ಲೇಖಕರು: ಸುಂದರ್ ಸರುಕ್ಕೈ
ಕನ್ನಡಕ್ಕೆ: ಮಾಧವ ಚಿಪ್ಪಳಿ, ಚಿತ್ರಗಳು: ಪ್ರಿಯಾ ಕುರಿಯನ್
ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪ್ರಕಟ: 2021 ಪುಟ: 80 ಬೆಲೆ: ರೂ. 260/-
ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ ಸಂಗತಿಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ.
ಪುಸ್ತಕದ ಪ್ರಸ್ತಾವನೆಯಲ್ಲಿ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ ಎರಡು ಭಾಗಗಳಿವೆ. “ಮಕ್ಕಳಿಗಾಗಿ” ಭಾಗದಲ್ಲಿ ಬರೆದಿರುವ ಕೆಲವು ವಿಷಯಗಳು ಹೀಗಿವೆ: “ಈ ಪುಸ್ತಕವು ನಿಮಗೆ ತಾತ್ತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ತತ್ತ್ವಶಾಸ್ತ್ರ ಎಂದರೆ ಅದು ವಿಜ್ನಾನ, ಗಣಿತಗಳಂತೆ ಮತ್ತೊಂದು ವಿಷಯ ಮಾತ್ರವಲ್ಲ, ಅದು ಯೋಚನೆ ಮಾಡುವ ಒಂದು ಮಾರ್ಗ - ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿರುವ ನಾವು ಯಾರು ಎಂದು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗ. ನಾವು ಕಲಿಯುವ ಉಳಿದ ಎಲ್ಲ ವಿಷಯಗಳ ಅಡಿಪಾಯ ತತ್ತ್ವಶಾಸ್ತ್ರ. ಪ್ರಾಚೀನ ಸಂಸ್ಕೃತಿಗಳಲ್ಲಿ ಮೊಟ್ಟಮೊದಲು ವಿಕಾಸಗೊಂಡ ಶಾಸ್ತ್ರ ಇದು ….. ವಿಜ್ನಾನ, ಕಲೆ ಮುಂತಾದ ವಿಷಯಗಳು ತತ್ತ್ವಶಾಸ್ತ್ರದಿಂದಲೇ ಹುಟ್ಟಿದವು. ಹಾಗಾಗಿ ಅವು ತತ್ತ್ವಶಾಸ್ತ್ರದ ಮಕ್ಕಳಿದ್ದಂತೆ ….."
