೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು ವಾರದವಧಿಗೆ ನಮ್ಮ ತರಗತಿ ಸಸ್ಪೆಂಡ್ ಆದರೂ ತರಗತಿಯ ಪುಂಡರ ಗುಂಪು ಶಿಸ್ತು ಕಲಿಯಲಿಲ್ಲ.
ಇಂತಹ ತರಗತಿಗೆ ಎರಡನೇ ವರುಷ ಕನ್ನಡ ಕಲಿಸಲು ಬಂದವರು ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು. ಪಾಠದ ಅವಧಿಯಲ್ಲಿ ಗುಂಡುಸೂಜಿ ಬಿದ್ದರೂ ಕೇಳಿಸುವಂತಹ ನಿಶ್ಶಬ್ದತೆಯನ್ನು ಒಂದೇ ವಾರದಲ್ಲಿ ಸಾಧಿಸಿದರು ಅವರು. ತರಗತಿಯ ತುಂಟ ಕುದುರೆಗಳನ್ನು ಕನ್ನಡದ ರಥಕ್ಕೆ ಬಿಗಿಯಲು ಅವರು ಬಳಸಿದ್ದು ದೃಷ್ಟಿ ಚಾಟಿಯನ್ನು!
ಬಯ್ಗುಳವಿಲ್ಲದೆ, ಗದರಿಕೆಯಿಲ್ಲದೆ ತುಂಟರನ್ನು ಅವರು ನಿಯಂತ್ರಿಸಿದ್ದು ನೇರನೋಟದಿಂದ. ೭೦ ವಿದ್ಯಾರ್ಥಿಗಳಿದ್ದ ಕ್ಲಾಸಿನಲ್ಲಿ ಏನಾದರೂ ಸದ್ದಾದರೆ, ತೆಕ್ಕುಂಜದವರು ಅತ್ತ ಮುಖ ತಿರುಗಿಸುತ್ತಿದ್ದರು. ಪಾಠ ನಿಲ್ಲಿಸಿ, ಸದ್ದು ಮಾಡಿರಬಹುದಾದ ಒಬ್ಬನನ್ನು ಗುರುತಿಸಿ, ಅವನ ಮುಖವನ್ನೇ ದಿಟ್ಟಿಸುತ್ತಿದ್ದರು. ಅವರ ನಿಷ್ಕಳಂಕ ಮುಖದ ಪ್ರಭಾವೀ ಕಣ್ಣುಗಳ ನೆಟ್ಟ ನೋಟವನ್ನು ಎದುರಿಸಲು ತಪ್ಪಿತಸ್ಥನಿಗೆ ಸಾಧ್ಯವಾಗುತ್ತಿರಲಿಲ್ಲ. ತಪ್ಪು ಮಾಡಿದಾತ ತಲೆ ತಗ್ಗಿಸುತ್ತಿದ್ದ. "ಇಂತಹ ದೃಷ್ಟಿಯುದ್ಧದಲ್ಲಿ ತಪ್ಪು ಮಾಡಿದವನು ಮೊದಲು ತಲೆ ಬಾಗಿಸುತ್ತಾನೆ" ಎಂಬ ಅವರ ನಂಬಿಕೆ ಗೆಲ್ಲುತ್ತಿತ್ತು. ತರಗತಿಯಲ್ಲಿ ಇದ್ದದ್ದು ಕೆಲವೇ ಪುಂಡ ಹುಡುಗರು. ಅವರೆಲ್ಲರೂ ಒಂದೇ ವಾರದೊಳಗೆ ತೆಕ್ಕುಂಜದವರ ದೃಷ್ಟಿಗೆ ಸಿಕ್ಕಿಬಿದ್ದರು. ಗುರುಗಳ ವರ್ಚಸ್ಸಿನೆದುರು ಸೋತು ಹೋದರು. ಅನಂತರ ಅವರೆಲ್ಲ ಕನ್ನಡ ತರಗತಿಯಲ್ಲಿ ಶಿಸ್ತಿನಿಂದ ಕುಳಿತು ಕಲಿತರು. ನಲುವತ್ತು ವರುಷಗಳ ಮುಂಚೆ ಸರಳ ವಿಧಾನವೊಂದರಿಂದ ಸೊಕ್ಕಿನ ಹುಡುಗರನ್ನು ತೆಕ್ಕುಂಜದವರು ಹದ್ದುಬಸ್ತಿನಲ್ಲಿ ಇಟ್ಟದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ತೆಕ್ಕುಂಜದವರಿಂದಾಗಿ ೧೯೭೨ - ೭೩ರಲ್ಲಿ ನಮ್ಮ ತರಗತಿಯಲ್ಲಿ ಶಿಸ್ತಿನ ಜೊತೆಗೆ ಹಾಜರಾತಿಯೂ ಹೆಚ್ಚಿತು. ಕನ್ನಡ ತರಗತಿಗಳಿಗೆ ಚಕ್ಕರ್ ಹೊಡೆಯುತ್ತಿದ್ದವರು ಹಲವರು. ತೆಕ್ಕುಂಜದವರು ಪಾಠ ಶುರು ಮಾಡಿದ ಬಳಿಕ ಕನ್ನಡದ ಪಾಠವೆಂದರೆ ಮೂಗು ಮುರಿಯುತ್ತಿದ್ದ ಅವರೆಲ್ಲ ತರಗತಿಗೆ ಹಾಜರಾಗಿ ಮೂಗಿಗೆ ಬೆರಳೇರಿಸಿದರು. ಕ್ಲಾಸಿನಲ್ಲಿ ರಾಕೆಟ್ಗಳು ಹಾರುವುದು ನಿಂತಿತು. ಕೆಮ್ಮು, ಕೀಟಲೆಯ ಸದ್ದು ಮಾಯವಾಯಿತು. ತರಗತಿಗೆ ತರಗತಿಯೇ ಕನ್ನಡದ ಪಾಠವನ್ನು ಕಿವಿಗೊಟ್ಟು ಕೇಳುವಂತಾಯಿತು.
ಯಾಕೆಂದರೆ ಅವರ ಕನ್ನಡದ ಪಾಠಗಳು ರಸಗವಳ. ಅವು ನಾಲ್ಕು ಗೋಡೆಗಳ ಒಳಗಣ ಪಾಠವೆಂದು ನಮಗೆ ಅನಿಸುತ್ತಲೇ ಇರಲಿಲ್ಲ. ಅವರು ನೀಡುತ್ತಿದ್ದ ವಿವರಣೆಗಳು ಪಠ್ಯಪುಸ್ತಕದ ಸಾಲುಗಳ ಅರ್ಥಕ್ಕೆ ಸೀಮಿತವಲ್ಲ; ಕನ್ನಡ ಸಾಹಿತ್ಯದ ರಸವತ್ತಾದ ಅಂಶಗಳು ಹಾಗೂ ಬದುಕಿನ ಅನುಭವಗಳಿಂದ ತುಂಬಿರುತ್ತಿದ್ದವು. ತರಗತಿಗಳಲ್ಲಿ ರುಚಿಕಟ್ಟಾದ ಕನ್ನಡದ ಅಡುಗೆ ಹೇಗೆ ಬಡಿಸಬಹುದು ಎಂಬುದಕ್ಕೆ ಮಾದರಿ ತೆಕ್ಕುಂಜದವರ ಕನ್ನಡ ಪಾಠಗಳು.
