My Books
ಲೇಖಕರು: ಜೆ. ಪಿ. ವಾಸ್ವಾನಿ
ಕನ್ನಡಕ್ಕೆ: ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ
ಪ್ರಕಾಶಕರು: ಸಾಧು ವಾಸ್ವಾನಿ ಬಾಲ ಕೇಂದ್ರ, ಬೆಂಗಳೂರು
ಪ್ರಕಟ: 2002 ಪುಟ: 192 ಬೆಲೆ: ರೂ. 60/-
“ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ.
ಹೌದು, ಈ ಸಂಕಲನದ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಇಂತಹ ಪುಟ್ಟಪುಟ್ಟ ಕಥೆಗಳು ಬಾಲಕಬಾಲಕಿಯರ, ವಯಸ್ಕರ ಹಾಗೂ ವಯೋವೃದ್ಧರ ಮನಸೂರೆಗೊಳ್ಳುತ್ತವೆ ಎಂಬುದಂತೂ ಖಂಡಿತ. ಎಲ್ಲ ದೇಶಗಳಲ್ಲಿಯೂ ಅಲ್ಲಿನ ಪರಂಪರೆಯನ್ನು ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಪ್ರಚಲಿತವಾಗಿವೆ. ಸಾವಿರಾರು ವರುಷಗಳು ಸರಿದರೂ ಎಲ್ಲ ತಲೆಮಾರಿನವರನ್ನೂ ಈ ಕಥೆಗಳು ರಂಜಿಸುತ್ತವೆ ಹಾಗೂ ಎಲ್ಲರ ಜ್ನಾನಖಜಾನೆಯ ಭಾಗವಾಗಿ ಉಳಿಯುತ್ತವೆ. ನಮ್ಮ ದೇಶದ ಉಪನಿಷತ್ತಿನ ಮತ್ತು ಪಂಚತಂತ್ರದ ಕಥೆಗಳು ಶ್ರೇಷ್ಠ ಕತೆಗಳ ನಿದರ್ಶನಗಳಾಗಿವೆ.
ಸಂತ ದಾದಾ ಜೆ.ಪಿ. ವಾಸ್ವಾನಿಯವರ ಪುಸ್ತಕಗಳ ಸಂಖ್ಯೆ ಐವತ್ತು ದಾಟಿದೆ. “ನಿಮ್ಮನ್ನು ಉರಿಸುವ ಮೊದಲೆ ಕೋಪವನ್ನು ಉರಿಸಿ ಬಿಡಿ” ಮತ್ತು “ಸಜ್ಜನರಿಗೆ ಕಷ್ಟಗಳು ಏಕೆ ಬರುತ್ತವೆ?” - ಇವು ಕನ್ನಡದಲ್ಲಿ ಪ್ರಕಟವಾಗಿರುವ ಜೆ.ಪಿ. ವಾಸ್ವಾನಿಯವರ ಇನ್ನೆರಡು ಪುಸ್ತಕಗಳು. ಫ್ರಮ್ ಹೆಲ್ ಟು ಹೆವನ್, ಎ ಚೈಲ್ಡ್ ಆಫ್ ಗಾಡ್, ಯೂ ಆರ್ ನಾಟ್ ಎಲೋನ್, ದ ಕಿಂಗ್‌ಡಮ್ ಆಫ್ ಕೃಷ್ಣಾ, ಲೈಫ್ ಆಫ್ಟರ್ ಡೆತ್, ಸ್ಟೋರೀಸ್ ಆಫ್ ಮೆಡಿಟೇಷನ್, ಲಿಟ್ಲ್ ಲ್ಯಾಂಪ್ಸ್, ಬಿಗಿನ್ ದ ಡೇ ವಿದ್ ಗಾಡ್, ಟೀಚ್ ಮಿ ಟು ಪ್ರೇ, ಟೆಂಪಲ್ ಫ್ಲವರ್ಸ್, ಹೌ ಟು ಮೆಡಿಟೇಟ್ - ಇವು ಇಂಗ್ಲಿಷಿನ ಅವರ ಕೆಲವು ಜನಪ್ರಿಯ ಪುಸ್ತಕಗಳು.
