My Books

Saturday, August 19, 2023 - 10:47

ಪ್ರಧಾನ ಸಂಪಾದಕ:  ನ. ರವಿಕುಮಾರ
ಪ್ರಕಾಶಕರು: ಅಭಿನವ, ರಾಜಾಜಿ ನಗರ 2ನೇ ಹಂತ, ಬೆಂಗಳೂರು
ಮೊದಲ ಮುದ್ರಣ: 1996,       ಪುಟ: 152,        ಬೆಲೆ:ರೂ.50/-

ಇದು ವಿವಿಧ ಲೇಖಕರ ಬರಹಗಳ ಸಂಕಲನ. ಈ ಪುಸ್ತಕದ ಒಂದೊಂದೇ ಲೇಖನ ಓದುತ್ತ ಹೋದಂತೆ, ಪರಿಸರ ನಮ್ಮ ಬದುಕನ್ನು ತಟ್ಟುವ ವಿವಿಧ ಪರಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಊರಿಗೆ ಮಂಜೂರಾದ ಮೂರು ಟ್ಯೂಬ್‍ಲೈಟ್‍ಗಳನ್ನು ಗ್ರಾಮ ಪಂಚಾಯತಿಯ ಸದಸ್ಯರ ಮನೆ ಮುಂದೆಯೇ ಹಾಕಬೇಕೆಂದು ಕೆಇಬಿ ಲೈನ್‍ಮನ್‍ಗೆ ತಾಕೀತು ಮಾಡುವ ಒಬ್ಬ  ಗ್ರಾಮ ಪಂಚಾಯತಿ ಸದಸ್ಯನ ಉದಾಹರಣೆಯೊಂದಿಗೆ ಪುಸ್ತಕದ "ಮುನ್ನುಡಿ"ಯನ್ನು ಆರಂಭಿಸುತ್ತಾರೆ ಸಂಪಾದಕರು.

Saturday, August 19, 2023 - 10:34

ಲೇಖಕರು: ಎಚ್. ಆರ್. ಕೃಷ್ಣಮೂರ್ತಿ
ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ನಾನ ಪರಿಷತ್ತು,
              ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣ, ಬೆಂಗಳೂರು
ಪ್ರಕಟಣೆ: 1996       ಪುಟ: 168        ಬೆಲೆ: ರೂ.25/-          
                          
"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ 103 ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ “ಮರಗಳ ಒಡನಾಟ”  ಎಂಬ ಮೊದಲ ಅಧ್ಯಾಯ.

ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ ಜೀವಿಗಳನ್ನು ನಾವು ಹೇಗೆ ಕಾಣಬೇಕು?" "ಎಲ್ಲಿವೆ ಅಂಥ ಜೀವಿಗಳು?" ಎಂಬ ಪ್ರಶ್ನೆಗೆ ಉತ್ತರವಾಗಿ ಸಾವಿರಾರು ವರುಷ ಬದುಕಿರುವ ಮರಗಳನ್ನು ಉದಾಹರಿಸುತ್ತಾರೆ:
(1) ಡೆಹ್ರಾಡೂನಿನ ಅರಣ್ಯ ಸಂಶೋಧನಾ ಸಂಸ್ಠೆಯ ಆವರಣದಲ್ಲಿರುವ ದೇವದಾರು ಮರ. ಇದು ಹುಟ್ಟಿದ್ದು 12ನೆಯ ಶತಮಾನದಲ್ಲಿ. (2) ಯುಎಸ್‍ಎ ದೇಶದ ಕ್ಯಾಲಿಫೋರ್ನಿಯ ರಾಜ್ಯದ ರೆಡ್‍ವುಡ್ ಸಿಕೋಯ ವೃಕ್ಷಗಳು. ಅವುಗಳಲ್ಲಿ ಒಂದು ವೃಕ್ಷ ಜನ್ಮ ತಾಳಿದ್ದು ಬುದ್ಧ ಹುಟ್ಟುವ ಸಾವಿರ ವರ್ಷಗಳ ಮುಂಚೆ.

