ಅರಣ್ಯವಾಸಿಗಳ ಬದುಕುವ ಹಕ್ಕು ಮತ್ತು ವಾಣಿಜ್ಯ ಅರಣ್ಯಗಳಿಂದ ಲಾಭದ ದಂಧೆಯ ತಾಕಲಾಟ

ವಾಣಿಜ್ಯ ಅರಣ್ಯಗಳ ವಿಸ್ತೀರ್ಣ ಹೆಚ್ಚಿಸಬೇಕೆಂದು ಕೇಂದ್ರ ಸರಕಾರ ಇತ್ತೀಚೆಗೆ ಕಾರ್ಯೋನ್ಮುಖವಾಗಿದೆ. ಈ ನಡೆ ೨೦೦೬ರ ಅರಣ್ಯ ಹಕ್ಕುಗಳ ಕಾಯಿದೆಯ ಆಶಯಕ್ಕೆ ವಿರುದ್ಧವಾಗಿದೆ!
ವಾಣಿಜ್ಯ ಅರಣ್ಯಗಳ ಪ್ರಸ್ತಾವನೆ ಮಾಡಲಾಗಿರುವುದು ೨೦೧೮ರ ಕರಡು ಅರಣ್ಯ ನೀತಿಯಲ್ಲಿ – ಮೋಪಿನ ಉತ್ಪಾದನೆ ಹೆಚ್ಚಿಸಲಿಕ್ಕಾಗಿ. ಭಾರತೀಯ ಅರಣ್ಯ ಕಾಯಿದೆಯ ಉದ್ದೇಶಿತ ತಿದ್ದುಪಡಿಯ ಕರಡಿನಲ್ಲಿ ಇದನ್ನು ಪುನರುಚ್ಚರಿಸಲಾಗಿದೆ.
ಅರಣ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಮ್ಮ ದೇಶದ ಮುಖ್ಯ ಕಾಯಿದೆ ೧೯೨೭ರ ಭಾರತೀಯ ಅರಣ್ಯ ಕಾಯಿದೆ. ಇದರ ಅನುಸಾರ ಅರಣ್ಯ ಜಮೀನನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಕಾದಿರಿಸಿದ ಅರಣ್ಯ, ರಕ್ಷಿತಾರಣ್ಯ ಮತ್ತು ಗ್ರಾಮ ಅರಣ್ಯ. ಈ ತಿದ್ದುಪಡಿ ಕರಡಿನ ಪ್ರಸ್ತಾಪ ಏನೆಂದರೆ, ವಾಣಿಜ್ಯ ಅರಣ್ಯ ಪ್ರದೇಶಗಳನ್ನು ಈ ವಿಂಗಡಣೆ ಪಟ್ಟಿಗೆ (ಕ್ಯಾಟಗರಿ ಲಿಸ್ಟ್) ಒಳಪಡಿಸುವುದು. ಇದರ ಅನುಸಾರ, ಮೋಪು, ಪಲ್ಪ್, ಸೌದೆ, ಮೋಪಲ್ಲದ ಅರಣ್ಯ ಉತ್ಪನ್ನಗಳು (ಹಣ್ಣು, ಬೀಜ ಇತ್ಯಾದಿ), ಔಷಧೀಯ ಸಸ್ಯಗಳು ಅಥವಾ ದೇಶದ ಉತ್ಪಾದನೆ ಹೆಚ್ಚಿಸುವ ಯಾವುದೇ ಅರಣ್ಯ ಸ್ಪಿಷೀಸ್ – ಇವುಗಳ ಉತ್ಪಾದನೆಗೆ ಬಳಕೆಯಾಗುವ ಅರಣ್ಯ ಜಮೀನನ್ನು ನಿರ್ದಿಷ್ಟ ಅವಧಿಗೆ ನೋಟಿಫೈ ಮಾಡಲು ಸಾಧ್ಯ. ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರ ಹೀಗೆ ನೋಟಿಫೈ ಮಾಡಬಹುದು.