ಹೆಚ್ಚುಹೆಚ್ಚು ಜ್ನಾನವು ಸಂಗ್ರಹವಾದಾಗ ತತ್ತ್ವಶಾಸ್ತ್ರವು ಭೌತಶಾಸ್ತ್ರ, ಜೀವಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ, ಎಂದೆಲ್ಲ ಬೇರೆ ಬೇರೆ ವಿಷಯಗಳಾಗಿ ಬೆಳೆಯತೊಡಗಿತು. ಹಾಗಾಗಿ ತತ್ತ್ವಶಾಸ್ತ್ರವು ಈ ಎಲ್ಲ ವಿಷಯಗಳ ತಾಯಿ. ಶಾಲೆಗಳಲ್ಲಿ ನಾವು ತತ್ತ್ವಶಾಸ್ತ್ರವನ್ನು ಕಲಿಸುವುದಿಲ್ಲ. ಆದರೆ ನೀವು ಬೇರೆ ವಿಷಯಗಳನ್ನು ಕಲಿಯುವಾಗ ಸ್ವಲ್ಪಸ್ವಲ್ಪ ತತ್ತ್ವಶಾಸ್ತ್ರವನ್ನೂ ಕಲಿತಿರುತ್ತೀರಿ. ನೀವು ಯಾವಾಗಲಾದರೂ “ಇದು ನಿಜವೇ" ಅಥವಾ "ನಿನಗೆ ಇದು ಗೊತ್ತಿದೆ ಎಂದು ಹೇಗೆ ಹೇಳುತ್ತಿಯ” ಎಂದು ಕೇಳಿದಾಗ ತತ್ತ್ವಶಾಸ್ತ್ರದ ಕೆಲಸ ಮಾಡುತ್ತಿರುತ್ತೀರಿ. ಸತ್ಯ ಸುಳ್ಳುಗಳ ಬಗ್ಗೆ ಮಾತನಾಡಿದಾಗಲೂ ನೀವು ತತ್ತ್ವಶಾಸ್ತ್ರದ ಬಗ್ಗೆಯೇ ಮಾತನಾಡುತ್ತಿರುತ್ತೀರಿ. ಈ ಸಣ್ಣ ಪುಸ್ತಕವು ತತ್ತ್ವಶಾಸ್ತ್ರಜ್ನರು ಏನೇನು ಹೇಳಿದರು ಎನ್ನುವುದನ್ನು ಕಲಿಸುವುದಿಲ್ಲ. ಬದಲಿಗೆ ತತ್ತ್ವಶಾಸ್ತ್ರ ಎನ್ನುವುದು ಹೇಗೆ ನಮ್ಮ ದಿನನಿತ್ಯದ ಕಲಿಕೆಯ ಭಾಗವಾಗಿದೆ ಎನ್ನುವುದನ್ನು ತೋರಿಸುತ್ತದೆ.… ಇದು ಮಾಹಿತಿಯನ್ನು ಕೊಡುವ ಪುಸ್ತಕವಲ್ಲ. ಬದಲಿಗೆ ನೀವು ನಿಮ್ಮ ಬಗ್ಗೆಯೇ ಕಲಿಯಲಿಕ್ಕಾಗಿ ಇರುವ ಪುಸ್ತಕ. …"
“ದೊಡ್ಡವರಿಗಾಗಿ" ಭಾಗದಲ್ಲಿರುವ ಕೆಲವು ವಿಷಯಗಳು: “ನಾನು ಮಕ್ಕಳಿಗಾಗಿ ತತ್ತ್ವಶಾಸ್ತ್ರದ ಕಾರ್ಯಾಗಾರಗಳನ್ನು ಮಾಡುತ್ತೇನೆ ಎಂದಾಗ ಹಲವರು ಹುಬ್ಬೇರಿಸಿದರು. ಏಕೆಂದರೆ ಅವರ ಪ್ರಕಾರ ತತ್ತ್ವಶಾಸ್ತ್ರ ಇರುವುದು ದೊಡ್ಡವರಿಗಾಗಿ ಮಾತ್ರ. ಆದರೆ ಮೊದಲ ಕಾರ್ಯಾಗಾರ ನಡೆದಾಗ ತತ್ತ್ವಶಾಸ್ತ್ರವು ಮಕ್ಕಳಿಗೆ ಎಷ್ಟು ಅಗತ್ಯ, ಮುಖ್ಯ ಮತ್ತು ಪ್ರಸ್ತುತ ಎನ್ನುವುದು ನಮಗೆ ಸ್ಪಷ್ಟವಾಯಿತು. ಈ ಒಳನೋಟವೇ ಮಕ್ಕಳ ಹಲವು ಗುಂಪುಗಳಿಗೆ ಈ ರೀತಿಯ ಕಾರ್ಯಾಗಾರಗಳನ್ನು ಮಾಡಲು ಶಕ್ತಿಯನ್ನು ಒದಗಿಸಿತು. ಆ ಕಾರ್ಯಾಗಾರಗಳಿಂದಲೇ ಹುಟ್ಟಿದ್ದು ಈ ಪುಸ್ತಕ. …"
