ಲೇಖಕರು: ಎಸ್.ಆರ್. ಗೌತಮ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1991 12ನೇ ಮುದ್ರಣ: 2014
ಪುಟ: 172 ಬೆಲೆ: ರೂ. 125/-
ಕತೆ ಹೇಳಿದಂತೆ ಕಾನೂನಿನ ವಿಷಯಗಳನ್ನು ತಿಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿ ಕೊಟ್ಟಿದ್ದಾರೆ, ಶ್ರೀ ಎಸ್.ಆರ್. ಗೌತಮ್, “ನಿತ್ಯಜೀವನದಲ್ಲಿ ಕಾನೂನು” ಪುಸ್ತಕದ ಮೂಲಕ.
ಉದಾಹರಣೆಗೆ ಪವರ ಪಟಾಲಂ – ಪವರ್ ಆಫ್ ಅಟಾರ್ನಿ – ಮುಖ್ತಾರ್ನಾಮವನ್ನು ಅವರು ವಿವರಿಸುವ ಪರಿ ಗಮನಿಸಿ:
“ರಾಮಣ್ಣನಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮನೆ ನಿವೇಶನ ಮಂಜೂರಾತಿಯಾಗಿ ಸ್ವಾಧೀನ ಪತ್ರವನ್ನು ಪಡೆದುಕೊಂಡಿದ್ದಾನೆ. ಮಂಜೂರಾತಿಯ ಶರತ್ತಿನಂತೆ ರಾಮಣ್ಣ ಸ್ವಾಧೀನ ಪತ್ರವನ್ನು ಪಡೆದುಕೊಂಡ ತಾರೀಖಿನಿಂದ ಹತ್ತು ವರ್ಷಗಳ ಪರ್ಯಂತ ನಿವೇಶನವನ್ನು ಯಾವುದೇ ರೀತಿಯಲ್ಲಿ ಪರಭಾರೆ ಮಾಡುವಂತಿಲ್ಲ. ರಾಮಣ್ಣನಿಗೆ ಈಗ ಮನೆ ಕಟ್ಟಲು ಹಣವಿಲ್ಲ. ಆದರೆ, ತುರ್ತಾಗಿ ಮಗಳ ಮದುವೆ ಮಾಡಬೇಕು. ನಿವೇಶನವನ್ನು ಮಾರುವುದು ಒಂದೇ ದಾರಿ. ಆದರೆ, ಮಾರುವ ಹಾಗಿಲ್ಲ. ಮಾರಬೇಕಾದರೆ ಇನ್ನೂ ಮೂರು ವರ್ಷ ಕಾಯಬೇಕು. ದಲ್ಲಾಳಿಯೊಬ್ಬನನ್ನು ಹಿಡಿದ. ಹೇಗಾದರೂ ಮಾರಾಟ ಮಾಡಿಸು ಎಂದು ದುಂಬಾಲು ಬಿದ್ದ. ಬಲೆಗೆ ತಾನಾಗಿ ಬಂದು ಬಿದ್ದ ಮಿಕವನ್ನು ಬಿಟ್ಟುಬಿಡಲು ದಲ್ಲಾಳಿಯೇನು ಮೂರ್ಖನೇ? ಮಾರಾಟ ಕುದುರುಸುತ್ತೇನೆ. ಆದರೆ, ರುಸುಮು ಜಾಸ್ತಿ ಕೊಡಬೇಕಾಗುತ್ತದೆ ಎಂದ. ನಿರ್ವಾಹವಿಲ್ಲದೆ ರಾಮಣ್ಣ ಸಮ್ಮತಿಸಿದ. ಗಿರಾಕಿಯೊಬ್ಬನಿಗೆ ನಿವೇಶನ ತೋರಿಸಿ ವ್ಯಾಪಾರ ಕುದುರಿಸಿದ. ಮಾರಾಟದ ಕರಾರು ಪತ್ರವನ್ನು ಬರೆದು ಕೊಟ್ಟ ರಾಮಣ್ಣ. ಗಿರಾಕಿಯಿಂದ ಮುಂಗಡ ಹಣವನ್ನು ಪಡೆದುಕೊಂಡ. ಕರಾರು ಪತ್ರದ ಜೊತೆಗೆ “ಪವರ್ ಆಫ್ ಅಟಾರ್ನಿ” ಒಂದನ್ನು ರಾಮಣ್ಣನಿಂದ ಗಿರಾಕಿಗೆ ದಲ್ಲಾಳಿ ಬರೆಸಿ ಕೊಟ್ಟ. ಬಾಕಿ ಹಣವನ್ನು ಕೊಡಿಸಿ ತನಗೆ ಬರಬೇಕಾದ ಕಮಿಷನ್ ವಸೂಲಿ ಮಾಡಿಕೊಂಡ.