ಲೇಖಕರು: ಎ.ಎಸ್.ಎನ್. ಹೆಬ್ಬಾರ್, ಕುಂದಾಪುರ
ಪ್ರಕಾಶಕರು: ಅವನಿ ಪ್ರಕಾಶನ, ಮಂಗಳೂರು
ಲೇಖಕರು: ಡಾ. ಸ್ವಾಮಿನಾಥ ಅಯ್ಯರ್
ಕನ್ನಡಾನುವಾದ: ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಮರುಮುದ್ರಣ : 2002 ಪುಟ: 236 ಬೆಲೆ: ರೂ. 120/-
ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು.
ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.ಎಲ್. ಸ್ವಾಮಿಯವರು ಪರಿಚಯಿಸಿದ ಪರಿ: “ಕಳೆದ ನೂರು ವರ್ಷಗಳಲ್ಲಿ ತಮಿಳು ನುಡಿ ಸಮೃದ್ಧಿ ಹೊಂದುವುದಕ್ಕೆ ಇಬ್ಬರು ಮಹಾ ಮೇಧಾವಿಗಳು ಕಾರಣವೆಂದು ಹೇಳಬಹುದು. ಒಬ್ಬರು ಪಾಂಡಿತ್ಯ, ಸಂಶೋಧನೆ, ಮುದ್ರಣ ಸಾಮರ್ಥ್ಯ ಮತ್ತು ಋಜುತ್ವವುಳ್ಳವರು. ಮತ್ತೊಬ್ಬರು ಕವಿತ್ವಶಕ್ತಿ, ದೇಶಭಕ್ತಿ, ಭಾವನಾಸಂಪತ್ತುಗಳು ಹೆಚ್ಚಾದವರು. ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಡಾಕ್ಟರ್ ಸ್ವಾಮಿನಾಥ ಅಯ್ಯರ್ ಮೊದಲನೆಯವರು. ಕವಿಯರಸ ಸುಬ್ರಹ್ಮಣ್ಯ ಭಾರತಿಯವರು ಮತ್ತೊಬ್ಬರು. ….
ಸ್ವಾಮಿನಾಥ ಅಯ್ಯರ್ ಅವರು ಹಳೆಯ ತಮಿಳು ಗ್ರಂಥಗಳನ್ನು ಸಂಪಾದಿಸಿ ಸಂಶೋಧಿಸಿ ಪರಿಶೋಧಿಸಿ ಪ್ರಕಟಿಸಿದ ಮೊದಲಿಗರು. ಗುರುಕುಲ ಶಿಕ್ಷೆಯಿಂದ ಪರಿಪಕ್ವವಾದ ಪಾಂಡಿತ್ಯ, ನಲುವತ್ತು ವರ್ಷಗಳಿಗೆ ಮೇಲ್ಪಟ್ಟು ಉಪಾಧ್ಯಾಯ ವೃತ್ತಿ, ಸತತಾಭ್ಯಾಸ - ಇವುಗಳ ಬೆಸುಗೆಯಿಂದ ರೂಪಿತವಾದದ್ದು ಅವರು ಸ್ವಚ್ಛವಾದ ಗದ್ಯಶೈಲಿ….
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ, ಮೈಸೂರು
7ನೇ ಮುದ್ರಣ: 2009 ಪುಟ: 82 ಬೆಲೆ: ರೂ. 60/-
ಕನ್ನಡದ ಮೇರು ಸಾಹಿತಿಗಳಲ್ಲಿ ಒಬ್ಬರಾದ ಕುವೆಂಪು ಅವರು ಬರೆದ ಒಂಭತ್ತು ಕತೆಗಳು ಈ ಸಂಕಲನದಲ್ಲಿವೆ. ಗ್ರಾಮೀಣ ಬದುಕನ್ನು ಕಟ್ಟಿ ಕೊಡುವ ಇಲ್ಲಿನ ಕೆಲವು ಕತೆಗಳಲ್ಲಿ ಕುವೆಂಪು ಅವರ ಬಾಲ್ಯದ ಅನುಭವಗಳ ಪ್ರಭಾವ ಗಾಢವಾಗಿದೆ.
