Organic Living

ಲೇಖಕಿಯರು: ಡಾ. ಎಂ. ವಸುಂಧರ, ಡಾ. ವಸುಂಧರಾ ಭೂಪತಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: ೨೦೦೭      ೯ನೇ ಮುದ್ರಣ: ೨೦೧೭     ಪುಟ: ೧೬೦ + ೪೦ ವರ್ಣ      ಬೆಲೆ: ರೂ.೨೦೦/-

ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನೂ ಸೊಪ್ಪಿನ ಗಿಡಗಳನ್ನೂ ಬೆಳೆಸಿ, ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು.

ಹಲವು ಅನಾರೋಗ್ಯ/ ಜಾಡ್ಯಗಳಿಗೆ ಚಿಕಿತ್ಸೆ ನೀಡಲು ನಮ್ಮ ದೇಶದ ಪಾರಂಪರಿಕ ಚಿಕಿತ್ಸಕರು ಬಳಸುತ್ತಿದ್ದ ಈ ಕೆಳಗಿನ ೩೬ ಔಷಧೀಯ ಸಸ್ಯಗಳನ್ನು ಇದರಲ್ಲಿ ಪರಿಚಯಿಸಲಾಗಿದೆ: ಅಮೃತಬಳ್ಳಿ, ಅಶ್ವಗಂಧ (ಹಿರೇಮದ್ದಿನ ಗಿಡ), ಆಡುಸೋಗೆ, ಒಂದೆಲಗ, ಕರಿಬೇವು, ಕೊತ್ತಂಬರಿ, ಗುಲಾಬಿ, ಚಕ್ರಮುನಿ, ಜೀವಂತಿ, ಜೇಷ್ಠಮಧು (ಅತಿಮಧುರ), ತುಂಬೆ, ತುಳಸಿ, ದಾಸವಾಳ, ದೊಡ್ಡಪತ್ರೆ, ನಂದಿಬಟ್ಟಲು, ನಿಂಬೆಹುಲ್ಲು (ಮಜ್ಜಿಗೆ ಹುಲ್ಲು), ನುಗ್ಗೆ, ನೆಲನೆಲ್ಲಿ, ನೆಲಬೇವು, ಪಪ್ಪಾಯ, ಪಾರಿಜಾತ, ಪುಂಡಿಸೊಪ್ಪು, ಪುದೀನ, ಬಜೆ, ಬಸಳೆ ಸೊಪ್ಪು,  ಬ್ರಾಹ್ಮಿ, ಬೇವು, ಭೃಂಗರಾಜ, ಮಧುನಾಶಿನಿ, ಮಲ್ಲಿಗೆ, ಮಂಗರವಳ್ಳಿ, ಮೆಂತ್ಯಸೊಪ್ಪು, ಲೋಳೆಸರ (ಕುಮಾರಿ), ಸದಾಪುಷ್ಪಿ (ಕಾಶಿ ಕಣಗಿಲೆ), ಸ್ಟೀವಿಯ (ಮಧುವಂತ), ಹಿಪ್ಪಲಿ.

ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಈ ಮಾಹಿತಿ ದಾಖಲಿಸಲಾಗಿದೆ:
ಸಸ್ಯವರ್ಣನೆ, ಉಪಯುಕ್ತ ಭಾಗಗಳು, ಸಸ್ಯ ಹಂಚಿಕೆ, (ಬೆಳವಣಿಗೆಗೆ ಸೂಕ್ತ) ಮಣ್ಣು ಮತ್ತು ಹವಾಗುಣ, ಸಸ್ಯಾಭಿವೃದ್ಧಿ, ಬಿತ್ತನೆ,  ನಾಟಿ, ಗೊಬ್ಬರ, ಅಂತರ ಬೇಸಾಯ, ಕೀಟ ಮತ್ತು ರೋಗಗಳು, ಸಸ್ಯ ಸಂರಕ್ಷಣೆ, ಕೊಯ್ಲು, ರಾಸಾಯನಿಕ ಘಟಕಗಳು, ಔಷಧೀಯ ಗುಣಗಳು, ಇತರ ಭಾಷೆಗಳಲ್ಲಿ ಸಸ್ಯದ ಹೆಸರುಗಳು.

ಲೇಖಕರು: ಪಿ. ಎಸ್. ವೆಂಕಟರಾಮ ದೈತೋಟ
ಪ್ರಕಾಶಕರು: ವಿವೇಕಾನಂದ ಸಂಶೋಧನಾ ಕೇಂದ್ರ, ಪುತ್ತೂರು, ದಕ್ಷಿಣ ಕನ್ನಡ
ಪ್ರಕಟಣೆ: 2016            ಪುಟ: 484      ಬೆಲೆ: ರೂ. 500/-

ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು.

ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.

ಪುಸ್ತಕದ ಆರಂಭದಲ್ಲಿ ಪರಿಣತರು ಬರೆದಿರುವ ನಾಲ್ಕು ಮಾಹಿತಿಪೂರ್ಣ ಲೇಖನಗಳಿವೆ:
(1) ಸಸ್ಯಶಾಸ್ತ್ರ ಪರಿಚಯ - ಡಾ. ಎಸ್. ಶಂಕರ ಭಟ್
(2) ಮೂಲಿಕೆ ಬಳಕೆಯ ಮೈಲಿಗಲ್ಲುಗಳು - ಡಾ. ಸತ್ಯನಾರಾಯಣ ಭಟ್ ಪಿ.
(3) ಭಾರತೀಯ ಸಸ್ಯ ಶಾಸ್ತ್ರ ಪರಂಪರೆ - ವಿ. ವಿ. ಭಟ್
(4) ಮೂಲಿಕಾ ತಜ್ನ ವೆಂಕಟರಾಮ ದೈತೋಟ - ಶ್ರೀಪಡ್ರೆ
(5) ಔಷಧೀಯ ಸಸ್ಯ ಸಂಪತ್ತು - ಪಿ. ಎಸ್. ವೆಂಕಟರಾಮ ದೈತೋಟ

ಲೇಖಕರು: ಮಹರ್ಷಿ ಡಾ. ಶ್ರೀ ಆನಂದ್ ಗುರೂಜಿ
ಪ್ರಕಾಶಕರು: ಶ್ರೀನಿಧಿ ಪಬ್ಲಿಕೇಷನ್ಸ್, ಬಳೇಪೇಟೆ, ಬೆಂಗಳೂರು
ಪ್ರಕಟಣೆ: 2014      ಪುಟ: 272 + 104 ವರ್ಣ      ಬೆಲೆ: ರೂ. 360/-

ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ.

ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ, ನಂತರ ಐದಾರು ಸಾಲುಗಳಲ್ಲಿ ಸಸ್ಯದ ವಿವರಣೆ, ಕೊನೆಯಲ್ಲಿ ಆಯುರ್ವೇದದ ಅನುಸಾರ ಸಸ್ಯದ ಉಪಯೋಗಗಳನ್ನು ತಿಳಿಸಲಾಗಿದೆ.

ಮುನ್ನುಡಿಯಲ್ಲಿ ಆಯುರ್ವೇದದ ಹಿನ್ನೆಲೆಯ ಬಗ್ಗೆ ನೀಡಲಾಗಿರುವ ಮಾಹಿತಿ ಹೀಗಿದೆ: ಆಯುರ್ವೇದ ಚಿಕಿತ್ಸಾ ಪದ್ಧತಿ ಕುರಿತ ಮೂರು ಪುರಾತನ ಗ್ರಂಥಗಳೆಂದರೆ ಚರಕ ಸಂಹಿತ, ಶುಶ್ರುತ ಸಂಹಿತ ಮತ್ತು ಭೇದ ಸಂಹಿತ. ಈ ಗ್ರಂಥಗಳನ್ನು 3ರಿಂದ 6ನೇ ಶತಮಾನದ ಮಧ್ಯಕಾಲದಲ್ಲಿ ಬರೆದಿರಬಹುದು. ನಂತರ ಕಶ್ಯಪ ಮತ್ತು ಹರಿತ ಸಂಹಿತೆಗಳು ಗುಪ್ತರ ಕಾಲದ ಮೊದಲು ಬರೆದಿರಬಹುದೆಂದು ತಿಳಿಯಲಾಗಿದೆ. ಗುಪ್ತರ ಕಾಲದಲ್ಲಿ ವಾಗ್ಭಟ ಮತ್ತು ಮಾಧವ ಸಂಹಿತೆಗಳನ್ನು ರಚಿಸಲಾಗಿದೆ.

