ಐದು ಬಹೂಪಯೋಗಿ ಔಷಧೀಯ ಸಸ್ಯಗಳು

ನಾವೆಲ್ಲರೂ ತಿಳಿದಿರಲೇ ಬೇಕಾದ ಐದು ಔಷಧೀಯ ಸಸ್ಯಗಳ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು ಈ ಲೇಖನದಲ್ಲಿವೆ.

 ಶಲ್ಲಕ್ಕಿ
ಶಲ್ಲಕ್ಕಿ ಎಂಬುದು ಸಂಸ್ಕೃತದ ಹೆಸರು. ಈ ಮರಕ್ಕೆ ಸಾಂಬ್ರಾಣಿ ಎಂಬ ಹೆಸರೂ ಬಳಕೆಯಲ್ಲಿದೆ. ಉರಿಯೂತ-ನಿರೋಧ ಗುಣವೇ ಇದರ ವಿಶೇಷ. ಪರಿಮಳಕ್ಕಾಗಿ, ಔಷಧಿಯಾಗಿ ಮತ್ತು ಆಹಾರದ ಜೊತೆ ಇದರ ಮರದ ಅಂಟಿನ ಬಳಕೆ. ಇದರ ಸಸ್ಯಶಾಸ್ತ್ರೀಯ ಹೆಸರು ಬೊಸ್ವೆಲ್ಲಿಯಾ ಸೆರಾಟ.

ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಶಲ್ಲಕ್ಕಿ ಮರಗಳನ್ನು ಬೆಳೆಯಲಾಗುತ್ತಿದೆ. ನಮ್ಮ ಪೂರ್ವಿಕರಿಗೆ ಇದರ ಉಪಯೋಗ ಚೆನ್ನಾಗಿ ತಿಳಿದಿತ್ತು. ಆದ್ದರಿಂದ, ಹಳ್ಳಿಗಳಲ್ಲಿ ಶಲ್ಲಕ್ಕಿಯ ಒಂದಾದರೂ ಮರವನ್ನು ಬೆಳೆಸುತ್ತಿದ್ದರು. ನೋವು ನಿವಾರಕವಾಗಿ ಇದರ ಅಂಟಿನ ಸಾರದ ಬಳಕೆ ವ್ಯಾಪಕ. ಆಯುರ್ವೇದದಲ್ಲಿ ನೋವು ನಿವಾರಣೆಗೆ ಒಂದು ಪ್ರಧಾನ ಚಿಕಿತ್ಸೆ: ನೋವಿರುವ ದೇಹ ಭಾಗಕ್ಕೆ ಇದರ ಎಣ್ಣೆಯನ್ನು ಹಚ್ಚುವುದು ಅಥವಾ ಇದರ ಬಿಸಿ ಎಣ್ಣೆಯನ್ನು ಹೊಯ್ಯುವುದು.

ಋಷ್ಯಗಂಧ
ಸಕ್ಕರೆ ಕಾಯಿಲೆ (ಟೈಪ್ 2) ನಿಯಂತ್ರಣಕ್ಕೆ ಋಷ್ಯಗಂಧ ಪರಿಣಾಮಕಾರಿ ಎಂಬುದು ಬನಾರಸ್ ವಿಶ್ವವಿದ್ಯಾಲಯದ ಎಸ್. ಎಸ್. ಆಸ್ಪತ್ರೆಯಲ್ಲಿ  ನಡೆಸಲಾದ ಅಧ್ಯಯನದಿಂದ ತಿಳಿದು ಬಂದಿದೆ. "ಆಯು" ಪತ್ರಿಕೆಯ ಅಕ್ಟೋಬರ್ - ಡಿಸೆಂಬರ್ 2011ರ ಸಂಚಿಕೆ (ಸಂಖ್ಯೆ 32-4)ಯಲ್ಲಿ ಈ ಆಧ್ಯಯನದ ವರದಿ ಪ್ರಕಟವಾಗಿದೆ. ಯುಎಸ್ ನ್ಯಾಷನಲ್ ಲೈಬ್ರೆರಿ ಆಫ್ ಮೆಡಿಸಿನ್ಸ್ - ಇದರಲ್ಲಿ ಅಧ್ಯಯನದ ವರದಿ ಲಭ್ಯವಿದೆ. ಕ್ಲಿನಿಕಲ್ ಮೌಲ್ಯಮಾಪನದ ಅನುಸಾರ, ಸಕ್ಕರೆ ಕಾಯಿಲೆಯ ದೀರ್ಘಕಾಲಿಕ ನಿಯಂತ್ರಣದಲ್ಲಿ ಋಷ್ಯಗಂಧದ ಚಿಕಿತ್ಸೆ ಧನಾತ್ಮಕ ಫಲಿತಾಂಶ ನೀಡಿದೆ ಎಂದು ಆ ವರದಿಯಲ್ಲಿ ದಾಖಲಿಸಲಾಗಿದೆ.