ಅರಣ್ಯ ವಾಸಿಗಳು ಮತ್ತು ಅರಣ್ಯ ಅಭಿವೃದ್ಧಿ ನಿಗಮಗಳ (ರಾಜ್ಯ ಅರಣ್ಯ ಇಲಾಖೆಗಳ ವಾಣಿಜ್ಯ ಅಂಗಸಂಸ್ಥೆ) ನಡುವಣ ಬಿಕ್ಕಟ್ಟು ಹೆಚ್ಚಾಗಲು ವಾಣಿಜ್ಯ ಅರಣ್ಯಗಳು ಕಾರಣವಾಗುತ್ತವೆ ಎಂಬುದು ಪರಿಣತರ ಅಭಿಪ್ರಾಯ. ಯಾಕೆಂದರೆ ಅರಣ್ಯ ಅಭಿವೃದ್ಧಿ ನಿಗಮ(ಅ.ಅ. ನಿಗಮ)ಗಳ ಸಿಬ್ಬಂದಿ ಅರಣ್ಯ ಹಕ್ಕು ಕಾಯಿದೆ (ಫಾರೆಸ್ಟ್ ರೈಟ್ಸ್ ಆಕ್ಟ್) ೨೦೦೬ರ ಅನ್ವಯ ನೋಟಿಫೈ ಆಗಿರುವ ಸಮುದಾಯ ಅರಣ್ಯಗಳಿಗೆ ಮತ್ತೆಮತ್ತೆ ಲಗ್ಗೆಯಿಟ್ಟಿದ್ದಾರೆ – ಅವುಗಳ ವಾಣಿಜ್ಯ ಆದಾಯ ಕಬಳಿಸಲಿಕ್ಕಾಗಿ. ನವದೆಹಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರದ ಅನುಸಾರ, ೧೯ ರಾಜ್ಯಗಳ ಅ.ಅ. ನಿಗಮಗಳು ಒಟ್ಟಾಗಿ ಹತ್ತು ಲಕ್ಷ ಹೆಕ್ಟೇರಿಗಿಂತ ಅಧಿಕ ಅರಣ್ಯ ಪ್ರದೇಶವನ್ನು ನಿಯಂತ್ರಿಸುತ್ತಿವೆ.
೨೦೦೯ರಲ್ಲಿ ೪೩ ಬುಡಕಟ್ಟು ಕುಟುಂಬಗಳ ಸಮುದಾಯ ಅರಣ್ಯ ಜಮೀನಿಗೆ ತ್ರಿಪುರ ಅ.ಅ. ಮತ್ತು ಪ್ಲಾಂಟೇಷನ್ ನಿಗಮದ ಸಿಬ್ಬಂದಿ ಬಲಾತ್ಕಾರದಿಂದ ಪ್ರವೇಶಿಸಿದರು – ಅಲ್ಲಿರುವ ರಬ್ಬರ್ ತೋಟದಿಂದ ಲಾಭ ಗಳಿಸಲಿಕ್ಕಾಗಿ. ಆ ಕುಟುಂಬಗಳು ಪ್ರತಿಭಟಿಸಿದಾಗ, ಜಿಲ್ಲಾಡಳಿತವು ಆ ಜಮೀನಿನ ಮೇಲೆ ಅವರಿಗಿದ್ದ ಹಕ್ಕನ್ನೇ ರದ್ದು ಪಡಿಸಿತು. ಈ ಕ್ರಮ, ಅರಣ್ಯ ಹಕ್ಕು ಕಾಯಿದೆ ಪ್ರಕಾರ ಕಾನೂನುಬಾಹಿರ! (ಯಾಕೆಂದರ, ಆ ಕಾಯಿದೆಯಲ್ಲಿ ಸಮುದಾಯಗಳ ಹಕ್ಕನ್ನು ರದ್ದು ಪಡಿಸಲು ಆಸ್ಪದವಿಲ್ಲ.) ಇನ್ನೊಂದು ಪ್ರಕರಣದಲ್ಲಿ, ಚತ್ತಿಸ್‍ಘರ್‍ನ ರಾಜ್‍ನಂದ ಗಾವೊನ್ ಜಿಲ್ಲೆಯಲ್ಲಿ, ಕಾಡಿನಲ್ಲಿ ಕಡಿದು ಹಾಕಿದ ಮರಗಳನ್ನು ಅ.ಅ. ನಿಗಮದ ಸಿಬ್ಬಂದಿ ಕಾಡಿನಿಂದ ಹೊರಗೆ ಮಾರಾಟಕ್ಕಾಗಿ ಒಯ್ಯುವುದನ್ನು ಬುಡಕಟ್ಟು ಹಳ್ಳಿಗಳ ಜನರು ತಡೆಗಟ್ಟಿದರು.