ಅನಂತರ ಹಲವಾರು ಗ್ರಂಥಗಳು ಬುದ್ಧನ ಕಾಲದಲ್ಲಿ ಅಂದರೆ ಮೌರ್ಯ ಸಾಮ್ರಾಜ್ಯದ ಆಡಳಿತ ಕಾಲದಲ್ಲಿ ರಚಿಸಲ್ಪಟ್ಟವು; ಚಿಕಿತ್ಸಾಲಯ ಮತ್ತು ಚಿಕಿತ್ಸಾ ಪದ್ಧತಿ ಹೇಗಿರಬೇಕು ಎಂಬುದರ ಬಗ್ಗೆ ಬಹಳಷ್ಟು ಅಧ್ಯಯನಗಳು ನಡೆದಿರುವುದನ್ನು ನಮಗೆ ತಿಳಿಸುತ್ತವೆ. ಹೀಗೆ ಹಂತಹಂತವಾಗಿ ಭರತಖಂಡದಲ್ಲಿ ಬೆಳೆದ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅನೇಕ ಸಸ್ಯಜಾತಿಗಳ ಔಷಧೀಯ ಗುಣ ಮತ್ತು ಚಿಕಿತ್ಸಾ ಪದ್ಧತಿಯ ಬಗ್ಗೆ ಹಲವಾರು ಗ್ರಂಥಗಳಲ್ಲಿ ಶ್ಲೋಕಗಳ ಮೂಲಕ ವಿಶ್ಲೇಷಿಸಲಾಗಿದೆ.”

ಈ ಪುಸ್ತಕದ ಲೇಖಕರು: ಹಲವರು
ಪ್ರಕಾಶಕರು: ಕರ್ನಾಟಕ ಅರಣ್ಯ ಇಲಾಖೆ, ತುಮಕೂರು; ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ತಿಪಟೂರು
ಪ್ರಕಟಣೆ: ೨೦೦೨      ಪುಟಗಳು: ೨೮೧ + ೧೨ ವರ್ಣ      ಬೆಲೆ: ನಮೂದಿಸಿಲ್ಲ

ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. ೬೯ ಪಾರಂಪರಿಕ ವೈದ್ಯರು ಮತ್ತು ೩೭ ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು ೧೯ ಸದಸ್ಯರಿದ್ದರು.

ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು ಬಳಸಿ ಜನರ ಆರೋಗ್ಯ ರಕ್ಷಿಸುತ್ತಿದ್ದ ಈ ಪದ್ಧತಿ ವ್ಯಾಪಕವಾಗಿ ಜನಬಳಕೆಯಲ್ಲಿತ್ತು. ಈ ಔಷಧಿ ಪದ್ಧತಿ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿತ್ತು. ಮಾತ್ರವಲ್ಲ, ಕಡಿಮೆ ಖರ್ಚಿನ, ಆಯುರಾರೋಗ್ಯವೃದ್ಧಿಯ ಮನೆಮದ್ದಿನ ಜೀವನಕ್ರಮವೂ ಆಗಿತ್ತು.

ಭಾರತಕ್ಕೆ ಬ್ರಿಟಿಷರ ಆಗಮನದ ನಂತರ, ಬಹುಪಾಲು ಜನರು ಪಾಶ್ಚಿಮಾತ್ಯ ಔಷಧಿ ಪದ್ಧತಿಯ ಅನುಸರಣೆಗೆ ತೊಡಗಿದ ಕಾರಣ, ನಮ್ಮ ಪಾರಂಪರಿಕ ಚಿಕಿತ್ಸಾ ಪದ್ಧತಿ ಕ್ಷೀಣಿಸಿ, ಕಣ್ಮರೆಯಾಗುವ ಹಂತ ತಲಪಿತು. ಆದರೆ, ನಮ್ಮ ಮಾತೆಯರು ಮತ್ತು ಪಾರಂಪರಿಕ ವೈದ್ಯರು ನಿರಂತರವಾಗಿ ಈ ಚಿಕಿತ್ಸಾ ಪದ್ಧತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಪದ್ಧತಿಯಲ್ಲಿ ಸಸ್ಯಗಳೇ ಆಧಾರಸ್ತಂಭವಾಗಿದ್ದು, ಕೆಲವು ಸಸ್ಯಗಳು ನಶಿಸಿದ್ದು, ಇನ್ನು ಕೆಲವು ವಿನಾಶದ ಅಂಚಿನಲ್ಲಿವೆ. ಆದ್ದರಿಂದ ಆರೋಗ್ಯ ರಕ್ಷಣೆಗಾಗಿ ಹಸಿರು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ. ಹಾಗಾಗಿ, ಹಸಿರು ಸಂರಕ್ಷಣೆಯಿಂದ ಆರೋಗ್ಯವನ್ನು ಹಸಿರಾಗಿಡುವ ಉದ್ದೇಶದಿಂದ ಈ ಕೈಪಿಡಿಯನ್ನು ರಚಿಸಲು ನಿರ್ಧರಿಸಲಾಯಿತು.