ಉತ್ತರಭಾರತದಲ್ಲಿ ಇದು ಪನೀರ್ ದೊದಿ ಎಂಬ ಹೆಸರಿನಿಂದ ಪ್ರಚಲಿತ. ಇದರ ಸಸ್ಯಶಾಸ್ತ್ರೀಯ ಹೆಸರು ವಿಥಾನಿಯಾ ಕೊಗುಲಾನ್. ಇದರ ಒಣಹಣ್ಣುಗಳ ಹುಡಿಯನ್ನು ದಿನಕ್ಕೆ 10 ಗ್ರಾಮ್ (ಬೆಳಗ್ಗೆ ಮತ್ತು ರಾತ್ರಿ ತಲಾ 5 ಗ್ರಾಮ್) ಸೇವಿಸುವುದು ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ ಎಂದು ಆ ಅಧ್ಯಯನದಲ್ಲಿ ತಿಳಿದು ಬಂದಿತ್ತು. ದೊಡ್ಡಕಡಲೆ(ಕಾಬೂಲ್ ಕಡಲೆ)ಯಂತಿರುವ ಇದರ ಒಣಹಣ್ಣುಗಳ ಬೆಲೆ 75 ಗ್ರಾಮ್‌-ಗಳಿಗೆ (ಆಗಸ್ಟ್ 2024ರಲ್ಲಿ) ರೂ.69/- ಚರಕ ಸಂಹಿತೆಯಲ್ಲಿ ಬೃಹನೀಯ ಮಹಾಕಷಾಯ ಮತ್ತು ಮಧುರ್ ಸ್ಕಂದ ದ್ರವ್ಯದಲ್ಲಿ ಈ ಸಸ್ಯವನ್ನು ವರ್ಣಿಸಲಾಗಿದೆ.

ಶತಾವರಿ
ಕನ್ನಡದಲ್ಲಿ ಇದಕ್ಕೆ “ನೂರು ಮಕ್ಕಳ ಬೇರು” ಎಂಬ ಚಂದದ ಹೆಸರಿದೆ. ಕರ್ನಾಟಕದ ಬಯಲುಸೀಮೆ ಮತ್ತು ಕಾಡುಗಳಲ್ಲಿ ಇದು ಪ್ರಾಕೃತಿಕವಾಗಿ ಬೆಳೆಯುತ್ತಿದೆ. ಇದರ ಒಣಗಿದ ಬೇರುಗಳ ಹುಡಿಯನ್ನು ಔಷಧೀಯ ಉದ್ದೇಶಗಳಿಗಾಗಿ ಪೂರಕ ಆಹಾರವಾಗಿ ಬಳಸಲಾಗುತ್ತಿದೆ.

ಮಹಿಳೆಯರ ವಂಶಾಭಿವೃದ್ಧಿ ಅಂಗಗಳ ಆರೋಗ್ಯಕ್ಕಾಗಿ ಇದರ ಕಷಾಯದ ಬಳಕೆ ಜನಜನಿತ. ಸ್ತ್ರೀಯರ ಆರೋಗ್ಯವರ್ಧನೆಯ ಟಾನಿಕ್ ಆಗಿ ಇದರ ಬಳಕೆ ವ್ಯಾಪಕ. ಆಯುರ್ವೆದದ ಎರಡು ಪ್ರಮುಖ ಶಾಸ್ತ್ರ ಗ್ರಂಥಗಳಾದ ಚರಕ ಸಂಹಿತೆ ಮತ್ತು ವಾಗ್ಭಟನ ಅಷ್ಟಾಂಗ ಹೃದಯ - ಎರಡರಲ್ಲಿಯೂ ಶತಾವರಿಯ ಉಲ್ಲೇಖಗಳಿವೆ.

