“ಮನೆಮದ್ದಿನ ಮಹತ್ವ” ಬಗ್ಗೆ ಕೂಟ ಮಹಾಜಗತ್ತು - ಮಂಗಳೂರು ಅಂಗಸಂಸ್ಥೆಯ ಮಹಿಳಾ ವೇದಿಕೆಯು 22 ಫೆಬ್ರವರಿ 2015ರಂದು ಮಂಗಳೂರಿನ ಪಾಂಡೇಶ್ವರದ ಶ್ರೀ ಗುರು ನರಸಿಂಹ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಿತ್ತು. ಜನವರಿ 2015ರಲ್ಲಿ ಮೂರು ದಿನಗಳ ಮನೆಮದ್ದು ಶಿಬಿರದಲ್ಲಿ ಭಾಗವಹಿಸಿದ್ದ ಶ್ರೀಮತಿ ರಾಜಲಕ್ಷ್ಮಿ ಕೆ. ರಾವ್ ಮತ್ತು ಸರಿತಾ ಕಾರಂತ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಆರಂಭದಲ್ಲಿ ಶ್ರೀಮತಿ ರಾಜಲಕ್ಷ್ಮಿಯವರು ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಮದ್ದಿನ ಸೇವನೆಯೇ ಇಲ್ಲದ ದಿನಚರಿ ಸಾಧ್ಯ ಎಂದು ವಿವರಿಸಿದರು. ನಮ್ಮ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡರೆ ಕಾಯಿಲೆಮುಕ್ತ ಜೀವನ ಸಾಧ್ಯ; ಇದಕ್ಕಾಗಿ ಶಿಸ್ತಿನ ಜೀವನ ಅನುಸರಿಸಬೇಕು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಎರಡು ಲೋಟ ಬಿಸಿ ನೀರನ್ನು ಕುಡಿದು, ಫ್ಲೋರೈಡ್ ಇಲ್ಲದ ಹಲ್ಲಿನಪುಡಿಯಲ್ಲಿ ಹಲ್ಲು ಶುಚಿ ಮಾಡಿ, ಜೀರಿಗೆ ಅಥವಾ ಉಪ್ಪು ಹಾಕಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹಲ್ಲುಗಳಿಗೆ ಮತ್ತು ಒಸಡಿಗೆ ರಕ್ಷಣೆ ಸಿಗುತ್ತದೆ. ಬೆಳಗ್ಗೆ ಆಯಿಲ್ ಪುಲ್ಲಿಂಗ್ ಸಹ ಒಳ್ಳೆಯದು. ದಿನಾ ಎಳ್ಳೆಣ್ಣೆ ಸ್ನಾನ ದೇಹಾರೋಗ್ಯಕ್ಕೆ ಪೂರಕ. ಸ್ನಾನಕ್ಕೆ ಕಡಲೆ ಹಿಟ್ಟು (ಒಂದು ಭಾಗ), ಸೀಗೆ ಪುಡಿ (ಅರ್ಧಭಾಗ), ಎಳ್ಳೆಣ್ಣೆ (ಒಂದು ಚಮಚ) – ಇವುಗಳ ಮಿಶ್ರಣ (ಸಾಬೂನಿನ ಬದಲು) ಉಪಯೋಗಿಸ ಬಹುದು. ಬೆಳಗಿನ ಉಪಾಹಾರಕ್ಕೆ ಹಿರಿಯರಿಗೆ ಹಣ್ಣು – ತರಕಾರಿ ಒಳ್ಳೆಯದು; ಮಕ್ಕಳಿಗೆ ತಿನಿಸು ಅಗತ್ಯ.
