My Books

Saturday, August 19, 2023 - 06:49

ಲೇಖಕಿ: ಸುಮಂಗಲಾ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2009          ಪುಟ: 150          ಬೆಲೆ: ರೂ.80/-

ಮಹಿಳೆಯ ಬದುಕಿನ ವಿವಿಧ ಮುಖಗಳನ್ನು ಹಾಗೂ ಭಾವಲೋಕದ ವಿವಿಧ ಬಣ್ಣಗಳನ್ನು ಚಿತ್ರಿಸುವ ಹದಿಮೂರು ಕತೆಗಳು ಸುಮಂಗಲಾ ಅವರ ಈ ಕಥಾ ಸಂಕಲನದಲ್ಲಿವೆ. “ಮುತ್ತಿನ ಬುಗುಡಿ” ಎಂಬ ಮೊದಲ ಕತೆ, ತನ್ನ ಕೊನೆಯ ದಿನಗಳಲ್ಲಿ ಕ್ಯಾನ್ಸರಿನಿಂದ ಜರ್ಝರಿತಳಾಗುವ ಅಜ್ಜಿಯೊಬ್ಬಳದು. ತನ್ನ ಅಂತ್ಯ ಸಮೀಪಿಸುತ್ತಿದ್ದಂತೆ, ಬದುಕಿನುದ್ದಕ್ಕೂ ತನ್ನ ಕಿವಿಯಲ್ಲಿದ್ದ ಮುತ್ತಿನ ಬುಗುಡಿಯನ್ನು ಅಚಾನಕ್ಕಾಗಿ ಎರಡನೆಯ ಮಗನ ಸ್ನೇಹಿತೆಗೆ ದಾನ ಮಾಡ್ತಾಳೆ. ಮೊದಲ ಸೊಸೆಗೆ ಅಥವಾ ಎರಡನೇ ಸೊಸೆಗೆ ಕೊಡಬಹುದಾಗಿತ್ತು. ಈ ಕ್ರಿಯೆಯ ಜಿಜ್ನಾಸೆ ಮತ್ತು ಆಕೆಯ ಮರಣಾ ನಂತರದ ಘಟನಾವಳಿಗಳು ಕತೆಯ ಹೂರಣ.

ಎರಡನೇ ಕತೆ ಸಂಕಲನದ ಶೀರ್ಷಿಕೆ “ಕಾಲಿಟ್ಟಲ್ಲಿ ಕಾಲುದಾರಿ”. ಕೆಲವು ದಿನಗಳ ರಜೆಯಲ್ಲಿ ದೂರದೂರಿನಿಂದ ತನ್ನೂರಿಗೆ ಮರಳಿದ ಯುವತಿ ತೆರೆದಿಡುವ ಕಥನ. ಅಲ್ಲಿ, ಅಪ್ಪ ಮತ್ತು ದಾಯಾದಿ ಅಣ್ಣನೊಂದಿಗೆ ಅವಳ ಪ್ರವಾಸ - ವರುಷಗಳ ಮುಂಚೆ ತನ್ನ ಅಪ್ಪ ಬಾಳಿದ್ದ, ಕೃಷಿ ಮಾಡುತ್ತಿದ್ದ, ಈಗ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾದ ಜಾಗಕ್ಕೆ. ಹಳೆಯ ದಿನಗಳನ್ನು ಅಪ್ಪ ನೆನೆಯುತ್ತಿದ್ದಂತೆ, ಇವಳಲ್ಲೂ ಭಾವನೆಗಳ ತಾಕಲಾಟ.

Saturday, August 19, 2023 - 06:38

ಲೇಖಕರು: ಎಚ್. ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ
ಪ್ರಕಟಣಾ ವರುಷ: 2008           ಪುಟ: 100          ಬೆಲೆ: ರೂ.100/-

ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ 6 ಜನವರಿ 2007ರಿಂದ 26 ಎಪ್ರಿಲ್ 2008ರ ಅವಧಿಯಲ್ಲಿ ಅವರು ಬರೆದ 24 ಭಾಗಗಳ “ಉತ್ತರಾಯಣ" ಮತ್ತು ಇತರ ಹಲವು ಚಿಂತನೆಗೆ ಹಚ್ಚುವ ಕವನಗಳು ಇದರಲ್ಲಿವೆ.

