My Books
೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು ವಾರದವಧಿಗೆ ನಮ್ಮ ತರಗತಿ ಸಸ್ಪೆಂಡ್ ಆದರೂ ತರಗತಿಯ ಪುಂಡರ ಗುಂಪು ಶಿಸ್ತು ಕಲಿಯಲಿಲ್ಲ.
ಇಂತಹ ತರಗತಿಗೆ ಎರಡನೇ ವರುಷ ಕನ್ನಡ ಕಲಿಸಲು ಬಂದವರು ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು. ಪಾಠದ ಅವಧಿಯಲ್ಲಿ ಗುಂಡುಸೂಜಿ ಬಿದ್ದರೂ ಕೇಳಿಸುವಂತಹ ನಿಶ್ಶಬ್ದತೆಯನ್ನು ಒಂದೇ ವಾರದಲ್ಲಿ ಸಾಧಿಸಿದರು ಅವರು. ತರಗತಿಯ ತುಂಟ ಕುದುರೆಗಳನ್ನು ಕನ್ನಡದ ರಥಕ್ಕೆ ಬಿಗಿಯಲು ಅವರು ಬಳಸಿದ್ದು ದೃಷ್ಟಿ ಚಾಟಿಯನ್ನು!
ಬಯ್ಗುಳವಿಲ್ಲದೆ, ಗದರಿಕೆಯಿಲ್ಲದೆ ತುಂಟರನ್ನು ಅವರು ನಿಯಂತ್ರಿಸಿದ್ದು ನೇರನೋಟದಿಂದ. ೭೦ ವಿದ್ಯಾರ್ಥಿಗಳಿದ್ದ ಕ್ಲಾಸಿನಲ್ಲಿ ಏನಾದರೂ ಸದ್ದಾದರೆ, ತೆಕ್ಕುಂಜದವರು ಅತ್ತ ಮುಖ ತಿರುಗಿಸುತ್ತಿದ್ದರು. ಪಾಠ ನಿಲ್ಲಿಸಿ, ಸದ್ದು ಮಾಡಿರಬಹುದಾದ ಒಬ್ಬನನ್ನು ಗುರುತಿಸಿ, ಅವನ ಮುಖವನ್ನೇ ದಿಟ್ಟಿಸುತ್ತಿದ್ದರು. ಅವರ ನಿಷ್ಕಳಂಕ ಮುಖದ ಪ್ರಭಾವೀ ಕಣ್ಣುಗಳ ನೆಟ್ಟ ನೋಟವನ್ನು ಎದುರಿಸಲು ತಪ್ಪಿತಸ್ಥನಿಗೆ ಸಾಧ್ಯವಾಗುತ್ತಿರಲಿಲ್ಲ. ತಪ್ಪು ಮಾಡಿದಾತ ತಲೆ ತಗ್ಗಿಸುತ್ತಿದ್ದ. "ಇಂತಹ ದೃಷ್ಟಿಯುದ್ಧದಲ್ಲಿ ತಪ್ಪು ಮಾಡಿದವನು ಮೊದಲು ತಲೆ ಬಾಗಿಸುತ್ತಾನೆ" ಎಂಬ ಅವರ ನಂಬಿಕೆ ಗೆಲ್ಲುತ್ತಿತ್ತು. ತರಗತಿಯಲ್ಲಿ ಇದ್ದದ್ದು ಕೆಲವೇ ಪುಂಡ ಹುಡುಗರು. ಅವರೆಲ್ಲರೂ ಒಂದೇ ವಾರದೊಳಗೆ ತೆಕ್ಕುಂಜದವರ ದೃಷ್ಟಿಗೆ ಸಿಕ್ಕಿಬಿದ್ದರು. ಗುರುಗಳ ವರ್ಚಸ್ಸಿನೆದುರು ಸೋತು ಹೋದರು. ಅನಂತರ ಅವರೆಲ್ಲ ಕನ್ನಡ ತರಗತಿಯಲ್ಲಿ ಶಿಸ್ತಿನಿಂದ ಕುಳಿತು ಕಲಿತರು. ನಲುವತ್ತು ವರುಷಗಳ ಮುಂಚೆ ಸರಳ ವಿಧಾನವೊಂದರಿಂದ ಸೊಕ್ಕಿನ ಹುಡುಗರನ್ನು ತೆಕ್ಕುಂಜದವರು ಹದ್ದುಬಸ್ತಿನಲ್ಲಿ ಇಟ್ಟದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದೆವು. ಬಸ್ಸಿನಲ್ಲಿ ಒಂದೂವರೆ ತಾಸು ಪ್ರಯಾಣಿಸಿ, ಇಳಿಯುತ್ತಿದ್ದದ್ದು ಗುರುಪುರದಲ್ಲಿ. ಅಲ್ಲಿಂದ ಅಡ್ಡೂರಿಗೆ ಮೂರು ಕಿಮೀ ನಡಿಗೆಯ ಹಾದಿ. ಕಾಲುಸಂಕಗಳನ್ನು ಹಾದು, ಗದ್ದೆಗಳ ಹುಣಿಗಳಲ್ಲಿ ಸಾಗಿ, ಅಡ್ಡೂರು ಹತ್ತಿರವಾಗುತ್ತಿದ್ದಂತೆ ಕೈಬೀಸಿ ಕರೆಯುತ್ತಿದ್ದವು ಅಲ್ಲಿನ ಮೂರು ಗುಡ್ಡಗಳು. ಆದರೆ ಆಗಲೇ ಎಂಭತ್ತು ವರುಷ ಹಳೆಯದಾದ "ಅಡ್ಡೂರು ಮನೆ" ತಲಪಿದಾಗ ಕತ್ತಲಾಗಿರುತ್ತಿತ್ತು. ಹಾಗಾಗಿ ಗುಡ್ಡಗಳ ಸುತ್ತಾಟಕ್ಕೆ ಇನ್ನೊಂದು ದಿನ ಕಾಯಬೇಕಾಗುತ್ತಿತ್ತು.
ಮರುದಿನ ಸಂಜೆಯಾಗುತ್ತಿದ್ದಂತೆ ನಮ್ಮ ಗುಡ್ಡ ಸುತ್ತಾಟ ಶುರು. ಹೊರಡುವಾಗ ಅಮ್ಮನ ಎಚ್ಚರಿಕೆ "ಗುಡ್ಡೆಲೆ ಕಣ್ಣಂಡು ಹೋಗ್ಗು, ಬಿದ್ದು ಗಾಯ ಮಾಡಿಣಲೆ". ನಮ್ಮ ಜೊತೆಗೇ ಸವಾರಿ ಹೊರಡುತ್ತಿತ್ತು ಮನೆ ನಾಯಿ "ಕೂರ". ಮನೆಯ ಹಿಂಬದಿಯ ಹಟ್ಟಿ ದಾಟಿ, ಕಾಲುಹಾದಿಯಲ್ಲಿ ಐದು ನಿಮಿಷ ನಡೆದರೆ ಸಿಗುತ್ತಿತ್ತು ಕಲ್ಲುಗುಡ್ಡ. ಗುಡ್ಡದಲ್ಲಿ ಹಲವು ಗೇರು ಮರಗಳು. ಗೇರು ಹಣ್ಣೆಲ್ಲ ಬಾವಲಿಗಳ ಹಾಗೂ ಹಾದಿಹೋಕರ ಪಾಲು. ಕೆಲವೊಮ್ಮೆ ಹಾದಿಯಲ್ಲಿ ಉದ್ದ ಬಾಲದ ಕರಿ ಮುಖದ ಮಂಗಗಳ ದರ್ಶನ. ಹಳ್ಳಿಗರ ಭಾಷೆಯಲ್ಲಿ ಅವು "ಮುಜ್ಜು". ನಮ್ಮನ್ನು ಕಂಡರೆ ಅವಕ್ಕೆ ಹೆದರಿಕೆಯೇ ಇಲ್ಲ. ಮರದಲ್ಲಿ ಕೂತು ನಮ್ಮತ್ತ ಪಿಳಿಪಿಳಿ ನೋಡುವ ಅವನ್ನು ಓಡಿಸುವುದೇ ನಮಗೊಂದು ಆಟ. ಕಲ್ಲೆಸೆದರೆ ಅಥವಾ ಡಬ್ಬ ಬಡಿದು ಸದ್ದು ಮಾಡಿದರೆ ರೆಂಬೆಯಿಂದ ರೆಂಬೆಗೆ ಹಾರಿ ದೂರದ ಮರವೇರುತ್ತಿದ್ದವು.
