My Books
ಲೇಖಕರು: ಡಾ. ಮೀನಗುಂಡಿ ಸುಬ್ರಹ್ಮಣ್ಯಮ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1988 12ನೇ ಮುದ್ರಣ: 2023 ಪುಟ: 312 ಬೆಲೆ: ರೂ. 300/-
ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ ಮಿಕ್ಕಿರುವಾಗ ಸಂಕೋಚವಿಲ್ಲದೆ ಸೈಕಾಲಜಿಯ ಶಿಬಿರಗಳಲ್ಲಿ ಭಾಗವಹಿಸಿ, ಜೀವನದ ಸುಖ ಪಡೆಯುವ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾಗ್ಯವಂತರು …. ನನಗೆ ಖುಷಿ ಕೊಡುತ್ತಾರೆ.” ಅಂತಹ ಭಾಗ್ಯವಂತರಾಗಲು ಈ ಪುಸ್ತಕದ ಓದು ಮತ್ತು ಮರುಓದು ಖಂಡಿತ ಸಹಾಯ ಮಾಡುತ್ತದೆ.
“ಮೊದಲ ಹೆಜ್ಜೆ ಇಡುವ ಮುನ್ನ …" (ಮುನ್ನುಡಿ) ಲೇಖಕರು ಓದುಗರಿಗೆ ತಿಳಿಸುವ ಸಂಗತಿಗಳು: "ಈ ಪುಸ್ತಕದ ವಿಷಯ ಮನಸ್ಸು ಅಥವಾ ಮನಶ್ಶಾಸ್ತ್ರ ಅಲ್ಲ. ಈ ಪುಸ್ತಕ ಬರೆದಿರುವುದು ಮನುಷ್ಯರ ಬಗ್ಗೆ. ಎಂದರೆ ನಮ್ಮ ಬಗ್ಗೆ, ನಮ್ಮ ಸಹವರ್ತಿಗಳ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ.
ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ವೈಜ್ನಾನಿಕ ಪಂಥಗಳು ಇವೆ. ಇವುಗಳಲ್ಲಿ ಪಾಶ್ಯಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತ ಮತ್ತು 1970ರಿಂದೀಚೆಗೆ ಭಾರತವೂ ಸೇರಿದಂತೆ ವಿಶ್ವಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಎರಡು ಪಂಥಗಳು ಗೆಸ್ಟಾಲ್ಟ್ ಥೆರಪಿ ಮತ್ತು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್ (ಟಿ.ಎ.).
ಲೇಖಕರು: ಶಿವಾನಂದ ಕಳವೆ
ಪ್ರಕಾಶಕರು: ಕಾವ್ಯಕಲಾ ಪ್ರಕಾಶನ, ವಿಜಯನಗರ, ಬೆಂಗಳೂರು
ಪ್ರಕಟ: 2003 ಪುಟ: 174 ವರ್ಣ ಪುಟ: 23 ಬೆಲೆ: ರೂ. 160/-
ಉತ್ತರಕನ್ನಡದ ಹೆಸರುವಾಸಿ ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅಪರೂಪದ ಪುಸ್ತಕವಿದು. ಕಾಲುದಾರಿಯಲ್ಲಿ ಅಡ್ಡಾಡುವ, ಬೆಟ್ಟಗುಡ್ಡಗಳನ್ನು ಏರಿಳಿಯುವ ಶಿವಾನಂದ ಕಳವೆ ಪ್ರಾಣಿ-ಪಕ್ಷಿ-ಕೀಟಗಳಿಗೆ ದನಿ ಕೊಡುತ್ತಾರೆ. ಗದ್ದೆತೋಟಗಳ ನಡುವೆ ನಡೆಯುತ್ತಾ, ಬೈಕ್ ಓಡಿಸುತ್ತಾ ಉತ್ತರಕನ್ನಡದ ಮೂಲೆಮೂಲೆಯ ಹಳ್ಳಿ ತಲಪುವ ಅವರು ಗುಡಿಸಲುಗಳ ಒಳಗಿರೋ ಮಾತುಗಳಿಗೆ ಧ್ವನಿಯಾಗುತ್ತಾರೆ. ಎಲ್ಲ ದನಿಗಳಿಗೂ ಅಕ್ಷರದ ರೂಪ ನೀಡಿ, ನಮ್ಮೆದುರು ಅದ್ಭುತ ಚಿತ್ತಾರ ಹರಡುತ್ತಾರೆ.
