My Books

Friday, August 18, 2023 - 11:49

ಲೇಖಕರು        : ಬಿ. ಜಿ. ಎಲ್. ಸ್ವಾಮಿ
ಪ್ರಕಾಶಕರು      : ಕಾವ್ಯಾಲಯ ಪ್ರಕಾಶಕರು, ಜಯನಗರ, ಮೈಸೂರು
ಮೂರನೆಯ ಮುದ್ರಣ: 2005       ಪುಟ: 176      ಬೆಲೆ: ರೂ. 80/-

ಕನ್ನಡದ ಜನಸಾಮಾನ್ಯರಿಗೆ ಸರಳಭಾಷೆಯಲ್ಲಿ ಸಸ್ಯಲೋಕವನ್ನು ಪರಿಚಯಿಸಿದವರು ದಿವಂಗತ ಬಿ.ಜಿ.ಎಲ್. ಸ್ವಾಮಿಯವರು. ಅವರ "ಹಸುರುಹೊನ್ನು" ಕನ್ನಡದ ಜನಪ್ರಿಯ ಪುಸ್ತಕಗಳಲ್ಲೊಂದು. ಸಸ್ಯಶಾಸ್ತ್ರವನ್ನು ವಿದ್ಯಾರ್ಥಿಗಳಿಗೂ ಜನರಿಗೂ ಹೇಗೆ ಕಲಿಸಬೇಕೆಂಬುದಕ್ಕೆ ಅದೊಂದು ಅಪೂರ್ವ ಮಾದರಿ. "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ", "ಸಾಕ್ಷಾತ್ಕಾರದ ದಾರಿಯಲ್ಲಿ" ಇಂತಹ ಪುಸ್ತಕಗಳ ಮೂಲಕ ಸಸ್ಯಗಳ ಬಗ್ಗೆ ತಮ್ಮ ಹಲವಾರು ವರುಷಗಳ ಅಧ್ಯಯನದ ಫಲವನ್ನು ಕನ್ನಡಿಗರಿಗೆ ಧಾರೆಯೆರೆದ ಮೇರುವ್ಯಕ್ತಿ ಬಿ.ಜಿ.ಎಲ್. ಸ್ವಾಮಿಯವರು.

"ಫಲಶ್ರುತಿ" ಎಂಬ ಈ ಪುಸ್ತಕ ಸಸ್ಯಲೋಕಕ್ಕೊಂದು ಪ್ರವೇಶಿಕೆ ಎನ್ನಬಹುದು. ಇದರಲ್ಲಿ 74 ಸಸ್ಯಗಳನ್ನು ಚುಟುಕಾಗಿ ಪರಿಚಯಿಸಿದ್ದಾರೆ ಸ್ವಾಮಿಯವರು. ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ - ಎಂಬ 8 ವಿಭಾಗಗಳಲ್ಲಿ ಈ ಸಸ್ಯಗಳ ಬಗ್ಗೆ ಕುತೂಹಲಕಾರಿ ವಿವರಗಳನ್ನು ಹೇಳುತ್ತ ಹೋಗುತ್ತಾರೆ. ತಮ್ಮ ಅಗಾಧ ಓದಿನಿಂದ ಯಾವ್ಯಾವುದೋ ಮೂಲಗಳಿಂದ ಅಗೆದು ತೆಗೆದ ಮಾಹಿತಿಗಳನ್ನು ಅವರು ಉಣಬಡಿಸಿದಂತೆ ನಮ್ಮ ಮಾಹಿತಿಯ ಹಸಿವು ಹೆಚ್ಚುತ್ತ ಹೋಗುತ್ತದೆ. ಸ್ವಾಮಿಯವರ ಶೈಲಿಯೇ ಅಂತಹುದು.

ಪುಸ್ತಕದ ಆರಂಭದಲ್ಲಿ, "... ಇವೊತ್ತು ನಾವು ತಿನ್ನುವ ಕಾಯಿಪಲ್ಯಗಳಲ್ಲಿ ಶೇಕಡ 90 ನಮ್ಮ ದೇಶದಲ್ಲಿ ಹುಟ್ಟಿದವಲ್ಲ; ಹಣ್ಣುಹಂಪಲುಗಳಲ್ಲಿ ಶೇಕಡ 80 ಅನ್ಯ ದೇಶಗಳಿಂದ ಆಮದಾದದ್ದು. ಈ ಗಿಡಮರಗಳೆಲ್ಲ ಮಾನವಪ್ರಯತ್ನದಿಂದಲೇ ಭಾರತವನ್ನು ತಲಪಿದವು" ಎಂದು ನಮ್ಮ ಕುತೂಹಲವನ್ನು ಬಡಿದೆಬ್ಬಿಸುತ್ತಾರೆ.

