ರಾಜನೀತಿಯ ಅಪರಂಜಿ: ಡಾ.ಎ.ಸುಬ್ಬರಾವ್

ಪುಸ್ತಕ: ರಾಜನೀತಿಯ ಅಪರಂಜಿ: ಡಾ.ಎ.ಸುಬ್ಬರಾವ್
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕಾಂತಾವರ ಕನ್ನಡ ಸಂಘ, ಕಾರ್ಕಳ ತಾಲೂಕು
ಪ್ರಕಟಣೆಯ ವರುಷ: ೨೦೦೯,     ಪುಟ: ೪೮,      ಬೆಲೆ: ರೂ.೩೩
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಕನ್ನಡ ಸಂಘದ “ನಾಡಿಗೆ ನಮಸ್ಕಾರ” ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ೩೩ನೆಯ ಪ್ರಕಟಣೆ ಈ ಪುಸ್ತಕ.

ವೈದ್ಯರಾಗಿ, ಕಮ್ಯುನಿಸ್ಟ್ ನೇತಾರರಾಗಿ, ರಾಜಕಾರಣಿಯಾಗಿ, ಮಂತ್ರಿಯಾಗಿ, ಸಮಾಜ ಸೇವಕರಾಗಿ ಕೇರಳದಲ್ಲಿ ಡಾ.ಎ. ಸುಬ್ಬರಾವ್ ಅವರದು ಚಿರಪರಿಚಿತ ಹೆಸರು. ಈ ಪುಸ್ತಕ “ಬದುಕಿದ್ದಾಗಲೇ ದಂತಕತೆಯಾದ ಡಾ.ಸುಬ್ಬರಾವ್” ಎಂದು ಹೀಗೆ ಶುರುವಾಗುತ್ತದೆ:
ಸರಕಾರದ ಮಂತ್ರಿಯಾಗಿದ್ದರೂ ಸ್ವಂತ ಮನೆಯನ್ನಾಗಲೀ, ಸ್ವಂತಕಾರನ್ನಾಗಲೀ ಖರೀದಿಸದವರು ಇರಬಹುದೇ? ಎಂ.ಪಿ. ಮತ್ತು ಎಂ.ಎಲ್.ಎ. ಆಗಿದ್ದರೂ ಜೀವಮಾನವಿಡೀ ಬಾಡಿಗೆ ಮನೆಯಲ್ಲೇ ವಾಸ ಮಾಡಿದವರು ಇದ್ದಾರೆಯೇ? ಡಾಕ್ಟರ್ ಆಗಿದ್ದರೂ ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಸ್ವಂತ ಕ್ಲಿನಿಕ್ ಅಥವಾ ನರ್ಸಿಂಗ್ ಹೋಂ ಮಾಡಿಕೊಳ್ಳದವರು (ಅಂದರೆ ಬಾಡಿಗೆ ಕ್ಲಿನಿಕ್‌ನಲ್ಲಿಯೇ ವೃತ್ತಿ ನಡೆಸಿದವರು) ಇರಬಹುದೇ?
ಅಂಥವರೊಬ್ಬರು ಇದ್ದರು – ಅವರೇ ಡಾಕ್ಟರ್ ಅಡ್ಡೂರು ಸುಬ್ಬರಾವ್. ಕೇರಳದ ಉತ್ತರ ತುದಿಯ ಮಂಜೇಶ್ವರ – ಕಾಸರಗೋಡು ಪ್ರದೇಶದಲ್ಲಿ ಅವರ ಹೆಸರು ಕೇಳದವರಿಲ್ಲ. ತಮ್ಮ ಕರ್ಮಭೂಮಿ ಮಂಜೇಶ್ವರದಲ್ಲಿ ಆರು ದಶಕಗಳ ಕಾಲ ಮಾಡಿದ ಜನಸೇವೆಯಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಡಾಕ್ಟರ್ ಸುಬ್ಬರಾವ್. ಇಂದಿಗೂ ಅಲ್ಲಿನ ಜನರಿಗೆ ‘ಡಾಕ್ಟರ್’ ಅಂದರೆ ‘ಡಾಕ್ಟರ್ ಸುಬ್ಬರಾವ್’ ಒಬ್ಬರೇ.