೨೦೧೪ರಲ್ಲಿ ಪಶ್ಚಿಮ ಬಂಗಾಳದ ಕೂಚ್‍ಬೆಹರಿನಲ್ಲಿ ಕಾಡಿನ ಮರಗಳನ್ನು ಕಡಿಯಲು ಅ.ಅ. ನಿಗಮಕ್ಕೆ ಅನುಮತಿ ನೀಡಬೇಕೆಂದು ವಲಯ ಅರಣ್ಯಾಧಿಕಾರಿ ಗ್ರಾಮಸಭೆಯನ್ನು ಕೇಳಿಕೊಂಡಿದ್ದರು; ಆದರೆ ಅಲ್ಲಿನ ಅರಣ್ಯದೊಳಗಿನ ಹಳ್ಳಿಗಳ ನಿವಾಸಿಗಳು “ಅದು ಸಾಧ್ಯವಿಲ್ಲ” ಎಂದರು. ಆ ಗ್ರಾಮಸಭೆ ಸರ್ವೆ ನಡೆಸಿದಾಗ ಮರಕಡಿಯುವ ಯೋಜನೆಯಂತೆ ಸ್ಥಳೀಯ ಮರಜಾತಿಗಳ ೧,೭೦೦ಕ್ಕಿಂತ ಜಾಸ್ತಿ ಮರಗಳನ್ನು ಕಡಿಯಲಿದ್ದಾರೆಂದು ತಿಳಿದು ಬಂತು. ಆದ್ದರಿಂದ ಅಲ್ಲಿನ ಗ್ರಾಮಸಬೆ ಅ.ಅ. ನಿಗಮದ ಅರ್ಜಿಯನ್ನು ತಿರಸ್ಕರಿಸಿತು.
೧೯೭೨ರ ನಂತರ ಸ್ಥಾಪನೆಯಾಗಿರುವ ಈ ಅರಣ್ಯ ಅಭಿವೃದ್ಧಿ ನಿಗಮಗಳು ಪ್ರಾಕೃತಿಕ ಅರಣ್ಯಗಳ ವ್ಯಾಪಕ ಪರಿವರ್ತನೆಗೆ ಕಾರಣವಾಗಿವೆ; ಅಂದರೆ ಪ್ರಾಕೃತಿಕ ಅರಣ್ಯಗಳನ್ನು ನಾಶ ಮಾಡಿ, ಅಲ್ಲಿ ತೇಗ, ನೀಲಗಿರಿ, ಗಾಳಿ ಮರಗಳ ತೋಪು ಬೆಳೆಸಿವೆ. ಕೆಲವೆಡೆ ಗೇರು, ಕಾಫಿ ಮತ್ತು ರಬ್ಬರ್ ಪ್ಲಾಂಟೇಷನುಗಳನ್ನೂ ಎಬ್ಬಿಸಿವೆ. ಗುರುತಿಸಲಾದ ಅರಣ್ಯ ಪ್ರದೇಶಗಳ ಕಾಡಿನಮರಗಳನ್ನು ಕಡಿದು ಮಾರುವ ಅ.ಅ. ನಿಗಮಗಳು ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಲಕ್ಷಗಟ್ಟಲೆ ಸ್ಥಳೀಯ ಜಾತಿಯ ಮರಗಳನ್ನು ಬೇಕಾಬಿಟ್ಟಿ ಕಡಿದು, ಮಾರಿ, ಲಾಭದ ಕೊಳ್ಳೆ ಹೊಡೆದಿವೆ.
