Organic Living

“ಮನೆಮದ್ದಿನ ಮಹತ್ವ” ಬಗ್ಗೆ ಕೂಟ ಮಹಾಜಗತ್ತು - ಮಂಗಳೂರು ಅಂಗಸಂಸ್ಥೆಯ ಮಹಿಳಾ ವೇದಿಕೆಯು 22 ಫೆಬ್ರವರಿ 2015ರಂದು ಮಂಗಳೂರಿನ ಪಾಂಡೇಶ್ವರದ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು. ಜನವರಿ 2015ರಲ್ಲಿ ಮೂರು ದಿನಗಳ ಮನೆಮದ್ದು ಶಿಬಿರದಲ್ಲಿ ಭಾಗವಹಿಸಿದ್ದ ಶ್ರೀಮತಿ ರಾಜಲಕ್ಷ್ಮಿ ಕೆ. ರಾವ್ ಮತ್ತು ಸರಿತಾ ಕಾರಂತ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಆರಂಭದಲ್ಲಿ ಶ್ರೀಮತಿ ರಾಜಲಕ್ಷ್ಮಿಯವರು ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಮದ್ದಿನ ಸೇವನೆಯೇ ಇಲ್ಲದ ದಿನಚರಿ ಸಾಧ್ಯ ಎಂದು ವಿವರಿಸಿದರು. ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡರೆ ಕಾಯಿಲೆಮುಕ್ತ ಜೀವನ ಸಾಧ್ಯ; ಇದಕ್ಕಾಗಿ ಶಿಸ್ತಿನ ಜೀವನ ಅನುಸರಿಸಬೇಕು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಎರಡು ಲೋಟ ಬಿಸಿ ನೀರನ್ನು ಕುಡಿದು, ಫ್ಲೋರೈಡ್ ಇಲ್ಲದ ಹಲ್ಲಿನಪುಡಿಯಲ್ಲಿ ಹಲ್ಲು ಶುಚಿ ಮಾಡಿ, ಜೀರಿಗೆ ಅಥವಾ ಉಪ್ಪು ಹಾಕಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುಗಳಿಗೆ ಮತ್ತು ಒಸಡಿಗೆ ರಕ್ಷಣೆ ಸಿಗುತ್ತದೆ. ಬೆಳಗ್ಗೆ ಆಯಿಲ್ ಪುಲ್ಲಿಂಗ್ ಸಹ ಒಳ್ಳೆಯದು. ದಿನಾ ಎಳ್ಳೆಣ್ಣೆ ಸ್ನಾನ ದೇಹಾರೋಗ್ಯಕ್ಕೆ ಪೂರಕ. ಸ್ನಾನಕ್ಕೆ ಕಡಲೆ ಹಿಟ್ಟು (ಒಂದು ಭಾಗ), ಸೀಗೆ ಪುಡಿ (ಅರ್ಧಭಾಗ), ಎಳ್ಳೆಣ್ಣೆ (ಒಂದು ಚಮಚ) – ಇವುಗಳ ಮಿಶ್ರಣ (ಸಾಬೂನಿನ ಬದಲು) ಉಪಯೋಗಿಸ ಬಹುದು. ಬೆಳಗಿನ ಉಪಾಹಾರಕ್ಕೆ ಹಿರಿಯರಿಗೆ ಹಣ್ಣು – ತರಕಾರಿ ಒಳ್ಳೆಯದು; ಮಕ್ಕಳಿಗೆ ತಿನಿಸು ಅಗತ್ಯ.

