತಿ ತೋರುತ್ತಿದ್ದಾರೆ.

ಎಐಐಎಂಎಸ್‌ನಲ್ಲಿ 2016ರಲ್ಲಿ ಸಿಐಎಂಆರ್ (ಸೆಂಟರ್ ಫಾರ್ ಇಂಟೆಗ್ರೇಟಿವ್ ಮೆಡಿಸಿನ್ ಆಂಡ್ ರೀಸರ್ಚ್) ಸ್ಥಾಪಿಸಲಾಯಿತು. ಇಲ್ಲಿ ಆಧುನಿಕ ಔಷಧಿಗಳ ಚಿಕಿತ್ಸಕರು ಯೋಗ ಮತ್ತು ಆಯುರ್ವೇದ ಚಿಕಿತ್ಸಕರ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಡಾ. ರಿಮಾ ದಾದಾ ಹಾಗೂ ಇತರ ಸಂಶೋಧಕರೂ ಕಾರ್ಯನಿರತರಾಗಿದ್ದಾರೆ. ಇವರು ಅಂಗರಚನಾ ವಿಜ್ನಾನ ವಿಭಾಗದ ಅಣು ಪುನರುತ್ಪಾದನಾ ಮತ್ತು ತಳಿವಿಜ್ನಾನ ಪ್ರಯೋಗಾಲಯದ ಪ್ರೊಫೆಸರ್.  2008ರಿಂದೀಚೆಗೆ ಇವರು ರುಮಾಟಿಕ್ ಆರ್ಥರೈಟಿಸ್, ಗ್ಲುಕೋಮಾ, ಖಿನ್ನತೆ ಮತ್ತು ಪುರುಷರ “ಬಂಜೆತನ" - ಈ ಅನಾರೋಗ್ಯ ಸಮಸ್ಯೆಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಡಾ. ರಿಮಾ ದಾದಾ ಅವರ ಬಳಿ ಸುಮಾರು ಒಂದು ನೂರು ರೋಗಿಗಳ ಕೇಸ್ ಸ್ಟಡೀಸ್ (ಚಿಕಿತ್ಸಾ ದಾಖಲೆಗಳು) ಇವೆ. ಇವನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ: ಕೇವಲ ಔಷಧಿ ಸೇವಿಸುವ ರೋಗಿಗಳು ಮತ್ತು ಔಷಧಿ ಸೇವನೆ ಜೊತೆ ಯೋಗಾಸನಗಳ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು. ತನ್ನ ಸಂಶೋಧನೆಯ ಅನುಸಾರ, ಯೋಗವು ಅನೇಕ ರೋಗಗಳ ಉಲ್ಬಣತೆಯನ್ನು ಕಡಿಮೆಮಾಡುತ್ತದೆ ಮತ್ತು ಪೂರಕ ಚಿಕಿತ್ಸೆಯಾಗಿ ಇಮ್ಯುನೋಲೋಜಿಕಲ್ ಟಾಲರೆನ್ಸ್ ಅನ್ನು ಪುನರ್-ಸ್ಥಾಪನೆ ಮಾಡುತ್ತದೆ ಎನ್ನುತ್ತಾರೆ ಡಾ. ರಿಮಾ ದಾದಾ.

ಕಳೆದ ವರುಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ “ಮನ್ ಕಿ ಬಾತ್” ರೇಡಿಯೋ ಕಾರ್ಯಕ್ರಮದಲ್ಲಿ ಸಿಐಎಂಆರ್ ಇದರ ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. "ನಮ್ಮ ಪಾರಂಪರಿಕ ಔಷಧಿ ಪದ್ಧತಿಗಳನ್ನು ಸ್ವೀಕಾರಾರ್ಹ ಆಗಿಸಲಿಕ್ಕಾಗಿ ಸಿಐಎಂಆರ್ ಅನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯ 20 ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾದ ನಂತರ ಸಂಸ್ಥೆಯು ಪ್ರಸಿದ್ಧಿ ಗಳಿಸಿದೆ" ಎಂದಿದ್ದಾರೆ.

“ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಈ ಎರಡು ಸಿಐಎಂಆರ್ ನಡೆಸಿದ ಅಧ್ಯಯನಗಳನ್ನು ಉದಾಹರಿಸಿದ್ದರು: “ಜರ್ನಲ್ ಆಫ್ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯೋಲಜಿ”ಯಲ್ಲಿ ಪ್ರಕಟವಾದ ಸಿಂಕೊಪೆ ಎಂಬ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಯೋಗದಿಂದಾಗುವ ಪ್ರಯೋಜನಗಳ ಬಗೆಗಿನ ಅಧ್ಯಯನ ವರದಿ ಮತ್ತು “ನ್ಯೂರೋಲಜಿ" ಜರ್ನಲಿನಲ್ಲಿ ಪ್ರಕಟವಾದ ಮೈಗ್ರೇನ್ (ತಲೆನೋವು) ರೋಗಿಗಳಿಗೆ ಯೋಗದಿಂದಾಗುವ ಪ್ರಯೋಜನಗಳ ಬಗೆಗಿನ ಅಧ್ಯಯನ ವರದಿ.

ಹೃದಯದ ಸಮಸ್ಯೆಗಳು, ರಿದಮ್ ಡಿಸ್-ಆರ್ಡರ್, ಖಿನ್ನತೆ, ನಿದ್ದೆಯ ಸಮಸ್ಯೆಗಳು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮತ್ತು ಎಪಿಸೋಡಿಕ್ ಮೈಗ್ರೇನ್ - ಈ ಅನಾರೋಗ್ಯ ಸಮಸ್ಯೆಗಳು ಇರುವವರಿಗೆ ಯೋಗ ಚಿಕಿತ್ಸೆಯ ಪ್ರಯೋಜನಗಳನ್ನು ಸಿಐಎಂಆರ್ ನಡೆಸಿದ ಅಧ್ಯಯನಗಳು ಸಾಬೀತು ಪಡಿಸಿವೆ. ಗರ್ಭಿಣಿ ಮಹಿಳೆಯರಿಗೆ ಗರ್ಭಧಾರಣೆಯ ಅವಧಿಯಲ್ಲಿ ದೇಹದಲ್ಲಿ ಬದಲಾವಣೆಗಳು ಆಗುತ್ತಿರುವಾಗ ಸಮಚಿತ್ತದಿಂದ ಇರಲು ಸಹಾಯ ಮಾಡುವ ಪ್ರಸವಪೂರ್ವ ಯೋಗ ಚಿಕಿತ್ಸೆಯ ಅಧ್ಯಯನಗಳನ್ನೂ ಸಿಐಎಂಆರ್ ಜರಗಿಸಿದೆ.