ಈ ಹಿನ್ನೆಲೆಯಲ್ಲಿ, ಕವನ ಸಂಕಲನದ ಆರಂಭದಲ್ಲಿ ಕವಿ ಬರೆದುಕೊಂಡಿರುವ ಮಾತುಗಳ ಆಯ್ದ ಭಾಗ ಹೀಗಿದೆ: “ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವ ಶಾಶ್ವತವಾಗಿ ಅಗಲಿಬಿಟ್ಟಾಗ ಶೂನ್ಯಕ್ಕೆ ಬೇರೆಯದೇ ಅರ್ಥ ಹೊಳೆದಂತಾಯಿತು. ಲಕ್ಷೋಪಲಕ್ಷ ನಕ್ಷತ್ರಗಳಿಗೆ ಆಸರೆ ನೀಡಿರುವ ಆಕಾಶವನ್ನು ಶೂನ್ಯವೆಂದು ಕರೆಯಲಾದೀತೆ? ಬೆಳಗ್ಗೆ ಖಾಲಿ ನೀಲಿಯಾಗಿದ್ದ ಗಗನ, ರಾತ್ರಿ ಎಣಿಸಲಾಗದಷ್ಟು ನಕ್ಷತ್ರಗಳನ್ನು ಮಿನುಗಿಸುತ್ತಾ ಶೂನ್ಯದ ಅರ್ಥ ತಿಳಿಯಿತಾ ಎಂದು ಹುಸಿ ನಗುತ್ತದೆ. ಶೂನ್ಯವೆಂದರೆ ಏನೂ ಇಲ್ಲದ್ದು ಅಲ್ಲ; ಎಲ್ಲವೂ ಉಳ್ಳದ್ದು ಎಂಬ ವಿಲಕ್ಷಣ ಅನುಭೂತಿ ಇಂಥ ವೇಳೆ ಮನಸ್ಸನ್ನು ಗಾಳಿಕೈಯಲ್ಲಿ ಸವರಿಕೊಂಡು ಹೋಗುತ್ತದೆ. ……..

Saturday, August 19, 2023 - 06:32

ಲೇಖಕರು: ವಿವೇಕ ಶಾನಭಾಗ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2005         ಪುಟ: 124          ಬೆಲೆ: ರೂ. 60/-

ಇಂಜಿನಿಯರಿಂಗ ಪದವೀಧರರದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ” ಎಂಬ ಈ ಸಂಕಲನದಲ್ಲಿವೆ ಅವರ ಒಂಭತ್ತು ಕತೆಗಳು.

ಇದಕ್ಕೆ ಅಕ್ಷರ ಕೆ. ವಿ. ಬರೆದಿರುವ ಬೆನ್ನುಡಿಯ ಮಾತುಗಳು ಇಲ್ಲಿನ ಕತೆಗಳ ಬಗ್ಗೆ ಕೆಲವು ಒಳನೋಟಗಳನ್ನು ಒದಗಿಸುತ್ತವೆ: "ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ. ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕತೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ - "ಒಬ್ಬ"ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ "ಮತ್ತೊಬ್ಬ"ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕತೆಯಲ್ಲಿ - ಊರಿಗೆಲ್ಲ “ನಿಗೂಢ"ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿ ಕೊಳ್ಳುತ್ತಾಳೆ. ಅದೇ ರೀತಿ - ಶಾಲಾ ಮಾಸ್ತರ, ಕಿರಾಣಿ ಅಂಗಡಿಯಾತ - ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನ ವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ.”

Saturday, August 19, 2023 - 06:23

ಲೇಖಕರು: ಎಂ. ಆರ್. ದತ್ತಾತ್ರಿ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2011          ಪುಟ: 264          ಬೆಲೆ: ರೂ. 150/-

ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ, ಅವರು ಸಿಂಗಪೂರ ತಲಪಿದ ದಿನವೇ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಎರಡೂ ಗಗನಚುಂಬಿ ಕಟ್ಟಡಗಳನ್ನು (ಅಪಹರಿಸಿದ ವಿಮಾನಗಳನ್ನು ಅವಕ್ಕೆ ಅಪ್ಪಳಿಸುವ ಮೂಲಕ) ಭಯೋತ್ಪಾದಕರು ಧ್ವಂಸ ಮಾಡಿದ್ದರು. ಅದರಲ್ಲೊಂದು ವಿಮಾನ ಇವರು ಪ್ರಯಾಣಿಸಬೇಕೆಂದಿದ್ದ, ಆದರೆ ಕೊನೆಯ ಕ್ಷಣದಲ್ಲಿ ಹೊಸ ಪ್ರಯಾಣದ ಪ್ಲಾನ್‌ ಅನುಸಾರ ಕೈಬಿಟ್ಟಿದ್ದ ವಿಮಾನ! ಆ ಸಂಗತಿ ತಿಳಿದಾಗ ಇಬ್ಬರಿಗೂ ಜೀವ ಬಾಯಿಗೆ ಬಂದಿತ್ತು.

ಅನಂತರ, ಲಾಸ್ ಏಂಜಲಿಸಿನ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡ ಶ್ರೀಕಾಂತ. ಹೊಸ ದೇಶ, ಹೊಸ ಊರು, ಹೊಸ ಕಂಪೆನಿ, ಹೊಸ ಉದ್ಯೋಗ - ಎಲ್ಲವೂ ಹೊಸತು. ಅಲ್ಲಿನ ಬದುಕಿನ ಪ್ರವಾಹದಲ್ಲಿ ಕೊಚ್ಚಿ ಹೋಗತೊಡಗಿದ. ಭಾರತದಲ್ಲೇ ಬದುಕಿ ಬಾಳುವವರು ಕನಸಿನಲ್ಲಿಯೂ ಕಲ್ಪಿಸಲಾಗದ ಸನ್ನಿವೇಶಗಳು ಅಲ್ಲಿ ಆಗಾಗ ಎದುರಾಗುತ್ತಿದ್ದವು. ಆ ಎಲ್ಲ ಸನ್ನಿವೇಶಗಳಲ್ಲಿ ನುಗ್ಗಿ ಬರುವ ತಲ್ಲಣಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಕಾದಂಬರಿಕಾರರು. ಇದೆಲ್ಲದರ ಜೊತೆಗೆ, ಕಥಾನಾಯಕ ಭಾರತದಲ್ಲಿದ್ದಾಗ ನಡೆದ ಘಟನಾವಳಿಗಳು ಹಾಸುಹೊಕ್ಕಾಗಿ ಕಾದಂಬರಿ ಬೆಳೆಯುತ್ತದೆ.

Saturday, August 19, 2023 - 06:17

ಲೇಖಕರು: ರಾ. ಕು. (ಆರ್. ವಿ. ಕುಲಕರ್ಣಿ)
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರಕಟಣೆಯ ವರುಷ: 2002          ಪುಟ: 182           ಬೆಲೆ: ರೂ. 100/-