ಕ್ಲಾಸಿನೊಳಗಿನ ಶಿಸ್ತಿಗೆ ಮಾತ್ರವಲ್ಲ ಪಾಠದ ತನ್ಮಯತೆಗೂ ಹೆಸರಾದವರು ತೆಕ್ಕುಂಜದವರು. ಅದೊಂದು ದಿನ ಅವರಿಂದ ದ.ರಾ.ಬೇಂದ್ರೆಯವರ "ನಾನು ಬಡವಿ - ಆತ ಬಡವ" ಕವನದ ವಿವರಣೆ. ತರಗತಿಯ ನಿಶ್ಶಬ್ದದಲ್ಲಿ ಚಿಮ್ಮತ್ತಿದ್ದ ಅವರ ಧ್ವನಿ ಒಮ್ಮೆಲೇ ತಗ್ಗಿತು. ಕಂಠ ಗದ್ಗದವಾಯಿತು. ನಾವು ನೋಡನೋಡುತ್ತಿದ್ದಂತೆಯೇ ಅವರ ಕಣ್ಣುಗಳಿಂದ ಕಣ್ಣೀರ ಧಾರೆ. ಕವನದ ಸಾಲೊಂದನ್ನು ಹೇಳುತ್ತಿದ್ದಂತೆ ಕಣ್ಣೀರಾಗಿ ಹರಿದಿತ್ತು ಅವರ ಮನದ ಭಾವ. ನಾವೆಲ್ಲ ದಂಗು ಬಡಿದು ಕುಳಿತಿದ್ದೆವು. ಐದಾರು ನಿಮಿಷಗಳ ಮೌನದುಃಖದ ಬಳಿಕ ಚೇತರಿಸಿಕೊಂಡ ತೆಕ್ಕುಂಜದವರು ಪಾಠ ಮುಂದುವರಿಸಿದರು.
ಇನ್ಯಾರೋ ಪ್ರಾಧ್ಯಾಪಕರು ಪಾಠ ಮಾಡುವಾಗ ಕಣ್ಣೀರು ಹಾಕಿದ್ದರೆ ಏನಾಗುತ್ತಿತ್ತು? ವಿದ್ಯಾರ್ಥಿಗಳ ಕೇಕೆ, ಡೆಸ್ಕು ಗುದ್ದುವ ಸದ್ದು, ನೆಲ ತುಳಿಯುವ ಸದ್ದಿನಿಂದಾಗಿ ಕ್ಲಾಸಿನಲ್ಲಿ ರಂಪವಾಗುತ್ತಿತ್ತು. ಆದರೆ ಅಂದು ಅಲ್ಲಿ ಕೇವಲ ಮೌನ ತುಂಬಿತ್ತು. ಕೆಲವೇ ತಿಂಗಳುಗಳಲ್ಲಿ ತೆಕ್ಕುಂಜದವರು ವಿದ್ಯಾರ್ಥಿಗಳಲ್ಲಿ ಎಂತಹ ಪರಿವರ್ತನೆ ತಂದಿದ್ದರು!
ಕ್ಲಾಸಿನಲ್ಲಿ ನಮ್ಮ ಅಭಿವ್ಯಕ್ತಿಯನ್ನು ತಿದ್ದುತ್ತಿದ್ದರು ತೆಕ್ಕುಂಜದವರು. ಒಮ್ಮೆ ಒಬ್ಬ ವಿದ್ಯಾರ್ಥಿಯ ಬಳಿ ಅವರೊಂದು ಪ್ರಶ್ನೆ ಕೇಳಿದಾಗ, ಅವನು ತಲೆಯಾಡಿಸಿ "ಇಲ್ಲ" ಎಂದ; ತೆಕ್ಕುಂಜದವರು "ಅದು ಎರಡೆರಡು ಸಲ "ಇಲ್ಲ" ಅಂತ ಯಾಕೆ? ತಲೆಯಾಡಿಸದೆ "ಇಲ್ಲ" ಅಂತ ಹೇಳಿದರೆ ಅಥವಾ ತಲೆಯಾಡಿಸಿ ಏನೂ ಹೇಳದಿದ್ದರೆ ಸಾಕಾಗುವುದಿಲ್ವಾ?" ಎಂದರು. ಆತನಿಗೆ ಫಕ್ಕನೆ ಅರ್ಥವಾಗಲಿಲ್ಲ. ಅವರ ಮಾತಿನ ಅರ್ಥವಾದಾಗ ಪೆಚ್ಚಾದ.
