ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆ

ಪುಸ್ತಕ: ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ಕಾಂತಾವರ ಕನ್ನಡ ಸಂಘ, ಕಾರ್ಕಳ ತಾಲೂಕು
ಪ್ರಕಟಣೆಯ ವರುಷ: ೨೦೧೨,     ಪುಟ: ೫೨,      ಬೆಲೆ: ರೂ.೩೩
ಡಾ.ಬಿ.ಎಂ. ಹೆಗ್ಡೆ ಅವರದು ವೈದ್ಯಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತರಾದವರು ಡಾ. ಹೆಗ್ಡೆ. ಅವರು ಅತ್ಯುತ್ತಮ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಅಂತರರಾಷ್ಟ್ರೀಯ ಮನ್ನಣೆ ಪಡೆದ ವೈದ್ಯರು. ಆರೋಗ್ಯದ ಬಗ್ಗೆ ಅವರು ಬರೆದ ಪುಸ್ತಕಗಳ ಸಂಖ್ಯೆ ಮೂವತ್ತಕ್ಕೀಂತ ಜಾಸ್ತಿ. ಅಂಕಣ ಹಾಗೂ ಪುಸ್ತಕ ಬರಹಗಳು, ಉಪನ್ಯಾಸಗಳು, ರೇಡಿಯೋ ಮತ್ತು ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನಸಾಮಾನ್ಯರಿಗೆ ವೈದ್ಯಕೀಯ ಮಾಹಿತಿ ನೀಡುವ ಹಾಗೂ ವೈದ್ಯಕೀಯ ಕ್ಷೇತ್ರದ ಕುಂದುಕೊರತೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರು.

“ನಾಡಿಗೆ ನಮಸ್ಕಾರ” ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ೭೨ನೆಯ ಪ್ರಕಟಣೆ ಅವರ ಬಗೆಗಿನ ಈ ಪುಸ್ತಕ. ಇದರ ಮೊದಲ ಬರಹ “ಶುಂಠಿ, ಜೇನು ಮತ್ತು ವೈದ್ಯಕೀಯ ಲೋಕ”ದ ಒಂದು ಮಿಂಚು ಇಲ್ಲಿದೆ:

“ಮಂಗಳೂರಿನ ಪಾಯಸ್ ಗುಡ್ಡದ ತುದಿಯಲ್ಲಿರುವ ಡಾ.ಬಿ.ಎಂ. ಹೆಗ್ಡೆಯವರ ಮನೆಯ ಕುರ್ಚಿಯಲ್ಲಿ ಕೂರುತ್ತಿದ್ದಂತೆಯೇ ನನ್ನ ಜೊತೆಗಿದ್ದ ಪ್ರೊ.ಜಿ.ಆರ್. ರೈ ಕೆಮ್ಮ ತೊಡಗಿದರು. ತಕ್ಷಣವೇ “ನಿಮಗೊಂದು ಮದ್ದು ತರ್ತೇನೆ” ಎನ್ನುತ್ತಾ ಒಳನಡೆದರು ಡಾ.ಹೆಗ್ಡೆ. ಇವರೇನೋ ಸಿರಪ್ ತಂದು ಕೊಡುತ್ತಾರೆಂದು ಭಾವಿಸಿದ್ದೆ. ಹೊರಬರುವಾಗ ಅವರ ಕೈಯಲ್ಲಿ ದೊಡ್ಡ ಚಮಚದ ತುಂಬ ಜೇನು ಮತ್ತು ಒಂದು ತುಂಡು ಶುಂಠಿ. “ಬಾಯಿಗೆ ಶುಂಠಿ ಹಾಕ್ಕೊಂಡು ಜಗಿಯುತ್ತಾ ನಿಧಾನವಾಗಿ ಜೇನಿನೊಂದಿಗೆ ರಸ ನುಂಗಿ” ಎಂದರು. ಕೆಲವೇ ನಿಮಿಷಗಳಲ್ಲಿ ಜಿ.ಆರ್. ರೈಯವರ ಕೆಮ್ಮು ಮಾಯ.