ಮೊದಲ ಕತೆ "ಸನ್ಯಾಸಿ". ಸಂಸಾರ ತೊರೆದು, ಸನ್ಯಾಸಿ ದೀಕ್ಷೆ ಪಡೆದು ನೆಮ್ಮದಿ ಕಂಡುಕೊಂಡ ಚೈತನ್ಯ ಅನಂತರ ಅಚಾನಕ್ ದ್ವಂದ್ವವನ್ನು ಎದುರಿಸಬೇಕಾಗುತ್ತದೆ. ತನ್ನ ಗುರುಗಳ ಆಶೀರ್ವಾದದಿಂದಲೇ ಆತನು ಆ ದ್ವಂದ್ವದಿಂದ ಹೊರಬರುವುದು ಈ ಕತೆಯ ಹಂದರ. ಅಧ್ಯಾತ್ಮದ ಹಾದಿಯಲ್ಲಿ ಸಾಗುವವರ ತುಮುಲಗಳನ್ನು ಸಶಕ್ತವಾಗಿ ಚಿತ್ರಿಸಿರುವ ಕತೆ.
“ಕ್ರಿಸ್ತನಲ್ಲ, ಪಾದ್ರಿಯ ಮಗಳು!” ಎಂಬ ಎರಡನೆಯ ಕತೆ ಆದರ್ಶವಾದಿ ವ್ಯಕ್ತಿಯೊಬ್ಬನ ಪತನವನ್ನು ತೆರೆದಿಡುತ್ತದೆ. ಕಾಲೇಜು ಶಿಕ್ಷಣ ಪಡೆಯುತ್ತಿದ್ದಾಗಲೇ ಕ್ರಿಶ್ಚಿಯನ್ ಪಾದ್ರಿಗಳಿಂದ ಆಗುತ್ತಿದ್ದ ಮತಾಂತರಗಳ ಬಗ್ಗೆ ರೋಷದಿಂದಿದ್ದ ಕಥಾನಾಯಕ, ಎಂ.ಎ. ಅಧ್ಯಯನ ಪೂರೈಸಿದ ನಂತರವೂ ಅದನ್ನು ವಿರೋಧಿಸುತ್ತಿದ್ದ. ಕೊನೆಗೆ ಪಾದ್ರಿಯೊಬ್ಬನ ಮೋಹಕ ಮಗಳ ಮೋಹ ಪಾಶದಲ್ಲಿ ಸಿಲುಕಿ ಪತನದ ಹಾದಿ ಹಿಡಿಯುತ್ತಾನೆ. ಅಕಸ್ಮಾತ್ತಾಗಿ ತನ್ನ ಕಾಲೇಜ್ ರೂಂಮೇಟಿನ ಭೇಟಿ ಆದ ನಂತರ ತನ್ನ ದಾರುಣ ಕತೆಯನ್ನು ಆತನಿಗೆ ಬಿಚ್ಚಿಡುತ್ತಾನೆ.
ಅನುವಾದಕರು: ಎ.ಆರ್. ರಂಗರಾವ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
5ನೇ ಮರುಮುದ್ರಣ:2015 ಪುಟ: 120 ಬೆಲೆ: ರೂ. 70/-
ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್. ರಂಗರಾವ್ ಸರಳ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಬುದ್ಧ ಪೂರ್ಣಿಮಾ, ಬಿಹು, ರಥ ಯಾತ್ರೆ, ರಕ್ಷಾ ಬಂಧನ್, ಓಣಂ, ಈದ್, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ, ಕ್ರಿಸ್‌ಮಸ್, ಲೋಡಿ, ಪೊಂಗಲ್, ಹೋಳಿ, ನವರೋಜ್ - ಈ ಹಬ್ಬಗಳ ಬಗ್ಗೆ ನಮಗೆ ಸಾಮಾನ್ಯವಾಗಿ ತಿಳಿಯದ ಸಂಗತಿಗಳನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದೆ.
