Agriculture and Rural Development

ಅಂತರಗಂಗೆ ಜಲಕಳೆಯ ವಿರುದ್ಧ ದೇಶದಲ್ಲೆಡೆ ನಡೆಯುತ್ತಿದೆ ಯುದ್ಧ. ಯಾಕೆಂದರೆ, ಬಿಳಿ ಹಾಗೂ ಕೆನ್ನೀಲಿ ಬಣ್ಣದ ಆಕರ್ಷಕ ಹೂಗಳಿಂದ ಯಾರನ್ನೂ ಮರುಳು ಮಾಡಬಲ್ಲ ಈ ಜಲಕಳೆ ಕೆರೆಗಳನ್ನೇ ಕೊಲ್ಲುತ್ತದೆ!

೧೮ನೇ ಶತಮಾನದ ಕೊನೆಯಲ್ಲಿ ಅಂತರಗಂಗೆಯನ್ನು ಬ್ರಿಟಿಷರು ಭಾರತಕ್ಕೆ ತಂದರು ಎನ್ನಲಾಗಿದೆ. ಆಗಿನಿಂದಲೇ ನೀರಿನಾಶ್ರಯಗಳನ್ನು ಆಕ್ರಮಿಸಿದ ಈ ಜಲಕಳೆ ಈಗ ದೇಶದಲ್ಲೆಡೆ ವ್ಯಾಪಿಸಿದೆ. ಉತ್ತರ ಭಾರತದ ಅತಿ ದೊಡ್ಡ ಹರಿಕೆ ಸರೋವರದಲ್ಲಿ ಇದರ ಹರಡುವಿಕೆಯನ್ನು ತಡೆಯಲಿಕ್ಕಾಗಿ, ೧೯೯೯ರಲ್ಲಿ ಪಂಜಾಬ್ ಸರಕಾರ ಸೈನ್ಯದ ನೆರವು ಪಡೆಯಬೇಕಾಯಿತು. ಹೈದರಾಬಾದ್ ವ್ಯಾಪ್ತಿಯ ೫೩ ಸರೋವರಗಳಿಂದ ಅಂತರಗಂಗೆಯನ್ನು ಕಿತ್ತೊರೆಯಲಿಕ್ಕಾಗಿ, ಅಲ್ಲಿನ ಆಡಳಿತವು ೨೦೧೭ರಲ್ಲಿ ರೂ.೧೭ ಕೋಟಿ ವೆಚ್ಚದಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿತು. ಆದರೆ, ಈ ಸಸ್ಯ ಇವಕ್ಕೆಲ್ಲ ಕ್ಯಾರೇ ಅನ್ನೋದಿಲ್ಲ. ಯಾಕೆಂದರೆ ಮಣ್ಣಿನಲ್ಲಿ ಇದರ ಬೀಜಗಳು ೩೦ ವರುಷಗಳ ವರೆಗೆ ಸುಪ್ತವಾಗಿ ಉಳಿಯಬಲ್ಲವು.

ಅಂತರಗಂಗೆ (ವಾಟರ್ ಹಯಾಸಿಂಥ್)ಯನ್ನು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವೆಂದು ಗುರುತಿಸಲಾಗಿದೆ. (ಸಸ್ಯಶಾಸ್ತ್ರೀಯ ಹೆಸರು: ಐಕಾರ್ನಿಯ ಕ್ರಸಿಪ್ಸ್) ಇದು ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ಕೇವಲ ೮-೧೦ ದಿನಗಳಲ್ಲಿ ಎರಡು ಪಟ್ಟು ಬೆಳೆಯುತ್ತದೆ. ಇಷ್ಟು ವೇಗವಾಗಿ ಬೆಳೆದು, ನೀರಿನ ಮೇಲ್ಮೈಯನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಆವರಿಸುತ್ತದೆ. ಈ ಧಾಳಿಯಿಂದಾಗಿ ಕೆರೆ, ಸರೋವರಗಳ ಜಲಸಸ್ಯಗಳು ಸತ್ತು ಕೊಳೆಯುತ್ತವೆ. ಆಗ, ಅಲ್ಲಿನ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, ಅಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಬಲಿಯಾಗುತ್ತವೆ.

ಕೆರೆ, ಸರೋವರಗಳನ್ನು ಆಕ್ರಮಿಸಿ, ಭತ್ತದ ಹೊಲಗಳಲ್ಲಿ ಹರಡಿ, ನೀರು ಸರಬರಾಜು ಪೈಪುಗಳಲ್ಲಿಯೂ ನುಗ್ಗಿ ಬೆಳೆಯುತ್ತದೆ ಅಂತರಗಂಗೆ. ಇದರ ಅವಾಂತರಗಳನ್ನೆಲ್ಲ ನಿಭಾಯಿಸಲು ನಮಗಿರುವ ಒಂದು ದಾರಿ: ವಿಷ ರಾಸಾಯನಿಕಗಳ ಸಿಂಪಡಣೆ. ಇದರ ಬದಲಾಗಿ, ಅಳವಡಿಸಬಹುದಾದ ಪರಿಣಾಮಕಾರಿ ದಾರಿ: ಆದಾಯ ಹುಟ್ಟುವ ರೀತಿಯಲ್ಲಿ ಇದನ್ನು ಬಳಸುವುದು.

ಒಂದಾನೊಂದು ಕಾಲದಲ್ಲಿ ಒಡಿಸ್ಸಾದ ನಯಾಘರ್ ಜಿಲ್ಲೆಯ ಒಡಗಾವೊನ್‌ನ ಆ ಪ್ರದೇಶ ದಟ್ಟ ಕಾಡು ಆಗಿತ್ತು. ಕ್ರಮೇಣ ಅಲ್ಲಿನ ಮೇಲ್ಮಣ್ಣು ಕೊಚ್ಚಿ ಹೋಗಿ, ಅಲ್ಲಿ ಆಳವಾದ ತೋಡುಗಳು ಉಂಟಾದವು. ಪ್ರಕೃತಿ ಅಲ್ಲಿ ಪುನಃ ಹಸುರು ಚಿಮ್ಮಿಸಲು ಪ್ರಯತ್ನಿಸಿದಾಗೆಲ್ಲ, ಆಡುಗಳು ಮತ್ತು ಕುರಿಗಳು ಹಸುರು ಚಿಗುರುಗಳನ್ನೆಲ್ಲ ಕಿತ್ತು ತಿನ್ನುತ್ತಿದ್ದವು.