"ರಾ. ಕು.” ಕಾವ್ಯನಾಮದಲ್ಲಿ ಬರೆಯುವ ಆರ್. ವಿ. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಮೊದಲ ಸಂಕಲನ ಇದು. ಇದರ ಸಂಪಾದಕರು ಲಲಿತ ಪ್ರಬಂಧಗಳ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಪ್ರಬಂಧದ ಜಾತಿ ಹೊರ ಜಗತ್ತಿನೊಡನೆ ಅತ್ಯಂತ ನಿಕಟ ಸಂಬಂಧವನ್ನಿಟ್ಟುಕೊಂದು ಬೆಳೆಯಬೇಕಾದದ್ದಿರುತ್ತದೆ. ಪತ್ರಿಕಾ ವ್ಯವಸಾಯಿಯೊಬ್ಬನನ್ನು ಬಿಟ್ಟರೆ ಸಾಹಿತ್ಯದಲ್ಲಿ ಪ್ರಬಂಧಕಾರನಷ್ಟು ಸಮೀಪದಲ್ಲಿ ಜೀವನವನ್ನು ಸಂದರ್ಶಿಸುವ ವ್ಯಕ್ತಿ ಬೇರೊಬ್ಬನಿರಲಾರನು. ಅಂತೆಯೇ ಇಂಥ ಬರವಣಿಗೆಗೆ ಬಂದೊದಗುವ ಗಂಡಾಂತರ ತೀರ ದೊಡ್ಡದಾಗಿರುತ್ತದೆ. ಲೇಖಕ ಇಲ್ಲಿ ಮುಖಾಮುಖಿಯಾಗಿ ಜೀವನವನ್ನು ನೋಡುತ್ತಾನೆ. ಓದುಗನೊದನೆ ಅದರ ಬಗ್ಗೆ ಮಾತನಾಡುತ್ತಾನೆ. ಶಿರೋನಾಮೆಯು ಸೂಚಿಸುವ ಮುಖ್ಯವಸ್ತುವನ್ನು ಧ್ರುವ ನಕ್ಷತ್ರವನ್ನಾಗಿಸಿ ಕೊಂಡು, ಸಂಸಾರದ ಪರಿಚಿತ ವಸ್ತುಗಳಲ್ಲಿ ತುಂಬು ಕಣ್ಣುಳ್ಳವನಾಗಿ, ಅವುಗಳ ಗುಂಟ ಇವನು ಪರಿಭ್ರಮಿಸುತ್ತಾನೆ. ತಿರುಗಾಟ, ವಿಷಯಾಂತರ ಈ ಸಾಹಿತ್ಯಪ್ರಕಾರದ ಮುಖ್ಯ ಗುಣವಾಗಿರುತ್ತದೆ ಮತ್ತು ಅಷ್ಟೇ ಅದು ಅವಗುಣವಾಗಿರುತ್ತದೆ. ಈ ಅವಗುಣವನ್ನು ರಾ. ಕು. ಕಲಾತ್ಮಕವಾಗಿ ಯಶಸ್ವಿಯಾಗಿ ಇಲ್ಲಿ ಎದುರಿಸಿದ್ದಾರೆ ಎಂದು ಹೇಳಬಹುದು……."

Friday, August 18, 2023 - 13:29

ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ, ಮೈಸೂರು
ಪ್ರಕಟಣೆಯ ವರುಷ: 2012 (17ನೇ ಮುದ್ರಣ)      ಪುಟ: 108     ಬೆಲೆ: ರೂ. 92/-

ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ ಮುದ್ರಣ 1933)