ರಾಜ ಶುದ್ಧೋದನ ಮತ್ತು ರಾಣಿ ಮಹಾಮಾಯ ಇವರ ಮಗನಾಗಿ ಹುಟ್ಟಿದ ಸಿದ್ಧಾರ್ಥನಿಗೆ ಬಾಲ್ಯದಿಂದಲೂ ಆಟ-ಬೇಟೆಗಳಲ್ಲಿ ಆಸಕ್ತಿಯಿಲ್ಲ. ಮಡದಿ ಯಶೋಧರ ಮತ್ತು ಮಗ ರಾಹುಲ ಇವರ ಬಗೆಗಿನ ತುಡಿತಕ್ಕಿಂತ ಬದುಕಿನ ಸತ್ಯಶೋಧನೆಯ ತುಡಿತವೇ ಆತನಲ್ಲಿ ಹೆಚ್ಚಾಗಿತ್ತು. ಜೀವನದ ದುಃಖ ನಿವಾರಣೆಯ ದಾರಿಯ ಶೋಧಕ್ಕಾಗಿ ಸಂಕಲ್ಪ ತೊಟ್ಟ ಆತ ಸನ್ಯಾಸಿಯಾಗಲು ನಿರ್ಧರಿಸಿ, ಒಂದು ದಿನ ರಾತ್ರಿ ಜಗವೆಲ್ಲ ಮಲಗಿರಲು ಅರಮನೆ ತೊರೆದು ಹೊರಟ. ಕೊನೆಗೆ ಬೋಧಿವೃಕ್ಷದ ನೆರಳಿನಲ್ಲಿ ತಪಸ್ಸು ಮಾಡುತ್ತಿದ್ದಾಗ 35ನೇ ಜನ್ಮದಿನವಾದ ವೈಶಾಖ ಹುಣ್ಣಿಮೆಯಂದು ಅವನಿಗೆ ಜ್ನಾನೋದಯವಾಯಿತು. ದಿವ್ಯಜ್ನಾನ ಪಡೆದ ಆತ ಗೌತಮಬುದ್ಧನಾದ. ತನ್ನ ಜ್ನಾನವನ್ನು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಸಲು ಆತ ಅಭಿಯಾನ ಆರಂಭಿಸಿದ. ಬುದ್ಧನ ಜನ್ಮದಿನವನ್ನೇ ಬೌದ್ಧರು ಬುದ್ಧಪೂರ್ಣಿಮೆಯಾಗಿ ಆಚರಿಸುತ್ತಾರೆ.
ಲೇಖಕರು: ಎಂ.ವಿ. ನಾರಾಯಣ ರಾವ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಮರುಮುದ್ರಣ: 2002 ಪುಟ: 78 ಬೆಲೆ: ರೂ.10/-
ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವು ಬದುಕಿಗೂ ಒಂದು ಅರ್ಥ ಕೊಡುತ್ತವೆ ಎಂಬುದೇ ಅವುಗಳ ವಿಶೇಷತೆ.
ಈ ಪುಟ್ಟ ಪುಸ್ತಕದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆ ಹಾಗೂ ಆ ಕುಶಲಕರ್ಮಿಗಳು ನಿರ್ಮಿಸುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ರಾಮಾಯಣ ಕಾಲದಿಂದಲೂ ಇವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಇವರ ಮೂಲಪುರುಷ ವಿಶ್ವಕರ್ಮ ಎಂಬ ನಂಬಿಕೆ. ಹಾಗಾಗಿ ಹಳೆಯ ಕಾಲದ ಕುಶಲಕರ್ಮಿಗಳು ತಾವು ಮಾಡಿದ್ದೆಲ್ಲಾ ತಮ್ಮ ಮೂಲಪುರುಷ ವಿಶ್ವಕರ್ಮನಿಗೇ ಅರ್ಪಿತ ಎಂಬ ಅರ್ಪಣಾಭಾವದಿಂದ ಮಾಡುತ್ತಿದ್ದರು.
ಮಣ್ಣಿನ ಮಡಕೆ ಇತ್ಯಾದಿ ರಚಿಸುವ ಕುಂಬಾರ, ಕಂಚಿನ ಎರಕಗಳಿಂದ ಮೂರ್ತಿಗಳನ್ನು ನಿರ್ಮಿಸುವ ಕಂಚುಗಾರ (ಲೋಹಶಿಲ್ಪಿ), ಆಭರಣಗಳನ್ನು ತಯಾರುಸಿವ ಅಕ್ಕಸಾಲಿಗ, ರಥಗಳನ್ನೂ ಮರದ ಉಪಕರಣಗಳನ್ನೂ ನಿರ್ಮಿಸುವ ಬಡಗಿ, ಅಂದಚಂದದ ಜರತಾರಿ ಬಟ್ಟೆಗಳನ್ನು ನೇಯುವ ನೇಕಾರ - ಇವರೆಲ್ಲರೂ ಹಸ್ತಶಿಲ್ಪಿಗಳು. ಯಾಕೆಂದರೆ, ತಾವು ರಚಿಸುವುದನ್ನೆಲ್ಲ ತಮ್ಮ ಕಲ್ಪನೆ ಹಾಗೂ ರಚನಾತ್ಮಕತೆ ಧಾರೆಯೆರೆದು ತಮ್ಮ ಕೈಗಳಿಂದಲೇ ರಚಿಸುತ್ತಿದ್ದರು.