ಎಪ್ಪತ್ತು ವಯಸ್ಸಿನ ಅಜ್ಜಿ ಮುಂಜಾನೆ ಎದ್ದು, ಬಸ್ಸು ಹಿಡಿದು ಹಳ್ಳಿಯಿಂದ ಪೇಟೆಗೆ ಬಂದು, ಆಟೋರಿಕ್ಷಾ ಹತ್ತಿ, ಮಗನ ಮನೆಗೆ ಬಂದು ನೋಡುತ್ತಾರೆ – ಮಗ ಮತ್ತು ಸೊಸೆ ಆಗಲೇ ಕಾರು ಏರಿ, ನಾಲ್ಕು ವರುಷದ ಮೊಮ್ಮಗನೊಂದಿಗೆ ಎಲ್ಲಿಗೋ ಹೋಗಿದ್ದರು. ಅಜ್ಜಿ ಪಕ್ಕದ ಮನೆಗೆ ಹೋಗಿ ಕಾಯುತ್ತಾ ಕುಳಿತರು. ಮಧ್ಯಾಹ್ನದ ಹೊತ್ತಿಗೆ ಮಗ-ಸೊಸೆ  ಸುಸ್ತಾಗಿ ಮೊಮ್ಮಗನೊಂದಿಗೆ ವಾಪಾಸು ಬಂದರು.
“ಎಲ್ಲಿಗೆ ಹೋಗಿದ್ರಿ? ಎಂದು ಅಜ್ಜಿ ಕೇಳಿದಾಗ, ಒಂದೇ ಉಸಿರಿನಲ್ಲಿ ಮಗನ ಉತ್ತರ, “ಇವತ್ತು ದೊಡ್ಡ ರಾಮಾಯಣ ಆಯ್ತು. ಬೆಳಗ್ಗೆ ಮಗುವಿನ ಮೂಗಿನೊಳಗೆ ಅಂಗಿಯ ಬಟನ್ ಹೋಗಿ ಬಿಡ್ತು. ಅವನಿಗೆ ಉಸಿರಾಡೊದಕ್ಕೇ ಕಷ್ಟವಾಯ್ತು. ಏನ್ ಮಾಡಿದ್ರೂ ಬಟನ್ ಹೊರಗೆ ಬರಲಿಲ್ಲ. ಅದಕ್ಕೇ ಇ-ಎನ್-ಟಿ ಡಾಕ್ಟರಲ್ಲಿಗೆ ಹೋಗಿದ್ವಿ. ಅವರು ಕೊನೆಗೆ ಸಣ್ಣ ಆಪರೇಷನ್ ಮಾಡಿ, ಅವನ ಮೂಗಿಂದ ಆ ಬಟನ್ ಹೊರಗೆ ತೆಗೆದ್ರು. ಮೂರು ಸಾವಿರ ರೂಪಾಯಿ ಖರ್ಚಾಯ್ತು.”
“ಅಯ್ಯೋ, ಅದಕ್ಯಾಕೆ ಡಾಕ್ಟರ ಹತ್ರ ಹೋಗಿದ್ರಿ? ಇಷ್ಟಕ್ಕೆ ಆಪರೇಷನ್ ಬೇಕಾಗಿತ್ತಾ?” ಎಂಬುದು ಅಜ್ಜಿಯ ಪ್ರಶ್ನೆ. “ಮತ್ತೇನ್ ಮಾಡಬೇಕಾಗಿತ್ತು? ಮಗನ ಸವಾಲು. “ಮಗುವಿನ ಮೂಗಿಗೆ ಒಂದು ಚಿಟಿಕೆ ನಶ್ಯ ಹಾಕಿದ್ರೆ ಸಾಕಿತ್ತು. ಆಗ ಮಗೂಗೆ ಸೀನು ಬರ್ತಿತ್ತು. ಮಗು ಸೀನುವಾಗ ಮೂಗಿನೊಳಗಿಂದ ಬಟನ್ ಹೊರಕ್ಕೆ ಬರ್ತಿತ್ತು” ಎಂದು ಅಜ್ಜಿ ಹೇಳುತ್ತಿದ್ದಂತೆ ಮಗ ಪೆಚ್ಚಾಗಿದ್ದ.
ಆ ಅಜ್ಜಿಯದು ಪಾರಂಪರಿಕ ಜ್ನಾನಖಜಾನೆ. ಅಜ್ಜಿಯಿಂದ ಮೊಮ್ಮಕ್ಕಳಿಗೆ, ಅಮ್ಮನಿಂದ ಮಗಳಿಗೆ ದಾಟಿ ಬರುತ್ತಿದ್ದ ಇಂತಹ ಅನುಭವ ಭಂಡಾರ ಇಂದು ನಶಿಸಿ ಹೋಗುತ್ತಿದೆ.
ಮಕ್ಕಳ ಆರೋಗ್ಯ ಸ್ವಲ್ಪ ಹೆಚ್ಚುಕಡಿಮೆಯಾದರೂ, ಈಗ ತಂದೆತಾಯಿ ಧಾವಿಸುವುದು ಆಲೋಪತಿ ವೈದ್ಯರ ದವಾಖಾನೆಗೆ. ಆ ಡಾಕ್ಟರು ಕೊಡುವುದು ರಾಸಾಯನಿಕ ಔಷಧಿಗಳನ್ನು. ಅವುಗಳ ಬಳಕೆಯಿಂದ ಹಲವಾರು ಅಡ್ಡಪರಿಣಾಮಗಳು. ಇವುಗಳ ಶಮನಕ್ಕೆ ಇನ್ನಷ್ಟು ರಾಸಾಯನಿಕ ಔಷಧಿಗಳ ಬಳಕೆ. ಅಂತೂ ಈ ವಿಷವರ್ತುಲದ ಸುಳಿಯಲ್ಲಿ ಹೆಚ್ಚೆಚ್ಚು ಜನರು ಸಿಲುಕುತ್ತಿದ್ದಾರೆ.

ನಾವೆಲ್ಲರೂ ತಿಳಿದಿರಲೇ ಬೇಕಾದ ಐದು ಔಷಧೀಯ ಸಸ್ಯಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಈ ಲೇಖನದಲ್ಲಿವೆ.

 ಶಲ್ಲಕ್ಕಿ
ಶಲ್ಲಕ್ಕಿ ಎಂಬುದು ಸಂಸ್ಕೃತದ ಹೆಸರು. ಈ ಮರಕ್ಕೆ ಸಾಂಬ್ರಾಣಿ ಎಂಬ ಹೆಸರೂ ಬಳಕೆಯಲ್ಲಿದೆ. ಉರಿಯೂತ-ನಿರೋಧ ಗುಣವೇ ಇದರ ವಿಶೇಷ. ಪರಿಮಳಕ್ಕಾಗಿ, ಔಷಧಿಯಾಗಿ ಮತ್ತು ಆಹಾರದ ಜೊತೆ ಇದರ ಮರದ ಅಂಟಿನ ಬಳಕೆ. ಇದರ ಸಸ್ಯಶಾಸ್ತ್ರೀಯ ಹೆಸರು ಬೊಸ್ವೆಲ್ಲಿಯಾ ಸೆರಾಟ.

ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಶಲ್ಲಕ್ಕಿ ಮರಗಳನ್ನು ಬೆಳೆಯಲಾಗುತ್ತಿದೆ. ನಮ್ಮ ಪೂರ್ವಿಕರಿಗೆ ಇದರ ಉಪಯೋಗ ಚೆನ್ನಾಗಿ ತಿಳಿದಿತ್ತು. ಆದ್ದರಿಂದ, ಹಳ್ಳಿಗಳಲ್ಲಿ ಶಲ್ಲಕ್ಕಿಯ ಒಂದಾದರೂ ಮರವನ್ನು ಬೆಳೆಸುತ್ತಿದ್ದರು. ನೋವು ನಿವಾರಕವಾಗಿ ಇದರ ಅಂಟಿನ ಸಾರದ ಬಳಕೆ ವ್ಯಾಪಕ. ಆಯುರ್ವೇದದಲ್ಲಿ ನೋವು ನಿವಾರಣೆಗೆ ಒಂದು ಪ್ರಧಾನ ಚಿಕಿತ್ಸೆ: ನೋವಿರುವ ದೇಹ ಭಾಗಕ್ಕೆ ಇದರ ಎಣ್ಣೆಯನ್ನು ಹಚ್ಚುವುದು ಅಥವಾ ಇದರ ಬಿಸಿ ಎಣ್ಣೆಯನ್ನು ಹೊಯ್ಯುವುದು.