Friday, August 18, 2023 - 11:38

ಲೇಖಕಿ: ನೇಮಿಚಂದ್ರ           
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
3ನೇ ಮುದ್ರಣ: 2011          ಪುಟ: 288          ಬೆಲೆ: ರೂ.190/-
ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ, ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು: “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ ಯಹೂದಿಗಳ ಮಾರಣ ಹೋಮವನ್ನು, ನಿಂತು ನೋಡಿತ್ತು ….. ಪ್ರತಿಭಟಿಸದೆ.”
ಅದು, ಈ ಕಾದಂಬರಿಯ ಪ್ರಧಾನ ಪಾತ್ರ ಹ್ಯಾನಾ ಮೋಸೆಸ್ ಕಾದಂಬರಿಯ ಉದ್ದಕ್ಕೂ ಮತ್ತೆಮತ್ತೆ ನೆನೆಯುವ ಮಾತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಅವನ ಸೈನ್ಯದ ಹಿಡಿತದಿಂದ ಕೊನೆಯ ಕ್ಷಣದಲ್ಲಿ ಪಾರಾಗಿ, ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ ಡಾ. ಆರನ್ ಮೊಸೆಸ್ ಅವರ ಮಗಳು ಹ್ಯಾನಾ.
ತಂದೆ ತೀರಿಕೊಂಡ ಬಳಿಕ, ಪಕ್ಕದ ಮನೆಯ ತಾಯಿಯ ಮಡಿಲು ಸೇರಿ ಅವಳಾದಳು ಅನಿತಾ. ಅನಂತರ ಆ ಮನೆಯ ವಿವೇಕನನ್ನೇ ಮದುವೆಯಾಗಿ ವಿಶಾಲನ ತಾಯಿಯಾದಳು. ತನ್ನ ತಂದೆ, ತಾಯಿ, ಮನೆ, ಮನೆತನ, ಧರ್ಮ, ದೇವರು, ಗುರುತು ಎಲ್ಲವನ್ನೂ ಹಿನ್ನೆಲೆಗೊತ್ತಿ ಬದುಕಿದಳು – ಹೊರಗೆ ಹಿಮಾಲಯದ ಹಿಮರಾಶಿಯಂತೆ ಮೌನವಾಗಿ ಬಾಳಿದರೂ ಅವಳ ಎದೆಯಾಳದಲ್ಲಿ ಕೊತಕೊತ ಕುದಿಯುತ್ತಿತ್ತು ನೋವು, ಹತಾಶೆ.
ಸುಮಾರು ಆರು ದಶಕಗಳ ನಂತರ ತನ್ನ ಕುಟುಂಬಕ್ಕೆ ಏನಾಯಿತೆಂದು ಪತ್ತೆ ಮಾಡಲು ಪತಿ ವಿವೇಕ್ ಜೊತೆ ಹೊರಡುತ್ತಾಳೆ ಹ್ಯಾನಾ. ಅಂತಿಮವಾಗಿ ಇಸ್ರೇಲಿಗೆ ಹೋಗಿ, ಜೆರುಸಲೇಂಗೂ ಭೇಟಿ ನೀಡುತ್ತಾಳೆ. ಅಷ್ಟು ವರುಷಗಳ ಹ್ಯಾನಾಳ ಹುಡುಕಾಟಕ್ಕೆ ತೆರೆ ಬೀಳುತ್ತದೆ. ಅನಂತರ ಆ ವಿಷಯದಲ್ಲಿ ಹ್ಯಾನಾ ಮೌನವಾಗುತ್ತಾಳೆ.

Friday, August 18, 2023 - 11:16

ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಪ್ರಕಟಣೆಯ ವರುಷ: 2006,      ಪುಟಗಳು: 308,      ಬೆಲೆ: ರೂ.50/-

ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು".  “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ ಬಾ ಬಾ ಬಾ ಬಾ” ಎಂದು ಆರಂಭವಾಗುವ ಈ ಹಾಡು ನಮ್ಮ ನಾಲಗೆಯಲ್ಲಿ ನಲಿದಾಡುತ್ತಿತ್ತು - ಇದರ ಪ್ರತಿಯೊಂದು ಪದ್ಯದ ಕೊನೆಗೂ ಇರುವ ಹಾವಾಡಿಗನ ಪುಂಗಿಯ ನಾದದ ಸೊಗಸಾದ ಅನುಕರಣೆಯಿಂದಾಗಿ. ಇದು ಪಂಜೆ ಮಂಗೇಶರಾಯರು ರಚಿಸಿದ ಸುಪ್ರಸಿದ್ಧ ಮಕ್ಕಳ ಕವನ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡದ ಹಿರಿಯ ಸಾಹಿತಿಗಳ ಪ್ರಸಿದ್ಧ ಹಾಗೂ ಅಲಭ್ಯವಾದ ಕೃತಿಗಳನ್ನು ಪುನರ್ ಮುದ್ರಿಸುವ ಯೋಜನೆಯ ಅನುಸಾರ 2006ರಲ್ಲಿ ಈ ಪುಸ್ತಕ ಪ್ರಕಟಿಸಿದ್ದರಿಂದಾಗಿ ಪಂಜೆಯವರ ಮಕ್ಕಳ ಸಾಹಿತ್ಯವೆಲ್ಲ ಒಂದೆಡೆ ಸಿಗುವಂತಾಯಿತು.