ಶತಾವರಿ ಮುಳ್ಳುಗಳಿರುವ ಒಂದು ಬಳ್ಳಿ. ಚಳಿಗಾಲದಲ್ಲಿ ಬಿಳಿ ಹೂ ಬಿಟ್ಟಾಗ ಈ ಬಳ್ಳಿ ಎಲ್ಲಿದ್ದರೂ ಎದ್ದು ಕಾಣಿಸುತ್ತದೆ. ಸಪುರ ಎಲೆಗಳ ಶತಾವರಿ ಬಳ್ಳಿ ಕಾಡುಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಅಲ್ಸರ್ ನಿರೋಧಕವಾಗಿ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾಗಿ ಮತ್ತು ಪ್ರತಿರಕ್ಷಾ ಶಕ್ತಿಯ ವೃದ್ಧಿಗಾಗಿ ಇದರ ಸೇವನೆ ಪರಿಣಾಮಕಾರಿ. ವಯಸ್ಸಾಗುವುದನ್ನು ನಿಧಾನಿಸಲು ಮತ್ತು ಗೆಡ್ಡೆಗಳ ಬೆಳವಣಿಗೆ ಹಾಗೂ ನರಜಾಲ ಸಂಬಂಧಿ ಅನಾರೋಗ್ಯದ ಚಿಕಿತ್ಸೆಗೂ ಇದರ ಸೇವನೆ ಸಹಕಾರಿ.

ನಿರ್ಗುಂಡಿ
ಕರ್ನಾಟಕದ ಒಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಗಿಡ ನಿರ್ಗುಂಡಿ. ನೋವು ನಿವಾರಣೆಯಿಂದ ತೊಡಗಿ ಸೊಳ್ಳೆ ವಿಕರ್ಷಣೆ ವರೆಗೆ ಹಲವಾರು ಉದ್ದೇಶಗಳಿಗೆ ಬಳಕೆಯಾಗುವ ನಿರ್ಗುಂಡಿಗೆ “ಸರ್ವರೋಗನಿವಾರಣಿ" ಎಂಬ ಅನ್ವರ್ಥ ಹೆಸರು.

ಮಾಂಸಖಂಡಗಳ ಬಿಗು-ಸಡಿಲಿಕೆಗೆ, ಆ ಮೂಲಕ ದೇಹದ ನೋವು ನಿವಾರಣೆಗೆ ನಿರ್ಗುಂಡಿ ಎಣ್ಣೆ ಹಚ್ಚುವುದು ಪರಿಣಾಮಕಾರಿ. ಹಲವು ದಿನಗಳಾದರೂ ವಾಸಿಯಾಗದಿರುವ ಗಾಯಗಳನ್ನು ವಾಸಿ ಮಾಡುವುದಕ್ಕೂ ಇದರ ಎಣ್ಣೆ ರಾಮಬಾಣ. ನಮ್ಮ ಪೂರ್ವಜರು ಹಲವು ತಲೆಮಾರುಗಳಿಂದ ಮನೆಮದ್ದಾಗಿ ನಿರ್ಗುಂಡಿ ಎಣ್ಣೆಯನ್ನು ಉಪಯೋಗಿಸಿದ್ದರು. ನಿಂತ ನೀರಿನಲ್ಲಿ ಸೊಳ್ಳೆಗಳ ಲಾರ್ವಾಗಳ ಸಂಖ್ಯೆ ಕಡಿಮೆ ಮಾಡಲು ಇದರ ಎಣ್ಣೆ ಸಹಕಾರಿ. ದಶಮೂಲಗಳಲ್ಲಿ ಒಂದಾದ ನಿರ್ಗುಂಡಿಗೆ ಆಯುರ್ವೇದದಲ್ಲಿ ಬಹಳ ಪ್ರಾಮುಖ್ಯತೆ. ಇದರ ಸಸ್ಯಶಾಸ್ತ್ರೀಯ ಹೆಸರು ವೈಟೆಕ್ಸ್ ನೆಗುನ್‌ಡೋ.