೨೦೧೪ರಲ್ಲಿ ಮಹಾರಾಷ್ಟ್ರದ ಗಡ್‍ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಗಳಲ್ಲಿ ಅ.ಅ. ನಿಗಮಕ್ಕೆ ೧೦,೦೦೦ ಹೆಕ್ಟೇರ್ ಅರಣ್ಯ ಪ್ರದೇಶ ನೀಡಲಾಯಿತು. ಅಲ್ಲಿ ತೇಗದ ಪ್ಲಾಂಟೇಷನ್ ಬೆಳೆಸಲಿಕ್ಕಾಗಿ ನಿಗಮವು ಪ್ರಾಕೃತಿಕ ಅರಣ್ಯವನ್ನು ಧ್ವಂಸ ಮಾಡಲು ಶುರು ಮಾಡಿತು. ಇದನ್ನು ಪ್ರತಿಭಟಿಸಿದ ಸ್ಥಳೀಯ ಸಮುದಾಯಗಳ ಜನರು, ನಿಗಮದ ಕೆಲಸಕ್ಕೆ ಯಾರೂ ಹೋಗದಂತೆ ತಡೆದರು. ಮಾತ್ರವಲ್ಲ, ಮುಂಬೈ ಹೈಕೋರ್ಟಿನ ನಾಗಪುರ ಪೀಠದಲ್ಲಿ  ದಾವೆ ಹೂಡಿದರು. ಆ ದಾವೆಯನ್ನು ರಾಷ್ಟ್ರೀಯ ಹಸುರು ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ.
ವಾಣಿಜ್ಯ ಅರಣ್ಯ ಬೆಳೆಸುವ ಯೋಜನೆಯನ್ನು ಸರಕಾರ ಮೊದಲು ಪ್ರಸ್ತಾಪಿಸಿದ್ದು ೨೦೧೫ರಲ್ಲಿ – ಅರಣ್ಯೀಕರಣದಲ್ಲಿ ಖಾಸಗಿ ಭಾಗವಹಿಸುವಿಕೆ ಬಗೆಗಿನ ಕರಡು ಯೋಜನೆಯಲ್ಲಿ. ಇದರ ಉದ್ದೇಶ ಅರಣ್ಯ ಜಮೀನಿನಲ್ಲಿ ಪ್ಲಾಂಟೇಷನ್ ಬೆಳೆಸಲು ಖಾಸಗಿ ರಂಗದವರಿಗೆ ಅವಕಾಶ ನೀಡುವುದು. ಇದರಲ್ಲಿ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ “ಅರಣ್ಯ ನಿಧಿ” ಸ್ಥಾಪಿಸುವ ಪ್ರಸ್ತಾಪವೂ ಇದೆ. ಆದರೆ, ಇಂತಹ ಅರಣ್ಯಗಳು ವಾಣಿಜ್ಯ ಉದ್ದೇಶಕ್ಕಾಗಿ ಮೋಪಿನ ಕೊಯ್ಲು ಹೆಚ್ಚಿಸಲಿವೆ ಎಂಬುದು ಪರಿಣತರ ಅಭಿಪ್ರಾಯ. ಬ್ರಿಟಿಷ್ ಆಡಳಿತ ಅವಧಿಯಲ್ಲಿ ಬ್ರಿಟಿಷರು ಇದನ್ನೇ ಮಾಡಿ ನಮ್ಮ ಅರಣ್ಯ ನಾಶ ಮಾಡಿದ್ದರು.
