ಪರಿಚಯ80: ಫೇಬರನ ಕೀಟಲೋಕ

ಲೇಖಕರು: ಬಿ.ಎಸ್.ರುಕ್ಕಮ್ಮ
ಪ್ರಕಾಶಕರು: ಶ್ರೀ ಪ್ರಕಾಶನ, ನಂ.15, "ಎನ್" ಬ್ಲಾಕ್, ರಾಜಾಜಿ ನಗರ, ಬೆಂಗಳೂರು
ಮರುಮುದ್ರಣ: 1999,      ಪುಟ:78,      ಬೆಲೆ: ರೂ.15

ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ ಪರಿಚಯಿಸಿದವರು ಬಿ.ಎಸ್. ರುಕ್ಕಮ್ಮ.

ಮಕ್ಕಳಾದ ಬಾಲು, ವಸಂತಿ ಮತ್ತು ಪುಟ್ಟ ಬಾಲಕ ಶ್ರೀನಿವಾಸನೊಡನೆ ಅವರ ಹಿರಿಯಕ್ಕ ಶ್ರೀಮತಿ ನಡೆಸುವ ಸಂಭಾಷಣೆಯ ರೂಪದಲ್ಲಿ ಫೇಬರನ ಕೀಟಲೋಕದ ವಿಸ್ಮಯಗಳನ್ನು ಈ ಪುಸ್ತಕದಲ್ಲಿ ಲೇಖಕಿ ತೆರೆದಿಡುತ್ತಾರೆ.

“ಅಬ್ಬಬ್ಬಾ, ನನ್ನ ಕೆನ್ನೆ ಪಕ್ಕದಲ್ಲೇ ಹಾರೋಯ್ತು. ಕೆಂಪುದು. ಸದ್ಯ ಕಚ್ಚಲಿಲ್ಲ. ಅಕ್ಕ, ಅದೆಂಥ ಹುಳು?” ಎಂಬ ಪ್ರಶ್ನೆಗೆ ಉತ್ತರವಾಗಿ "ಅದು ಕಣಜ (ಡಿಗ್ಗರ್ ವಾಸ್ಪ್). ಅವುಗಳ ಕಥೆ ಸೊಗಸು. ಅದು ನೆಲ ತೋಡಿ ಗೂಡು ಮಾಡುತ್ತೆ ...” ಎಂಬ ಮಾತಿನೊಂದಿಗೆ "ಶ್ರೀಮತಿ ಕಣಜ" ಎಂಬ ಅಧ್ಯಾಯ ಆರಂಭಿಸುತ್ತಾರೆ. “ಅವುಗಳಲ್ಲಿ ಕಣಜದ ಹೆಂಡತಿ ನೆಲ ತೋಡುತ್ತದೆ. ಗಂಡು ಕಣಜ ಏನೂ ಮಾಡೋಲ್ಲ. ಉಂಡಾಡಿ ಗುಂಡ …ತಾನು ಮಕರಂದವನ್ನು ಕುಡಿದು ಬದುಕಿದರೂ, ಮಕ್ಕಳಿಗೆ ಮಾಂಸ ಬೇಕು ಎನ್ನುವುದು ಅದಕ್ಕೆ ಗೊತ್ತು. ಆದ್ದರಿಂದ ತನ್ನಿಂದ ಎರಡರಷ್ಟು ಭಾರವಾದ ದೊಡ್ಡ ಜೀರುಂಡೆಯನ್ನು ಹೊತ್ತು ಗೂಡಿಗೆ ತರುತ್ತದೆ”ಎಂದು ಕತೆ ಮುಂದುವರಿಸುತ್ತಾರೆ.