ಮನುಷ್ಯನ ಬದುಕಿನಲ್ಲಿ ಯೋಗದ ಉಪಯುಕ್ತತೆಯ ಬಗ್ಗೆ ಜಗತ್ತಿನ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ನಡೆಸಿದ ಸಾವಿರಾರು ಅಧ್ಯಯನಗಳ ಫಲಿತಾಂಶಗಳನ್ನು ಇಂಟರ್-ನೆಟ್‌ನಲ್ಲಿ ಯಾರೂ ಪರಿಶೀಲಿಸಬಹುದು.  ಯೋಗಾಭ್ಯಾಸಿಗಳನ್ನು ಯೋಗವು ಆರೋಗ್ಯವಂತ, ಸಮಚಿತ್ತದ, ಚುರುಕಿನ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂಬುದಕ್ಕೆ ಲಕ್ಷಗಟ್ಟಲೆ ನಿದರ್ಶನಗಳಿವೆ. ಭಾರತದ ಪ್ರಾಚೀನ ಋಷಿಮುನಿಗಳು ಮಾನವನ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಉನ್ನತಿಗಾಗಿ ನಮಗಿತ್ತಿರುವ ಅದ್ಭುತ ಸಾಧನ ಯೋಗದ ಬಗ್ಗೆ ಅಭಿಮಾನ ಪಡೋಣ.
(ಆಗಸ್ಟ್ 2023)

ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ.
-ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ?
-ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು?
-ಸೂರ್ಯನ ಕಿರಣಗಳು ಮತ್ತು ಶಾಖ ನಮ್ಮ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿದೆ?
-ಆಕಾಶದಲ್ಲಿ ಈ ಭೂಮಿ ಕುಸಿಯದೆ, ಸಾವಿರಾರು ವರುಷಗಳಿಂದ ಹೇಗೆ ಜೀವಸಂಕುಲವನ್ನು ರಕ್ಷಿಸುತ್ತಿದೆ?
-ಬೇರೆ ಗ್ರಹಗಳಲ್ಲಿ ಜೀವಿಗಳು ಇದ್ದಾವೆಯೇ? ಅವನ್ನು ಹೇಗೆ ಸಂಪರ್ಕಿಸಬಹುದು?

ಇಂತಹ ಸಾವಿರಾರು ಪ್ರಶ್ನೆಗಳ ಉತ್ತರಗಳು ನಮಗೆ ಗೊತ್ತಿಲ್ಲ. ಅವುಗಳಿಗೆ ಇನ್ನು ನೂರು ವರುಷಗಳೊಳಗೆ ಉತ್ತರ ಸಿಗುವ ಯಾವ ಸೂಚನೆಯೂ ಇಲ್ಲ.

ನಮ್ಮ ದಿನನಿತ್ಯದ ಜೀವನದಲ್ಲಿಯೂ ಹಲವಾರು ಸಂಗತಿಗಳು ನಮಗೆ ವಿಸ್ಮಯ ಹಾಗೂ ನಿಗೂಢ ಅನಿಸುತ್ತವೆ. ಯಾಕೆಂದರೆ ಅವುಗಳ ಬಗ್ಗೆ ಯಾಕೆ? ಏನು? ಹೇಗೆ? ಎಂಬ ಪ್ರಶ್ನೆಗಳಿಗೆ ಯಾವ ಉತ್ತರಗಳೂ ಸಿಗೋದಿಲ್ಲ. ಉದಾಹರಣೆಗೆ, ನಮ್ಮ ಆರೋಗ್ಯ. ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ಮಾನವರ ಮೇಲೆ ಧಾಳಿ ಮಾಡಿ ಏನೆಲ್ಲ ಅನಾಹುತಗಳಿಗೆ ಕಾರಣವಾಯಿತು ಎಂಬುದನ್ನು ಗಮನಿಸಿ. 2020ರಿಂದೀಚೆಗೆ ಕಣ್ಣಿಗೆ ಕಾಣಿಸದ ಈ ವೈರಸ್ ಸೋಂಕು ತಗಲಿದವರ ಸಂಖ್ಯೆ 69 ಕೋಟಿ ದಾಟಿದೆ ಮತ್ತು  ಅದಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 68.92 ಲಕ್ಷ. ಮನುಷ್ಯ ಏನೆಲ್ಲ ಕಸರತ್ತು ಮಾಡಿದರೂ ಕೊರೋನಾ ಧಾಳಿಗೆ ಬಲಿಯಾದವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ, ಅಲ್ಲವೇ?

ಈ ಹಿನ್ನೆಲೆಯಲ್ಲಿ ಸಾವಿರಾರು ವರುಷಗಳ ಮುಂಚೆಯೇ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ಭಾರತದ ಋಷಿಮುನಿಗಳು ಆವಿಷ್ಕರಿಸಿದ ಆಯುರ್ವೇದ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಆಯುರ್ವೇದದ ಬಗ್ಗೆ ಸುಪ್ರಸಿದ್ಧ ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ ಸಹಿತ ಸಾವಿರಾರು ಸಂಸ್ಕೃತ ಗ್ರಂಥಗಳಿವೆ. ಆದರೆ, ಅವೆಲ್ಲವೂ ಸಂಸ್ಕೃತದಲ್ಲಿ ಇರುವ ಕಾರಣ ಜನಸಾಮಾನ್ಯರಿಗೆ ಅವನ್ನು ಅಧ್ಯಯನ ಮಾಡಲು ಮತ್ತು ಅವುಗಳ ಸೂತ್ರಗಳನ್ನು ಅಳವಡಿಸಿಕೊಳ್ಳಲು ಕಷ್ಟವಾಗಿದೆ. ಅವುಗಳಲ್ಲಿ ಕೆಲವು ಗ್ರಂಥಗಳು ಇಂಗ್ಲಿಷ್, ಹಿಂದಿ ಮತ್ತು ಇತರ ಕೆಲವು ಭಾಷೆಗಳ ಟಿಪ್ಪಣಿಗಳ ಸಹಿತ ಲಭ್ಯವಿವೆ. ಅದೇನಿದ್ದರೂ, ಆ ಪುಸ್ತಕಗಳು ದುಬಾರಿ ಮತ್ತು ಅವನ್ನು ಓದಲು ಆಸಕ್ತಿಯಿರುವವರು ತೀರಾ ಕಡಿಮೆ ಜನರು.