ಋಷ್ಯಗಂಧ
ಸಕ್ಕರೆ ಕಾಯಿಲೆ (ಟೈಪ್ 2) ನಿಯಂತ್ರಣಕ್ಕೆ ಋಷ್ಯಗಂಧ ಪರಿಣಾಮಕಾರಿ ಎಂಬುದು ಬನಾರಸ್ ವಿಶ್ವವಿದ್ಯಾಲಯದ ಎಸ್. ಎಸ್. ಆಸ್ಪತ್ರೆಯಲ್ಲಿ  ನಡೆಸಲಾದ ಅಧ್ಯಯನದಿಂದ ತಿಳಿದು ಬಂದಿದೆ. "ಆಯು" ಪತ್ರಿಕೆಯ ಅಕ್ಟೋಬರ್ - ಡಿಸೆಂಬರ್ 2011ರ ಸಂಚಿಕೆ (ಸಂಖ್ಯೆ 32-4)ಯಲ್ಲಿ ಈ ಆಧ್ಯಯನದ ವರದಿ ಪ್ರಕಟವಾಗಿದೆ. ಯುಎಸ್ ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ಸ್ - ಇದರಲ್ಲಿ ಅಧ್ಯಯನದ ವರದಿ ಲಭ್ಯವಿದೆ. ಕ್ಲಿನಿಕಲ್ ಮೌಲ್ಯಮಾಪನದ ಅನುಸಾರ, ಸಕ್ಕರೆ ಕಾಯಿಲೆಯ ದೀರ್ಘಕಾಲಿಕ ನಿಯಂತ್ರಣದಲ್ಲಿ ಋಷ್ಯಗಂಧದ ಚಿಕಿತ್ಸೆ ಧನಾತ್ಮಕ ಫಲಿತಾಂಶ ನೀಡಿದೆ ಎಂದು ಆ ವರದಿಯಲ್ಲಿ ದಾಖಲಿಸಲಾಗಿದೆ.

“ಎರಡು ಸಾವಿರ ರೂಪಾಯಿ ಕೊಟ್ಟು ಇದರ ಒಂದು ಗಿಡ ತಂದಿದ್ದೆ” ಎಂದು ಗಿಡವೊಂದನ್ನು ತೋರಿಸುತ್ತಾ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ”ದ ಕೃಷಿಕರೊಬ್ಬರು ಹೇಳಿದ್ದರು! ಅದು ಚಾಯಾ ಮಾನ್ಸಾ ಗಿಡ.  

ಅನಂತರ ಅದರ ಬಗ್ಗೆ ಸಂಗ್ರಹಿಸಿದ ಮಾಹಿತಿ: ಅದು ಜಗತ್ತಿಗೆ ದಕ್ಷಿಣ ಅಮೇರಿಕಾದ ಪುರಾತನ “ಮಾಯಾ” ನಾಗರಿಕತೆಯ ಜನರ ಕೊಡುಗೆ ಎಂಬ ಸಂಗತಿ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ದೇಶಗಳಲ್ಲಿ ಸೊಪ್ಪು ತರಕಾರಿಯಾಗಿ ಇದರ ಬಳಕೆ. ಇದರ ಗೆಲ್ಲುಗಳನ್ನು ಕತ್ತರಿಸಿದಾಗ ಬಿಳಿ ಬಣ್ಣದ ದ್ರಾವಣ ಒಸರುತ್ತದೆ.  

2020ರ ಮಳೆಗಾಲದಲ್ಲಿ ಅದರ ನಾಲ್ಕು ತುಂಡುಗಳನ್ನು ತಲಾ ರೂ.20 ಬೆಲೆಗೆ ಖರೀದಿಸಿ ತಂದು, ಮಂಗಳೂರಿನ ನಮ್ಮ ಕೈತೋಟದಲ್ಲಿ ನೆಟ್ಟೆ. ಅವುಗಳಿಂದಲೇ ಇನ್ನೂ ನಾಲ್ಕು ತುಂಡುಗಳನ್ನು ಅಡ್ಡೂರಿನ ತೋಟದಲ್ಲಿಯೂ ನೆಟ್ಟೆ. ಅವೆಲ್ಲವೂ ಸೊಂಪಾಗಿ ಬೆಳೆದಿವೆ. ಪ್ರತಿಯೊಂದು ಗಿಡದಲ್ಲಿಯೂ 20 - 30 ಗೆಲ್ಲುಗಳಿವೆ.

ಒಂದಡಿ (ಮೂವತ್ತು ಸೆಮೀ.) ಉದ್ದದ ತುಂಡುಗಳು ನೆಡುವುದಕ್ಕೆ ಸೂಕ್ತ. ಅವನ್ನು ಬಹಳ ಸುಲಭವಾಗಿ ಬೆಳೆಸಬಹುದು. ವರುಷಕ್ಕೆ ಎರಡು ಸಲ ಗಿಡವೊಂದಕ್ಕೆ ಒಂದು ಮುಷ್ಟಿ ಸಾವಯವ ಗೊಬ್ಬರ ಹಾಕಿ, ವಾರಕ್ಕೆರಡು ಸಲ ನೀರೆರೆದರೆ ಸಾಕು; ನಳನಳಿಸುತ್ತ ಬೆಳೆಯುತ್ತದೆ. ಆರಡಿ ಎತ್ತರಕ್ಕೆ ಬೆಳೆಯುವ ಗಿಡ ಇದು. ಕತ್ತರಿಸಿದಷ್ಟೂ ಹೊಸ ಗೆಲ್ಲುಗಳು ಮತ್ತು ತೆಗೆದಷ್ಟೂ ಎಲೆಗಳು ಚಿಗುರುವುದು ಇದರ ವಿಶೇಷತೆ. ಇದಕ್ಕೆ ಯಾವುದೇ ಕೀಟ ಅಥವಾ ರೋಗ ಬಾಧೆ ಇಲ್ಲವೆನ್ನಬಹುದು.

ಕೈತೋಟದಲ್ಲಿ ಒಂದು ಗಿಡವಿದ್ದರೆ ವಾರಕ್ಕೊಮ್ಮೆ ಎಲೆಗಳು ಅಡುಗೆಗೆ ಲಭ್ಯ. ಒಮ್ಮೆಗೆ ಶೇಕಡಾ 50ರಷ್ಟು ಎಲೆ ಕೊಯ್ಯಬಹುದು.
ಒಬ್ಬರಿಗೆ ಐದು ಎಲೆಗಳಂತೆ ಅಡುಗೆಗೆ ಬಳಸುವುದು ಸೂಕ್ತ. ಪಲ್ಯ, ಸಾಂಬಾರ್, ಸೂಪ್ ಮಾಡುವಾಗ ಇದರ ಹಸುರು ಎಲೆಗಳನ್ನು ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿದರೆ ಚೆನ್ನಾಗಿರುತ್ತದೆ. ಸಲಾಡ್‌ಗಳಿಗೂ ಇದರ ಬೇಯಿಸಿದ ಎಲೆ ಹಾಕಬಹುದು; ಯಾಕೆಂದರೆ ಇದರ ಎಲೆಗಳಿಗೆ ಪ್ರತ್ಯೇಕ ರುಚಿ ಇಲ್ಲ. ಅಡುಗೆಗೆ ಎಳೆಯ ಎಲೆಗಳು ಸೂಕ್ತ. ಎಲೆಗಳನ್ನು ಇಪ್ಪತ್ತು ನಿಮಿಷಗಳಾದರೂ ಬೇಯಿಸಲೇ ಬೇಕು.