ಹೊಸಗನ್ನಡ ಸಾಹಿತ್ಯದ ಪ್ರವರ್ತಕರು ಎನ್ನುವಾಗ ಪಂಜೆ ಮಂಗೇಶರಾಯರ ಹೆಸರು ಮುಂಚೂಣಿಗೆ ಬಂದೇ ಬರುತ್ತದೆ. ೧೯ನೆಯ ಶತಮಾನದ ಹಿರಿಯ ಸಾಹಿತಿಯಾದ ಪಂಜೆಯವರು ಕನ್ನಡದ ಸಣ್ಣ ಕತೆಗಳ ಜನಕರೆಂದು ಪ್ರಸಿದ್ಧರು. ಅವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಜನಕರೂ ಹೌದು. ಮಕ್ಕಳ ಮನಸ್ಸನ್ನು, ಅವರ ಶಬ್ದಪ್ರಪಂಚದ ಇತಿಮಿತಿಗಳನ್ನು ಚೆನ್ನಾಗಿ ತಿಳಿದಿದ್ದ ಪಂಜೆಯವರು ಮಕ್ಕಳಿಗಾಗಿ ರಚಿಸಿದ ಸಮೃದ್ಧ ಸಾಹಿತ್ಯ, ಈ ಪುಸ್ತಕದ 300 ಪುಟಗಳಲ್ಲಿ ತುಂಬಿಕೊಂಡಿದೆ.

Friday, August 18, 2023 - 11:09

ಪ್ರಕಾಶಕರು: ಸಂಸ್ಕೃತ ಭಾರತಿ, ಗಿರಿನಗರ, ಬೆಂಗಳೂರು
ಮೂರನೆಯ ಆವೃತ್ತಿ: 2017,     ಪುಟ: 158,      ಬೆಲೆ: ರೂ.100/-  

ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ, ಬೆಳಕಿನ ವೇಗ, ಪೈಥಾಗೋರಸ್ ಸಿದ್ಧಾಂತ ಇತ್ಯಾದಿ.

ಭಾರತೀಯರನ್ನು ಆಳುಗಳಾಗಿ ಉಳಿಸಿಕೊಳ್ಳಲಿಕ್ಕಾಗಿ ಬ್ರಿಟಿಷರು ರೂಪಿಸಿದ ಶಿಕ್ಷಣ ಪದ್ಧತಿಗೆ ಅನುಸಾರವಾಗಿ ಬರೆಯಲ್ಪಟ್ಟ ನಮ್ಮ ಈಗಿನ ಶಾಲಾ ಪಠ್ಯಪುಸ್ತಕಗಳೂ ಅದನ್ನೇ ಬೋಧಿಸುತ್ತವೆ. ಸತ್ಯ ಏನೆಂದರೆ, ವಿದೇಶಿಯರ ಶೋಧನೆಗಳೆಂದು ಈಗಲೂ ಹೇಳಲಾಗುವ ಹಲವು ಸಂಗತಿಗಳನ್ನು ಅವರಿಗಿಂತ ಸಾವಿರಾರು ವರುಷಗಳ ಮುಂಚೆಯೇ ವೇದೋಪನಿಷತ್ತುಗಳ ಕಾಲದಲ್ಲಿ  ಭಾರತೀಯ ಋಷಿಮುನಿಗಳು ಶೋಧಿಸಿದ್ದರು. ಮಾತ್ರವಲ್ಲ, ಅವನ್ನು ಸಂಸ್ಕೃತ ಭಾಷೆಯಲ್ಲಿ ದಾಖಲಿಸಿದ್ದರು.