ಆದ್ದರಿಂದ, ನಮ್ಮ ಬಳಗ 2018ರಲ್ಲಿ ಆರೋಗ್ಯಪೂರ್ಣ ಜೀವನ ವಿಧಾನ ಬಗ್ಗೆ ಸಂಶೋಧನೆ, ಮಾಹಿತಿ ದಾಖಲಾತಿ ಮತ್ತು ಪ್ರಸಾರ ಹಾಗೂ ಜನಜಾಗೃತಿಗಾಗಿ "ಸಾವಯವ ಜೀವನ ಪ್ರತಿಷ್ಠಾನ” (ಫೌಂಡೇಷನ್ ಫಾರ್ ಆರ್ಗಾನಿಕ್ ಲಿವಿಂಗ್) ಸ್ಥಾಪಿಸಿದೆ. ಇದರ ವೆಬ್-ಸೈಟಿನಲ್ಲಿ (https://ffol.in) ಆಯುರ್ವೇದ, ಆರೋಗ್ಯ ರಕ್ಷಣೆ ಕುರಿತಾದ ಹಲವು ಪುಸ್ತಕಗಳ ಮಾಹಿತಿ ಮತ್ತು ಈ ವಿಷಯಗಳ ಇತ್ತೀಚೆಗಿನ ಮಾಹಿತಿ ಲಭ್ಯವಿದೆ. ಇದರ ಒಂದು ಯೋಜನೆಯಾಗಿ “ಆಯುರ್ ವಿಕಿ” ಎಂಬ ಉಚಿತ ಆಪ್ ಅಭಿವೃದ್ಧಿ ಪಡಿಸಿದ್ದೇವೆ. ಇದರಲ್ಲಿ ಆಯುರ್ವೇದ ಪರಿಕಲ್ಪನೆಗಳು, ಪದ್ಧತಿಗಳು, ಯೋಗಾಸನಗಳು, ಪ್ರಾಣಾಯಾಮ ಇತ್ಯಾದಿ 12 ವಿಭಾಗಗಳಿವೆ. “ಹರ್ಬ್ಸ್" ಎಂಬ ಮೊದಲ ವಿಭಾಗದಲ್ಲಿ 2,000ಕ್ಕಿಂತ ಅಧಿಕ ಔಷಧೀಯ ಸಸ್ಯಗಳ ಫೋಟೋ ಸಹಿತ ಮಾಹಿತಿ ಲಭ್ಯವಿದೆ. (ಇದು 2020ರಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯದಿಂದ “ಆಯುರ್ವೇದದ ಅತ್ಯುತ್ತಮ ಆಪ್” ಎಂದು ಪ್ರಶಸ್ತಿ ಗಳಿಸಿದೆ.)

ಅದಲ್ಲದೆ, 2020ರಿಂದೀಚೆಗೆ ಆಯುರ್ವೇದದ ಮಾಹಿತಿ ಮತ್ತು ಸಲಹೆ ನೀಡುವ ಕೆಲವು ಯೂ-ಟ್ಯೂಬ್ ಚಾನೆಲುಗಳು ಜನಪ್ರಿಯವಾಗಿವೆ. ಉದಾಹರಣೆಗೆ: ಉತ್ತರಕನ್ನಡ ಜಿಲ್ಲೆಯ ಡಾ. ವೆಂಕಟರಮಣ ಹೆಗ್ಡೆ ಅವರ "ನಿಸರ್ಗ ಮನೆ, ಶಿರಸಿ” ಚಾನೆಲ್ ಮತ್ತು ಡಾ. ವಿನಾಯಕ ಹೆಬ್ಬಾರ್ ಅವರ “ಅಥೆಂಟಿಕ್ ಆಯುರ್ವೇದ" ಚಾನೆಲ್. ಈ ಎರಡೂ ಚಾನೆಲ್‌ಗಳಲ್ಲಿ ಆರೋಗ್ಯ ರಕ್ಷಣೆಯ ಪಾರಂಪರಿಕ, ಆಯುರ್ವೇದ, ಪ್ರಾಕೃತಿಕ ಹಾಗೂ ನಾಟಿ ವೈದ್ಯದ ವಿಧಾನಗಳನ್ನು ವಿವರಿಸುವ ನೂರಾರು ವಿಡಿಯೋಗಳಿವೆ. ಜೊತೆಗೆ ಈ ಚಾನೆಲ್‌ಗಳ ವೀಕ್ಷಕರು ತಮ್ಮ ಪ್ರಶ್ನೆಗಳನ್ನು ಕಳುಹಿಸಿ ಉತ್ತರ ಪಡೆಯಲಿಕ್ಕೂ ಅವಕಾಶವಿದೆ.

ಡಾ. ವಿನಾಯಕ ಹೆಬ್ಬಾರ್ ತಮ್ಮ ಒಂದು ವಿಡಿಯೋದ ಕೊನೆಯಲ್ಲಿ ತಮ್ಮದೇ ಜೀವನದ ಘಟನೆಯೊಂದನ್ನು ವಿವರಿಸುತ್ತಾ ನೀಡುವ ಮಾಹಿತಿ ಬಹಳ ಕುತೂಹಲಕಾರಿಯಾಗಿದೆ. ಒಂದು ದಿನ ಇವರು ಕ್ಲಿನಿಕ್‌ನಲ್ಲಿದ್ದಾಗ, ಅವರ ಎರಡು ವರುಷ ವಯಸ್ಸಿನ ಮಗಳಿಗೆ ಜ್ವರ ಏರುತ್ತಿದೆಯೆಂದು ಇವರ ಪತ್ನಿ ತಿಳಿಸುತ್ತಾರೆ. ಇವರು ತಕ್ಷಣವೇ ಮನೆಗೆ ಹೋಗಿ ಔಷಧಿ ನೀಡಲು ಸಾಧ್ಯವಿರಲಿಲ್ಲ. ಆದ್ದರಿಂದ ಕೈಬೆರಳುಗಳಿಂದ "ಮುಕುಲ ಮುದ್ರೆ”ಯನ್ನು ಮಾಡಿ, ಮಗಳ ಪಕ್ಕದಲ್ಲಿ ಕುಳಿತುಕೊಳ್ಳಬೇಕೆಂದು ಪತ್ನಿಗೆ ಸಲಹೆ ನೀಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಮಗಳ ಜ್ವರ ಕಡಿಮೆಯಾಯಿತು. (ಮುಕುಲ ಎಂದರೆ ಕಮಲದ ಮೊಗ್ಗು. ಹೆಬ್ಬೆರಳಿನ ತುದಿಯ ಸುತ್ತಲೂ ಉಳಿದ ನಾಲ್ಕು ಬೆರಳುಗಳ ತುದಿಗಳು ಇರುವಂತೆ ಜೋಡಿಸಿಕೊಂಡರೆ ಅದುವೇ ಮುಕುಲ ಮುದ್ರೆ.)

