My Books
ಲೇಖಕರು: ಬಿ. ಜಿ. ಎಲ್. ಸ್ವಾಮಿ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಮೊದಲ ಮುದ್ರಣ: 2005 ಪುಟ: 76 ಬೆಲೆ: ರೂ. 40/-
ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ ಲೇಪಿಸಿ, ಚೇತೋಹಾರಿಯಾಗಿ ಹೇಗೆ ಓದುಗರಿಗೆ ಉಣಬಡಿಸಬೇಕು ಎಂಬುದಕ್ಕೊಂದು ಮಾದರಿ ಅದು.
“ಬೃಹದಾರಣ್ಯಕ" ಅವರು ಪ್ರಾಣಿಗಳು ಮತ್ತು ಕಾಡಿನ ವಿಸ್ಮಯಗಳ ಬಗ್ಗೆ ಬರೆದಿರುವ 11 ಅಧ್ಯಾಯಗಳ ಪುಸ್ತಕ. ಸಸ್ಯಗಳ ಬಗ್ಗೆ "ಹಸುರು ಹೊನ್ನು” ಬರೆದಂತೆ ಪ್ರಾಣಿಗಳ ಬಗ್ಗೆ ವಿವರವಾದ ಪುಸ್ತಕವೊಂದನ್ನು ಬರೆಯಬೇಕೆಂದು ಅವರು ಹಲವು ಪುಟಗಳ ವಿವರಣೆ ಬರೆದಿದ್ದರು. ಆದರೆ, ಆ ಪುಸ್ತಕವನ್ನು ಬರೆದು ಮುಗಿಸುವ ಮುನ್ನ ಅವರು ನಮ್ಮನ್ನು ಅಗಲಿದರು. ಆ ವಿವರಣಾ ಪುಟಗಳನ್ನು ಅವರ ಭಾಮೈದುನ ಕೃಷ್ಣವೂರ್ತಿಯವರು ರಕ್ಷಿಸಿಟ್ಟಿದ್ದರು. ಅದರಿಂದಾಗಿ “ಬೃಹದಾರಣ್ಯಕ" ಪುಸ್ತಕ ಪ್ರಕಟಿಸಲು ಸಾಧ್ಯವಾಯಿತು. ಇದರಲ್ಲಿವೆ, "ಕಾಡು ಮರಗಳು” ಮತ್ತು "ಕಾಡು ಪ್ರಾಣಿಗಳು" ಎಂಬ ಎರಡು ಭಾಗಗಳು.
ಲೇಖಕರು: ಜೂಲ್ಸ್ ವರ್ನ್ ಕನ್ನಡಾನುವಾದ: ಬಿ.ಎಸ್. ವಿದ್ಯಾರಣ್ಯ
ಪ್ರಕಾಶಕರು: ವಸಂತ ಪ್ರಕಾಶನ, ಬೆಂಗಳೂರು
ಪ್ರಕಟಣಾ ವರುಷ: 2004 ಪುಟ: 170 ಬೆಲೆ: ರೂ. 95/-
ಜೂಲ್ಸ್ ವರ್ನ್ (1828 - 1905) ಆಧುನಿಕ ವೈಜ್ನಾನಿಕ ಕತೆಗಳ ಜನಕ ಎಂದೇ ಪ್ರಸಿದ್ಧರು. ವಿಜ್ನಾನದ ಆಧಾರವಿರುವ ಕಾಲ್ಪನಿಕ ಘಟನೆಗಳನ್ನು ಪೋಣಿಸಿ, ಅದ್ಭುತರಮ್ಯವಾದ ಕಾದಂಬರಿಗಳನ್ನು ಬರೆದು ಹೆಸರು ಗಳಿಸಿದವರು. ಹಲವಾರು ವೈಜ್ನಾನಿಕ ಅನ್ವೇಷಣೆಗಳು ಬೆಳಕಿಗೆ ಬಂದ 19ನೇ ಶತಮಾನದಲ್ಲಿ ಅಂತಹ ಕತೆಗಳೂ ಕಾದಂಬರಿಗಳೂ ಜನಪ್ರಿಯವಾದದ್ದು ಅಚ್ಚರಿಯ ಸಂಗತಿಯೇನಲ್ಲ. ಒಂದು ನೂರು ವರುಷಗಳ ಮುಂಚೆಯೇ ಜೂಲ್ಸ್ ವರ್ನ್ ಫ್ಯಾಕ್ಸ್ ಯಂತ್ರ, ಜಲಾಂತರ್ಗಾಮಿ ಇತ್ಯಾದಿಗಳ ಬಗ್ಗೆ ಕಲ್ಪಿಸಿ ಬರೆದಿದ್ದರು.
