ಲೇಖಕರು: ಲೋಹಿತ್ ನಾಯ್ಕರ
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ
ಪ್ರಕಟಣೆ: 2010 ಪುಟ: 120 ಬೆಲೆ: ರೂ.70/-
ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ ಎದುರಾಗುವ ಮಾನವಹಕ್ಕು ಪ್ರಕರಣಗಳ ದಾಖಲಾತಿಗಳಲ್ಲ. ಮಾನವೀಯ ಸಂಬಂಧಗಳು ಮತ್ತು ಮಾನವಹಕ್ಕುಗಳ ಸಂಕೀರ್ಣ ಒಳನೋಟಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಬರಹಗಳು ಇವು.
“ಪಿಂಕಿ ಮದುವೆಯಾಗಿ ಹೋದಾಗ” ಎಂಬ ಮೊದಲ ಕತೆ, ಕಥಾನಾಯಕನ ಆತ್ಮವೃತ್ತಾಂತದ ಶೈಲಿಯಲ್ಲಿದೆ. ಕೊಲೆಯ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನು ಅವನು. ಈಗ ಬೆಂಗಳೂರಿನ ಶ್ರೀಮಂತ ಕುಟುಂಬವೊಂದರ ಕಾರಿನ ಚಾಲಕ. ಆ ಕುಟುಂಬದ ಮಗಳಾದ ಪಿಂಕಿ ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಆದರೆ, ಅಪ್ಪನ ಸಲುಗೆಯಿಂದಾಗಿ ಶಿಸ್ತು ತಪ್ಪಿದ್ದಾಳೆ; ಕೆಟ್ಟವರ ಸಹವಾಸಕ್ಕೆ ಬಿದ್ದಿದ್ದಾಳೆ. ಅದೊಂದು ದಿನ ಮುಂಜಾನೆ ಮೈಸೂರಿಗೆ ಹೊರಟ ಕುಟುಂಬದ ಯಜಮಾನ ಅಲ್ಲೊಂದು ಜನಸಂಚಾರವಿಲ್ಲದ ಸ್ಥಳದಲ್ಲಿ ನಾಲ್ವರು ಆಗಂತುಕರಿಗೆ ಸೂಟ್‌ಕೇಸೊಂದನ್ನು ಹಸ್ತಾಂತರಿಸಿದಾಗ ಚಾಲಕನಿಗೆ ಎಲ್ಲವೂ ಅರ್ಥವಾಯಿತು - ಅದು ಪಿಂಕಿಯ ಅಪಹರಣವಾಗದಂತೆ ಪಾವತಿಸಿದ “ರಕ್ಷಣಾ ಹಣ” ಎಂಬುದು. ಆತನೀಗ ತನಗೆ ಜೈಲುವಾಸದಲ್ಲಿ ಪರಿಚಿತರಾಗಿದ್ದ ಬೆಂಗಳೂರಿನ ಗೂಂಡಾಗಳನ್ನು ಸಂಪರ್ಕಿಸಿ, ಆ ರಕ್ಷಣಾ ಹಣವನ್ನು ಕುಟುಂಬದ ಯಜಮಾನನಿಗೆ ವಾಪಾಸು ಕೊಡಿಸುತ್ತಾನೆ. ಅನಂತರ ಹೆತ್ತವರು ಬೇಗನೇ ಪಿಂಕಿಯ ಮದುವೆ ಮಾಡಿಸುತ್ತಾರೆ.
“ನಾಳಿನ ನನ್ನ ಮದುವೆಗೆ ಕಾದಿದ್ದೇನೆ” ಎಂಬ ಎರಡನೆಯ ಕತೆಯ ಹೂರಣ ಹೆಣ್ಣುಗಳ ಮಾರಾಟದ ದಂಧೆ. ಬಡ ಹೆತ್ತವರನ್ನು ಆಮಿಷಕ್ಕೆ ಒಳಗಾಗಿಸಿ, ಅವರ ಹರೆಯದ ಹೆಣ್ಣುಮಕ್ಕಳನ್ನು ಮೈಮಾರಾಟದ ಕೆಲಸಕ್ಕೆ ಸೆಳೆಯುವ ದಂಧೆಯ ಕರಾಳ ಮುಖಗಳ ಅನಾವರಣ ಈ ಕತೆ. ಎಲ್ಲೋ ಕೆಲವರು ಈ ವಿಷವೃತ್ತದಿಂದ ಪಾರಾದರೆ ಉಳಿದವರು ಬದುಕಿಡೀ ನರಳುತ್ತಾರೆ. “ಅಕ್ಕಾ, ನೀನು ಭೂಗೋಳ ಶಾಸ್ತ್ರ ಓದಿದ್ದೀಯಾ?” ಎಂಬ ಇನ್ನೊಂದು ಕತೆಯೂ ಮುಂಬೈಯ ಕಾಮಾಟಿಪುರದ ಇದೇ ದಂಧೆಯ ಹೆಣ್ಣುಮಕ್ಕಳ ಬದುಕಿನ ದಾರಣ ಮುಖಗಳನ್ನು ತೆರೆದಿಡುತ್ತದೆ.