ಮಧ್ಯಾಹ್ನದ ಹೊತ್ತಿಗೆ ಔಷಧಿ ತಗೊಂಡು ಡಾ. ವಿನಾಯಕ ಹೆಬ್ಬಾರ್ ತಮ್ಮ ಮನೆಗೆ ಬರುತ್ತಾರೆ. ಆಗ ಪುನಃ ಮಗಳಿಗೆ ಜ್ವರ ಏರಿತ್ತು. ಪುಟ್ಟ ಮಗಳಿಗೆ ಔಷಧಿ ಕೊಡುವ ಮುನ್ನ “ಇನ್ನೊಮ್ಮೆ ಮುಕುಲ ಮುದ್ರೆ ಮಾಡಿ ಯಾಕೆ ಪರೀಕ್ಷಿಸಬಾರದು” ಎಂದು ಅವರಿಗೆ ಅನಿಸಿತು. ಹಾಗೆಯೇ ಮಾಡಿದರು. 2 - 3 ನಿಮಿಷಗಳಲ್ಲಿ ಪುನಃ ಜ್ವರ ಇಳಿಯಿತು. ಅನಂತರ ಮಗಳಿಗೆ ಜ್ವರ ಏರಿದಾಗೆಲ್ಲ ಮುಕುಲ ಮುದ್ರೆ ಮಾಡಿ, ಜ್ವರ ಇಳಿಸಿದರು. ಯಾವುದೇ ಔಷಧಿ ಕೊಡದೆ ಅವಳ ಜ್ವರ ಗುಣ ಪಡಿಸಲು ಸಾಧ್ಯವಾಯಿತು ಎಂದವರು ತಿಳಿಸುತ್ತಾರೆ. ಆದರೆ, ಎಲ್ಲರೂ ಈ ವಿಧಾನ ಅನುಸರಿಸಬೇಕೆಂಬುದು ತನ್ನ ಶಿಫಾರಸ್ ಅಲ್ಲ; ಯಾಕೆಂದರೆ, ಮಕ್ಕಳಿಗೆ ಜ್ವರ ನೆತ್ತಿಗೇರಿದರೆ ಅನಾಹುತ ಆದೀತೆಂದು ಎಚ್ಚರಿಸುತ್ತಾರೆ.

ಅದೇನಿದ್ದರೂ, ಈ ಘಟನೆಯಿಂದ ನಾವು ಈ ಕೆಳಗಿನ ವಿಷಯಗಳನ್ನು ತಿಳಿಯಬಹುದೆಂದು ಡಾ. ವಿನಾಯಕ ಹೆಬ್ಬಾರ್ ಹೇಳುತ್ತಾರೆ. (1)ಈ ಜಗತ್ತಿನಲ್ಲಿ ನಮಗೆ ಅರ್ಥವಾಗದ ಮತ್ತು ಆಧುನಿಕ ವಿಜ್ನಾನ ವಿವರಿಸಲಾಗದ ಹಲವಾರು ಸಂಗತಿಗಳಿವೆ.
(2)ನಮ್ಮ ಮನಸ್ಸಿಗೆ ಅಗಾಧವಾದ ಶಕ್ತಿಯಿದೆ; ಅದನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಬೇಕು.
(3)ಈ ಜಗತ್ತಿನಲ್ಲಿ ಎಲ್ಲರೂ “ಇಂಟರ್ ಕನೆಕ್ಟೆಡ್”. ಈ ಪರಸ್ಪರ ಸಂಬಂಧ ಬಳಸಿ, ನಾವು ಇನ್ನೊಬ್ಬರಿಗೆ ಸಹಾಯ ಮಾಡಲು ಸಾಧ್ಯ. (ಅವರು ತಮ್ಮ ಪುಟ್ಟ ಮಗಳ ಜ್ವರ ಇಳಿಯಲು ಮುಕುಲ ಮುದ್ರೆಯ ಮೂಲಕ ಸಹಾಯ ಮಾಡಿದಂತೆ.)
(4)ನಮ್ಮಲ್ಲಿ ಎಲ್ಲರಲ್ಲಿಯೂ ವೈಬ್ರೇಷನ್ಸ್ ಇವೆ. ಆದರೆ ನಾವು (ನಮ್ಮ ಪೂರ್ವಜರಂತೆ) ಪ್ರಾಕೃತಿಕವಾಗಿ ಬದುಕುವುದನ್ನು ತೊರೆದು, (ಕೃತಕ ಜೀವನ ವಿಧಾನಗಳನ್ನು ಅನುಸರಿಸುತ್ತಿರುವ ಕಾರಣ) ನಮಗೆ ಆ ವೈಬ್ರೇಷನ್‌ಗಳು ಗೊತ್ತಾಗುತ್ತಿಲ್ಲ.

ಆರೋಗ್ಯಪೂರ್ಣ ಜೀವನಕ್ಕೆ ಅತ್ಯವಶ್ಯವಾದ ಸಂಗತಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು, ಅದರ ಭಾಗವಾದ ನಮ್ಮ ಪ್ರಾಚೀನ ಆಯುರ್ವೇದ ಶಾಸ್ತ್ರದ ಬಗ್ಗೆ ತಿಳಿದುಕೊಂಡು ಸೂಕ್ತವಾದದ್ದನ್ನು ಅಳವಡಿಸಿಕೊಳ್ಳಲು ನಮಗೆ ಈ ಘಟನೆ ಪ್ರೇರಣೆಯಾಗಲಿ.
(ಜುಲಾಯಿ 2023)
 

ಮಂಗಳೂರಿನ ಜನರಿಗೆ ಮೇ 2023ರಿಂದ ನೀರಿನ ರೇಷನಿಂಗ್ ಶುರುವಾಗಿತ್ತು. ಅಂದರೆ, ಎರಡು ದಿನಕ್ಕೊಮ್ಮೆ ಕುಡಿನೀರು ಸರಬರಾಜು. ಎತ್ತರದ ಪ್ರದೇಶಗಳಿಗೆ ನೀರು ಹತ್ತದಿರುವ ಕಾರಣ, ಅಲ್ಲಿಗೆ ಟ್ಯಾಂಕರುಗಳಲ್ಲಿ ನೀರು ಒದಗಣೆ. ಮುಂಗಾರು ಮಳೆ ಬರುವ ತನಕ ಪರಿಸ್ಥಿತಿ ಹೀಗೆಯೇ ಮುಂದುವರಿಯಿತು. ಹಿಂದಿನ ಕೆಲವು ವರುಷಗಳಲ್ಲಿಯೂ ನೀರಿನ ಕೊರತೆ ತೀವ್ರವಾಗಿ, ನೀರಿನ ರೇಷನಿಂಗ್ ಜ್ಯಾರಿಯಾಗಿತ್ತು. ಆ ವರುಷ ಅರುವತ್ತು ಕಿಮೀ ದೂರದ ಉಡುಪಿಯ ನೀರಿನ ಮೂಲವಾದ ಜಲಾಶಯದಲ್ಲಿಯೂ ಕೆಲವೇ ದಿನಗಳಿಗಾಗುವಷ್ಟೇ ನೀರುಳಿದಿತ್ತು.