ಅನಂತರ ಮಾತಿಗೆ ತೊಡಗಿದರು ಡಾ.ಬಿ.ಎಂ.ಹೆಗ್ಡೆ. ಹಕ್ಕಿಯೊಂದು ವೈದ್ಯಕೀಯ ಲೋಕದ ಬಾನಂಗಳದಲಿ ವಿಹರಿಸಿದಂತಿತ್ತು ಅವರ ಮಾತು. ಮನುಷ್ಯನ ಬದುಕು, ಆರೋಗ್ಯ, ಆಯುರ್ವೇದ, ಆಲೋಪತಿ, ಹೋಮಿಯೋಪತಿ ಇತ್ಯಾದಿ ವೈದ್ಯಕೀಯ ಕ್ಷೇತ್ರಗಳು, ಒಂಭತ್ತು ಲಕ್ಷ ವರುಷಗಳಲ್ಲಿ ಪರಿಪೂರ್ಣವಾಗಿ ವಿಕಾಸವಾಗಿರುವ ಮಾನವ ದೇಹದ ತಾಕತ್ತು, ರೋಗಚಿಕಿತ್ಸೆಯಲ್ಲಿ ಮನಸ್ಸು-ಬುದ್ಧಿ-ಭಾವಗಳ ಪಾತ್ರ – ಹೀಗೆ ನಾವೊಂದು ಸಂಗೀತ ಕಚೇರಿಯಲ್ಲಿ ಕುಳಿತು ರಾಗಗಳ ಮೆರವಣಿಗೆ ಕಂಡಂತಿತ್ತು.

ಇನ್ನೊಮ್ಮೆ ಒಳಹೋದ ಡಾ. ಹೆಗ್ಡೆ ಹೊರಬಂದು ನನಗಿತ್ತರೊಂದು ಪುಸ್ತಕ. ತಟಕ್ಕನೆ ನಮ್ಮ ಗಮನ ಸೆಳೆಯುವ ಆ ಪುಸ್ತಕದ ಹೆಸರು “ವಾಟ್ ಡಾಕ್ಟರ್ಸ್ ಡೋಂಟ್ ಗೆಟ್ ಟು ಸ್ಟಡಿ ಇನ್ ಮೆಡಿಕಲ್ ಸ್ಕೂಲ್” (ವೈದ್ಯಕೀಯ ಶಾಲೆಗಳಲ್ಲಿ ವೈದ್ಯರಿಗೆ ಕಲಿಯಲಿಕ್ಕೆ ಸಿಗದಿರುವ ವಿಷಯಗಳು).

ಅವರೇ ಬರೆದ ಆ ಪುಸ್ತಕದ ಪರಿವಿಡಿಯಲ್ಲಿ ಪಟ್ಟಿಯಾಗಿರುವ ೭೮ ಲೇಖನಗಳ ಶಿರೋನಾಮೆಗಳ ಮೇಲೆ ಕಣ್ಣಾಡಿಸುತ್ತಿರುವಂತೆ ಇದನ್ನು ಮುಂಚೆ ಓದಬೇಕಿತ್ತು ಅನಿಸಿತು. ಆ ಪುಸ್ತಕವನ್ನು ಓದುತ್ತ ಹೋದಂತೆ ನಮ್ಮೊಳಗೆ ಗಟ್ಟಿಯಾಗುವ ಭಾವ “ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ.” ಅದಕ್ಕಾಗಿ ನಮ್ಮ ಜೀವನಕ್ರಮ ಬದಲಾಯಿಸಿದರಾಯಿತು ಎಂಬ ಸತ್ಯ ದರ್ಶನ.

¬    ಸಾವಿರಾರು ವರ್ಷಗಳ ಇತಿಹಾಸವಿರುವ ಪಾರಂಪರಿಕ ವೈದ್ಯಪದ್ಧತಿಗಳ ವಿಶೇಷ
¬    ಆರೋಗ್ಯದ ಮೇಲೆ ದೇಹ-ಮನಸ್ಸು-ಬುದ್ಧಿ-ಭಾವಗಳ ಪ್ರಭಾವ
¬    ರೋಗಗಳ ಹೆಸರು ಹೇಳಿ ನಿರೋಗಿಗಳನ್ನು ರೋಗಿಗಳನ್ನಾಗಿಸುವ ಹುನ್ನಾರ
¬    ಜೀವ ಉಳಿಸುವ ನೆಪದಲ್ಲಿ ನಡೆಸುವ ವೈದ್ಯಕೀಯ ಚಿಕಿತ್ಸೆ ಎಂಬ ದಂಧೆ
¬    ವೈದ್ಯರು ಮತ್ತು ಔಷಧಿ ಕಂಪೆನಿಗಳ ಅಪವಿತ್ರ ಮೈತ್ರಿ