ಆ ಜಮೀನಿನ ಮಾಲೀಕರಾಗಿದ್ದ ಹಳ್ಳಿಗರು ಅಲ್ಲಿ ಬೆಳೆಗಳನ್ನು ಬೆಳೆಸುವ ಕನಸುಗಳನ್ನೇ ಕಳೆದುಕೊಂಡರು. ಆದರೆ, ಸಬರಮತೀ ಮತ್ತು ಆಕೆಯ ತಂದೆ ರಾಧಾಮೋಹನ್ ಅವರಿಗೆ ಇಂತಹ ಜಾಗವೇ ಬೇಕಾಗಿತ್ತು. ಯಾಕೆಂದರೆ, ಬರಡು ಭೂಮಿ ಎಂದು ತಿರಸ್ಕರಿಸಲ್ಪಟ್ಟ ಜಮೀನನ್ನು ಪುನರುಜ್ಜೀವನಗೊಳಿಸುವ ಸವಾಲನ್ನು ಅವರು ಸ್ವೀಕರಿಸಿದ್ದರು. ಅವರು “ಸಂಭವ್" ಎಂಬ ಸರಕಾರೇತರ ಸಂಸ್ಥೆಯ ಸ್ಥಾಪಕರು. ಲಿಂಗ ಸಮಾನತೆ ಮತ್ತು ಪರಿಸರ - ಇವು ಆ ಸಂಸ್ಥೆಯ ಕಾರ್ಯಕ್ಷೇತ್ರಗಳು.

ದಾನದ ಹಣದಿಂದ ಅವರು ಅಲ್ಲಿ ೭೦ ಎಕ್ರೆ ಜಮೀನು ಖರೀದಿಸಿ, ತಮ್ಮ ಕಾಯಕ ಶುರು ಮಾಡಿದರು. ಮೊದಲಾಗಿ, ಅವರು ಆ ಜಮೀನಿನ ಸುತ್ತಲೂ ಬಿದಿರಿನ ಜೈವಿಕ ಬೇಲಿ ನಿರ್ಮಿಸಿದರು. ಕಂಪೌಂಡ್ ಗೋಡೆ ನಿರ್ಮಿಸಲು ಬಹಳ ಹಣ ಖರ್ಚು ಮಾಡಬೇಕು. ಅದಕ್ಕೆ ಹೋಲಿಸಿದಾಗ ಬಿದಿರಿನ ಬೇಲಿ ಕೆಲವು ವರುಷಗಳ ನಂತರ ಆದಾಯದ ಮೂಲವಾಗುತ್ತದೆ.

ಎರಡೇ ವರುಷಗಳಲ್ಲಿ ಅಲ್ಲೆಲ್ಲ ಹುಲ್ಲು ಹುಟ್ಟಿತು. ಅನಂತರ ಭತ್ತ, ಹಣ್ಣು ಮತ್ತು ತರಕಾರಿ ಬೆಳೆಸುವ ತಮ್ಮ ಯೋಜನೆಯನ್ನು ಅವರು ಕೈಗೆತ್ತಿಕೊಂಡರು. ಈಗ, ಮೂವತ್ತು ವರುಷಗಳ ನಂತರ, ಸಬರಮತಿ ಮತ್ತು ರಾಧಾಮೋಹನ್, ಅಂದೊಮ್ಮೆ ಬರಡಾಗಿದ್ದ ಜಮೀನಿನಲ್ಲಿ ಬೆಳೆದು ನಿಂತಿರುವ “ಆಹಾರ ಕಾಡ"ನ್ನು ನೋಡುತ್ತಾ ಮಂದಹಾಸ ಬೀರುತ್ತಾರೆ. ಈ ಸಾಧನೆಗಾಗಿಯೇ ಅವರಿಗೆ ೨೦೨೦ರ "ಪದ್ಮಶ್ರೀ" ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಅಲ್ಲೀಗ ೫೦೦ ವಿವಿಧ ತಳಿ ಭತ್ತ, ೧೦೦ ವಿಭಿನ್ನ ತರಕಾರಿಗಳು ಮತ್ತು ೪೦ ಬೇರೆಬೇರೆ ಹಣ್ಣುಗಳು ಬೆಳೆಯುತ್ತಿವೆ. ಸಬರಮತಿ ಮತ್ತು ರಾಧಾಮೋಹನ್ ಈ ಬೆಳೆಗಳ ಫಸಲಿನ ವಿವರಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಬೀಜಗಳನ್ನು ರಕ್ಷಿಸುತ್ತಿದ್ದಾರೆ.

