ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ, ಮೈಸೂರು
ಮೊದಲ ಮುದ್ರಣ: 1940 14ನೇ ಮುದ್ರಣ: 2009 ಪುಟ: 82 ಬೆಲೆ: ರೂ.60/-
ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ.
ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ ಕತೆಯಿದು. ಭೀಷಣ ಜ್ವರದಿಂದ ಅವಳ ಪತಿ ತೀರಿಕೊಂಡರು. ಅವಳ ಸ್ವಗತ ಆ ಸಂದರ್ಭದ ದಾರುಣತೆಯನ್ನು ಹೀಗೆ ತಿಳಿಸುತ್ತದೆ: “ಮರುದಿನದಲ್ಲಿ ಶ್ಮಶಾನದಲ್ಲಿ ನನ್ನ ಕೈಬಳೆ ಒಡೆದರು. ನನ್ನ ಮೈಮೇಲಿದ್ದ ಆಭರಣಗಳನ್ನೆಲ್ಲ ತೆಗೆದರು. ಮಂಗಲಸೂತ್ರ ಬಿಚ್ಚಿದರು. … ನಾನು ಮಾವನ ಮನೆಗೆ ಬಂದ ಒಂದು ವರುಷದಲ್ಲಿಯೆ ನನ್ನ ಸಕಲ ಸೌಭಾಗ್ಯವೂ ಬದಿದಾಯಿತು. ನನಗಾಗ ಹದಿನೈದು ತುಂಬಿತ್ತು …" ಕ್ರಮೇಣ ಅವಳಲ್ಲಿ ಕೌಮಾರ್ಯ ತುಂಬಿ ತುಳುಕತೊಡಗಿತು. ಅವಳ ಭಾವನಿಗೆ ಆಗ 27 ವರುಷ ವಯಸ್ಸು. (ಅವಳ ಪತಿಗಿಂತ ಮೂರು ವರುಷ ಹಿರಿಯರು). ಸಜ್ಜನರೂ ವಿದ್ಯಾವಂತರೂ ಆಗಿದ್ದ ಅವರು ಮದುವೆ ಆಗಿರಲಿಲ್ಲ. ಅವರ ಬಗ್ಗೆ ಈಕೆಗೆ ಗೌರವ ಭಾವ. ಆದರೆ ದಿನಗಳೆದಂತೆ ಮನಸ್ಸಿನ ದೌರ್ಬಲ್ಯ ಇವಳನ್ನು ತುಯ್ಯತೊಡಗಿತು. ಆ ತಾಕಲಾಟಗಳನ್ನು ಸಮರ್ಥವಾಗಿ ಚಿತ್ರಿಸಿರುವ ಕತೆ ಇದು.
ಎರಡನೆಯ ಕತೆ “ಸಾಲದ ಮಗು". ಸೊಕ್ಕಿನ ಊರ ಗೌಡನಿಗೆ ದುರಾಶೆ. ಒಕ್ಕಲು ರಂಗ ಸತ್ತಾಗ, ಅವನ ಮುನ್ನೂರು ರೂಪಾಯಿ ಸಾಲ ತೀರಿಕೆಯ ಸಲುವಾಗಿ, ಅವನ ಮಗ ಹತ್ತು ವರುಷದ ಸುಬ್ಬನನ್ನು ಜೀತಕ್ಕೆ ಇಟ್ಟುಕೊಳ್ಳುತ್ತಾನೆ ಗೌಡ. ಸುಬ್ಬನಿಂದ ದಿನವಿಡೀ ಕೆಲಸ ಮಾಡಿಸುತ್ತಾನೆ. ಅದೊಂದು ದಿನ ನಡುರಾತ್ರಿ ಜಡಿಮಳೆಯಲ್ಲಿ ಸುಬ್ಬನನ್ನು ಹೊಲಕ್ಕೆ ಕಳಿಸುತ್ತಾನೆ. ಸುಬ್ಬ ಮನೆಗೆ ಮರಳಲಿಲ್ಲ. ಮರುದಿನ ಹೊಲದಲ್ಲಿ ಅವನ ಹೆಣ ಸಿಕ್ಕಿದಾಗ ಗೌಡನ ವ್ಯಸನದ ಉದ್ಗಾರ, “ಅಂತೂ ಮುನ್ನೂರು ರೂಪಾಯಿ ಮನೆಗೆ ಬಂತು!"
