ಪರಿಚಯ72: ಒಂದಾನೊಂದು ಕಾಲದಲ್ಲಿ (ಭಾಗ 1 ಮತ್ತು 2)

ಲೇಖಕರು: ಎಂ. ಚೊಕ್ಸಿ ಮತ್ತು ಪಿ.ಎಂ. ಜೋಷಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಆರನೇ ಮುದ್ರಣ: 2000          ಪುಟ: 64 + 64           ಬೆಲೆ: ರೂ. 10/-   ಮತ್ತು ರೂ. 9/-

ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್. ಇದು ಎರಡು ಭಾಗಗಳಲ್ಲಿ ಮುದ್ರಣವಾಗಿರುವ ಪುಸ್ತಕ.

ಮೊದಲ ಕತೆ "ಆ ಪುರಾತನ ಮೊಹೆಂಜೊದಾರೋ ನಗರದಲ್ಲಿ”. ಐದು ಸಾವಿರ ವರುಷ ಹಿಂದಿನ ಕಾಲದಲ್ಲಿ ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸುವ ಕತೆ. ಹುಡುಗರ ತಂಡವೊಂದು ಕೆಲವರ ಮನೆಗೆ ಭೇಟಿ ನೀಡುತ್ತದೆ. ಆ ಮೂಲಕ ಮೊಹೆಂಜೊದಾರೋ ನಗರದಲ್ಲಿ ವಿವಿಧ ವೃತ್ತಿಯ ಜನರು ಏನೇನು ಮಾಡುತ್ತಿದ್ದರು ಎಂಬುದು ಓದುಗರಿಗೆ ತಿಳಿಯುತ್ತದೆ. ವೀರೋಚನನ ಮಗ ಹೈರಾಪ ತಂದೆಯ ಕಾರ್ಖಾನೆಗೆ ಹೋಗುತ್ತಾನೆ. ಅಲ್ಲಿ ಬಳಪದ ಕಲ್ಲುಗಳ ರಾಶಿ. ವೀರೋಚನ ಬಳಪದ ಕಲ್ಲುಗಳಲ್ಲಿ ಗುಂಡಗಿನ ಅಥವಾ ಆಯತಾಕಾರದ ಮುದ್ರೆ (ಮೊಹರು)ಗಳನ್ನು ಕೆತ್ತುವವನು. ನಗರದ ವರ್ತಕರೂ ಇತರರೂ ತಮ್ಮ ಗುರುತು ಸೂಚಿಸಲು ಈ ಮೊಹರುಗಳನ್ನು ಬಳಸುತ್ತಿದ್ದರು. ನೌಕೆಯಲ್ಲಿ ದೂರದ ದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಿ ಬರುತ್ತಿದ್ದವನು ಕಾಪರ್ದಿ. ಅವನು ಖರ್ಜೂರ ಮತ್ತು ಇತರ ವಸ್ತುಗಳನ್ನು ತರುತ್ತಿದ್ದ. ತನ್ನ ಬಳಿ ಬಂದ ಹುಡುಗರಿಗೆ ಈಜಿಪ್ಟಿನ ಪಿರಮಿಡ್ಡುಗಳ ಬಗ್ಗೆ ತಿಳಿಸಿದ.

“ಭೀಮಕನೂ ಅವನ ಗೆಳೆಯರೂ" ಎರಡನೇ ಕತೆ. ಯುವಕ ಭೀಮಕ ಆಯುಧಗಳನ್ನು ಆಟಕ್ಕಾಗಿ ತಯಾರಿಸಿಟ್ಟಿದ್ದ. ದೇವದತ್ತ ಬಂದ ಸಮಯದಲ್ಲಿ, ಅವನ ಜೊತೆ ಸೇರಿ ಭೀಮಕ ಮತ್ತು ಅವನ ಗೆಳೆಯರು ಯುದ್ಧದ ಆಟವಾಡಲು ಹೊರಡುತ್ತಾರೆ. ಆಚಾರ್ಯ ದೇವಮಿತ್ರ ಶಾಕಲ್ಯರ ಆಶ್ರಮದಲ್ಲಿ ನಾಲ್ಕು ವರುಷ ವಿದ್ಯಾಭ್ಯಾಸ ಮಾಡಿ, ಕೆಲವು ದಿನಗಳ ಬಿಡುವಿನಲ್ಲಿ ತನ್ನೂರಿಗೆ ಮರಳಿದ್ದ ದೇವದತ್ತ (ಅವನು ಇನ್ನೂ ಹನ್ನೆರಡು ವರುಷ ವಿದ್ಯಾಭ್ಯಾಸ ಮಾಡಲಿದ್ದಾನೆ.) ಗುರುಕುಲದ ಶಿಕ್ಷಣದಿಂದಾಗಿ ದೇವದತ್ತನ ವ್ಯಕ್ತಿತ್ವ ಬದಲಾದದ್ದನ್ನು ವಿವರಿಸುವ ಕತೆ.