ಇದು 1873ರಲ್ಲಿ ರಚಿಸಲಾದ ಕಾದಂಬರಿ. ಫಿಲಿಯಾಸ್ ಫಾಗ್ ಎಂಬವರು ತನ್ನ ಸ್ನೇಹಿತರೊಂದಿಗೆ 20,000 ಪೌಂಡುಗಳ ಮೊತ್ತಕ್ಕೆ ಪಂಥ ಕಟ್ಟುತ್ತಾರೆ: ಕೇವಲ 80 ದಿನಗಳಲ್ಲಿ ಭೂಮಿಯನ್ನು ಸುತ್ತಿ ಬರುತ್ತೇನೆ ಎಂದು! ಲಂಡನಿನಿಂದ ಅಕ್ಟೋಬರ್ 2ರಂದು ರಾತ್ರಿ 8.45 ಗಂಟೆಗೆ ಹೊರಟಿದ್ದ ಫಾಗ್ ಡಿಸೆಂಬರ್ 21ರಂದು ರಾತ್ರಿ 8.45 ಗಂಟೆಯೊಳಗೆ ಇಡೀ ಭೂಗೋಲ ಸುತ್ತಿ ಲಂಡನಿಗೆ ವಾಪಾಸು ಬರುತ್ತೇನೆಂದು ಪಣ ತೊಟ್ಟಿದ್ದರು. ದೂರ ಪ್ರಯಾಣಕ್ಕಾಗಿ ವಿಮಾನ ಹಾಗೂ ಆಧುನಿಕ ವಾಹನ ಸೇವೆಗಳು ಲಭ್ಯವಿಲ್ಲದಿದ್ದ ಆ ಕಾಲದಲ್ಲಿ ಇದೊಂದು ರೋಮಾಂಚಕಾರಿ ಕಲ್ಪನೆಯಾಗಿತ್ತು.
ಲೇಖಕಿ: ಬಿ. ಎಸ್. ಶೈಲಜಾ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪ್ರಕಟಣೆಯ ವರುಷ: 2007 ಪುಟ: 120 ಬೆಲೆ: ರೂ. 70/-
ಬಾಹ್ಯಾಕಾಶ, ಗ್ರಹಣಗಳು ಮತ್ತು ಆಕಾಶಕಾಯಗಳ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ಬಿ. ಎಸ್. ಶೈಲಜಾ ಅವರ ಪ್ರವಾಸ ಕಥನ ಇದು. ಡಿಸೆಂಬರ ತಿಂಗಳಿನಲ್ಲಿ ಘಟಿಸಿದ ಸೂರ್ಯಗ್ರಹಣದ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎರಡು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಲು ಹೋಗಿದ್ದಾಗಿನ ಅನುಭವಗಳನ್ನು ಇದರಲ್ಲಿ ನಿರೂಪಿಸಿದ್ದಾರೆ.
ಆಫ್ರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಸಫಾರಿ ಹೋದಾಗ ಕಂಡ ಆನೆಗಳು, ಸಿಂಹಗಳು, ಚಿರತೆಗಳು, ಜಿರಾಫೆಗಳು, ಜೀಬ್ರಾಗಳು, ಕತ್ತೆಕಿರುಬಗಳು ಇತ್ಯಾದಿ ಹತ್ತು ಹಲವು ಪ್ರಾಣಿಗಳ ವೀಕ್ಷಣೆಯ ವಿವರಗಳು ಚೇತೋಹಾರಿಯಾಗಿವೆ. ಅಲ್ಲಿಯ ವರೆಗೆ ತಾನು ಮಾಡಿದ್ದ ಏಕಮಾತ್ರ ಸಫಾರಿ ಎಂದರೆ ಬನ್ನೇರುಘಟ್ಟದ್ದು; ಕಿಟಕಿ ಬಾಗಿಲು ಭದ್ರವಾಗಿ ಮುಚ್ಚಿದ್ದ ಸಣ್ಣ ಬಸ್ಸಿನಲ್ಲಿ. ಆದರೆ ದಕ್ಷಿಣ ಆಫ್ರಿಕಾದ ಸಫಾರಿ ತೆರೆದ ಜೀಪಿನಲ್ಲಿ ಎಂದು ಹೋಲಿಸುತ್ತಾರೆ ಲೇಖಕಿ.