“ಆದರ್ಶ ಸಾಧನೆ” ಎಂಬುದು ಆದರ್ಶಗಳ ಬೆನ್ನಿತ್ತಿದ ಯುವಕನೊಬ್ಬನ ಕತೆ. ಆದರೆ ಆತನ ಯೋಚನೆಗಳು ಯಾವತ್ತೂ ಸ್ಥಿರವಲ್ಲ. ಸನ್ಯಾಸಿಯಾಗುತ್ತೇನೆ, ಬ್ರಹ್ಮಚಾರಿ ಆಗಿರುತ್ತೇನೆ ಎಂದೆಲ್ಲ ತನ್ನ ಸ್ನೇಹಿತರೊಂದಿಗೆ ಕಠಿಣವಾಗಿ ವಾದ ಮಾಡುತ್ತಿದ್ದ. ಅನಂತರ, ಮನೆಯವರ ಒತ್ತಾಯ ತಾಳಲಾಗದೆ ಮದುವೆ ಆಗುತ್ತಾನೆ. ಪತ್ನಿ ರೋಹಿಣಿಯೊಂದಿಗೆ ಅವನದು ಸುಖಸಂಸಾರ. ಗಂಡು ಮಗುವೂ ಹುಟ್ಟಿತು. ಆದರೆ ಹಠಾತ್ತಾಗಿ ಅವಳ ಮರಣ. ಅದರಿಂದಾಗಿ ಅವನಲ್ಲಿ ಉದ್ರೇಕವಾಗಿದ್ದ ಆದರ್ಶಪ್ರಿಯತೆ ಬರಬರುತ್ತ ಮಾಸತೊಡಗಿತು. ಕೊನೆಗೆ, ಮಗನನ್ನು ಪಾಲಿಸುತ್ತಿದ್ದ ರೋಹಿಣಿಯ ತಂಗಿಯನ್ನೇ ಮದುವೆಯಾಗುತ್ತಾನೆ.
“ಔದಾರ್ಯ" ಕತೆ ತೀರ್ಥಹಳ್ಳಿಯ ಅಮಲ್ದಾರನು ಮುಸ್ಸಂಜೆಯಲ್ಲಿ ತುಂಗಾನದಿಯ ದಡಕ್ಕೆ ಹೋದಾಗಿನ ಒಂದು ಘಟನೆ. ಅಮಲ್ದಾರನ ಬಾಲ್ಯದಲ್ಲಿ ಅವನ ಶಾಲಾ ಮಾಸ್ಟರಾಗಿದ್ದವರು ಡೇವಿಡ್. ಅವರು ಆ ದಿನ ಮಬ್ಬುಗತ್ತಲಿನಲ್ಲಿ ಅವನ ಬಳಿ ಬಂದು, ತಮ್ಮ ಬದುಕಿನ ದಾರುಣ ಕತೆ ಹೇಳುವ ಪ್ರಸಂಗ. "ಗಂಟು" ಅಥವಾ ಗುಪ್ತಧನ ಎಂಬುದು, ಅದರ ಆಶೆಗೆ ಬಲಿಯಾಗಿ, ಕಪಟಸನ್ಯಾಸಿಯೊಬ್ಬನಿಂದ ಮೋಸ ಹೋದವನ ಕತೆ.
“ಮೀನಾಕ್ಷಿಯ ಮನೇಮೇಷ್ಟರು” ಮನೆಪಾಠಕ್ಕೆ ಬರುತ್ತಿದ್ದ ಯುವಕನೊಬ್ಬನ ಪಡಿಪಾಟಲನ್ನು ಚಿತ್ರಿಸುವ ಕತೆ. ಮೀನಾಕ್ಷಿಯಲ್ಲಿ ಯೌವನ ಅರಳುತ್ತಿದ್ದಂತೆ ಅವಳಲ್ಲಿ ಅನುರಕ್ತನಾದ ಯುವಕ, ಅವಳನ್ನೇ ಮದುವೆಯಾಗುವ ಕನಸು ಕಾಣುತ್ತಾನೆ. ಆದರೆ ಅವಳ ಹೆತ್ತವರು ಸಭ್ಯ, ಶ್ರೀಮಂತನೊಬ್ಬನೊಡನೆ ಮೀನಾಕ್ಷಿಯ ಮದುವೆ ಮಾಡುತ್ತಾರೆ. ಈತನಿಗೆ ಭ್ರಮ ನಿರಸನ.
“ಧನ್ವಂತರಿಯ ಚಿಕಿತ್ಸೆ” ಕತೆ ಭಾರತದಲ್ಲಿ ರಾಜ್ಯದ ಎಲ್ಲ ಹೊರೆಯೂ ರೈತನ ಮೇಲೆ ಬಿದ್ದಿರುವುದನ್ನು ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತದೆ - ಮಹರ್ಷಿವಿಶ್ವಾಮಿತ್ರ ಮತ್ತು ಪರಶುರಾಮರ ಸಂವಾದದ ರೂಪದಲ್ಲಿ. ಕೊನೆಯ ಕತೆ: “ವೈರಾಗ್ಯದ ಮಹಿಮೆ". ಅದರ ಎರಡನೇ ಶೀರ್ಷಿಕೆ, “ಅಟ್ಟಿದರೆ ಓಡುತ್ತದೆ; ಬಿಟ್ಟರೆ ಹಿಂಬಾಲಿಸುತ್ತದೆ". ಇದುವೇ ವೈರಾಗ್ಯದ ಮಹಿಮೆ ಎಂಬುದನ್ನು ಸೋಮಾರಿಯೊಬ್ಬನ ಬದುಕಿನ ಮೂಲಕ ತಿಳಿಸುವ ಕತೆ.