ಸಂಪಾದಕರು: ಡಾ. ಆರ್.ಸಿ. ಹಿರೇಮಠ, ಡಾ. ಕೆ. ಕೃಷ್ಣಮೂರ್ತಿ, ಡಾ. ಎಂ.ಕೆ. ನಾಯಿಕ
ಪ್ರಕಾಶಕರು: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಪ್ರಕಟಣೆ: 10-9-1973 ಪ್ರತಿಗಳು: 10,000 ಪುಟ: 160 ಬೆಲೆ: ರೂ. 2/-
ಇದೊಂದು ಅಪರೂಪದ ಪುಸ್ತಕ. ಇದರಲ್ಲಿವೆ ನಮ್ಮ ಬದುಕನ್ನು ಬೆಳಗಿಸಬಲ್ಲ ನೀತಿಯ ಮಾತುಗಳು. ಇದರ 10,000 ಪ್ರತಿಗಳನ್ನು 10 ಸಪ್ಟಂಬರ್ 1973ರಲ್ಲಿ ಮುದ್ರಿಸಲಾಗಿತ್ತು ಎಂದರೆ ನಂಬುತ್ತಿರಾ? ಈಗ ಕನ್ನಡದ ಹಲವು ಪುಸ್ತಕಗಳ ಕೇವಲ 500 ಪ್ರತಿಗಳನ್ನು ಮುದ್ರಿಲಾಗುತ್ತಿದೆ. ಇದನ್ನು ಗಮನಿಸಿದಾಗ, ಐವತ್ತು ವರುಷಗಳ ಮುಂಚೆ, ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹಲವು ಪಟ್ಟು ಜಾಸ್ತಿಯಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ, ಅಲ್ಲವೇ?
ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಗ್ರಂಥಗಳಿಂದ ಆಯ್ದ ನೈತಿಕ ದೃಷ್ಟಿಯಿಂದ ಅರ್ಥಪೂರ್ಣವಾದ ಉಕ್ತಿಗಳನ್ನು ಓದುವವರು ಸಂಖ್ಯೆಯೂ ಐವತ್ತು ವರುಷಗಳ ಮುಂಚೆ ಸಾಕಷ್ಟು ಇತ್ತು ಎಂಬುದೂ ಇದರಿಂದ ಸ್ಪಷ್ಟವಾಗುತ್ತದೆ.
ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟು ಇಂತಹ ಪುಸ್ತಕದ ರಚನೆಗಾಗಿ ಈ ನಾಲ್ಕು ಸದಸ್ಯರಿರುವ ಸಂಪಾದಕ ಮಂಡಲಿಯನ್ನು ನಿಯಮಿಸಿತು: ಡಾ. ಆರ್.ಸಿ. ಹಿರೇಮಠ (ಅಧ್ಯಕ್ಷರು), ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ಅಧ್ಯಯನ ಪೀಠ ಮತ್ತು ಮೂವರು ಸದಸ್ಯರು: ಡಾ. ಕೆ. ಕೃಷ್ಣಮೂರ್ತಿ, ಡಾ. ಎಂ.ಕೆ. ನಾಯಿಕ, ಪ್ರೊ. ಕೆ.ಜೆ. ಶಹಾ. ಈ ಮೂವರು ಸದಸ್ಯರು ಅನುಕ್ರಮವಾಗಿ ಸಂಸ್ಕೃತ ವಿಭಾಗ, ಇಂಗ್ಲಿಷ್ ವಿಭಾಗ ಮತ್ತು ತತ್ವಜ್ನಾನ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು. ಇದರಲ್ಲಿರುವ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ನೀತಿಯ ಉಕ್ತಿಗಳನ್ನು ಆಯಾ ಭಾಷಾ ವಿಭಾಗದ ಮುಖ್ಯಸ್ಥರು ಸಂಗ್ರಹಿಸಿದ್ದು, ಅವುಗಳ ಕನ್ನಡ ಅನುವಾದವನ್ನೂ ಅವರೇ ಮಾಡಿಕೊಟ್ಟಿರುವರು.