ವಾಣಿಜ್ಯ ಅರಣ್ಯಗಳ ವಿಸ್ತೀರ್ಣ ಹೆಚ್ಚಿಸಬೇಕೆಂದು ಕೇಂದ್ರ ಸರಕಾರ ಇತ್ತೀಚೆಗೆ ಕಾರ್ಯೋನ್ಮುಖವಾಗಿದೆ. ಈ ನಡೆ ೨೦೦೬ರ ಅರಣ್ಯ ಹಕ್ಕುಗಳ ಕಾಯಿದೆಯ ಆಶಯಕ್ಕೆ ವಿರುದ್ಧವಾಗಿದೆ!
ವಾಣಿಜ್ಯ ಅರಣ್ಯಗಳ ಪ್ರಸ್ತಾವನೆ ಮಾಡಲಾಗಿರುವುದು ೨೦೧೮ರ ಕರಡು ಅರಣ್ಯ ನೀತಿಯಲ್ಲಿ – ಮೋಪಿನ ಉತ್ಪಾದನೆ ಹೆಚ್ಚಿಸಲಿಕ್ಕಾಗಿ. ಭಾರತೀಯ ಅರಣ್ಯ ಕಾಯಿದೆಯ ಉದ್ದೇಶಿತ ತಿದ್ದುಪಡಿಯ ಕರಡಿನಲ್ಲಿ ಇದನ್ನು ಪುನರುಚ್ಚರಿಸಲಾಗಿದೆ.
ಅರಣ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ದೇಶದ ಮುಖ್ಯ ಕಾಯಿದೆ ೧೯೨೭ರ ಭಾರತೀಯ ಅರಣ್ಯ ಕಾಯಿದೆ. ಇದರ ಅನುಸಾರ ಅರಣ್ಯ ಜಮೀನನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಕಾದಿರಿಸಿದ ಅರಣ್ಯ, ರಕ್ಷಿತಾರಣ್ಯ ಮತ್ತು ಗ್ರಾಮ ಅರಣ್ಯ. ಈ ತಿದ್ದುಪಡಿ ಕರಡಿನ ಪ್ರಸ್ತಾಪ ಏನೆಂದರೆ, ವಾಣಿಜ್ಯ ಅರಣ್ಯ ಪ್ರದೇಶಗಳನ್ನು ಈ ವಿಂಗಡಣೆ ಪಟ್ಟಿಗೆ (ಕ್ಯಾಟಗರಿ ಲಿಸ್ಟ್) ಒಳಪಡಿಸುವುದು. ಇದರ ಅನುಸಾರ, ಮೋಪು, ಪಲ್ಪ್, ಸೌದೆ, ಮೋಪಲ್ಲದ ಅರಣ್ಯ ಉತ್ಪನ್ನಗಳು (ಹಣ್ಣು, ಬೀಜ ಇತ್ಯಾದಿ), ಔಷಧೀಯ ಸಸ್ಯಗಳು ಅಥವಾ ದೇಶದ ಉತ್ಪಾದನೆ ಹೆಚ್ಚಿಸುವ ಯಾವುದೇ ಅರಣ್ಯ ಸ್ಪಿಷೀಸ್ – ಇವುಗಳ ಉತ್ಪಾದನೆಗೆ ಬಳಕೆಯಾಗುವ ಅರಣ್ಯ ಜಮೀನನ್ನು ನಿರ್ದಿಷ್ಟ ಅವಧಿಗೆ ನೋಟಿಫೈ ಮಾಡಲು ಸಾಧ್ಯ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಹೀಗೆ ನೋಟಿಫೈ ಮಾಡಬಹುದು.
ಅರಣ್ಯ ವಾಸಿಗಳು ಮತ್ತು ಅರಣ್ಯ ಅಭಿವೃದ್ಧಿ ನಿಗಮಗಳ (ರಾಜ್ಯ ಅರಣ್ಯ ಇಲಾಖೆಗಳ ವಾಣಿಜ್ಯ ಅಂಗಸಂಸ್ಥೆ) ನಡುವಣ ಬಿಕ್ಕಟ್ಟು ಹೆಚ್ಚಾಗಲು ವಾಣಿಜ್ಯ ಅರಣ್ಯಗಳು ಕಾರಣವಾಗುತ್ತವೆ ಎಂಬುದು ಪರಿಣತರ ಅಭಿಪ್ರಾಯ. ಯಾಕೆಂದರೆ ಅರಣ್ಯ ಅಭಿವೃದ್ಧಿ ನಿಗಮ(ಅ.ಅ. ನಿಗಮ)ಗಳ ಸಿಬ್ಬಂದಿ ಅರಣ್ಯ ಹಕ್ಕು ಕಾಯಿದೆ (ಫಾರೆಸ್ಟ್ ರೈಟ್ಸ್ ಆಕ್ಟ್) ೨೦೦೬ರ ಅನ್ವಯ ನೋಟಿಫೈ ಆಗಿರುವ ಸಮುದಾಯ ಅರಣ್ಯಗಳಿಗೆ ಮತ್ತೆಮತ್ತೆ ಲಗ್ಗೆಯಿಟ್ಟಿದ್ದಾರೆ – ಅವುಗಳ ವಾಣಿಜ್ಯ ಆದಾಯ ಕಬಳಿಸಲಿಕ್ಕಾಗಿ. ನವದೆಹಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರದ ಅನುಸಾರ, ೧೯ ರಾಜ್ಯಗಳ ಅ.ಅ. ನಿಗಮಗಳು ಒಟ್ಟಾಗಿ ಹತ್ತು ಲಕ್ಷ ಹೆಕ್ಟೇರಿಗಿಂತ ಅಧಿಕ ಅರಣ್ಯ ಪ್ರದೇಶವನ್ನು ನಿಯಂತ್ರಿಸುತ್ತಿವೆ.

ದೈತ್ಯ ಬಿಯೊಬಾಬ್ ಮರಗಳು ಎಲ್ಲಿದ್ದರೂ ನಮ್ಮ ಗಮನ ಸೆಳೆದೇ ಸೆಳೆಯುತ್ತವೆ. ಆಫ್ರಿಕಾದಲ್ಲಿ ಮತ್ತು ಅದರ ಪೂರ್ವದ ಮಡಗಾಸ್ಕರ್ ದ್ವೀಪದಲ್ಲಿ ಸಹಜವಾಗಿ ಬೆಳೆಯುವ ಇವಕ್ಕೆ ಕನ್ನಡದಲ್ಲಿ ದೊಡ್ಡಹುಣಿಸೆ ಮರ ಅಥವಾ ಆನೆಹುಣಿಸೆ ಮರ ಎಂಬ ಅನ್ವರ್ಥನಾಮವಿದೆ.
ಭೂಮಿಯ ಆಳಪದರಗಳ ಚಲನೆಯಿಂದಾಗಿ ಆಫ್ರಿಕಾದಿಂದ ಬೇರ್ಪಟ್ಟ ದ್ವೀಪ ಮಡಗಾಸ್ಕರ್. ವಿಸ್ತೀರ್ಣದಲ್ಲಿ ಇದಕ್ಕೆ ಜಗತ್ತಿನಲ್ಲಿ ನಾಲ್ಕನೆಯ ಸ್ಥಾನ. ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗದ ಕೆಲವು ಪ್ರಾಣಿಗಳು ಇಲ್ಲಿವೆ.
ಅಪರೂಪದ ಸಸ್ಯಗಳೂ ಮಡಗಾಸ್ಕರಿನಲ್ಲಿವೆ. ಅವುಗಳಲ್ಲೊಂದು ಬಿಯೊಬಾಬ್. ಸಾವಿರ ವರುಷ ಮಿಕ್ಕಿದ ವಯಸ್ಸಿನ ಸಾವಿರಾರು ಬಿಯೊಬಾಬ್ ಮರಗಳು ಇಲ್ಲಿವೆ. ಹಲವು ದೈತ್ಯಾಕಾರದ ಮರಗಳೆದುರು ಮನುಷ್ಯ ನಿಂತರೆ ಮಹಡಿ-ಕಟ್ಟಡದ ಎದುರಿಟ್ಟ ಬೆಂಕಿಪೆಟ್ಟಿಗೆಯಂತೆ ಕಾಣಿಸುತ್ತಾನೆ.
ಬಿಯೊಬಾಬ್ ಮರಗಳ ಮೂಲಸ್ಥಾನ ಅರೇಬಿಯಾ. ಇವುಗಳ ಹೆಸರಿನ ಮೂಲವೂ ಬುಹಿಹಬ್ ಎಂಬ ಅರಾಬಿಕ್ ಪದ. ಇದರರ್ಥ ಹಲವು ಬೀಜಗಳ ಮರ. ಬಿಯೊಬಾಬ್ ಮರವನ್ನು ಫಕ್ಕನೆ ನೋಡಿದಾಗ ಮರವೊಂದನ್ನು ತಲೆಕೆಳಗಾಗಿ ನಿಲ್ಲಿಸಿದಂತೆ ಕಾಣಿಸುತ್ತದೆ!
ಬಿಯೊಬಾಬ್ ಮರಗಳು ಸಾವಿರಾರು ವರುಷ ಬದುಕಬಲ್ಲವು. ಅವು ಕಾಂಡದಲ್ಲಿ ಅಸ್ಪಷ್ಟ “ವಯಸ್ಸಿನ ವರ್ತುಲ” (ಗ್ರೋತ್ ರಿಂಗ್)ಗಳನ್ನು ಮೂಡಿಸುವ ಕಾರಣ ಅವುಗಳ ವಯಸ್ಸು ಪತ್ತೆ ಮಾಡುವುದು ಸುಲಭವಲ್ಲ. ಆದ್ದರಿಂದ ರೇಡಿಯೋ ಕಾರ್ಬನ್ ಅಧ್ಯಯನ ಮಾಡಿದಾಗ ತಿಳಿದುಬಂದಿರುವ ಸಂಗತಿ: ಅತ್ಯಂತ ಹಳೆಯ ಬಿಯೊಬಾಬ್ ಮರದ ಆಯುಷ್ಯ ೨,೫೦೦ ವರುಷಕ್ಕಿಂತಲೂ ಜಾಸ್ತಿ (ಈಗ ಆ ಮರ ಸತ್ತಿದೆ.). ಅತಿ ಒಣ ಹವಾಮಾನದಲ್ಲಿಯೂ ಮುಗಿಲೆತ್ತರಕ್ಕೆ ಬೆಳೆಯಬಲ್ಲ ಇವು ಅತ್ಯಂತ ಗಡುಸಾದ ಮರಗಳು.
ಇವುಗಳ ಕಾಂಡ ಭಾರೀ ಗಾತ್ರದ್ದು. ದೂರದಿಂದ ಇವನ್ನು ನೋಡಿದಾಗ ಆನೆಯೊಂದು ಹಿಂಗಾಲುಗಳನ್ನೂರಿ ಕುಳಿತಂತೆ ಕಾಣಿಸುತ್ತದೆ. ಹಲವು ಮರಗಳ ವ್ಯಾಸ ೨೦ರಿಂದ ೩೦ ಅಡಿ. ದಕ್ಷಿಣ ಆಫ್ರಿಕಾದ ಒಂದು ಬಿಯೊಬಾಬ್ ಮರದ ವ್ಯಾಸ ೧೫೪ ಅಡಿ (೪೬.೯ ಮೀ.) ಇದೆಷ್ಟು ದೊಡ್ಡದೆಂದರೆ, ಇದರ ಕಾಂಡವನ್ನು ಬಗೆದು ೫೦ ಜನರು ಕೂರಬಹುದಾದ ಬಾರ್ ನಿರ್ಮಿಸಲಾಗಿದೆ.