ಈ ಯೋಜನೆ ೧೯೮೮ರ ರಾಷ್ಟ್ರೀಯ ಅರಣ್ಯ ನೀತಿಗೆ ವಿರುದ್ಧವಾಗಿದೆ. ಯಾಕೆಂದರೆ ಅದರ ಉದ್ದೇಶ ಆದಾಯ ಹೆಚ್ಚಳವಲ್ಲ; ಬದಲಾಗಿ, ಇಕಾಲಜಿ ರಕ್ಷಣೆ ಮತ್ತು ಜೀವನೋಪಾಯ ಒದಗಣೆ. “ಖಾಸಗಿ ಕಂಪೆನಿಗಳ ಮೂಲಕ ವಾಣಿಜ್ಯ ಅರಣ್ಯ ಬೆಳೆಸಿ ಲಾಭ ಬಾಚಿಕೊಂಡದ್ದು ಬ್ರಿಟಿಷರು. ಇದರಿಂದಾಗಿ ಇಕಾಲಜಿಗೆ ಧಕ್ಕೆಯಾಯಿತು” ಎನ್ನುತ್ತಾರ ಸಮುದಾಯ ಅರಣ್ಯ ಹಕ್ಕು – ಅಧ್ಯಯನ ಮತ್ತು ಹಕ್ಕೊತ್ತಾಯ ಎಂಬ ಲಾಭ-ರಹಿತ ಸಂಸ್ಥೆಯ ತುಷಾರ್ ಡಾಶ್.
ವಾಣಿಜ್ಯ ಅರಣ್ಯಗಳು ಅರಣ್ಯ ಹಕ್ಕು ಕಾಯಿದೆಯನ್ನು ಉಲ್ಲಂಘಿಸುತ್ತವೆ ಮತ್ತು ಅರಣ್ಯವಾಸಿ ಸಮುದಾಯಗಳನ್ನು ಕಿತ್ತೊಗೆಯುತ್ತವೆ ಎಂಬುದು ನಿರ್ವಿವಾದ. ಉದಾಹರಣೆಗೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ, ಅರಣ್ಯ ಹಕ್ಕು ಕಾಯಿದೆ ಅನುಸಾರ ಅರಣ್ಯವಾಸಿಗಳು ಸಲ್ಲಿಸಿದ ಹಕ್ಕೊತ್ತಾಯ ಅರ್ಜಿಗಳಲ್ಲಿ ಗರಿಷ್ಠ ಸಂಖ್ಯೆಯ ಅರ್ಜಿಗಳನ್ನು ತಿರಸ್ಕರಿಸಿದ್ದು ರಕ್ತಚಂದನದ ಪ್ಲಾಂಟೇಷನ್ ಪ್ರದೇಶಗಳಲ್ಲಿ. ಬೆಲೆಬಾಳುವ ಆ ಮರಗಳು ಕೋಟಿಗಟ್ಟಲೆ ರೂಪಾಯಿ ಆದಾಯ ತರುತ್ತವೆ ಎಂಬ ಕಾರಣ ಮುಂದೊಡ್ಡಿ, ಆ ಎರಡು ರಾಜ್ಯಗಳ ಅರಣ್ಯ ಇಲಾಖೆಗಳು ಅರಣ್ಯವಾಸಿ ಸಮುದಾಯಗಳ ಜನರ ಜೀವನೋಪಾಯದ ನೆಲೆಯಾದ ಹಕ್ಕೊತ್ತಾಯದ ಅರ್ಜಿಗಳನ್ನೇ ತಿರಸ್ಕರಿಸಿವೆ!
ಇದು ಕಡುಬಡತನದಲ್ಲಿ ಬದುಕುತ್ತಿರುವ ಅರಣ್ಯವಾಸಿ ಜನರ ಜೀವನೋಪಾಯ ಮತ್ತು ವಾಣಿಜ್ಯ ಅರಣ್ಯಗಳ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿ ದುಡ್ಡು ಮಾಡುವ ದಂಧೆಯ ತಾಕಲಾಟ.