My Books

Friday, August 18, 2023 - 13:08

ಲೇಖಕ: ಪ್ರಶಾಂತ ಆಡೂರ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2012           ಪುಟ: 126           ಬೆಲೆ: ರೂ.100/-

ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ತಿಳಿಯಬೇಕಾದರೆ ಓದಬೇಕು ಈ ಪುಸ್ತಕ. ಸರಾಗವಾಗಿ, ಸುಲಲಿತವಾಗಿ ಆಡುಮಾತಿನಲ್ಲಿ ಹಲವು ಸಂಗತಿಗಳ ಬಗ್ಗೆ ಬರೆದಿದ್ದಾರೆ ಪ್ರಶಾಂತ ಆಡೂರ.

Friday, August 18, 2023 - 13:05

ಲೇಖಕರು: ಅಮರೇಶ ನುಗಡೋಣಿ ಮತ್ತು ಇತರರು (9 ಕತೆಗಾರರು)
ಪ್ರಕಾಶಕರು: 8ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸಮಿತಿ, ಯು.ಎಸ್.ಎ.
ಪ್ರಕಟಣೆ ವರುಷ: 2014           ಪುಟ: 184           ಬೆಲೆ: ರೂ. 200/-

ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) 8ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು.

ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ ನಮಗೆ ಲಭ್ಯವಿದ್ದ ಅನುಕೂಲತೆಗಳ ಇತಿಮಿತಿಯಲ್ಲಿ ಪ್ರಚಲಿತ ಲೇಖಕರನ್ನು ಸಂಪರ್ಕಿಸಿ ಈ ಕಥೆಗಳನ್ನು ಪಡೆದುಕೊಳ್ಳಲಾಯಿತು. ಬೊಗಸೆಯಲ್ಲಿ ಸಾಗರದ ನೀರನ್ನು ಹಿಡಿದು, ಇದೇ ಸಾಗರವೆನ್ನುವುದು ದುಸ್ಸಾಹಸವಾದಿತು. ಒಟ್ಟು ಒಂಬತ್ತು ಕಥೆಗಳ ಈ ಕಥಾಸಂಕಲನವನ್ನು ಕನ್ನಡ ಕಥೆಗಳ ಪ್ರಾತಿನಿಧಿಕವೆಂದು ಕರೆಯಲಾಗದು. ….. ಸಣ್ಣ ಕಥೆಯ ಸಾಧ್ಯತೆಗಳ ಹರಹು, ಆಡುಭಾಷೆಗಳಲ್ಲಿನ ವೈವಿಧ್ಯ, ಕಥೆಗಾರರ ಅನುಭವ, ಪರಿಸರ ಬದಲಾದಂತೆ ಅವರನ್ನು ಕಾಡುವ ವಸ್ತುಗಳ ವೈವಿಧ್ಯ ಈ ಸಂಕಲನದಲ್ಲಿ ವ್ಯಕ್ತವಾಗಿದೆ."

Friday, August 18, 2023 - 12:59

ಲೇಖಕರು: ಶ್ರೀನಿವಾಸ
ಪ್ರಕಾಶಕರು: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಪ್ರಕಟಣೆ: 1983           ಪುಟ: 64 + 94           ಬೆಲೆ: ರೂ.15/-

ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು “ಶ್ರೀನಿವಾಸ" ಕಾವ್ಯನಾಮದಲ್ಲಿ ಬರೆದಿರುವ ಎರಡು ಕವನ ಸಂಕಲನಗಳ ಸಂಯುಕ್ತ ಪುಸ್ತಕ. ಮೊದಲ ಪ್ರಕಟಣೆ: 1931ರಲ್ಲಿ “ಚೆಲುವು" ಮತ್ತು 1946ರಲ್ಲಿ “ಸುನೀತ”.

