“ಎರಡು ಸಾವಿರ ರೂಪಾಯಿ ಕೊಟ್ಟು ಇದರ ಒಂದು ಗಿಡ ತಂದಿದ್ದೆ” ಎಂದು ಗಿಡವೊಂದನ್ನು ತೋರಿಸುತ್ತಾ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ”ದ ಕೃಷಿಕರೊಬ್ಬರು ಹೇಳಿದ್ದರು! ಅದು ಚಾಯಾ ಮಾನ್ಸಾ ಗಿಡ.
ಅನಂತರ ಅದರ ಬಗ್ಗೆ ಸಂಗ್ರಹಿಸಿದ ಮಾಹಿತಿ: ಅದು ಜಗತ್ತಿಗೆ ದಕ್ಷಿಣ ಅಮೇರಿಕಾದ ಪುರಾತನ “ಮಾಯಾ” ನಾಗರಿಕತೆಯ ಜನರ ಕೊಡುಗೆ ಎಂಬ ಸಂಗತಿ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ದೇಶಗಳಲ್ಲಿ ಸೊಪ್ಪು ತರಕಾರಿಯಾಗಿ ಇದರ ಬಳಕೆ. ಇದರ ಗೆಲ್ಲುಗಳನ್ನು ಕತ್ತರಿಸಿದಾಗ ಬಿಳಿ ಬಣ್ಣದ ದ್ರಾವಣ ಒಸರುತ್ತದೆ.
2020ರ ಮಳೆಗಾಲದಲ್ಲಿ ಅದರ ನಾಲ್ಕು ತುಂಡುಗಳನ್ನು ತಲಾ ರೂ.20 ಬೆಲೆಗೆ ಖರೀದಿಸಿ ತಂದು, ಮಂಗಳೂರಿನ ನಮ್ಮ ಕೈತೋಟದಲ್ಲಿ ನೆಟ್ಟೆ. ಅವುಗಳಿಂದಲೇ ಇನ್ನೂ ನಾಲ್ಕು ತುಂಡುಗಳನ್ನು ಅಡ್ಡೂರಿನ ತೋಟದಲ್ಲಿಯೂ ನೆಟ್ಟೆ. ಅವೆಲ್ಲವೂ ಸೊಂಪಾಗಿ ಬೆಳೆದಿವೆ. ಪ್ರತಿಯೊಂದು ಗಿಡದಲ್ಲಿಯೂ 20 - 30 ಗೆಲ್ಲುಗಳಿವೆ.
ಒಂದಡಿ (ಮೂವತ್ತು ಸೆಮೀ.) ಉದ್ದದ ತುಂಡುಗಳು ನೆಡುವುದಕ್ಕೆ ಸೂಕ್ತ. ಅವನ್ನು ಬಹಳ ಸುಲಭವಾಗಿ ಬೆಳೆಸಬಹುದು. ವರುಷಕ್ಕೆ ಎರಡು ಸಲ ಗಿಡವೊಂದಕ್ಕೆ ಒಂದು ಮುಷ್ಟಿ ಸಾವಯವ ಗೊಬ್ಬರ ಹಾಕಿ, ವಾರಕ್ಕೆರಡು ಸಲ ನೀರೆರೆದರೆ ಸಾಕು; ನಳನಳಿಸುತ್ತ ಬೆಳೆಯುತ್ತದೆ. ಆರಡಿ ಎತ್ತರಕ್ಕೆ ಬೆಳೆಯುವ ಗಿಡ ಇದು. ಕತ್ತರಿಸಿದಷ್ಟೂ ಹೊಸ ಗೆಲ್ಲುಗಳು ಮತ್ತು ತೆಗೆದಷ್ಟೂ ಎಲೆಗಳು ಚಿಗುರುವುದು ಇದರ ವಿಶೇಷತೆ. ಇದಕ್ಕೆ ಯಾವುದೇ ಕೀಟ ಅಥವಾ ರೋಗ ಬಾಧೆ ಇಲ್ಲವೆನ್ನಬಹುದು.