ಮೂರನೆಯ ಕತೆ “ನನಗೆ ಯಾವ ತಮಿಳು ಸೆಲ್ವಿಯ ಪರಿಚಯವೂ ಇಲ್ಲ”. ಇದು ಶ್ರೀಲಂಕಾ ತಮಿಳು ಉಗ್ರಗಾಮಿಗಳ ಹಾವಳಿಯಿಂದ ತತ್ತರಿಸಿದ ಕಾಲಾವಧಿಯಲ್ಲಿ ಜರಗಿದ ಘಟನಾವಳಿಗಳ ಸುತ್ತ ಹೆಣೆದಿರುವ ಕತೆ. ಕಾಲೇಜಿನ ಪ್ರಾಧ್ಯಾಪಕನ ಮೊದಲ ಮಗಳು ಪದವಿ ಮುಗಿಸುವ ಬದಲಾಗಿ ಉಗ್ರಗಾಮಿಯೊಬ್ಬನ ಬಲೆಗೆ ಬೀಳುತ್ತಾಳೆ. ಎರಡನೇ ಮಗಳು ತಮಿಳು ಸೆಲ್ವಿಯೂ ಅದೇ ಹಾದಿ ಹಿಡಿದಾಗ, ಮಡದಿಯ ಮರಣಾ ನಂತರ ಇಬ್ಬರು ಹೆಣ್ಣು ಮಕ್ಕಳನ್ನು ಜತನದಿಂದ ಬೆಳೆಸಿದ್ದ ಪ್ರಾಧ್ಯಾಪಕ ಹತಾಶನಾಗುತ್ತಾನೆ. ಕೊನೆಗೆ ಆತ ದೊಡ್ಡ ಮೊತ್ತ ಪಾವತಿಸಿ, ಶ್ರೀಲಂಕಾ ತೊರೆದು ಕೆನಡಾಕ್ಕೆ ಸಾಗುವ ಹಾದಿಯಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುತ್ತಾನೆ. ಅನಂತರ, ಬೆಂಗಳೂರಿನಲ್ಲಿ ಒಬ್ಬಂಟಿ ಬದುಕು ಶುರು ಮಾಡುತ್ತಾನೆ.