ಲೇಖಕರು: ನಿರಂಜನ
ಪ್ರಕಾಶಕರು: ಪುರೋಗಾಮಿ ಪ್ರಕಾಶನ, ಬಸವನಗುಡಿ, ಬೆಂಗಳೂರು
ಪ್ರಕಟ: 1953 ಪುಟ: 128 ಬೆಲೆ: ಒಂದು ರೂಪಾಯಿ
“ಚಿತ್ರಗುಪ್ತ" ಪತ್ರಿಕೆಯಲ್ಲಿ ನಿರಂಜನರು ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ "ಐದು ನಿಮಿಷ”. ಎಪ್ಪತ್ತು ವರುಷಗಳ ಮುಂಚೆ (1953ರಲ್ಲಿ) ಪ್ರಕಟವಾದ ಈ ಪುಸ್ತಕದ ಬರಹಗಳನ್ನು ಓದುವುದೇ ಖುಷಿ.
ನಿರಂಜನರು ಕನ್ನಡದ ಪ್ರಸಿದ್ಧ ಕಾದಂಬರಿಕಾರರು ಹಾಗೂ ಸಣ್ಣ ಕತೆಗಳ ಬರಹಗಾರರು. ಜಗತ್ತಿನ 125 ದೇಶಗಳ ಆಯ್ದ ಸಣ್ಣಕತೆಗಳ ಮಾಲಿಕೆ (25 ಸಂಪುಟಗಳಲ್ಲಿ) “ವಿಶ್ವ ಕಥಾಕೋಶ" ಮತ್ತು ಕಿರಿಯರ ವಿಶ್ವಕೋಶ - "ಜ್ನಾನ ಗಂಗೋತ್ರಿ” -ಇವೆರಡು ಅಮೂಲ್ಯ ಪುಸ್ತಕಗಳನ್ನು ಸಂಪಾದಿಸಿ, ಕನ್ನಡದ ಸಾಹಿತ್ಯಭಂಡಾರವನ್ನು ಸಂಪನ್ನಗೊಳಿಸಿದವರು ಅವರು.
"ಚಿತ್ರಗುಪ್ತ"ದ ಸಂಪಾದಕರಾದ ಎಂ. ಶ್ಯಾಮಸುಂದರ ಭಾರದ್ವಾಜರು “ಮುನ್ನುಡಿ"ಯಲ್ಲಿ ಪುಸ್ತಕದ ಬಗ್ಗೆ ಹೀಗೆ ಬರೆದಿದ್ದಾರೆ: “ಶ್ರೀ ನಿರಂಜನರು “ಮಿತಭಾಷಿ" (ಎಂಬ ಹೆಸರಿನಲ್ಲಿ) ಚಿತ್ರಗುಪ್ತದಲ್ಲಿ ಬರೆದಿರುವ ಈ ಲೇಖನಗಳಲ್ಲಿ ಒಂದು ವಿಶಿಷ್ಟ ಗುಣವಿದೆ. ಆ ಗುಣ, ಮಾನವತೆಯ ದೃಷ್ಟಿಯಿಂದ ಅನುದಿನದ ಪ್ರತಿಯೊಂದು “ಸಾಮಾನ್ಯ" ವಿಷಯವನ್ನೂ ಗ್ರಹಿಸಿ ನೋಡುವುದು. ದಿನ ಪತ್ರಿಕೆಗಳಲ್ಲಿ ಚೂರುಚೂರು ಸುದ್ದಿಯಾಗಿ ನೀರಸವಾಗಿ ಪ್ರಕಟವಾಗುವ ಅದೆಷ್ಟೊ ವಿಷಯಗಳನ್ನು ಆ ರೀತಿ ನೋಡಿ, ಅವುಗಳಿಗೊಂದು ಹೊಸ ರೂಪ ಕೊಟ್ಟು, ಒಂದೊಂದು ವೇಳೆ ಕಹಿಯಾಗಿ ಕಟುವಾಗಿ ಇನ್ನೊಂದೊಂದು ವೇಳೆ ಸಿಹಿಯಾಗಿ ಮಧುರವಾಗಿ ಓದುಗರಿಗೆ ವಿಶೇಷ ವಸ್ತುಗಳನ್ನು ನಿರಂಜನರು ಈ ಲೇಖನಗಳ ಮೂಲಕ ಒದಗಿಸಿದ್ದಾರೆ.