"ತತ್ತ್ವಶಾಸ್ತ್ರವನ್ನು ಅಧ್ಯಾಪನ ಮಾಡುತ್ತಾ, ಅದರ ಬಗ್ಗೆ ಬರೆಯುತ್ತಾ ಎಷ್ಟೋ ವರ್ಷಗಳ ನಂತರ ನನಗೆ ತತ್ತ್ವಶಾಸ್ತ್ರದ ಕುರಿತು ಮಕ್ಕಳೊಂದಿಗೆ ಮಾತನಾಡುವುದು ತೀರಾ ಅಗತ್ಯ ಮತ್ತು ತುರ್ತಿನ ಕೆಲಸ ಎಂದು ಅರಿವಾಯಿತು. ಕಾರಣವೇನೆಂದರೆ, ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಹಲವು ಹೊಸ ಸವಾಲುಗಳಿವೆ. ಇಂದು ವಿಜ್ನಾನದ ಕಲಿಕೆಯ ಬಗ್ಗೆ ಅಪಾರ ಒತ್ತನ್ನು ಕೊಟ್ಟು ಉಳಿದ ವಿಷಯಗಳ ಬೋಧನೆಯ ಬಗ್ಗೆ ನಿರ್ಲಕ್ಶ್ಯ ತೋರುತ್ತಾರೆ. ಮಿತಿಯಿಲ್ಲದಷ್ಟು ಮಾಹಿತಿ ಎಲ್ಲೆಡೆ ದೊರಕುವಂತಾದ ಈ ತಂತ್ರಜ್ನಾನ ಯುಗದಲ್ಲಿ ಕಲಿಕೆಯ ಬಗ್ಗೆ ಕೆಲವು ಮೂಲಭೂತವಾದ ಪ್ರಶ್ನೆಗಳು ಹುಟ್ಟುತ್ತವೆ. ಇವತ್ತಿನ ಶಾಲಾ ಶಿಕ್ಷಣದ ಒತ್ತು ಹೇಗಿದೆಯೆಂದರೆ ಅರ್ಥಪೂರ್ಣವಾಗಿ, ತೃಪ್ತಿಕರ ಜೀವನವನ್ನು ನಡೆಸಲು ಬೇಕಾದ ಜ್ನಾನ ಮತ್ತು ಕೌಶಲ್ಯಗಳು ಮಕ್ಕಳಿಗೆ ದೊರಕದಿರುವಂತೆ ಆಗಿ ಬಿಟ್ಟಿದೆ. ಶಿಕ್ಷಣ ಎಂದರೆ ಒತ್ತಡ ಎನ್ನುವಂತಾಗಿದೆ ಮತ್ತು ಕಲಿಕೆಯ ಖುಷಿಯ ಜಾಗದಲ್ಲಿ ಭಯ ಬಂದು ಕುಳಿತಿದೆ.… ಇದು ಮತ್ತೊಂದು ವಿಷಯದ ಮೇಲೆ ಇರುವ ಇನ್ನೊಂದು ಪುಸ್ತಕವಲ್ಲ. ಸ್ವತಂತ್ರವಾಗಿ ಯೋಚನೆ ಮಾಡಿ, ಬೇರೆ ವಿಷಯಗಳಲ್ಲಿ ಅವರು ಏನನ್ನು ಕಲಿಯುತ್ತಾರೋ ಅದರ ಆಳವಾದ ಅರ್ಥವನ್ನು ಹುಡುಕಲು ಸಾಧ್ಯವಾಗುವಂತೆ ಮಕ್ಕಳನ್ನು ಬಲಪಡಿಸುವುದು ಈ ಪುಸ್ತಕದ ಗುರಿ.” (ಭಾಗ 2 - ನಾಳೆ ಪ್ರಕಟವಾಗಲಿದೆ)
(ನಿನ್ನೆ ಪ್ರಕಟವಾದ ಭಾಗ-1ರಲ್ಲಿ ಈ ಪುಸ್ತಕದ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ 2 ಭಾಗಗಳ ಮಾಹಿತಿ ನೀಡಲಾಗಿತ್ತು.)