“ಸುದ್ದಿ ಕಟ್ಟೆಗೆ ಹೆಜ್ಜೆ” ಎಂಬ ಮುನ್ನುಡಿಯಲ್ಲಿ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾದ ಹಳ್ಳಿಗಾಡಿನ ತನ್ನ ಆಯ್ದ ನುಡಿಚಿತ್ರಗಳ ಹಿನ್ನೆಲೆಯನ್ನು ಶಿವಾನಂದ ಕಳವೆ ಬಿಡಿಸಿಟ್ಟ ಪರಿ ಹೀಗೆ: "ಕಾಡುಗುಡ್ಡ ಕಾಲುದಾರಿಯಲ್ಲಿ ನಡೆದು ಹೆದ್ದಾರಿಯ ಸುದ್ದಿ ಕಟ್ಟೆ ಸೇರಬೇಕಿತ್ತು. ಓಡುವ ಅವಸರ ಅಸಾಧ್ಯವೆಂದು ದಾರಿಯೇ ಸಾರುತ್ತಿತ್ತು. ಬಿದಿರಿನ ದಣಪೆ ದಾಟಿದರೆ ಆಚೆ ಹುಲ್ಲು ಗುಡಿಸಲು, ಅಣಲೆಕಾಯಿ ಮಸಿ ಬಳಿದ ಕಪ್ಪು ನೆಲ, ಅಲ್ಲಿ ಈಚಲು ಹುಲ್ಲಿನ ಚಾಪೆಯಲ್ಲಿ ಕೂತು ನೀರುಬೆಲ್ಲ ಕುಡಿಯುವಾಗ ಕಾಡಲ್ಲಿ ಅಮೃತ ಸಿಕ್ಕಿದಂತೆ. ಹಳ್ಳದ ನೀರು ಕುಡಿದು ನಾಲ್ಕಾರು ತಾಸು ಹಳ್ಳಿ ಹುಡುಕಿ ನಡೆದದ್ದೇ ನಡೆದದ್ದು. ಆ ದಿನಗಳಲ್ಲಿ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಚಿತ್ರಗಳು ನೆಗೆಟಿವ್‌ನಲ್ಲಿ ಈಗೀಗ ಮಾಸುತ್ತಿವೆ. ನೆನಪುಗಳು ಮಾತ್ರ ಎಂದೂ ಮರೆಯದವು.
ಲೇಖಕರು: ಡಾ. ಸಿ. ಆರ್. ಚಂದ್ರಶೇಖರ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1992 12ನೇ ಮುದ್ರಣ: 2014 ಪುಟ: 216 ಬೆಲೆ: ರೂ. 100/-
ಕನ್ನಡದ ಸುಪ್ರಸಿದ್ಧ ಲೇಖಕ ಡಾ. ಸಿ.ಆರ್. ಚಂದ್ರಶೇಖರ್ ಬರೆದ ಪುಸ್ತಕವಿದು. ಅವರು ಕನ್ನಡ ಮತ್ತು ಇಂಗ್ಲಿಷಿನಲ್ಲಿ 110ಕ್ಕಿಂತ ಅಧಿಕ ಪುಸ್ತಕಗಳನ್ನು ಬರೆದವರು.