“ಚೆಲುವು" ಸಂಕಲನದಲ್ಲಿ 14 ಕವನಗಳಿವೆ. ಎಲ್ಲವೂ ಮನಮುಟ್ಟುವ ಕವನಗಳು. “ಬೆಳವನ ಹಕ್ಕಿ” ಎಂಬ ಕವನದ ಆರಂಭದ ಸಾಲುಗಳು ಹೀಗಿವೆ: ತೋಪಿನ ಮರದಲಿ ಮೊಳಗಲು ತೊಡಗಿವೆ ಬೆಳವನ ಹಕ್ಕಿ ಸಖಿ. ಓಪನ ಓಪಳ ಕೂಗಿದು ಜಗದಲಿ ಹಳೆ ಕಾಲದ ಕೂಗು. (ಎರಡನೆಯ ಚರಣ) ಕೂಯೆನ್ನುವುದಿದು ಕೂಯೆನ್ನುವುದದು ಅರೆ ಅರೆ ಚಣಬಿಟ್ಟು; ಆಯವರಿತು ಬರಬರುತ ಅಂತರವ ಮರೆಯಿಸಿ ಮೊರೆಯುವವು. ಹೀಗೆ, ಎರಡು ಬೆಳವನ ಹಕ್ಕಿಗಳ “ಕೂ ಕೂ ಕೂ ಕೂ” ಸ್ವರಮೇಳ ಕೇಳುವಾಗಿನ ಭಾವತರಂಗಗಳನ್ನು ಅಕ್ಷರರೂಪದಲ್ಲಿ ಇಳಿಸುತ್ತಾ ಕವಿ ಬದುಕಿಗೊಂದು ಸಂದೇಶ ನೀಡಿದ್ದಾರೆ.

“ಮುರಿದುಬಿದ್ದ ವೀರಗಲ್ಲು" ಎಂಬುದು ಆ ಕಲ್ಲನ್ನು ನೋಡಿದಾಗ ಕವಿಯ ಮನದಲ್ಲಿ ಚಿಮ್ಮಿದ ಭಾವಗಳ ಸರಮಾಲೆ. ಅದು ಆರಂಭವಾಗುವುದು ಈ ಸಾಲುಗಳಿಂದ: “ನಿನ್ನ ಹೆಸರು ಏನು ವೀರ? ಮುನ್ನ ಯಾವ ಕಾಲದಲ್ಲಿ ಇನ್ನು ಯಾವ ಸಾಹಸದಲಿ, ಜೀವ ನನ್ನದಲ್ಲವೆಂದು ನೋವು ನನಗೆ ಸದರ ಎಂದು ಸಾವದಾಡೆಯನ್ನು ಹೊಕ್ಕು, ಊರಜನರ ಮನವನುಲಿಸಿ ವೀರನಹುದು ಇವನು ಎನಿಸಿ ಯಾರ ಕಣ್ಣ ನೀರು ಹರಿಸಿ ಅಮರನಾದೆ ನೀ?”

Friday, August 18, 2023 - 12:54

ಲೇಖಕರು: ಪಂಜೆ ಮಂಗೇಶರಾಯರು
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2015 (2ನೇ ಮುದ್ರಣ)            ಪುಟ: 88        ಬೆಲೆ: ರೂ.90/-

ಕನ್ನಡದ ಮಕ್ಕಳಿಗಾಗಿ ಕಥೆಗಳನ್ನು ಬರೆದ ಮೊದಲಿಗರಲ್ಲಿ ಪ್ರಮುಖರು ಪಂಜೆ ಮಂಗೇಶರಾಯರು. 1973ರಲ್ಲಿ ಮೊದಲ ಸಲ ಮುದ್ರಣವಾದ ಈ ಪುಸ್ತಕದ ಎರಡನೆಯ ಮುದ್ರಣವಾದದ್ದು 2015ರಲ್ಲಿ (42 ವರುಷಗಳ ನಂತರ).

ಅವರು ಮಕ್ಕಳ ಕಥೆಗಳನ್ನು ಬರೆದು ಸುಮಾರು ನೂರು ವರುಷಗಳಾಗಿದ್ದರೂ ಇಂದಿಗೂ ಅವು ಚೇತೋಹಾರಿ. ಇದರಲ್ಲಿವೆ ೧೬ ಮಕ್ಕಳ ಕಥೆಗಳು. ಒಂದಕ್ಕಿಂತ ಒಂದು ಚಂದದ ಕತೆಗಳು. ಇಂಗ್ಲಿಷಿನ ಮಕ್ಕಳ ಕಥೆಗಳನ್ನು ಓದಿ ಬೆಳೆಯುತ್ತಿರುವ ಇಂದಿನ ತಲೆಮಾರಿನ ಕನ್ನಡದ ಮಕ್ಕಳು ಈ ಕಥೆಗಳನ್ನೊಮ್ಮೆ ಓದಬೇಕು. ಮಕ್ಕಳ ಕಲ್ಪನಾಲೋಕವನ್ನು ಅವು ಹೇಗೆ ವಿಸ್ತರಿಸುತ್ತವೆ ಎಂಬುದು ಅವನ್ನು ಓದಿ ಸವಿದಾಗಲೇ ಅರ್ಥವಾಗಲು ಸಾಧ್ಯ.