"ದೀರ್ಘಾಯುಷ್ಯವೊಂದೇ ವೃಕ್ಷ ಪ್ರವಂಚದಲ್ಲಿನ ಏಕೈಕ ಆಶ್ಚರ್ಯದ ಸಂಗತಿಯಲ್ಲ. ಅದು ಅಚ್ಚರಿ ಹುಟ್ಟಿಸುವ ಅಸಂಖ್ಯ ವಿಷಯಗಳ ಆಗರ" ಎನ್ನುತ್ತಾ ಅವನ್ನು ಪರಿಚಯಿಸಲು ಶುರು ಹಚ್ಚುತ್ತಾರೆ ಲೇಖಕರು, "ನಮ್ಮ ಮರಗಳು" ಪುಸ್ತಕದಲ್ಲಿ.

Saturday, August 19, 2023 - 10:20

ಲೇಖಕರು: ಡಾ. ಕೃಷ್ಣಾನಂದ ಕಾಮತ್
ಪ್ರಕಾಶಕರು: ಪುಸ್ತಕಾಲಯ, 4ನೇ ಟಿ-ಬ್ಲಾಕ್, ಜಯನಗರ, ಬೆಂಗಳೂರು
ಪ್ರಥಮ ಮುದ್ರಣ: 1992,      ಪುಟ 72,      ಬೆಲೆ: ರೂ. 15/-

"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು ನಾವಿನ್ನೂ ಕರಗತ ಮಾಡಿಕೊಂಡಿಲ್ಲ .....ಕಾಡು, ನಮ್ಮ ಉಪಯೋಗಕ್ಕಾಗಿಯೇ ನಿರ್ಮಿತವಾದ ಧನರಾಶಿಯೆಂದು ನಾವೂ ಸರಕಾರವೂ ಕೂಡಿಯೇ ಭಾವಿಸಿದ್ದೇವೆಯೇ ಹೊರತು ಈ ಸಂಪತ್ತು ಬೆಳೆಸಲು ನಾವೇನು ಮಾಡಬೇಕು? ಎಂದು ಯೋಚಿಸುವ ಗೋಜಿಗೇ ಹೋಗಿಲ್ಲ" ಎಂಬ ನೇರ ಮಾತುಗಳೊಂದಿಗೆ ಪುಸ್ತಕದ ಮೊದಲ ಅಧ್ಯಾಯ "ನಮ್ಮ ವನಸಿರಿ"ಯನ್ನು ಆರಂಭಿಸುತ್ತಾರೆ ಕಾಮತರು.

"ಜನರಲ್ಲಿ ಅರಣ್ಯದ ಮಹತ್ವವನ್ನು ಬಿಂಬಿಸುವುದು ಅತಿ ಅಗತ್ಯವಾಗಿದೆ. ಮಾಧ್ಯಮಿಕ ಶಾಲೆಯಿಂದಲೇ ಆ ಬಗ್ಗೆ ಒಂದೆರಡು ಪಾಠಗಳ ವ್ಯವಸ್ಥೆ ಇರಬೇಕು. ರಜೆಯಲ್ಲಿ ಕಾಡಿದ್ದ ಪ್ರದೇಶಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದರೆ ಅವರಿಗೆ ನಿಸರ್ಗದ ಬಗ್ಗೆ ಪ್ರೀತಿ ಆದರ ಹುಟ್ಟುವುದು" ಎಂದು ಅದೇ ಅಧ್ಯಾಯದಲ್ಲಿ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುತ್ತಾರೆ.

Saturday, August 19, 2023 - 10:04

ಲೇಖಕರು: ಪೊಳಲಿ ನಿತ್ಯಾನಂದ ಕಾರಂತ
ಪ್ರಕಾಶಕರು: ಪುರುಷೋತ್ತಮ ಮರಕಡ, ಡೆಟ್ರೋಯ್ಟ್, ಯು.ಎಸ್.ಎ.
ಪ್ರಕಟ: 2021               ಪುಟ: 276        ಬೆಲೆ: ರೂ.150/-

ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು 20 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.

ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್ ಸಂಕಣ್ಣ, ಧರ್ಮಧಾರೆ ಮತ್ತು ರಾಮರಕ್ಷಾ ಹೋಮ ವಿಶ್ವರೂಪ ದರ್ಶನ. ಯಕ್ಷಗಾನದ ದೊಡ್ಡ ಅಭಿಮಾನಿ ಹಾಗೂ ಇದರ ಪ್ರಕಾಶಕರಾದ ತಮ್ಮ ಅಳಿಯ ಪುರುಷೋತ್ತಮ ಮರಕಡ, ಇನ್ನೊಬ್ಬ ಅಳಿಯ ಸಿದ್ಧಾರ್ಥ ರಾವ್ ಮತ್ತು ಮಗಳಂದಿರಾದ ಭವಾನಿ ಮತ್ತು ಭಾರ್ಗವಿ ಇವರ ಒತ್ತಾಯದಿಂದಾಗಿ ಈ ಸಂಪುಟ ಬೆಳಕು ಕಂಡಿದೆ ಎಂದು ನಿತ್ಯಾನಂದ ಕಾರಂತರು ಬರೆದುಕೊಂಡಿದ್ದಾರೆ. ಇತರ ಪ್ರಸಂಗಗಳ ಹಸ್ತಪ್ರತಿಗಳು ಕಾಣೆಯಾಗಿರುವುದು ಬೇಸರದ ಸಂಗತಿ.

Saturday, August 19, 2023 - 10:00

ಲೇಖಕರು: ಎಂ. ಎಸ್. ಶ್ರೀರಾಮ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಪ್ರಕಟ: 2013           ಪುಟ: 160           ಬೆಲೆ: ರೂ.120/-

ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ.

“ಒಳಿತು, ಲಾಭ, ವ್ಯಾಪಾರ” ಎಂಬ ಮೊದಲ ಭಾಗದಲ್ಲಿವೆ ಆರು ಲೇಖನಗಳು. “ಆತ್ಮಹತ್ಯೆಗಳು: ರೈತರೇ ಏಕೆ?” ಎಂಬ ಪ್ರಬಂಧ ಈ ಜ್ವಲಂತ ಸಮಸ್ಯೆಯ ಬಗ್ಗೆ ಹಲವು ಒಳನೋಟಗಳನ್ನು ನೀಡುತ್ತದೆ. ವ್ಯಾಪಾರವನ್ನೂ ಕೃಷಿಯನ್ನೂ ಹೋಲಿಸುತ್ತಾ ಪ್ರಬಂಧವನ್ನು ಶುರು ಮಾಡುತ್ತಾರೆ ಲೇಖಕರು. ನಷ್ಟ ಮತ್ತು ವಿಮೆಯ ರಕ್ಷೆ ಬಗ್ಗೆ ಅವರ ವಿವರಣೆ: “ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಬಿರುಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತು ಇದ್ದು, ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ. …. ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ-ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆ ರೂಪಿಸುವುದೂ ಕಷ್ಟ….."

Saturday, August 19, 2023 - 09:57

ಲೇಖಕ: ಎನ್. ಆನಂದ ರಾಮರಾವ್
ಪ್ರಕಾಶಕರು: ಸುಂದರ ಪ್ರಕಾಶನ, ಬೆಂಗಳೂರು
ಪ್ರಕಟ: 2010                 ಪುಟ:131             ಬೆಲೆ: ರೂ.90/-

ನಿವೃತ್ತಿಯ ಅಂಚಿನಲ್ಲಿರುವವರಿಗೊಂದು ಉತ್ತಮ ಕೈಪಿಡಿ ಇದು. 1995ರಿಂದೀಚೆಗೆ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಿಂದ ನಿವೃತ್ತರಾಗಲಿರುವ ಉದ್ಯೋಗಿಗಳಿಗೆ ನಿವೃತ್ತ ಜೀವನಕ್ಕಾಗಿ ತಯಾರಾಗುವುದು ಹೇಗೆ? ಎಂಬ ಬಗ್ಗೆ ಕನ್ನಡದಲ್ಲಿ ಉಪನ್ಯಾಸ ನೀಡಿದ ಆನಂದ ರಾಮರಾಯರು ಇದರ ಲೇಖಕರು. ಅನಂತರ, ತನ್ನ ಉಪನ್ಯಾಸಗಳನ್ನೇ ಲೇಖನವಾಗಿಸಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. “ಉದಯವಾಣಿ”ಯ ಹಿರಿಯರ ಪುಟದಲ್ಲಿ, ಇದೇ ಶೀರ್ಷಿಕೆಯಲ್ಲಿ 52 ಕಂತುಗಳ ಅಂಕಣವನ್ನೂ ಬರೆದರು. ತದನಂತರ, ಅವನ್ನೇ ಪುಸ್ತಕವಾಗಿಸಿ ಪ್ರಕಟಿಸಿದ್ದಾರೆ.