ಮನೆಮದ್ದಿನಲ್ಲಿ ಆಸಕ್ತಿ ಇರುವವರು ತಮ್ಮ ಹಿತ್ತಲಿನಲ್ಲಿ, ಕೈತೋಟದಲ್ಲಿ ಅಥವಾ ತಾರಸಿಯಲ್ಲಿ ನಿರ್ಗುಂಡಿ ಸಸ್ಯಗಳನ್ನು ಸುಲಭವಾಗಿ ಬೆಳೆದು ವಿವಿಧ ಚಿಕಿತ್ಸೆಗಳಿಗೆ ಬಳಸಬಹುದು. ದೀರ್ಘ ಕಾಲ ಬೀಜಗಳ ಸಂರಕ್ಷಣೆಗಾಗಿ ಕಹಿಬೇವಿನ ಬೂದಿ ಬೆರೆಸುವುದರ ಜೊತೆಗೆ ನಿರ್ಗುಂಡಿಯ ಎಲೆಗಳನ್ನೂ ನಮ್ಮ ಪೂರ್ವಿಕರು ಬೀಜಬುಟ್ಟಿಗಳಲ್ಲಿ ಹಾಗೂ ಬೀಜಮಡಿಕೆಗಳಲ್ಲಿ ಹಾಕುತ್ತಿದ್ದರು. ಶ್ರೀ ಗಣೇಶ ಮತ್ತು ಶಿವನ ಆರಾಧನೆಯಲ್ಲಿಯೂ ನಿರ್ಗುಂಡಿ ಎಲೆಗಳ ಬಳಕೆ ಸಾಮಾನ್ಯ.  

ನಾಗದಾಳಿ
ಪಾರಂಪರಿಕವಾಗಿ ನಾಗದಾಳಿಯ ಬಳಕೆ ಹತ್ತುಹಲವು. ಮಕ್ಕಳಿಗೆ ಶೀತ ಮತ್ತು ಕೆಮ್ಮು ಬಾಧಿಸಿದಾಗ ನಾಗದಾಳಿ ಎಲೆಗಳನ್ನು ಜಜ್ಜಿ ಪೇಸ್ಟಿನಂತೆ ಮಾಡಿ ಮಕ್ಕಳ ಹಣೆಗೆ ಹಚ್ಚಿದರೆ ವಾಸಿಯಾಗುತ್ತದೆ ಎಂಬುದು ನಮ್ಮ ಹಿರಿಯರ ಅನುಭವದ ಸಲಹೆ. ಇದು ಹಾವುಗಳನ್ನು ವಿಕರ್ಷಿಸುವ ಸಸ್ಯ ಎಂಬ ನಂಬಿಕೆಯಿಂದ ಹಲವರು ಇದನ್ನು ಮನೆಯ ಹತ್ತಿರ ಬೆಳೆಸುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ರುಟಾ ಗ್ರಾವಿಯೊಲೆನ್ಸ್.

ಇತ್ತೀಚೆಗಿನ ಸಂಶೋಧನೆಗಳು ಕ್ಯಾನ್ಸರ್ ಕೋಶಗಳ ಸಂಖ್ಯಾವೃದ್ಧಿ ತಡೆಯುವುದರಲ್ಲಿ ನಾಗದಾಳಿ ಪರಿಣಾಮಕಾರಿ ಎಂಬುದರ ಬಗ್ಗೆ ಬೆಳಕು ಚೆಲ್ಲಿವೆ. ಯುಎಸ್‌ಎ ದೇಶದ ಅಲಬಾಮಾದ ಟಸ್‌ಕೆಗೀ ವಿಶ್ವವಿದ್ಯಾಲಯದ ಸಂಶೋಧಕರು ಕ್ಯಾನ್ಸರ್ ಕೋಶಗಳ ಸಂಖ್ಯಾಹೆಚ್ಚಳವನ್ನು ತಡೆಯಲು ನಾಗದಾಳಿಯ ಮೆಥಾನೊಲಿಕ್ ಎಕ್-ಟ್ರಾಕ್ಟ್ ಸಹಕಾರಿ ಎಂದು 2011ರಲ್ಲಿ ಸಂಶೋಧನಾ ವರದಿಯಲ್ಲಿ ಪ್ರಕಟಿಸಿದ್ದಾರೆ.

ಫೋಟೋ: ಋಷ್ಯಗಂಧ: ಎಲೆ ಮತ್ತು ಹಣ್ಣುಗಳು ….. ಕೃಪೆ: ವಿಕಿಪೀಡಿಯಾ
(ಹೆಚ್. ಪಿ. ನಾಡಿಗ್ ಅವರ ಇಂಗ್ಲಿಷ್ ಲೇಖನದ ಕನ್ನಡಾನುವಾದ ಅಡ್ಡೂರು ಕೃಷ್ಣ ರಾವ್ ಇವರಿಂದ)