ಪರಿಚಯ10: ಫಲಶ್ರುತಿ

ಲೇಖಕರು        : ಬಿ. ಜಿ. ಎಲ್. ಸ್ವಾಮಿ
ಪ್ರಕಾಶಕರು      : ಕಾವ್ಯಾಲಯ ಪ್ರಕಾಶಕರು, ಜಯನಗರ, ಮೈಸೂರು
ಮೂರನೆಯ ಮುದ್ರಣ: 2005       ಪುಟ: 176      ಬೆಲೆ: ರೂ. 80/-

ಕನ್ನಡದ ಜನಸಾಮಾನ್ಯರಿಗೆ ಸರಳಭಾಷೆಯಲ್ಲಿ ಸಸ್ಯಲೋಕವನ್ನು ಪರಿಚಯಿಸಿದವರು ದಿವಂಗತ ಬಿ.ಜಿ.ಎಲ್. ಸ್ವಾಮಿಯವರು. ಅವರ "ಹಸುರುಹೊನ್ನು" ಕನ್ನಡದ ಜನಪ್ರಿಯ ಪುಸ್ತಕಗಳಲ್ಲೊಂದು. ಸಸ್ಯಶಾಸ್ತ್ರವನ್ನು ವಿದ್ಯಾರ್ಥಿಗಳಿಗೂ ಜನರಿಗೂ ಹೇಗೆ ಕಲಿಸಬೇಕೆಂಬುದಕ್ಕೆ ಅದೊಂದು ಅಪೂರ್ವ ಮಾದರಿ. "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ", "ಸಾಕ್ಷಾತ್ಕಾರದ ದಾರಿಯಲ್ಲಿ" ಇಂತಹ ಪುಸ್ತಕಗಳ ಮೂಲಕ ಸಸ್ಯಗಳ ಬಗ್ಗೆ ತಮ್ಮ ಹಲವಾರು ವರುಷಗಳ ಅಧ್ಯಯನದ ಫಲವನ್ನು ಕನ್ನಡಿಗರಿಗೆ ಧಾರೆಯೆರೆದ ಮೇರುವ್ಯಕ್ತಿ ಬಿ.ಜಿ.ಎಲ್. ಸ್ವಾಮಿಯವರು.

"ಫಲಶ್ರುತಿ" ಎಂಬ ಈ ಪುಸ್ತಕ ಸಸ್ಯಲೋಕಕ್ಕೊಂದು ಪ್ರವೇಶಿಕೆ ಎನ್ನಬಹುದು. ಇದರಲ್ಲಿ 74 ಸಸ್ಯಗಳನ್ನು ಚುಟುಕಾಗಿ ಪರಿಚಯಿಸಿದ್ದಾರೆ ಸ್ವಾಮಿಯವರು. ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ - ಎಂಬ 8 ವಿಭಾಗಗಳಲ್ಲಿ ಈ ಸಸ್ಯಗಳ ಬಗ್ಗೆ ಕುತೂಹಲಕಾರಿ ವಿವರಗಳನ್ನು ಹೇಳುತ್ತ ಹೋಗುತ್ತಾರೆ. ತಮ್ಮ ಅಗಾಧ ಓದಿನಿಂದ ಯಾವ್ಯಾವುದೋ ಮೂಲಗಳಿಂದ ಅಗೆದು ತೆಗೆದ ಮಾಹಿತಿಗಳನ್ನು ಅವರು ಉಣಬಡಿಸಿದಂತೆ ನಮ್ಮ ಮಾಹಿತಿಯ ಹಸಿವು ಹೆಚ್ಚುತ್ತ ಹೋಗುತ್ತದೆ. ಸ್ವಾಮಿಯವರ ಶೈಲಿಯೇ ಅಂತಹುದು.