ನಿವೃತ್ತಿಯ ನಂತರದ ಸಮಸ್ಯೆಗಳನ್ನು ಈ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ ಲೇಖಕರು: (ಅ) ಮಾನಸಿಕ (ಆ) ದೈಹಿಕ (ಇ) ಆರ್ಥಿಕ. ಪ್ರತಿಯೊಂದು ವಿಭಾಗದ ಸಮಸ್ಯೆಗಳನ್ನು ಚುಟುಕಾಗಿ ವಿವರಿಸಿ, ಅವನ್ನು ಎದುರಿಸುವುದು ಹೇಗೆಂದು ಪುಸ್ತಕದಲ್ಲಿ ವಿವರಿಸಿದ್ದಾರೆ. ಮಾನಸಿಕ ಸಮಸ್ಯೆಗಳನ್ನು ನಿಭಾಯಿಸುವ ಬಗ್ಗೆ “ಕುಟುಂಬದವರೊಡನೆ ಸಾಮರಸ್ಯದ ಬದುಕು" ಎಂಬ ಅಧ್ಯಾಯದಲ್ಲಿ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ, “ನೋ ಹರಿ, ನೋ ವರಿ, ಬಿ ಮೆರಿ” ಎನ್ನುತ್ತಾರೆ.

ಅದರ ಮುಂದಿನ ಅಧ್ಯಾಯ "ಆರೋಗ್ಯವಂತರಾಗಿ ಬಾಳುವುದು ಹೇಗೆ?” ಇದರಲ್ಲಿ ಅವರು ನೀಡುವ ಮುಖ್ಯ ಸಲಹೆ - ಆರೋಗ್ಯಕ್ಕಾಗಿ ಪ್ರತಿದಿನವೂ ವಾಕಿಂಗ್ ಮಾಡಿ. ಅದಲ್ಲದೆ, ಆರೋಗ್ಯ ಪಾಲನೆಯಲ್ಲಿ ಆಹಾರ ಸೇವನೆಯ ಪ್ರಾಮುಖ್ಯತೆಯನ್ನೂ ತಿಳಿಸಿದ್ದಾರೆ.

Saturday, August 19, 2023 - 09:54

ಲೇಖಕ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ
ಪ್ರಕಟ: 2013                ಪುಟ: 82                 ಬೆಲೆ: ರೂ.60/-

ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಹುಮ್ಮಸ್ಸಿಗೆ ಬಿದ್ದು ಇದನ್ನು ಅನುವಾದಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಇಂತಹ ಸಾಹಸಕ್ಕೆ ತೊಡಗುವ ಮುನ್ನ ಎಷ್ಟೊಂದು ಕಠಿಣ ಸವಾಲುಗಳನ್ನು ಎದುರಿಸಬೇಕಾದೀತೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ…. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು ಜೆ. ಎನ್. ಬರ್ನ್‌ಸ್ಟಿನ್ ಎಂಬವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನಾನು ಕನ್ನಡೀಕರಿಸಲು ಅವಲಂಬಿಸಿದ್ದು ಈ ಇಂಗ್ಲಿಷ್ ಅನುವಾದವನ್ನು. …. ಸ್ಪ್ಯಾನಿಶ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ ಆಚರಣೆಗಳ ಬಗ್ಗೆ, ನುಡಿಗಟ್ಟುಗಳ ಬಗ್ಗೆ ತಿಳಿಯದೇ ಇದ್ದಾಗ, ಅವುಗಳ ಯಥಾರ್ಥ ರೂಪಗಳು ನಮ್ಮಲ್ಲಿ ಇರದೇ ಇದ್ದಾಗ ಅನುವಾದಕ ಅಷ್ಟಿಷ್ಟು ಸ್ವಾತಂತ್ರ್ಯ ವಹಿಸಬೇಕಾಗುತ್ತದೆ. …"

ಇಪ್ಪತ್ತನೆಯ ಶತಮಾನದ ಮಹಾನ್ ಲೇಖಕರಲ್ಲಿ ಒಬ್ಬನಾದ ಕಾದಂಬರಿಕಾರ, ಕತೆಗಾರ ಹಾಗು ಪತ್ರಕರ್ತ ಕೊಲಂಬಿಯಾದ ಮಾರ್ಕ್ವೆಜ್ ಜನಿಸಿದ್ದು 6 ಮಾರ್ಚ್ 1927ರಂದು. ಇಡೀ ಲ್ಯಾಟಿನ್ ಅಮೇರಿಕದಲ್ಲಿ ಈತ ಗಾಬೋ ಎಂದೇ ಪರಿಚಿತ.

