ಲೇಖಕರು: ರಸ್ಕಿನ್ ಬಾಂಡ್
ಕನ್ನಡಕ್ಕೆ: ಅಹಲ್ಯಾ ಚಿಂತಾಮಣಿ
ಚಿತ್ರಗಳು: ಸುದ್ಧಸತ್ವ ಬಸು
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಮರುಮುದ್ರಣ: 2004 ಪುಟ: 96 ಬೆಲೆ: ರೂ. 25/-
ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ.
ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು ಬರೆದಿರುವ ಕೆಲವು ಮಾತುಗಳು: (ಬೆಟ್ಟದ ತಾಣಕ್ಕೆ ಹೋಗಿದ್ದ ಕೆನ್ ಅಂಕಲ್‌ಗೆ ದಾರಿ ತಪ್ಪಿ, ಒಯ್ದ ಆಹಾರ ಮುಗಿದು, ಸುಸ್ತಾಗಿ ಮನೆಗೆ ಮರಳಿದ ಬಳಿಕ ಎರಡು ದಿನ ರಸ್ಕಿನ್ ಮತ್ತು ಅಜ್ಜಿ ಅಂಕಲ್ ಮನೆಗೆ ಊಟ ಒಯ್ದು ಕೊಡುತ್ತಿದ್ದರು. ಆ ಸಂದರ್ಭದಲ್ಲಿ) "ಅವರಿಗೆ ಸ್ವಲ್ಪವೂ ಕೃತಜ್ನತೆ ಇರಲಿಲ್ಲ. ನನಗನ್ನಿಸುತ್ತೆ ಕೆಲವು ಅಂಕಲ್‌ಗಳು ಯಾವಾಗಲೂ ಅದೇ ತರಹ ಇರುತ್ತಾರೆ. ಅವರು ಎಂದೂ ಬದಲಾಗುವುದಿಲ್ಲ.”
ಅದೊಂದು ದಿನ ಕೆನ್ ಅಂಕಲ್ ಬಗ್ಗೆ ರಸ್ಕಿನ್ ಬಳಿ ಅಜ್ಜಿ ಹೇಳುತ್ತಾರೆ, “.... ಒಬ್ಬ ಯುವಕ ಬಹಳ ದಿವಸ ಕೆಲಸವಿಲ್ಲದೆ ಕಾಲ ಕಳೆಯುವುದು ಒಳ್ಳೆಯದಲ್ಲ … ಅವನಿಗೀಗ ನಲವತ್ತು ವರುಷ ವಯಸ್ಸು …" ಅಂತೂ ಆ ವಯಸ್ಸಿನಲ್ಲಿ ಕೆನ್ ಅಂಕಲ್ ತನ್ನ ಜೀವನದಲ್ಲಿ ಮೊದಲ ಬಾರಿ ಒಂದು ಉದ್ಯೊಗ ಹುಡುಕಲು ತಯಾರಾಗುತ್ತಾರೆ. ಅನಂತರ ಆ ಊರಿನಲ್ಲಿ ವಾಸವಾಗಿದ್ದ ಮಹಾರಾಜರ ಜೊತೆ ಡಬಲ್ಸ್ ಟೆನಿಸ್ ಆಟದ ಜೊತೆಗಾರ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅದಾಗಿ, ಕೇವಲ ಎರಡೇ ತಿಂಗಳಲ್ಲಿ ಮಹಾರಾಜರು “ನಾಳೆಯಿಂದ ನಿನ್ನ ಸೇವೆಯ ಅವಶ್ಯಕತೆ ನಮಗಿಲ್ಲ ಮಿಸ್ಟರ್ ಕೆನೆತ್ ಬಾಂಡ್” ಎಂದು ಅವರನ್ನು ಮನೆಗೆ ಕಳಿಸುತ್ತಾರೆ. ಯಾಕೆಂದರೆ ತಮ್ಮೊಂದಿಗೆ ಟೆನಿಸ್ ಆಟದಲ್ಲಿ ಸೋಲುವ ಜೊತೆಗಾರ ಮಹಾರಾಜರಿಗೆ ಬೇಕಾಗಿತ್ತು! ಆದರೆ ಕೆನ್ ಅಂಕಲ್ ಪ್ರತೀ ಬಾರಿ ಟೆನಿಸ್ ಆಟದಲ್ಲಿ ಗೆಲ್ಲುತ್ತಿದ್ದರು.