ಈ ಪುಸ್ತಕದ ಮುನ್ನುಡಿಯಲ್ಲಿ ಆರೋಗ್ಯವಂತ ವ್ಯಕ್ತಿಯ ಲಕ್ಷಣಗಳನ್ನು ಅವರು ಹೀಗೆಂದು ತಿಳಿಸಿದ್ದಾರೆ: “ಒಬ್ಬ ವ್ಯಕ್ತಿ ಆರೋಗ್ಯವಂತನಾದ, ಉಪಯುಕ್ತ ಹಾಗೂ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳಬೇಕಾದರೆ, ಬರಿಯ ದೇಹ ಗಟ್ಟಿ ಮುಟ್ಟಾಗಿದ್ದರೆ ಸಾಲದು. ಮನಸ್ಸೂ ಕೂಡ ಸದೃಢವಾಗಿ ಆರೋಗ್ಯಕರವಾಗಿರಬೇಕು. ಆರೋಗ್ಯಕರ ಮನಸ್ಸಿನ ಲಕ್ಷಣಗಳಿವು: ಸರಾಗವಾಗಿ, ಸುಸಂಸಬದ್ಧವಾಗಿ ಆಲೋಚಿಸುವುದು, ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರವನ್ನು ಕಂಡು ಹಿಡಿಯಲು ಯತ್ನಿಸುವುದು, ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಯಥಾಸ್ಥಿತಿಯಲ್ಲಿ ಅರ್ಥ ಮಾಡಿಕೊಂಡು, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವುದು; ಸಮಯಸಂದರ್ಭಗಳಿಗೆ ತಕ್ಕಂತಹ ಭಾವನೆಗಳನ್ನು ಪ್ರಕಟಿಸುವುದು, ಏಕಾಗ್ರತೆಯಿಂದ ಯಾವುದೇ ವಿಷಯವನ್ನು ಗ್ರಹಿಸುವುದು, ಗ್ರಹಿಸಿದ್ದನ್ನು ಹಿಂದೆ ಅನುಭವಿಸಿದ್ದನ್ನು ನೆನಪಿನಲ್ಲಿಟ್ಟುಕೊಂಡು, ಆ ಹಿನ್ನೆಲೆಯಲ್ಲಿ ತನ್ನ ಕ್ರಿಯೆ ಪ್ರಕ್ರಿಯೆಗಳನ್ನು ನಿರ್ಧರಿಸುವುದು, ಸಾಮಾಜಿಕ, ನೈತಿಕ, ಧಾರ್ಮಿಕ ನೀತಿನಿಯಮಾವಳಿಗಳನ್ನು ಕಲಿತುಕೊಂಡು ಬಾಳುವುದು, ತನ್ನ ಆಸೆ ಆಕಾಂಕ್ಷೆಗಳನ್ನು ಒಂದು ಮಿತಿಯಲ್ಲಿಟ್ಟುಕೊಂಡು ಅವನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದು, ಮಾನವೀಯ ಗುಣಗಳನ್ನು ಪ್ರದರ್ಶಿಸುವುದು, ಕಷ್ಟ ದುರಂತಗಳು ಎದುರಾದಾಗ ಸಮತೋಲನವನ್ನು ಕಳೆದುಕೊಳ್ಳದೆ ಮುನ್ನಡೆಯುವುದು ಇತ್ಯಾದಿ.”
ಲೇಖಕರು: ಡಾ. ಮೀನಗುಂಡಿ ಸುಬ್ರಹ್ಮಣ್ಯ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2002 ಪುಟ: 128 ಬೆಲೆ: ರೂ. 50/-
ಡಾ. ಮೀನಗುಂಡಿ ಸುಬ್ರಹ್ಮಣ್ಯ ಅವರ ಜನಪ್ರಿಯ ಪುಸ್ತಕ “ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ?” ಅದರ 2ನೇ ಭಾಗ ಈ ಪುಸ್ತಕ. ಇದರಲ್ಲಿವೆ ಒಂಭತ್ತು ವೃತ್ತಾಂತಗಳು ಮತ್ತು ಎರಡು ಲೇಖನಗಳು: “ವಿಪಶ್ಯನ ಧ್ಯಾನ ಶಿಬಿರ - ಒಂದು ಅನುಭವ” ಮತ್ತು “ವಿಜ್ನಾನಕ್ಕೆ ಅಪಚಾರ.”