ಲೇಖಕರು: ಆಯುರ್ವೇದ ಪರಿಣತರು
ಪ್ರಕಾಶಕರು: ಶ್ರೀ ಬೈಧ್ಯನಾಥ್ ಆಯುರ್ವೇದ ಭವನ ಪ್ರೈ. ಲಿ., ಗ್ರೇಟ್ ನಾಗ್ ರೋಡ್, ನಾಗಪುರ
ಪುಟ: 178        ಬೆಲೆ: ರೂ. 25/-

ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.

ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು ಮುದ್ರಿಸಲಾಗಿದೆ! ಕನ್ನಡದ ಪುಸ್ತಕಗಳ ಒಂದು ಸಾವಿರ ಪ್ರತಿಗಳನ್ನು ಮುದ್ರಿಸುವುದನ್ನು ನಿಯಮದಂತೆ ಪಾಲಿಸಲಾಗುತ್ತದೆ (ಇದಕ್ಕೆ ಕೆಲವು ವಿನಾಯ್ತಿಗಳಿವೆ). ಯಾಕೆಂದರೆ, ಬಹುಪಾಲು ಪುಸ್ತಕಗಳ ಒಂದು ಸಾವಿರ ಪ್ರತಿಗಳು ಮಾರಾಟವಾಗಲು 3ರಿಂದ 10 ವರುಷ ತಗಲುತ್ತದೆ! ಹಾಗಿರುವಾಗ, ವೈದ್ಯರು ಮಾತ್ರ ಓದುಗರಾಗಿರುವ ಈ ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದು ಪ್ರಕಾಶಕರ ಸಾಹಸ.

ಪ್ರಕಾಶಕರು ಆಯುರ್ವೇದಕ್ಕೆ ಸಂಬಂಧಿಸಿದ ಇತರ 43 ಪುಸ್ತಕಗಳನ್ನು ಸಂಸ್ಕೃತ, ಹಿಂದಿ ಭಾಷೆಗಳಲ್ಲಿಯೂ 11 ಪುಸ್ತಕಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ ಎಂಬುದು ಗಮನಾರ್ಹ. ಇವುಗಳ ಬಗ್ಗೆ ಚುಟುಕು ಮಾಹಿತಿ ಈ ಪುಸ್ತಕದಲ್ಲಿ ಲಭ್ಯ.

ಆಯುರ್ವೇದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಶ್ರೀ ಬೈಧ್ಯನಾಥ ಆಯುರ್ವೇದ ಭವನ ದೊಡ್ದ ಹೆಸರು. ಅವರ ನೂರಾರು ರಸಭಸ್ಮ, ಬಟಿ, ಗುಗ್ಗುಲು, ಚೂರ್ಣ, ಆಸವರಿಷ್ಟ ಹಾಗೂ ಪೇಟೆಂಟ್ ಔಷಧಿಗಳ ರೋಗಾಧಿಕಾರ ಮತ್ತು ಪ್ರಯೋಗ ವಿಧಿಗಳನ್ನು ಸಮಗ್ರವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಔಷಧೀಯ ತೈಲಗಳು, ಅಂಜನ, ವರ್ತಿ-ಸುರ್ಮ-ಮಂಜನ, ಘೃತ, ಶರಬತ್ - ಅರ್ಕ - ಪಾನಕಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಈ ಪುಸ್ತಕದಲ್ಲಿ (140ನೇ ಪುಟದ ವರೆಗೆ) ವಿವಿಧ ವರ್ಗದ ಔಷಧಿಗಳ ಪ್ರಧಾನ ಗುಣ ಮತ್ತು ಸೇವನೆ ಪ್ರಮಾಣ ಹಾಗೂ ವಿಧಾನದ ಮಾಹಿತಿ ನೀಡಲಾಗಿದೆ. ಉದಾಹರಣೆಗೆ “ಗುಗ್ಗುಲು" ವರ್ಗದ ಸುಪ್ರಸಿದ್ಧ ಔಷಧಿ:
ಮಹಾ ಯೋಗರಾಜ ಗುಗ್ಗುಲು (ಆಧಾರ: ಶ್ರಾಂಘಧರ ಸಂಹಿತಾ)

ಪ್ರತಿ ವರುಷ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲ್ಪಡುತ್ತಿದ್ದು, ಇದು "ವಿಶ್ವ ಗುರು"ವಾಗಿ ನಮ್ಮ ದೇಶ ಭಾರತದ ಮಗದೊಂದು ಆಯಾಮ. ಕಳೆದ ವರುಷ ಭಾರತದಲ್ಲಿ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾದವರು ಲಕ್ಷಗಟ್ಟಲೆ ಜನರು ಎಂಬುದು ನಮಗೆಲ್ಲರಿಗೂ ಅಭಿಮಾನದ ಸಂಗತಿ.