2024ರ ಬೇಸಗೆಯಲ್ಲಿಯೂ ಮಂಗಳೂರು ಮತ್ತು ಉಡುಪಿಯಲ್ಲಿ ನಾಗರಿಕರಿಗೆ ನೀರಿನ ಲಭ್ಯತೆ ಆತಂಕಕಾರಿಯಾಗಿಯೇ ಮುಂದುವರಿಯಿತು. ಮೇ 2024ರ ಆರಂಭದಿಂದ ಮಂಗಳೂರಿನಲ್ಲಿ ನೀರಿನ ರೇಷನಿಂಗ್ ಶುರುವಾಯಿತು. ಉಡುಪಿಯಲ್ಲಿಯೂ ಅದೇ ಅವಸ್ಥೆ. ಭಾರತದಲ್ಲಿ ಅತ್ಯಧಿಕ ಮಳೆ ಸುರಿಯುವ ಪ್ರದೇಶಗಳಲ್ಲೊಂದಾದ ಪಶ್ಚಿಮ ಕರಾವಳಿಯ ನಗರಗಳಲ್ಲಿ ಈ ಪರಿಸ್ಥಿತಿ! (ಮಂಗಳೂರಿನ ವಾರ್ಷಿಕ ಸರಾಸರಿ ಮಳೆ 3,480 ಮಿ.ಮೀ.)  

ಜಗತ್ತಿನ ಹಲವು ನಗರಗಳಲ್ಲಿ ಇದೇ ಪರಿಸ್ಥಿತಿ. ಉದಾಹರಣೆಗೆ ದಕ್ಷಿಣ ಆಫ್ರಿಕಾದ ದಕ್ಷಿಣದ ಮಹಾನಗರ ಕೇಪ್-ಟೌನ್. ಅಲ್ಲಿ 2015ರಿಂದ 2017 ಅವಧಿಯಲ್ಲಿ ಮೂರು ವರುಷಗಳ ಸತತ ಬರಗಾಲದಿಂದಾಗಿ ನಗರಕ್ಕೆ ನೀರು ಪೂರೈಸುವ ಜಲಾಶಯಗಳು ಬತ್ತಿ ಹೋದವು. ಅಲ್ಲಿನ ಆಡಳಿತ ನೀರಿನ ಕಠಿಣ ರೇಷನಿಂಗ್ ಜ್ಯಾರಿಗೆ ತಂದಿತು; ಅಂದರೆ ಒಬ್ಬ ವ್ಯಕ್ತಿಗೆ ದಿನಕ್ಕೆ ಕೇವಲ 50 ಲೀಟರ್ ನೀರು ಲಭ್ಯ. (ಒಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 120 ಲೀಟರ್ ನೀರು ಅಗತ್ಯ.) ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ, ಅಲ್ಲಿನ ಆಡಳಿತ ನಗರದಲ್ಲಿ “ಡೇ ಜೀರೋ” (ಅಂದರೆ ಶೂನ್ಯಜಲ ದಿನ) ಘೋಷಿಸುವ ದಾರುಣ ಸಮಯ ಹತ್ತಿರವಾಯಿತು. ಅನಂತರ, ಬಿರುಸಿನ ಪ್ರಚಾರ ಕಾರ್ಯಕ್ರಮಗಳಿಂದ ನಾಗರಿಕರಲ್ಲಿ ಜಲಜಾಗೃತಿ ಮೂಡಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಯಿತು.

ಇಂತಹ ಭೀಕರ ಜಲಕ್ಷಾಮದಿಂದ ಜನರು ಪಾಠ ಕಲಿತರೇ? “ಇಲ್ಲ" ಎನ್ನುತ್ತದೆ “ನೇಚರ್ ಸಸ್ಟೇನಬಿಲಿಟಿ" ಎಂಬ ಜರ್ನಲಿನಲ್ಲಿ 10 ಎಪ್ರಿಲ್ 2023ರಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿ. ಅದರ ಅನುಸಾರ, ಆ ನಗರದಲ್ಲಿ ಈಜುಗೊಳಗಳು ಮತ್ತು ಹುಲ್ಲುಗಾವಲುಗಳಿಗಾಗಿ ಹಾಗೂ ಕಾರುಗಳನ್ನು ತೊಳೆಯಲಿಕ್ಕಾಗಿ ಮಾಡಿದ ನೀರಿನ ದುಂದು ವೆಚ್ಚ ಅಲ್ಲಿನ ಜಲಸಂಕಟಕ್ಕೆ ಮುಖ್ಯ ಕಾರಣ.

ನಮ್ಮ ದೇಶದಲ್ಲಿಯೂ ಇದೇ ಪರಿಸ್ಥಿತಿ. ನಗರಗಳಲ್ಲಿ ಹೆಚ್ಚೆಚ್ಚು ಈಜುಗೊಳಗಳು ಮತ್ತು ಹುಲ್ಲುಗಾವಲುಗಳ ನಿರ್ಮಾಣ. ಮನೆಯಂಗಳವನ್ನು ಹಾಗೂ ಕಾರುಗಳನ್ನು ಫಳಫಳ ಹೊಳೆಯುವಂತೆ ನೀರಿನಿಂದ ತೊಳೆಯುವ ಅಭ್ಯಾಸ. ಇವೆಲ್ಲದಕ್ಕೆ ನೀರು ಎಲ್ಲಿಂದ ಬರುತ್ತದೆ? ಎಂಬ ಯೋಚನೆ ಯಾರಿಗೂ ಇದ್ದಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೊಂದು ಸಮಸ್ಯೆ. ಆಯಾ ಪ್ರದೇಶದಲ್ಲಿ ಬೀಳುವ ಮಳೆಗೆ ಸೂಕ್ತವಾದ ಬೆಳೆ ಬೆಳೆಯುವ ಪರಿಪಾಠ ಬದಲಾಗಿದೆ. ಹೆಚ್ಚಿನ ಲಾಭಕ್ಕಾಗಿ ರೊಕ್ಕದ ಬೆಳೆಗಳನ್ನು ಬೆಳೆಯುವ ಪರಿಪಾಠ ಹಬ್ಬುತ್ತಿದೆ. ಅವಕ್ಕೆ ನೀರಿಗಾಗಿ ಬೋರ್-ವೆಲ್‌ಗಳನ್ನು ಕೊರೆಸುವ ಚಾಳಿ ಇಸವಿ 2000ದಿಂದೀಚೆಗೆ ಬಲವಾಗಿದೆ. ಇದರಿಂದಾಗಿ, ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಅಂತರ್ಜಲವನ್ನು ಮೇಲೆತ್ತುವ ದೇಶ ನಮ್ಮದಾಗಿದೆ. ಕೋಲಾರ ಜಿಲ್ಲೆಯಲ್ಲಿ 1,500 ಅಡಿ ಆಳಕ್ಕೆ ಭೂಮಿಯನ್ನು ಕೊರೆದರೂ ನೀರು ಸಿಗದ ಪರಿಸ್ಥಿತಿ! ಅಂತರ್ಜಲ ಎಂಬುದು ಮುಂದಿನ ತಲೆಮಾರುಗಳಿಗಾಗಿ ಪ್ರಕೃತಿ ಜೋಪಾನವಾಗಿಟ್ಟ ನೀರು ಎಂಬ ವಿವೇಕವೇ ಇಲ್ಲವಾಗಿದೆ.