“ನನ್ನ ಬಾಲ್ಯದಲ್ಲಿ ನಮ್ಮ ಕುಟುಂಬ ೧೨೦ ಎಮ್ಮೆಗಳನ್ನು ಸಾಕುತ್ತಿತ್ತು. ಈಗ ಉಳಿದಿರೋದು ಕೇವಲ ಹತ್ತು ಎಮ್ಮೆಗಳು. ಅವಕ್ಕೆ ಹಸುರು ಹುಲ್ಲು ತರೋದೇ ನಮಗೆ ಪ್ರತಿ ದಿನದ ಸವಾಲಾಗಿದೆ” ಎನ್ನುತ್ತಾಳೆ ೬೫ ವರುಷ ವಯಸ್ಸಿನ ನೀಲಾ ವಾಡಿ.
ತಮಿಳುನಾಡಿನ ಮೇಲ್-ನೀಲಗಿರಿಯ ತರ್‍ನಾರ್ದ್‍ಮುಂಡ್ ಗ್ರಾಮದಲ್ಲಿದೆ ಆಕೆಯ ಗುಡಿಸಲು. ಹಸುರು ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳಿಂದ ಆವೃತವಾದ ಗುಡ್ಡವೊಂದರ ಇಳಿಜಾರಿನಲ್ಲಿದೆ ಆ ಮನೆ. ಮೇಲ್-ನೀಲಗಿರಿಯುದ್ದಕ್ಕೂ ಶೋಲಾ ಕಾಡು ಪ್ರದೇಶದಲ್ಲಿ ಕಾಣಬರುವುದು ಅದೇ – ಹುಲ್ಲು ಮತ್ತು ಅಲ್ಲಲ್ಲಿ ಗಿಡಮರಗಳು. ಪಶ್ಚಿಮಘಟ್ಟದ ಅತ್ಯಂತ ಎತ್ತರದ (ಸಮುದ್ರಮಟ್ಟದಿಂದ ೧,೭೦೦ರಿಂದ ೨,೬೦೦ ಮೀಟರ್ ಎತ್ತರದ) ಶಿಖರಗಳು ನೀಲಗಿರಿ ಬೆಟ್ಟಸಾಲಿನಲ್ಲಿವೆ. ಅಲ್ಲಿ ಕಡಿಮೆ ಮಂಜು ಕವಿಯುವ ಪ್ರದೇಶಗಳಲ್ಲಿ ಮಾತ್ರ ಶೋಲಾ ಕಾಡುಗಳನ್ನು ಕಾಣಬಹುದು.
ನೀಲಾ ವಾಡಿಯ ಮನೆಯೆದುರು ನಿಂತಾಗ ಕಾಣಿಸುತ್ತವೆ: ದಟ್ಟ ಹಸುರಿನ ನಡುವೆ ಅಲ್ಲಲ್ಲಿ ಕ್ಯಾರೆಟ್ ಮತ್ತು ಎಲೆಕೋಸು ಬೆಳೆಯುವ ಆಯತಾಕಾರದ ತರಕಾರಿ ಹೊಲಗಳು. ನೀಲಾ ವಾಡಿ ಕುಟುಂಬದ್ದೇ ಒಂದು ತರಕಾರಿ ಹೊಲವಿದೆ. ಆದರೆ ಅದರಲ್ಲಿ ತರಕಾರಿ ಬೆಳೆಸುತ್ತಿರುವುದು ಅವಳಲ್ಲ! “ತರಕಾರಿ ಕೃಷಿಯ ಖರ್ಚು ಭರಿಸಲು ನಮ್ಮಿಂದಾಗದು. ಹಾಗಾಗಿ ನನ್ನ ಮನೆಯಾತ ತನ್ನದೇ ಹೊಲವನ್ನು ಲೀಸಿಗೆ ಕೊಟ್ಟು ಅಲ್ಲಿ ಕೆಲಸಗಾರನಾಗಿ ದುಡಿಯುತ್ತಿದ್ದಾನೆ” ಎನ್ನುತ್ತಾಳೆ ನೀಲಾ ವಾಡಿ.
ತೋಡಾ ಸಮುದಾಯದವಳು ನೀಲಾ ವಾಡಿ. ಈ ಬುಡಕಟ್ಟು ಸಮುದಾಯದವರು ವಾಸವಿರುವುದು ನೀಲಗಿರಿಯ ಈ ನಾಲ್ಕು ತಾಲೂಕುಗಳಲ್ಲಿ ಮಾತ್ರ: ಊಟಿ, ಕೋಟಗಿರಿ, ಗುಡಲೂರು ಮತ್ತು ಕೂನೂರು. ಅವಳ ಕುಟುಂಬದ ಜಮೀನಿನ ವಿಸ್ತೀರ್ಣ ಐದು ಹೆಕ್ಟೇರ್. ಪ್ರತಿಯೊಂದು ಹೆಕ್ಟೇರಿನಲ್ಲಿ ಕೃಷಿ ಮಾಡಲು ರೂ.೪ ಲಕ್ಷ ಭಂಡವಾಳ ಅವಶ್ಯ. ಅವರ ಸಮುದಾಯದಲ್ಲಿ ಯಾರಿಂದಲೂ ಅಷ್ಟು ವೆಚ್ಚ ಮಾಡಲಾಗದು. ಆದ್ದರಿಂದ ಆಕೆಯ ಕುಟುಂಬ ಊಟಿಯ ಶ್ರೀಮಂತ ರೈತರಿಗೆ ಜಮೀನನ್ನು ಲೀಸಿಗೆ (ಗುತ್ತಿಗೆ) ಕೊಟ್ಟಿದೆ. ಹಾಗೆ ಲೀಸಿಗೆ ವಹಿಸಿಕೊಂಡವರು ಇವರ ಕುಟುಂಬಕ್ಕೆ ರೂ.೧.೪ ಲಕ್ಷ ಲೀಸ್-ಬಾಡಿಗೆ ಪಾವತಿಸುತ್ತಾರೆ. ಇವರು ತಮ್ಮದೇ ಜಮೀನಿನಲ್ಲಿ ಕೆಲಸಗಾರರಾಗಿ ದುಡಿಯುತ್ತಾರೆ!