ನನ್ನ ತಲೆಮಾರಿನವರು ಪಂಜೆಯವರ ಕಥೆಗಳನ್ನು ಓದುತ್ತಲೇ ಬೆಳೆದವರು. ಯಾಕೆಂದರೆ, ಆಗ ಹಲವಾರು ವರುಷ ಪಂಜೆಯವರ ಮಕ್ಕಳ ಕಥೆಗಳು ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಸೇರಿದ್ದವು. ಆದರೆ ೧೯೮೦ರ ನಂತರ, ಅವು ಪಠ್ಯಪುಸ್ತಕಗಳಿಂದ ಮರೆಯಾದಂತೆ, ಕನ್ನಡಿಗರೂ ನಿಧಾನವಾಗಿ ಪಂಜೆಯವರ ಕಥೆಗಳನ್ನು ಮರೆತರು. ಇದರಿಂದ ನಷ್ಟವಾದದ್ದು ಕಳೆದ ಎರಡು ತಲೆಮಾರಿನ ಕನ್ನಡದ ಮಕ್ಕಳಿಗೆ; ಕಾರಣವೇನೆಂದರೆ, ಪಠ್ಯಪುಸ್ತಕಗಳಲ್ಲಿಯೂ ಅವು ಇರಲಿಲ್ಲ ಮತ್ತು ಪಂಜೆಯವರ "ಮಕ್ಕಳ ಕಥೆಗಳು" ಪುಸ್ತಕ ಮಾರುಕಟ್ಟೆಯಲ್ಲಿಯೂ ಲಭ್ಯವಿರಲಿಲ್ಲ. ಆದ್ದರಿಂದ, ಕನ್ನಡ ಮನೆಮಾತಾಗಿರುವ ಹೆತ್ತವರೂ ಇವನ್ನು ಓದಬೇಕು. ತಾವು ಪಂಜೆಯವರ ಕಥೆಗಳ ಹೊಸ ಲೋಕಕ್ಕೆ ತೆರೆದು ಕೊಂಡಂತೆ, ತಮ್ಮ ಮಕ್ಕಳನ್ನೂ ಈ ಮನಮೋಹಕ ಕಥೆಗಳ ಲೋಕಕ್ಕೆ ಕರೆದೊಯ್ಯಬೇಕು. ಇದರಿಂದ ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಣ ಪ್ರೀತಿ ಬೆಳೆಯಲು ಖಂಡಿತವಾಗಿ ಸಹಾಯ.

Friday, August 18, 2023 - 12:49

ಲೇಖಕ: ಕೃಷ್ಣಾನಂದ ಕಾಮತ
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರಕಟಣೆ (3ನೇ ಆವೃತ್ತಿ): 1999           ಪುಟ: 144           ರೂ: 20/-

ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು. ಹಾಗಾಗಿ, ನವಂಬರ 1974ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ 144 ಮುದ್ರಿತ ಪುಟಗಳ ಮಾಹಿತಿ ಸಂಗ್ರಹಿಸಿ, ವಿಷಯಾನುಕ್ರಮವಾಗಿ ಸರಳ ಭಾಷೆಯಲ್ಲಿ ಕನ್ನಡದ ಓದುಗರಿಗೆ ಒದಗಿಸಿದ ಕೃಷ್ಣಾನಂದ ಕಾಮತರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

Friday, August 18, 2023 - 12:42

ಲೇಖಕರು: ಕೆ. ಎನ್. ಪರಾಂಜಪೆ
ಪ್ರಕಾಶಕರು: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು
ಪ್ರಕಟಣೆಯ ವರುಷ: 2011           ಪುಟ: 164           ಬೆಲೆ: ರೂ.100/-

ಕನ್ನಡ ನಾಡು ಮತ್ತು ನುಡಿಗಾಗಿ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದವರು ಹಲವು ಮಹನೀಯರು. ಅಂತಹ ೫೦ ಸಾಧಕರ ಪುಟ್ಟ ಪರಿಚಯ ಮಾಡಿಕೊಡುವ ಪುಸ್ತಕ ಇದು.