ಮೂರನೆಯ ಕತೆ “ಪಾಟಲೀಪುತ್ರದ ದಾರಿಯಲ್ಲಿದ್ದ ಅನ್ನಸತ್ರದಲ್ಲಿ" ಕತೆಯಲ್ಲಿ, ಅನ್ನಸತ್ರಕ್ಕೆ ಬರುವ ಯಾತ್ರಿಕರು, ಯುದ್ಧ ಮತ್ತು ಹಿಂಸೆ ತ್ಯಜಿಸಿ, ಪ್ರೀತಿ ಮತ್ತು ಕರುಣೆಯಿಂದ ರಾಜ್ಯವಾಳಲು ಶುರು ಮಾಡಿದ್ದ ಚಕ್ರವರ್ತಿ ಆಶೋಕನು ಆಡಳಿತದಲ್ಲಿ ತಂದ ಬದಲಾವಣೆಗಳನ್ನು ತಿಳಿಸುತ್ತಾರೆ. ಕತೆಯ ಉತ್ತರಾರ್ಧದಲ್ಲಿ, ಪಾರುಪತ್ತೇದಾರನ ಮಗಳಾದ ಬಿಂಬಿ ಎಂಬ ಹುಡುಗಿ ನಿಜವಾಗಿ ಅವನ ಮಗಳಲ್ಲ ಎಂಬ ಸಂಗತಿ ಬಿಂಬಿಗೆ ಒಬ್ಬ ಯಾತ್ರಿಕನ ಮಾತಿನಿಂದ ತಿಳಿದು ಬರುತ್ತದೆ. ಅವಳು ಬಂದು ಕೇಳಿದಾಗ, ಪಾರುಪತ್ತೇದಾರನೂ ಅವನ ಪತ್ನಿಯೂ ನಿಜ ಹೇಳಲೇ ಬೇಕಾಗುತ್ತದೆ.

"ಕಾವೇರಿ ಪಟ್ಟಣದ ವೈಭವ” ಭಾಗ-1ರ ಕೊನೆಯ ಕತೆ. ಇದೂ ಹುಡುಗರ ತಂಡವೊಂದರ ಮೂಲಕ ಪ್ರಸ್ತುತ ಪಡಿಸಲಾದ ಕತೆ. ಕಾರಿ ಎಂಬವನು ಕಾಡಿನ ಬೇಡನ ಮಗ. ಇವನೂ ಒಂದು ಗಿಳಿ ಸಾಕಿದ್ದ. ಅದನ್ನು ಪ್ರೀತಿಯಿಂದ ಸಾಕಿ, ಅದಕ್ಕೆ ಮಾತಾಡಲು ಕಲಿಸಿದ್ದ. ಆ ದಿನ, ಚೋಳರ ರಾಜಧಾನಿ ಕಾವೇರಿ ಪಟ್ಟಣಕ್ಕೆ ನೌಕೆ ಆಗಮಿಸಿತ್ತು. ಅದರ ವರ್ತಕರು ಕಾರಿಯ ಹಳ್ಳಿಗೆ ಬಂದು ವಸ್ತುಗಳನ್ನು ಮಾರಿದ್ದರು. ಹುಲಿ ಚರ್ಮ ಇತ್ಯಾದಿ ಮಾರಲು ಕಾರಿಯ ತಂದೆ ನೌಕೆಯ ಹತ್ತಿರಕ್ಕೆ ಬರಬೇಕೆಂದು ಒತ್ತಾಯಿಸಿದರು. ತಂದೆಯೊಂದಿಗೆ ಕಾರಿಯೂ ಪಂಜರದಲ್ಲಿ ಸಾಕಿದ್ದ ಕೆಲವು ಗಿಳಿಗಳ ಸಹಿತ ಅಲ್ಲಿಗೆ ಹೋದ. ಆಗ ದಢಿಯ ನಾವಿಕನೊಬ್ಬ ಕಾರಿಯ “ಮಾತಾಡುವ ಗಿಳಿ” ಬೇಕೆಂದ. ಕಾರಿ ಕೊಡೋದಿಲ್ಲ ಎಂದಾಗ, ಅವನ ತಂದೆಗೆ ಬೆಳ್ಳಿಯ ನಾಣ್ಯದ ಆಮಿಷ ಒಡ್ಡಿದ. ಆಮಿಷಕ್ಕೆ ಬಲಿಯಾದ ತಂದೆ, ಕಾರಿಯ ಮುದ್ದಿನ ಗಿಳಿಯನ್ನು ಆ ನಾವಿಕನಿಗೆ ಮಾರಿದ. ಇದರಿಂದಾಗಿ ಖಿನ್ನನಾದ ಕಾರಿಯನ್ನು ಅವನ ಗೆಳೆಯ ವಳ್ಳುವರ್ ಮನೆಗೆ ಕರೆದೊಯ್ದು ಸಂತೈಸುವುದೇ ಕತೆಯ ವಸ್ತು.

ಈ ಪುಸ್ತಕದ 2ನೇ ಭಾಗದಲ್ಲಿಯೂ ನಾಲ್ಕು ಕತೆಗಳಿವೆ. ಮೊದಲ ಕತೆ "ಪ್ರಸಿದ್ಧ ಬೌದ್ಧ ವಿಹಾರ ಕಾರ್ಲಾ". ಎರಡು ಸಾವಿರ ವರುಷ ಹಿಂದೆ ಭಾರತದ ಪಶ್ಚಿಮ ಕರಾವಳಿಯ ಸಾಲಿನಲ್ಲಿದ್ದ ಬೆಟ್ಟ ಕಾರ್ಲಾ. ಅದರ ಬುಡದಲ್ಲಿದ್ದ ಹಳ್ಳಿಯ ವಾಸಿ ಜೀಮೂತನೆಂಬ ಕುರುಬ (ಕ್ರಿಸ್ತಶಕ ಎರಡನೇ ಶತಮಾನದಲ್ಲಿ). ಆತ ತಬ್ಬಲಿ. ತನ್ನ ಚಿಕ್ಕಪ್ಪ - ಚಿಕ್ಕಮ್ಮನ ಆಸರೆಯಲ್ಲಿ ಅವನ ಜೀವನ. ಕುರಿಮೇಕೆಗಳನ್ನು ಬೆಟ್ಟಕ್ಕೆ ಬೆಳಗ್ಗೆ ಒಯ್ದರೆ ಅವನು ಮನೆಗೆ ಹಿಂತಿರುಗುವುದು ಕತ್ತಲಾಗುವಾಗ. ಉಗ್ರಕೋಪಿಯಾದ ಚಿಕ್ಕಮ್ಮ ಅವನಿಗೆ ಇಡೀ ದಿನದಲ್ಲಿ ತಿನ್ನಲು ಕೊಡುತ್ತಿದ್ದದ್ದು ಒಂದು ರೊಟ್ಟಿ!  