Saturday, August 19, 2023 - 09:45

ಲೇಖಕಿ: ಸುಧಾ ಮೂರ್ತಿ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಆರನೇ ಮುದ್ರಣ: 2011            ಪುಟ: 152            ಬೆಲೆ: ರೂ.95/-

ಇನ್ಫೋಸಿಸ್ ಪ್ರತಿಷ್ಠಾನದ ಸಮಾಜಮುಖಿ ಕೆಲಸಕಾರ್ಯಗಳಿಂದಾಗಿ ಸುಧಾ ಮೂರ್ತಿಯವರು ಒಳ್ಳೆಯ ಹೆಸರು ಗಳಿಸಿದ್ದಾರೆ. ತನ್ನ ಇತರ ಬರಹಗಳ ಜೊತೆಗೆ, ಅಲ್ಲಿನ ಕೆಲಸದ ಸಂದರ್ಭಗಳಲ್ಲಿ ತನಗಾದ ಅನುಭವಗಳನ್ನೂ ಬರಹಗಳಾಗಿಸಿ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ.

ಇದರಲ್ಲಿನ ಬಹುಪಾಲು ಬರಹಗಳು ಆ ಅನುಭವಗಳ ಆಧಾರಿತ. ಈ ಬರಹಗಳ ಬಗ್ಗೆ ಮುನ್ನುಡಿಯಲ್ಲಿ ಸುಧಾ ಮೂರ್ತಿಯವರ ನೇರಾನೇರ ಮಾತು ಹೀಗಿದೆ: “ಅನುಭವಗಳು ಎಲ್ಲರಿಗೂ ಆಗುತ್ತಲೇ ಇರುತ್ತವೆ. ಆದರೆ ನನ್ನ ಅನುಭವಗಳೇ ವಿಚಿತ್ರ. ಅದಕ್ಕೆ ನಾನು ಮಾಡುವ ಕೆಲಸವೇ ಕಾರಣ. ನನ್ನ ಅನುಭವಗಳ ಬರಹವು ಕಾಲ್ಪನಿಕವಲ್ಲ. ಅವೆಲ್ಲಾ ಸತ್ಯ ಘಟನೆಗಳು. ಬರೆಯುವಾಗ ಹೆಸರನ್ನೂ, ಸ್ಥಳಗಳನ್ನೂ ಬದಲಿಸುತ್ತೇನೆ. ಆ ವ್ಯಕ್ತಿಗಳ ಅನುಮತಿಯನ್ನೂ ತೆಗೆದುಕೊಳ್ಳುತ್ತೇನೆ. ಹೀಗಾಗಿ ಈ ಅನುಭವಗಳ ಬರಹ ನಿಷ್ಠೆಯಿಂದ ಕೂಡಿದೆ. ಅಂತೆಯೇ ಜನಪ್ರಿಯವಾಗಿದೆ…..

…… ಕೆಲವು ವೇಳೆ ಈ ನನ್ನ ಅನುಭವಗಳು ಯಾಕೆ ಇಷ್ಟೊಂದು ಜನಪ್ರಿಯವಾಗಿವೆ? ಎಂದು ಅಚ್ಚರಿ ಪಡುತ್ತೇನೆ. ಭಾರತದ ಎಲ್ಲ ಭಾಷೆಗಳಲ್ಲಿ ಈ ಪುಸ್ತಕಗಳು ಪ್ರಕಟವಾಗಿವೆ. ಅಪಾರ ಜನಪ್ರಿಯವಾಗಿವೆ. ಬಹುಶಃ ಅದಕ್ಕೆ ಕಾರಣ ನಯನಾಜೂಕಿನ ಲೇಪನವಿಲ್ಲದೆ, ಮುಚ್ಚಿಡುವ ಗೋಜಿಗೆ ಹೋಗದೆ ಬರೆದ ಸತ್ಯ ವರದಿ. ಸತ್ಯ ಯಾವಾಗಲೂ ಶ್ರೇಷ್ಠ. ಮಾನವ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಸತ್ಯಕ್ಕೆ ಬೆಲೆ ಕೊಡುತ್ತಾನೆ. ಕೆಲವು ವೇಳೆ ಸತ್ಯ ಕಹಿ ಎನಿಸಿದರೂ ಕಾಲಾಂತರದಲ್ಲಿ ಸತ್ಯ ಮಾತ್ರ ಬಾಳುತ್ತದೆ. …."