Friday, August 18, 2023 - 12:35

ಲೇಖಕರು: ಡಾ. ಕೆ. ಅನಂತರಾಮು
ಪ್ರಕಾಶಕರು: ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು
ಮೊದಲ ಮುದ್ರಣ: 2017             ಪುಟಗಳು: 378           ಬೆಲೆ: ರೂ. 130/-

ಧರ್ಮ, ನೈತಿಕತೆ ಮತ್ತು ತತ್ವಗಳನ್ನು, ಅವುಗಳ ಸೂಕ್ಷ್ಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಕತೆಗಳು ಮತ್ತು ಉಪಮೆಗಳು ಅತ್ಯಾವಶ್ಯಕ. ಉಪನಿಷತ್ತುಗಳಲ್ಲಿ ಬುದ್ಧ ಅವರಂತಹ ಬೋಧಕರ ಬೋಧನೆಗಳಲ್ಲಿ ಸುಂದರವಾದ ಕತೆಗಳು, ಉಪಕತೆಗಳು ಹೇರಳ. ಇವುಗಳಲ್ಲಿ ಸರಳ ಭಾಷೆಗಳಲ್ಲಿ ಅತಿ ಸಾಮಾನ್ಯ ಘಟನೆಗಳ ಮೂಲಕ ಜನಸಾಮಾನ್ಯರಿಗೂ ಅರ್ಥವಾಗುವಂತೆ ಉದಾತ್ತ ತತ್ವಗಳನ್ನು ತಿಳಿಸಲಾಗಿದೆ.

ವಿಶ್ವದ ಶ್ರೇಷ್ಠ ಕತೆಗಾರರಾದ ಸ್ವಾಮಿ ವಿವೇಕಾನಂದರ ಪ್ರವಚನಗಳಲ್ಲಿ ಇಂತಹ ಕತೆಗಳು ವಿಪುಲ. ತಮ್ಮ ಗುರುಗಳಿಂದ ಕಲಿತ ವಿಚಾರಗಳನ್ನು ಮತ್ತು ತಮ್ಮ ವೇಧಾಶಕ್ತಿಯಿಂದ ಗಳಿಸಿದ್ದ ಜ್ನಾನವನ್ನು ಕೇಳುಗರೊಂದಿಗೆ ಹಂಚಿಕೊಳ್ಳುವಾಗ ನೂರಾರು ಕತೆಗಳನ್ನು ಅವರು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಸಪ್ಪೆ ಎನಿಸುವಂತಹ ಕತೆಗಳನ್ನೂ ಮಾರ್ಮಿಕವಾಗಿ ನಿರೂಪಿಸುವುದರಲ್ಲಿ ಸ್ವಾಮಿ ವಿವೇಕಾನಂದರು ಅಪ್ರತಿಮರು. ಭಾರತೀಯ ಪರಂಪರೆಯ ಕತೆಗಳನ್ನು ವಿದೇಶೀಯರೂ ಮೆಚ್ಚುವಂತೆ ಸಾದರಪಡಿಸಿದ್ದು ಅವರ ಹೆಚ್ಚುಗಾರಿಕೆ.

Friday, August 18, 2023 - 12:31

ಲೇಖಕ: ನರಹಳ್ಳಿ ಬಾಲಸುಬ್ರಹ್ಮಣ್ಯ
ಪ್ರಕಾಶಕರು: ಮನೋಹರ ಗ್ರಂಥಮಾಲಾ, ಧಾರವಾಡ
ಪ್ರ: 2011          ಪುಟ: 144           ರೂ.100/-

ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು ಮೀಟಿ, ಚಿಂತನೆಗೆ ತೊಡಗಿಸುವುದರಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹತ್ತು ಪ್ರಬಂಧಗಳು ಯಶಸ್ವಿಯಾಗುತ್ತವೆ.

Friday, August 18, 2023 - 12:27

ಲೇಖಕಿ:  ನೇಮಿಚಂದ್ರ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ವರುಷ: 2005     ಪುಟ: 176     ಬೆಲೆ: ರೂ.110/-

ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ.

“ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ? ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೆ, “ಅಯ್ಯೋ ಟೈಮೇ ಇಲ್ಲ” ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ?”