ಕೈತೋಟದಲ್ಲಿ ಒಂದು ಗಿಡವಿದ್ದರೆ ವಾರಕ್ಕೊಮ್ಮೆ ಎಲೆಗಳು ಅಡುಗೆಗೆ ಲಭ್ಯ. ಒಮ್ಮೆಗೆ ಶೇಕಡಾ 50ರಷ್ಟು ಎಲೆ ಕೊಯ್ಯಬಹುದು.
ಒಬ್ಬರಿಗೆ ಐದು ಎಲೆಗಳಂತೆ ಅಡುಗೆಗೆ ಬಳಸುವುದು ಸೂಕ್ತ. ಪಲ್ಯ, ಸಾಂಬಾರ್, ಸೂಪ್ ಮಾಡುವಾಗ ಇದರ ಹಸುರು ಎಲೆಗಳನ್ನು ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿದರೆ ಚೆನ್ನಾಗಿರುತ್ತದೆ. ಸಲಾಡ್ಗಳಿಗೂ ಇದರ ಬೇಯಿಸಿದ ಎಲೆ ಹಾಕಬಹುದು; ಯಾಕೆಂದರೆ ಇದರ ಎಲೆಗಳಿಗೆ ಪ್ರತ್ಯೇಕ ರುಚಿ ಇಲ್ಲ. ಅಡುಗೆಗೆ ಎಳೆಯ ಎಲೆಗಳು ಸೂಕ್ತ. ಎಲೆಗಳನ್ನು ಇಪ್ಪತ್ತು ನಿಮಿಷಗಳಾದರೂ ಬೇಯಿಸಲೇ ಬೇಕು.
ಇದರ ಪೋಷಕಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದ ಸಂಗತಿ: ಇದರಲ್ಲಿ ಪ್ರೊಟೀನ್, ವಿಟಮಿನ್ "ಎ", ಕಬ್ಬಿಣಾಂಶ, ಪೊಟಾಷಿಯಮ್ ಮತ್ತು ಕ್ಯಾಲ್ಸಿಯಮ್ ಸಮೃದ್ಧ. ಇತರ ಯಾವುದೇ ಸೊಪ್ಪು ತರಕಾರಿಯಲ್ಲಿ ಇರುವುದಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಚಾಯಾ ಮಾನ್ಸಾದಲ್ಲಿ ಪೋಷಕಾಂಶಗಳಿವೆ. ಮೆಕ್ಸಿಕೋ ನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅನುಸಾರ, ಔಷಧೀಯ ಗುಣಗಳಿರುವ ಚಾಯಾ ಮಾನ್ಸಾ ಸೇವನೆಯಿಂದ ಹಲವು ಪ್ರಯೋಜನಗಳಿವೆ:
-ಜೀರ್ಣಕ್ರಿಯೆಗೆ ಸಹಾಯ
-ರಕ್ತಸಂಚಾರ ಉತ್ತಮವಾಗಲು ನೆರವು
-ಕಣ್ಣಿನ ದೃಷ್ಟಿ ಸುಧಾರಣೆ
-ಕೊಲೆಸ್ಟೊರಾಲ್ ಮಟ್ಟ ಇಳಿಕೆಗೆ ಸಹಾಯ
-ತೂಕ ಇಳಿಸಲು ಸಹಾಯ
-ಕೆಮ್ಮು ನಿವಾರಕ
-ಎಲುಬಿನ ಕ್ಯಾಲ್ಸಿಯಂ ಮಟ್ಟ ಹೆಚ್ಚಳ