"ಕಲಿಯುವುದು" ಎಂಬ ಕೊನೆಯ ಅಧ್ಯಾಯ ಹೀಗೆ ಆರಂಭವಾಗುತ್ತದೆ: "ಮಕ್ಕಳು ಏಕೆ ಶಾಲೆಗೆ ಹೋಗುತ್ತಾರೆ? ಅವರು ಏಕೆ ತರಗತಿಯಲ್ಲಿ ಕುಳಿತುಕೊಳ್ಳಬೇಕು? ಅವರು ಏಕೆ ಟೀಚರ್ ಹೇಳಿಕೊಡುವ ಪಾಠಗಳನ್ನು ಕೇಳಿಸಿಕೊಳ್ಳಬೇಕು? ಶಾಲೆಗೆ ಹೋಗುವುದಕ್ಕಿಂತ ಇಡೀ ದಿನ ಆಡುತ್ತಾ ಓಡುತ್ತಾ ಕಳೆಯುವುದೇ ಎಷ್ಟೋ ಚೆನ್ನಾಗಿರುತ್ತದೆ ಎಂದು ಬಹಳ ಮಕ್ಕಳಿಗೆ ಅನ್ನಿಸಬಹುದು." ಮುಂದುವರಿದು, ಪ್ರಾಣಿಗಳು ಮತ್ತು ಮನುಷ್ಯರಿಗೆ ಒಂದು ದೊಡ್ಡ ಶಕ್ತಿ ಇದೆ. ಅದೇ ಕಲಿಕೆಯ ಶಕ್ತಿ. ಹೊಸತನ್ನು ತಿಳಿಯುವ ನಿರಂತರ ಕ್ರಿಯೆಯೇ ಕಲಿಕೆ; ಅದು ಈಗಾಗಲೇ ತಿಳಿದಿರುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಕ್ರಿಯೆಯೂ ಹೌದು ಎಂದು ವಿವರಿಸಲಾಗಿದೆ. ಬದುಕಿನಲ್ಲಿ ಪ್ರತಿ ದಿನವೂ ನಾವು ಹಲವು ವಿಚಾರಗಳನ್ನು ಕಲಿಯುತ್ತಿರುತ್ತೇವೆ ಎಂಬುದನ್ನು ಉದಾಹರಣೆಗಳ ಸಹಿತ ತಿಳಿಸಲಾಗಿದೆ.
ಹಾಗಿರುವಾಗ, ಕಲಿಕೆಗಾಗಿಯೇ ಶಾಲೆ ಎಂಬ ಬೇರೆ ಸ್ಥಳ ಏಕೆ ಬೇಕು? ಎಂಬ ಪ್ರಶ್ನೆಯನ್ನೆತ್ತಿ, ಉತ್ತರವನ್ನು ಪ್ರಸ್ತುತಪಡಿಸಲಾಗಿದೆ. ಶಾಲೆಯಲ್ಲಿ ನಾವು ಹಲವು ರೀತಿಯಲ್ಲಿ ಕಲಿಯುತ್ತೇವೆ: ನಮ್ಮ ಅನುಭವಗಳಿಂದ (ಪಂಚೇಂದ್ರಿಯಗಳಿಂದ ಒದಗುವ), ಭಾಷೆಯ ಮೂಲಕ, ಟೀಚರ್ ಹೇಳುವುದನ್ನು ಕೇಳಿಸಿಕೊಂಡು ಮತ್ತು ಸಹಪಾಠಿಗಳಿಂದ. (ಪಾಠದ ಕೋಣೆಯಲ್ಲಿ ಮತ್ತು ಹೊರಗೆ ಕೂಡ) ಕಲಿಕೆಯ ಸುಲಭ ವಿಧಾನವೆಂದರೆ ಒಂದು ಮಾಹಿತಿ ತಿಳಿದುಕೊಂಡು ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು.