"ಸೋಲಿಲ್ಲದ ಮನೆಯ ಸಾಸಿವೆ" ಎಂಬ ೪ನೇ ಅಧ್ಯಾಯದಲ್ಲಿ ಅವರ ಪ್ರಶ್ನೆಗಳಿವು: “…. ಗೆಲ್ಲುವುದು ಹೇಗೆ, ನಾಯಕನಾಗುವುದು ಹೇಗೆ, ಮುನ್ನುಗ್ಗುವುದು ಹೇಗೆ, ಮೇಲೇರುವುದು ಹೇಗೆ? - ಎದೆಹಾಲಿನೊಡನೆ ಅರೆದು ಕುಡಿಸುತ್ತಿದ್ದೇವೆ. ಒಂದು ಕ್ಷಣ ಯೋಚಿಸಿ, ಸೋಲುವ ಬಗ್ಗೆ ತಿಳಿಸಿದ್ದೇವೆಯೆ? ಸೋಲುವುದನ್ನು ಕಲಿಸಬೇಕಿಲ್ಲ, ಆದರೆ ಸೋಲನ್ನು ಎದುರಿಸುವುದನು? ಸೋಲನ್ನು ಸ್ವೀಕರಿಸುವ ಬಗೆಯನ್ನು ಹೇಳಿಕೊಟ್ಟಿದ್ದೇವೆಯೆ? ಸಾವಿಲ್ಲದ ಮನೆಯ ಸಾಸಿವೆಯಂತೆ, ಸೋಲಿಲ್ಲದ ಮನೆಯ ಸಾಸಿವೆ ಸಿಕ್ಕೀತೆ?”

Friday, August 18, 2023 - 12:16

ಲೇಖಕರು: ವ್ಯಾಸರಾಯ ಬಲ್ಲಾಳ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪ್ರಕಟಣೆ: 1999          ಪುಟ: 96          ರೂ. 90/-

ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ ನೆಲೆಸಿದ್ದರು. ಈ ಅವಧಿಯಲ್ಲಿ ಮತ್ತು ಅನಂತರವೂ ಇವರಿಬ್ಬರ ಒಡನಾಟ ನಿರಂತರ. ಅದುವೇ ಇಂತಹ ಅಪರೂಪದ ಪುಸ್ತಕ ರೂಪುಗೊಳ್ಳಲು ಕಾರಣವಾಯಿತು.

ಆ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾ ವ್ಯಾಸರಾಯ ಬಲ್ಲಾಳರು "ಮೊದಲ ಮಾತಿ” ನಲ್ಲಿ ಹೀಗೆ ಬರೆದಿದ್ದಾರೆ: “ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು ನನಗೆ ದೀರ್ಘ ಕಾಲದ ಆತ್ಮೀಯರು…. ಈ (ಎಂಟು ವರುಷಗಳ) ಅವಧಿಯಲ್ಲಿ ಅವರ ಜತೆ ಕಲೆಯ ವಿಚಾರ ಚರ್ಚಿಸುವ, ಕಲೆಯ ಕುರಿತು ನನ್ನ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ, ಅವರ ಕೆಲಸ ಮಾಡುವ ರೀತಿಯನ್ನು ವೀಕ್ಷಿಸುವ, ಅವರ ಸಂದರ್ಶನಕ್ಕೆಂದೆ ಬರುತ್ತಿದ್ದ ಗಣ್ಯ ಕಲಾವಿದರ ಪರಿಚಯ ಮಾಡಿಕೊಳ್ಳುವ, ಅವರ “ಸ್ಕೆಚ್" ಪುಸ್ತಕಗಳನ್ನು ನೋಡಿ ಅವುಗಳಲ್ಲಿ ಅವರು ಮೂಡಿಸಿದ್ದ ರೇಖಾಚಿತ್ರಗಳ ಸಂದರ್ಭಗಳ ಬಗೆಗೆ ಕೇಳಿ ತಿಳಿದುಕೊಳ್ಳುವ ಸದಾವಕಾಶಗಳು ನನಗೆ ಒದಗಿ ಬಂದುದರಿಂದಲೇ ನಾನು ಕನ್ನಡಿಗರಿಗೆ ಅವರ ರೇಖೆಗಳು ಅಭಿವ್ಯಕ್ತಿಸುವ ಸೌಂದರ್ಯಾನು-ಭೂತಿಯನ್ನು ಪರಿಚಯಿಸುವ ಉದ್ದೇಶದಿಂದ ಕೆಲವು ಲೇಖನಗಳನ್ನು ಬರೆದಿದ್ದೆ. ಹಾಗೆಯೇ ಅವರ ೮೦ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ, "ಪ್ರತಿಮೆಗಳಲ್ಲಿ ಪಯಣ” ಎಂಬ ಅವರ ಚಿತ್ರ ಸಂಪುಟ ಬಿಡುಗಡೆಯಾದ ಸಂದರ್ಭದಲ್ಲಿ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದೆ. ….. ಹೆಬ್ಬಾರರ ಸಂದರ್ಶನ ಲೇಖನವೊಂದನ್ನೂ ಸಿದ್ಧಪಡಿಸಿದ್ದೆ"

Pages