ಪ್ರಿಟೋರಿಯಾ ಯಾತ್ರೆ ಎಂಬ ಅಧ್ಯಾಯದಲ್ಲಿ “ಪ್ರಿಟೋರಿಯ ಮತ್ತು ಕೇಫ್ ಟೌನ್‌ಗಳೆರಡೂ ದಕ್ಷಿಣ ಆಫ್ರಿಕಾದ ರಾಜಧಾನಿಗಳು. ಎರಡೂ ನಗರಗಳಲ್ಲಿ ಪಾರ್ಲಿಮೆಂಟ್ ಭವನ ಮತ್ತು ರಾಷ್ಟ್ರಪತಿ ಭವನಗಳಿವೆ. ಈ ರಾಷ್ಟ್ರಪತಿ ಭವನ ದೆಹಲಿಯ ಭವನದಂತೆಯೇ ಇದೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ಎರಡೂ ಭವನಗಳ ಆರ್ಕಿಟೆಕ್ಟ್ ಒಬ್ಬನೇ, ಸರ್ ಎಡ್ವರ್ಡ್ ಲೈಟನ್ಸ್” ಎಂಬಂತಹ ಹಲವು ಕುತೂಹಲಕರ ಮಾಹಿತಿಗಳನ್ನು ದಾಖಲಿಸಿದ್ದಾರೆ.
ಲೇಖಕರು: ಕೇಶವ ಮಳಗಿ
ಪ್ರಕಾಶಕರು: ಕಥನ, ನಾಗರಭಾವಿ, ಬೆಂಗಳೂರು
ಪ್ರಕಟಣೆಯ ವರುಷ: 2008 ಪುಟ: 106 ಬೆಲೆ: ರೂ. 60/-
ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ.
ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. 1963ರಲ್ಲಿ ಜನಿಸಿದ ಇವರು ವಿಜಾಪುರ, ಬಾಗಿಲುಕೋಟೆ, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳ ಭಾಷೆ ಹಾಗೂ ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಇಳಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು ನಿರೂಪಣೆಯಿಂದಾಗಿ ಇವರ ಕಥನ ಗಮನಾರ್ಹ.
ಪುಸ್ತಕದ ಆರಂಭದಲ್ಲಿ ಕೇಶವ ಮಳಗಿ ಹೇಳಿಕೊಂಡಿರುವ ಮಾತುಗಳು: "ಸುಮಾರು ನಲ್ವತ್ತು ವರ್ಷಗಳಿಂದ ನನ್ನೊಳಗೆ ಬುಗುರಿಯಂತೆ ನಿದ್ರಿಸುತ್ತಿದ್ದ ರೂಪಕ, ಭಾವ ನುಡಿ, ವಿಚಾರ, ಚಿತ್ರಗಳ ಲೋಕವನ್ನು ಓದುಗರು ಮುಂದಿನ ಪುಟಗಳಲ್ಲಿ ಎದುರುಗೊಳ್ಳುವರು. ಇಲ್ಲಿ ಚಿತ್ರಿಸಲಾದ ಜಗತ್ತಿನ ಬಣ್ಣದ ನೆರಳು ನನ್ನ ಕಥೆಗಳಲ್ಲಿ ಆಗೀಗ ಹಾದು ಹೋಗಿರಬಹುದಾದರೂ ಇಲ್ಲಿನ ಬಹುತೇಕ ಕಥನಗಳು ನನ್ನ ಈ ವರೆಗಿನ ಬರವಣಿಗೆಯ ಚೌಕಟ್ಟಿನ ಆಚೆಯೇ ಉಳಿದಂಥವು. ಇದಕ್ಕೆ ಕಾರಣ: ಇವುಗಳಲ್ಲಿ ಕಥನ, ಕಾವ್ಯ, ಲಾಲಿತ್ಯದ ಅಂಶವಿದ್ದರೂ ಅವಕ್ಕೊಂದು ಸ್ವರೂಪ ಕಲ್ಪಿಸುವ ಅವಕಾಶ ದೊರಕಿರಲಿಲ್ಲ ಎನ್ನುವುದೇ ಆಗಿದೆ. ಹಾಗೆಂದೇ, ಬಿಸಿಲು ಸೀಮೆಯ ಸುಡು ಬಯಲಿನಲಿ ಹಾದು ಹೋದ ತಿಳಿ ಗಾಳಿಯಂತಹ ಈ ಅನುಭವಗಳನ್ನು ಹೊಸ ಕಥನ ಕ್ರಮದ ಮೂಲಕ ಕಟ್ಟಲು ಪ್ರಯತ್ನಿಸಿರುವೆ.”
ಲೇಖಕಿ: ಕುಸುಮಾ ಶಾನಭಾಗ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟಣೆ: 2013 ಪುಟ: 167 ಬೆಲೆ: ರೂ.130/-
ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ 2008-2009ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ ಜೀವನದಲ್ಲಿ ಅವರು ಕಂಡ, ಅನುಭವಿಸಿದ ಕೆಲವು ಘಟನೆಗಳು ಇಲ್ಲಿವೆ.
ಇದರ ಒಂದೊಂದು ಲೇಖನವೂ ಮನಸ್ಸನ್ನು ತಟ್ಟುತ್ತದೆ. ಯಾಕೆಂದರೆ, ಇವೆಲ್ಲವೂ ನೈಜಕತೆಗಳೇ ಆಗಿವೆ. ಬೆಂಗಳೂರಿನ ನಂದಿನಿ ಲೇಔಟಿನಿಂದ ಕಾಣೆಯಾದ ಯುವತಿಯರ ಬಗ್ಗೆ ಬರೆದ “ಎಲ್ಲಿ ಹೋದರು ಈ ಬಾಲೆಯರು!” ಲೇಖನ, ನಗರಜೀವನದ ಕರಾಳಮುಖವೊಂದನ್ನು ಬಹಿರಂಗ ಪಡಿಸುತ್ತದೆ. ಅಲ್ಲಿ ಬಡಯುವತಿಯರು ಸುರಕ್ಷಿತರಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.
“ಉಪಕಾರ ಎಂಬ ಸಿಹಿಗೆ ಮುತ್ತುವ…" ಲೇಖನ ಹೆಗ್ಗಡದೇವನಕೋಟೆ ಸಮೀಪದ ಬೀಚನಹಳ್ಳಿ ಕಬಿನಿ ಕಾಲೋನಿಯ ಪಿಯುಸಿ ಓದುವ ಮೂವರು ಯುವಕರು ಬಗ್ಗೆ. ದೇವಾಲಮ್ಮ ಎಂಬ ಮಹಿಳೆ ಜೇನ್ನೊಣಗಳ ದಾಳಿಯಿಂದ ತತ್ತರಿಸಿ ಹೋದಾಗ, ಇವರು ಓಡಿ ಹೋಗಿ, ಹೊಗೆ ಹಾಕಿ, ತಾವೂ ನೂರಾರು ಜೇನ್ನೊಣಗಳಿಂದ ಚುಚ್ಚಿಸಿಕೊಂಡು ಆಕೆಯನ್ನು ರಕ್ಷಿಸುತ್ತಾರೆ. ಅವಳನ್ನು ಹೆಗ್ಗಡದೇವನಕೋಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಾಗ ಅಲ್ಲಿ ತಾಂಡವವಾಡುವ ಭ್ರಷ್ಟಾಚಾರವನ್ನು ಬಿಚ್ಚಿಡುತ್ತದೆ ಈ ಲೇಖನ. ಅನಂತರ, ಈ ಮೂವರು ಬಡ ಕೃಷಿ ಕಾರ್ಮಿಕರ ಮಗಂದಿರನ್ನು ಕಬಿನಿ ಕಾಲೋನಿಯ ಕೆಲವರು ತಮ್ಮ ಸ್ವಾರ್ಥಕ್ಕೆ ಕೆಲಸದ ಆಳುಗಳಂತೆ ಬಳಸಿಕೊಳ್ಳುವುದನ್ನೂ ದಾಖಲಿಸಿದ್ದಾರೆ. ಆ ಹುಡುಗರ ಉಪಕಾರ ಪ್ರವೃತ್ತಿಯೇ ಅವರಿಗೆ ಮುಳುವಾಯಿತೇ?