ಪಠ್ಯಪುಸ್ತಕದಲ್ಲಿ ಹಲವಾರು ಮಾಹಿತಿ ಇದೆ; ಅದನ್ನು ಓದಿ ಕಲಿಯಲು ಸಾಧ್ಯ. ಹಾಗಾದರೆ, ಟೀಚರ್ ಯಾಕೆ ಬೇಕು? ಯಾಕೆಂದರೆ, ಪುಸ್ತಕದಲ್ಲಿ ಇರುವ ಮಾಹಿತಿಯ ಬಗ್ಗೆ ಹೇಗೆ ಯೋಚನೆ ಮಾಡಬೇಕು ಎಂಬುದನ್ನು ಕಲಿಸುವವರು ಟೀಚರ್. ಯೋಚನೆ ಮಾಡುವುದು ಎಂದರೆ ಪ್ರಶ್ನೆ ಕೇಳಲು, ಹಲವು ರೀತಿಯ ಉತ್ತರಗಳನ್ನು ಕೊಡಲು, ಊಹಿಸಲು, ಏನು ಹೇಳಿದ್ದಾರೆ ಎನ್ನುವುದನ್ನು ನಮ್ಮದೇ ಪದಗಳಲ್ಲಿ ಅರ್ಥ ಮಾಡಿಕೊಳ್ಳಲು, ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು, ಕಾರಣಗಳನ್ನು ಹುಡುಕಲು, ಮಾಹಿತಿ ಮತ್ತು ಜ್ನಾನವನ್ನು ಬಳಸಲು ಮತ್ತು ವಿವರಿಸುವ ಹೊಸ ದಾರಿಗಳನ್ನು ಹುಡುಕಲು ಕಲಿಯುವುದು.
ನಾವು ಯಾರ್ಯಾರಿಂದ ಕಲಿಯುತ್ತೇವೆ ಎಂಬುದು ಒಂದು ಮುಖ್ಯ ಪ್ರಶ್ನೆ. ನಮ್ಮ ಬಹುಪಾಲು ಕಲಿಕೆ ತಂದೆತಾಯಿಯರಿಂದ, ಮನೆಯವರಿಂದ, ಅಧ್ಯಾಪಕರಿಂದ. ಜೊತೆಗೆ, ಇನ್ನೆರಡು ದಾರಿಗಳಿವೆ: ಮತ್ತೊಬ್ಬರಿಂದ ಕಲಿಯುವುದು ಮತ್ತು ನಾವೇ ಕಲಿಯುವುದು. ಇತರರು ಕೆಲವು ವಿಚಾರಗಳನ್ನು ನಮಗೆ ನೇರವಾಗಿ ಹೇಳುತ್ತಾರೆ. ಜೊತೆಗೆ ಮತ್ತೊಬ್ಬರ ಕೆಲಸಗಳನ್ನು ನೋಡುವುದರಿಂದ, ಕೆಲವು ಸಂದರ್ಭಗಳಲ್ಲಿ ಅವರ ನಡವಳಿಕೆಯಿಂದಲೂ ಕಲಿಯುತ್ತೇವೆ. ಗೆಳೆಯಗೆಳತಿಯರ ಹಾಗೂ ಅಕ್ಕಪಕ್ಕದವರ ಜೊತೆ ಮಾತುಕತೆ, ಚರ್ಚೆಯಿಂದಲೂ ಪರಸ್ಪರ ಕಲಿಯುತ್ತಲೇ ಇರುತ್ತೇವೆ.