“ತಾಳು, ತಾಳಕ್ಕ ಸ್ವಲ್ಪ. ಈಗ ಗಂಡು ಕಣಜ ಕೆಲಸಾನೇ ಮಾಡೋಲ್ಲ, ಅದನ್ನ ಗೂಡೊಳಕ್ಕೆ ಹೆಣ್ಣು ಕಣಜ ಬಿಡೋಲ್ಲ ಅನ್ನೋದು ಫೇಬರನಿಗೆ ಹೇಗೆ ಗೊತ್ತು? ಅವನು ನೋಡಿದ ಯಾವುದೋ ಒಂದು ಗಂಡು ಕಣಜ ಹಾಗೆ ಕಾಲ ಕಳೆದಿರಬೇಕು. ಹೆಣ್ಣು ಕಣಜ ಮರಿಗಳಿಗೋಸ್ಕರಾನೇ ಜೀರುಂಡೆ ತಂದಿದೆ ಅಂತ ಹೇಗೆ ಗೊತ್ತು? ಗೂಡೊಳಗೇ ಕೂತುಕೊಂಡು ಗುಟ್ಟಾಗಿ ತಾನೇ ತಿಂದಿರಬಹುದು" ಎಂಬ ಬಾಲುವಿನ ತಕರಾರಿಗೆ ಉತ್ತರವಾಗಿ ಫೇಬರ ಇವನ್ನೆಲ್ಲ ತಿಳಿಯಲಿಕ್ಕಾಗಿ ಪಟ್ಟ ಕಷ್ಟವನ್ನು ವಿವರಿಸುತ್ತಾರೆ.

“...ಫೇಬರ್ ಇದನ್ನೆಲ್ಲ ಕಂಡುಹಿಡಿಯೋದಕ್ಕೆ ತನ್ನ ಜೀವನವನ್ನೇ ತೇಯ್ದಿದ್ದಾನೆ - ಹಗಲು, ರಾತ್ರಿ, ಚಳಿ, ಮಳೆ, ಬಿಸಿಲು ಎನ್ನದೆ ಅವುಗಳ ಜೊತೆ ಕಾಲ ಕಳೆದಿದ್ದಾನೆ. ಈಗ ನೋಡಪ್ಪ, ಕಣಜಗಳಲ್ಲಿ ಎಷ್ಟೋ ವಿಧ ಇವೆ...ಆದ್ದರಿಂದ ಫೇಬರ್ ತಾನು ಪರೀಕ್ಷೆ ಮಾಡುತ್ತಿರುವ ಜಾತಿಯ ಕಣಜವನ್ನು ನೋಡಿದ ತಕ್ಷಣ ಗುರುತಿಸಬೇಕು. ನಂತರ ಅದನ್ನು ಹಿಂಬಾಲಿಸಿ ಹೋಗಿ …ಕಣಜದ ಗೂಡನ್ನು ಅಗೆದು ನೋಡಬೇಕು...ಒಂದು ಗೂಡು ಕೆದಕಿ ನೋಡಿದರೆ ಸಾಲದು...ಫೇಬರ್ ನೂರಾರು ಗೂಡುಗಳನ್ನು ಪರೀಕ್ಷಿಸಿದ್ದಾನೆ. ಶ್ರೀಮಾನ್ ಕಣಜಪ್ಪನವರು ಯಾವ ಕೆಲಸವನ್ನೂ ಮಾಡೋದಿಲ್ಲ ಎನ್ನಬೇಕಾದರೆ, ಫೇಬರ್ ಎಷ್ಟು ದಿನ ಉರಿ ಬಿಸಿಲಿನಲ್ಲಿ, ಸಂಜೆಯಲ್ಲಿ, ಬೆಳಗಿನಲ್ಲಿ ತಾಳ್ಮೆಯಿಂದ ಕಾದು ನೋಡಿರಬೇಕು.... ಆದರೆ ಕಣಜಗಳು ಹಾರಿಬಿಡುತ್ತವೆ... ಫೇಬರ್ ಅವುಗಳ ಹಿಂದೆ ಓಡಬೇಕು....”