ಹಲವರು ಮಾನಸಿಕ ಸಮಸ್ಯೆಯಿಂದ ಸಂಕಟ ಪಡುತ್ತಾ ಇರುತ್ತಾರೆ - ಒಂದೆರಡಲ್ಲ, ಹಲವಾರು ದಶಕಗಳ ಕಾಲ. ಇಲ್ಲಿನ ವೃತ್ತಾಂತಗಳನ್ನು ಓದಿದಾಗ ಅವರು ಎಷ್ಟು ಸುಲಭವಾಗಿ ತಮ್ಮ ಸಂಕಟ ಹೋಗಲಾಡಿಸಿಕೊಳ್ಳಬಹುದು ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ, ನಮಗೆ ಹೊಟ್ಟೆನೋವು ಅಥವಾ ತಲೆನೋವು ಬಂದಾಗ ನಾವು ಡಾಕ್ಟರ್ ಬಳಿ ಹೋಗಿ ಚಿಕಿತ್ಸೆ ಪಡೆದು ಸಂಕಟದಿಂದ ಮುಕ್ತರಾಗುವಂತೆಯೇ ಮಾನಸಿಕ ಸಮಸ್ಯೆ ಇದ್ದಾಗಲೂ ಅದರಿಂದ ಮುಕ್ತರಾಗಲು ನಾವು ಸೈಕೊಥೆರಪಿಸ್ಟ್ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಮುನ್ನುಡಿಯಲ್ಲಿರುವ ಲೇಖಕರ ಸಲಹೆಗಳನ್ನು ಅನುಸರಿಸುವುದುಬಹಳ ಮುಖ್ಯ: “ವ್ಯಕ್ತಿಯೊಬ್ಬ ಇತರರೊಡನೆ ಮತ್ತು ತನ್ನೊಡನೆ ನಡೆದುಕೊಳ್ಳುವ ರೀತಿಯನ್ನು ವರ್ತನೆ ಎಂದು ಸ್ಥೂಲವಾಗಿ ವ್ಯಾಖ್ಯಾನಿಸ ಬಹುದು. ಸಮಾಜ ಮತ್ತು ಕಾನೂನು, ಈ ಎರಡರಲ್ಲಿ ಒಂದಾದರೂ ಒಪ್ಪಿಕೊಳ್ಳುವಂತೆ ತನಗೆ ಬೇಕಾದದ್ದನ್ನು ಪಡೆಯುವ ವರ್ತನೆಯನ್ನು ಯಶಸ್ವಿ ಎಂದೂ, ತನಗೆ ಬೇಕಾದದ್ದನ್ನು ಪಡೆಯದಂತಿರುವ ವರ್ತನೆಯನ್ನು ಅಯಶಸ್ವಿ ಎಂದು ಕರೆಯಲಾಗುತ್ತದೆ.
ಲೇಖಕರು: ಎಸ್. ಆರ್. ಗೌತಮ್, ಅಡ್ವೋಕೇಟ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2002 ಎಂಟನೇ ಮುದ್ರಣ: 2023 ಪುಟ: 184 ಬೆಲೆ: ರೂ. 125/-
ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ.