-ಶ್ವಾಸಕೋಶಗಳ ಸೋಂಕು ನಿವಾರಕ ಮತ್ತು ಅವುಗಳ ನಿರಾಳತೆಗೆ ಪೂರಕ
-ರಕ್ತದ ಕಬ್ಬಿಣಾಂಶ ಹೆಚ್ಚಿಸುವ ಮೂಲಕ ರಕ್ತಹೀನತೆ ನಿವಾರಣೆ
-ಮೆದುಳಿನ ಕ್ರಿಯೆ ಮತ್ತು ನೆನಪಿನ ಶಕ್ತಿ ಸುಧಾರಣೆ
-ಆರ್ಥರೈಟಿಸ್ ಮತ್ತು ಸಕ್ಕರೆಕಾಯಿಲೆಯವರಿಗೆ ಸೂಕ್ತ
ಒಂದು ಎಚ್ಚರಿಕೆ: ಚಾಯಾ ಮಾನ್ಸಾದ ಎಲೆಗಳಲ್ಲಿ ವಿಷಕಾರಿ ಹೈಡ್ರೋಸೈಯಾನಿಕ್ ಗ್ಲೈಕೋಸೈಡ್ಗಳು ಇರುತ್ತವೆ; ಆದ್ದರಿಂದ ಎಲೆಗಳನ್ನು ಸೇವಿಸುವ ಮುಂಚೆ ಬೇಯಿಸಲೇ ಬೇಕು. ಎಲೆಗಳನ್ನು ಇಪ್ಪತ್ತು ನಿಮಿಷ ಅಥವಾ ಹೆಚ್ಚು ಸಮಯ ಬೇಯಿಸಿದರೆ, ಅದರಲ್ಲಿರುವ ವಿಷವೆಲ್ಲವೂ ಆವಿಯಾಗಿ ಹೋಗುತ್ತದೆ. ಆದ್ದರಿಂದ ಇದರ ಎಲೆಗಳನ್ನು ಬೇಯಿಸಿದ ನೀರು ಅಥವಾ ದ್ರಾವಣ ಕೂಡ ಸೇವನೆಗೆ ಸುರಕ್ಷಿತ. ಅಲ್ಯುಮಿನಿಯಮ್ ಪಾತ್ರೆಗಳಲ್ಲಿ ಇದನ್ನು ಬೇಯಿಸಬಾರದು ಅಥವಾ ಇದರ ಪಲ್ಯ/ ಸಾಂಬಾರ್ ಇತ್ಯಾದಿ ಶೇಖರಿಸಿ ಇಡಬಾರದು. ಯಾಕೆಂದರೆ, ರಾಸಾಯನಿಕ ಕ್ರಿಯೆ ನಡೆದು, ಅದನ್ನು ಸೇವಿಸಿದಾಗ ಅತಿಭೇದಿ (ಡಯಾರಿಯಾ) ಆದೀತು.
ಇದರ ಸಸ್ಯಶಾಸ್ತ್ರೀಯ ಹೆಸರು: ಸ್ನೈಡೊಸ್ಕೋಲಸ್ ಚಾಯಾಮಾನ್ಸಾ. ಇದರಂತೆಯೇ ಬಳಕೆಯಾಗುವ ಸ್ನೈಡೊಸ್ಕೋಲಸ್ ಅಕೊನಿಟಿಫೊಲಿಯಸ್ ಎಂಬ ಇನ್ನೊಂದು ಸ್ಪಿಷೀಸ್ ಕೂಡ ಇದೆ. ಇಂಗ್ಲಿಷ್ ಹೆಸರು ಟ್ರೀ ಸ್ಪಿನಾಚ್. ಇಂತಹ "ದುಬಾರಿ" ಸೊಪ್ಪಿನ ಗಿಡದ ಎಲೆಗಳು ಎಲ್ಲರಿಗೂ ಲಭ್ಯವಾಗಲಿ ಎಂಬ ಆಶಯದಿಂದ, ನಮ್ಮ ಬಳಗ ಇದರ ನೂರಾರು ತುಂಡುಗಳನ್ನು ಆಸಕ್ತರಿಗೆ ಹಂಚಿದೆ. ವೇಗವಾಗಿ ಬೆಳೆಯುವ ಇದನ್ನು ಅಲಂಕಾರಿಕ ಅಥವಾ ಬೇಲಿಗಿಡವಾಗಿಯೂ ಬೆಳೆಸಬಹುದು.
ಫೋಟೋ: ಚಾಯಾ ಮಾನ್ಸ ಎಲೆ (ಲೇಖಕರು ತೆಗೆದ ಫೋಟೋ)