ಆದ್ದರಿಂದಲೇ, ಸಂಸ್ಕೃತ ಬರೀ ಭಾಷೆಯಷ್ಟೇ ಅಲ್ಲ. ಅದು ಭಾರತದ ಆತ್ಮದ ದನಿ, ಬುದ್ಧಿಮತ್ತೆಯ ಗಣಿ, ನಮ್ಮ ರಾಷ್ಟ್ರೀಯ ಜೀವನದ ಜೀವನಾಡಿ. ಪ್ರಾಚೀನ ಹಾಗೂ ಅರ್ವಾಚೀನ ಬದುಕುಗಳನ್ನು ಬೆಸೆಯುವ ಕೊಂಡಿ. ಭಾರತೀಯ ಜ್ನಾನ ಪರಂಪರೆಯ ಅಕ್ಷಯ ನಿಧಿ. ಇಷ್ಟೆಲ್ಲ ಹೇಳಿದರೂ ಸಂಸ್ಕೃತದ ಬಗ್ಗೆ ಹೇಳಿದ್ದು ಕಡಿಮೆ. ಅಂತಹ ಹಿರಿಮೆ-ಗರಿಮೆ, ಆಳ-ವಿಸ್ತಾರ ಆ ಭಾಷೆಯದ್ದು. ಹಾಗಾಗಿಯೇ ಸಂಸ್ಕೃತದ ಬಗ್ಗೆ ಎಲ್ಲ ಭಾರತೀಯರಿಗೂ ಹೆಮ್ಮೆ. ಸಂಸ್ಕೃತದ ಬಗ್ಗೆ ಕಿಂಚಿತ್ ತಿಳಿದಿರುವ ವಿದೇಶೀಯ ವಿದ್ವಾಂಸರೂ ಅದನ್ನು ಗೌರವಿಸುವುದು ಇದೇ ಕಾರಣಕ್ಕಾಗಿ.

Friday, August 18, 2023 - 11:03

ಲೇಖಕರು:     ಡಾ. ಹಾ. ಮಾ. ನಾಯಕ
ಪ್ರಕಾಶಕರು:     ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಬೆಲೆ:         ರೂ.30/-

“ಹಾ.ಮಾ.ನಾ.” ಎಂದೇ ಹೆಸರಾದ ಡಾ. ಹಾರೋಗದ್ದೆ ಮಾನಪ್ಪ ನಾಯಕರು ಕನ್ನಡದಲ್ಲಿ ಅಂಕಣ ಬರಹವನ್ನು ಜನಪ್ರಿಯಗೊಳಿಸಿದವರಲ್ಲಿ ಮೊದಲಿಗರು. ಅವರ ಪುಸ್ತಕಗಳಲ್ಲಿ ತೀರಾ ಆಪ್ತವೆನಿಸುವ ಪುಸ್ತಕ “ನಮ್ಮ ಮನೆಯ ದೀಪ”.

ಇದರಲ್ಲಿವೆ, ಅವರ ಏಳು ಬರಹಗಳು. ಪ್ರತಿಯೊಂದು ಬರಹವೂ ನಮ್ಮ ಭಾವನೆಗಳನ್ನು ತೀಡಿ, ಹೃದಯವನ್ನು ತಟ್ಟುತ್ತದೆ. ಅವನ್ನು ಓದುತ್ತ ಹೋದಂತೆ, ಮನಸ್ಸು ದ್ರವಿಸುತ್ತದೆ. ಇದು ನಮ್ಮದೇ ಮನೆಯ ತಾಯಿ-ಮಗಳ ಬಗೆಗಿನ ಬರಹಗಳು ಅನಿಸಿ ಬಿಡುತ್ತದೆ. 2011ರಲ್ಲಿ ಬೆಳಗಾವಿಯಲ್ಲಿ ಜರಗಿದ ವಿಶ್ವ ಕನ್ನಡ ಸಮ್ಮೇಳನದ ಸಾಹಿತ್ಯಮಾಲೆಯ ಒಂದು ನೂರು ಮೇರು ಕೃತಿಗಳಲ್ಲಿ ಈ ಪುಸ್ತಕವೂ ಆಯ್ಕೆಯಾಗಿ ಮರುಪ್ರಕಟವಾದದ್ದು ಇದರ ಶ್ರೇಷ್ಠತೆಯ ಪುರಾವೆ.

1956ರಲ್ಲಿ ಮೊದಲು ಪ್ರಕಟವಾದ ಈ ಪುಸ್ತಕದ ಬಗ್ಗೆ, ಹಾ.ಮಾ. ನಾಯಕರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ, “ನಮ್ಮ ಮನೆಯ ದೀಪ – ಕೆಲವು ವರುಷಗಳ ಕೆಳಗೆ ನಾನು ಬರೆದ ಏಳು ಬರಹಗಳ ಸಂಗ್ರಹ ….. ಈ ಬರಹಗಳನ್ನು ಏನೆಂದು ಕರೆಯಬೇಕೆಂದು ನನಗೆ ತಿಳಿದಿಲ್ಲ. ….. ರಮಾ, ಅವಳ ತಾಯಿ ವಸುಂಧರಾ – ನನ್ನ ಕಲ್ಪನೆಯ ಸರಸ್ಸಿನಲ್ಲಿ ಅರಳಿದ ಅರವಿಂದಗಳು. ಅವರು ನನಗೆ ತುಂಬ ಹತ್ತಿರದವರೂ, ಪ್ರಿಯರೂ ಆಗಿದ್ದಾರೆ. ಅವರ ಜೀವನದ ಈ ಚಿತ್ರಗಳನ್ನು ನಾನು ಮನಸ್ಸಿನಲ್ಲಿ ಊಹಿಸಿಕೊಂಡಾಗ ಅವನ್ನು ಕಾಗದದಲ್ಲಿ ಮೂಡಿಸಿದಾಗ, ಅವು ಅಚ್ಚಾಗಿ ಮತ್ತೊಮ್ಮೆ ಓದಬೇಕಾಗಿ ಬಂದಾಗ – ಈ ಎಲ್ಲ ಸಂದರ್ಭಗಳಲ್ಲೂ ನಾನು ಅಪಾರವಾಗಿ ಸಂತೋಷಿಸಿದ್ದೇನೆ, ಹರ್ಷಿಸಿದ್ದೇನೆ. ಇದೇ ಬಗೆಯ ಅನುಭವ ಸ್ವಲ್ಪವಾದರೂ ನನ್ನ ಓದುಗರಿಗೆ ಆದೀತೆಂದು ನಾನು ಭಾವಿಸಿದ್ದೇನೆ. ಹಾಗೆ ಆದರೆ ಅದಕ್ಕಿಂತ ಹೆಚ್ಚಿನ ಸಾರ್ಥಕತೆ ನನಗೆ ಇನ್ನೊಂದಿಲ್ಲ.”