ಇದರ ಲೇಖಕರಾದ ಅಡ್ವೋಕೇಟ್ ಎಸ್. ಆರ್. ಗೌತಮ್ ಪುಸ್ತಕದ ಹಿನ್ನೆಲೆಯ ಬಗ್ಗೆ ಹೀಗೆ “ಅರಿಕೆ" ಮಾಡಿಕೊಂಡಿದ್ದಾರೆ:
“ಈಗ್ಗೆ ಕೆಲವು ವರ್ಷಗಳ ಹಿಂದೆ “ನಿತ್ಯಜೀವನದಲ್ಲಿ ಕಾನೂನು" ಎಂಬ ಶೀರ್ಷಿಕೆಯ ಅಡಿಯಲ್ಲಿ ಎರಡು ಪುಸ್ತಕಗಳನ್ನು ಬರೆದು ಅವುಗಳಲ್ಲಿ ಪೌರ ಕಾನೂನಿನ ಹಲವು ಮುಖಗಳನ್ನು ಕುರಿತು ಚರ್ಚಿಸಿದ್ದೆ. ನಿಜಜೀವನದ ಘಟನೆಗಳನ್ನು ಅಥವಾ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಕಾನೂನಿನ ಜಟಿಲತೆಗಳನ್ನು ಹಾಗೂ ಪೌರರು ವಹಿಸಬೇಕಾದ ಎಚ್ಚರಗಳನ್ನು ಸೂಚಿಸಿ ಬರೆದ ಆ ಪುಸ್ತಕಗಳು ತುಂಬ ಜನಪ್ರಿಯವಾಗಿ ಆರು ಆವೃತ್ತಿಗಳನ್ನು (....) ಕಂಡದ್ದು ನನಗೆ ತುಂಬ ಸಂತೋಷವನ್ನು ಹಾಗೂ ತೃಪ್ತಿಯನ್ನು ತಂದುಕೊಟ್ಟಿತು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಾನೂನಿನ ಸಂಕೀರ್ಣತೆಯನ್ನು ವಿವರಿಸಿದರೆ ಕನ್ನಡ ಜನತೆ ಅದನ್ನು ಸ್ವಾಗತಿಸುತ್ತಾರೆ ಎಂಬುದನ್ನು ಈ ಪುಸ್ತಕಗಳು ನಿದರ್ಶನಗೊಳಿಸಿದವು.
ಲೇಖಕರು: ಡಾ. ಮೀನಗುಂಡಿ ಸುಬ್ರಹ್ಮಣ್ಯಂ
ಪ್ರಕಾಶಕರು; ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1993 ಹತ್ತನೇ ಮುದ್ರಣ: 2023 ಪುಟ: 160 ಬೆಲೆ: ರೂ. 175/-
ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿಗೆ ನಾನು ಶಿಫಾರಸ್ ಮಾಡಿದ್ದೇನೆ. ಯಾಕೆಂದರೆ, ಪುಸ್ತಕದ ಶೀರ್ಷಿಕೆ, “ಈ ವರ್ತನೆಗಳು ನಿಮ್ಮಲ್ಲಿ ಇವೆಯೇ?” ಎಂದು ಕೇಳುತ್ತಿಲ್ಲ, ಬದಲಾಗಿ “... ಎಷ್ಟಿವೆ?” ಎಂದು ಕೇಳುತ್ತಿದೆ.
“ಅದು ಯಾಕೆ?" ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ ವಿವರಿಸಿದ್ದಾರೆ: “ಇಲ್ಲಿ ಎರಡು ಬಗೆಯ ಸಮಸ್ಯಾವರ್ತನೆಯ ಚಿತ್ರಣಗಳಿವೆ - ವೈಯುಕ್ತಿಕ ಅನಿಸಿಕೆಗಳಿಂದಾಗಿ ಜೀವನ ಸುಖದ ಮಟ್ಟ ಕೆಳಗಿಳಿಸಿಕೊಂಡು “ನನಗೆ ಮಾನಸಿಕ ಸಮಸ್ಯೆ" ಎಂದು ತಾನೇ ಚೀಟಿ ಅಂಟಿಸಿಕೊಂಡು ಕುಳಿತುಕೊಳ್ಳುವುದು (ಇಂಟ್ರಾ ಪರ್ಸನಲ್ ಡಿಸ್ಟರ್ಬೆನ್ಸ್) ಮತ್ತು ಸಂಪರ್ಕ ಶೈಲಿಯ ನ್ಯೂನತೆಯಿಂದಾಗಿ ಪರಸ್ಪರ ಸಂಬಂಧದಲ್ಲಿ ಕಹಿ ಸೃಷ್ಟಿಸಿಕೊಂಡು "ಆ ಇನ್ನೊಬ್ಬರಿಂದಾಗಿ ತನಗೆ ಸುಖವಿಲ್ಲ” ಎಂದು ಪ್ರತಿಪಾದಿಸುತ್ತ ಕುಳಿತುಕೊಳ್ಳುವುದು (ಇಂಟರ್ ಪರ್ಸನಲ್ ಡಿಸ್ಟರ್ಬೆನ್ಸ್).