ಹೀಗಿರುವಾಗ, “ನೀರೆಂಬುದು ಜೀವಜಲ” ಎಂಬ ಪ್ರಾಥಮಿಕ ಪಾಠದಿಂದ ಜಲಜಾಗೃತಿ ಶುರು ಮಾಡಬೇಕಾಗಿದೆ. ನಮ್ಮ ನೆಲದಲ್ಲಿ ಬೀಳುವ ಬಹುಪಾಲು ಮಳೆನೀರಿನ ಕೊಯ್ಲು ಮಾಡಲು ಹೆಚ್ಚೆಚ್ಚು ಜನರು ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಒಂದೊಂದು ಲೋಟ ನೀರನ್ನೂ ಅಪವ್ಯಯ ಮಾಡದೆ ಬಳಸಲು ಕಲಿಯಬೇಕಾಗಿದೆ. ನೀರಿನ ದುರುಪಯೋಗ ಮತ್ತು ದುಂದುವೆಚ್ಚವನ್ನು ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳಿಂದ ಪ್ರತಿಬಂಧಿಸಬೇಕಾಗಿದೆ. ಬೋರ್-ವೆಲ್ ಕೊರೆದು ಅಂತರ್ಜಲವೆಂಬ ನಿಧಿಗೆ ಕನ್ನ ಹಾಕುವುದನ್ನು ನಿಷೇಧಿಸಲೇ ಬೇಕಾಗಿದೆ. ಇಲ್ಲವಾದರೆ, ನಮ್ಮ ಮುಂದಿನ ತಲೆಮಾರಿನವರು ಅವರಿಗೆ "ನೀರಿಲ್ಲದಂತೆ" ಮಾಡಿದ ನಮ್ಮ ತಲೆಮಾರಿನವರಿಗೆ ಶಾಪ ಹಾಕುವ ದಿನ ಬಂದೇ ಬರುತ್ತದೆ, ಅಲ್ಲವೇ?

ಹಾಗಾಗಬಾರದು ಎಂದಾದರೆ, ಒಂದೊಂದು ತೊಟ್ಟು ನೀರನ್ನೂ ಎಚ್ಚರದಿಂದ ಬಳಸೋಣ. ಹಾಗೆ ಬಳಸುವ ಕಲೆಯನ್ನು ಮಕ್ಕಳಿಗೂ ಕಲಿಸೋಣ. ಇದಕ್ಕೊಂದು ಸುಲಭದ ದಾರಿ: ನೀರನ್ನು “ದೇವರ ತೀರ್ಥ”ದಂತೆ ಬಳಸುವುದು. ದೇವರ ತೀರ್ಥ ಪವಿತ್ರ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ತೀರ್ಥವನ್ನು ಯಾರೂ ಹಾಳು ಮಾಡುವುದಿಲ್ಲ. ಭಕ್ತಿಯಿಂದ ತೀರ್ಥ ಕುಡಿದು, ತಲೆಗೂ ಪ್ರೋಕ್ಷಿಸಿಕೊಳ್ಳುತ್ತಾರೆ.

ನಿಜ ಹೇಳಬೇಕೆಂದರೆ, ಪ್ರತಿಯೊಂದು ತೊಟ್ಟು ನೀರೂ ದೇವರ ತೀರ್ಥವೇ ಆಗಿದೆ. ಈ ಎಚ್ಚರ ನಮ್ಮಲ್ಲಿ ಮೂಡಿದರೆ, ನೀರಿನ ದುರುಪಯೋಗ ಮತ್ತು ದುಂದುವೆಚ್ಚ ನಿಲ್ಲಬಹುದು, ಅಲ್ಲವೇ?
(ಜೂನ್ 2023)

ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ ಉಳಿಯುವಂತೆ ರೂಪಿಸಿದ್ದಾರೆ. ಮಂತ್ರಪಠಣವು ಭೂತಗನ್ನಡಿಯಂತೆ ಕೆಲಸ ಮಾಡುತ್ತದೆ. ಅಂದರೆ, ವಿಶ್ವಚೇತನವನ್ನು ಕೇಂದ್ರೀಕರಿಸಿ, ಸಾಧಕನ ಒಳಗಿಳಿಸಿ, ಸಾಧಕನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.

ಗಮನಿಸಿ: ಪ್ರತಿಯೊಂದು ಮಂತ್ರವನ್ನು ಕಳೆದ ಸಾವಿರಾರು ವರುಷಗಳಲ್ಲಿ ಲಕ್ಷಗಟ್ಟಲೆ ಸಾಧಕರು ಕೋಟಿಗಟ್ಟಲೆ ಸಲ ಪಠಣ ಮಾಡಿದ್ದಾರೆ. ಇದರಿಂದಾಗಿ ಮಂತ್ರಗಳಲ್ಲಿ ಅಪಾರ ಶಕ್ತಿ ಸಂಚಯವಾಗಿದೆ.

ಇಂತಹ ಯಾವುದೇ ಮಂತ್ರವನ್ನು ಸಾಧಕನು ಪಠಿಸುತ್ತಾ ಸಾಗಿದಂತೆ, ಒಂದು ಹಂತದಲ್ಲಿ ಆ ಮಂತ್ರವು ಸ್ವಯಂ-ಶಕ್ತಿಕೇಂದ್ರವಾಗಿ ಕೆಲಸ ಮಾಡಲು ಶುರು ಮಾಡುತ್ತದೆ (ತಾನೇ ತಾನಾಗಿ ಪರಿಭ್ರಮಿಸುತ್ತಾ ಉಜ್ವಲವಾಗಿ ಉರಿಯುತ್ತಾ ಎಲ್ಲ ಗ್ರಹಗಳನ್ನು ನಿಯಂತ್ರಿಸುವ ಸೂರ್ಯನಂತೆ.) ಇದಕ್ಕೆ ಕಾರಣ ಮಂತ್ರದ ಮೂಲಸತ್ವ ಅಥವಾ "ಬೀಜ". ಆ ಹಂತದಲ್ಲಿ ಮಂತ್ರವು ಆರಾಧಿಸುವ ದೇವರು ಮತ್ತು ಸಾಧಕನ ನಡುವೆ ಒಂದು ಸಂಪರ್ಕಸೇತು ನಿರ್ಮಾಣವಾಗುತ್ತದೆ. ಆಗ, ಮಂತ್ರದ ಪುರುಷ ಶಕ್ತಿ ಮತ್ತು ದೇವಿಶಕ್ತಿ ಮಂತ್ರದ ಅವ್ಯಕ್ತಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಆ ಕ್ಷಣದಲ್ಲಿ ಸಾಧಕನಲ್ಲಿ ಅತ್ಯುನ್ನತ ಮಟ್ಟದ ಅಧ್ಯಾತ್ಮಿಕ ಜಾಗೃತಿಯಾಗುತ್ತದೆ; ಸಾಧಕನಿಗೆ ದೈವಸಾಕ್ಷಾತ್ಕಾರವಾಗುತ್ತದೆ ಹಾಗೂ ಮಂತ್ರದ ಗುರಿ ಸಾಧಿಸಲ್ಪಡುತ್ತದೆ. ಇದುವೇ "ಯೋಗ".