Friday, August 18, 2023 - 10:54

ಲೇಖಕಿ (ಇಂಗ್ಲಿಷ್ ಮೂಲ): ಪರ್ಲ್ ಎಸ್. ಬಕ್
ಕನ್ನಡಕ್ಕೆ: ಪಾರ್ವತಿ ಜಿ. ಐತಾಳ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಮೊದಲ ಮುದ್ರಣ: 2011,      ಪುಟಗಳು: 310,      ಬೆಲೆ: ರೂ.195/-

“ಗುಡ್ ಅರ್ತ್” ನೋಬಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ. ವಾಂಗ್ ಲುಂಗ್ ಎಂಬ ಒಬ್ಬ ರೈತ, ಜಮೀನಿನ ಮಾಲೀಕನಾಗ ಬೇಕೆಂಬ ತನ್ನ ಕನಸನ್ನು ನನಸಾಗಿಸಿಕೊಂಡ ಕತೆ ಇದು. ಇದರಲ್ಲಿ ಅವನ ಪತ್ನಿ ಓಲನ್ ಅವಳದ್ದೂ ಪ್ರಧಾನ ಪಾತ್ರ. ವಾಂಗ್ ಲುಂಗನ ಮುದಿ ತಂದೆಯಿಂದ ತೊಡಗಿ ಅವನ ಮೊಮ್ಮಕ್ಕಳ ತನಕ ನಾಲ್ಕು ತಲೆಮಾರುಗಳ ಬದುಕಿನ ಕತೆಯೇ ಈ ಕಾದಂಬರಿ.

ರೈತ ವಾಂಗ್ ಲುಂಗನ ಲ್ಯ ಮತ್ತು ಯೌವನ ಬಡತನದಲ್ಲೇ ಕಳೆಯಿತು. ಓಲನ್‌ಲನ್ನು ವಿವಾಹವಾದ ಬಳಿಕ, ಅವಳೊಂದಿಗೆ ವಾಂಗ್ ಲುಂಗ್ ತನ್ನ ತುಂಡು ಜಮೀನಿನಲ್ಲಿ ಶಕ್ತಿ ಮೀರಿ ದುಡಿಯುತ್ತಾನೆ. ತಮ್ಮ ಜಮೀನಿನ ಮಣ್ಣಿಗೆ ವಾಂಗ್ ಲುಂಗ್ ಮತ್ತು ಓಲನ್ ಸುರಿಸುವ ಬೆವರೇ ಬಂಗಾರವಾಗುತ್ತದೆ. ಕ್ರಮೇಣ ಬೆವರಿಳಿಸಿ ಗಳಿಸಿದ ಹಣದಿಂದ ಇನ್ನಷ್ಟು ಜಮೀನು ಖರೀದಿಸಿ ದೊಡ್ಡ ಜಮೀನ್ದಾರ ಎನಿಸಿಕೊಳ್ಳುತ್ತಾನೆ.