ಈ ಮೆಣಸನ್ನು ಒಮ್ಮೆ ಕಚ್ಚಿದರೆ ಸಾಕು; ಅದರ ಖಾರದಿಂದ ಬಾಯಿ-ಹೊಟ್ಟೆಯಲ್ಲಿ ಉರಿ ಶುರುವಾಗಿ, ಅದನ್ನು ತಿಂದ ವ್ಯಕ್ತಿ ಥಕಥಕ ಕುಣಿಯಬೇಕಾದೀತು. ಹಾಗಾಗಿ ಅದರ ಹೆಸರು ರಾಜಾ ಮೆಣಸು.
ಅಸ್ಸಾಮ್ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಬೆಳೆಯಲಾಗುವ ಈ ಮೆಣಸನ್ನು ಅಲ್ಲಿನವರು ಗುರುತಿಸುವುದು ಭೂತ್ ಜೊಲೊಕಿಯಾ ಎಂಬ ಹೆಸರಿನಿಂದ. “ಗಿನ್ನೆಸ್ ಜಾಗತಿಕ ದಾಖಲೆಗಳು” ಇದನ್ನು ಜಗತ್ತಿನ ಅತ್ಯಂತ ಖಾರದ ಮೆಣಸು ಎಂದು ಗುರುತಿಸಿದ್ದು ೨೦೦೭ರಲ್ಲಿ. ಅನಂತರ ೨೦೧೧ರ ತನಕ ರಾಜಾ ಮೆಣಸು ಆ ಸ್ಥಾನದಲ್ಲಿ ವಿಶ್ವವಿಖ್ಯಾತವಾಗಿತ್ತು. ಅನಂತರ ಬೇರೆ ಮೆಣಸಿಗೆ ಖಾರದ ಅಗ್ರಸ್ಥಾನ ದಕ್ಕಿತು. ಈಗ ೨೦೧೯ರಲ್ಲಿ, ಜಗತ್ತಿನ ಅತ್ಯಂತ ಖಾರದ ಮೆಣಸಿನ ಹೆಸರು ಕೆರೊಲಿನಾ ರೀಪರ್.
ರಾಜಾ ಮೆಣಸಿನ ಬಣ್ಣ ಕೆಂಪಾಗಿ ಬದಲಾಗುವಾಗಲೇ ಇದನ್ನು ಕೊಯ್ಯಬೇಕು. (ಇದರಲ್ಲಿ ಕೇಸರಿ, ಹಳದಿ, ನೇರಳೆ ಬಣ್ಣದವೂ ಇವೆ.) ಒಂದು ಹಂಗಾಮಿನಲ್ಲಿ ಮೂರು ತಿಂಗಳ ಅವಧಿ ಇದರ ಗಿಡಗಳಲ್ಲಿ ಮೆಣಸು ಬೆಳೆಯುತ್ತದೆ. ಒಂದು ಗಿಡದಿಂದ ಪ್ರತಿ ಹಂಗಾಮಿನಲ್ಲಿ ಸರಾಸರಿ ಮೂರು ಕಿಗ್ರಾ ಫಸಲು ಲಭ್ಯ. “ಒಂದು ಭಿಗಾ (ಸುಮಾರು ೦.೩ ಎಕ್ರೆ) ಜಮೀನಿನಲ್ಲಿ ೧,೫೦೦ – ೧,೬೦೦ ಮೆಣಸಿನ ಗಿಡಗಳನ್ನು ನೆಡಬಹುದು. ಅವುಗಳಿಂದ ಪ್ರತಿ ಹಂಗಾಮಿನಲ್ಲಿ  ೧೫,೦೦೦ದಿಂದ ೨೦,೦೦೦ ರೂಪಾಯಿ ಲಾಭ” ಎನ್ನುತ್ತಾರೆ ಅಸ್ಸಾಮಿನ ಸಿಬ್‍ಸಾಗರ ಜಿಲ್ಲೆಯ ರೈತ ಬಿಪುಲ್ ಗೊಗೊಯ್.
ರಾಜಧಾನಿ ಗೌಹಾತಿಯ ಮಚ್‍ಖೋವಾದ ರಖಂ ಮಾರುಕಟ್ಟೆಯಲ್ಲಿ ತಾಜಾ ರಾಜಾ ಮೆಣಸು ಲಭ್ಯ. ಖಾರ ಮತ್ತು ಬಣ್ಣ ನೋಡಿ ಗ್ರಾಹಕರಿಂದ ಇದರ ಗುಣಮಟ್ಟ ನಿರ್ಧಾರ. ರಖಂ ವರ್ತಕ ಹಿರೇನ್ ಬರುವಾ ಅವರ ದಿನನಿತ್ಯದ ಸರಾಸರಿ ವ್ಯಾಪಾರ ೫೦ ಕಿಗ್ರಾ – ೧೦೦ ಕಿಗ್ರಾ. ರಾಜಾ ಮೆಣಸಿನ ಬೆಲೆ ಹಂಗಾಮಿನಲ್ಲಿ (ಮಾರ್ಚ್ – ಜುಲಾಯಿ) ಕಿಲೋಕ್ಕೆ ರೂ.೧೫೦ರಿಂದ ರೂ.೩೦೦. ಇಲ್ಲಿಂದ ಖರೀದಿಸಿದ ರಾಜಾ ಮೆಣಸನ್ನು ಸೂರ್ಯನ ಬಿಸಿಲಿನಲ್ಲಿ ಅಥವಾ ಡ್ರೈಯರುಗಳಲ್ಲಿ ಒಣಗಿಸಿ ಪುನಃ ಮಾರಲಾಗುತ್ತದೆ.