ಫೇಬರನ ಕುತೂಹಲ ಗುಣವನ್ನು ವಿವರಿಸಿದ ಪರಿ ಹೀಗಿದೆ: “ (ಹೆಣ್ಣು ಕಣಜ) ಇಷ್ಟೆಲ್ಲ ಅಗೆಯೋದು ಯಾಕಿರಬಹುದು! ಅದು ಮನೆಯೊಳಗೆ ಏನೋ ಜೋಪಾನ ಮಾಡಿರಬೇಕು. ಆ (ನೆಲದಾಳದ) ಮನೆಯ ಇನ್ನೊಂದು ಮೂಲೆಗಿರುವ ಒಳಗಿನ ಕೋಣೆಯನ್ನು ಕೆದಕಿ ನೋಡಿದ ಫೇಬರ್. ಆಹಾ, ಸಿಕ್ಕಿತು! ಐದು ದೊಡ್ಡ ದೊಡ್ಡ ಜೀರುಂಡೆಗಳು. ಎಲ್ಲ ಸತ್ತಿವೆ, ಸತ್ತಿವೆಯೇ? ನಿಜವಾಗಿ? ಆದರೆ ಅವುಗಳ ಬಣ್ಣ ಸ್ವಲ್ಪವೂ ಮಾಸಿಲ್ಲ. ಎಷ್ಟು ಹೊಸದಾಗಿ ಕಾಣುತ್ತಿವೆ! ಅವುಗಳ ಕಾಲುಗಳು ಬಿಗಿದುಕೊಂಡಿಲ್ಲ. ಯಾವುದರಿಂದಲೋ ಕೆಣಕಿದರೆ ಕಾಲುಗಳನ್ನು ಸ್ವಲ್ಪ ಅಲುಗಿಸುತ್ತವೆ. ಸತ್ತರೆ ಹೀಗೂ ಮಾಡುವುದುಂಟೇ? ತಮ್ಮ ಪಾಡಿಗೆ ಬಿಟ್ಟರೆ ಸ್ವಲ್ಪವೂ ಅಲುಗದೇ ಬಿದ್ದಿವೆ! ಇದೇನು ವಿಚಿತ್ರ! ಜೀವ ಇರುವ ಪ್ರಾಣಿಯ ಲಕ್ಷಣವೇ ಇದು?”

ಇದರ ರಹಸ್ಯವನ್ನು ಫೇಬರ್ ಭೇದಿಸಿದ್ದನ್ನು ಮಕ್ಕಳಿಗೆ ಹೀಗೆ ಬಣ್ಣಿಸುತ್ತಾರೆ, “...ಹಾಗೆ ಒಂದು ದಿನ ಕಣಜಮ್ಮ ಸೊಗಸಾದ ಹೊಸ ಜೀರುಂಡೆ ತಂದಾಗ, ಫೇಬರ್ ಅದನ್ನು ತನ್ನ ಇಕ್ಕುಳದಿಂದ ಎಳೆದು ಕಿತ್ತುಕೊಂಡು ಬಿಟ್ಟ. ಅಮ್ಮಾವರು ರೇಗಾಡಿದರು.... ಕೊನೆಗೆ ಏನೂ ತೋಚದೆ (ಪೇಬರ್ ಅಲ್ಲಿಟ್ಟಿದ್ದ) ಆ ಕೊಳಕು ಜೀರುಂಡೆಯನ್ನೇ ತೆಗೆದುಕೊಳ್ಳಲು ಹೋದರು. ಆದರೆ ಆ ಜೀರುಂಡೆ ಓಡಾಡುತ್ತಿದೆ! ನಾನು