ಇದಕ್ಕೆ ತದ್ವಿರುದ್ಧವಾಗಿ ವಾಂಗ್ ಲುಂಗ ಬಡವನಾಗಿದ್ದಾಗ ಊರಿನ ಜಮೀನ್ದಾರರಾಗಿದ್ದ ಹುವಾಂಗರ ಮನೆತನವು ತನ್ನ ಸಿರಿವಂತಿಕೆಯ ಕೊಬ್ಬಿನಿಂದ ದುಂದುವೆಚ್ಚ ಮಾಡುತ್ತಾ ಪತನದತ್ತ ಸಾಗುತ್ತದೆ. ಆ ಮನೆತನದವರು ತಮ್ಮ ವಿಸ್ತಾರವಾದ ಜಮೀನನ್ನು ತುಂಡುತುಂಡಾಗಿ ಮಾರುತ್ತಾ ಕಳೆದುಕೊಳ್ಳುತ್ತಾರೆ. ಅದೇ ಜಮೀನನ್ನು ವಾಂಗ್ ಲುಂಗ್ ತನ್ನ ದುಡಿಮೆಯ ಹಣದಿಂದ ಖರೀದಿಸುತ್ತಾ ಭೂಮಾಲೀಕನಾಗುವ ಚಿತ್ರಣ ಕಾದಂಬರಿಯಲ್ಲಿ ಹದವಾಗಿ ಮೂಡಿಬಂದಿದೆ. ವಾಂಗ್ ಲುಂಗ್‌ನಲ್ಲಿ ಶ್ರೀಮಂತಿಕೆ ತುಂಬಿತುಳುಕಿದರೂ ಆತ ಕೊನೆಯ ವರೆಗೂ ಮಣ್ಣೇ ತನ್ನ ಸರ್ವಸ್ವ ಎಂದು ನಂಬಿ ಬಾಳುವ ಚಿತ್ರಣ ಮನಮುಟ್ಟುತ್ತದೆ.

Friday, August 18, 2023 - 10:40

ಲೇಖಕರು: ನಿರಂಜನ ವಾನಳ್ಳಿ
ಪ್ರಕಾಶಕರು: ಕನ್ನಡ ಪ್ರಪಂಚ ಪ್ರಕಾಶನ, ಪುತ್ತೂರು
ಪ್ರಕಟಣೆಯ ವರುಷ: 1997      ಪುಟಗಳು: 95      ಬೆಲೆ: ರೂ.45/-

ಕನ್ನಡದ ನುಡಿಚಿತ್ರ ಬರಹಗಾರರು ಎನ್ನುವಾಗ ತಟ್ಟನೆ ನೆನಪಾಗುವ ಹೆಸರು ನಿರಂಜನ ವಾನಳ್ಳಿ. 1980ರ ದಶಕದಲ್ಲಿ ನುಡಿಚಿತ್ರಗಳನ್ನು ಬರೆಯಲಾರಂಭಿಸಿದ ಡಾ. ನಿರಂಜನ ವಾನಳ್ಳಿ, ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಾ ಇಂದಿಗೂ ನುಡಿಚಿತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ, ಪತ್ರಿಕೋದ್ಯಮದ ಪಾಠ ಮಾಡುತ್ತಿದ್ದರೂ ವರುಷಕ್ಕೊಂದು ಬರಹವನ್ನೂ ಬರೆಯದಿರುವ ಪತ್ರಿಕೋದ್ಯಮದ ಹಲವಾರು ಪ್ರಾಧ್ಯಾಪಕರಿಗಿಂತ ಇವರು ಭಿನ್ನ.

ತಮ್ಮ ಎಂ.ಎ. ಶಿಕ್ಷಣ ಮುಗಿಸಿದೊಡನೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಪ್ರಾಧ್ಯಾಪಕರಾಗಿ ಸೇರಿಕೊಂಡರು ನಿರಂಜನ ವಾನಳ್ಳಿ. ಅನಂತರ, ಆರು ವರುಷ ಅಲ್ಲಿ ವೃತ್ತಿಯಲ್ಲಿ ಇದ್ದುಕೊಂಡೇ ಬೆಳ್ತಂಗಡಿ ತಾಲೂಕಿನ ಮೂಲೆಮೂಲೆಯ ಹಳ್ಳಿಗಳಿಗೂ ಹೋಗಿ ಬಂದು, ತಮ್ಮ ಅನುಭವಗಳನ್ನು ಬರಹಕ್ಕಿಳಿಸಿದರು. ಆ ಬರಹಗಳಲ್ಲಿ ಆಯ್ದ 32 ನುಡಿಚಿತ್ರಗಳ ಸಂಕಲನ "ಮೊಗೆದಷ್ಟೂ ನೆನಪುಗಳು.”

Friday, August 18, 2023 - 10:33

ಲೇಖಕರು: ರಾಧೇಶ ತೋಳ್ಪಾಡಿ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣಾ ವರುಷ: 2010,      ಪುಟಗಳು: 72,      ಬೆಲೆ: ರೂ. 50/-

