ಲೇಖಕರು: ಎಂ. ಎಸ್. ಶ್ರೀರಾಮ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟ: 2013 ಪುಟ: 160 ಬೆಲೆ: ರೂ.120/-
ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ.
“ಒಳಿತು, ಲಾಭ, ವ್ಯಾಪಾರ” ಎಂಬ ಮೊದಲ ಭಾಗದಲ್ಲಿವೆ ಆರು ಲೇಖನಗಳು. “ಆತ್ಮಹತ್ಯೆಗಳು: ರೈತರೇ ಏಕೆ?” ಎಂಬ ಪ್ರಬಂಧ ಈ ಜ್ವಲಂತ ಸಮಸ್ಯೆಯ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆ. ವ್ಯಾಪಾರವನ್ನೂ ಕೃಷಿಯನ್ನೂ ಹೋಲಿಸುತ್ತಾ ಪ್ರಬಂಧವನ್ನು ಶುರು ಮಾಡುತ್ತಾರೆ ಲೇಖಕರು. ನಷ್ಟ ಮತ್ತು ವಿಮೆಯ ರಕ್ಷೆ ಬಗ್ಗೆ ಅವರ ವಿವರಣೆ: “ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಬಿರುಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತು ಇದ್ದು, ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ. …. ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ-ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆ ರೂಪಿಸುವುದೂ ಕಷ್ಟ….."
“ಹೀಗೆ, ಮೂಲತಃ ವೈಫಲ್ಯತೆಯ ಅಪಾಯವಿರುವ, ಅದಕ್ಕೆ ಕಾರಣಗಳು ನೈಸರ್ಗಿಕವಾಗಿರುವ, ವಿಮೆಯ ಸುರಕ್ಷಾಕವಚವಿಲ್ಲದ ವ್ಯಾಪಾರವನ್ನು ನಮ್ಮ ದೇಶದ ಕೃಷಿಕರು ನಡೆಸುತ್ತಾ ಬಂದಿದ್ದಾರೆ! ….ಆಹಾರ ಪದಾರ್ಥಗಳ ಬೆಲೆಯನ್ನು ಹದ್ದುಬಸ್ತಿನಲ್ಲಿ ಇಡುವುದೂ ಸರಕಾರದ ಒಂದು ಜವಾಬ್ದಾರಿಯಾದ್ದರಿಂದ ಕೃಷಿಯ ಲಾಭಾಂಶಕ್ಕೆ ಒಂದು ರೀತಿಯ ಮೇಲ್ಮಿತಿಯನ್ನು ಸಹಜವಾಗಿಯೇ ಸರಕಾರ ಹಾಕಿಬಿಡುತ್ತದೆ. … ಮೇಲ್ಮಿತಿಯಿರುವ ಈ ವ್ಯಾಪಾರದಲ್ಲಿ ಆಗುವ ನಷ್ಟಕ್ಕೆ ತಳಮಿತಿ ಇಲ್ಲವೇ ಇಲ್ಲ. ಹಾಗೆಂದರೇನು?” ಎಂದು ಲೇಖಕರು ಸರಳ ಭಾಷೆಯಲ್ಲಿ ವಿವರಣೆ ನೀಡುತ್ತಾರೆ.
ಕೃಷಿಗೂ ಇತರ ವ್ಯಾಪಾರಗಳಿಗೂ ಇರುವ ವ್ಯತ್ಯಾಸವನ್ನು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿ, “ಆತ್ಮಹತ್ಯೆಗಳು: ರೈತರೇ ಏಕೆ?” ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾರೆ: “ಹೀಗಿರುವಾಗ ವಿಫಲ ಸಂಸ್ಥೆ(ಕಂಪೆನಿ)ಗಳನ್ನು ನಡೆಸಿದ ಹೂಡಿಕೆದಾರರು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕಿ ಮರುಜನ್ಮ ಪಡೆಯಬಹುದು. ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಸ್ಥಾಪಿಸಿ ಮುಳುಗಿಸಿದ ರಮೇಶ್ ಗೆಲ್ಲಿಯವರ ಖಾಸಗೀ ಆಸ್ತಿ ಅಥವಾ ಸತ್ಯಂ ಕಂಪ್ಯೂಟರ್ಸಿನ ರಾಮಲಿಂಗ ರಾಜು ಅವರ ವೈಯುಕ್ತಿಕ ಆಸ್ತಿಗೆ ಆ ಸಂಸ್ಥೆಗಳ ಗೊಂದಲಗಳಿಂದ ಯಾವ ಧಕ್ಕೆಯೂ ಬಂದಿಲ್ಲ. … ಹತ್ತು ಸಾವಿರ ರೂಪಾಯಿನ ಹೂಡಿಕೆಯಿಂದ ಪ್ರಾರಂಭಿಸಿ ಇನ್ಫೋಸಿಸ್ ಟೆಕ್ನಾಲಜೀಸನ್ನು ಈಗಿನ ಮಟ್ಟಕ್ಕೆ ತಂದಿರುವ ಯಶೋಗಾಥೆ ನಮ್ಮ ಮುಂದಿದೆ. ಆದರೆ ಈ ಜಾದೂ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡಿದ ಯಾರಿಗಾದರೂ (ರೈತರಿಗೆ) ಆಗಿದೆಯೇ ಅನ್ನುವ ಪ್ರಶ್ನೆ ಬಂದಾಗ ನಮಗೆ ಇಲ್ಲಿರುವ ಸಂಸ್ಥಾಗತ ಚೌಕಟ್ಟಿನ ಪದರಗಳ ಅರಿವು ಹೆಚ್ಚಾಗಿ ಆಗುತ್ತದೆ. …. ಹೀಗಾಗಿ ಕೃಷಿ ಕೈಕೊಟ್ಟಾಗ - ಅನಿಯಮಿತ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ನಡೆವ ರೈತರು ಮನೆ, ಆಸ್ತಿ, ಆಭರಣಗಳನ್ನು ಮಾರಿಕೊಳ್ಳಬೇಕಾಗಿ ಬಂದಾಗ - ಅವರಿಗೆ ಕಾಣುವ ದಾರಿ ಕರಾಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ…."
“ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ” ಎಂಬ ಪ್ರಬಂಧದ ಆರಂಭ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ಪರಿಚಯಿಸುವ ಮೂಲಕ: ಲಕ್ಷಗಟ್ಟಲೆ ಮಹಿಳೆಯರಿಗೆ ವಿತ್ತೀಯ ಸೇವೆಗಳನ್ನು ಒದಗಿಸಿ ಆರ್ಥಿಕ ಕ್ರಾಂತಿಗೆ ಕಾರಣವಾದ ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಸ್ಥಾಪಕ, ಆ ಮೂಲಕ ಬ್ಯಾಂಕಿಂಗಿಗೆ ವಿಭಿನ್ನ ರೂಪ ಕೊಟ್ಟ ಪ್ರೊಫೆಸರ್ ಯೂನಸ್ ಎಂಬುದಾಗಿ. “ಬಡತನವನ್ನು ವಸ್ತುಸಂಗ್ರಹಾಲಯಕ್ಕೆ ಒದ್ದೋಡಿಸುವ ತನ್ನ ಮಹಾದೃಷ್ಟಿಯ ಬಗ್ಗೆ ಒಂದು ಪುಸ್ತಕವನ್ನೇ ಬರೆದವರು ಯೂನಸ್” ಎನ್ನುತ್ತಲೇ, ಆ ಉದಾತ್ತ ಕನಸು ಇಂಪ್ರಾಕ್ಟಿಕಲ್ ಎಂದೂ ಸೂಚಿಸುತ್ತಾರೆ.
ಪುಸ್ತಕದ ಎರಡನೇ ಭಾಗದ ಶೀರ್ಷಿಕೆ: “ಹಣ, ಕಾಸು, ಸಾಲಸೋಲ”. ಇದರಲ್ಲಿಯೂ ಬಾಂಗ್ಲಾ ಗ್ರಾಮೀಣ ಬ್ಯಾಂಕಿನ ಬಗ್ಗೆ ಎರಡು ಪ್ರಬಂಧಗಳಿವೆ. “ಬಡ್ಡಿವ್ಯಾಪಾರಿಗಳ ಕಥೆಗಳು” ಎಂಬ ಪ್ರಬಂಧ ಎತ್ತುವ ಪ್ರಶ್ನೆ: ದೊಡ್ಡ ಬ್ಯಾಂಕುಗಳ ಗ್ರಾಮೀಣ ಶಾಖೆಗಳು, ಸಹಕಾರಿ ಸಂಘಗಳ ಶಾಖೆಗಳು ಮತ್ತು ಲಕ್ಷಗಟ್ಟಲೆ ಸ್ವಸಹಾಯ ಸಂಘಗಳಿಂದ ಸಣ್ಣಸಾಲಗಳು ಲಭ್ಯವಿದ್ದರೂ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಅಧಿಕ ಬಡ್ಡಿಯ ಲೇವಾದೇವಿ ನಡೆಸಲು ಬಡ್ದಿವ್ಯಾಪಾರಿಗಳಿಗೆ ಯಾಕೆ ಸಾಧ್ಯವಾಗಿದೆ? ಇದಕ್ಕೆ ಉತ್ತರವನ್ನೂ ಲೇಖಕರು ನೀಡುತ್ತಾರೆ: "ಐವತ್ತು ಅಥವಾ ಒಂದು ನೂರು ರೂಪಾಯಿಯ ಅತಿಸಣ್ಣ ಸಾಲವನ್ನು ಈ ‘ಸಂಸ್ಥೆಗಳು" ನೀಡುತ್ತವೆಯೇ?” ಎಂಬಂತಹ ಪ್ರಶ್ನೆಗಳ ಮೂಲಕ!
“ಸಾಲಮನ್ನಾ ರಾಜಕಾರಣ” ಎಂಬ ಪ್ರಬಂಧ ಪ್ರಕಟವಾದದ್ದು ಆಗಿನ ಕೇಂದ್ರ ಸರಕಾರ ರೂ.60,000 ಕೋಟಿ ಸಾಲಮನ್ನಾ ಯೋಜನೆಯನ್ನು ಬಜೆಟಿನಲ್ಲಿ ಘೋಷಿಸಿದಾಗ. ಸರಕಾರದ ಈ ನೀತಿ, “ಸಾಲ ಮರುಪಾವತಿಯ ಶಿಸ್ತ”ನ್ನು ಚಿಂದಿ ಉಡಾಯಿಸುತ್ತದೆ ಎಂಬುದನ್ನು ಲೇಖಕರು ನೇರಾನೇರ ವಿವರಿಸುತ್ತಾರೆ. (1) ಕೇಂದ್ರದಲ್ಲಿ ರೂಪಿತವಾಗಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳ ಗಂಟಲುಗಳಿಗೆ ತುರುಕಿದ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಸಾಲಗಳು ಮತ್ತು (2) ಊರೂರಲ್ಲಿ ಗ್ರಾಮಗ್ರಾಮಗಳಲ್ಲಿ ಮಂತ್ರಿಗಳ ಮೂಲಕ ನಡೆದ ಬ್ಯಾಂಕುಗಳ ಸಾಲಮೇಳ ಕಾರ್ಯಕ್ರಮಗಳು - ಇವೆರಡನ್ನೂ ಅಂಕೆಸಂಖ್ಯೆಗಳ ಆಧಾರದಿಂದಲೇ ಟೀಕಿಸುತ್ತಾರೆ. ಈ ಯೋಜನೆಗಳಿಂದಾಗಿ "ಲೋನೆಂದರೆ, ಬ್ಯಾಂಕಿನಿಂದ ಬರುವ ಮೊಬಲಗು, ಅದನ್ನು ವಾಪಾಸ್ಸು ಕಟ್ಟುವ ಅವಶ್ಯಕತೆಯಿಲ್ಲ” ಎಂದು ಜನರು ಗ್ರಹಿಸಿ ಬಿಟ್ಟಿದ್ದರು ಎಂದು ಅಲೋಷಿಯಸ್ ಫರ್ನಾಂಡಿಸ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದ ಬೆಚ್ಚಿ ಬೀಳಿಸುವ ಸಂಗತಿಯನ್ನು ತಿಳಿಸುತ್ತಾರೆ. ಹಾಗೆಯೇ, “ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು" ಪ್ರಬಂಧದಲ್ಲಿ ಸರಕಾರದ ನೀತಿಯು ಆ ಬ್ಯಾಂಕುಗಳನ್ನು ಹೇಗೆ ಉಸಿರುಗಟ್ಟಿಸುತ್ತಿದೆ? ಎಂಬುದನ್ನು ಮಾರ್ಮಿಕವಾಗಿ ವಿವರಿಸುವ ಪರಿ: “ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿ ಹಾಕಿ ಮುಕ್ತಮಾರುಕಟ್ಟೆಯ ಆಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ.”
ಪುಸ್ತಕದ ನಾಲ್ಕನೆಯ ಭಾಗ “ಅನುಮಾನಗಳು, ಒಳನೋಟಗಳು”. ಇದರಲ್ಲಿವೆ 12 ಪ್ರಬಂಧಗಳು. “ಮಕ್ಕಳಿಸ್ಕೂಲು ಮನೇಲಲ್ಲ”, "ಕಂದೀಲಿನ ಮೇಲೆ ಧೂಳು”, “ಕೈಮಗ್ಗದ ಬಿಕ್ಕಟ್ಟು”, “ಗೋಡೆ ಗಡಿಯಾರ, ಕೈಗಡಿಯಾರ”, “ರೋಗನ್ ಕಲೆ, ಎಷ್ಟು ಬೆಲೆ?”, "ವಾಡಾಗಳ ಅರಗಿನರಮನೆ”, “ರುದ್ರಮಾತಾದ ರಾಮಜೀಭಾಯಿ” ಇತ್ಯಾದಿ ಪ್ರಬಂಧಗಳು ಪ್ರಶ್ನೆಗಳನ್ನು ಎತ್ತುತ್ತ, ಕುತೂಹಲಕರ ಸಂಗತಿಗಳನ್ನು ತಿಳಿಸುತ್ತ, ಒಳನೋಟಗಳನ್ನು ನೀಡುತ್ತ ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸುತ್ತವೆ.