ಲೇಖಕರು: ಹಲವರು
ಪ್ರಕಾಶಕರು: ಕರ್ನಾಟಕ ಅರಣ್ಯ ಇಲಾಖೆ, ತುಮಕೂರು; ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ತಿಪಟೂರು
ಪ್ರಕಟಣೆ: 2002 ಪುಟಗಳು: 281 + 12 ವರ್ಣ ಬೆಲೆ: ನಮೂದಿಸಿಲ್ಲ
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. 69 ಪಾರಂಪರಿಕ ವೈದ್ಯರು ಮತ್ತು 37 ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು 19 ಸದಸ್ಯರಿದ್ದರು.
ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು ಬಳಸಿ ಜನರ ಆರೋಗ್ಯ ರಕ್ಷಿಸುತ್ತಿದ್ದ ಈ ಪದ್ಧತಿ ವ್ಯಾಪಕವಾಗಿ ಜನಬಳಕೆಯಲ್ಲಿತ್ತು. ಈ ಔಷಧಿ ಪದ್ಧತಿ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿತ್ತು. ಮಾತ್ರವಲ್ಲ, ಕಡಿಮೆ ಖರ್ಚಿನ, ಆಯುರಾರೋಗ್ಯವೃದ್ಧಿಯ ಮನೆಮದ್ದಿನ ಜೀವನಕ್ರಮವೂ ಆಗಿತ್ತು.
ಲೇಖಕರು: ಮಹರ್ಷಿ ಡಾ. ಶ್ರೀ ಆನಂದ್ ಗುರೂಜಿ
ಪ್ರಕಾಶಕರು: ಶ್ರೀನಿಧಿ ಪಬ್ಲಿಕೇಷನ್ಸ್, ಬಳೇಪೇಟೆ, ಬೆಂಗಳೂರು
ಪ್ರಕಟಣೆ: 2014 ಪುಟ: 272 + 104 ವರ್ಣ ಬೆಲೆ: ರೂ. 360/-
ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ.
ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ, ನಂತರ ಐದಾರು ಸಾಲುಗಳಲ್ಲಿ ಸಸ್ಯದ ವಿವರಣೆ, ಕೊನೆಯಲ್ಲಿ ಆಯುರ್ವೇದದ ಅನುಸಾರ ಸಸ್ಯದ ಉಪಯೋಗಗಳನ್ನು ತಿಳಿಸಲಾಗಿದೆ.
ಮುನ್ನುಡಿಯಲ್ಲಿ ಆಯುರ್ವೇದದ ಹಿನ್ನೆಲೆಯ ಬಗ್ಗೆ ನೀಡಲಾಗಿರುವ ಮಾಹಿತಿ ಹೀಗಿದೆ: ಆಯುರ್ವೇದ ಚಿಕಿತ್ಸಾ ಪದ್ಧತಿ ಕುರಿತ ಮೂರು ಪುರಾತನ ಗ್ರಂಥಗಳೆಂದರೆ ಚರಕ ಸಂಹಿತ, ಶುಶ್ರುತ ಸಂಹಿತ ಮತ್ತು ಭೇದ ಸಂಹಿತ. ಈ ಗ್ರಂಥಗಳನ್ನು 3ರಿಂದ 6ನೇ ಶತಮಾನದ ಮಧ್ಯಕಾಲದಲ್ಲಿ ಬರೆದಿರಬಹುದು. ನಂತರ ಕಶ್ಯಪ ಮತ್ತು ಹರಿತ ಸಂಹಿತೆಗಳು ಗುಪ್ತರ ಕಾಲದ ಮೊದಲು ಬರೆದಿರಬಹುದೆಂದು ತಿಳಿಯಲಾಗಿದೆ. ಗುಪ್ತರ ಕಾಲದಲ್ಲಿ ವಾಗ್ಭಟ ಮತ್ತು ಮಾಧವ ಸಂಹಿತೆಗಳನ್ನು ರಚಿಸಲಾಗಿದೆ.