ಇಲ್ಲಿ ಬರುವ ವ್ಯಕ್ತಿಗಳ ಸಮಸ್ಯಾ ವರ್ತನೆಗಳನ್ನು, ನೀವು, ನಿಮ್ಮ ಸಹವರ್ತಿಗಳಲ್ಲಿ ಗುರುತಿಸಬಹುದು. ಅದು ಅರೆ ಪರಿಣಾಮಕಾರಿ ಓದು. ಇಲ್ಲಿ ಬರುವ ವ್ಯಕ್ತಿಗಳಲ್ಲಿ ನಿಮ್ಮನ್ನು ನೀವೇ ಗುರುತಿಸಿಕೊಂಡಿರಾದರೆ ಅದು ಪರಿಣಾಮಕಾರಿ ಓದು.
ರಚನೆ: ಅನಂತ ಭಟ್ ಪೊಳಲಿ
ಪ್ರಕಾಶಕರು: ಕಲ್ಕೂರ ಪ್ರಕಾಶನ, ಮಂಗಳೂರು
ಪ್ರಕಟ: 2017 ಪುಟ: 96 ಬೆಲೆ: ರೂ.75/-
ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ. ಅನಾಯಾಸವಾಗಿ ಮೂಡಿ ಬಂದಿರುವ ಚಿಂತನೆಗಳು ನಮ್ಮ ಮನ ಬೆಳಗಿಸುತ್ತವೆ.
"ನನ್ನ ನುಡಿ"ಯಲ್ಲಿ ಇವು “ಮಿಣುಕು ದೀಪಗಳ ಬೆಳಕ ಹಚ್ಚುವ" ಪ್ರಯತ್ನವೆಂದು ಇವುಗಳ ರಚನಾಕಾರ ಅನಂತ ಭಟ್ ಪೊಳಲಿ ಬರೆದಿದ್ದಾರೆ: “ಈ ಕೃತಿಯು ಒಂದು ಭಾವನಾತ್ಮಕವಾದ ವಿಷಯಗಳ ಸಂಗ್ರಹವಾಗಿದೆ. ಡಿ.ವಿ.ಜಿ.ಯವರ “ಮಂಕುತಿಮ್ಮನ ಕಗ್ಗ”ದ ಪ್ರಭಾವವು ಇದರ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಬಂದಿರುವ ವಿಚಾರಗಳೆಲ್ಲವೂ ಸ್ವಾನುಭವದ ಅಗ್ಗಿಷ್ಟಿಕೆಯಲ್ಲಿ ಸ್ಫುಟಗೊಂಡು ಬೆಳಗುವ, ನೈತಿಕ, ತಾತ್ವಿಕ, ವೈಚಾರಿಕ ಹಾಗೂ ಧಾರ್ಮಿಕ ಸಂದೇಶಗಳೆಂಬ ಬಂಗಾರದ ತುಣುಕುಗಳು. ಇಲ್ಲಿ ತೆರೆದಿಟ್ಟಿರುವ ವಿಚಾರಗಳೆಲ್ಲವು ಇಂದಿನ ಹಾಗೂ ಮುಂದಿನ ಯುವ ಪೀಳಿಗೆಗೆ ದಾರಿದೀಪವೆನಿಸಬಹುದು. ಅವರಿಗೆ ಇದು ತಮ್ಮ ಮುಂದಿನ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವಲ್ಲಿ ಸಹಾಯಕವಾಗಬಹುದೆಂಬುದು ನನ್ನ ಆಶಯ.