Saturday, August 19, 2023 - 09:36

ಲೇಖಕ: ನಾಗರಾಜ ವಸ್ತಾರೆ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಪ್ರಕಟಣೆ: 2012             ಪುಟ: 194            ಬೆಲೆ: ರೂ.125/-

ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.  

Saturday, August 19, 2023 - 09:33

ಲೇಖಕರು: ಲೋಹಿತ್ ನಾಯ್ಕರ
ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ
ಪ್ರಕಟಣೆ: 2010           ಪುಟ: 120          ಬೆಲೆ: ರೂ.70/-

ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ ಎದುರಾಗುವ ಮಾನವಹಕ್ಕು ಪ್ರಕರಣಗಳ ದಾಖಲಾತಿಗಳಲ್ಲ. ಮಾನವೀಯ ಸಂಬಂಧಗಳು ಮತ್ತು ಮಾನವಹಕ್ಕುಗಳ ಸಂಕೀರ್ಣ ಒಳನೋಟಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಬರಹಗಳು ಇವು.

“ಪಿಂಕಿ ಮದುವೆಯಾಗಿ ಹೋದಾಗ” ಎಂಬ ಮೊದಲ ಕತೆ, ಕಥಾನಾಯಕನ ಆತ್ಮವೃತ್ತಾಂತದ ಶೈಲಿಯಲ್ಲಿದೆ. ಕೊಲೆಯ ಶಿಕ್ಷೆ ಅನುಭವಿಸಿ ಬಿಡುಗಡೆಯಾದವನು ಅವನು. ಈಗ ಬೆಂಗಳೂರಿನ ಶ್ರೀಮಂತ ಕುಟುಂಬವೊಂದರ ಕಾರಿನ ಚಾಲಕ. ಆ ಕುಟುಂಬದ ಮಗಳಾದ ಪಿಂಕಿ ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಆದರೆ, ಅಪ್ಪನ ಸಲುಗೆಯಿಂದಾಗಿ ಶಿಸ್ತು ತಪ್ಪಿದ್ದಾಳೆ; ಕೆಟ್ಟವರ ಸಹವಾಸಕ್ಕೆ ಬಿದ್ದಿದ್ದಾಳೆ. ಅದೊಂದು ದಿನ ಮುಂಜಾನೆ ಮೈಸೂರಿಗೆ ಹೊರಟ ಕುಟುಂಬದ ಯಜಮಾನ ಅಲ್ಲೊಂದು ಜನಸಂಚಾರವಿಲ್ಲದ ಸ್ಥಳದಲ್ಲಿ ನಾಲ್ವರು ಆಗಂತುಕರಿಗೆ ಸೂಟ್‌ಕೇಸೊಂದನ್ನು ಹಸ್ತಾಂತರಿಸಿದಾಗ ಚಾಲಕನಿಗೆ ಎಲ್ಲವೂ ಅರ್ಥವಾಯಿತು - ಅದು ಪಿಂಕಿಯ ಅಪಹರಣವಾಗದಂತೆ ಪಾವತಿಸಿದ “ರಕ್ಷಣಾ ಹಣ” ಎಂಬುದು. ಆತನೀಗ ತನಗೆ ಜೈಲುವಾಸದಲ್ಲಿ ಪರಿಚಿತರಾಗಿದ್ದ ಬೆಂಗಳೂರಿನ ಗೂಂಡಾಗಳನ್ನು ಸಂಪರ್ಕಿಸಿ, ಆ ರಕ್ಷಣಾ ಹಣವನ್ನು ಕುಟುಂಬದ ಯಜಮಾನನಿಗೆ ವಾಪಾಸು ಕೊಡಿಸುತ್ತಾನೆ. ಅನಂತರ ಹೆತ್ತವರು ಬೇಗನೇ ಪಿಂಕಿಯ ಮದುವೆ ಮಾಡಿಸುತ್ತಾರೆ.

Pages