೨೦೧೯ರ ಸಪ್ಟಂಬರಿನಲ್ಲಿ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.
ಅದೊಂದು ಕಾಲವಿತ್ತು, ಉತ್ತರ ಭಾರತದಲ್ಲೆಲ್ಲ ಮಣ್ಣಿನ ಕಪ್‍ನಲ್ಲೇ ಟೀ ಕುಡಿಯುತ್ತಿದ್ದ ಕಾಲ. ಆದರೆ ಕಾಲ ಸರಿದಂತೆ ಆ ಅಭ್ಯಾಸ ನಿಂತೇ ಹೋಯಿತು. ಮಣ್ಣಿನ ಕಪ್‍ಗಳ ಸ್ಥಾನವನ್ನು ಬಳಸಿ-ಎಸೆಯುವ ಪ್ಲಾಸ್ಟಿಕ್ ಮತ್ತು ಕಾಗದದ ಕಪ್‍ಗಳು ಆಕ್ರಮಿಸಿಕೊಂಡವು.
ಹದಿನೈದು ವರುಷಗಳ ಮುಂಚೆ, ಆಗಿನ ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ ಯಾದವ್, ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಒದಗಿಸುವ ವ್ಯವಸ್ಥೆ  ಮಾಡಿದರು – ಗ್ರಾಮೀಣ ಕುಂಬಾರಿಕೆಗೆ ಪ್ರೋತ್ಸಾಹ ನೀಡಲಿಕ್ಕಾಗಿ. ಆದರೆ ಈ ಪ್ರಯೋಗ ಒಂದೇ ವರುಷದಲ್ಲಿ ನಿಂತು ಹೋಯಿತು. ಯಾಕೆಂದರೆ ರೈಲು ಪ್ರಯಾಣಿಕರೂ, ಟೀ ಮಾರಾಟಗಾರರೂ ಅಗ್ಗದ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‍ಗಳನ್ನು ಪುನಃ ಬಳಸತೊಡಗಿದರು. ೨೦೧೯ರ ಆರಂಭದಲ್ಲಿ, ಕೇಂದ್ರ ರೈಲ್ವೇ ಸಚಿವ ಪಿಯುಷ್ ಗೋಯಲ್, ವಾರಣಾಸಿ ಮತ್ತು ರಾಯ್‍ಬರೇಲಿ ರೈಲುನಿಲ್ದಾಣಗಳ ಕೆಟರರ್ಸ್ (ಆಹಾರ ಸರಬರಾಜುಗಾರರು) ಮಣ್ಣಿನ ಕಪ್‍ಗಳಲ್ಲಿಯೇ ಪಾನೀಯ ಮಾರಾಟ ಮಾಡಬೇಕೆಂದು ಆದೇಶ ನೀಡಿದರು. ಈ ಪ್ರಯೋಗ ಎಷ್ಟು ಕಾಲ ಸಾಗುತ್ತದೆಂದು ಕಾದು ನೋಡೋಣ.
ಅದೇನಿದ್ದರೂ, ಮಹಾನಗರ ಕೊಲ್ಕತಾದಲ್ಲಿ ಜನರು ಪುಟ್ಟ ಮಣ್ಣಿನ ಕಪ್‍ಗಳಲ್ಲೇ ಇಂದಿಗೂ ಟೀ ಕುಡಿಯುತ್ತಿದ್ದಾರೆ. “ಮಣ್ಣಿನ ಕಪ್‍ನಲ್ಲಿರುವ ಟೀ ಸ್ವಾದವೇ ಬೇರೆ. ಕಪ್‍ನ ಮಣ್ಣಿನ ವಾಸನೆ ಹೀರಿಕೊಳ್ಳುವ ಈ ಟೀಯ ಸ್ವಾದವನ್ನು ಪ್ಲಾಸ್ಟಿಕ್ ಕಪ್‍ನಲ್ಲಿರುವ ಟೀ ಒದಗಿಸಲಾರದು” ಎನ್ನುತ್ತಾರೆ ನಿಯಮಿತವಾಗಿ ಟೀ ಕುಡಿಯುವ ಅಲ್ಲಿನ ಜನರು.
ಈ ಟೀ ಕಪ್‍ಗಳನ್ನು ತಯಾರಿಸುವುದು ಹೂಗ್ಲಿ ನದಿ ದಡದ ಮಣ್ಣಿನಿಂದ. ಅಧಿಕ ಉಷ್ಣತೆಯಲ್ಲಿ ಸುಟ್ಟು ತಯಾರಿಸುವ ಅವನ್ನು ಪಾಲಿಷ್ ಮಾಡುವುದಿಲ್ಲ; ಹಾಗಾಗಿ ಅವುಗಳ ಮೇಲ್ಮೈ ಒರಟುಒರಟು. ಅವನ್ನು ತಯಾರಿಸುವುದೇ ಒಮ್ಮೆ ಬಳಸಿ ಎಸೆಯೋದಕ್ಕೆ. ನದಿ ಮಣ್ಣಿನ ವಾಸನೆ ಹೀರುತ್ತ ಅವುಗಳಲ್ಲಿ ಟೀ ಕುಡಿಯುವುದೇ ಮರೆಯಲಾಗದ ಅನುಭವ.