ಪುಸ್ತಕ: ಲಾಲ್ ಬಹದ್ದೂರ್ ಶಾಸ್ತ್ರಿ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲನೇ ಮುದ್ರಣ: ೨೦೧೮, ಪುಟ:೪೮, ಬೆಲೆ: ರೂ.೩೦
ಲಾಲ್ ಬಹದ್ದೂರ್ ಶಾಸ್ತ್ರಿ ಎಂದೊಡನೆ ನಮಗೆಲ್ಲರಿಗೂ ನೆನಪಿಗೆ ಬರುವ ಘೋಷಣೆ, “ಜೈ ಜವಾನ್, ಜೈ ಕಿಸಾನ್”. ಚೀನಾದೊಡನೆ ೧೯೬೨ರಲ್ಲಿ ನಡೆದ ಯುದ್ಧದಲ್ಲಿ ಹೀನಾಯವಾಗಿ ಸೋತು, ಆಹಾರ ಪದಾರ್ಥಗಳ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದ ದೇಶದಲ್ಲಿ ಧೈರ್ಯ, ಸ್ಥೈರ್ಯವನ್ನು ತುಂಬಲು ಅವರು ನೀಡಿದ ಈ ಘೋಷವಾಕ್ಯ
ದೇಶದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿದ್ದಂತೂ ನಿಜ.
ಭಾರತ ದೇಶದ ಎರಡನೆಯ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನಿಸಿದ್ದು ಉತ್ತರಪ್ರದೇಶದ ಮೊಗಲಸರಾಯ್ ನಗರದ ಅತ್ಯಂತ ಬಡ ಕುಟುಂಬದಲ್ಲಿ. ಕೇವಲ ತಮ್ಮ ದೇಶಭಕ್ತಿ, ಸೇವೆ ಮತ್ತು ದಕ್ಷತೆಯ ಬಲದಿಂದ ಆ ಉನ್ನತ ಸ್ಥಾನಕ್ಕೆ ಏರಿದವರು ಶಾಸ್ತ್ರಿ.
ಸಿಡುಬು ಕಾಯಿಲೆಯಿಂದ ನರಳುತ್ತಿದ್ದ ಮಗಳು ಸಾವಿನಂಚಿನಲ್ಲಿದ್ದಾಗ, ಬ್ರಿಟಿಷರು ನೀಡಿದ ಷರತ್ತುಬದ್ಧ ಪೆರೋಲನ್ನು ನಿರಾಕರಿಸಿದ ಧೀಮಂತ, ಅನಂತರ, ಷರತ್ತು ರಹಿತ ಪೆರೋಲ್ ಪಡೆದು ಮನೆಗೆ ಬರುವಷ್ಟರಲ್ಲಿ ಮಗಳು ಕೊನೆಯುಸಿರು ಎಳೆದಿದ್ದಳು. ಅವಳ ಅಂತಿಮ ಕ್ರಿಯೆ ಮುಗಿಸಿ, ಪೆರೋಲ್ ಮುಗಿಯುವ ಮುನ್ನವೇ ಪುನಃ ಜೈಲು ಸೇರಿದವರು. ಮುಂದೆ ರೈಲ್ವೇ ಮಂತ್ರಿಯಾಗಿದ್ದಾಗ ಎರಡು ಭೀಕರ ರೈಲು ಅಪಘಾತಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದವರು.
ದೇಶದಲ್ಲಿ ಆಹಾರದ ಕೊರತೆ ನೀಗಿಸಲು “ಶಾಸ್ತ್ರಿ ವ್ರತ” ಘೋಷಿಸಿದವರು. ಇವರ ಕರೆಗೆ ದೇಶಬಾಂಧವರ ಅಭೂತಪೂರ್ವ ಸ್ಪಂದನ. ಲಕ್ಷಗಟ್ಟಲೆ ಜನರು ಸೋಮವಾರ ರಾತ್ರಿ ಉಪವಾಸವಿದ್ದರು.