ಆಗಲೇ ಕೊಂದಿದ್ದೆನಲ್ಲ, ಇದೇಕೆ ಅಲುಗಾಡುತ್ತಿದೆ ಎಂದುಕೊಂಡು, ಬಿಟ್ಟು ಹೋಗದೆ, ಆ ಜೀರುಂಡೆಯ ಹತ್ತಿರ ಹೋಗಿ ಅದರ ಬೆನ್ನನ್ನು ಅಮುಕಿತು. ಅದರಲ್ಲಿನ ಒಂದು ಕೀಲು ಬಾಯಿ ಬಿಟ್ಟುಕೊಳ್ಳುವ ವರೆಗೂ ಅದುಮಿ ಅಲ್ಲಿಗೆ ಸರಿಯಾಗಿ ತನ್ನ ಕೊಂಡಿಯಿಂದ ಹಲವಾರು ಬಾರಿ ಇರಿಯಿತು. ಆ ಕ್ಷಣವೇ ಜೀರುಂಡೆ ತೆಪ್ಪಗಾಯಿತು. ಇನ್ನು ಆ ಜೀರುಂಡೆ ತಿಂಗಳುಗಟ್ಟಲೆ ಅಥವಾ ಸಾಯುವ ವರೆಗೂ ಸ್ವಲ್ಪವೂ ಬಣ್ಣಗೆಡದೇ ಬಿದ್ದಿರುತ್ತದೆ. ...”
ಮುಂದೇನಾಗುತ್ತದೆಂದು ತಿಳಿಸಿ ಕಣಜದ ಕತೆಯನ್ನು ಈ ರೀತಿಯಲ್ಲಿ ಮುಕ್ತಾಯಗೊಳಿಸುತ್ತಾರೆ, “ಅಲುಗಾಡದೆ ಬಿದ್ದ ಜೀರುಂಡೆಯ ಮೇಲೆ ಕಣಜ ಮೊಟ್ಟೆಗಳನ್ನಿಡುತ್ತದೆ. ಆ ಸಣ್ಣ ಹೊಸ ಜೀವಿಗಳು, ಮೊಟ್ಟೆಯಿಂದ ಹೊರಬಂದ ಮೇಲೆ, ಕುಳಿತ ಜಾಗದಲ್ಲೇ ಸಿಗುವ ಆ ರಸವತ್ತಾಗಿರುವ (ಜೀರುಂಡೆಯ) ಮಾಂಸವನ್ನು ತಿನ್ನಲಾರಂಭಿಸುತ್ತವೆ. ಕಾಲನ್ನೇ ಅಲುಗಿಸಲಾರದ ಆ ಜೀರುಂಡೆಗಳು ತಮ್ಮನ್ನೇ ಕೊರೆಯುವ ಈ ಹುಳಗಳನ್ನು ನಿವಾರಿಸುವುದು ಹೇಗೆ? ಆ ಕಣಜದ ಮರಿಗಳು ಜೀರುಂಡೆಯನ್ನು ಅದರ ಹೊರ ಹೊದಿಕೆಯ ವರೆಗೂ ಬಿಡದೆ ತಿನ್ನುತ್ತವೆ. ಆ ವೇಳೆಗೆ ಮರಿಗಳು ಸ್ವಲ್ಪ ಬೆಳೆದು ಹತ್ತಿರದಲ್ಲೇ ಬಿದ್ದಿರುವ ಇನ್ನೊಂದು ರುಚಿಯಾದ ಜೀರುಂಡೆಗೆ ಸರಿದು ಬಾಯಿಡುತ್ತವೆ.”