ಆಗಲೇ ಚಕ್ರವರ್ತಿ ಅಶೋಕ ತೀರಿಕೊಂಡು ನಾಲ್ನೂರು ವರುಷ ದಾಟಿದ್ದವು. ಬೌದ್ಧಧರ್ಮ ಎಲ್ಲ ಕಡೆಯೂ ವ್ಯಾಪಿಸಿತ್ತು. ಎಲ್ಲೆಲ್ಲೂ ಬೌದ್ಧಮತೀಯರ ಸಂಘಗಳು. ಕಾರ್ಲಾದ ಗುಹಾಂತರ ದೇವಾಲಯ ಆಗ ದಕ್ಷಿಣ ಭಾರತದ ಹೆಸರಾಂತ ಬೌದ್ಧ ವಿಹಾರ. ಅಲ್ಲಿನ ಬೌದ್ಧ ಭಿಕ್ಷುಗಳು ಭಿಕ್ಷೆ ಎತ್ತಲು ಪ್ರತಿ ದಿನ ಜೀಮೂತನ ಹಳ್ಳಿಗೆ ಬರುತ್ತಿದ್ದರು. ಅದೊಂದು ದಿನ ಏರುಹಗಲಿನಲ್ಲಿ ಆನಂದ ಎಂಬ ಭಿಕ್ಷು ಜೀಮೂತನಿಗೆ ಎದುರಾದ. ಎಲ್ಲ ಮನೆಯವರೂ ಆತನಿಗೆ ಭಿಕ್ಷೆ ಹಾಕಿದರು. ತನ್ನಲ್ಲಿದ್ದ ಒಂದೇ ರೊಟ್ಟಿಯ ತುಂಡೊಂದನ್ನು ಜೀಮೂತನೂ ಭಿಕ್ಷೆ ನೀಡಿದ. ಅನಂತರ ಅದು ಜೀಮೂತನ ಪ್ರತಿ ದಿನದ ಪರಿಪಾಠವಾಯಿತು. ಅವನನ್ನು ಬೌದ್ಧ ವಿಹಾರಕ್ಕೆ ಕರೆದೊಯ್ದ ಭಿಕ್ಷು ಆನಂದ ಅವನಿಗೆ ಹಲವಾರು ಸಂಗತಿಗಳನ್ನು ತಿಳಿಸಿದ. ಒಂದು ದಿನ ಚಿರತೆಯೊಂದು ಜೀಮೂತನ ಮೇಕೆಯ ಮೇಲೆ ದಾಳಿ ಮಾಡಿತು. ಮೇಕೆ ಉಳಿಸುವ ಯತ್ನದಲ್ಲಿ ಜೀಮೂತ ಜೀವಂತ ಉಳಿದದ್ದೇ ಪುಣ್ಯ. ಆದರೆ ಮೇಕೆಯ ಒಂದು ಕಾಲು ಮುರಿಯಿತು. ಅದಕ್ಕಾಗಿ ಆ ದಿನ ಸಂಜೆ ಅವನ ಚಿಕ್ಕಪ್ಪ ಅವನಿಗೆ ಹೊಡೆಯಲು ಬಂದ. ಆಗ ಹಳ್ಳಿಗರು ಜೀಮೂತನನ್ನು ಬೌದ್ಧವಿಹಾರದ ಭಿಕ್ಷುಗಳಿಗೆ ಒಪ್ಪಿಸುತ್ತಾರೆ. ಅನಂತರ ಅಲ್ಲೇ ಭಿಕ್ಷುಗಳ ಸೇವೆ ಮಾಡುತ್ತಾ, ಪಾಠ ಕಲಿಯುತ್ತಾ ಬೆಳೆದ ಜೀಮೂತ.