ಎರಡನೆಯ ಭಾಗ “ಪಲಾಯನದ ಸಾಹಸ ಯಾತ್ರೆ”. ಹತ್ತು ಅಧ್ಯಾಯಗಳಲ್ಲಿ ರಸ್ಕಿನ್ ಬಾಂಡ್ ಸ್ಕೂಲಿನಿಂದ ಪಲಾಯನ ಮಾಡಿದ ರೋಚಕ ಕತೆ. ಅವರಾಗ ಉತ್ತರ ಭಾರತದ ಗಿರಿಧಾಮ ಪಹಾಡ್‌ಗಂಜ್‌ನ ಅರುಂಡೇಲ್ ಬೋರ್ಡಿಂಗ್ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರಿಗೆ ಆ ಶಾಲೆ ಬೇಸರ ತರಿಸಿತ್ತು. ಅವರ ಸಹಪಾಠಿ ದಲ್‌ಜಿತ್ ಕೂಡ ಶಾಲೆ ತೊರೆದು ಹೋಗಲು ಕಾಯುತ್ತಿದ್ದ. ಆಗ, ರಸ್ಕಿನ್‌ಗೆ ಅವರ ಜಿಮ್ ಚಿಕ್ಕಪ್ಪನಿಂದ ಮಗದೊಂದು ಕಾಗದ ಬರುತ್ತದೆ. ಹಡಗಿನಲ್ಲಿ ಪ್ರಪಂಚ ಸುತ್ತುತ್ತಾ ಇರುವವರು ಜಿಮ್ ಚಿಕ್ಕಪ್ಪ. ಅವರ ಹಡಗು ಮಾಸಾಂತ್ಯದಲ್ಲಿ ಗುಜರಾತಿನ ಜಾಮ್‌ನಗರ ಬಂದರಿಗೆ ಬರುವುದಿತ್ತು.
ಪಹಾಡ್‌ಗಂಜ್‌ನಿಂದ ಜಾಮ್‌ನಗರಕ್ಕೆ 800 ಮೈಲು ದೂರ. ಹೇಗಾದರೂ ಮಾಡಿ ಚಿಕ್ಕಪ್ಪನ ಹಡಗು ಜಾಮ್‌ನಗರಕ್ಕೆ ಬಂದಾಗ ಅಲ್ಲಿಗೆ ತಲಪಿ, ಅವರ ಹಡಗನ್ನೇರಿ ಪ್ರಪಂಚ ಸುತ್ತಬೇಕೆಂದು ರಸ್ಕಿನ್ ಮತ್ತು ದಲ್‌ಜಿತ್ ನಿರ್ಧರಿಸುತ್ತಾರೆ. ರಾತ್ರಿ ಇತರ ಸಹಪಾಠಿಗಳೆಲ್ಲ ಮಲಗಿದ ನಂತರ ಶಾಲೆಯ ವ್ಯಾಯಾಮಶಾಲೆಯಲ್ಲಿ ರಹಸ್ಯ ಸಭೆ ನಡೆಸುತ್ತಾರೆ. ದಲ್‌ಜಿತ್ ಭೂಪಟ ತಂದಿದ್ದ. ಪಹಾಡ್‌ಗಂಜ್‌ನಿಂದ ೨೦ ಕಿಮೀ ದೂರ ನಡೆದು ಬೆಟ್ಟವಿಳಿದು ಡೆಹ್ರಾಡೂನ ತಲಪುವುದು; ಅಲ್ಲಿಂದ ರೈಲಲ್ಲಿ ಢೆಲ್ಲಿಗೆ ಪ್ರಯಾಣಿಸುವುದು. ಅನಂತರ ಹೇಗೋ ಜಾಮ್‌ನಗರಕ್ಕೆ ಧಾವಿಸುವುದು ಎಂಬುದವರ ಯೋಜನೆ. ಶಾಲೆಯ ಪ್ರಿನ್ಸಿಪಾಲ್ ತಮ್ಮನ್ನು ಹುಡುಕಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆಂದು ಅವರಿಗೆ ತಿಳಿದಿತ್ತು. ಆದರೂ ಮರುದಿನ ರಾತ್ರಿ ಹತ್ತು ಗಂಟೆಗೆ ಹಾಸ್ಟೆಲ್ ತೊರೆದು ಹೋಗಲು ನಿರ್ಧರಿಸುತ್ತಾರೆ.
ಹಾಗೆ ಶುರುವಾಯಿತು ಜಾಮ್‌ನಗರಕ್ಕೆ ರಸ್ಕಿನ್ ಮತ್ತು ದಲ್‌ಜೀತರ ಪಲಾಯನ. ಮರುದಿನ ಮುಂಜಾನೆ ಡೆಹರಾಡೂನ್ ರೈಲು ನಿಲ್ದಾಣದ ಬದಲಾಗಿ ಮುಂದಿನ ರೈಲು ನಿಲ್ದಾಣದಲ್ಲಿ (ಇನ್ನೂ ಹತ್ತು ಮೈಲು ದೂರದಲ್ಲಿ) ರೈಲು ಹತ್ತುವ ಯೋಜನೆ. ಯಾಕೆಂದರೆ, ಶಾಲೆಯ ಪ್ರತಿನಿಧಿಗಳು ಅಷ್ಟರಲ್ಲೇ ಡೆಹರಾಡೂನ್ ನಿಲ್ದಾಣ ತಲಪಿ, ತಮ್ಮನ್ನು ಹುಡುಕಿ ಹಿಡಿಯಲು ಪ್ರಯತ್ನಿಸುತ್ತಾರೆಂದು ಅವರಿಗೆ ಖಂಡಿತವಾಗಿ ಗೊತ್ತಿತ್ತು. ಅಂತೂ ಬೆಟ್ಟವಿಳಿದು, ಡಾಬಾದಲ್ಲಿ ಚಹಾ ಕುಡಿದು, ಹುಲಿಯೊಂದರಿಂದ ಪಾರಾಗಿ, ಎತ್ತಿನ ಗಾಡಿಯೊಂದನ್ನು ಹತ್ತಿ ಮುಂದಿನ ನಿಲ್ದಾಣವಾದ ರಾಯ್‌ವಾಲಾ ತಲಪುತ್ತಾರೆ.