ಸಾವಿರಸಾವಿರ ಎಕ್ರೆ ಜಮೀನಿಗೆ ನೀರಾವರಿ ಒದಗಿಸಲಿಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಅಣೆಕಟ್ಟುಗಳೇ ಈಗ ನೆರೆ ಹಾವಳಿಗೆ ಕಾರಣವಾಗುತ್ತಿವೆ ಎಂದರೆ ನಂಬುತ್ತೀರಾ?
ಕರ್ನಾಟಕದ ಬರಪೀಡಿತ ಜಿಲ್ಲೆ ಬೆಳಗಾವಿಯಲ್ಲಿ ಇಂತಹ ನೆರೆಯಿಂದಾಗಿ ೨೦೧೯ರಲ್ಲಿ ೭೧ ಜನರು ಪ್ರಾಣ ಕಳೆದುಕೊಂಡರು. ಆಗಸ್ಟ್ ೧ರಿಂದ ೭ರ ನಡುವೆ ಒಣ ಜಿಲ್ಲೆ ಬೆಳಗಾವಿಯಲ್ಲಿ ಸರಾಸರಿಗಿಂತ ಶೇ.೬೫೨ರಷ್ಟು ಜಾಸ್ತಿ ಮಳೆ ಸುರಿಯಿತು. (ಇದೇ ಅವಧಿಯಲ್ಲಿ ಕರ್ನಾಟಕದಲ್ಲಿಯೂ ಸರಾಸರಿಗಿಂತ ಶೇ.೧೨೮ ಜಾಸ್ತಿ ಮಳೆಯಾಯಿತು.) ೫ ಆಗಸ್ಟ್ ೨೦೧೯ರ ಹೊತ್ತಿಗೆ ಜಿಲ್ಲೆಯ ಎಲ್ಲ ಅಣೆಕಟ್ಟುಗಳಲ್ಲಿಯೂ ನೀರು ತುಳುಕುವಷ್ಟು ತುಂಬಿತ್ತು. ಆದರೂ ಹಿಡ್ಕಲ್ ಅಣೆಕಟ್ಟಿನ ಮೇಲ್ವಿಚಾರಕರು ಸೆಕೆಂಡಿಗೆ ಕೇವಲ ೬೮.೮ ಘನ ಮೀ. ನೀರನ್ನು ಘಟಪ್ರಭಾ ನದಿಗೆ ಬಿಡುತ್ತಿದ್ದರು. ಆಗಸ್ಟ್ ೬ರ ಮಹಾಮಳೆಯಿಂದಾಗಿ ನೀರು ಅಣೆಕಟ್ಟಿನ ಅಂಚು ಮೀರುವಂತಾಯಿತು. ಆಗ ನಿದ್ದೆಯಿಂದ ಎಚ್ಚೆತ್ತ ಮೇಲ್ವಿಚಾರಕರು ಒಮ್ಮೆಲೇ ಸೆಕೆಂಡಿಗೆ ೮೩೩ ಘನ ಮೀ. ನೀರನ್ನು ಹೊರಬಿಡಲು ಶುರು ಮಾಡಿದರು. ಆಗಸ್ಟ್ ೯ರಂದು ಈ ಪರಿಮಾಣವನ್ನು ಸೆಕೆಂಡಿಗೆ ಬರೋಬ್ಬರಿ ೨,೮೫೮ ಘನ ಮೀಟರಿಗೆ ಹೆಚ್ಚಿಸಿದರು. ಅಂದರೆ, ಅಣೆಕಟ್ಟಿಗೆ ನೀರಿನ ಒಳಹರಿವಿಗಿಂತ ಹೊರಬಿಡುವ ನೀರಿನ ಪರಿಮಾಣ ಜಾಸ್ತಿಯಾಗಿತ್ತು!
ಬೆಳಗಾವಿ ಜಿಲ್ಲೆಯ ಮಲಪ್ರಭಾ ಅಣೆಕಟ್ಟಿನಲ್ಲಿಯೂ ಇದೇ ಕತೆ! ಆಗಸ್ಟ್ ೭ರ ವರೆಗೆ ಅಲ್ಲಿನ ಮೇಲ್ವಿಚಾರಕರು ಸೆಕೆಂಡಿಗೆ ೪೪೬ ಘನ ಮೀ. ನೀರು ಹೊರಬಿಡುತ್ತಿದ್ದರೆ, ಮರುದಿನ ಆಗಸ್ಟ್ ೮ರಂದು ಅದನ್ನು ಒಮ್ಮೆಲೇ ಸೆಕೆಂಡಿಗೆ ೨,೨೯೫ ಘನ ಮೀ. (ಐದು ಪಟ್ಟು) ಹೆಚ್ಚಿಸಿದರು. ೨೦೧೮ರಲ್ಲಿ ಕೇರಳದಲ್ಲಿ ನುಗ್ಗಿ ಬಂದ ಮಹಾನೆರೆಗೂ ಇದೇ ಕಾರಣ ಎಂಬುದನ್ನು ನಾವು ಮರೆಯುವಂತಿಲ್ಲ.

“ಹಣ್ಣು-ತರಕಾರಿ-ಧಾನ್ಯ ಇತ್ಯಾದಿ ಖರೀದಿಸುವ ಗ್ರಾಹಕರು ಈ ಪ್ರಶ್ನೆಗಳನ್ನು ಕೇಳಬೇಕು: ಇದು ಎಲ್ಲಿಂದ ಬರುತ್ತಿದೆ? ಈಗ ಇದನ್ನು ಬೆಳೆಯುವ ಹಂಗಾಮು ಹೌದೇ? ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ? ಈ ಮೊಸರಿನಲ್ಲಿ ಹಾಲು ಮತ್ತು ಬ್ಯಾಕ್ಟೀರಿಯಾ ಹೊರತಾಗಿ ಬೇರೆ ವಸ್ತುಗಳಿದ್ದರೆ ಅವು ಯಾವುವು? ಮತ್ತು ಅವು ಯಾಕೆ ಮೊಸರಿನಲ್ಲಿವೆ? ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಮಾತ್ರ ನಾವು ಭೂಮಿಯೊಂದಿಗೆ ಸಾಮರಸ್ಯದಿಂದ ಬದುಕಲು ಸಾಧ್ಯ.
ನಾವು ನಮ್ಮ ಕೈಗಳಿಂದಲೇ ಕೃಷಿ ಮಾಡಬೇಕಾಗಿದೆ. ಮಣ್ಣು ಹೇಗಿದೆ? ಗಿಡಗಳನ್ನು ಬೆಳೆಸೋದು ಹೇಗೆ? ಇದನ್ನೆಲ್ಲ ನಾವು ಅನುಭವಿಸಬೇಕಾಗಿದೆ. ಜೊತೆಗೆ ಕೃಷಿಕರು ತಮ್ಮ ಜಮೀನು, ತಮ್ಮ ಬೀಜಗಳನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕಾಗಿದೆ. ಅದುವೇ ನಿಜವಾದ ಸ್ವಾತಂತ್ರ್ಯ” – ಈ ಮಾತುಗಳನ್ನು ಹೇಳಿದವರು ಬೃಂದಾವನ ಫಾರ್ಮಿನ ಗಾಯತ್ರಿ ಭಾಟಿಯಾ.
ಮುಂಬೈಯ ಈಶಾನ್ಯ ದಿಕ್ಕಿನಲ್ಲಿರುವ ಅವರ ಕುಟುಂಬದ ೧೦ ಎಕ್ರೆ ಫಾರ್ಮಿಗೆ ಅಲ್ಲಿಂದ ಒಂದು ಗಂಟೆ ಪ್ರಯಾಣ. ಅದೀಗ ಸಂಪೂರ್ಣ ಸಾವಯವ ತೋಟ. ಈ ಪರಿವರ್ತನೆ ಒಂದು ರೋಚಕ ಕತೆ. ಇದೆಲ್ಲ ಶುರುವಾದದ್ದು ೧೦ ವರುಷಗಳ ಮುಂಚೆ ಗಾಯತ್ರಿ ಭಾಟಿಯಾ ಯುಎಸ್‍ಎ ದೇಶದ ಬೋಸ್ಟನ್ ಮಹಾನಗರದ ಪರಿಸರ ರಕ್ಷಣಾ ಏಜೆನ್ಸಿಯಲ್ಲಿ ತನ್ನ “ಪರಿಸರ ವಿಶ್ಲೇಷಕಿ” ಹುದ್ದೆ ತೊರೆದು ತನ್ನ ಹಳ್ಳಿಗೆ ಮರಳಿದಾಗ.
ಆಗ ಈ ಜಮೀನು ಪ್ರಧಾನವಾಗಿ ಮಾವಿನ ತೋಟ. ಅಲ್ಲಿದ್ದವು ಏಳು ತಳಿಗಳ ೫೦೦ ಮಾವಿನ ಮರಗಳು. ಜೊತೆಗೆ ಕೆಲವು ತೆಂಗು ಮತ್ತು ಗೇರು ಮರಗಳು, ಕರಿಮೆಣಸು ಬಳ್ಳಿಗಳು.
ಈಗ ಅಲ್ಲಿ ಮಾವಿನ ಜೊತೆಗೆ ಹತ್ತುಹಲವು ಹಣ್ಣಿನ ಮರಗಳಿವೆ: ಪಪ್ಪಾಯಿ, ಚಿಕ್ಕು, ಹಲಸು, ಅನಾನಸ್, ಬಾಳೆ, ಹಿಪ್ಪುನೇರಳೆ, ಟೊಮೆಟೊ, ಕಾಡುಹಣ್ಣುಗಳು ಇತ್ಯಾದಿ. ಅರಿಶಿನ, ಶುಂಠಿ, ಕರಿಮೆಣಸು ಮೊದಲಾದ ಸಾಂಬಾರ ಗಿಡಗಳೂ, ಲೆಟ್ಯೂಸ್, ಬೇಬಿ ಸ್ಪಿನಾಚ್, ತುಳಸಿ, ಸೊರ್ರೆಲ್, ನುಗ್ಗೆ, ಹರಿವೆ ಸೊಪ್ಪಿನ ಸಸಿಗಳು, ಪುಟ್ಟಟೊಮೆಟೊ, ಬದನೆ, ಚೀನಿಕಾಯಿ, ಗೆಣಸು ಇತ್ಯಾದಿ ತರಕಾರಿ ಗಿಡಬಳ್ಳಿಗಳೂ ಅಲ್ಲಿವೆ.