“ಜನಸೇವೆಗೆ ಸದಾ ಸಿದ್ಧ”ರಾಗಿದ್ದ ಡಾ. ಸುಬ್ಬರಾಯರ ಸೇವಾತತ್ಪರತೆಯ ಕೆಲವು ನಿದರ್ಶನಗಳು:
೧೯೭೭ರಲ್ಲಿ ಡಾಕ್ಟರ್ ಸುಬ್ಬರಾಯರ ಕ್ಲಿನಿಕ್‌ಗೆ ಹತ್ತಿರದ ಬಂಗ್ರಮಂಜೇಶ್ವರದಲ್ಲಿ ಭಾರೀ ನೆರೆ. ಹೊಳೆಯಲ್ಲಿ ನೀರು ಉಕ್ಕಿ ಹರಿದು ಸಮೀಪದ ಸಸಿಹಿತ್ಲು ಜಲಾವೃತವಾಗಿತ್ತು. ಆ ಸಂದರ್ಭದಲ್ಲಿ ಡಾಕ್ಟರ್ ಸುಬ್ಬರಾವ್ ಅಲ್ಲಿನ ಮನೆಗಳಿಂದ ಮಕ್ಕಳನ್ನು ಸ್ವತಃ ಎತ್ತಿಕೊಂಡು ಬಂದು, ಹಳೆಯ ವಿಜಯಾ ಬ್ಯಾಂಕಿನ ಮಾಳಿಗೆಯಲ್ಲಿ ತಾತ್ಕಾಲಿಕ ನೆರೆ ಪರಿಹಾರ ಶಿಬಿರಕ್ಕೆ ತಲಪಿಸಿ, ಹಗಲುರಾತ್ರಿಯೆನ್ನದೆ ಪರಿಹಾರಕಾರ್ಯದಲ್ಲಿ ತೊಡಗಿದ್ದನ್ನು ಬಿ.ವಿ. ರಾಜನ್ ನೆನಪು ಮಾಡಿಕೊಳ್ಳುತ್ತಾರೆ. ‘ಡಾಕ್ಟರರ ಪರಿಚಯವಾದ ಬಳಿಕ ಅದೇ ಮೊದಲ ಬಾರಿ ಅವರ ಸೇವಾ ಮನೋಭಾವ ಕಂಡು ದಂಗಾಗಿ ಹೋದೆ’ ಎಂದು ರಾಜನ್ ದಾಖಲಿಸಿದ್ದಾರೆ. ಕಣ್ವತೀರ್ಥದಲ್ಲಿ ನೆರೆ ಏರುತ್ತಿದ್ದಂತೆ ಡಾಕ್ಟರ್ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯಕರ್ತರನ್ನು ಸಂಘಟಿಸಿದರು; ಗೋಣಿಚೀಲಗಳಲ್ಲಿ ಹೊಯಿಗೆ (ಮರಳು) ತುಂಬಿಸಿ, ಅವನ್ನು ಸಾಲಾಗಿಟ್ಟು ಅಡ್ಡಗೋಡೆ ನಿರ್ಮಿಸಿದರು. ಆ ಮೂಲಕ ಹಲವಾರು ವಸತಿ, ಸೊತ್ತು, ಜೀವಗಳನ್ನು ಉಳಿಸಿ ದುರಂತ ತಪ್ಪಿಸಿದರು ಎಂದು ಪಿ. ರಾಘವನ್ ಜ್ಞಾಪಿಸಿಕೊಳ್ಳುತ್ತಾರೆ. ಅನಂತರ ನೆರೆಪೀಡಿತರನ್ನು ಸಮೀಪದ ಎಸ್.ಎ.ಟಿ. ಹೈಸ್ಕೂಲಿನ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ನೆರೆ ಪರಿಹಾರ ನಿಧಿ ಸಂಗ್ರಹ, ನೆರೆಪೀಡಿತರಿಗಾಗಿ ಬಟ್ಟೆಬರೆ ಸಂಗ್ರಹ ಇತ್ಯಾದಿ ನೆರವಿಗಾಗಿ ಡಾಕ್ಟರ್ ಸುಬ್ಬರಾವ್ ಎಡೆಬಿಡದೆ ಕೆಲಸ ಮಾಡಿದರು. ನೆರೆಪೀಡಿತರ ಶಿಬಿರಕ್ಕೆ ಆಗಾಗ ಭೇಟಿ ನೀಡಿ ಆಹಾರ ಸರಬರಾಜಿನ ವ್ಯವಸ್ಥೆಯನ್ನು ಸ್ವತಃ ಪರಿಶೀಲಿಸುತ್ತಿದ್ದರು. ತಮ್ಮ ಕ್ಲಿನಿಕ್‌ನ ಪಕ್ಕದ ಕೊಠಡಿಯಿಂದಲೇ ಇವೆಲ್ಲ ಪರಿಹಾರ ಕೆಲಸಗಳಿಗೆ ನಿರ್ದೇಶನ ಕೊಡುತ್ತಿದ್ದರು. ತಮ್ಮ ವೈದ್ಯವೃತ್ತಿಯ ಜೊತೆ ಜೊತೆಗೆ ಅವರು ಇಷ್ಟೆಲ್ಲ ಪರಿಹಾರ ಕೆಲಸ ಮಾಡಿದರೆಂಬುದು ನಂಬಲಸಾಧ್ಯವೆನಿಸುತ್ತದೆ. ಸುಮಾರು ೨೦ ವರುಷಗಳ ನಂತರ, ೧೯೯೬ರಲ್ಲಿ ಒಂದು ದಿನ ರಾತ್ರಿ ೨ ಗಂಟೆಗೆ ಉಪ್ಪಳ ಹೊಳೆಯ ರೈಲ್ವೇ ಸೇತುವೆ ಬಳಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ, ಬೋಗಿಗಳು ಮಗುಚಿ ಬಿದ್ದವು. ಆಗ ರೈಲ್ವೆ ಇಲಾಖೆಯವರಿಗೂ ನೆನಪಾದದ್ದು ಡಾ. ಸುಬ್ಬರಾಯರು ಎಂದು ಬಿ.ವಿ. ರಾಜನ್ ದಾಖಲಿಸಿದ್ದಾರೆ. ತಕ್ಷಣವೇ ಡಾಕ್ಟರ್ ಸುಬ್ಬರಾವ್ ಇನ್ನೂ ಹಲವು ವೈದ್ಯರಿಗೆ ತಿಳಿಸಿ ಪ್ರಥಮ ಚಿಕಿತ್ಸೆಗೆ ಬೇಕಾದ ಔಷದಿ – ಸಲಕರಣೆಗಳೊಂದಿಗೆ ಅಪಘಾತದ ಸ್ಥಳಕ್ಕೆ ಧಾವಿಸಿ, ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕಳಿಸಿಕೊಟ್ಟರೆಂದು ಪಿ. ರಾಘವನ್ ಸ್ಮರಿಸುತ್ತಾರೆ.ಆಗ ಡಾಕ್ಟರ್ ಸುಬ್ಬರಾಯರಿಗೆ ಸುಮಾರು ೭೭ ವರುಷ ವಯಸ್ಸು. ಆ ಇಳಿವಯಸ್ಸಿನಲ್ಲಿ ಮಧ್ಯರಾತ್ರಿ ದಾಟಿದ ಹೊತ್ತಿನಲ್ಲಿ ಗಾಯಾಳುಗಳ ಶುಶ್ರೂಷೆಗಾಗಿ ತಕ್ಷಣವೇ ಧಾವಿಸಿ ಹೋದದ್ದು ಅವರ ಮಾನವೀಯತೆಗೆ ಸಾಕ್ಷಿ. ಮಂಜೇಶ್ವರದಲ್ಲಿ ಸಾಂಕ್ರಾಮಿಕ ರೋಗ ಕಾಲರಾ ಹರಡಿದಾಗ ಡಾ. ಸುಬ್ಪರಾವ್ ಸಮಾರೋಪಾದಿಯಲ್ಲಿ ಚಿಕಿತ್ಸೆ ನೀಡಿದ್ದನ್ನೂ, ಯುವಕರನ್ನು ಸಂಘಟಿಸಿ ಬಾವಿಗಳಿಗೆ ಮದ್ದು ಹಾಕಿದ್ದನ್ನೂ ಬಿ.ಎಂ. ಅನಂತ್ ನೆನಪು ಮಾಡಿಕೊಳ್ಳುತ್ತಾರೆ. ಅವರ ಸೇವಾ ತತ್ಪರತೆಗೆ ಪುರಾವೆಯಾಗಿ ಅವರ ಜೀವನದುದ್ದಕ್ಕೂ ಇಂತಹ ಹಲವಾರು ಘಟನೆಗಳನ್ನು ದಾಖಲಿಸಬಹುದು.