ಪುಸ್ತಕದ ಆರಂಭದಲ್ಲಿ, "... ಇವೊತ್ತು ನಾವು ತಿನ್ನುವ ಕಾಯಿಪಲ್ಯಗಳಲ್ಲಿ ಶೇಕಡ 90 ನಮ್ಮ ದೇಶದಲ್ಲಿ ಹುಟ್ಟಿದವಲ್ಲ; ಹಣ್ಣುಹಂಪಲುಗಳಲ್ಲಿ ಶೇಕಡ 80 ಅನ್ಯ ದೇಶಗಳಿಂದ ಆಮದಾದದ್ದು. ಈ ಗಿಡಮರಗಳೆಲ್ಲ ಮಾನವಪ್ರಯತ್ನದಿಂದಲೇ ಭಾರತವನ್ನು ತಲಪಿದವು" ಎಂದು ನಮ್ಮ ಕುತೂಹಲವನ್ನು ಬಡಿದೆಬ್ಬಿಸುತ್ತಾರೆ.

"ಭಾರತಕ್ಕೆ ನಾಲ್ಕು ಹೆಬ್ಬಗಿಲುಗಳು" ಎಂಬ ಪ್ರಸ್ತಾವನೆಯಲ್ಲಿ, ಆಗ್ನೇಯ, ವಾಯುವ್ಯ, ಈಶಾನ್ಯ ಮತ್ತು ನೈಋತ್ಯ ಹೆಬ್ಬಾಗಿಲುಗಳ ಮೂಲಕ ಹೊರದೇಶಗಳ ಸಸ್ಯಗಳೂ ಸಸ್ಯೋತ್ಪನ್ನ ದ್ರವ್ಯಗಳೂ ನಮ್ಮ ದೇಶ ಪ್ರವೇಶಿಸಿದ್ದನ್ನು ತಿಳಿಸುತ್ತಾರೆ. ಹೀಗೆ ಪ್ರವೇಶಿಸಿದ ಅವು ನಮ್ಮಲ್ಲಿ ಬಳಕೆಯಾಗುತ್ತ ಆಗುತ್ತ, ನಮ್ಮ ಬದುಕಿನಲ್ಲಿ ಸೇರಿ ಹೋದದ್ದನ್ನು "ಗಿಡಮರಗಳ ಬರವು, ನಾವಿತ್ತ ನೆರವು" ಎಂಬ ಮುಂದಿನ ಭಾಗದಲ್ಲಿ ಹೀಗೆ ವಿವರಿಸುತ್ತಾರೆ: "... ಪರದೇಶದಿಂದ ಬಂದದ್ದು ಎಂಬ ಆಕ್ಷೇಪಣೆಯನ್ನು ಎತ್ತದೆಯೇ ಎಷ್ಟೋ ಸಲ ಅಂಥವುಗಳನ್ನು ನಮ್ಮದು ಮಾಡಿಕೊಂಡು ಬಿಟ್ಟಿದ್ದೇವೆ. ಹುರುಳಿಯನ್ನೂ ಕಡಲೆಯನ್ನೂ ನವಧಾನ್ಯಗಳಲ್ಲಿ, ನವಗ್ರಹ ಪೂಜೆಗಳಲ್ಲಿ ಸೇರಿಸಿದ್ದೇವೆ. ಎಲೆ-ಅಡಿಕೆ ತೆಂಗಿನಕಾಯಿಗಳನ್ನು ತಾಂಬೂಲವಾಗಿಯೂ ದಕ್ಷಿಣೆಯಾಗಿಯೂ ಸ್ವೀಕರಿದ್ದೇವೆ. ಟೊಮೆಟೊ ದಿನಬಳಕೆಯ ತರಕಾರಿಯಾಗಿದೆ. ನೆಲಗಡಲೆಯಿಂದಾಗಲಿ ಗೋಡಂಬಿಯಿಂದಾಗಲಿ ಅನುಪಾಕಗೊಳ್ಳದ ಭಕ್ಷ್ಯವಿಲ್ಲ. ಕಣಗಿಲೆ ಹೂ ಶಿವನಿಗೆ ಪ್ರಿಯವಾಗಿದೆ. ...ಮೆಂತ್ಯ ಜೀರಿಗೆಗಳಿಲ್ಲದ ಅಡುಗೆಮನೆ ಇಲ್ಲವೆಂದೇ ಹೇಳಬಹುದು."  