ಪುಸ್ತಕ: ಕೃಷಿ ವಿಜ್ನಾನ
ಲೇಖಕರು: ಡಾ. ಜಿ.ಕೆ. ವೀರೇಶ್ ಮತ್ತು ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪ್ರಕಟಣೆಯ ವರುಷ: ೨೦೧೭, ಪುಟ: ೧೨೦, ಬೆಲೆ: ರೂ.೭೫
ಮಕ್ಕಳಿಗೆ ವಿಜ್ನಾನ ವಿಷಯದ ಕಲಿಕೆ ರೋಚಕವೂ, ಆಸಕ್ತಿದಾಯಕವೂ ಆಗಿರಬೇಕೆಂಬುದು ಎಲ್ಲರ ಆಶಯ. ಇಂದಿನ ವಿಜ್ನಾನ ಶಿಕ್ಷಣ ಮಕ್ಕಳಿಗೆ ನಿಜಕ್ಕೂ ಆ ಅನುಭವವನ್ನು ನೀಡುತ್ತಿದೆಯೇ? ಎಂದು ಕೇಳಿದರೆ, ಇಲ್ಲ ಎನ್ನಬೇಕಾಗುತ್ತದೆ. ಈ ಕೊರತೆಯನ್ನು ನೀಗಿಸಲಿಕ್ಕಾಗಿ, ಬೆಂಗಳೂರಿನ ನವಕರ್ನಾಟಕ ಪ್ರಕಾಶನವು “ವಿಜ್ನಾನ – ಸರಳ ಪರಿಚಯ” ಮಾಲೆಯ ಪ್ರಕಟಣೆಯನ್ನು ಆರಂಭಿಸಿತು. ಐದರಿಂದ ಹತ್ತನೆಯ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತ್ತು ಕಲಿಸುತ್ತಿರುವ ಶಿಕ್ಷಕರಿಗೆ ಉಪಯುಕ್ತವಾಗಬೇಕು ಎನ್ನುವ ಉದ್ದೇಶದಿಂದ ಈ ಮಾಲೆಯ ಪುಸ್ತಕಗಳನ್ನು ಬರೆಯಲಾಗಿದೆ. ವಿಜ್ನಾನ ಶಿಕ್ಷಣದ ಗುಣಮಟ್ಟವನ್ನು ಮೇಲೆತ್ತಲು ಈ ಪುಸ್ತಕಗಳು ಮೀಟುಗೋಲಾಗಬಲ್ಲವೆಂಬುದು ಪ್ರಕಾಶಕರ ಮತ್ತು ಲೇಖಕರ ಆಶಯ.
“ಕೃಷಿ ವಿಜ್ನಾನ” ಇದೇ ಮಾಲೆಯ ಒಂದು ಪುಸ್ತಕ. ಇದರ ಲೇಖಕರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಡಾ. ಜಿ.ಕೆ. ವೀರೇಶ್ ಮತ್ತು ಕೃಷಿಕ, ಕೃಷಿ ಅಂಕಣ ಬರಹಗಾರ, ಕೃಷಿ ಪುಸ್ತಕಗಳ ಲೇಖಕ, ಸಾವಯವ ಕೃಷಿ ಆಂದೋಲನದ ಕಾರ್ಯಕರ್ತ ಹಾಗೂ ನಿವೃತ್ತ ಬ್ಯಾಂಕ್ ಕೃಷಿ ಅಧಿಕಾರಿ ಅಡ್ಡೂರು ಕೃಷ್ಣ ರಾವ್.