ಪೂರ್ತ ಹಣವನ್ನು ಕೊಟ್ಟರೂ ಗಿರಾಕಿಗೆ ಸಿಕ್ಕಿದ್ದು “ಪವರ್ ಆಫ್ ಅಟಾರ್ನಿ” ಮಾತ್ರ, ಕ್ರಯಪತ್ರವಲ್ಲ. ಕಾರಣ, ರಾಮಣ್ಣ ಕ್ರಯಪತ್ರ ಬರೆದು ಕೊಡುವ ಹಾಗಿಲ್ಲ”
ಇದನ್ನು ಮುಂದುವರಿಸಿ, ಆ ಅಧ್ಯಾಯದಲ್ಲಿ ಈ ಪವರ್ ಆಫ್ ಅಟಾರ್ನಿಯ ಪರಿಣಾಮಗಳನ್ನು ಎಳೆಎಳೆಯಾಗಿ ಚಿತ್ರಿಸುತ್ತಾರೆ. ಅನಂತರ ಅವರು ವಿವರಿಸುವುದು ಪವರ್ ಆಫ್ ಅಟಾರ್ನಿಯ ವಿಧಗಳನ್ನು. ಆ ಅಧ್ಯಾಯದ ಕೊನೆಯಲ್ಲಿ, ಒಂದು ಆಸ್ತಿಯ ಬಗ್ಗೆ ಕೊಡಬಹುದಾದ “ಸರ್ವತ್ರ ಅಧಿಕಾರ ಪತ್ರ”ದ ಮಾದರಿಯನ್ನೂ ನೀಡಿದ್ದಾರೆ.
ನಿತ್ಯಜೀವನದಲ್ಲಿ ನಾವೆಲ್ಲರೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳಿಗೆ ಸಂಬಂಧಿಸಿದ ವಿವಿಧ ಕಾಯಿದೆಗಳ ವಿಧಿಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಈ ಪುಸ್ತಕದಲ್ಲಿ ವಿವರಿಸಿರುವುದು ಎಸ್.ಆರ್. ಗೌತಮರ ಹೆಗ್ಗಳಿಕೆ. ಗಾದೆಗಳನ್ನು, ವಚನಗಳನ್ನು ಪೋಣಿಸುತ್ತ, ಅಲ್ಲಲ್ಲಿ ಸಂಭಾಷಣೆಯ ರೂಪದಲ್ಲಿ ಪ್ರಕರಣಗಳ ಮೂಲಕ ಕಾನೂನಿನ ತತ್ವ ಹಾಗೂ ವಿಧಿಗಳನ್ನು ತಿಳಿಸಿರುವ ಕಾರಣ ಪುಸ್ತಕದ ಓದು ನಮಗೆ ಆಪ್ತವಾಗುತ್ತದೆ.
ನಮ್ಮ ಬದುಕಿನುದ್ದಕ್ಕೂ ಮುಖಾಮುಖಿಯಾಗುವ “ಕರಾರು ಅಧಿನಿಯಮ”ದ ವಿವರಣೆಯನ್ನು (ಸಂಪುಟ 2ರ ಅಧ್ಯಾಯ 3ರಲ್ಲಿ) ಅವರು ಹೀಗೆ ಆರಂಭಿಸುತ್ತಾರೆ: “ಪರಸ್ಪರ ನಂಬದ ಇಬ್ಬರು ಸಭ್ಯ ವ್ಯಕ್ತಿಗಳ ನಡುವೆ ಆದ ಒಪ್ಪಂದವೇ ಕರಾರು!...... ನಿಮ್ಮ ಸ್ನೇಹಿತನೊಬ್ಬನನ್ನು ಸಿನಿಮಾಕ್ಕೋ ಅಥವಾ ಹೋಟೆಲಿಗೋ ಕರೆದುಕೊಂಡು ಹೋಗುತ್ತೇನೆಂದು ಮಾತು ಕೊಡುತ್ತೀರಿ. ಹೀಗೆ ಕೊಟ್ಟ ಮಾತನ್ನು ಒಪ್ಪಂದವೆಂದು ಕರೆಯಲಾಗುತ್ತದೆಯೇ? ಇಲ್ಲ.”