“ಮಲೆನಾಡಿನ ಚಿತ್ರಗಳು" ಮೂಡಿಬಂದ ಬಗೆಯನ್ನು ಮುನ್ನುಡಿಯಲ್ಲಿ ಕುವೆಂಪು ಅವರ ಆಪ್ತವಾಗಿ ಹೀಗೆ ತಿಳಿಸಿದ್ದಾರೆ: “ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲುವು ಗೆಲುವುಗಳನ್ನೂ ದೃಶ್ಯಗಳನ್ನೂ ಸನ್ನಿವೇಶಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು.” ಒಂದು ದಿನ ಸಾಯಂಕಾಲ ನಾನು ಶ್ರೀಮಾನ್ ವೆಂಕಣ್ಣಯ್ಯನವರೊಡನೆ (ಮೈಸೂರಿನ) ಕುಕ್ಕನಹಳ್ಳಿಯ ಕೆರೆಯ ಮೇಲೆ ವಾಯು ವಿಹಾರಕ್ಕಾಗಿ ಹೋಗಿದ್ದಾಗ ಯಾವುದೋ ಮಾತು ಬಂದು ಮಲೆನಾಡಿನ ಕೆಲವು ಅನುಭವಗಳನ್ನು ಹೇಳತೊಡಗಿದೆ. ಜೊತೆಯಲ್ಲಿ ತೀ.ನಂ.ಶ್ರೀ., ಡಿ.ಎಲ್.ನ. ಮೊದಲಾದ ಮಿತ್ರರೂ ಇದ್ದರು. ನಾವೆಲ್ಲರೂ ಹುಲುಸಾಗಿ ಹಸುರು ಹೊಮ್ಮಿ ಬೈಗುಗೆಂಪಿನ ಬಿಸಿಲಿನಲ್ಲಿ ಸುಮನೋಹರವಾಗಿದ್ದ ಕೆರೆಯಂಚಿನ ಬಯಲಿನಲ್ಲಿ ಕುಳಿತಿದ್ದೆವು. ಮೆಲ್ಲೆಲರು ಸುಖದಾಯಕವಾಗಿ ತೀಡುತ್ತಿತ್ತು. ಬಹಳ ಹೊತ್ತು ಕತೆ ಹೇಳಿದೆ. ಅವರೂ ಸಾವಧಾನದಿಂದ, ಅದಕ್ಕಿಂತಲೂ ಹೆಚ್ಚಾಗಿ ವಿಶ್ವಾಸದಿಂದ ಆಲಿಸಿದರು. ಎಲ್ಲ ಮುಗಿದ ಮೇಲೆ ವೆಂಕಣ್ಣಯ್ಯನವರು ಆ ಅನುಭವಗಳನ್ನು ಬರೆದರೆ ಚೆನ್ನಾಗಿರುತ್ತದೆ ಎಂದು ಸೂಚನೆ ಕೊಟ್ಟರು. ….."

Friday, August 18, 2023 - 13:25

ಲೇಖಕಿ: ಜಯಶ್ರೀ ಕಾಸರವಳ್ಳಿ
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರಕಟಣಾ ವರುಷ: 2014          ಪುಟ: 138           ಬೆಲೆ: ರೂ. 110/-

ಜಯಶ್ರೀ ಕಾಸರವಳ್ಳಿ ಅವರ ಎರಡನೆಯ ಕಥಾ ಸಂಕಲನ ಇದು. ಶಿವಮೊಗ್ಗದಲ್ಲಿ ಬಾಲ್ಯದ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದವರು. ಹಲವು ವರುಷ ಚೆನ್ನೈಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ಅನಂತರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು ಗುರುತಿಸಲ್ಪಟ್ಟಿರುವ ಜಯಶ್ರೀ, "ನನ್ನ ಮಾತಿ"ನಲ್ಲಿ ಬಾಲ್ಯದ ಘಟನೆಯೊಂದನ್ನು ಹಂಚಿಕೊಂಡು (ಮೂರು ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೊಬ್ಬಳು, ಗಂಡು ಮಗುವಿಗಾಗಿ ಮನೆಯವರೆಲ್ಲರ ಒತ್ತಾಯಕ್ಕೆ ಮತ್ತೆ ಗರ್ಭಿಣಿಯಾಗಿ, ಪುನಃ ಹೆಣ್ಣು ಹೆತ್ತಾಗ ಮಾಡುವ ಬಿಡುಗಡೆಯ ಉದ್ಗಾರ) ಹೀಗೆ ಬರೆಯುತ್ತಾರೆ: “ಬರೆಯುವ ಪ್ರತಿ ಕ್ಷಣದಲ್ಲೂ ಬಾಲ್ಯದ ಈ ಘಟನೆ ನನಗೆ ನೆನಪಿಗೆ ಬರುತ್ತಿರುತ್ತದೆ. ಪ್ರಾಯಶಃ ಎಲ್ಲವೂ ಒಂದು ಬಿಡುಗಡೆಯ ಪ್ರಯತ್ನವೇ. ಹತ್ತು ಹಲವು ಗೋಜಲುಗಳಿದೊಡಗೂಡಿದ ಪ್ರಸ್ತುತ ಸ್ಥಿತಿಯಲ್ಲಿ - ಪ್ರತಿಯೊಂದು ವಿಚಾರವೂ ಅಸ್ಪಷ್ಟ, ಅಗೋಚರಗಳ ಮೂಟೆ ಕಟ್ಟಿಕೊಳ್ಳುತ್ತಾ ನಮ್ಮಲ್ಲೇ ಅಸಂಗತವಾಗುತ್ತಿರುವಾಗ ಬರೆಯುವ ಪ್ರತಿ ಕ್ಷಣ - ಎಳೆ ಕಡಿಯದ ಶ್ಯಾವಿಗೆಯ ಧಾರೆಯಂತೆ ಅಕ್ಷರಗಳು ಸ್ಫುಟವಾಗಿ ಮೂಡಿ, ಕಾಗದದಲ್ಲಿ ನಿಖರ ರೂಪ ತಾಳಿ ಅಚ್ಚೊತ್ತಿಸಿಕೊಳ್ಳುತ್ತಾ ಸ್ಪಷ್ಟವಾಗುವ ಪರಿಯೇ ಎಷ್ಟೋ ಸಲ ನನಗೆ ಸೋಜಿಗ ತಂದಿದೆ.
ಕತೆ ಹೇಗೆ ಹುಟ್ಟುತ್ತದೆ ಎನ್ನುವುದಕ್ಕೆ ಇವತ್ತಿಗೂ ನನ್ನಲ್ಲಿ ಸ್ಪಷ್ಟ ಉತ್ತರವಿಲ್ಲ. ಆದರೆ ಹುಟ್ಟಿದ ನಂತರ ಮನಸ್ಸು ನಿಚ್ಚಳವಾಗಿ, ನಿರಾಳವಾಗುತ್ತ ಖಾಲಿಯಾಗುವ ಆ ಒಂದು ಘಳಿಗೆ, ಬಹುಶಃ ಬಿಡುಗಡೆಯ, ಸಂತಸದ ಕ್ಷಣ!”