ಸಸ್ಯಗಳಿಗೆ ನಾವು ಹೆಸರಿಡುವ ವಿಧಾನವನ್ನು ಸೊಗಸಾಗಿ ತಿಳಿಸುತ್ತಾರೆ ಬಿ. ಜಿ. ಎಲ್. ಸ್ವಾಮಿಯವರು. "ಹೊಸ ಗಿಡವೊಂದು ಭಾರತವನ್ನು ಹೊಕ್ಕಾಗ ಅದನ್ನು ನಾವು ಸಂಭೋಧಿಸುವ ಪದಗಳು ವಿವಿಧ ಕಾರಣಗಳಿಂದ ಜನಿಸುತ್ತವೆ. ಆ ಗಿಡದ ರೂಪವನ್ನೋ ಗುಣವನ್ನೋ ಆಧಾರವಾಗಿಟ್ಟುಕೊಂಡು, ನಮಗೆ ತೀರ ಬಳಕೆಯಲ್ಲಿರುವ ಗಿಡವೊಂದರ ಹೆಸರನ್ನೇ ಅದಕ್ಕೆ ಅಂಟಿಸುತ್ತೇವೆ. ಹೀಗೆ ಮಾಡುವಾಗ ಶೀಮೆ (ಸೀಮೆ) ಎಂಬ ಪೂರ್ವ ಪ್ರತ್ಯಯವನ್ನು ಸೇರುಸುತ್ತೇವೆ - ಸೀಮೆ ಬದನೆ, ಸೀಮೆ ಸೊಂಪು, ಸೀಮೆ ಹಲಸು, ಇತ್ಯಾದಿ.

ಆಮದಾದ ಊರಿನ ಅಥವಾ ದೇಶದ ಹೆಸರನ್ನು ಪೂರ್ವಪ್ರತ್ಯಯವಾಗಿ ಸೇರಿಸುವ ಬಳಕೆಯೂ ಉಂಟು - ಚೀನಾ ಮಲ್ಲಿಗೆ, ಚೀನಾ ಸಂಪಗೆ, ಚೀನೀಕಾಯಿ ಇತ್ಯಾದಿ. ಇಲ್ಲವೆ ಆ ಜನಾಂಗದ ಹೆಸರನ್ನು ಸೇರಿಸುವುದುಂಟು - ಪರಂಗಿಹಣ್ಣು, ಪರಂಗಿ ಚೆಕ್ಕೆ, ಪರಂಗಿ ಹಲಸು ಇತ್ಯಾದಿ."

ನಮಗೆ ಗೊತ್ತಿರುವ ಗಿಡಗಳನ್ನೇ ಸ್ವಾಮಿಯವರು ಪರಿಚಯಿಸುವ ಪರಿ ಆಪ್ತವಾದದ್ದು. ಉದಾಹರಣೆಗೆ ಕಣಗಿಲೆ. (ಇದನ್ನೀಗ ಹೆದ್ದಾರಿಗಳ ನಡುವಿನಲ್ಲಿ ನೆಡುವುದನ್ನು ಕಾಣುತ್ತಿದ್ದೇವೆ.) "... ಕೆಂಪು ಕಣಗಿಲೆ, ಬಿಳಿ ಕಣಗಿಲೆ ಎಂಬೆರಡು ರಖಮುಗಳು ಸಾಧಾರಣವಾಗಿ ಬೆಳೆಯುತ್ತವೆ. ... ಕಣಗಿಲೆಗೆ ಪರ್ಯಾಯ ಪದಗಳ ಅಭಾವವಿಲ್ಲ - ಪ್ರತಿಹಾಸ, ಶತಪ್ರಾಸ, ಚಂಡಾತ, ಹಯಮಾರಕ, ಕರವೀರ, ಅಶ್ವಮಾರ, ಕಣಲಿಗೆ, ಕಣವೀರ, ಗನ್ನೇರು, ಕನ್ನೇರು ಇತ್ಯಾದಿ. ಈ ಮಾತುಗಳೆಲ್ಲ ಒಂದೇ ಸ್ಪೀಷೀಸನ್ನು ನಿರ್ದೇಶಿಸುತ್ತವೆಯೇ ಎಂಬ ಪ್ರಶ್ನೆಗೆ ಸಮಾಧಾನ ಸಿಗದು. ... ಕೆಂಪು ಕಣಗಿಲೆಯನ್ನು ಸಾಧಾರಣವಾಗಿ ಯಾರೂ ಮುಡಿಯರು. ದೇವತಾರ್ಚನೆಗೆ ಸಾಮಾನ್ಯವಾಗಿ ಉಪಯೋಗಿಸರು. ಆದರೆ ಕೆಂಪು ಹೂಗಳೆಲ್ಲ ಶಿವನಿಗೂ ಸೂರ್ಯನಿಗೂ ಶ್ರೇಷ್ಠವೆಂಬ ನಂಬಿಕೆ ಕೆಲವೆಡೆಗಳಲ್ಲಿ ರೂಡಿಯಾಗಿದೆ. ಹೀಗಾಗಿ ಕಣಗಿಲೆಗೂ ಒಂದು ಸ್ಥಾನ ದೊರಕಿದೆ. ಆದರೂ ಕೆಂಪು ಕಣಗಿಲೆ ಹಾರ ಎಂದರೆ ವಧೆಯ ಪಶುವಿನ ಕೊರಳಿಗೆ ಶ್ರೇಷ್ಠವಾದದ್ದು ಎಂಬ ಧ್ವನಿ ವ್ಯಕ್ತವಾಗುತ್ತದೆ....."