ಹೀಗೆ ಬೂವಾಡಿ (ಸೆಗಣಿ ದುಂಬಿ)ಯ ಗುಟ್ಟು, ನವಿಲುಗಣ್ಣಿನ ಪತಂಗ (ಪೀಕಾಕ್ ಮೋತ್), ಪೈನ್ ಮರದ ದಿಬ್ಬಣಿಗರು, ಹೆಜ್ಜೇಡ (ಟರಂಟುಲ)ದ ಕಥೆ, ಸಂಗೀತಗಾರರು (ತಿತ್ತಿರಿ ಅಥವಾ ಸಿಕಾಡ) ಎಂಬ ಅಧ್ಯಾಯಗಳಲ್ಲಿ ಫೇಬರ್ 180 ವರುಷಗಳ ಹಿಂದೆ ದಾಖಲಿಸಿದ ಕೀಟಗಳ ಬದುಕಿನ ರೋಚಕ ಕತೆಗಳನ್ನು ಸುಲಲಿತ ಶೈಲಿಯಲ್ಲಿ ಕನ್ನಡ ಬಲ್ಲವರಿಗೆ ನೀಡಿದ್ದಾರೆ ರುಕ್ಕಮ್ಮ.

ಪುಸ್ತಕದ ಕೊನೆಯ 30 ಪುಟಗಳಲ್ಲಿ ಫೇಬರನ ಕತೆಯನ್ನೇ ಹಿರಿಯಕ್ಕನ ಮಾತಿನಲ್ಲಿ ಮಕ್ಕಳಿಗೆ ತಿಳಿಸುತ್ತಾರೆ. ಫೇಬರ್ ಫ್ರಾನ್ಸಿನ ದಕ್ಷಿಣ ಭಾಗದಲ್ಲಿ ಬಾಳಿದವನು. ಸಾಮಾನ್ಯ ಹುಡುಗನಾಗಿದ್ದ ಫೇಬರ್ ಅಸಾಮಾನ್ಯ ಕೀಟಪರಿಣತನಾಗಿ ಬೆಳೆದದ್ದು ಒಂದು ಅದ್ಭುತ ಕತೆ. ಸೆಂಟ್ ಲಿಯಾನ್ ಎಂಬ ಊರಿನಲ್ಲಿ 21 ಡಿಸೆಂಬರ್ 1823ರಲ್ಲಿ ಅವನ ಜನನ. ಮಗುವಿಗಿಟ್ಟ ಹೆಸರು ಜೀನ್ ಹೆನ್ರಿ ಕ್ಯಾಸಿಮಿರ್. ಮನೆಯಲ್ಲಿ ಕಡು ಬಡತನ. ಹಾಗಾಗಿ ಸ್ವಲ್ಪ ದೂರದ ಹಳ್ಳಿಯಲ್ಲಿ ಅಜ್ಜ-ಅಜ್ಜಿಯ ಮಮತೆಯಲ್ಲಿ ಪ್ರಕೃತಿಯ ಮಡಿಲಲ್ಲಿ ಬೆಳೆದ ಫೇಬರ್. ಆಗಲೇ ಎಲ್ಲ ಜೀವಿಗಳ ಬಗ್ಗೆ ಅವನಲ್ಲಿ ಆದಮ್ಯ ಕುತೂಹಲ ಚಿಗುರಿತು. ಅದು ಮುಂದೆ ಪ್ರಾಣಿ ಹಾಗೂ ಸಸ್ಯಗಳ ಹುಚ್ಚಾಗಿ ಬೆಳೆಯಿತು.

ಹದಿನೆಂಟನೆಯ ವಯಸ್ಸಿನಲ್ಲಿ ಅವನಿಗೆ ಶಾಲೆಯೊಂದರಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಊರಿನ ಹೊರಭಾಗದಲ್ಲಿ ರಸ್ತೆ ಬದಿಯಲ್ಲಿ ಕೀಟಗಳನ್ನು ನೋಡುತ್ತಾ ಗಂಟೆಗಟ್ಟಲೆ ಕುಳಿತಿರುತ್ತಿದ್ದ. ನೋಡಿದವರು "ಇವನಿಗೆ ಹುಚ್ಚು" ಎಂದು ಆಡಿಕೊಳ್ಳುತ್ತಿದ್ದರು. ಆಗೊಮ್ಮೆ ಕೀಟಶಾಸ್ತ್ರದ ಪುಸ್ತಕವೊಂದನ್ನು ಕಂಡ. ಅದರ ಬೆಲೆ ಅವನ ಒಂದು ತಿಂಗಳ ಸಂಬಳದಷ್ಟು! ಆದರೂ ಅದನ್ನು ಖರೀದಿಸಿದ. ಪೂರ್ತಿ ಓದಿದ. ಅನಂತರ ಕೀಟಗಳ ಬಗ್ಗೆ ಅವನ ಆಸಕ್ತಿ ಒಂದಕ್ಕೆ ನಾಲ್ಕರಷ್ಟು ಹೆಚ್ಚಿತು.

ಕ್ರಮೇಣ ಪಠ್ಯ ಪುಸ್ತಕಗಳನ್ನು ಬರೆದ ಫೇಬರ್. ಅನಂತರ ಕೀಟಲೋಕದ ತನ್ನ ಸಂಶೋಧನೆಗಳನ್ನು "ಸೊವೆನೀರ್ ಎಂಟಿಮಾಲಜಿಕ್ಸ್"ನ ಮೊದಲ ಸಂಪುಟದಲ್ಲಿ ಪ್ರಕಟಿಸಿದ. ಅದಾದ ಬಳಿಕ 218 ಕತೆಗಳಲ್ಲಿ ತಾನು ಅಗಾಧ ತಾಳ್ಮೆಯಿಂದ ಪ್ರಕೃತಿಯಲ್ಲಿ ಕಂಡದ್ದನ್ನು, ತಿಳಿದುಕೊಂಡದ್ದನ್ನೆಲ್ಲ ಬರೆದ. 11 ಅಕ್ಟೋಬರ್ 1915ರಲ್ಲಿ (91ನೇ ವಯಸ್ಸಿನಲ್ಲಿ) ಫೇಬರ್ ಈ ಲೋಕವನ್ನು ತೊರೆದರೂ ತನ್ನ "ಕೀಟಲೋಕ"ದಲ್ಲಿ ಇನ್ನೂ ಜೀವಂತವಾಗಿದ್ದಾನೆ.
ಫೋಟೋ: ಜೀನ್ ಹೆನ್ರಿ ಫೇಬರ್ … ಕೃಪೆ: ವಿಕಿಪೀಡಿಯಾ