Friday, August 18, 2023 - 13:21

ಲೇಖಕರು: ಜೆ. ಆರ್. ಲಕ್ಷ್ಮಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪ್ರಕಟಣೆಯ ವರುಷ: 2010 (10ನೇ ಮುದ್ರಣ)       ಪುಟ: 140     ಬೆಲೆ: ರೂ. 75/-

ಜೆ. ಆರ್. ಲಕ್ಷ್ಮಣ ರಾವ್ ಬರೆದಿರುವ ಈ ಪುಸ್ತಕ ವಿಜ್ನಾನಿಗಳ ಬಗೆಗಿನ ನಮ್ಮ ಕಲ್ಪನೆಗಳನ್ನೇ ಬುಡಮೇಲು ಮಾಡುತ್ತದೆ. ವಿಜ್ನಾನಿಗಳು ಮಹಾಮೇಧಾವಿಗಳು ಎಂಬುದು ಖಂಡಿತ. ಜಗತ್ತಿನಲ್ಲಿ ಯಾರಿಗೂ ಹೊಳೆಯದ ಐಡಿಯಾಗಳು ಅವರಿಗೆ ಹೊಳೆಯುತ್ತವೆ. ಯಾರಿಗೂ ದಕ್ಕದ ಒಳನೋಟಗಳು ಅವರ ಮನದಲ್ಲಿ ಮಿಂಚುತ್ತವೆ.

ಆದರೆ, ಬೇರೆ ಹಲವಾರು ವಿಷಯಗಳಲ್ಲಿ, ನಡವಳಿಕೆಗಳಲ್ಲಿ ಅವರು ನಮ್ಮೆಲ್ಲರಂತೆಯೇ. ಅವರಿಗೂ ಮರೆವು ಸಹಜ. ಎಲ್ಲಿಯ ವರೆಗೆಂದರೆ, ಒಬ್ಬ ವಿಜ್ನಾನಿಗೆ ಅಂಚೆಕಚೇರಿಯಲ್ಲಿ ಒಂದು ಪತ್ರ ಬರೆಯುತ್ತಿರುವಾಗ ತನ್ನ ಹೆಸರೇ ನೆನಪಿಗೆ ಬಾರದೆ ಅವರು ಪರದಾಡಿ ಬಿಟ್ಟರು. ಅವರೇ ಜಗದ್ವಿಖ್ಯಾತ ಗಣಿತಜ್ನ, ಸೈಬರ್ನೆಟಿಕ್ಸ್ ಶಾಸ್ತ್ರದ ಆದ್ಯ ಪ್ರವರ್ತಕ ನಾರ್ಬರ್ಟ್ ವೀನರ್.