ಈ ಪುಸ್ತಕದಲ್ಲಿ ೨೫ ಅಧ್ಯಾಯಗಳಿದ್ದು, ಇವುಗಳಲ್ಲಿ ಪ್ರತಿಯೊಂದರ ಬಗ್ಗೆಯೂ ದೊಡ್ಡದೊಡ್ಡ ಗ್ರಂಥಗಳು ಪ್ರಕಟವಾಗಿವೆ. ಅಷ್ಟು ವಿಸ್ತಾರವಾದ ಆ ವಿಷಯಗಳನ್ನು ಪುಸ್ತಕದಲ್ಲಿ ಸರಳವಾಗಿ ವಿವರಿಸಲಾಗಿದೆ. ಅಧ್ಯಾಯಗಳ ಪಟ್ಟಿ ಇಲ್ಲಿದೆ:
01. ಕೃಷಿ ಪ್ರಾರಂಭ
02. ಕೃಷಿಯ ಕಾಲಘಟ್ಟ
03. ಕರ್ನಾಟಕದಲ್ಲಿ ಕೃಷಿ
04. ಮಣ್ಣು ವಿಜ್ನಾನ
Book: Poison-free Food Movement
(Visha-mukta Ootada Battalu Aandolana)
Author: Addoor Krishna Rao
Publisher: Organic Farmer Consumer Forum, Mangaluru
(Savayava Krishika Grahaka Balaga, Mangaluru)
Year of Publication: 2016, Pages: 116, Price: Rs.30
From the book, "Introduction to Poison-free Food Movement in Mangaluru" is given below:
ಪುಸ್ತಕ: ಮನಸ್ಸಿನ ಮ್ಯಾಜಿಕ್
(ಪುಸ್ತಕ ಪರಿಚಯ ಭಾಗ ೨)
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: ೨೦೧೪, ಪುಟ: ೧೨೦, ಬೆಲೆ: ರೂ.೫೫
“ಮನಸ್ಸಿನ ಮ್ಯಾಜಿಕ್” ಮನಸ್ಸು ಮತ್ತು ಅದರ ವಿವಿಧ ಆಯಾಮಗಳ ಬಗ್ಗೆ ಅಡ್ಡೂರು ಕೃಷ್ಣ ರಾಯರ ಮೊದಲ ಪುಸ್ತಕ. ಎರಡೇ ವರುಷಗಳಲ್ಲಿ ಎರಡು ಬಾರಿ ಮರುಮುದ್ರಣವಾದ ಪುಸ್ತಕ.
ಪುಸ್ತಕ: ಮನಸ್ಸಿನ ಮ್ಯಾಜಿಕ್
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: ೨೦೧೪, ಪುಟ: ೧೨೦, ಬೆಲೆ: ರೂ.೫೫
ನವಕರ್ನಾಟಕ ಪ್ರಕಾಶನದ “ವ್ಯಕ್ತಿ ವಿಕಸನ ಮಾಲೆ”ಯ ಈ ಪುಸ್ತಕ, ಮನಸ್ಸು ಮತ್ತು ಅದರ ವಿವಿಧ ಆಯಾಮಗಳ ಬಗ್ಗೆ ಲೇಖಕರ ಮೊದಲ ಪುಸ್ತಕ. ಎರಡೇ ವರುಷಗಳಲ್ಲಿ ಎರಡು ಬಾರಿ ಮರುಮುದ್ರಣವಾದ ಪುಸ್ತಕ.
ಇದರ ಬಗ್ಗೆ “ವ್ಯಕ್ತಿ ವಿಕಸನ ಮಾಲೆ”ಯ ಸಂಪಾದಕರೂ, ಸುಪ್ರಸಿದ್ಧ ಮನೋವೈದ್ಯರೂ, ಒಂದು ನೂರಕ್ಕೂ ಅಧಿಕ ಪುಸ್ತಕಗಳ ಲೇಖಕರೂ ಆದ ಡಾ.ಸಿ.ಆರ್. ಚಂದ್ರಶೇಖರ್ ಅವರ ಮುನ್ನುಡಿಯಿಂದ ಆಯ್ದ ಭಾಗ: “ಮನಸ್ಸೇ ಒಂದು ಮ್ಯಾಜಿಕ್. ….. ಅಪೂರ್ವ ಕೃತಿರತ್ನಗಳನ್ನು ಬರೆದ ಕವಿ-ಕಾದಂಬರಿಕಾರ ನಾಟಕಕಾರರ ಮನಸ್ಸಿನ ಮ್ಯಾಜಿಕ್, ಅದ್ಭುತ ರಮ್ಯ ಚಿತ್ರಗಳನ್ನು ರಚಿಸಿದ ಕಲಾವಿದರ ಮನಸ್ಸಿನ ಮ್ಯಾಜಿಕ್, ಸೌಂದರ್ಯವೇ ಮೈವೆತ್ತಿ ಬಂದಂತೆ ಶಿಲ್ಪ ಕಡೆದ ಶಿಲ್ಪಿಗಳ ಮನಸ್ಸಿನ ಮ್ಯಾಜಿಕ್, ನಮ್ಮ ದೇಶ, ಸಮಾಜದ ಗತಿಯನ್ನೇ ಬದಲಿಸಿದ ನಾಯಕರುಗಳ ಮನಸ್ಸಿನ ಮ್ಯಾಜಿಕ್, ತಮ್ಮ ಸೃಜನಶೀಲತೆ ಸಂಶೋಧನೆಗಳಿಂದ ವಿಶ್ವಾಮಿತ್ರ ಸೃಷ್ಟಿ ಮಾಡಿದ ವಿಜ್ನಾನಿಗಳ ಮನಸ್ಸಿನ ಮ್ಯಾಜಿಕ್ ನಮ್ಮ ನಿಬ್ಬೆರಗಾಗಿಸುತ್ತದೆ. ನಮ್ಮ ಮನಸ್ಸು ಅಂತಹ ಮ್ಯಾಜಿಕ್ ಮಾಡಲು ಸಾಧ್ಯವಾಗಬಹುದಾದರೆ ಎಷ್ಟು ಚೆನ್ನ!