ಸಸ್ಯಶಾಸ್ತ್ರೀಯ ಹೆಸರು: Glycyrrhiza glabra
ಸಂಸ್ಕೃತ: ಮಧುಕ, ಕ್ಲೀತಕ, ಯಷ್ಟುಮಧು
ಇಂಗ್ಲಿಷ್: Liquorice
ಹಿಂದಿ: ಜೇಷ್ಠಮಧ್, ಮೀಠಿಲಕಡಿ
ಕನ್ನಡ: ಜೇಷ್ಠಮಧು, ಅತಿಮಧುರ

ಪಾರಂಪರಿಕವಾಗಿ ಆಯುರ್ವೇದ ವೈದ್ಯರು ಚಿಕಿತ್ಸೆಗೆ ಬಳಸುತ್ತಿದ್ದ ಸಸ್ಯ ಜೇಷ್ಠಮಧು. ಸಿಹಿತಿಂಡಿಗಳ ತಯಾರಿಯಲ್ಲಿಯೂ ಇದರ ಬೇರು ಮತ್ತು ಗುಪ್ತಕಾಂಡಗಳ ಬಳಕೆ ಜನಜನಿತ. ಇದರ ಹೆಸರೇ ಸೂಚಿಸುವಂತೆ ಇದರ ರುಚಿ ಸಿಹಿಸಿಹಿ – ಅತಿ ಮಧುರ.
ಬಹುವಾರ್ಷಿಕ ಸಸ್ಯವಾದ ಜೇಷ್ಠಮಧುವಿನ ಹೂಗಳು ನೇರಳೆ ಬಣ್ಣದವು. ಬೇರುಗಳಿಂದ ಇದರ ಸಸ್ಯಾಭಿವೃದ್ಧಿ. ಬೇರುತುಂಡುಗಳನ್ನು ನೆಟ್ಟು ೧೫ ತಿಂಗಳ ನಂತರ ಒಂದು ಚದರ ಮೀಟರ್ ಜಾಗದಿಂದ ೩೦೦ ಗ್ರಾಮ್ ಒಣ ಜೇಷ್ಠಮಧು ಪಡೆಯಲು ಸಾಧ್ಯ. ಬೇರುಗಳನ್ನು ಬಿಸಿಲು ಮತ್ತು ನೆರಳಿನಲ್ಲಿ ಹರಡಿ ಒಣಗಿಸಬೇಕು.

ಔಷಧೀಯ ಬಳಕೆ (ವಿವಿಧ ಮೂಲಗಳಿಂದ):
-ಕೆಮ್ಮು, ಗಂಟಲು ನೋವು ಗುಣವಾಗಲು ದಿನಕ್ಕೆ ೨-೩ ಸಲ ಜೇಷ್ಠಮಧುವಿನ ಕಷಾಯ ಸೇವನೆ ಸಹಕಾರಿ. ಅಥವಾ ಜೇನುತುಪ್ಪದೊಂದಿಗೆ ಒಂದು ಚಮಚ ಜೇಷ್ಠಮಧುವಿನ ಪುಡಿ ಸೇವಿಸಬಹುದು.
-ಸ್ವರ ಒಡೆದಿದ್ದರೆ ವಾಸಿ ಮಾಡಲು ಜೇನುತುಪ್ಪದೊಂದಿಗೆ ಇದರ ಪುಡಿಯ ಸೇವನೆ ಪರಿಣಾಮಕಾರಿ. ಅದಕ್ಕಾಗಿ ಬಾಯಿಗೆ ಹಾಕಿಕೊಂಡ ಪುಡಿ ಸ್ವಲ್ಪ ಹೊತ್ತು ಗಂಟಲಿನಲ್ಲೇ ಇರಿಸಿಕೊಳ್ಳಬೇಕು; ತಕ್ಷಣ ನುಂಗಬಾರದು.
-ಮಲಬದ್ಧತೆ ನಿವಾರಣೆಗೂ ಇದರ ಕಷಾಯ ಸೇವನೆ ಸಹಕಾರಿ.
-ಜ್ವರ ತಗ್ಗಿಸಲು ನಿಂಬೆಪಾನಕಕ್ಕೆ ಇದರ ಪುಡಿ ಬೆರೆಸಿ ಕುಡಿಯುವುದು ಉಪಯುಕ್ತ.
-ಹೊಟ್ಟೆನೋವು ಮತ್ತು ಹೊಟ್ಟೆಯುಬ್ಬರ ಶಮನಕ್ಕೆ ಇದರ ಕಷಾಯ ಸೇವನೆ ಪರಿಣಾಮಕಾರಿ.

ಸಸ್ಯಶಾಸ್ತ್ರೀಯ ಹೆಸರು: Sauropus androgymus
ಇಂಗ್ಲಿಷ್ ಹೆಸರು: ಮಲ್ಟಿವಿಟಮಿನ್ ಪ್ಲಾಂಟ್

ಮಲೇಷ್ಯಾ ಮೂಲದ ಚಕ್ರಮುನಿ “ಬಹುಜೀವಸತ್ವಗಳ ಸಸ್ಯ” ಎಂದೇ ಜನಪ್ರಿಯ. ಕಡು ಹಸುರು ಎಲೆಗಳನ್ನು ಹೊಂದಿರುವ ಇದು 2ರಿಂದ 3.5 ಮೀಟರ್ ಎತ್ತರಕ್ಕೆ ಬೆಳೆಯುವ ಸಣ್ಣ ಪೊದೆ. ಇದರ ರೆಂಬೆಗಳು ಮೃದು. ರೆಂಬೆಗಳ ಉದ್ದಕ್ಕೂ ಸಂಯುಕ್ತ ಕಿರುಎಲೆಗಳು.