ಹಿತಮಿತವಾಗಿ ಋತುವಿಗೆ ಅನುಸಾರವಾಗಿ ಆಹಾರ ತಿನ್ನಬೇಕು. ಅವಸರದಿಂದ ಅಥವಾ ಅತಿ ನಿಧಾನವಾಗಿ ತಿನ್ನಕೂಡದು. ಊಟ ಮಾಡುವಾಗ ಅರ್ಧ ಭಾಗ ಘನ ಆಹಾರ ಮತ್ತು ಕಾಲು-ಭಾಗ ದ್ರವ ಆಹಾರ ಸೂಕ್ತ. ಹೊಟ್ಟೆ ತುಂಬ ಊಟ ಬೇಡ. ಊಟದ ಆರಂಭದಲ್ಲಿ (ಅ) ಎರಡು ಚಮಚ ತುಪ್ಪ ಸೇವನೆ (ಆ) ಅಜೀರ್ಣವಾದವರಿಗೆ ಜೀರಿಗೆ ಪುಡಿ ಸೇವನೆ ಹಿತಕಾರಿ. ಹಣ್ಣುಗಳನ್ನು ಊಟದ ಮುಂಚೆಯೇ ತಿನ್ನಬೇಕು. ಮಧ್ಯಾಹ್ನದ ನಿದ್ದೆಯೂ ಊಟಕ್ಕೆ ಮುಂಚೆ ಉತ್ತಮ. ಚಳಿಗಾಲದಲ್ಲಿ ಶುಂಠಿ ಹಾಗೂ ಕಾಳುಮೆಣಸು ಸೇವನೆ, ಬೇವಿನ ಸೊಪ್ಪಿನ ಧೂಪ, ಬೆಚ್ಚಗಿನ ಉಡುಪು ಬಳಕೆ ಉತ್ತಮ. ಬೇಸಿಗೆಯಲ್ಲಿ ಲಾವಂಚ ನೀರು, ಲಿಂಬೆ ಪಾನಕ ಮತ್ತು ಹೆಚ್ಚು ದ್ರವ ಸೇವನೆ ಹಿತಕಾರಿ. ಉಪ್ಪು, ಸಕ್ಕರೆ, ಮೈದಾ ಕಡಿಮೆ ತಿನ್ನಬೇಕು.
ಸಂಜೆ ಭಜನೆ ಹಾಗೂ ಧ್ಯಾನದ ಮೂಲಕ ಅರ್ಧ ಗಂಟೆಯಾದರೂ ನಮ್ಮೊಂದಿಗೆ ನಾವು ಇರುವುದು ಉತ್ತಮ. ಮಲಗುವ ಎರಡು ಗಂಟೆ ಮುಂಚೆಯೇ ರಾತ್ರಿಯ ಊಟ ಸೂಕ್ತ. ಎಣ್ಣೆ ಪದಾರ್ಥ ಕಡಿಮೆ ಸೇವಿಸಬೇಕು. ಇಂತಹ ಶಿಸ್ತಿನ ಜೀವನದಿಂದ ನಮ್ಮ ಆರೊಗ್ಯವನ್ನು ರಕ್ಷಿಸಿಕೊಳ್ಳಬಹುದೆಂದು ಮಾಹಿತಿ ನೀಡಿದರು.
ಅನಂತರ ಶ್ರೀಮತಿ ಸರಿತಾ ಕಾರಂತ್ ಕೆಲವು ಅನಾರೋಗ್ಯಗಳಿಗೆ ಹೇಗೆ ಮನೆಯಲ್ಲೇ ಮದ್ದು ಮಾಡಿ ವಾಸಿ ಮಾಡಿಕೊಳ್ಳಬಹುದೆಂದು ತಿಳಿಸಿದರು. ಇವರು ಧ್ಯಾನದ ಬಗ್ಗೆ ವಿವರಿಸುತ್ತಾ ನಮ್ಮ ಮನಸ್ಸು ಚಂಚಲವಾಗದಂತೆ ಉಸಿರನ್ನೇ ಗಮನಿಸುತ್ತಾ ಇದ್ದಲ್ಲಿ ಮನಸ್ಸು ಶಾಂತವಾಗಿ ಅದೇ ಧ್ಯಾನವಾಗುತ್ತದೆ. ಉಸಿರೇ ನಾರಾಯಣ, ಉಸಿರಿನಿಂದ ಶಿವ, ಉಸಿರು ಇಲ್ಲದಿದ್ದರೆ ಶವ ಎಂದು ಮಾರ್ಮಿಕವಾಗಿ ಹೇಳಿದರು.