ತನ್ನ ವಿದ್ಯಾರ್ಥಿಗಳ ಒಳ್ಳೆಯ ಅಂಶಗಳನ್ನು ಮುತುವರ್ಜಿಯಿಂದ ಎತ್ತಿ ತೋರಿಸುತ್ತಿದ್ದರು ತೆಕ್ಕುಂಜದವರು. ಅವನ್ನು ಮುಕ್ತವಾಗಿ ಜಾಹೀರು ಪಡಿಸುತ್ತಿದ್ದರು. ಮಧ್ಯಾವಧಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದ ನನ್ನ ಸಹಪಾಠಿಯೊಬ್ಬನ ಉತ್ತರಪತ್ರವನ್ನು ಎತ್ತಿ ಹಿಡಿದು, ಎಲ್ಲರಿಗೂ ತೋರಿಸುತ್ತಾ ಅವರು ಹೇಳಿದ್ದು, "ನೀವೆಲ್ಲ ಇದನ್ನು ನೋಡಬೇಕು; ಇದರಿಂದ ಕಲಿಯಬೇಕು. ಎಷ್ಟು ಚಂದ ಅಕ್ಷರ! "ಓದುವಾ" ಅಂತ ಆಗ್ತದೆ. ಕೆಲವರು ಬರೆಯುತ್ತೀರಿ, ಓದಲಿಕ್ಕೇ ಆಗುವುದಿಲ್ಲ. ಹೀಗೆ ಬರೆದರೆ ಪಬ್ಲಿಕ್ ಪರೀಕ್ಷೆಯಲ್ಲಿಯೂ ನಿಮಗೆ ಒಳ್ಳೆಯ ಮಾರ್ಕು ಕೊಡ್ತಾರೆ. ಇವರು ಪುಟ ತುಂಬಿಸಿದ್ದಲ್ಲ; ಕೇವಲ ನಾಲ್ಕು ಪುಟಗಳಲ್ಲಿ ಎಲ್ಲ ಪ್ರಶ್ನೆಗಳನ್ನೂ ಉತ್ತರಿಸಿದ್ದಾರೆ. ಬೇಡವಾದದ್ದು ಯಾವುದೂ ಬರೆದಿಲ್ಲ. ನಿಮ್ಮ ಉತ್ತರಗಳು ಹೀಗಿರಬೇಕು."
ಇನ್ನೊಂದು ಸಂದರ್ಭದಲ್ಲಿ, ಒಬ್ಬ ವಿದ್ಯಾರ್ಥಿ ವರ್ಣನೆ ಅವಶ್ಯವಾದ ಒಂದು ಪ್ರಶ್ನೆಗೆ "...ವರ್ಣನೆಗೆ ಮೀರಿದ್ದು ಅಂತ ಆದಿಶೇಷನೇ ಹೇಳಿರುವಾಗ ನಾನೆಂತು ವರ್ಣಿಸಲಿ" ಎಂದು ಒಂದೇ ಸಾಲಿನ ಉತ್ತರ ಬರೆದಿದ್ದ. "ಜಾಣತನ ಅಂದರೆ ಹೀಗಿರಬೇಕು" ಎಂದು ತೆಕ್ಕುಂಜದವರು ಅವನ ಆ ಉತ್ತರಕ್ಕೆ ಪೂರ್ಣ ಅಂಕ ನೀಡಿದ್ದನ್ನು ನಮಗೆ ಕ್ಲಾಸಿನಲ್ಲಿ ತಿಳಿಸಿದ್ದರು.