Friday, August 18, 2023 - 13:18

ಲೇಖಕರು: ಗೊರೂರು ರಾಮಸ್ವಾಮಿ ಅಯ್ಯಂಗಾರ್
ಪ್ರಕಾಶಕರು: ಐಬಿಎಚ್ ಪ್ರಕಾಶನ, ಬೆಂಗಳೂರು
ಪ್ರಕಟಣಾ ವರುಷ: 2006 (10ನೇ ಮುದ್ರಣ)      ಪುಟ: 147      ಬೆಲೆ: ರೂ.60/-

ಭಾರತ ಸ್ವತಂತ್ರವಾದ ನಂತರ ಎರಡು ತಲೆಮಾರುಗಳ ಕರ್ನಾಟಕದ ಗ್ರಾಮೀಣ ಬದುಕನ್ನು ಆಪ್ತವಾಗಿ ಕಟ್ಟಿಕೊಡುವ ಪುಸ್ತಕ ಇದು. ಇದನ್ನು ಓದುತ್ತ ಹೋದಂತೆ, ಈಗಿನ ಹಳ್ಳಿಗಳು ಎಷ್ಟು ಬದಲಾಗಿವೆ ಎಂಬುದು ನಮ್ಮನ್ನು ಗಾಢವಾಗಿ ತಟ್ಟುತ್ತದೆ.

ಪುಸ್ತಕದ ಮುನ್ನುಡಿ ಬರೆದವರು “ಮಂಕುತಿಮ್ಮನ ಕಗ್ಗ" ಖ್ಯಾತಿಯ ಮಾನ್ಯ ಡಿ. ವಿ. ಗುಂಡಪ್ಪನವರು. ಹಾಸ್ಯ ಪ್ರಜ್ನೆ ಮತ್ತು ಹಾಸ್ಯದ ಸ್ವರೂಪದ ಬಗ್ಗೆ ಮುನ್ನುಡಿಯಲ್ಲಿ ಬರೆಯುತ್ತಾ, ಪಾಶ್ಚಾತ್ಯ ಜನರ ಬದುಕಿನ ಹಾಸ್ಯಪ್ರಸಂಗಗಳು ವಾರ ವಾರವೂ ದಿನ ದಿನವೂ ಹೇಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ. ಮುಂದುವರಿದು ಅವರು ಹೀಗೆ ಬರೆದಿದ್ದಾರೆ: “ಈ ಬಗೆಯ ಉಪಕಾರವು ನಮಗೆ ಶ್ರೀಮಾನ್ ರಾಮಸ್ವಾಮಯ್ಯಂಗಾರ್ಯರಂಥ ಲೇಖಕರಿಂದ ಆಗಬೇಕಾಗಿದೆ. ರಾಮಸ್ವಾಮ-ಯ್ಯಂಗಾರ್ಯರವರು ನಮ್ಮ ಸಮಾಜದ ಮುಖಕ್ಕೆ ಕನ್ನಡಿಯೆತ್ತಿ ಹಿಡಿದಿದ್ದಾರೆ. ಅದು ಪ್ರೀತಿ ಸಹಾನುಭೂತಿಗಳ ರಸದಿಂದ ಆಗಿರುವ ಕನ್ನಡಿ. ಆದಕಾರಣ ಅದರಲ್ಲಿಯ ಪ್ರತಿಬಿಂಬವು - ಅದರ ಮಚ್ಚೆಗಳೂ ಸೊಟ್ಟುಗಳೂ ಏನಿದ್ದರೂ ಅವೂ ಸೇರಿ - ಯಥಾರ್ಥವನ್ನು ಮೀರದೆ ಮನೋಹರವಾಗಿವೆ. ಅವರ ಬರವಣಿಗೆಯಲ್ಲಿ ಮೂರು ಗುಣಗಳನ್ನು ಕಾಣಬಹುದು: (೧) ಸಾಮಾನ್ಯ ಜನರ ಜೀವನದಲ್ಲಿ ಸಹಾನುಭೂತಿ (೨) ವರ್ಣನೆಯ ರೀತಿಯಲ್ಲಿ ಸ್ವಚ್ಛವೂ, ಲಲಿತವೂ ಆದ ಸ್ವಾಭಾವಿಕತೆ (೩) ಹಾಸ್ಯ ವಿನೋದಾವಕಾಶಗಳಲ್ಲಿ ಮರ್ಯಾದೆ ಮರೆಯದ ಕುತೂಹಲ. ಈ ಗುಣಗಳಿಂದ ಅವರ ಪುಸ್ತಕಗಳು ನಮ್ಮ ಹೊಸ ಸಾಹಿತ್ಯದಲ್ಲಿ ಮೇಲ್ತರಗತಿಗೆ ಸೇರತಕ್ಕುವಾಗಿವೆ.”