2022ರಲ್ಲಿ ಮೈಸೂರು ಅರಮನೆ ಆವರಣದಲ್ಲಿ ಮುಂಜಾನೆ ಜರಗಿದ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ಅಲ್ಲಿ ಅವರ ಜೊತೆ ಯೋಗಾಸನಗಳನ್ನು ಮಾಡಿದ ಜನರ ಸಂಖ್ಯೆ 15 ಸಾವಿರ. ಆ ಸಂದರ್ಭದಲ್ಲಿ ಪ್ರಧಾನಿಯವರು ಹೇಳಿದ ಒಂದು ಮಾತು ಯೋಗದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುತ್ತದೆ: "ಯೋಗ ನಮ್ಮೆಲ್ಲರಿಗೂ ಸಮಸ್ಯಾ ಪರಿಹಾರಕ ಆಗಬಲ್ಲದು.”

ಭಾರತದ ಯೋಗಕ್ಕೆ ಸುಮಾರು 5000 ವರುಷಗಳ ಪರಂಪರೆ. ಇದು ದೇಹ ಮತ್ತು ಮನಸ್ಸಿನ ಸಾಮರಸ್ಯ ಸಾಧಿಸಲು ಅತ್ಯಂತ ಪರಿಣಾಮಕಾರಿ ಆಚರಣೆ. ಆದ್ದರಿಂದಲೇ 11 ಡಿಸೆಂಬರ್ 2014ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜೂನ್ 21ನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಇದರಿಂದಾಗಿ ಭಾರತದ ಯೋಗವು ಮಾನವರೆಲ್ಲರ ಆರೋಗ್ಯ ರಕ್ಷಣೆ ಹಾಗೂ ಯೋಗಕ್ಷೇಮ ಸಾಧನೆಯ ಸೂತ್ರವೆಂದು ಜಾಗತಿಕ ಆಂದೋಲನದ ಸ್ವರೂಪ ಪಡೆಯಿತು. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಸಂಗತಿ.

ಯೋಗದ ಬಗ್ಗೆ ನಾವು ತಿಳಿದಿರಲೇ ಬೇಕಾದ ಇನ್ನೂ ಹಲವು ಸಂಗತಿಗಳಿವೆ. ಯೋಗ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ಇದು ಸಂಸ್ಕೃತದ “ಯುಜ್" ಎಂಬುದರಿಂದ ಉತ್ಪತ್ತಿಯಾದ ಪದ. ಕೂಡಿಸು ಮತ್ತು ಮನಸ್ಸನ್ನು ನಿರ್ದೇಶಿಸಿ ಕೇಂದ್ರೀಕರಿಸು ಎಂಬ ಅರ್ಥಗಳನ್ನು ಇದು ಹೊಮ್ಮಿಸುತ್ತದೆ. ಜ್ನಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗ - ಇವು ಯೋಗದ ನಾಲ್ಕು ವಿಧಗಳು.

ಜೂನ್ 21, 2023ರಂದು ಒಂಭತ್ತನೆಯ “ಅಂತರರಾಷ್ಟ್ರೀಯ ಯೋಗ ದಿನ"ವನ್ನು ಜಗತ್ತಿನಾದ್ಯಂತ ಆಚರಿಸಲಾಯಿತು. ಯೋಗವನ್ನು  ಪ್ರತಿ ದಿನ ಶ್ರದ್ಧೆಯಿಂದ ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಗತ್ತಿನಾದ್ಯಂತ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದೇ ಇದರ ಉದ್ದೇಶ.

ಈ ಹಿನ್ನೆಲೆಯಲ್ಲಿ “ಯೋಗಾಸನಗಳ ಕ್ರಮಬದ್ಧ ಅಭ್ಯಾಸದಿಂದ ಆರೋಗ್ಯ ಉತ್ತಮಪಡಿಸಲು ಸಹಾಯವಾಗುತ್ತದೆಯೇ?” ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳುವುದು ಅಗತ್ಯ.