ಸಂಕಲನದ ಶೀರ್ಷಿಕಾ ಕತೆಯ ಕಥಾನಾಯಕ ಅಶೋಕ ನ್ಯೂಯಾರ್ಕಿನ ಮ್ಯಾನಹಟ್ಟನಿನ ಬಹು ರಾಷ್ಟ್ರೀಯ ಕಂಪೆನಿಯೊಂದರ ಪ್ರಾಜೆಕ್ಟ್ ಡೈರೆಕ್ಟರ್. ಪರಿಶಿಷ್ಟ ಜಾತಿಯವನಾದ ಆತನಿಗೆ, ಆತನ ಅಜ್ಜ ಮಾಡಿದ್ದ ಪಟೇಲಗಿರಿಯಿಂದಾಗಿ “ಪಟೇಲ" ಎಂಬ ಕುಟುಂಬನಾಮ. ಅಮೇರಿಕದಲ್ಲಿ ನೆಲೆಸಿದ್ದ ಹಲವು ಗುಜರಾತಿ ಪಟೇಲ ಕುಟುಂಬದವರು ಇವನನ್ನೂ ಇವನ ಪತ್ನಿ ಮತ್ತು ಮಗನನ್ನೂ “ಗುಜರಾತಿ ಪಟೇಲರು” ಎಂದೇ ತಪ್ಪು ತಿಳಿಯುತ್ತಾರೆ. ಅನಂತರ ನಿಜ ಸಂಗತಿ ತಿಳಿದಾಗ ಇವರಿಗೆ ಅವಮಾನ. ಇದರಿಂದ ಬೇಸತ್ತಿದ್ದ ಪತ್ನಿ ಕಳೆದ ಹದಿಮೂರು ವರುಷಗಳಿಂದ ತಮ್ಮ ಕುಟುಂಬನಾಮ ಬದಲಾಯಿಸಬೇಕೆಂದು ಪೀಡಿಸುತ್ತಲೇ ಇದ್ದಳು. ಅದಕ್ಕಾಗಿ ಮರುದಿನ ನೋಟರಿ ಕಚೇರಿಗೆ ಹೋಗಲು ಅಶೋಕ ಎಲ್ಲ ಸಿದ್ಧತೆ ಮಾಡಿಕೊಂಡ. ಆದರೆ, ಕೊನೆಯ ಕ್ಷಣದಲ್ಲಿ ಪತ್ನಿ ಕುಟುಂಬನಾಮ ಬದಲಾವಣೆ ಬೇಡ ಎನ್ನುತ್ತಾಳೆ. ಕತೆಯ ಉದ್ದಕ್ಕೂ ಹೈಸ್ಕೂಲು ವಿದ್ಯಾರ್ಥಿಯಾದ ಮಗನ "ಸಾಕುಪ್ರಾಣಿ ಸಾಕುವ ಗೀಳಿ"ನ ಪ್ರಸಂಗಗಳು (ಸ್ಪೂಕಿ ಎಂಬ ಹೆಬ್ಬಾವಿನ ಮರಿ ಸಹಿತ) ಹಾಸುಹೊಕ್ಕಾಗಿವೆ.
ಒಟ್ಟು 11 ಕತೆಗಳ ಈ ಸಂಕಲನದ 7ನೇ ಕತೆ "ವಿಹಾರಕ್ಕೆ ಹೋಗಿರಿ ಎಂದಾಗ ನಗುತ್ತಿದ್ದೆ”. ಇದು ಕಾಶ್ಮೀರದ ಸಾವಿರಾರು ಪಂಡಿತರನ್ನು ವ್ಯವಸ್ಥಿತವಾಗಿ ಜನಾಂಗೀಯ ಹತ್ಯೆ ಮಾಡಿ, ಮಹಿಳೆಯರ ಮಾನಭಂಗ ಹಾಗೂ ಕೊಲೆ ಮಾಡಿ, ಐದು ಲಕ್ಷ ಪಂಡಿತರು ಜೀವಭಯದಿಂದ ಕಾಶ್ಮೀರ ತೊರೆಯುವಂತೆ ಮಾಡಿದ ಬೆಳವಣಿಗೆಗಳ ಸುತ್ತ ಹೆಣೆದಿರುವ ಕತೆ. ಇತ್ತೀಚೆಗೆ (2022ರ ಆರಂಭದಲ್ಲಿ) ಬಿಡುಗಡೆಯಾದ "ದ ಕಾಶ್ಮೀರ್ ಫೈಲ್ಸ್” ಚಲನಚಿತ್ರದ ಮೂಲಕ ಜಗತ್ತಿಗೆ ಈ ವರೆಗೆ ತಿಳಿಯದಿದ್ದ ಆ ಜನಾಂಗೀಯ ಹತ್ಯೆಯ ಕರಾಳಮುಖಗಳು, ಭಯಾನಕ ಕೊಲೆಗಳು, ಬೆಚ್ಚಿ ಬೀಳಿಸುವ ಚಿತ್ರಹಿಂಸೆ, ಅಕ್ಕಪಕ್ಕದವರ ದ್ರೋಹ ಇವೆಲ್ಲ ಜಗಜ್ಜಾಹೀರಾಗಿವೆ. ಅವೆಲ್ಲ ಘೋರ ಘಟನೆಗಳಿಂದಾಗಿ ಬದುಕು ಮೂರಾಬಟ್ಟೆಯಾದ ಕುಟುಂಬವೊಂದರ ಮನಮಿಡಿಯುವ ಕತೆ ಇದು.