ಬೋಗನ್‍ವಿಲಿಯದ ಬಗ್ಗೆ ಬರೆಯುತ್ತ, ಅದರ ಹುಟ್ಟೂರು ದಕ್ಷಿಣ ಅಮೆರಿಕ ಎಂದು ತಿಳಿಸುತ್ತ, ಅದನ್ನು ಸರಳವಾಗಿ ಪರಿಚಯಿಸುತ್ತಾರೆ: "... ಪೊದರು ಪೊದರಾಗಿ ಹರಡಿ ಬೆಳೆಯುತ್ತದೆ. ಕಂಬದ ಮೇಲೋ ಕಮಾನಿನ ಮೇಲೋ ಹಬ್ಬುತ್ತದೆ. ವರ್ಷಾನುಗಟ್ಟಲೆ ಬೆಳೆಯುತ್ತದೆ. ಎಲೆಗಳೊಂದಿಗೆ ಮುಳ್ಳುಗಳೂ ಕಾಂಡದ ಮೇಲೆ ಕೊನರುತ್ತವೆ. ಬಣ್ಣದ ಬೆಡಗಿನೆದುರು ಮುಳ್ಳು ತೃಣಮಾತ್ರ." ಜೊತೆಗೆ ಸಸ್ಯಶಾಸ್ತ್ರೀಯ ಮಾಹಿತಿಯನ್ನೂ ನೀಡುತ್ತಾರೆ, "ಬಣ್ಣ ತಳೆಯುವುದು ಹೂ ಅಲ್ಲ; ಹೂವನ್ನು ಆವರಿಸಿರುವ ತೊಟ್ಟೆಲೆಗಳು. ಒಂದೊಂದು ಹೂವಿಗೂ ಇಂಥ ಮೂರು ತೊಟ್ಟೆಲೆ (bract) ಗಳಿರುತ್ತವೆ. ಹೂ ತಳೆದ ಪೊದರಿನ ಆಕರ್ಷಣೆಗೆ ಆಧಾರ ಈ ತೊಟ್ಟೆಲೆಗಳೇ."