ಇದರ ಎಲೆಗಳಿಂದ ತಯಾರಿಸಿದ ತಂಬುಳಿ ಮತ್ತು ಚಟ್ನಿ ಬಹಳ ರುಚಿ. ಅನ್ನದೊಂದಿಗೆ ಕಲಸಿ ಉಣ್ಣಲು ಅಥವಾ ಇಡ್ಲಿ, ದೋಸೆ, ಅಂಬಡೆ, ವಡೆ, ರೊಟ್ಟಿ ಇತ್ಯಾದಿ ತಿನಿಸುಗಳೊಂದಿಗೆ ನೆಚ್ಚಿಕೊಳ್ಳಲು ಸೂಕ್ತ. ಇದರ ವಡೆಯನ್ನೂ ಚಪ್ಪರಿಸಿ ತಿನ್ನಬಹುದು. ಚಕ್ರಮುನಿಯ ಎಲೆಗಳು ಕೆಲವೆಡೆ ಪಶುಗಳ ಮತ್ತು ಕೋಳಿಗಳ ಆಹಾರ ತಯಾರಿಗೆ ಬಳಕೆ. ಪ್ರತಿ ಮನೆಯಲ್ಲಿಯೂ ಇದನ್ನು ಬೆಳೆಸುವುದು ಒಳ್ಳೆಯದು. ಇದರ ಎಲೆಗಳಿಂದ ತಂಬುಳಿ, ಚಟ್ನಿ, ಪಲ್ಯ, ತೊವ್ವೆ, ಸಾರು ಅಥವಾ ಸಾಂಬಾರು ಮಾಡಿ, ವಾರಕ್ಕೆ ಒಂದೆರಡು ಬಾರಿ ಸೇವಿಸುವುದರಿಂದ ಮಹಿಳೆಯರ ಹಾಗೂ ಮಕ್ಕಳ ಜೀವಸತ್ವ ಕೊರತೆ ನೀಗಿಸಲು ಸಹಾಯ. ಯಾಕೆಂದರೆ ಇದರ 100 ಗ್ರಾಮ್ ಸೊಪ್ಪಿನಲ್ಲಿದೆ 7.4 ಗ್ರಾಮ್ ಸಸಾರಜನಕ, 23 ಮಿ.ಗ್ರಾ. ಕಬ್ಬಿಣಾಂಶ, 200 ಮಿ.ಗ್ರಾ. ರಂಜಕ ಮತ್ತು 571 ಮಿ.ಗ್ರಾ. ಸುಣ್ಣಾಂಶ. ಜೊತೆಗೆ ಇದು “ಎ”, “ಬಿ” ಮತ್ತು “ಸಿ” ವಿಟಮಿನ್-ಗಳ ಆಕರ.

ಚಕ್ರಮುನಿ ಗಿಡಗಳಿಗೆ ಎರಡು ದಿನಕ್ಕೊಮ್ಮೆಯಾದರೂ ನೀರುಣಿಸಬೇಕು. ಗಿಡಗಳನ್ನು ನೆಟ್ಟು 3ರಿಂದ 4 ತಿಂಗಳಿನಲ್ಲಿ ಸೊಂಪಾಗಿ ಪೊದೆಯಾಗಿ ಬೆಳೆಯುತ್ತದೆ. ಅನಂತರ ವಾರಕ್ಕೊಮ್ಮೆ ಇದರ ಸೊಪ್ಪು ತೆಗೆದು ಅಡುಗೆಗೆ ಉಪಯೋಗಿಸ ಬಹುದು. ಎರಡು-ಮೂರು ವಾರಕ್ಕೊಮ್ಮೆ ಸೊಪ್ಪಿನ ಕೊಯ್ಲು ಮಾಡಿದರೆ, ಒಂದು ಗಿಡದಿಂದ ಎರಡು ಕಿಲೋಗ್ರಾಮ್ ಸೊಪ್ಪು ಲಭ್ಯ. ಆರು ತಿಂಗಳಿಗೊಮ್ಮೆ ಗಿಡಗಳನ್ನು ಸವರುವುದು ಹೆಚ್ಚು ಗೆಲ್ಲುಗಳು ಮೂಡಲು ಸಹಕಾರಿ.

ಔಷಧೀಯ ಬಳಕೆ:
-ವಿಟಮಿನ್-ಗಳ ಕೊರತೆಯಿಂದ ಬಳಲುವವರು ಪ್ರತಿದಿನ ಚಕ್ರಮುನಿಯ ಹಸಿ ಎಲೆಗಳನ್ನು ತಿನ್ನುವುದು ಆರೋಗ್ಯ ಸುಧಾರಣೆಗೆ ಸಹಕಾರಿ. ಎರಡು ಚಮಚ ಸೊಪ್ಪಿನ ರಸ ಮತ್ತು ಒಂದು ಚಮಚ ಜೇನು ಬೆರೆಸಿ ಬೆಳಗ್ಗೆ ಆಹಾರ ಸೇವನೆ ಮುಂಚೆ ಕುಡಿಯುವುದು ಪರಿಣಾಮಕಾರಿ.

ಸಸ್ಯ ಶಾಸ್ತ್ರೀಯ ಹೆಸರು: Tinospora cordifolia
ಸಂಸ್ಕೃತ: ಗುಡೂಚಿ     ತೆಲುಗು: ತಿಪ್ಪ ತೇಗ     ತಮಿಳು: ಸಿಂದಿಲಕೊಡಿ
      