ಪುಸ್ತಕ: ಮನರಂಜನೆಗಾಗಿ ಬೀಜಗಣಿತ
ಲೇಖಕ: ಯಾಕೊವ್ ಪೆರೆಲ್ಮನ್
ಕನ್ನಡಾನುವಾದ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲನೇ ಮುದ್ರಣ: ೨೦೧೩, ಪುಟ:೧೯೬, ಬೆಲೆ: ರೂ.೧೨೦
“ಗಣಿತ ಎಂದರೆ ಕಷ್ಟ, ಬೀಜಗಣಿತ ಎಂದರೆ ಇನ್ನೂ ಕಷ್ಟ” ಎನ್ನುವವರು ಬಹಳ ಜನರು. ಇಂತಹ ಸನ್ನಿವೇಶದಲ್ಲಿ ಪ್ರಸಿದ್ಧ ರಷ್ಯನ್ ಗಣಿತ ಗಾರುಡಿಗ ಯಾಕೋವ್ ಪೆರೆಲ್ಮನ್ ಅವರ ಈ ಪುಸ್ತಕ, ಬೀಜಗಣಿತದ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಸಹಕರಿಸುತ್ತದೆ. ಯಾಕೆಂದರೆ, ಬೀಜಗಣಿತವನ್ನು ಮನರಂಜನೆಯ ಮೂಲಕ ಇದರಲ್ಲಿ ಪ್ರಸ್ತುತ ಪಡಿಸಲಾಗಿದೆ. ಹಾಗಾಗಿ, ವಿದ್ಯಾರ್ಥಿ – ಯುವಜನರನ್ನು ಈ ಪುಸ್ತಕ ಆಕರ್ಷಿಸುವುದಲ್ಲಿ ಸಂದೇಹವಿಲ್ಲ.
ವಿವಿಧ ಡಯೋಫಾಂಟೈನ್ ಸಮೀಕರಣಗಳು, ಲಾಗರಿತಂ ಕೋಷ್ಟಕಗಳು, ಖಗೋಳಶಾಸ್ತ್ರದಲ್ಲಿ ಉಪಯೋಗವಾಗುವ ಬೀಜಗಣಿತದ ಘಾತಗಳು ಮಾತ್ರವಲ್ಲದೆ ದೈನಂದಿನ ವ್ಯವಹಾರದಲ್ಲೂ ಎದುರಾಗುವ ಸಮಸ್ಯೆಗಳನ್ನಿಲ್ಲಿ ಸರಳವಾದ ವಿಧಾನದಲ್ಲಿ ಬಿಡಿಸಿಡಲಾಗಿದೆ. ಸಂಕೀರ್ಣ ಹಾಗೂ ಬೃಹತ್ ಗಾತ್ರದ ಸಮಸ್ಯೆಗಳಿಗೆ ಬೀಜಗಣಿತದಲ್ಲಿ ಉತ್ತರವಿದೆ ಎಂದು ಓದುಗರು ಈ ಪುಸ್ತಕದಿಂದ ಖಂಡಿತವಾಗಿ ತಿಳಿಯಬಹುದು. ಇಲ್ಲಿರುವ ಚಿತ್ರಗಳು ಪುಸ್ತಕಕ್ಕೊಂದು ಮೆರುಗು.