ಅಲ್ಲಿ ರೈಲು ಹತ್ತಿದ ರಸ್ಕಿನ್ ಮತ್ತು ದಲ್‌ಜೀತ್ ಹಳೆ ಡೆಲ್ಲಿ ರೈಲು ನಿಲ್ದಾಣದಲ್ಲಿ ಇಳಿಯುತ್ತಾರೆ. ಅಲ್ಲಿ ವಿಪರೀತ ಜನಸಂದಣಿ. ಆಗ ಅರುಂಡೇಲ್ ಸ್ಕೂಲಿನ ಅಧ್ಯಾಪಕ ಜೈನ್ ರಸ್ಕಿನ್‌ಗೆ ಕಾಣಿಸುತ್ತಾರೆ. ಅವರೂ ಇವರಬ್ಬರನ್ನು ಕಂಡು, “ಹುಡುಗರಾ, ಬನ್ನಿ ಇಲ್ಲಿ!” ಎಂದು ಕೂಗುತ್ತಾರೆ. ಇವರಿಬ್ಬರೂ ಜನರ ನಡುವೆ ಎದ್ದೆವೋ ಬಿದ್ದೆವೋ ಎಂದು ಓಡುತ್ತಾ ಅವರಿಂದ ತಪ್ಪಿಸಿಕೊಳ್ಳುತ್ತಾರೆ.
ಅಲ್ಲಿಂದ ಅವರಿಬ್ಬರ ಪ್ರಯಾಣ ಜೈಪುರಕ್ಕೆ ಒಂದು ಟ್ರಕ್‌ನಲ್ಲಿ ಎಮ್ಮೆಯೊಂದರ ಜೊತೆ! ಅದರ ಚಾಲಕ ದಲ್‌ಜೀತ್‌ನ ದೂರದ ಬಂಧು. ಅನಂತರ ಡಕಾಯಿತರ ಕೈಗೆ ಸಿಕ್ಕಿ ಬಿದ್ದ ಅವರಿಬ್ಬರು ಬಚಾವಾದದ್ದೇ ಪುಣ್ಯ. ತದನಂತರ ತೆರೆದ ಗೂಡ್ಸ್ ವ್ಯಾಗನಿನಲ್ಲಿ ಜಾಮ್ ನಗರ ತಲಪುತ್ತಾರೆ. ಹಡಗುಕಟ್ಟೆಗೆ ಧಾವಿಸುತ್ತಾರೆ. ಅಲ್ಲಿಗೆ ಮುಟ್ಟಿದಾಗ ರಸ್ಕಿನ್‌ನ ಚಿಕ್ಕಪ್ಪ ಜಿಮ್ ಅವರ ಹಡಗು ಆಗಷ್ಟೇ ಹೊರಟು ಹೋಗಿತ್ತು.
ಇಬ್ಬರು ಹೈಸ್ಕೂಲ್ ಹುಡುಗರು ಜೀವದ ಹಂಗು ತೊರೆದು ಜಾಮ್ ನಗರ ತಲಪಿದರೂ ಅವರ ಆಸೆ ಕೈಗೂಡಲಿಲ್ಲ. ಆದರೂ “ಈ ವರುಷ, ಮುಂದಿನ ವರುಷ, ಯಾವಾಗಲಾದರೂ …" ತಮ್ಮ ಪ್ರಪಂಚ ಪರ್ಯಟನದ ಕನಸು ನನಸಾಗುವ ಆಶಾವಾದದೊಂದಿಗೆ ಅವರು ಮುಂದಿನ ದಿನಗಳನ್ನು ಎದುರು ನೋಡುತ್ತಾರೆ. ಯಾಕೆಂದರೆ ಹಡಗು ತಪ್ಪಿದರೆ ಏನು ಮಾಡಬೇಕೆಂದು ಅವರಿಬ್ಬರೂ ಆಗಲೇ ಮಾತಾಡಿಕೊಂಡಿದ್ದರು.