ಮೂರು ವರುಷಗಳ ಮುಂಚೆ, ಕರಾವಳಿ ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಚಿಕೂನ್-ಗೂನ್ಯ ಕಾಯಿಲೆ ಹರಡಿದಾಗ ಅಮೃತ ಬಳ್ಳಿಯ ಕಷಾಯ ಕುಡಿದು ಸಾವಿರಾರು ಜನರಿಗೆ ಶರೀರದ ಗಂಟುಗಳ ನೋವು ಶಮನ.
ಅಮೃತ ಬಳ್ಳಿ ಹದವಾದ ಬಿಸಿಲಿರುವ ಜಾಗದಲ್ಲಿ ಸೊಂಪಾಗಿ ಬೆಳೆದು ಹಬ್ಬುವ ಬಳ್ಳಿ. ಹಸುರು ಬಣ್ಣದ ಹೃದಯಾಕಾರದ ಮೃದುವಾದ ಎಲೆಗಳು. ಇದರ ಕಾಂಡದ ಮೇಲೆ ತೆಳು ಪೊರೆ. ಕಾಂಡದಿಂದ ಮೂಡಿ ಬರುವ ದಾರದಂತಹ 4 – 5 ಅಡಿ ಉದ್ದದ ಬಳ್ಳೀಗಳು ಜೋತು ಬೀಳುವುದು ಇದರ ವಿಶೇಷ. ಎಲೆ ಹಾಗೂ ಕಾಂಡ ಮುರಿದರೆ “ಹಾಲು” ಹೊರಬರುತ್ತದೆ. ಗುಂಪುಗುಂಪಾದ ಹಸುರು ಬಣ್ಣದ ಹೂಗಳು. ಕೊತ್ತಂಬರಿ ಗಾತ್ರದ ಗೊಂಚಲು ಕಾಯಿಗಳ ಬಣ್ಣ ಆರಂಭದಲ್ಲಿ ಹಸುರು, ಅನಂತರ ಕೆಂಪು. ಈ ಬಳ್ಳಿಯ ಎಲೆ, ಕಾಂಡ, ಬೇರು ಕಹಿ.
ಇದರ ಎಲೆ ಅಥವಾ ಕಾಂಡದ ಕಷಾಯ ಅಥವಾ ಪುಡಿ, ಜ್ವರ, ಸಂಧಿವಾತ, ಸಕ್ಕರೆಕಾಯಿಲೆ, ಮೂಲವ್ಯಾಧಿ, ಚರ್ಮರೋಗ, ವಾಂತಿ, ಹೊಟ್ಟೆಉರಿ, ಬಹುಮೂತ್ರ ಚಿಕಿತ್ಸೆಗೆ ಸಹಕಾರಿ.
-ಜ್ವರ ಮತ್ತು ಸಕ್ಕರೆ ಕಾಯಿಲೆ: ಎರಡು ಲೋಟ ನೀರಿಗೆ, 2 - 3 ಇಂಚು ಉದ್ದದ, ಬೆರಳು ದಪ್ಪದ ನಾಲ್ಕೈದು ಕಾಂಡದ ತುಂಡು ಹಾಕಿ, ಕುದಿಸಿ, ಕಷಾಯ ಮಾಡಿ ದಿನಕ್ಕೆ 2 - 3 ಸಲ ಕುಡಿಯಬೇಕು.
-ಹೊಟ್ಟೆ ಉರಿ: ಎಲೆಗಳಿಂದ 2 ಟೀ-ಚಮಚ ರಸ ತೆಗೆದು, ಚಿಟಿಕೆ ಓಂ ಪುಡಿ ಸೇರಿಸಿ ಕುಡಿಯಬೇಕು.
-ವಾಂತಿ, ವಾಕರಿಕೆ: 25 ಗ್ರಾಮ್ ಕಾಂಡ ಅರೆದು, ಅದಕ್ಕೆ ಮೂರು ಲೋಟ ನೀರು ಸೇರಿಸಿ ಕಷಾಯ ಮಾಡಬೇಕು. ಒಂದು ಲೋಟ ಕಷಾಯಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ 3 ಸಲ ಕುಡಿಯಬೇಕು.
-ಶರೀರದಲ್ಲಿ ಏಳುವ ಪಿತ್ತದ ಗಂಧೆಗಳು: ಅಮೃತಬಳ್ಳಿ ಎಲೆ, ಸಾಸಿವೆ, ಶ್ರೀಗಂಧದ ಚಕ್ಕೆ – ಇವನ್ನು ಸಮತೂಕದಲ್ಲಿ ಎಮ್ಮೆಯ ಹಾಲಿನಲ್ಲಿ ಅರೆದು ಪಿತ್ತದ ಗಂಧೆಗಳಿಗೆ ಹಚ್ಚಬೇಕು. ಇದರಿಂದ ತುರಿಕೆ ಹಾಗೂ ಉರಿ ಶಮನ.
-ರಕ್ತ ಶುದ್ಧಿ: ಮೂರು ಗ್ರಾಮ್ ಕಾಂಡದ ಪುಡಿಗೆ ಜೇನುತುಪ್ಪ ಬೆರೆಸಿ, 40 ದಿನ (ಬೆಳಗ್ಗೆ ಅಥವಾ ರಾತ್ರಿ) ಸೇವಿಸಬೇಕು.

ವಿಷಪೀಡೆನಾಶಕಗಳಿಂದ ಮಾನವಕುಲದ ಮಾರಣ ಹೋಮ
ಢೆಲ್ಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ (ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್‍ವೈರನ್‍ಮೆಂಟ್) ಪರಿಸರ ರಕ್ಷಣೆಗಾಗಿ ಹಲವಾರು ದಿಟ್ಟ ಹೆಜ್ಜೆಗಳನ್ನಿಟ್ಟ ಸಂಸ್ಥೆ. ದಿವಂಗತ ಅನಿಲ್ ಅಗರ್‍ವಾಲ್ ಸ್ಥಾಪಿಸಿದ ಸಂಸ್ಥೆಯ ಪಾಕ್ಷಿಕ “ಡೌನ್ ಟು ಅರ್ಥ್” ಪರಿಸರಕ್ಕೆ ಧಕ್ಕೆಯಾಗುವ, ಮಾನವಕುಲಕ್ಕೆ ಕುತ್ತಾಗುವ ಸಂಗತಿಗಳನ್ನು ವೈಜ್ನಾನಿಕ ವರದಿಗಳು, ಅಧ್ಯಯನಗಳು ಮತ್ತು ಪುಸ್ತಕಗಳು ಹಾಗೂ ವೆಬ್‍ಸೈಟ್ ಮೂಲಕ ಜಾಗತಿಕ ಮಟ್ಟದಲ್ಲಿ ಜಾಹೀರು ಮಾಡುತ್ತಿರುವ ಪತ್ರಿಕೆ.
ಇದು ೧೯೭೭ರಲ್ಲೇ ಪ್ರಕಟಿಸಿರುವ ಪುಸ್ತಕ: “ಹೊಮಿಸೈಡ್ ಬೈ ಪೆಸ್ಟಿಸೈಡ್ಸ್” (ಪೀಡೆನಾಶಕಗಳಿಂದ ಮನುಷ್ಯರ ಕೊಲೆ). ಇದರ ಉಪಶಿರ್ಷೀಕೆ “ವಾಟ್ ಪೊಲ್ಯೂಷನ್ ಡಸ್ ಟು ಅವರ್ ಬಾಡೀಸ್” (ಪರಿಸರ ಮಾಲಿನ್ಯ ನಮ್ಮ ದೇಹಗಳಿಗೆ ಏನು ಮಾಡುತ್ತದೆ?) ೧೩೪ ಪುಟಗಳ ಈ ಪುಸ್ತಕ ಒಂದೇ ಸಾಕು: ವಿಷಪೀಡೆನಾಶಕಗಳು ಹೇಗೆ ಮಾನವಕುಲದ ಮಾರಣಹೋಮ ಮಾಡುತ್ತಿವೆ? ಎಂಬುದರ ಬಗ್ಗೆ ನಮ್ಮ ಕಣ್ಣು ತೆರೆಸಲು. ಪುಸ್ತಕದ ಕೊನೆಯಲ್ಲಿ ಪಟ್ಟಿ ಮಾಡಲಾಗಿದೆ ೧೦೦ ಆಕರ ಲೇಖನಗಳನ್ನು; ಅವುಗಳಲ್ಲಿ ಪ್ರತಿಯೊಂದೂ ಸತ್ಯದ ಸುತ್ತಿಗೆಯಿಂದ ನಮ್ಮ ತಲೆಗೆ ಹೊಡೆದು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಈಗೊಂದು ಪ್ರಶ್ನೆ: ಪೀಡೆನಾಶಕಗಳ ವಿಷದಿಂದ ಭಾರತದಂತಹ ಮಹಾನ್ ದೇಶದಲ್ಲಿ ಎಷ್ಟು ಸಾವುಗಳಾಗುತ್ತಿವೆ? ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ಪ್ರಕಟಿಸಿದ ಮಾಹಿತಿ ಪ್ರಕಾರ, ೨೦೧೫ರಲ್ಲಿ ೭,೦೬೦ ಸಾವುಗಳಾಗಿವೆ!  (ಗಮನಿಸಿ: ಕಲಬೆರಕೆ ಮತ್ತು ದುರುದ್ದೇಶದ ದುರ್ಬಳಕೆಯಿಂದ ಆಗುವ ಸಾವುನೋವುಗಳದ್ದು ಬೇರೆಯೇ ಸಂಗತಿ.)
ಇಷ್ಟೆಲ್ಲ ಪುರಾವೆಗಳಿದ್ದರೂ, ಮಾನವಕುಲಕ್ಕೆ ಮಾರಕವಾದ ವಿಷಪೀಡೆನಾಶಕಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಿಲ್ಲ. ಸುಮಾರು ೮೦ ದೇಶಗಳು ನಿಷೇಧಿಸಿದ ವಿಷಪೀಡೆನಾಶಕಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಿಲ್ಲ! ಯಾಕೆಂದರೆ, ಪೀಡೆನಾಶಕಗಳ ಕಂಪೆನಿಗಳದ್ದು ವರುಷಕ್ಕೆ ಸುಮಾರು ೫೦,೦೦೦ ಕೋಟಿ ರೂಪಾಯಿಗಳ ದಂಧೆ!

ಮಹಾಮಾರಿ ಕಳೆನಾಶಕ, ಮನುಕುಲಕ್ಕೆ ಮಾರಕ: ಗ್ಲೈಫೊಸೇಟ್
೧೯೭೪ರಲ್ಲಿ ಈ ಅತಿ ಭಯಂಕರ ವಿಷರಾಸಾಯನಿಕವನ್ನು ಬಿಡುಗಡೆ ಮಾಡಿದಾಗಿನಿಂದ ೨೦೧೫ರ ವರೆಗೆ ಜಾಗತಿಕವಾಗಿ ೮.೬ ಬಿಲಿಯನ್ ಕಿಲೋಗ್ರಾಮ್ ಗ್ಲೈಪೊಸೇಟನ್ನು ಮಾರಾಟ ಮಾಡಲಾಗಿದೆ ಎನ್ನುತ್ತದೆ “ಎನ್‍ವೈರೊನ್‍ಮೆಂಟಲ್ ಸೈನ್ಸಸ್ ಯುರೋಪ್” ಎಂಬ ನಿಯತಕಾಲಿಕದ ಫೆಬ್ರವರಿ ೨೦೧೬ರ ಒಂದು ಲೇಖನ. ಜಾಗತಿಕವಾಗಿ, ಇದರ ಒಟ್ಟು ಮಾರಾಟ: ೧೯೯೫ರಲ್ಲಿ ೫೧ ದಶಲಕ್ಷ ಕಿಲೋಗ್ರಾಮ್ ಇದ್ದದ್ದು ೨೦೧೪ರಲ್ಲಿ ೭೫೦ ದಶಲಕ್ಷ ಕಿಲೋಗ್ರಾಮುಗಳಿಗೆ ಏರಿದೆ! ಅಂದರೆ ೧೯ ವರುಷಗಳಲ್ಲಿ ೧೫ ಪಟ್ಟು ಹೆಚ್ಚಳ!
 ಇದು, ಅಧಿಕ ಲಾಭ ಗಳಿಕೆಗೆ ರೈತರ ಅಚ್ಚುಮೆಚ್ಚಿನ ಕಳೆನಾಶಕ. ಉದಾಹರಣೆಗೆ, ಚಹಾತೋಟಗಳ ಇಳುವರಿ ಕಳೆಗಳಿಂದಾಗಿ ಶೇ.೭೦ ಕಡಿಮೆ ಆದೀತು. ಅದನ್ನು ತಪ್ಪಿಸಲಿಕ್ಕಾಗಿ ಚಹಾತೋಟಗಳಲ್ಲಿ ಇದರ ಭರ್ಜರಿ ಸಿಂಪಡಣೆ.
ಇದರಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಒಂದೆರಡಲ್ಲ. ಇದೆಲ್ಲ ಗೊತ್ತಿದ್ದರೂ, ಇದರ ಬಳಕೆ ಕೈಬಿಡಲು ಎಲ್ಲ ರೈತರು ತಯಾರಿಲ್ಲ. “ಗ್ಲೈಫೊಸೇಟ್ ಇಲ್ಲದೆ ನಾನು ಬೇಸಾಯ ಮಾಡಲು ಸಾಧ್ಯವಿಲ್ಲ” ಎನ್ನುತ್ತಾರೆ ಮಹಾರಾಷ್ಟ್ರದ ಯವತ್‍ಮಾಲ್ ಜಿಲ್ಲೆಯ ಜರಾಂಗ್ ಗ್ರಾಮದ ವಸುದೇವೊ ರಾಥೋಡ್ (೪೦ ವರುಷ). ಅವರು ತನ್ನ ೧೩ ಹೆಕ್ಟೇರ್ ಹೊಲದಲ್ಲಿ ಬೆಳೆಯೋದು ಹತ್ತಿ ಬೆಳೆ. ಕೆಲಸದಾಳುಗಳಿಂದ ಕಳೆ ತೆಗೆಸುವ ಬದಲಾಗಿ, ಈ ವಿಷಕಳೆನಾಶಕ ಸಿಂಪಡಿಸುವುದೇ ಅನುಕೂಲ ಎನ್ನುತ್ತಾರೆ ಅವರು; ಯಾಕೆಂದರೆ ಕೆಲಸದಾಳುಗಳ ಮಜೂರಿ ವೆಚ್ಚ ಮೂರು ಪಟ್ಟು ಜಾಸ್ತಿ.
ರೈತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಯವತ್‍ಮಾಲಿನ ಲಾಭರಹಿತ ಸಂಘಟನೆ “ಶೇತ್ಕರಿ ನ್ಯಾಯ ಹಕ್ಕು ಆಂದೋಲನ ಸಮಿತಿ”ಯ ಸಂಚಾಲಕ ದೇವಾನಂದ ಪವಾರ್ ಇನ್ನಷ್ಟು ಆತಂಕಕಾರಿ ಹೇಳಿಕೆ ನೀಡುತ್ತಾರೆ: “ರಾಸಾಯನಿಕದ ದೀರ್ಘಕಾಲಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಯೋಚಿಸುತ್ತ ಕೂರಲು ರೈತರಿಂದಾಗದು. ಅವರು ಇವತ್ತಿನ ದಿನ ಬದುಕುವುದು ಹೇಗೆಂದು ನೋಡುತ್ತಾರೆ.”