ಮನುಷ್ಯರ ಮೇಲೆ ಭಾವನೆಗಳ ಪ್ರಭಾವ ಅಪಾರ. ಅನಿಯಂತ್ರಿತ ಭಾವನೆಗಳಿಂದಾಗಿ ಮಾನವ ಜನಾಂಗಕ್ಕೆ ಹಾನಿ ಮಾಡಿದ ಹಲವರ ಬಗ್ಗೆ ನಾವು ತಿಳಿದಿದ್ದೇವೆ. ಚರಿತ್ರೆಯಲ್ಲಿ ಅಂತಹ ನೂರಾರು ಪ್ರಕರಣಗಳಿವೆ.

ಈ ಹಿನ್ನೆಲೆಯಲ್ಲಿ ನಾವು ಮಂತ್ರಗಳ ಮಹತ್ವ ತಿಳಿಯಬೇಕಾಗಿದೆ. ಒಬ್ಬ ವ್ಯಕ್ತಿಯು ದಿನದಿನವೂ ಒಂದು ಮಂತ್ರವನ್ನು ಪಠಣ ಮಾಡುತ್ತಿದ್ದರೆ ಅದು ಆ ವ್ಯಕ್ತಿಯನ್ನು ಶುದ್ಧೀಕರಿಸುತ್ತದೆ. ಆ ವ್ಯಕ್ತಿಯಲ್ಲಿ ತುಂಬಿರುವ ಆಸೆ, ಮೋಹ, ಸ್ವಾರ್ಥ, ಕೋಪ, ದ್ವೇಷ, ಕಾಮ ಇತ್ಯಾದಿ ಭಾವನೆಗಳನ್ನು ದೂರ ಮಾಡಿ, ಆ ವ್ಯಕ್ತಿಯ ಚಿಂತನೆಗಳನ್ನು ಪರಮಾತ್ಮನೆಡೆಗೆ ತಿರುಗಿಸುತ್ತದೆ. ಅಂತಿಮವಾಗಿ, ಆ ವ್ಯಕ್ತಿಗೆ ದೇವರ ಸಾಕ್ಷಾತ್ಕಾರವಾಗುತ್ತದೆ. ಇದುವೇ ಮಂತ್ರಪಠಣದಿಂದಾಗುವ ಮಹಾ ಪ್ರಯೋಜನ.

ಮಂತ್ರದ ಅರ್ಥವನ್ನು ತಿಳಿದು, ಅದನ್ನು ಪಠಿಸುವಾಗ ಅದರ ಅರ್ಥವನ್ನು ಧ್ಯಾನಿಸುವುದು ಬಹಳ ಪರಿಣಾಮಕಾರಿ ವಿಧಾನ. ಇದರಿಂದ ಬೇಗನೇ ದೈವಸಾಕ್ಷಾತ್ಕಾರವಾಗಲು ಸಹಾಯ.

ಭಕ್ತಿ, ಶ್ರದ್ಧೆ, ನಂಬಿಕೆ ಇಂತಹ ಭಾವನೆಗಳು ಮಂತ್ರಪಠಣದಿಂದ ಶುದ್ಧವಾದಾಗ ಅವು ದೈವಸಾಕ್ಷಾತ್ಕಾರದ ಸಾಧನವಾಗುತ್ತವೆ. ನಿಮ್ಮ ನಕಾರಾತ್ಮಕ ಭಾವನೆಗಳು ಸಕಾರಾತ್ಮಕವಾಗಿ ಬದಲಾಗಿ, ಪ್ರೀತಿ ಮತ್ತು ಆನಂದದ ವ್ಯಾಖ್ಯಾನ ಹೊಸದಾಗುತ್ತದೆ. ಹಿಂದಿನ ಚಿಂತನಾಕ್ರಮ ಪರಿವರ್ತನೆಯಾಗಿ, ನಿಮ್ಮ ಅಹಂ ಸಾಧನೆಯ ಪಥಕ್ಕೆ ಅಡ್ಡಿಯಾಗುತ್ತಿರುವುದು ಅರಿವಾಗುತ್ತದೆ. ಅದನ್ನು ನಿವಾರಿಸಿಕೊಂಡಂತೆ ವಿನಯ ತುಂಬಿದ ಸಮತೋಲನದ ಮನಸ್ಸು ಉನ್ನತ ಜಾಗೃತಾವಸ್ಥೆಗೆ ದಾರಿ ತೋರುತ್ತದೆ.

ಕ್ರಮೇಣ ನಿಮ್ಮ ಚಿಂತೆ, ಕೋಪ, ಭಯ ಅಥವಾ ಏಕಾಂಗಿತನ ದೂರವಾಗಿ ಆತ್ಮಸಾಕ್ಷಾತ್ಕಾರಕ್ಕೆ ದಾರಿ ಕಾಣಿಸುತ್ತದೆ. ಅಂತಹ ಕ್ಷಣಗಳಲ್ಲಿ, ಪ್ರಾಮಾಣಿಕ ಪ್ರಾರ್ಥನೆಯ ಮೂಲಕ ದೇವರಿಗೆ ಶರಣಾಗಿ, ಮಂತ್ರಪಠಣವನ್ನು ಮುಂದುವರಿಸಬೇಕು. ಮನಸ್ಸಿನ ಹಿನ್ನೆಲೆಯಲ್ಲಿ ಮಂತ್ರಪಠಣ ಮಾಡುತ್ತಿದ್ದರೆ, ನೀವು ಮಾಡುವ ಪ್ರತಿಯೊಂದು ಕೆಲಸವೂ ಸುಲಭ ಹಾಗೂ ಆನಂದದಾಯಕವಾಗುತ್ತದೆ. ಅಂತಿಮವಾಗಿ, ನಿಮ್ಮೊಳಗೆ ಒಂದು ಚೈತನ್ಯ ಪ್ರವಹಿಸುತ್ತಿರುವುದು ನಿಮ್ಮ ಅರಿವಿಗೆ ಬರುತ್ತದೆ.

ಮಂತ್ರಪಠಣ ಮಾಡುವಾಗ, ಒಂದೇ ರೀತಿಯಲ್ಲಿ ಪಠಣ ಮಾಡುವ ಬದಲಾಗಿ ವಿಭಿನ್ನ ರೀತಿಗಳಲ್ಲಿ ಪಠಿಸುವುದು ಒಳ್ಳೆಯದು: ಉದಾಹರಣೆಗೆ, ಸ್ವಲ್ಪ ಸಮಯ ವೇಗವಾಗಿ, ಇನ್ನು ಸ್ವಲ್ಪ ಸಮಯ ನಿಧಾನವಾಗಿ ಪಠಿಸುವುದು; ಗಟ್ಟಿಯಾಗಿ ಮತ್ತು ಮೆಲುದನಿಯಲ್ಲಿ ಪಠಿಸುವುದು.