ಲೇಖಕರು: ಡಾ. ಹಿರೇಮಲ್ಲೂರ ಈಶ್ವರನ್
ಪ್ರಕಾಶಕರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ
ಮೊದಲ ಮುದ್ರಣ: 1972 ಪುಟ: 36 + 122 ಬೆಲೆ: ರೂ.3/-
ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು ಬಂದಿರುವ ಹಾದಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ. ಯಾಕೆಂದರೆ ಭಾರತದ ವಿವಿಧ ಪ್ರದೇಶಗಳ ಹತ್ತು ಹಳ್ಳಿಗಳ 50 ವರುಷಗಳ ಹಿಂದಿನ ಚಿತ್ರಣವನ್ನು ಈ ಪುಸ್ತಕ ನಮಗೆ ಒದಗಿಸುತ್ತದೆ.
ಪ್ರಸಿದ್ಧ ಸಾಮಾಜಿಕ ಶಾಸ್ತ್ರಜ್ನರಾದ ಲೇಖಕರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: "ನಮ್ಮ ದೇಶದಲ್ಲಿ ಸುಮಾರು 5,58,000 ಹಳ್ಳಿಗಳಿದ್ದು ಈ ಹಳ್ಳಿಗಳಲ್ಲಿ ದೇಶದ ಜನಸಂಖ್ಯೆಯ ಶೇಕಡ 80ರಷ್ಟು ಜನ ವಾಸವಾಗಿದ್ದಾರೆ. ಇವರೆಲ್ಲರ ಮುಖ್ಯ ವೃತ್ತಿಯು ಒಕ್ಕಲುತನವೆ ಆಗಿದೆ. ಪಾಶ್ಚಿಮಾತ್ಯರ ದೃಷ್ಟಿಯಿಂದ ಈ ಹಳ್ಳಿಗಳನ್ನು, ಇಲ್ಲಿ ವಾಸವಾಗಿರುವ ಜನತೆಯ ಬದುಕನ್ನು ನಿರೀಕ್ಷಿಸಿದಾಗ ಭಾರತವು ಕಡುದಾರಿದ್ರ್ಯದಿಂದಲು ತಮ್ಮನ್ನೆ ತಾವು ಪೋಷಿಸಿಕೊಳ್ಳಲಾಗದ ಜನತೆಯಿಂದಲೂ ತುಂಬಿದ ನಾಡೆಂದು ಗೋಚರವಾಗುವುದು. ಹೀಗೆ ಬಡತನ, ಕೊರತೆಯ ಬಾಳು ಜನರನ್ನು ಆವರಿಸಿದ್ದರೂ ಈ ಜನತೆ ಶತಮಾನಗಳ ಪರ್ಯಂತ ತೃಪ್ತಿಯ ಜೀವನವನ್ನು ಪೋಷಿಸಿಕೊಂಡು ಪ್ರಾಚೀನ ಸಂಸ್ಕೃತಿಯೊಂದರ ಹಿರಿಯ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರ ಧರ್ಮ, ಆಚಾರ ರೂಢಿಗಳು, ನಿಷ್ಠೆನಂಬುಗೆಗಳು ಬಾಳಿನ ವಿವಿಧ ಕ್ಷೇತ್ರಗಳನ್ನೆಲ್ಲ ಆವರಿಸಿ, ಪರಂಪರೆಯ ಜಾಡಿನಲ್ಲಿ ಇವರನ್ನು ಕಷ್ಟಸಂಕೋಲೆಗಳ ಮಧ್ಯೆ ಕೈಹಿಡಿದು ಇಲ್ಲಿಯ ವರೆಗೂ ಕರೆದು ತಂದಿವೆ.