ಪಂಜಾಬಿನ ಹಸುರು ಕ್ರಾಂತಿಯ ದಾರುಣ ಕಥನ
೧೯೬೦ರ ದಶಕದಿಂದ “ಹಸುರು ಕ್ರಾಂತಿ”ಯ ಅಬ್ಬರದಲ್ಲಿ ಮಿಂದೆದ್ದ ಪಂಜಾಬಿನಲ್ಲಿ ಇಂದೇನಾಗಿದೆ? ಇದನ್ನು ತಿಳಿಯಬೇಕಾದರೆ, “ಗೂಗಲ್ ಸರ್ಚಿ”ನಲ್ಲಿ Cancer Train (ಕ್ಯಾನ್ಸರ್ ಟ್ರೇಯ್ನ್) ಎಂಬ ಎರಡೇ ಶಬ್ದಗಳನ್ನು ಟೈಪ್ ಮಾಡಿದರೆ ಸಾಕು. ಒಂದೇ ಸೆಕೆಂಡಿನೊಳಗೆ ೧೮ ಕೋಟಿ ವರದಿಗಳು ಮತ್ತು ದಾಖಲೆಗಳು ತೆರೆದುಕೊಳ್ಳುತ್ತವೆ. ಅವನ್ನು ಓದಲು ಒಂದು ವರುಷ ಸಾಕಾಗಲಿಕ್ಕಿಲ್ಲ!
ಗೋಧಿ ಹಾಗೂ ಭತ್ತಗಳ ಕಣಜವಾಗಿದ್ದ ಪಂಜಾಬ್ ಈಗ ಮೃತ್ಯುಕೂಪವಾಗಿದೆ. ಹತ್ತು ವರುಷಗಳ ಅವಧಿಯಲ್ಲಿ (೨,೦೦೦ದಿಂದ ೨೦೧೦) ೯,೯೨೬ ರೈತರು ಅಲ್ಲಿ ಆತ್ಮಹತ್ಯೆ ಮಾಡಿಕೊಂಡರೆಂದು ಪಂಜಾಬ್ ರಾಜ್ಯ ಸರಕಾರವೇ ಪ್ರಕಟಿಸಿದೆ.
ಇದಕ್ಕೆ ಕಾರಣಗಳೇನು? ಏರುತ್ತಿರುವ ಕೃಷಿವೆಚ್ಚದಿಂದಾಗಿ ಹೆಚ್ಚುತ್ತಿರುವ ಸಾಲ – ಇದುವೇ ಪ್ರಧಾನ ಕಾರಣ. ಅಲ್ಲಿನ ಭೂಮಿ ಬರಡಾಗಿದೆ ಎಂಬುದು ಸರಕಾರದ ವರದಿಯಲ್ಲೇ ಇದೆ. ೨೦೧೩ರ ಆ ವರದಿಯ ಅನುಸಾರ: ಪಂಜಾಬಿನ ಶೇ.೩೯ ಕೃಷಿಜಮೀನು ಬರಡು, ಅಂದರೆ ಕೃಷಿಗೆ ಯೋಗ್ಯವಲ್ಲ. ಅಲ್ಲಿನ ಶೇ.೫೦ ಕೃಷಿಜಮೀನಿನಲ್ಲಿ ಸಾರಜನಕದ ಅಂಶ ಕಡಿಮೆ; ಶೇ.೨೫ ಕೃಷಿಜಮೀನಿನಲ್ಲಿ ರಂಜಕದ ಅಂಶ ಕಡಿಮೆ. ಹಾಗಾಗಿ ಮಣ್ಣು ಫಲವತ್ತಾಗಿಲ್ಲ.
ಹಸುರುಕ್ರಾಂತಿಯ ಹೆಸರು ಉಳಿಸಿಕೊಳ್ಳಲು ನೀರೂ ಬೇಕು ತಾನೇ? ಅಲ್ಲಿನ ರೈತರಿಗೆ ಕಾಲುವೆನೀರು ಅಥವಾ ಅಂತರ್ಜಲ ಕೃಷಿಗೆ ಆಧಾರ. ಆದರೆ ಕಾಲುವೆನೀರು ವಿಷಪೂರಿತ. ಅಂತರ್ಜಲ ಮಟ್ಟ ಕುಸಿಯುತ್ತಿದೆ – ಈಗಾಗಲೇ ೫೦೦ ಅಡಿಗಿಂತ ಆಳಕ್ಕೆ ಕುಸಿದಿದೆ. ಹಾಗಾಗಿ ೫೦೦ – ೬೦೦ ಅಡಿ ಆಳದ ಬೋರ್-ವೆಲ್ ಕೊರೆಸಲು ತಲಾ ೨.೫ ಲಕ್ಷ ರೂಪಾಯಿ ಖರ್ಚು.

Pages