ಈ ವಿವರಣೆಯನ್ನು ಅವರು ಮುಂದುವರಿಸಿದ್ದು ಹೀಗೆ: “ಕರಾರು ಪ್ರಸ್ತಾವನೆಗಳಿಂದ ಪ್ರಾರಂಭವಾಗುತ್ತದೆ. ಮೊದಲು ಪ್ರಸ್ತಾವನೆ. ಆ ಮೇಲೆ ಪ್ರಸ್ತಾವನೆಯ ಅಂಗೀಕಾರ. ಅಂಗೀಕಾರದ ನಂತರ ಒಪ್ಪಂದ ಹುಟ್ಟುತ್ತದೆ. ನ್ಯಾಯಾಲಯದಲ್ಲಿ ಜ್ಯಾರಿಗೊಳಿಸ ಬಹುದಾದ “ಒಪ್ಪಂದ”ವು “ಕರಾರು” ಎಂದೆನಿಸಿ ಕೊಳ್ಳುತ್ತದೆ. ….. ಎಲ್ಲ ಕರಾರುಗಳೂ ಒಪ್ಪಂದಗಳಾದರೂ, ಎಲ್ಲ ಒಪ್ಪಂದಗಳು ಕರಾರುಗಳು ಎನಿಸಿಕೊಳ್ಳುವುದಿಲ್ಲ. ಗಂಡುಮಕ್ಕಳೆಲ್ಲಾ ಮಕ್ಕಳುಗಳಾದರೂ, ಮಕ್ಕಳುಗಳೆಲ್ಲಾ ಗಂಡುಮಕ್ಕಳಲ್ಲ, ಅಲ್ಲವೇ?”
ಅನಂತರ, ಹಸು ಮಾರಾಟದ ಉದಾಹರಣೆ ಮೂಲಕ “ಕರಾರ”ನ್ನು ಸ್ವಾರಸ್ಯವಾಗಿ ವರ್ಣಿಸುತ್ತಾರೆ. ಕುಂಟುಕಾಲಿನ ಹಸುವನ್ನು ಖರೀದಿಸಿದ ನಂತರ “ಮೋಸವಾಯಿತು” ಎಂದು ಖರೀದಿದಾರ ತಕರಾರು ಎತ್ತುವಂತಿಲ್ಲ ಎಂಬುದನ್ನು ತಿಳಿಸುತ್ತಾ, “ಕೊಳ್ಳುವವನ ಎಚ್ಚರ” ಎಂಬ ಪರಿಕಲ್ಪನೆಯನ್ನು ಸರಳವಾಗಿ ವಿವರಿಸುತ್ತಾರೆ.
ಅದಾದ ಬಳಿಕ, ಆ ಅಧ್ಯಾಯದಲ್ಲಿ ೧೪ ಪ್ರಸ್ತಾವನೆಗಳನ್ನು ವಿಶ್ಲೇಷಿಸುವ ಮೂಲಕ ಕರಾರು ಅಧಿನಿಯಮವನ್ನು ಬಿಡಿಬಿಡಿಯಾಗಿ ಬಿಚ್ಚಿಡುತ್ತಾರೆ. ಯಾವ ಒಪ್ಪಂದಗಳು ಕರಾರುಗಳಾಗುವುದಿಲ್ಲ? ಯಾವ ಒಪ್ಪಂದಗಳು ಕರಾರುಗಳಾಗುತ್ತವೆ? ಕರಾರುಗಳಲ್ಲಿ ಎಷ್ಟು ವಿಧ? ಕರಾರಿನ ಪರಿಣಾಮಗಳೇನು? ಇವನ್ನೆಲ್ಲ ಸರಳ ಹಾಗೂ ಖಚಿತ ಮಾತುಗಳಲ್ಲಿ ತಿಳಿಸಿಕೊಡುವ ವಿಧಾನ ಚೇತೋಹಾರಿ.