ಇಪ್ಪತ್ತು ವರುಷಗಳ ಹಿಂದಿನ ಮಾತು. ಧೃತಿಮಾನ್ ಬೋರಾ ತನ್ನ ವಿದ್ಯಾವಂತ ಹೆತ್ತವರಿಗೆ ಹೇಳಿದ ಮಾತು: ಹನ್ನೆರಡನೆಯ ತರಗತಿಯ ನಂತರ ನಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ.
ವಿದ್ಯಾಲಯದಲ್ಲಿ ಕಲಿಯುವ ಬದಲಾಗಿ, ಧೃತಿಮಾನ್ ಬಿದಿರಿನ ಪೀಠೋಪಕರಣಗಳು ಮತ್ತು ಅಡುಗೆ ಹಾಗೂ ಕೃಷಿ ಸಲಕರಣೆಗಳನ್ನು ತಯಾರಿಸಲು ಶುರು ಮಾಡಿದರು. ಹೀಗೆ ಆರಂಭವಾಯಿತು ಡಿಬಿ ಇಂಡಸ್ಟ್ರೀಸ್ ಎಂಬ ಬಿದಿರಿನ ಸಾಧನಗಳ ಪುಟ್ಟ ತಯಾರಿಕಾ ಘಟಕ.
ಅಸ್ಸಾಂನ ಗೌಹಾತಿ ನಗರದ ಈಶಾನ್ಯದಲ್ಲಿ, ೨೪೦ ಕಿಮೀ ದೂರದಲ್ಲಿ, ಬಿಶ್ವನಾಥ್ ಚರಿಯಾಲಿ ಪಟ್ಟಣದ ನಬಪುರ್ ಪ್ರದೇಶದಲ್ಲಿ ಅವರ ಮನೆಯಲ್ಲಿಯೇ ಇದೆ ಈ ಘಟಕ. ಮನೆಯ ಹಿಂಭಾಗದಲ್ಲಿ ಜತಿ ಮತ್ತು ಬಿಜುಲಿ ಎಂಬ ಎರಡು ಜಾತಿಯ ಬಿದಿರು ಮೆಳೆಗಳಿದ್ದವು. “ಅವು ನಾಜೂಕಿನ ವಸ್ತುಗಳ ತಯಾರಿಗೆ ಸೂಕ್ತವಾದರೂ ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಲ್ಲ” ಎನ್ನುತ್ತಾರೆ ಧೃತಿಮಾನ್.
ಬಹಳ ಹುಡುಕಾಟದ ನಂತರ, ಬಾಳ್ವಿಕೆಯ ವಸ್ತುಗಳ ತಯಾರಿಗೆ ಸೂಕ್ತವಾದ ದೃಢವಾದ ಬಿದಿರು ತಳಿಯನ್ನು ಗುರುತಿಸಿದರು ಧೃತಿಮಾನ್. ಅದುವೇ ಭಲೂಕ ಎಂಬ ಬಿದಿರು (ಸಸ್ಯಶಾಸ್ತ್ರೀಯ ಹೆಸರು ಬಂಬುಸಾ ಬಲ್‍ಕೂವ).
ಅದರಿಂದ ಹಲವಾರು ಬಿದಿರಿನ ಉತ್ಪನ್ನಗಳನ್ನು ಡಿಬಿ ಇಂಡಸ್ಟ್ರೀಸ್ ತಯಾರಿಸಿ ಮಾರತೊಡಗಿತು: ಚಾಪೆಗಳು, ಪೀಠೋಪಕರಣಗಳು, ವಿಭಾಜಕಗಳು, ಫಲಕಗಳು, ಹೂದಾನಿಗಳು, ಅಡುಗೆ ಸಾಧನಗಳು ಇತ್ಯಾದಿ. ಆದರೆ ಅದ್ಯಾವುದೂ ಮಾರುಕಟ್ಟೆಯಲ್ಲಿ ಸುದ್ದಿಯಾಗಲೇ ಇಲ್ಲ.
ಕೊನೆಗೂ, ೧೭ ವರುಷಗಳ ಪರಿಶ್ರಮ ಫಲ ನೀಡಿತು; ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಬಿದಿರಿನ ಉತ್ಪನ್ನವೊಂದನ್ನು ರೂಪಿಸಲು ಧೃತಿಮಾನ್ ಯಶಸ್ವಿಯಾದರು. ಅದುವೇ “ಬಿದಿರಿನ ನೀರಿನ ಬಾಟಲಿ.” ಈ ಆವಿಷ್ಕಾರ ಒಂದೇ ವರುಷದಲ್ಲಿ ಭಾರತದ ಮತ್ತು ವಿದೇಶಗಳ ಗ್ರಾಹಕರ ಗಮನ ಸೆಳೆದಿದೆ: ನಿಸರ್ಗ ಮೂಲದ ಸಾವಯವ ಬಾಟಲಿ ಎಂಬ ಕಾರಣಕ್ಕಾಗಿ.

Pages