ನಮಗೆ ಗೊತ್ತೇ ಇಲ್ಲದ ವಿವರಗಳನ್ನು ನೀಡುವುದೇ ಸ್ವಾಮಿಯವರ ವಿಶೇಷ. ಗುಲಾಬಿಯ ಚರಿತ್ರೆ ತಿಳಿಸಿ, ತಟಕ್ಕನೆ ನಾವೆಲ್ಲರೂ ತಿಳಿದಿರಲೇ ಬೇಕಾದ ಮಾಹಿತಿಯೊಂದನ್ನು ಒದಗಿಸುತ್ತಾರೆ. "ರೋಜಾಪನ್ನೀರು" ಎಂಬ ಚೀಟಿ ಅಂಟಿಸಿರುವ ಬಾಟಲುಗಳನ್ನು ಮಾರುಕಟ್ಟೆಯಲ್ಲಿ ಜಾಹೀರಾತು ಮಾಡುತ್ತಾರಲ್ಲವೆ? ಅದನ್ನು ನೀವೂ ಸ್ವಾಮಿ ಕಾರ್ಯಕ್ಕಾಗಿಯೋ ಶುಭಕಾರ್ಯಕ್ಕಾಗಿಯೋ ಸಿಹಿ ತಿಂಡಿಗಳಿಗೆ ವಾಸನೆ ಕಟ್ಟುವುದಕ್ಕಾಗಿಯೋ ಕೊಂಡುಕೊಳ್ಳುತ್ತೀರಲ್ಲವೆ? ನಿಮ್ಮ ನಂಬಿಕೆಗೆ ದ್ರೋಹ ಮಾಡುವ ಉದ್ದೇಶ ನನಗಿಲ್ಲ. ಆದರೆ ನಿಜವನ್ನು ತಿಳಿಸುತ್ತಿದ್ದೇನೆ, ಅಷ್ಟೇ. ರೋಜಕ್ಕೂ ಆ "ರೋಜಪನ್ನೀರಿ"ಗೂ ಬಾದರಾಯಣ ಸಂಬಂಧ ಕೂಡ ಇಲ್ಲ. ೬೦ - ೭೦ ವರುಷಗಳ ಹಿಂದೆ ಇಂಗ್ಲೆಂಡಿನಿಂದ ಆಮದು ಮಾಡಿಕೊಂಡ ಜಿರೇನಿಯಮ್  ಎಂಬ ಗಿಡದ ಎಲೆಗಳಿಂದ ಬಟ್ಟಿಯಿಳಿಸಿದ ದ್ರವವೇ ಈಗಿನ ಮಾರುಕಟ್ಟೆಯ ಪನ್ನೀರು."

ಕೆಲವೇ ಮಾತುಗಳಲ್ಲಿ ಮಂಗೋಸ್ತೀನ್ ಎಂಬ ಹಣ್ಣಿನ ಚಿತ್ರ ಕಟ್ಟಿಕೊಡುತ್ತಾರೆ ಬಿ. ಜಿ. ಎಲ್. ಸ್ವಾಮಿಯವರು: "ಮಲೆಯಾ ದ್ವೀಪಸ್ತೋಮದಲ್ಲಿ ಸ್ವಾಭಾವಿಕ ಬೆಳವಣಿಗೆ. ಮಲೆಯಾ ಪರ್ಯಾಯ ಪ್ರದೇಶಗಳಲ್ಲಿ ಕಾಡುಮರವಾಗಿ ಬೆಳೆಯುತ್ತದೆ. ನೆಡುತೋಪುಗಳಲ್ಲಿ ಬೆಳೆದದ್ದೂ ಅಲ್ಲಿಯೇ. ಚೆಂಡು ರೂಪದ ಊದಾ ಬಣ್ಣದ ಹಣ್ಣು; ಸುಲಭವಾಗಿ ಮುರಿಯುವ ದಪ್ಪಸಿಪ್ಪೆ; ಒಳಗೆ 8-10 ಬೀಜಗಳು;  ಒಂದೊಂದು ಬೀಜವನ್ನೂ ಸುತ್ತುವರಿದಿರುವ ರಸಭರಿತವಾದ ದಪ್ಪವಾದ ಬಿಳಿಯ ಪೊರೆ; ಈ ಪೊರೆಯೇ ತಿನ್ನುವ ಸಾಮಗ್ರಿ - ಮೃದುವಾದ ಸಿಹಿ; ನವುರಾದ ಗಮಲು." "ಮಂಗೋಸ್ತೀನನ್ನು ಅಗಿಯಬೇಕಾಗಿಲ್ಲ, ಬೀಜದಿಂದ ಬೇರ್ಪಡಿಸಿದ ಪೊರೆಯನ್ನು ಗುಳುಗುಳು ನುಂಗಬೇಕು" ಎಂದು ತಿಳಿಸಿ, ಕೊನೆಗೊಂದು ಬಾಣ ಬಿಡುತ್ತಾರೆ, "ನಮ್ಮ ಜನಕ್ಕೆ ಮಂಗೋಸ್ತೀನ್ ಅಷ್ಟಾಗಿ ರುಚಿಸಿಲ್ಲ. ಸಿಪ್ಪೆ ಎಂಬುದೊಂದು ಆಕ್ಷೇಪ, ಕಡಿಮೆ ಬೆಲೆಗೆ ದೊರಕಿದರೂ ಬೇಡ ಎಂಬ ತಿರಸ್ಕಾರ."

ಧಾರ್ಮಿಕ ಆಚರಣೆಗಳಲ್ಲಿ ಅನಿವಾರ್ಯವಾಗಿರುವ ಶ್ರೀತುಲಸಿಯನ್ನು "ಕಳೆ" ವಿಭಾಗದಲ್ಲಿ ಸೇರಿಸಿರುವ ಸ್ವಾಮಿಯವರು, ಅದರ ಬಗ್ಗೆ ನೇರವಾಗಿ ಹೀಗೆ ಬರೆಯುತ್ತಾರೆ, "ಹೇಗೆ ತಾನೆ ಈ ಕುರುಚಲು ಗಿಡ ಬಂದು ನಮ್ಮ ಮತಾಚರಾಣೆಯ ಸಂಸ್ಕೃತಿಯೊಂದಿಗೆ ಹೆಣೆದುಕೊಂಡಿತೋ ಕಾಣೆ. ಎಲೆಗೆ ಒಂದು ಬಗೆಯ ಹಿತವಾದ ಸುವಾಸನೆಯೇನೋ ಇದೆಯಾದರೂ "ಗಂಧ" ಜಾತಿಗೆ ಸೇರದು. ಗಿಡದ ವೈದ್ಯಕೀಯ ಉಪಯೋಗಗಳೆಲ್ಲ ಈಚೀಚೆಗೆ ಹುಟ್ಟಿಕೊಂಡುವು, ಪ್ರಾಚೀನ ಗ್ರಂಥಗಳಲ್ಲಿ ಉಕ್ತವಾಗಿಲ್ಲ. ಗಿಡಕ್ಕೆ ದೈವತ್ವ ಸಿದ್ಧಿಯಾದ ಬಳಿಕ ವೈದ್ಯ ಗುಣಗಳೂ ಅಂಟಿಕೊಂಡಿರಬೇಕು...."

"ತುಲಸಿ ಭಾರತ ದೇಶದಲ್ಲೇ ಹುಟ್ಟಿದ್ದೆ? ಹೌದು ಎಂದು ಧೈರ್ಯವಾಗಿ  ಹೇಳುವಂತಿಲ್ಲ. ಇದರ ವನ್ಯ ಬೆಳೆ ಭಾರತದಲ್ಲೆಲ್ಲೂ ಕಾಣದು. ಕೃಷಿಯಿಂದ ತಪ್ಪಿಸಿಕೊಂಡು ಚದುರಿ ಹೋಗಿರಬಹುದಲ್ಲದೆ ಸ್ವಾಭಾವಿಕವಾಗಿಯೇ ವನ್ಯವಾಗಿರುವ ಬೆಳೆ ಇಲ್ಲವೆಂದೇ ಹೇಳಬೇಕು" ಎಂಬ ಸಂಗತಿಯನ್ನೂ ತಿಳಿಸುತ್ತಾರೆ.

ಸಸ್ಯಲೋಕದ ಬಗ್ಗೆ ನಮ್ಮ ಅರಿವು ಹೆಚ್ಚಿಸಿಕೊಳ್ಳಲಿಕ್ಕಾಗಿ ಓದಲೇ ಬೇಕಾದ ಪುಸ್ತಕವಿದು.