ಲೇಖಕರು: ಪಿ. ಎಸ್. ವೆಂಕಟರಾಮ ದೈತೋಟ
ಪ್ರಕಾಶಕರು: ವಿವೇಕಾನಂದ ಸಂಶೋಧನಾ ಕೇಂದ್ರ, ಪುತ್ತೂರು, ದಕ್ಷಿಣ ಕನ್ನಡ
ಪ್ರಕಟಣೆ: 2016 ಪುಟ: 484 ಬೆಲೆ: ರೂ. 500/-
ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು.
ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.
ಪುಸ್ತಕದ ಆರಂಭದಲ್ಲಿ ಪರಿಣತರು ಬರೆದಿರುವ ನಾಲ್ಕು ಮಾಹಿತಿಪೂರ್ಣ ಲೇಖನಗಳಿವೆ:
(1) ಸಸ್ಯಶಾಸ್ತ್ರ ಪರಿಚಯ - ಡಾ. ಎಸ್. ಶಂಕರ ಭಟ್
(2) ಮೂಲಿಕೆ ಬಳಕೆಯ ಮೈಲಿಗಲ್ಲುಗಳು - ಡಾ. ಸತ್ಯನಾರಾಯಣ ಭಟ್ ಪಿ.
(3) ಭಾರತೀಯ ಸಸ್ಯ ಶಾಸ್ತ್ರ ಪರಂಪರೆ - ವಿ. ವಿ. ಭಟ್
(4) ಮೂಲಿಕಾ ತಜ್ನ ವೆಂಕಟರಾಮ ದೈತೋಟ - ಶ್ರೀಪಡ್ರೆ
(5) ಔಷಧೀಯ ಸಸ್ಯ ಸಂಪತ್ತು - ಪಿ. ಎಸ್. ವೆಂಕಟರಾಮ ದೈತೋಟ
ಲೇಖಕಿಯರು: ಡಾ. ಎಂ. ವಸುಂಧರ, ಡಾ. ವಸುಂಧರಾ ಭೂಪತಿ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 2007 9ನೇ ಮುದ್ರಣ: 2017 ಪುಟ: 160 + 40 ವರ್ಣ ಬೆಲೆ: ರೂ.200/-
ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನೂ ಸೊಪ್ಪಿನ ಗಿಡಗಳನ್ನೂ ಬೆಳೆಸಿ, ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು.
ಹಲವು ಅನಾರೋಗ್ಯ/ ಜಾಡ್ಯಗಳಿಗೆ ಚಿಕಿತ್ಸೆ ನೀಡಲು ನಮ್ಮ ದೇಶದ ಪಾರಂಪರಿಕ ಚಿಕಿತ್ಸಕರು ಬಳಸುತ್ತಿದ್ದ ಈ ಕೆಳಗಿನ 36 ಔಷಧೀಯ ಸಸ್ಯಗಳನ್ನು ಇದರಲ್ಲಿ ಪರಿಚಯಿಸಲಾಗಿದೆ: ಅಮೃತಬಳ್ಳಿ, ಅಶ್ವಗಂಧ (ಹಿರೇಮದ್ದಿನ ಗಿಡ), ಆಡುಸೋಗೆ, ಒಂದೆಲಗ, ಕರಿಬೇವು, ಕೊತ್ತಂಬರಿ, ಗುಲಾಬಿ, ಚಕ್ರಮುನಿ, ಜೀವಂತಿ, ಜೇಷ್ಠಮಧು (ಅತಿಮಧುರ), ತುಂಬೆ, ತುಳಸಿ, ದಾಸವಾಳ, ದೊಡ್ಡಪತ್ರೆ, ನಂದಿಬಟ್ಟಲು, ನಿಂಬೆಹುಲ್ಲು (ಮಜ್ಜಿಗೆ ಹುಲ್ಲು), ನುಗ್ಗೆ, ನೆಲನೆಲ್ಲಿ, ನೆಲಬೇವು, ಪಪ್ಪಾಯ, ಪಾರಿಜಾತ, ಪುಂಡಿಸೊಪ್ಪು, ಪುದೀನ, ಬಜೆ, ಬಸಳೆ ಸೊಪ್ಪು, ಬ್ರಾಹ್ಮಿ, ಬೇವು, ಭೃಂಗರಾಜ, ಮಧುನಾಶಿನಿ, ಮಲ್ಲಿಗೆ, ಮಂಗರವಳ್ಳಿ, ಮೆಂತ್ಯಸೊಪ್ಪು, ಲೋಳೆಸರ (ಕುಮಾರಿ), ಸದಾಪುಷ್ಪಿ (ಕಾಶಿ ಕಣಗಿಲೆ), ಸ್ಟೀವಿಯ (ಮಧುವಂತ), ಹಿಪ್ಪಲಿ.
ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಈ ಮಾಹಿತಿ ದಾಖಲಿಸಲಾಗಿದೆ:
ಲೇಖಕರು: ಬಿ. ಎಂ. ಶ್ರೀ.
ಪ್ರಕಾಶಕರು: ಕಾವ್ಯಾಲಯ, ಮೈಸೂರು
ಪ್ರಕಟಣೆಯ ವರುಷ: 1926 ಪುಟ: 35 + 112 ಬೆಲೆ: ರೂ. 18/-
ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು.
ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ: “ಯಾರ ಸಂತೋಷಕ್ಕಾಗಿ ಮೊದಲು ನಾನು ಈ ಗೀತಗಳನ್ನು ಬರೆದೆನೋ ಆ ಕಣ್ಣುಗಳು ಬೇಗ ಮುಚ್ಚಿ ಹೋಗಿ, ಕೆಲವು ವರ್ಷ ಗ್ರಂಥ ನನ್ನಲ್ಲಿಯೇ ಉಳಿದುಕೊಂಡಿತು…… ಇಂಗ್ಲಿಷ್ ಕಾವ್ಯಮಾರ್ಗವನ್ನು ಕನ್ನಡಿಗರು ಈ ಸಣ್ಣ ಗ್ರಂಥದಿಂದ ಸ್ವಲ್ಪ ಮಟ್ಟಿಗೆ ತಿಳಿಯಬಹುದಾಗಿದೆ. “ಭಾಷಾಂತರಕಾರರು ಕೊಲೆಗಾರರು” ಎಂದು ಪಾಶ್ಚಾತ್ಯರಲ್ಲಿ ಒಂದು ಗಾದೆಯುಂಟು. ಆ ಅಪವಾದವನ್ನು ತಪ್ಪಿಸಿಕೊಂಡಿರುವೆ-ನೆಂದು ನಾನು ತಿಳಿದುಕೊಂಡಿಲ್ಲ. ಆದರೆ, ನನ್ನ ಬುದ್ಧಿ ಬಲವಿರುವ ಮಟ್ಟಿಗೂ ಮೂಲವನ್ನು ಪ್ರತಿಬಿಂಬಿಸುವ ಕರ್ತವ್ಯವನ್ನೇ ಮುಂದಿಟ್ಟುಕೊಂಡು ಕೆಲಸಮಾಡಿದ್ದೇನೆ……. “
ನಾನು ೧೯೭೧ನೆಯ ಇಸವಿಯಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ಈ ಸಂಕಲನದ “ಕಾರಿಹೆಗ್ಗಡೆಯ ಮಗಳು” ಎಂಬ ಕವನ (ಕ್ಯಾಂಪ್‌ಬೆಲ್ ಕವಿಯ ಲಾರ್ಡ್ ಉಲ್ಲಿನ್ಸ್ ಡಾಟರ್ ಕವನದ ಅನುವಾದ) ಇಂಗ್ಲಿಷ್ ಪಠ್ಯಪುಸ್ತಕದಲ್ಲಿತ್ತು. ಒಂದೇ ಓದಿಗೆ ಕನ್ನಡ ಬಲ್ಲವರ ಮನಸೂರೆಗೊಳ್ಳುವ ಕವನ ಅದು. ಬಿ.ಎಂ.ಶ್ರೀ.ಯವರ ಅನುವಾದದ ಹಿರಿಮೆಗೆ ಇದುವೇ ನಿದರ್ಶನ.