ನವದೆಹಲಿಯ ಎಐಐಎಂಎಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಮ್ಮ ದೇಶದಲ್ಲಿ ಯೋಗದ ಬಗೆಗಿನ ಸಂಶೋಧನೆಗಳ ಪ್ರಧಾನ ಕೇಂದ್ರವಾಗಿದೆ. ಇಲ್ಲಿ ವೈದ್ಯರು ಮತ್ತು ಸಂಶೋಧಕರು ಯೋಗದ ಚಿಕಿತ್ಸೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಯೋಗ ಚಿಕಿತ್ಸೆಯನ್ನು ಆಧುನಿಕ ಔಷಧಿಗಳ ಜೊತೆ ರೋಗಿಗಳಿಗೆ ನೀಡುವುದು ಮತ್ತು ಕ್ಲಿನಿಕಲ್ ಪ್ರಾಕ್ಟೀಸಿಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಇದರ ಉದ್ದೇಶ. ಯೋಗ ಭಾರತದ ಸಾಂಸ್ಕೃತಿಕ ಸೊತ್ತು ಆಗಿದ್ದು, ಎಐಐಎಂಎಸ್‌ನ ಈ ಸಂಶೋಧನೆಗಳ ಬಗ್ಗೆ ಜಗತ್ತಿನ ಎಲ್ಲೆಡೆಗಳ ವಿಜ್ನಾನಿಗಳೂ ತಜ್ನರೂ ಆಸಕ್ತಿ ತೋರುತ್ತಿದ್ದಾರೆ.

ಎಐಐಎಂಎಸ್‌ನಲ್ಲಿ 2016ರಲ್ಲಿ ಸಿಐಎಂಆರ್ (ಸೆಂಟರ್ ಫಾರ್ ಇಂಟೆಗ್ರೇಟಿವ್ ಮೆಡಿಸಿನ್ ಆಂಡ್ ರೀಸರ್ಚ್) ಸ್ಥಾಪಿಸಲಾಯಿತು. ಇಲ್ಲಿ ಆಧುನಿಕ ಔಷಧಿಗಳ ಚಿಕಿತ್ಸಕರು ಯೋಗ ಮತ್ತು ಆಯುರ್ವೇದ ಚಿಕಿತ್ಸಕರ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಡಾ. ರಿಮಾ ದಾದಾ ಹಾಗೂ ಇತರ ಸಂಶೋಧಕರೂ ಕಾರ್ಯನಿರತರಾಗಿದ್ದಾರೆ. ಇವರು ಅಂಗರಚನಾ ವಿಜ್ನಾನ ವಿಭಾಗದ ಅಣು ಪುನರುತ್ಪಾದನಾ ಮತ್ತು ತಳಿವಿಜ್ನಾನ ಪ್ರಯೋಗಾಲಯದ ಪ್ರೊಫೆಸರ್.  2008ರಿಂದೀಚೆಗೆ ಇವರು ರುಮಾಟಿಕ್ ಆರ್ಥರೈಟಿಸ್, ಗ್ಲುಕೋಮಾ, ಖಿನ್ನತೆ ಮತ್ತು ಪುರುಷರ “ಬಂಜೆತನ" - ಈ ಅನಾರೋಗ್ಯ ಸಮಸ್ಯೆಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ.
-ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ?
-ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು?
-ಸೂರ್ಯನ ಕಿರಣಗಳು ಮತ್ತು ಶಾಖ ನಮ್ಮ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿದೆ?
-ಆಕಾಶದಲ್ಲಿ ಈ ಭೂಮಿ ಕುಸಿಯದೆ, ಸಾವಿರಾರು ವರುಷಗಳಿಂದ ಹೇಗೆ ಜೀವಸಂಕುಲವನ್ನು ರಕ್ಷಿಸುತ್ತಿದೆ?
-ಬೇರೆ ಗ್ರಹಗಳಲ್ಲಿ ಜೀವಿಗಳು ಇದ್ದಾವೆಯೇ? ಅವನ್ನು ಹೇಗೆ ಸಂಪರ್ಕಿಸಬಹುದು?

ಇಂತಹ ಸಾವಿರಾರು ಪ್ರಶ್ನೆಗಳ ಉತ್ತರಗಳು ನಮಗೆ ಗೊತ್ತಿಲ್ಲ. ಅವುಗಳಿಗೆ ಇನ್ನು ನೂರು ವರುಷಗಳೊಳಗೆ ಉತ್ತರ ಸಿಗುವ ಯಾವ ಸೂಚನೆಯೂ ಇಲ್ಲ.