“ನಿತ್ಯಜೀವನದಲ್ಲಿ ಕಾನೂನು” ಮೂರು ಸಂಪುಟಗಳ ಪುಸ್ತಕ. ಮೊದಲನೆಯ ಮತ್ತು ಎರಡನೆಯ ಸಂಪುಟಗಳಲ್ಲಿ ಸಿವಿಲ್ ವಿಷಯಗಳ ಹಾಗೂ ಮೂರನೆಯ ಸಂಪುಟದಲ್ಲಿ ಕ್ರಿಮಿನಲ್ ವಿಷಯಗಳ ವಿವರಣೆ ಲಭ್ಯ. (ಗಮನಿಸಿ: ಮೂರನೇ ಸಂಪುಟದ ಪರಿಚಯವನ್ನು ಪ್ರತ್ಯೇಕವಾಗಿ ಪ್ರಕಟಿಸಿದ್ದೇನೆ.)
ಒಂದನೇ ಸಂಪುಟದ 6 ಅಧ್ಯಾಯಗಳು: ಭಾರತದ ಸಂವಿಧಾನ - ಮೂಲಭೂತ ಹಕ್ಕುಗಳು - ರಿಟ್ ಅರ್ಜಿಗಳು, ಉಯಿಲು, ನಾಮಿನೇಷನ್ (ನಾಮನಿರ್ದೇಶನ), ಕರ್ನಾಟಕ ಬಾಡಿಗೆ ಕಾಯಿದೆ, 1999 – ಬಾಡಿಗೆಮನೆ, ಹೆಸರು ಬದಲಾವಣೆ, ವಿವಾಹ ಮತ್ತು ವಿಚ್ಚೇದನ.
ಎರಡನೇ ಸಂಪುಟದ 6 ಅಧ್ಯಾಯಗಳು: ಸ್ಥಿರ ಆಸ್ತಿಯನ್ನು ಕೊಳ್ಳುತ್ತಿದ್ದೀರಾ, ಎಚ್ಚರಿಕೆ, ವ್ಯವಸಾಯ ಭೂಮಿ ಖರೀದಿ, ಕರಾರು ಅಧಿನಿಯಮ, 1872, ಪಾಲುಗಾರಿಕೆ – ಪಾಲುಗಾರರು ಮತ್ತು ಪಾಲುಗಾರಿಕೆ ಪತ್ರ, ಪವರ ಪಟಾಲಂ – ಪವರ್ ಆಫ್ ಅಟಾರ್ನಿ, ಸಂಕೀರ್ಣ ವಿಷಯಗಳು.
ಅಧ್ಯಾಯಗಳಿಗೆ ಪೂರಕ ತಲೆಬರಹ ಕೊಡುವುದರಲ್ಲಿ ಎಸ್.ಆರ್. ಗೌತಮರು ಸಿದ್ಧಹಸ್ತರು. ಇವನ್ನು ಗಮನಿಸಿ: “ಕರಾರು ಅಧಿನಿಯಮ” ಅಧ್ಯಾಯಕ್ಕೆ “ಕರಾರೋ ತಕರಾರೋ’, “ಪಾಲುಗಾರಿಕೆ” ಅಧ್ಯಾಯಕ್ಕೆ “ಪಾಲಿಗೆ ಬಂದದ್ದು ಹಾಲಾಹಲ”, “ಸಿವಿಲ್ ಪ್ರಕ್ರಿಯಾ ಸಂಹಿತೆ”ಗೆ “ಗೆದ್ದವನು ಸೋತ, ಸೋತವನು ಸತ್ತ”, “ಹೆಸರು ಬದಲಾವಣೆ” ಅಧ್ಯಾಯಕ್ಕೆ “ಜೇನ್ ಜಾನಕಿಯಾದಾಗ”.