ಇಂದಿನ ಸಮಾಜದ ಆಗುಹೋಗುಗಳು ಏರುಪೇರುಗಳ ನಡುವೆ ಜೀವನವನ್ನು ಸುಗಮವಾಗಿ ಸಾಗಿಸಲು ಜನರು ದೈಹಿಕವಾಗು, ಮಾನಸಿಕವಾಗಿ ಹಾಗೂ ಸಾಂಸಾರಿಕವಾಗಿ ದೃಢತೆಯನ್ನು ಸಾಧಿಸುವುದು ಸುಲಭ ವಿಚಾರವಲ್ಲ. ದೈವಿಕವಾದ ಭಕ್ತಿಶ್ರದ್ಧೆಗಳೊಂದಿಗೆ ಜೀವನದಲ್ಲಿನ ಹಲವು ಸಂಕೀರ್ಣ ಘಟ್ಟಗಳನ್ನು ನಿರಾತಂಕವಾಗಿ ದಾಟುವಲ್ಲಿ, ಹಿರಿಯ ಕಿರಿಯರಾದಿಯಾಗಿ ಎಲ್ಲರಿಗೂ ಈ "ಕಗ್ಗ"ವು ಶಾಯಕವಾಗ ಬಹುದೆಂಬುದು ನನ್ನ ಅನಿಸಿಕೆ.”
ಲೇಖಕರು: ವಿನಾಯಕ ಕೋಡ್ಸರ ಮತ್ತು ಸುಷ್ಮಾ ಚಕ್ರೆ
ಪ್ರಕಾಶಕರು: ಮಿಥಿಲ ಪ್ರಕಾಶನ, ರಾಜಾಜಿ ನಗರ, ಬೆಂಗಳೂರು
ಪ್ರಕಟ: 2018 ಪುಟ: 80 ಬೆಲೆ: ರೂ. 100/-
ಇದರಲ್ಲಿವೆ "ಬದುಕು ಬದಲಿಸುವ 18 ಜನರ” ಕಥೆಗಳು. ಪ್ರತಿಯೊಂದು ಕಥೆ ಓದಿದಾಗಲೂ ನಮ್ಮಲ್ಲಿ ಮೂಡುವ ಪ್ರಶ್ನೆ: ಬದುಕಿನಲ್ಲಿ ಹೀಗೂ ಗೆಲ್ಲಲು ಸಾಧ್ಯವೇ? “ಸಾಧ್ಯ" ಎಂದು ಆಗಷ್ಟೇ ಓದಿದ ಸತ್ಯಕಥೆ ಸಾರಿಸಾರಿ ಹೇಳುತ್ತದೆ.
“ಪ್ರತಿ ಅವಮಾನ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಲಿ” ಎಂಬ ಮೊದಲ ಬರಹವನ್ನು ಲೇಖಕರು ಶುರು ಮಾಡೋದು ಹೀಗೆ: "ನಾವು ಯಾವಾಗ್ಲು ಹಾಗೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವೇ ಮರೆತು ಬಿಡುತ್ತೇವೆ. "ಛೇ, ಅವನ್ನ ನೋಡು ಹಾಗಿದಾನೆ. ನನ್ನ ನೋಡು ಹೀಗಿದೀನಿ. ಎಲ್ಲದಕ್ಕೂ ಪಡೆದುಕೊಂಡು ಬಂದಿರಬೇಕು. ನನ್ನ ಅದೃಷ್ಟವೇ ಸರಿಯಿಲ್ಲ. ನನ್ನ ಟೈಂ ಖರಾಬಾಗಿದೆ” ಅಂತೆಲ್ಲ ನಮ್ಮ ಸ್ಥಿತಿ ಕುರಿತು ನಾವೇ ನೊಂದುಕೊಳ್ಳುತ್ತೇವೆ. ನಿಜ, ಪ್ರತಿ ಮನುಷ್ಯನಿಗೂ ಅವನದ್ದೇ ಆದ ನೂರಾರು ಕನಸುಗಳು ಇರುತ್ತವೆ. … ನಾವು ಜಿದ್ದಿಗೆ ಬಿದ್ದು ಕೆಲವಷ್ಟು ನನಸು ಮಾಡಿಕೊಳ್ಳಬಹುದು. ಹಾಗೆ ಜಿದ್ದಿಗೆ ಬಿದ್ದು ಕನಸು ನನಸು ಮಾಡಿಕೊಂಡ ಅಸಾಮಾನ್ಯರ ಸಾಮಾನ್ಯ ಕಥೆಗಳು ಈ ಪುಸ್ತಕದಲ್ಲಿವೆ.”