ನಮ್ಮ ದಿನನಿತ್ಯದ ಜೀವನದಲ್ಲಿಯೂ ಹಲವಾರು ಸಂಗತಿಗಳು ನಮಗೆ ವಿಸ್ಮಯ ಹಾಗೂ ನಿಗೂಢ ಅನಿಸುತ್ತವೆ. ಯಾಕೆಂದರೆ ಅವುಗಳ ಬಗ್ಗೆ ಯಾಕೆ? ಏನು? ಹೇಗೆ? ಎಂಬ ಪ್ರಶ್ನೆಗಳಿಗೆ ಯಾವ ಉತ್ತರಗಳೂ ಸಿಗೋದಿಲ್ಲ. ಉದಾಹರಣೆಗೆ, ನಮ್ಮ ಆರೋಗ್ಯ. ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ಮಾನವರ ಮೇಲೆ ಧಾಳಿ ಮಾಡಿ ಏನೆಲ್ಲ ಅನಾಹುತಗಳಿಗೆ ಕಾರಣವಾಯಿತು ಎಂಬುದನ್ನು ಗಮನಿಸಿ. 2020ರಿಂದೀಚೆಗೆ ಕಣ್ಣಿಗೆ ಕಾಣಿಸದ ಈ ವೈರಸ್ ಸೋಂಕು ತಗಲಿದವರ ಸಂಖ್ಯೆ 69 ಕೋಟಿ ದಾಟಿದೆ ಮತ್ತು  ಅದಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 68.92 ಲಕ್ಷ. ಮನುಷ್ಯ ಏನೆಲ್ಲ ಕಸರತ್ತು ಮಾಡಿದರೂ ಕೊರೋನಾ ಧಾಳಿಗೆ ಬಲಿಯಾದವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ, ಅಲ್ಲವೇ?

ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ – ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಹಾಗೂ ಆರೋಗ್ಯಕ್ಕೆಪೂರಕವಾದ ಸಿರಿಧಾನ್ಯಗಳು.
ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿಸಿದ ಧಾನ್ಯಗಳಲ್ಲ. ಈಜಿಪ್ಟಿನ ಪಿರಮಿಡ್ಗಳೊಳಗೆ ಮಮ್ಮಿಗಳ ಹತ್ತಿರ ಹಾಗೂ ಹರಪ್ಪ ಮತ್ತು ಮೆಹೆಂಜೊದಾರೋಗಳಲ್ಲಿ ಪ್ರಾಚೀನ ಅವಶೇಷಗಳ ಜೊತೆಗೆ ಸಿರಿಧಾನ್ಯಗಳು ಪತ್ತೆಯಾಗಿವೆ. ಅಂದರೆ, ಇವುಗಳಿಗೆ 10,000 ವರುಷಗಳ ಇತಿಹಾಸವಿದೆ. ಪೂರ್ವ ಏಷ್ಯಾದಲ್ಲಿ ಹಾಗೂ ಭಾರತದಲ್ಲಿ ಇವುಗಳ ಬೇಸಾಯ ಮಾಡಲಾಗುತ್ತಿತ್ತು.
ಕಡಿಮೆ ಮಳೆಯ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ ಸಿರಿಧಾನ್ಯಗಳು ನಮ್ಮ ಪೂರ್ವಿಕರ ಆಹಾರವಾಗಿದ್ದವು. ಇವುಗಳ ಸೇವನೆಯಿಂದ ಅವರು ಆರೋಗ್ಯವಂತರಾಗಿ ಬಾಳಿದರು. ಕ್ರಮೇಣ, ನಾಗರಿಕತೆ ಹರಡಿದಂತೆ ಸಿರಿಧಾನ್ಯಗಳ ಬಳಕೆ ಕಡಿಮೆಯಾಯಿತು. ಹೊಸ ಜೀವನಶೈಲಿಗೆ ಮಾರುಹೋದ ಜನರು ಇವು ಬಡವರ ಆಹಾರವೆಂದು ಪರಿಗಣಿಸಿದರು; ಇವನ್ನು “ತೃಣಧಾನ್ಯಗಳು” ಎಂದು ಹೆಸರಿಸಿ ಮೂಲೆಗುಂಪಾಗಿಸಿದರು.
ಈಗ ನಾಗರಿಕತೆಯ ನಾಗಾಲೋಟದಲಿ ಸಿಲುಕಿದ ಜನರಿಗೆ ಬಿಳಿಅಕ್ಕಿ, ಗೋಧಿಯ ಆಹಾರ, ಬೇಕರಿ ತಿನಿಸುಗಳು, ಸಂಸ್ಕರಿತ ತಿಂಡಿಗಳು, ಪ್ಯಾಕೆಟ್ ಆಹಾರ, ಪಿಜ್ಜಾ, ಬರ್ಗರ್ – ಇವನ್ನೆಲ್ಲ ತಿನ್ನುವುದು ಅಭ್ಯಾಸವಾಗಿದೆ. ಅವಸರದಲ್ಲಿ ಒಂದಷ್ಟು ತಿಂದು, ಕೆಲಸಕಾರ್ಯಗಳಿಗೆ ಧಾವಿಸಬೇಕಾದ ನಗರವಾಸಿಗಳಿಗೆ ಇವೆಲ್ಲ “ತುರ್ತಿನ ಆಹಾರ”ವಾಗಿದೆ. ಆದರೆ ಇವುಗಳಿಂದಾಗಿಯೇ ಅವರ ಆರೋಗ್ಯ ಹದಗೆಡುತ್ತಿದೆ.

ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ 150ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು 24 ನವಂಬರ್ 2019ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ 150ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ 2019ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.
ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗ್ ಎಂಬ ಎರಡು ಸ್ಥಳಗಳಲ್ಲಿ, ಮೂರು ರಸ್ತೆಗಳು ಕೂಡುವಲ್ಲಿ ಚಕ್ರವಿಲ್ಲದ ರಥಗಳನ್ನು ನಿರ್ಮಿಸುವುದು ಗುರ್ಜಿಯ ವಿಶೇಷ. ಈ ರಥಗಳಿಗೆ ಹೂಹಣ್ಣುತರಕಾರಿಗಳಿಂದ ಭರ್ಜರಿ ಅಲಂಕಾರ.  (ಗುರ್ಜಿಯ ಮನಮೋಹಕ ಅಲಂಕಾರದ ಫೋಟೋ ಗಮನಿಸಿ.)
ಗುರ್ಜಿ ಎಂಬುದು ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ದೇವರ ದೀಪೋತ್ಸವದ ಜನಜನಿತ ಹೆಸರು. ಆ ದಿನ ಮುಸ್ಸಂಜೆ ಶರವು ದೇವಸ್ಥಾನದಿಂದ ಶ್ರೀ ಮಹಾಗಣಪತಿ ದೇವರ ಪುಟ್ಟಮೂರ್ತಿಯ ಮೆರವಣಿಗೆ ಸಣ್ಣರಥದಲ್ಲಿ ರಾತ್ರಿ 7.30ರ ಹೊತ್ತಿಗೆ ಹೊರಡುತ್ತದೆ. ನವಭಾರತ ವೃತ್ತ, ಡೊಂಗರಕೇರಿ, ರಥಬೀದಿ ಹಾದಿಯಲ್ಲಿ ಸಾಗಿ (ಮರುದಿನ) ಮುಂಜಾನೆ 2 ಗಂಟೆಗೆ ಮಣ್ಣಗುಡ್ಡೆ ಗುರ್ಜಿ ತಲಪುತ್ತದೆ.
ಈ ಹಾದಿಯುದ್ದಕ್ಕೂ ದೇವರ ಮೂರ್ತಿಗೆ ಅಲ್ಲಲ್ಲಿ ಭಕ್ತಜನರಿಂದ ಪೂಜೆ. ಮಣ್ಣಗುಡ್ದೆಯಲ್ಲಿ ಗುರ್ಜಿಯಲ್ಲಿ ಶ್ರೀ ಮಹಾ ಗಣಪತಿ ದೇವರ ಮೂರ್ತಿಯನ್ನು ಕುಳ್ಳಿರಿಸಿ, ಪೂಜೆ ಸಲ್ಲಿಸಿದ ನಂತರ ಮಣ್ಣಗುಡ್ಡೆ ಪ್ರದೇಶದ ಮನೆಮನೆಯವರಿಂದ ಆರತಿ. ಬಳಿಕ, ದೇವರ ಮೆರವಣಿಗೆ ಅಲ್ಲಿಂದ ಹೊರಟು ಬಲ್ಲಾಳಬಾಗಿನ ಗುರ್ಜಿಗೆ ಪಯಣ. ಅಲ್ಲಿ ಮತ್ತೆ ದೇವರ ಮೂರ್ತಿಗೆ ಪೂಜೆ. ಅನಂತರ ದೇವರ ಮೆರವಣಿಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಹಿಂತಿರುಗುತ್ತದೆ.

Pages