ವಿಶ್ವವಿಖ್ಯಾತ ಗಣಿತ ಪ್ರತಿಭೆ ಶ್ರೀನಿವಾಸ ರಾಮಾನುಜನ್ ಅವರ ೧೨೫ನೇ ಜನ್ಮವರುಷವಾದ ೨೦೧೨ನೇ ಇಸವಿಯನ್ನು ಭಾರತ ಸರಕಾರವು “ರಾಷ್ಟ್ರೀಯ ಗಣಿತ ಸಂವತ್ಸರ” ಎಂದು ಘೋಷಿಸಿತ್ತು. ಅದರ ನೆನಪಿಗಾಗಿ ನವಕರ್ನಾಟಕ ಪ್ರಕಾಶನ ಬಿಡುಗಡೆ ಮಾಡಿದ ಹತ್ತು ಪುಸ್ತಕಗಳಲ್ಲಿ ಇದೊಂದು ಎಂಬುದು ಗಮನಾರ್ಹ.
ಅಡ್ಡೂರು ಕೃಷ್ಣ ರಾವ್ “ಅಲ್-ಜೀಬ್ರಾ ಫಾರ್ ಫನ್” ಹೆಸರಿನ ಪುಸ್ತಕವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ಇದರ ಮೂರು ಸಮಸ್ಯೆಗಳನ್ನು ಈ ಕೆಳಗೆ ನೀಡಲಾಗಿದೆ:
ಪುಸ್ತಕ: ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕಾಂತಾವರ ಕನ್ನಡ ಸಂಘ, ಕಾರ್ಕಳ ತಾಲೂಕು
ಪ್ರಕಟಣೆಯ ವರುಷ: ೨೦೧೨, ಪುಟ: ೫೨, ಬೆಲೆ: ರೂ.೩೩
ಡಾ.ಬಿ.ಎಂ. ಹೆಗ್ಡೆ ಅವರದು ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದವರು ಡಾ. ಹೆಗ್ಡೆ. ಅವರು ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದ ವೈದ್ಯರು. ಆರೋಗ್ಯದ ಬಗ್ಗೆ ಅವರು ಬರೆದ ಪುಸ್ತಕಗಳ ಸಂಖ್ಯೆ ಮೂವತ್ತಕ್ಕೀಂತ ಜಾಸ್ತಿ. ಅಂಕಣ ಹಾಗೂ ಪುಸ್ತಕ ಬರಹಗಳು, ಉಪನ್ಯಾಸಗಳು, ರೇಡಿಯೋ ಮತ್ತು ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನಸಾಮಾನ್ಯರಿಗೆ ವೈದ್ಯಕೀಯ ಮಾಹಿತಿ ನೀಡುವ ಹಾಗೂ ವೈದ್ಯಕೀಯ ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರು.
“ನಾಡಿಗೆ ನಮಸ್ಕಾರ” ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ೭೨ನೆಯ ಪ್ರಕಟಣೆ ಅವರ ಬಗೆಗಿನ ಈ ಪುಸ್ತಕ. ಇದರ ಮೊದಲ ಬರಹ “ಶುಂಠಿ, ಜೇನು ಮತ್ತು ವೈದ್ಯಕೀಯ ಲೋಕ”ದ ಒಂದು ಮಿಂಚು ಇಲ್ಲಿದೆ:
“ಮಂಗಳೂರಿನ ಪಾಯಸ್ ಗುಡ್ಡದ ತುದಿಯಲ್ಲಿರುವ ಡಾ.ಬಿ.ಎಂ. ಹೆಗ್ಡೆಯವರ ಮನೆಯ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ನನ್ನ ಜೊತೆಗಿದ್ದ ಪ್ರೊ.ಜಿ.ಆರ್. ರೈ ಕೆಮ್ಮ ತೊಡಗಿದರು. ತಕ್ಷಣವೇ “ನಿಮಗೊಂದು ಮದ್ದು ತರ್ತೇನೆ” ಎನ್ನುತ್ತಾ ಒಳನಡೆದರು ಡಾ.ಹೆಗ್ಡೆ. ಇವರೇನೋ ಸಿರಪ್ ತಂದು ಕೊಡುತ್ತಾರೆಂದು ಭಾವಿಸಿದ್ದೆ. ಹೊರಬರುವಾಗ ಅವರ ಕೈಯಲ್ಲಿ ದೊಡ್ಡ ಚಮಚದ ತುಂಬ ಜೇನು ಮತ್ತು ಒಂದು ತುಂಡು ಶುಂಠಿ. “ಬಾಯಿಗೆ ಶುಂಠಿ ಹಾಕ್ಕೊಂಡು ಜಗಿಯುತ್ತಾ ನಿಧಾನವಾಗಿ ಜೇನಿನೊಂದಿಗೆ ರಸ ನುಂಗಿ” ಎಂದರು. ಕೆಲವೇ ನಿಮಿಷಗಳಲ್ಲಿ ಜಿ.ಆರ್. ರೈಯವರ ಕೆಮ್ಮು ಮಾಯ.