ಎಲ್ಲರಿಗೂ ಖುಷಿ ಕೊಡುವ ಮಕ್ಕಳ ಕವನಗಳು ಎಂದಾಗ ನಮಗೆ ನೆನಪಾಗುವುದು ಪಂಜೆ ಮಂಗೇಶರಾಯರು, ಕು.ವೆಂ. ಪುಟ್ಟಪ್ಪನವರು, ರಾಜರತ್ನಂ, ದಿನಕರ ದೇಸಾಯಿ ಹಾಗೂ ಹೊಯಿಸಳರು ಬರೆದ ಮಕ್ಕಳ ಕವನಗಳು. ಇಂದಿಗೂ ನಮ್ಮ ಬಾಯಲ್ಲಾಡುವ ಮಕ್ಕಳ ಕವನಗಳನ್ನು ಬರೆದ ಅಂದಿನ ಕಾಲದ ಈ ಕನ್ನಡ ಕವಿಗಳ ಜೊತೆಗೆ ನೆನಪಾಗುವವರು  ಲಯಬದ್ಧ ಮಕ್ಕಳ ಹಾಡುಗಳನ್ನು ಬರೆದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಡಾ.ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ಟ, ಪಳಕಳ ಸೀತಾರಾಮ ಭಟ್ಟ, ಡಾ. ಸುಮತೀಂದ್ರ ನಾಡಿಗ ಹಾಗೂ ಶ್ರೀನಿವಾಸ ಉಡುಪ.

ಇಂತಹ ಹಳೆಯ ಹಾಗೂ ಹೊಸ ಮಕ್ಕಳ ಕವನಗಳು ಸಿ.ಡಿ.ಗಳಲ್ಲಿ ಸಿಗುವಂತಾದಾಗ ಅವನ್ನು ಕೇಳಬೇಕು, ಮಕ್ಕಳಿಗೆ ಕಲಿಸಬೇಕು  ಎಂಬವರಿಗೆಲ್ಲ ಹಣ್ಣು ಸಿಕ್ಕಂತಾಯಿತು. ಇನ್ನಷ್ಟು ಹೊಸ ಮಕ್ಕಳ ಕವನಗಳು ಬೇಕೆಂಬವರಿಗೆ "ಹಲೋ ಹಲೋ ಚಂದಮಾಮ” ಎಂಬ  ನಲುವತ್ತು ಕವನಗಳ ಪಟ್ಟ ಸಂಕಲನವನ್ನು ನೀಡಿದ್ದಾರೆ ಕವಿ ಹಾಗೂ ಉಪನ್ಯಾಸಕ ರಾಧೇಶ ತೋಳ್ಪಾಡಿ. “ಪ್ರಜಾವಾಣಿ" ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ, ಈ ಪುಸ್ತಕದಲ್ಲಿರುವ ಇವರ “ರಂಗನತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ್” ಕವನ ಪ್ರಥಮ ಬಹುಮಾನ ಪಡೆದಿವೆ.  

ಪುಸ್ತಕದ ಮುನ್ನುಡಿಯಲ್ಲಿ ಮಕ್ಕಳ ಕವನಗಳ ಬಗ್ಗೆ ವಿಮರ್ಶಕ ಮತ್ತು ಕವಿ ಡಾ. ಚಿಂತಾಮಣಿ ಕೊಡ್ಲೆಕೆರೆ ಹೀಗೆ ಬರೆದಿದ್ದಾರೆ, "ಹೊಸ ಕಾಲದ ಲಯ, ನಿರೀಕ್ಷೆಗಳು ಬೇರೆಯೇ ಇವೆ. ಇಂಗ್ಲಿಷ್, ಹಿಂದಿಯ ಹಾಡುಗಳ ಮೋಡಿಗೆ ನಮ್ಮ ಮಕ್ಕಳು ಒಳಗಾಗುವರಾದರೆ ಕನ್ನಡ ಹಾಡುಗಳು ಅವರನ್ನು ಸೆಳೆಯಬೇಕಲ್ಲವೇ? ಮಕ್ಕಳಿಗೆ ಕವಿತೆ ಓದುತ್ತಿದ್ದಂತೆ ಅದು “ಕಾಣಬೇಕು", "ಕೇಳಬೇಕು", "ಕುಣಿಯ ಬೇಕೆನ್ನಿಸಬೇಕು” -ಅರಿವೇ ಆಗದಂತೆ!”