ಮುಂದಿನ ಕತೆ “ಮಥುರಾ ನಗರದ ಶಿಲ್ಪಾಗಾರಗಳು”. ಇದು ಕ್ರಿಸ್ತಶಕ ಎರಡನೇ ಶತಮಾನದ ಮಧ್ಯಕಾಲದ ಕತೆ. ಮಥುರಾ ನಗರ ಕುಶಾನರ ಆಳ್ವಿಕೆಯಲ್ಲಿತ್ತು. ನಗರದ ಒಂದು ಭಾಗದಲ್ಲಿ ಕುಶಲಕರ್ಮಿಗಳ ಬಡಾವಣೆ. ಕೇತಕಿಯ ಮಗ ಮಾರ್ಕಿ ಕುದುರೆ ಮಾರಾಟ ಮಾಡುವ ಶಾಕ್ಯರ ಜೊತೆ ದೇಶಾಂತರ ಹೋಗಿದ್ದ. ಅದಕ್ಕಾಗಿ ಅವನ ಮೇಲೆ ತಂದೆಗೆ ಅಸಾಧ್ಯ ಕೋಪ. ಮಾರ್ಕಿ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ಕತೆ ಶುರು. ತಾನು ಶಾಕ್ಯರ ಗುಂಪು ತೊರೆದು ಸರಕು ವ್ಯಾಪಾರಿಗಳ ಜೊತೆ ದೇಶದೇಶಗಳನ್ನು ಸುತ್ತಿದ್ದನ್ನು ತಿಳಿಸಿದ ಮಾರ್ಕಿ. ಎಲ್ಲ ಸ್ಥಳಗಳಲ್ಲಿಯೂ ಮಥುರಾದ ಶಿಲ್ಪಗಳನ್ನು ಕಂಡದ್ದನ್ನು ಅರುಹಿದ. ಬುದ್ಧನ ಅನುಯಾಯಿ ಚಕ್ರವರ್ತಿ ಕಾನಿಷ್ಕನ ಬಗ್ಗೆ ಮಾಹಿತಿ ನೀಡಿದ. ಮರುದಿನ ಸಂಜೆ ಅವನು ತಾನು ಸಂಪಾದಿಸಿ ತಂದದ್ದನ್ನು ಕುಟುಂಬದವರಿಗೆ ತೋರಿಸಿದ: ಅಮ್ಮನಿಗೆ ಹವಳಗಳ ಒಡ್ಯಾಣ; ಅಜ್ಜನಿಗೆ ಕಾಶ್ಮೀರದ ಚಂದದ ಉಣ್ಣೆ ಕಂಬಳಿ; ದೊಡ್ದ ದಂತದ ತುಂಡು (ಮೂರ್ತಿ ಕೆತ್ತನೆಗಾಗಿ); ಕೊನೆಗೊಂದು ಬಂಗಾರದ ನಾಣ್ಯ. ಅವರೆಲ್ಲರಿಗೆ ಅಚ್ಚರಿಯೋ ಅಚ್ಚರಿ. ಇನ್ನು ಮುಂದೆ ತಾನು ಮಥುರಾದಲ್ಲೇ ನೆಲೆಸುತ್ತೇನೆಂದ ಮಾರ್ಕಿ. ಅವನ ಅಮ್ಮ ಪಕ್ಕದ ಮನೆಯ ಯುವತಿ ಅವನಿಗೆ ಅನುರೂಪಳಾಅದ ವಧು ಎಂದು ಘೋಷಿಸುತ್ತಾಳೆ.

ಮೂರನೆಯ ಕತೆ: “ಸಮುದ್ರಗುಪ್ತನ ದಂಡಯಾತ್ರಗಳು”. ಚಕ್ರವರ್ತಿ ಚಂದ್ರಗುಪ್ತನ ನಂತರ ಸಿಂಹಾಸನ ಏರಿದವನೇ ಅವನ ಮಗ ಸಮುದ್ರಗುಪ್ತ. ಇವನು ಕ್ರಿಸ್ತಶಕ 347ರ ಹೊತ್ತಿಗೆ ಹಿಮಾಲಯದಿಂದ ನರ್ಮದೆಯ ವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ. ಅವನೀಗ ಮತ್ತೊಂದು ದಂಡಯಾತ್ರೆ ಹೊರಡಲು ತಯಾರಾದ. ಆ ದಂಡಯಾತ್ರೆಯಲ್ಲಿ ಅವನ ಮೆಚ್ಚಿನ ಕುದುರೆ “ರಾಕ್ಷಸ" ಜೊತೆಗೆ ಇರಲೇ ಬೇಕಾಗಿತ್ತು. ಅದನ್ನು ನಿಯಂತ್ರಿಸಲು ಇಬ್ಬರಿಗೆ ಮಾತ್ರ ಸಾಧ್ಯ: ಕಾಸ್ತಾರ ವೇಣು ಮತ್ತು ಅವನ ಒಂಬತ್ತು ವರುಷದ ಮಗ ಅಶ್ವದತ್ತ. ವೇಣು ಜ್ವರದಿಂದ ಮಲಗಿದ್ದ. ಅಶ್ವದತ್ತನನ್ನು ಕಳಿಸಲು ಮನೆಯವರು ತಯಾರಿರಲಿಲ್ಲ. ಕೊನೆಗೆ ಸಮುದ್ರಗುಪ್ತನ ಆದೇಶದ ಮೇರೆಗೆ ಅಶ್ವದತ್ತ ಕುದುರೆ ರಾಕ್ಷಸನನ್ನು ದಂಡಯಾತ್ರೆಗೆ ಒಯ್ಯಲೇ ಬೇಕಾಯಿತು. ಆ ದಂಡಯಾತ್ರೆ ಪೂರ್ತಿ ಅಶ್ವದತ್ತ ಚಕ್ರವರ್ತಿ ಸಮುದ್ರಗುಪ್ತನ ಜೊತೆಯಲ್ಲೇ ಇದ್ದ. ಒಮ್ಮೆ ಸಮುದ್ರಗುಪ್ತನ ಮೇಲೆರಗಲು ಕಾದಿದ್ದ ಹುಲಿಯನ್ನು ಕೊಲ್ಲಲು ಅಶ್ವದತ್ತ ಸಹಾಯ ಮಾಡಿದ. ಅದರಿಂದಾಗಿ ಸಮುದ್ರಗುಪ್ತನ ವಿಶ್ವಾಸ ಗಳಿಸಿದ. ಅಂತೂ ಮೂರು ವರುಷಗಳ ದಂಡಯಾತ್ರೆ ಮುಗಿದು, ಸೈನ್ಯ ಪಾಟಲೀಪುತ್ರಕ್ಕೆ ಹಿಂತಿರುಗಿತು. ಈಗ ಅಶ್ವದತ್ತ ಯುವಕನಾಗಿದ್ದ.

ಕೊನೆಯ ಕತೆ: “ಹೆಸರಾಂತ ಚಕ್ರವರ್ತಿ ಶ್ರೀಹರ್ಷ”. ಇದು ಶ್ರೀಹರ್ಷನ ಆಸ್ಥಾನಕ್ಕೆ ಆಗಮಿಸಿದ ಚೀನೀ ವಿದ್ವಾಂಸ ಯುವನ್ ಚ್ವಾಂಗನ ಕತೆ. ಆತನನ್ನು ವಾದದಲ್ಲಿ ಸೋಲಿಸಲು ಇಲ್ಲಿನ ಯಾವ ವಿದ್ವಾಂಸರಿಗೂ ಸಾಧ್ಯವಾಗಲಿಲ್ಲ. ವರುಷದ ನಂತರ ಆತ ಚೀನಾ ದೇಶಕ್ಕೆ ಹಿಂತಿರುಗಿ ಹೊರಟ. ತನ್ನೊಂದಿಗೆ 650 ಸಂಸ್ಕೃತ ಗ್ರಂಥಗಳ ಹಸ್ತಪ್ರತಿಗಳನ್ನೂ, ಬುದ್ಧದೇವನ ಪ್ರತಿಮೆ ಹಾಗು ಅವಶೇಷಗಳನ್ನೂ ಒಯ್ದ. "ನಾನು ಹೇಗೆ ಒಂಟಿಯಾಗಿ ಬಂದೆನೋ ಹಾಗೇ ಒಂಟಿಯಾಗಿ ಹಿಂತಿರುಗುತ್ತೇನೆ” ಎಂದು ಆತ ಹೇಳಿದ. ತಾನು ದೇಶ ಬಿಟ್ಟು ಹದಿನಾಲ್ಕು ವರುಷಗಳಾಗಿವೆ ಎಂದು ಅರುಹಿದ ಆತನ ಕೊನೆಯ ಮಾತು "ನನ್ನ ಉಳಿದ ಆಯುಷ್ಯವನ್ನು ನಾನೀಗ ಒಯ್ಯುತ್ತಿರುವ ಗ್ರಂಥಗಳ ಭಾಷಾಂತರಕ್ಕೆ ಮತ್ತು ವಿವರಣೆಗೆ ಮೀಸಲಿಡಬೇಕು. ಆದರೆ ಬುದ್ಧ ಜನಿಸಿದ ನಾಡಿನಲ್ಲಿ ನನಗೆ ದೊರೆತ ಆದರ, ಪ್ರೀತಿ, ವಿಶ್ವಾಸಗಳನ್ನು ಕೊನೆಯವರೆಗೂ ನೆನಸುತ್ತೇನೆ.”