ಪುಸ್ತಕ: ರಾಜನೀತಿಯ ಅಪರಂಜಿ: ಡಾ.ಎ.ಸುಬ್ಬರಾವ್
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕಾಂತಾವರ ಕನ್ನಡ ಸಂಘ, ಕಾರ್ಕಳ ತಾಲೂಕು
ಪ್ರಕಟಣೆಯ ವರುಷ: ೨೦೦೯, ಪುಟ: ೪೮, ಬೆಲೆ: ರೂ.೩೩
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ “ನಾಡಿಗೆ ನಮಸ್ಕಾರ” ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ೩೩ನೆಯ ಪ್ರಕಟಣೆ ಈ ಪುಸ್ತಕ.
ವೈದ್ಯರಾಗಿ, ಕಮ್ಯುನಿಸ್ಟ್ ನೇತಾರರಾಗಿ, ರಾಜಕಾರಣಿಯಾಗಿ, ಮಂತ್ರಿಯಾಗಿ, ಸಮಾಜ ಸೇವಕರಾಗಿ ಕೇರಳದಲ್ಲಿ ಡಾ.ಎ. ಸುಬ್ಬರಾವ್ ಅವರದು ಚಿರಪರಿಚಿತ ಹೆಸರು. ಈ ಪುಸ್ತಕ “ಬದುಕಿದ್ದಾಗಲೇ ದಂತಕತೆಯಾದ ಡಾ.ಸುಬ್ಬರಾವ್” ಎಂದು ಹೀಗೆ ಶುರುವಾಗುತ್ತದೆ:
ಸರಕಾರದ ಮಂತ್ರಿಯಾಗಿದ್ದರೂ ಸ್ವಂತ ಮನೆಯನ್ನಾಗಲೀ, ಸ್ವಂತಕಾರನ್ನಾಗಲೀ ಖರೀದಿಸದವರು ಇರಬಹುದೇ? ಎಂ.ಪಿ. ಮತ್ತು ಎಂ.ಎಲ್.ಎ. ಆಗಿದ್ದರೂ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ವಾಸ ಮಾಡಿದವರು ಇದ್ದಾರೆಯೇ? ಡಾಕ್ಟರ್ ಆಗಿದ್ದರೂ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಮಾಡಿಕೊಳ್ಳದವರು (ಅಂದರೆ ಬಾಡಿಗೆ ಕ್ಲಿನಿಕ್‌ನಲ್ಲಿಯೇ ವೃತ್ತಿ ನಡೆಸಿದವರು) ಇರಬಹುದೇ?
ಅಂಥವರೊಬ್ಬರು ಇದ್ದರು – ಅವರೇ ಡಾಕ್ಟರ್ ಅಡ್ಡೂರು ಸುಬ್ಬರಾವ್. ಕೇರಳದ ಉತ್ತರ ತುದಿಯ ಮಂಜೇಶ್ವರ – ಕಾಸರಗೋಡು ಪ್ರದೇಶದಲ್ಲಿ ಅವರ ಹೆಸರು ಕೇಳದವರಿಲ್ಲ. ತಮ್ಮ ಕರ್ಮಭೂಮಿ ಮಂಜೇಶ್ವರದಲ್ಲಿ ಆರು ದಶಕಗಳ ಕಾಲ ಮಾಡಿದ ಜನಸೇವೆಯಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಡಾಕ್ಟರ್ ಸುಬ್ಬರಾವ್. ಇಂದಿಗೂ ಅಲ್ಲಿನ ಜನರಿಗೆ ‘ಡಾಕ್ಟರ್’ ಅಂದರೆ ‘ಡಾಕ್ಟರ್ ಸುಬ್ಬರಾವ್’ ಒಬ್ಬರೇ.
“ಜನಸೇವೆಗೆ ಸದಾ ಸಿದ್ಧ”ರಾಗಿದ್ದ ಡಾ. ಸುಬ್ಬರಾಯರ ಸೇವಾತತ್ಪರತೆಯ ಕೆಲವು ನಿದರ್ಶನಗಳು: