ಲೇಖಕ: ಎನ್. ಆನಂದ ರಾಮರಾವ್
ಪ್ರಕಾಶಕರು: ಸುಂದರ ಪ್ರಕಾಶನ, ಬೆಂಗಳೂರು
ಪ್ರಕಟ: 2010 ಪುಟ:131 ಬೆಲೆ: ರೂ.90/-
ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ ಪ್ರಕಟಿಸಿದ್ದಾರೆ.
ನಿವೃತ್ತಿಯ ನಂತರದ ಸಮಸ್ಯೆಗಳನ್ನು ಈ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ ಲೇಖಕರು: (ಅ) ಮಾನಸಿಕ (ಆ) ದೈಹಿಕ (ಇ) ಆರ್ಥಿಕ. ಪ್ರತಿಯೊಂದು ವಿಭಾಗದ ಸಮಸ್ಯೆಗಳನ್ನು ಚುಟುಕಾಗಿ ವಿವರಿಸಿ, ಅವನ್ನು ಎದುರಿಸುವುದು ಹೇಗೆಂದು ಪುಸ್ತಕದಲ್ಲಿ ವಿವರಿಸಿದ್ದಾರೆ. ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವ ಬಗ್ಗೆ “ಕುಟುಂಬದವರೊಡನೆ ಸಾಮರಸ್ಯದ ಬದುಕು" ಎಂಬ ಅಧ್ಯಾಯದಲ್ಲಿ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, “ನೋ ಹರಿ, ನೋ ವರಿ, ಬಿ ಮೆರಿ” ಎನ್ನುತ್ತಾರೆ.
ಅದರ ಮುಂದಿನ ಅಧ್ಯಾಯ "ಆರೋಗ್ಯವಂತರಾಗಿ ಬಾಳುವುದು ಹೇಗೆ?” ಇದರಲ್ಲಿ ಅವರು ನೀಡುವ ಮುಖ್ಯ ಸಲಹೆ - ಆರೋಗ್ಯಕ್ಕಾಗಿ ಪ್ರತಿದಿನವೂ ವಾಕಿಂಗ್ ಮಾಡಿ. ಅದಲ್ಲದೆ, ಆರೋಗ್ಯ ಪಾಲನೆಯಲ್ಲಿ ಆಹಾರ ಸೇವನೆಯ ಪ್ರಾಮುಖ್ಯತೆಯನ್ನೂ ತಿಳಿಸಿದ್ದಾರೆ.
ಮುಂದಿನ ಅಧ್ಯಾಯಗಳಲ್ಲಿ "ನಿವೃತ್ತಿಯ ನಂತರ ಹಣಕಾಸಿನ ನಿರ್ವಹಣೆ"ಯನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ. ಪಿಂಚಣಿ, ಭವಿಷ್ಯ ನಿಧಿ, ಗ್ರಾಚ್ಯುವಿಟಿ ಮತ್ತು ಗಳಿಕೆಯ ರಜೆಯ ನಗದೀಕರಣ (ಲೀವ್ ಎನ್‌ಕ್ಯಾಷ್‌ಮೆಂಟ್) - ಈ ಸೇವಾಂತ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇವುಗಳ ಹೂಡಿಕೆ ಮಾಡುವಾಗ ಅನುಸರಿಸಬೇಕಾದ ಮೂರು ಸೂತ್ರಗಳನ್ನು ಹೀಗೆಂದು ತಿಳಿಸಿದ್ದಾರೆ: ಭದ್ರತೆ, ಬಡ್ಡಿ (ರಿಟರ್ನ್ಸ್), ಲಿಕ್ವಿಡಿಟಿ (ನಗದೀಕರಿಸುವ ಅನುಕೂಲ).
ಹಣಹೂಡಿಕೆಯ ಅವಕಾಶಗಳ ಬಗ್ಗೆ ತಿಳಿಸುತ್ತಾ, ಇವನ್ನು ವಿವರಿಸಿದ್ದಾರೆ: ಅಂಚೆ ಕಚೇರಿಯ ಯೋಜನೆಗಳು, ಬ್ಯಾಂಕುಗಳ ಯೋಜನೆಗಳು, ಪತ್ತಿನ ಸಹಕಾರಿ ಸಂಘಗಳ ಯೋಜನೆಗಳು. ಜೊತೆಗೆ, ಚಿನ್ನ, ಬೆಳ್ಳಿ ಮತ್ತು ನಿವೇಶನಗಳಲ್ಲಿ ಹೂಡಿಕೆ; ಷೇರುಪೇಟೆ ಹೂಡಿಕೆ ಮತ್ತು ಮ್ಯೂಚುಯಲ್ ಫಂಡ್ ಹೂಡಿಕೆ; ಡಿ-ಮ್ಯಾಟ್ ಖಾತೆ - ಇವೆಲ್ಲದರ ಬಗ್ಗೆಯೂ ಮಾಹಿತಿ ಇದೆ.
ನಿವೃತ್ತರಿಗೆ ಆದಾಯ ತೆರಿಗೆ ಮತ್ತು ವಿನಾಯ್ತಿಗಳ ಮಾಹಿತಿ ಕೂಡ ನೀಡಿದ್ದಾರೆ. ಪಾನ್ ಕಾರ್ಡ್ ಮತ್ತು ಸೀನಿಯರ್ ಸಿಟಿಜನ್ ಕಾರ್ಡ್, ಹಿರಿಯ ನಾಗರಿಕರ ಸಮಸ್ಯೆಗಳು - ಪರಿಹಾರಗಳು ಹಾಗೂ ಸರಕಾರದ ಸ್ಪಂದನೆ ಎಂಬ ಮಾಹಿತಿ ಉಪಯುಕ್ತ.
ಅಂತಿಮವಾಗಿ “ಉಯಿಲು" (ವಿಲ್) ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಆದರೆ, ಉಯಿಲನ್ನು ನೋಂದಣಿ ಮಾಡಿಸಲೇ ಬೇಕೆಂಬ ಕಡ್ಡಾಯವೇನಿಲ್ಲ ಎಂದು ಮುದ್ರಿಸಿದ್ದಾರೆ. ಇದು ಕಾನೂನಿನ ಪ್ರಕಾರ ಸರಿ ಹೌದು. ಆದರೆ, ಪ್ರಾಕ್ಟಿಕಲ್ ದೃಷ್ಟಿಯಿಂದ ಗಮನಿಸಿದಾಗ, ಇದು ದಾರಿ ತಪ್ಪಿಸುವ ಮಾಹಿತಿ. ಯಾಕೆಂದರೆ, “ಉಯಿಲು ನೋಂದಣಿ ಮಾಡಿಸಿಲ್ಲ" ಎಂಬ ಒಂದೇ ಕಾರಣಕ್ಕಾಗಿ, ಉಯಿಲಿನ ಫಲಾನುಭವಿಗಳು 10-20 ವರುಷ ಕೋರ್ಟಿನಲ್ಲಿ ದಾವೆ ಹೂಡಿ, ನ್ಯಾಯಕ್ಕಾಗಿ ಹೆಣಗಾಡಬೇಕಾದ ಹಲವು ಪ್ರಕರಣಗಳು ವರದಿಯಾಗಿವೆ.
ಈ ಪುಸ್ತಕದಲ್ಲಿ "ಪರಿವಿಡಿ" (ಅಧ್ಯಾಯಗಳ ಶೀರ್ಷಿಕೆಗಳ ಪಟ್ಟಿ) ಮುದ್ರಿಸದಿರುವುದು ಒಂದು ಲೋಪ.