ಲೇಖಕಿ: ಗೀತಾ ವಿಶ್ವನಾಥ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
2ನೇ ಮುದ್ರಣ: 2013 ಪುಟ: 116 ಬೆಲೆ: ರೂ.60/-
“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ.
"ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ್ಲರೂ, ಮುಖ್ಯವಾಗಿ ಮಹಿಳೆಯರು ಓದಲೇ ಬೇಕಾದ ಪುಸ್ತಕವಿದು. ಇವುಗಳ ಹಿನ್ನೆಲೆಯ ಬಗ್ಗೆ "ಓದುವ ಮುನ್ನ”ದಲ್ಲಿ ಲೇಖಕಿ ಬರೆದಿರುವ ಮಾತುಗಳು: “ಜೀವನದಲ್ಲಿ ಎಂದೋ ಕೇಳಿದ ಸುದ್ದಿಗಳು, ನಡೆದ ಘಾನೆಗಳು, ಭೆಟ್ಟಿಯಾದ ವ್ಯಕ್ತಿಗಳು ಎಲ್ಲವೂ ನನ್ನ ನೆನಪಿನ ಅಂತರಾಳದಲ್ಲಿ ಹುದುಗಿ ಕುಳಿತಿದ್ದವು. ಈಗ ಅವು ತಲೆ ಎತ್ತಿ ನನ್ನ ಕಲ್ಪನಾಧಾರೆಗೆ ಸಿಲುಕಿ, ಕಥಾಸಾಗರ ಸೇರಿದ್ದರ ಫಲವೇ “ಎಲೆ ಮರೆ ಹಣ್ಣುಗಳು”.
ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಸಮಾಜ ಎಂಬುದು ಮಾನವ ನಿರ್ಮಿತವಾದದ್ದು... ಪ್ರತಿ ಸಮಾಜವೂ ತನ್ನದೇ ಆದ ರೀತಿ, ನೀತಿ, ನಡವಳಿಕೆ, ಕಾನೂನಿನ ಚೌಕಟ್ಟನ್ನು ನಿರ್ಮಿಸಿರುತ್ತದೆ. ಈ ಚೌಕಟ್ಟಿನ ಒಳಗೆ ಹೊಂದಿಕೊಂಡು ಜೀವಿಸುವವರಿಗೆ, ಜೀವನ ಸುಗಮವಾಗಿ ಸಾಗುತ್ತದೆ. ಇಲ್ಲದಿದ್ದಲ್ಲಿ, ಸಮಾಜದ ಬಿರುಗಾಳಿಯನ್ನು ಎದುರಿಸಲು ಸಿದ್ಧರಾಗ ಬೇಕಾಗುತ್ತದೆ. ಆ ಬಿರುಗಾಳಿಯ ಕಾರಣಕರ್ತರು ಗಂಡಂದಿರೋ, ಬಂಧುಗಳೋ, ಕೊನೆಗೆ ವಿಧಿಯೋ, ಯಾರಾದರೂ ಆಗಿರಬಹುದು. ಇಂತಹ ಸಮಾಜದ ಬಿರುಗಾಳಿಯನ್ನು ಒಂಟಿಯಾಗಿ ನಿಂತು ಎದುರಿಸಿದ ಒಂಬತ್ತು ಮಹಿಳೆಯರ ವ್ಯಕ್ತಿಚಿತ್ರದಂತಿರುವ ಕಥೆಗಳು ಇವು…"
ಲೇಖಕರು: ಶಿವಾನಂದ ಕಳವೆ
ಪ್ರಕಾಶಕರು: ಮಿತ್ರ ಮಾಧ್ಯಮ, ಬೆಂಗಳೂರು
ಪ್ರಕಟ: 2001 ಪುಟ: 120 ಬೆಲೆ: ರೂ.36/-
“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ ಪುಸ್ತಕ. ಆದ್ದರಿಂದ ಇದು ತೀರಾ ಅಪರೂಪದ ಪುಸ್ತಕ.