ಮಂತ್ರಪಠಣವು ವಿಶ್ವಚೇತನದಿಂದ ಚೇತನವನ್ನು ನಿಮ್ಮೊಳಗೆ ಸೆಳೆಯುವ ಮತ್ತು ನಿಮ್ಮೊಳಗನ್ನು ಜಾಗೃತಗೊಳಿಸುವ ಕಾರಣ ನಿಮ್ಮಲ್ಲಿ ಬದಲಾವಣೆಗಳು ಕಾಣಿಸುತ್ತವೆ. ನಿದರ್ಶನಕ್ಕಾಗಿ, ನಿಮಗೆ ಇನ್ನಷ್ಟು ಚೆನ್ನಾಗಿ ಕಾಣಲು ಮತ್ತು ಕೇಳಲು ಸಾಧ್ಯವಾಗುತ್ತದೆ ಹಾಗೂ ನಿಮ್ಮ ಧ್ವನಿ ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ಸುಧಾರಣೆಗಳನ್ನು ಆನಂದಿಸುತ್ತಾ, ಭಗವಂತನಿಗೆ ಶರಣಾಗಿ.

ಮಂತ್ರಿಪಠಣದಿಂದ ನಿಮ್ಮಲ್ಲಾಗುವ ಅಧ್ಯಾತ್ಮಿಕ ಬದಲಾವಣೆಗಳನ್ನು ದಿನಚರಿಯಲ್ಲಿ ಬರೆದಿಡುವುದು ಒಳ್ಳೆಯ ಅಭ್ಯಾಸ. ಅದರಲ್ಲಿ ನಿಮ್ಮ ಕನಸುಗಳನ್ನೂ ದಾಖಲಿಸಿ. ಯಾಕೆಂದರೆ, ಕನಸುಗಳಲ್ಲಿ ಕಾಣಿಸುವ ಇಮೇಜುಗಳು ನಿಮ್ಮ ಅಧ್ಯಾತ್ಮಿಕ ಬದಲಾವಣೆಗಳ ಸೂಚಕ.

ಒಂದು ಮಂತ್ರದ ಪಠಣದಿಂದ ಫಲ ಸಿಗಬೇಕಾದರೆ ಅದರ ಕೆಲವು ಲಕ್ಷ ಪಠಣ ಅಗತ್ಯ. ಉದಾಹರಣೆಗೆ 12 ಲಕ್ಷ ಸಲ. ಜಪಮಾಲೆಯ 108 ಮಣಿಗಳ ಸಹಾಯದಿಂದ, 2ರಿಂದ 3 ಗಂಟೆ ಅವಧಿಯಲ್ಲಿ ನೀವು ಎಷ್ಟು ಸಲ ಆ ಮಂತ್ರ ಪಠಿಸುತ್ತೀರಿ ಎಂದು ಲೆಕ್ಕ ಮಾಡಿ. ಹಾಗಾದರೆ, ದಿನಕ್ಕೆ ಎರಡು ಸಾವಿರ ಸಲ ಪಠಿಸಿದರೆ, ಆ ಮಂತ್ರವನ್ನು 12 ಲಕ್ಷ ಸಲ ಪಠಣ ಮಾಡಲು ಎಷ್ಟು ತಿಂಗಳು ಅಥವಾ ವರುಷ ಬೇಕಾಗುತ್ತದೆಂದು ಅಂದಾಜಿಸಿ. ಆ ಗುರಿಯತ್ತ ಸಾಗಿದಂತೆ ನಿಮ್ಮ ಮಂತ್ರಪಠಣದ ಫಲ ನಿಮ್ಮ ಅನುಭವಕ್ಕೆ ಬಂದೇ ಬರುತ್ತದೆ. (ಬರಲಿಲ್ಲ ಎಂದಾದರೆ, ನೀವು ಪುನರಾವರ್ತನೆ ಮಾಡಬೇಕು.)

ಪ್ರತಿ ದಿನ ನಿರ್ದಿಷ್ಟ ಸಮಯದಲ್ಲಿ ಮಂತ್ರಪಠಣ ಮಾಡುವುದು ಸೂಕ್ತ. ಉದಾ: ಮುಂಜಾನೆ 4ರಿಂದ 6 ಗಂಟೆ ಅವಧಿಯಲ್ಲಿ. ಇಂತಹ ಮಂತ್ರಪಠಣದ ಫಲ ಹೇಗಿರುತ್ತದೆ? ವಿವಿಧ ವಿಷಯಗಳಲ್ಲಿ ನಿಮ್ಮ ಮೋಹ ಕಳಚಿ, ನಿರ್ಮೋಹ ಬೆಳೆಯುತ್ತದೆ. ನಿಮಗೆ ಭವಿಷ್ಯದ ಅಥವಾ ಭೂತಕಾಲದ ಘಟನೆಗಳು ಕಾಣಿಸಬಹುದು. ನಿಮ್ಮ ದೇವರ ರೂಪ ನಿಮಗೆ ಆಗಾಗ ಕಾಣಿಸಬಹುದು. ನಿಮ್ಮ ಅಂತರಾತ್ಮ ನಿಮಗೆ ಕೆಲವು ಸೂಚನೆಗಳನ್ನು ನೀಡಬಹುದು. ಆನಂದ, ಸಾವಿನ ಭಯದಿಂದ ಬಿಡುಗಡೆ, ವಿಶ್ವಚೇತನದ ಜೊತೆ ಸಂಪರ್ಕ - ಇವೆಲ್ಲ ನಿಮ್ಮ ಅನುಭವಕ್ಕೆ ಬರಬಹುದು. ನಿಮ್ಮ ಅಹಂ ಮಾಯವಾಗಿ ನಿಮ್ಮಲ್ಲಿ ಶರಣಾಗತಿಯ ಭಾವ ತುಂಬಿಕೊಳ್ಳಬಹುದು. ನಿಮ್ಮ “ಚಕ್ರಗಳು" ತೆರೆದುಕೊಂಡಂತೆ, ನಿಮ್ಮ ಅನುಭವಗಳು ಬದಲಾಗುತ್ತವೆ.

ಅಂತಿಮವಾಗಿ, ಲೇಖನದ ಆರಂಭದಲ್ಲಿ ತಿಳಿಸಿದ ಸಿದ್ಧಿ ಸಾಧಕನಿಗೆ ಮಂತ್ರಪಠಣದಿಂದ ಲಭಿಸುತ್ತದೆ. ಅದುವೇ ಮುಂದಿನ ಹಂತದ ಸಾಧನೆಗೆ ಸಿದ್ಧನಾಗಬೇಕಾದ ಕಾಲ.
(ಮೇ 2023)

Pages