ಕನ್ನಡ ಪಾಠ ಬರಡು ಅಂತಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ರಸದೂಟ ಉಣಿಸಿ, ಕನ್ನಡದಲ್ಲಿ ಆಸಕ್ತಿ ಕುದುರಿಸಿದವರು; ಕನ್ನಡದಲ್ಲಿ ಆಸಕ್ತರಾಗಿದ್ದವರ ಅಭಿರುಚಿಗೆ ನೀರೆರೆದವರು; ಕನ್ನಡ ಭಾಷೆಯ ಅಭ್ಯಾಸಿಗಳಿಗೆ ಕನ್ನಡದ ಆಯಾಮಗಳನ್ನು ಪರಿಚಯಿಸಿದವರು - ತೆಕ್ಕುಂಜದವರು. ಅವರಿಂದಾಗಿ ಕನ್ನಡ ಭಾಷೆಯ ಶಬ್ದಸಂಪತ್ತಿನ, ಶಬ್ದಬಳಕೆಯ ಹಾಗೂ ಅರ್ಥ ಸ್ಪಷ್ಟತೆಯ ಬಗ್ಗೆ ಆ ಒಂದೇ ವರುಷದಲ್ಲಿ ನಾವು ಬಹಳ ಕಲಿತೆವು. ಅವರ ಸಮರ್ಥ ಮಾರ್ಗದರ್ಶನದಿಂದಾಗಿ, ಎರಡನೇ ಪಿಯುಸಿಯಲ್ಲಿ ವಿಜ್ನಾನದ ವಿಷಯಗಳಿಗಿಂತ ಜಾಸ್ತಿ ಅಂಕಗಳನ್ನು ಕನ್ನಡದಲ್ಲಿ ಗಳಿಸಲು ನನಗೆ ಸಾಧ್ಯವಾಯಿತು.
ಪ್ರೊ. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ನನ್ನ ಅಮ್ಮ ದಿವಂಗತ ಬಿ. ಸುಶೀಲ ಅವರಿಗೂ ಕನ್ನಡ ಕಲಿಸಿದ್ದರು. ಅವರ ಬಗ್ಗೆ ಅಮ್ಮ ಹೇಳುತ್ತಿದ್ದಾಗೆಲ್ಲ ನನ್ನಲ್ಲಿ ಮೊಳೆಯುತ್ತಿದ್ದ ಆಶೆ, "ನಾನೂ ತೆಕ್ಕುಂಜದವರ ಕನ್ನಡ ಪಾಠ ಕೇಳಬೇಕು." ಈ ಆಶೆ ಈಡೇರಿದ್ದು ನನ್ನ ಸುದೈವ. ತೆಕ್ಕುಂಜದವರು ಮಂಗಳೂರು ಕನ್ನಡ ಸಂಘದ ಸ್ಥಾಪಕಾಧ್ಯಕ್ಷರು. ಪದವಿ ಶಿಕ್ಷಣ ಮುಗಿದ ಬಳಿಕ ನಾನು ಕನ್ನಡ ಸಂಘದ ಕಾರ್ಯದರ್ಶಿಯಾದಾಗ ನನ್ನ ಅಚ್ಚುಮೆಚ್ಚಿನ ಗುರುಗಳೊಂದಿಗೆ ಪುನಃ ಓಡನಾಡುವ ಅವಕಾಶ ನನಗೆ ದೊರಕಿತು. ನನ್ನಂತೆ ಹಲವರಲ್ಲಿ ಕನ್ನಡದ ಪ್ರೀತಿ, ಅಭಿಮಾನ ಬೆಳೆಸಿದವರು ತೆಕ್ಕುಂಜದವರು. ಇಂತಹ ಹಿರಿಯ ಚೇತನ ನಮ್ಮನ್ನು ಅಗಲಿ (೧೯೮೧ರಲ್ಲಿ) ಮೂವತ್ತು ವರುಷಗಳಾಗಿವೆ. ಇಂದಿಗೂ ತೆಕ್ಕುಂಜದವರ ನೆನಪು ತಂಪುತಂಪು.