ಇಂತಹ ಹತ್ತು ಹಲವು ವಿಷಯಗಳನ್ನು ತಮ್ಮ ಅಧ್ಯಯನ ಮತ್ತು ಅನುಭವದ ಆಧಾರದಿಂದ, ಸತ್ಯಾಂಶ ಮತ್ತು ಸಂಸ್ಕಾರದ ಬಲದಿಂದ ಈ ಪುಸ್ತಕದಲ್ಲಿ ಮಂಡಿಸಿದ್ದಾರೆ ಡಾ.ಬಿ.ಎಂ. ಹೆಗ್ಡೆ. ತನ್ನದೇ ವೃತ್ತಿಯ ಕ್ಷೇತ್ರದ ತಪ್ಪುಗಳನ್ನು ಒಪ್ಪಿಕೊಳ್ಳಲು, ದೋಷಗಳನ್ನು ಬಹಿರಂಗ ಪಡಿಸಲು ಎದೆಗಾರಿಕೆ ಬೇಕು. ಅದನ್ನು ಈ ಪುಸ್ತಕದಲ್ಲಿ ತೋರಿದ್ದಾರೆ ಹಿರಿಯ ವೈದ್ಯರಾದ ಡಾ. ಹೆಗ್ಡೆ.

ಆರೋಗ್ಯ ಎಂದರೇನು? ರೋಗ ಎಂದರೇನು? ವೈದ್ಯಕೀಯ ಪರೀಕ್ಷೆಯೇ ಒಂದು ರೋಗವೇ? ಆಂಟಿಬಯಾಟಿಕ್ಕುಗಳ ಅನಾಹುತ ಏನು? ಯಾವುದು ಯೋಗ, ಯಾವುದು ಯೋಗ ಅಲ್ಲ? ಇಂತಹ ಮೂಲಭೂತ ಪ್ರಶ್ನೆಗಳನ್ನೆತ್ತಿ ವಿವರಗಳನ್ನು ನೀಡುವ ಈ ಪುಸ್ತಕ ನಮ್ಮೆಲ್ಲರ ಕಣ್ಣು ತೆರೆಸುತ್ತದೆ.

“ಸತ್ಯವೇ ದೇವರು” ಎಂಬ ಮಹಾತ್ಮ ಗಾಂಧಿಯವರ ಮಾತನ್ನು ಮತ್ತೆಮತ್ತೆ ನೆನಪು ಮಾಡುವ ಈ ಮೇರುಕೃತಿಯ ಮುಖ್ಯಾಂಶಗಳನ್ನು ಗಮನಿಸಿ: “ಮನುಷ್ಯ ಈ ಭೂಮಿಯಲ್ಲಿ ಹುಟ್ಟುದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು ಉಳಿಸಿದ್ದು ಆಲೋಪತಿ ಚಿಕಿತ್ಸಾ ವಿಧಾನ ಅಲ್ಲ. ಈಗಿನ ಹೈಟೆಕ್ ಚಿಕಿತ್ಸಾ ವಿಧಾನಗಳಂತೂ ಕಳೆದ ೫೦ ವರುಷಗಳ ಬೆಳವಣಿಗೆ. ಇದರಿಂದಾಗಿಯೇ ಮನುಷ್ಯನ ಉಳಿವು ಎನ್ನುವುದು ಸರಿಯಲ್ಲ. ಮನುಷ್ಯನನ್ನು ೫೦,೦೦೦ ತಲೆಮಾರುಗಳಲ್ಲಿ ಉಳಿಸಿದ ಆರೋಗ್ಯ ಹಾಗೂ ಚಿಕಿತ್ಸೆಯ ತತ್ವಗಳನ್ನು ಪುನಃ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮಮುಂದಿನ ತಲೆಮಾರುಗಳು ಉಳಿಯುತ್ತವೆ.”