ಈ ಪುಸ್ತಕ ಮೊದಲು ಪ್ರಕಟವಾದದ್ದು ಎಪ್ರಿಲ್ 1991ರಲ್ಲಿ. ಅನಂತರ ಇದರ 11 ಮರುಮುದ್ರಣ ಹಾಗೂ ಪರಿಷೃತ ಮುದ್ರಣಗಳು ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಕಾಲಕಾಲಕ್ಕೆ ವಿವಿಧ ಕಾನೂನುಗಳಲ್ಲಿ ಆಗಿರುವ ತಿದ್ದುಪಡಿಗಳನ್ನು ಅಳವಡಿಸಿ, ಪುಸ್ತಕವನ್ನು ಪರಿಷ್ಕರಿಸುವ ಮೂಲಕ ಲೇಖಕರು ಪುಸ್ತಕದ ಉಪಯುಕ್ತತೆ ಹೆಚ್ಚಿಸಿದ್ದಾರೆ.
ಸರ್ವತ್ರ ಅಧಿಕಾರ ಪತ್ರ, ಉಯಿಲು, ಬಾಡಿಗೆಮನೆಯ ಕರಾರು ಇತ್ಯಾದಿಗಳ ಮಾದರಿಗಳನ್ನು ಕೊಟ್ಟಿರುವುದು ಈ ಪುಸ್ತಕದ ವಿಶೇಷತೆ. ಇದರಿಂದಾಗಿ, ಇವುಗಳ ಕರಡು ನಾವೇ ಬರೆದುಕೊಳ್ಳಲು ಸಹಾಯ. ಜೊತೆಗೆ, ಕೆಲವು ಫಾರಂಗಳನ್ನೂ ಪುಸ್ತಕದಲ್ಲಿ ಮುದ್ರಿಸಲಾಗಿದೆ. ಹಾಗಾಗಿ, ಆ ಫಾರಂಗಳಿಗಾಗಿ ನಾವು ಪರದಾಡಬೇಕಾಗಿಲ್ಲ.
1992ರಲ್ಲೇ ಈ ಪುಸ್ತಕವನ್ನು ಖರೀದಿಸಿದ್ದ ನನಗೆ, ವೃತ್ತಿಜೀವನದಲ್ಲಿ ಕಾನೂನಿನ ಸಂಕೀರ್ಣ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಹಲವು ಸಂದರ್ಭಗಳಲ್ಲಿ ಇದರಿಂದ ನೆರವಾಗಿದೆ. ಬಳಕೆದಾರರ ಆಂದೋಲನದ ಸಕ್ರಿಯ ಕಾರ್ಯಕರ್ತನಾಗಿ ಅನೇಕರಿಗೆ ಸೂಕ್ತ ಮಾರ್ಗದರ್ಶನ ನೀಡುವಾಗಲೂ ಇದರಿಂದ ಸಹಾಯವಾಗಿದೆ.
ವೃತ್ತಿಯಿಂದ ವಕೀಲರಾದ ಎಸ್.ಆರ್. ಗೌತಮ್ ಈ ಪುಸ್ತಕ ಬರೆದು, ಮತ್ತೆಮತ್ತೆ ಪರಿಷ್ಕರಿಸುವ ಮೂಲಕ ಕನ್ನಡಿಗರಿಗೆ ಕಾನೂನು ಮಾಹಿತಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಹಾಗೆಯೇ, ನವಕರ್ನಾಟಕ ಪ್ರಕಾಶನದವರು ಇದರ ಮೊದಲ ಆವೃತ್ತಿಯಿಂದ ತೊಡಗಿ, ಎಲ್ಲ ಪರಿಷ್ಕೃತ ಆವೃತ್ತಿಗಳನ್ನೂ ಪ್ರಕಟಿಸುತ್ತಿರುವುದು, ಜನಸಾಮಾನ್ಯರಿಗೆ ಕಾನೂನು ಮಾಹಿತಿ ಒದಗಿಸುವ ಬಗ್ಗೆ ಅವರ ಮುತುವರ್ಜಿಗೆ ಪುರಾವೆ.