ನಾವೇ ಕಲಿಯುವುದಂತೂ ಬಹಳ ಪ್ರಮುಖವಾದ ಕಲಿಕೆಯ ಮಾರ್ಗ. ದೊಡ್ಡವರು ಮತ್ತು ಅಧ್ಯಾಪಕರು ಎಷ್ಟೋ ವಿಚಾರಗಳ ಬಗ್ಗೆ ಹೇಳಿದರೂ ನಿಜವಾದ ಕಲಿಕೆ ಆಗುವುದು ನಮ್ಮ ಒಳಗೆ. ಟೀಚರ್ ಒಂದಷ್ಟು ಮಾಹಿತಿ ಹೇಳಬಹುದು. ಆದರೆ ಆ ಮಾಹಿತಿ ಅರ್ಥ ಮಾಡಿಕೊಳ್ಳುವುದು, ಅದರ ಬಗ್ಗೆ ಯೋಚನೆ ಮಾಡುವುದು, ಅದರ ಕುರಿತು ಪ್ರಶ್ನೆಗಳು ಹುಟ್ಟುವುದು, ಅವುಗಳಿಗೆ ಹೊಸಹೊಸ ಉತ್ತರ ಕಂಡುಕೊಳ್ಳುವುದು ಇವೆಲ್ಲವೂ ನಮ್ಮ ಒಳಗೆ, ನಮ್ಮ ಯೋಚನೆಯಿಂದ ಮಾತ್ರ ಸಾಧ್ಯ. ಆದ್ದರಿಂದ ನಮಗೆ ನಾವೇ ಅತ್ಯುತ್ತಮ ಗುರು. ಯಾವುದೇ ವಿಚಾರ ಅರ್ಥವಾಗದಿದ್ದರೆ, ಮೊದಲು ನಮಗೆ ನಾವೇ ವಿವರಿಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ನಮ್ಮೊಂದಿಗೆ ನಾವೇ ನಮ್ಮೊಳಗೆ ಮಾತಾಡಿಕೊಳ್ಳಬೇಕು. ಯಾಕೆಂದರೆ, ನಾವು ಕೇಳುವ ಎಲ್ಲ ಪ್ರಶ್ನೆಗಳಿಗೂ ಅಂತಿಮವಾಗಿ ಉತ್ತರಗಳು ಸಿಗುವುದು ನಮ್ಮೊಳಗೆ ಮಾತ್ರ.
ಮುಕ್ತಾಯದಲ್ಲಿ, “ಚೆನ್ನಾಗಿ ಕಲಿಯುವುದು ಹೇಗೆ?” ಎಂಬುದನ್ನು ಸರಳವಾಗಿ ವಿವರಿಸಲಾಗಿದೆ. ಅದಕ್ಕಾಗಿ ಕೆಲವು ಕೌಶಲ್ಯಗಳನ್ನು ಕಲಿಯಬೇಕು: ಗಮನ ಕೇಂದ್ರೀಕರಿಸುವುದು ಮತ್ತು ಸೂಕ್ಷ್ಮವಾಗಿ ಗ್ರಹಿಸುವುದು. ಪ್ರಶ್ನೆಗಳನ್ನು ಕೇಳುವುದು, ಹೆಚ್ಚೆಚ್ಚು ಓದುವುದು, ಹೊಸ ವಿಚಾರಗಳನ್ನು ಹುಡುಕುವುದು, ಯೋಚನೆಯೊಂದಿಗೆ ಆಟವಾಡುವುದು, ನಮ್ಮಿಂದ ನಾವೇ ಕಲಿಯುವುದು ಇವೆಲ್ಲವೂ ಚೆನ್ನಾಗಿ ಕಲಿಯಲು ಅತ್ಯವಶ್ಯವಾದ ಕೌಶಲ್ಯಗಳು. ಅಂತೂ, ವ್ಯಕ್ತಿತ್ವದ ಸಮಗ್ರ ವಿಕಾಸಕ್ಕಾಗಿ ದೊಡ್ಡವರೂ ಕಲಿಯಬೇಕಾದ ಹಾಗೂ ಅರ್ಥ ಮಾಡಿಕೊಳ್ಳಬೇಕಾದ ಹತ್ತುಹಲವು ವಿಷಯಗಳು ಈ ಪುಸ್ತಕದಲ್ಲಿವೆ.