Friday, August 18, 2023 - 13:12

ಸಂಪಾದಕ: ವಿಷ್ಣು ನಾಯ್ಕ
ಪ್ರಕಾಶಕರು: ಶ್ರೀ ರಾಘವೇಂದ್ರ ಪ್ರಕಾಶನ, ಅಂಕೋಲಾ
ಪ್ರಕಟಣಾ ವರುಷ: 2006          ಪುಟ: 141           ಬೆಲೆ: ರೂ.70/-

ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ 13 ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು.

ಆ ಸ್ಫರ್ಧೆಗೆ ಸಲ್ಲಿಕೆಯಾದ 220 ಕತೆಗಳಲ್ಲಿ ಮೊದಲ ಬಹುಮಾನ ಪಡೆದ ಕತೆ “ನೀವೂ ದಾರ ಕಟ್ಟಿ”. ಫತೇಪುರಸಿಕ್ರಿಗೆ ಪ್ರವಾಸ ಹೋಗಿದ್ದ ದಂಪತಿಗಳಿಗೆ ಸೂಫಿ ಸಂತ ಸಲೀಂ ಕ್ರಿಸ್ತಿಯ ಸಮಾಧಿಯ ಕಿಂಡಿಯನ್ನು ತೋರಿಸಿ, ಪ್ರವಾಸಿ ಗೈಡ್ “….ಮಕ್ಕಳಿಲ್ಲದವರು ಈ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥ ಪೂರೈಸುತ್ತದಂತೆ. ಸರ್, ನೀವೂ ಹೋಗಿ ದಾರ ಕಟ್ಟಿ ಬನ್ನಿ” ಎನ್ನುತ್ತಾನೆ. ಆ ಪ್ರವಾಸಿ ಗೈಡ್ ವಿಕಲಚೇತನ. ಪ್ರವಾಸಕ್ಕೆ ಬಂದಿದ್ದ ವಿನಾಯಕನ ಹೆಂಡತಿ, ಪ್ರವಾಸಿ ಗೈಡಿಗೆ “ನೀವೂ ದಾರ ಕಟ್ಟಿ. ನಿಮ್ಮ ಸಂಗಡ ನಾವೂ ಬರುತ್ತೇವೆ” ಎನ್ನುತ್ತಾಳೆ. ಇಂದಿನ ಆಗುಹೋಗುಗಳ ಕೆಲವು ಸೂಕ್ಷ್ಮಗಳನ್ನು ನವಿರಾಗಿ ಸ್ಪರ್ಶಿಸುವ ಕತೆ, ಆ ಕ್ಷಣದಲ್ಲಿ ಮಾನವೀಯ ಮುಖವೊಂದನ್ನು ಅನಾವರಣಗೊಳಿಸುವ ಮೂಲಕ ಆಪ್ತವಾಗುತ್ತದೆ.

Pages