ಔಷಧೀಯ ಸಸ್ಯ: ಚಕ್ರಮುನಿ

ಸಸ್ಯಶಾಸ್ತ್ರೀಯ ಹೆಸರು: Sauropus androgymus
ಇಂಗ್ಲಿಷ್ ಹೆಸರು: ಮಲ್ಟಿವಿಟಮಿನ್ ಪ್ಲಾಂಟ್

ಮಲೇಷ್ಯಾ ಮೂಲದ ಚಕ್ರಮುನಿ “ಬಹುಜೀವಸತ್ವಗಳ ಸಸ್ಯ” ಎಂದೇ ಜನಪ್ರಿಯ. ಕಡು ಹಸುರು ಎಲೆಗಳನ್ನು ಹೊಂದಿರುವ ಇದು 2ರಿಂದ 3.5 ಮೀಟರ್ ಎತ್ತರಕ್ಕೆ ಬೆಳೆಯುವ ಸಣ್ಣ ಪೊದೆ. ಇದರ ರೆಂಬೆಗಳು ಮೃದು. ರೆಂಬೆಗಳ ಉದ್ದಕ್ಕೂ ಸಂಯುಕ್ತ ಕಿರುಎಲೆಗಳು.

ಇದರ ಎಲೆಗಳಿಂದ ತಯಾರಿಸಿದ ತಂಬುಳಿ ಮತ್ತು ಚಟ್ನಿ ಬಹಳ ರುಚಿ. ಅನ್ನದೊಂದಿಗೆ ಕಲಸಿ ಉಣ್ಣಲು ಅಥವಾ ಇಡ್ಲಿ, ದೋಸೆ, ಅಂಬಡೆ, ವಡೆ, ರೊಟ್ಟಿ ಇತ್ಯಾದಿ ತಿನಿಸುಗಳೊಂದಿಗೆ ನೆಚ್ಚಿಕೊಳ್ಳಲು ಸೂಕ್ತ. ಇದರ ವಡೆಯನ್ನೂ ಚಪ್ಪರಿಸಿ ತಿನ್ನಬಹುದು. ಚಕ್ರಮುನಿಯ ಎಲೆಗಳು ಕೆಲವೆಡೆ ಪಶುಗಳ ಮತ್ತು ಕೋಳಿಗಳ ಆಹಾರ ತಯಾರಿಗೆ ಬಳಕೆ. ಪ್ರತಿ ಮನೆಯಲ್ಲಿಯೂ ಇದನ್ನು ಬೆಳೆಸುವುದು ಒಳ್ಳೆಯದು. ಇದರ ಎಲೆಗಳಿಂದ ತಂಬುಳಿ, ಚಟ್ನಿ, ಪಲ್ಯ, ತೊವ್ವೆ, ಸಾರು ಅಥವಾ ಸಾಂಬಾರು ಮಾಡಿ, ವಾರಕ್ಕೆ ಒಂದೆರಡು ಬಾರಿ ಸೇವಿಸುವುದರಿಂದ ಮಹಿಳೆಯರ ಹಾಗೂ ಮಕ್ಕಳ ಜೀವಸತ್ವ ಕೊರತೆ ನೀಗಿಸಲು ಸಹಾಯ. ಯಾಕೆಂದರೆ ಇದರ 100 ಗ್ರಾಮ್ ಸೊಪ್ಪಿನಲ್ಲಿದೆ 7.4 ಗ್ರಾಮ್ ಸಸಾರಜನಕ, 23 ಮಿ.ಗ್ರಾ. ಕಬ್ಬಿಣಾಂಶ, 200 ಮಿ.ಗ್ರಾ. ರಂಜಕ ಮತ್ತು 571 ಮಿ.ಗ್ರಾ. ಸುಣ್ಣಾಂಶ. ಜೊತೆಗೆ ಇದು “ಎ”, “ಬಿ” ಮತ್ತು “ಸಿ” ವಿಟಮಿನ್-ಗಳ ಆಕರ.

ಚಕ್ರಮುನಿ ಗಿಡಗಳಿಗೆ ಎರಡು ದಿನಕ್ಕೊಮ್ಮೆಯಾದರೂ ನೀರುಣಿಸಬೇಕು. ಗಿಡಗಳನ್ನು ನೆಟ್ಟು 3ರಿಂದ 4 ತಿಂಗಳಿನಲ್ಲಿ ಸೊಂಪಾಗಿ ಪೊದೆಯಾಗಿ ಬೆಳೆಯುತ್ತದೆ. ಅನಂತರ ವಾರಕ್ಕೊಮ್ಮೆ ಇದರ ಸೊಪ್ಪು ತೆಗೆದು ಅಡುಗೆಗೆ ಉಪಯೋಗಿಸ ಬಹುದು. ಎರಡು-ಮೂರು ವಾರಕ್ಕೊಮ್ಮೆ ಸೊಪ್ಪಿನ ಕೊಯ್ಲು ಮಾಡಿದರೆ, ಒಂದು ಗಿಡದಿಂದ ಎರಡು ಕಿಲೋಗ್ರಾಮ್ ಸೊಪ್ಪು ಲಭ್ಯ. ಆರು ತಿಂಗಳಿಗೊಮ್ಮೆ ಗಿಡಗಳನ್ನು ಸವರುವುದು ಹೆಚ್ಚು ಗೆಲ್ಲುಗಳು ಮೂಡಲು ಸಹಕಾರಿ.

ಔಷಧೀಯ ಬಳಕೆ:
-ವಿಟಮಿನ್-ಗಳ ಕೊರತೆಯಿಂದ ಬಳಲುವವರು ಪ್ರತಿದಿನ ಚಕ್ರಮುನಿಯ ಹಸಿ ಎಲೆಗಳನ್ನು ತಿನ್ನುವುದು ಆರೋಗ್ಯ ಸುಧಾರಣೆಗೆ ಸಹಕಾರಿ. ಎರಡು ಚಮಚ ಸೊಪ್ಪಿನ ರಸ ಮತ್ತು ಒಂದು ಚಮಚ ಜೇನು ಬೆರೆಸಿ ಬೆಳಗ್ಗೆ ಆಹಾರ ಸೇವನೆ ಮುಂಚೆ ಕುಡಿಯುವುದು ಪರಿಣಾಮಕಾರಿ.
-ಮಲಬದ್ಧತೆಯ ಸಮಸ್ಯೆ ಇರುವವರೂ ಆಗಾಗ್ಗೆ ಚಕ್ರಮುನಿ ಸೊಪ್ಪನ್ನು ಆಹಾರವಾಗಿ ಸೇವಿಸುವುದು ಉತ್ತಮ