ಯಾವಾಗಲೂ ಕಾಡುವ ತಲೆನೋವಿಗೆ ತೆಂಗಿನ ಎಣ್ಣೆ 100 ಮಿ.ಲಿ., ಆರತಿ ಕರ್ಪೂರ 50 ಗ್ರಾಮ್, ಎರಡು ಕಾಳು ಮೆಣಸು ಒಟ್ಟಾಗಿ ಬಿಸಿ ಮಾಡಿ, ಜೇನುಮೇಣ ಬೆರಸಿ ವಿಕ್ಸ್ ತರಹ ಉಪಯೋಗಿಸಬಹುದು. ಕಣ್ಣು ಉರಿ ಶಮನಕ್ಕೆ ಒಂದು ಕಪ್ ನೀರಿಗೆ ಒಂದು ಚಮಚ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ತಣಿದ ಬಳಿಕ ಎರಡು ತೊಟ್ಟು ಕಣ್ಣಿಗೆ ಹಾಕಬೇಕು. ಮಲಗುವಾಗ ಬಟ್ಟೆ ತುಂಡನ್ನು ಈ ನೀರಿನಲ್ಲಿ ಒದ್ದೆ ಮಾಡಿ ಕಣ್ಣಿನ ಮೇಲೆ ಇಟ್ಟುಕೊಳ್ಳಬಹುದು. ಕಿವಿ ನೋವಿದ್ದರೆ 10 ಮಿ.ಲೀ. ಎಳ್ಳೆಣ್ಣೆಗೆ ಒಂದು ಬೇಳೆ ಬೆಳ್ಳುಳ್ಳಿ ಹಾಕಿ, ಎಣ್ಣೆ ಕಾಯಿಸಿ, ತಣ್ಣಗಾದ ನಂತರ ಕಿವಿಗೆ ಹಾಕಬೇಕು. ತೆಂಗಿನಕಾಯಿ ಹಾಲನ್ನು ಬಾಯಿಗೆ ಹಾಕಿ, 10 ನಿಮಿಷ ಇಟ್ಟುಕೊಂಡು ನಂತರ ಉಗುಳುವುದು ನಾಲಿಗೆ ಹುಣ್ಣಿಗೆ ಚಿಕಿತ್ಸೆ.
ಆಗಾಗ ಸೀನು ಬರುತ್ತಿದ್ದರೆ, ಕಬ್ಬಿಣದ ಕಾವಲಿ ಕಾಯಿಸಿ, ಅದರಲ್ಲಿ ಅರಿಶಿನ ಪುಡಿ ಹಾಕಿ, ಆಗ ಮೇಲೇಳುವ ಹೊಗೆ ತೆಗೆದುಕೊಳ್ಳಬೇಕು. ಮೂಗಿನಲ್ಲಿ ರಕ್ತ ಬರುತ್ತಿದ್ದರೆ, ದ್ರವತುಪ್ಪ ಸವರಿದರೆ ನಿಲ್ಲುತ್ತದೆ. ಉಪ್ಪು ಮತ್ತು ಅರಿಶಿನ ಹಾಕಿದ ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದು ಗಂಟಲ ತುರಿಕೆ ಶಮನಕ್ಕೆ ಚಿಕಿತ್ಸೆ. ಶೀತ-ಜ್ವರಕ್ಕೆ ಆಗಾಗ ಬಿಸಿ ನೀರು ಕುಡಿದರೆ ಬೇರೆ ಮದ್ದು ಬೇಡ. ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಲಿಂಬೆ ರಸ, ಒಂದು ಚಮಚ ಜೇನು, ಜಜ್ಜಿದ ಶುಂಠಿ ಇವೆಲ್ಲ ಸೇರಿಸಿ ಕುಡಿದರೆ ಕಫಕ್ಕೆ ಔಷಧಿ. ಬೆಳಗ್ಗೆ ಎದ್ದಾಗ ಒಂದು ಬೇಳೆ ಬೆಳ್ಳುಳ್ಳಿ ಸಣ್ಣ ತುಂಡುಗಳಾಗಿ ಮಾಡಿ ಹಸಿಯಾಗಿ ನುಂಗಿದರೆ ಕೊಲೆಸ್ಟರಾಲ್ ಕಡಿಮೆ ಆಗುತ್ತದೆ.