Friday, August 18, 2023 - 10:20

ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ, ಧಾರವಾಡ
ಪುಟಗಳು: 71       ಬೆಲೆ: ರೂ.30/-          ಪ್ರಕಟಣೆಯ ವರುಷ:2009
ದಕ್ಷಿಣ ಕನ್ನಡದ ಪುತ್ತೂರಿನಿಂದ ಪ್ರಕಟವಾಗುವ “ಅಡಿಕೆ ಪತ್ರಿಕೆ” ಮಾಸಪತಿಕೆಯಲ್ಲಿ ಪ್ರಕಟಗೊಂಡ ಉಪಯುಕ್ತ ಆಯ್ದ ಮಾಹಿತಿ ತುಣುಕುಗಳ ಸಂಗ್ರಹವಾದ “ಹನಿಗೂಡಿ ಹಳ್ಳ” ಒಂದು ಅಪರೂಪದ ಪುಸ್ತಕ. ಆ ಪತ್ರಿಕೆಯ “ಹನಿಗೂಡಿ ಹಳ್ಳ” ಅಂಕಣದಿಂದ ಆಯ್ದ 51 ಪುಟ್ಟ ಬರಹಗಳು ಇದರಲ್ಲಿವೆ. ಇದರ ಬಹುಪಾಲು ಬರಹಗಳು ರೈತರ ಅನುಶೋಧನೆಗಳು. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ರೈತರೇ ಕಂಡುಕೊಂಡ ಈ ಅನುಭವ ಆಧಾರಿತ ವಿಧಾನಗಳನ್ನು ಇತರ ರೈತರು ಅಳುಕಿಲ್ಲದೆ ಬಳಸಬಹುದು.
“ಒಕ್ಕಲುತನದಲ್ಲಿ ಎದುರಾಗುವ ಬೇರೆಬೇರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ರೈತರ ಅನುಶೋಧನೆ ಹಾಗೂ ಅನುಭವವನ್ನು ಒಂದೆಡೆ ದಾಖಲಿಸುವುದು ಇವತ್ತಿನ ಸಂದರ್ಭಕ್ಕೆ ಹೆಚ್ಚು ಪ್ರಸ್ತುತ” ಎಂಬ ಯೋಚನೆಯೇ ಈ ಪುಸ್ತಕ ಪ್ರಕಟಣೆಗೆ ಪ್ರೇರಣೆ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ, ಅನಿತಾ ಪೈಲೂರು, ಅಧ್ಯಕ್ಷೆ, ಕೃಷಿ ಮಾಧ್ಯಮ ಕೇಂದ್ರ.

“ಇದು ನಿಜಕ್ಕೂ ಒಂದು ರೈತೋಪಯೋಗಿ ಕೆಲಸ. “ಒಬ್ಬ ಅಜ್ಜ ಅಥವಾ ಅಜ್ಜಿ ತೀರಿಹೋಗುವುದೆಂದರೆ ಒಂದು ಹಳೆ ವಾಚನಾಲಯ ಸುಟ್ಟು ಹೋದಂತೆ” ಎಂಬ ಮಾರ್ಮಿಕ ಮಾತಿದೆ. ಹಾಗಾಗಲು ಬಿಡದೆ ಹಿರಿಯ ವ್ಯಕ್ತಿಗಳ ಜನೋಪಯೋಗಿ ಅನುಭವಸಾರವನ್ನು ಸಂಗ್ರಹಿಸಿ ಬೆಳಕಿಗೊಡ್ಡೋಣ. ಈ ಕೆಲಸ ಎಲ್ಲೆಡೆಯಲ್ಲಿ, ಸಾಧ್ಯವಿರುವ ಎಲ್ಲರಿಂದಲೂ ನಡೆಯುವಂತಾಗಲಿ” ಎಂಬ ಆಶಯವನ್ನು ಪುಸ್ತಕದಲ್ಲಿ ವ್ಯಕ್ತಪಡಿಸಿದ್ದಾರೆ ಶ್ರೀಪಡ್ರೆ, ಕಾರ್ಯನಿರ್ವಾಹಕ ಸಂಪಾದಕ, ಅಡಿಕೆ ಪತ್ರಿಕೆ, ಪುತ್ತೂರು.

ಈ ಪುಸ್ತಕದಿಂದ ಆಯ್ದ ಕೆಲವು ಮಾಹಿತಿ ಶೀರ್ಷಿಕೆಗಳು ಇಲ್ಲಿವೆ:
1) ಮಂಗಕಾಟಕ್ಕೆ “ಸೀರೆ ಚೀಲ”ದ ಸ್ಟೇ – ಮಹಾಲಕ್ಷೀ ಹೆಗಡೆ ಅವರಿಂದ ಮಾಹಿತಿ

Friday, August 18, 2023 - 10:11

ಲೇಖಕರು: ಎಸ್.ಆರ್. ಗೌತಮ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1991      12ನೇ ಮುದ್ರಣ: 2014       
ಪುಟ: 172       ಬೆಲೆ: ರೂ. 125/-

ಕತೆ ಹೇಳಿದಂತೆ ಕಾನೂನಿನ ವಿಷಯಗಳನ್ನು ತಿಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ, ಶ್ರೀ ಎಸ್.ಆರ್. ಗೌತಮ್, “ನಿತ್ಯಜೀವನದಲ್ಲಿ ಕಾನೂನು” ಪುಸ್ತಕದ ಮೂಲಕ.

ಉದಾಹರಣೆಗೆ ಪವರ ಪಟಾಲಂ – ಪವರ್ ಆಫ್ ಅಟಾರ್ನಿ – ಮುಖ್ತಾರ್ನಾಮವನ್ನು ಅವರು ವಿವರಿಸುವ ಪರಿ ಗಮನಿಸಿ:

Pages