ಮಂಜೇಶ್ವರದ ಕರ್ಮಭೂಮಿಯಲ್ಲಿ ಕಾಯಕ ಮಾಡುತ್ತಲೇ ಮಹಾನ್ ವ್ಯಕ್ತಿಯಾಗಿ ಬೆಳೆದ ಬಗೆ:
ಡಾ. ಎ. ಸುಬ್ಬರಾಯರ ಕರ್ಮಭೂಮಿ ಕೇರಳದ ಉತ್ತರ ತುದಿಯ ಮಂಜೇಶ್ವರ. ಅವರಲ್ಲಿಗೆ ವೈದ್ಯರಾಗಿ ಕಾಲಿಟ್ಟದ್ದು ೧೯೪೩ರಲ್ಲಿ. ವೈದ್ಯವೃತ್ತಿಯಿಂದಲೂ, ಜನತಾ ರಂಗಭೂಮಿಯ ಕಲಾ ಚಟುವಟಿಕೆಗಳಿಂದಲೂ ಅಲ್ಲೇ ಜನಾನುರಾಗ ಗಳಿಸಿದರು. ಕಮ್ಯೂನಿಸ್ಟ್ ಪಕ್ಷ ಸೇರಿ ಸಂಘಟನೆ ಕಟ್ಟಿ ಬೆಳೆಸಿದರು. ದಿನೇಶ್ ಬೀಡಿ ಸೊಸೈಟಿ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನಲ್ಲಿ ಜವಾಬ್ದಾರಿಯ ಸ್ಥಾನಗಳನ್ನು ಹಲವಾರು ವರುಷ ನಿರ್ವಹಿಸಿದರು. ನಿಸ್ವಾರ್ಥದಿಂದ ಜನಸೇವೆ ಮಾಡುತ್ತಲೇ ಜನನಾಯಕರಾದರು. ಸರಳತೆಯಿಂದಲೇ ಪ್ರತಿಯೊಬ್ಬರ ಮನ ಗೆದ್ದರು. ನೇರ ನಡೆನುಡಿ, ಶುದ್ಧ ಚಾರಿತ್ರ್ಯದಿಂದಾಗಿ ಎಲ್ಲರ ಗೌರವ ಗಳಿಸಿದರು. ರಾಜ್ಯಸಭಾ ಸದಸ್ಯರಾಗಿ, ಶಾಸಕರಾಗಿ, ಮಂತ್ರಿಯಾಗಿ ನಿಷ್ಕಳಂಕವಾಗಿ ಕರ್ತವ್ಯ ನಿರ್ವಹಣೆ ಮಾಡಿ, ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಗಳಿಸಿದರು. ೧೪ ಸಪ್ಟಂಬರ್ ೨೦೦೩ರಂದು ನಿಧನರಾದ ಅವರು ತನಗಾಗಿ ಏನನ್ನೂ ಬಯಸಲಿಲ್ಲ. ಕೂಡಿ ಹಾಕಲಿಲ್ಲ. ತನ್ನ ಮಕ್ಕಳು ಹಾಗೂ ಕುಟುಂಬದವರಿಗೂ ಪ್ರೀತಿ ವಿಶ್ವಾಸಗಳನ್ನಷ್ಟೇ ಕೊಟ್ಟರು. ಶ್ರೀಮದ್ ಅನಂತೇಶ್ವರ ದೇವಸ್ಥಾನದ ಎದುರಿನ ಕಟ್ಟಡದ ಮಾಳಿಗೆಯ ಕೋಣೆಯಲ್ಲಿ ಕ್ಲಿನಿಕ್ ಆರಂಬಿಸಿ, ಅಲ್ಲಿಯೇ ವೈದ್ಯವೃತ್ತಿ ನಡೆಸಿದರು. ಮಂತ್ರಿಯಾದಾಗ, ಅದನ್ನೂ ವೈದ್ಯರೊಬ್ಬರಿಗೆ ಧಾರೆಯೆರೆದರು. ಮಂಜೇಶ್ವರದ ಕ್ಲಿನಿಕ್‌ನ ಎದುರಿನ ಬಾಡಿಗೆ ಮನೆಯಲ್ಲೇ ಕೊನೆಯವರೆಗೂ ಬದುಕಿ, ಬಾಳಿ, ಮಹಾನ್ ವ್ಯಕ್ತಿಯಾಗಿ ಬೆಳೆದರು.