ಲಾವಂಚ ಅಥವಾ ಗಂಧದ ತುಂಡನ್ನು ನೀರಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಕುಡಿದರೆ ಮೊಡವೆಗೆ ಅದೇ ಮದ್ದು. ಒಂದು ಚಮಚ ತುಪ್ಪ ಮತ್ತು ಬಿಸಿ ನೀರು ಸೇರಿಸಿ ದಿನಕ್ಕೆ ಐದು ಸಲ ನಿಧಾನವಾಗಿ ಕುಡಿದರೆ ಒಣ ಕೆಮ್ಮು ಶಮನ. ಮುಟ್ಟು ಆದಾಗ ಹೊಟ್ಟೆ ನೋವಿದ್ದರೆ ಲೋಳೆಸರದ ಎಲೆಯ ತಿರುಳನ್ನು ಊಟದ ಮುಂಚೆ ತಿನ್ನಬೇಕು. ಊಟದ ನಂತರ ತಲಾ ಅರ್ಧ ಚಮಚ ಬೆಟ್ಟದ ನೆಲ್ಲಿ ಮತ್ತು ಅರಿಶಿನ ಸೇವನೆ ಸಕ್ಕರೆಕಾಯಿಲೆಗೆ ಮನೆಮದ್ದು. ಕೂದಲು ಉದುರುವುದು ಮತ್ತು ಹೊಟ್ಟು ಆಗುವುದು ತಡೆಯಲಿಕ್ಕಾಗಿ ಒಂದು ಲೀಟರು ಎಳ್ಳೆಣ್ಣೆ, ನೂರು ಗ್ರಾಮ್ ಬೆಟ್ಟದನೆಲ್ಲಿಪುಡಿ (ಅಥವಾ ರಸ), ಒಂದು ಬೊಗಸೆ ಕೆಂಪು ಅಥವಾ ಬಿಳಿ ದಾಸವಾಳ ಹೂ ಮತ್ತು ಒಂದು ಬೊಗಸೆ ದಾಸವಾಳಎಲೆ ರಸ ತೆಗೆದು, ಎಣ್ಣೆ ಸೇರಿಸಿ ಬಿಸಿ ಮಾಡಿ ತಲೆಗೆ ಹಾಕಿಕೊಳ್ಳಬೇಕು. ಆಸ್ತಮಾ, ಚರ್ಮರೋಗ, ಅಲರ್ಜಿ, ಮೈಕೈನೋವು ಶಮನಕ್ಕೆ ಮನೆಮದ್ದು ತಿಳಿಸಿದರು. ಇವನ್ನು ಬಳಸಿದರೆ ಸಣ್ಣಪುಟ್ಟ ತೊಂದರೆಗಳಿಗೂ ಆಲೋಪತಿ ಡಾಕ್ಟರ್ ಬಳಿಗೆ ಓಡಬೇಕಾಗಿಲ್ಲ ಎಂದರು. ಅನಂತರ ಧನಲಕ್ಷ್ಮಿ ಕಾರಂತ್ ಸ್ನಾನದ ಪುಡಿ, ಕೇಶತೈಲ ತಯಾರಿ, ಮುಟ್ಟಿನ ತೊಂದರೆಗೆ ಮನೆಮದ್ದು ತಿಳಿಸಿದರು.