ಲೇಖಕರು: ಡಾ. ಹಿರೇಮಲ್ಲೂರ ಈಶ್ವರನ್
ಪ್ರಕಾಶಕರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ
ಮೊದಲ ಮುದ್ರಣ: 1972 ಪುಟ: 36 + 122 ಬೆಲೆ: ರೂ.3/-
ನಮ್ಮ ದೇಶ ಭಾರತವು ಸ್ವಾತಂತ್ರ್ಯ ಗಳಿಸಿ 75 ವರುಷಗಳು ದಾಟಿವೆ. ಇದೀಗ ಎಪ್ರಿಲ್ 2023ರಲ್ಲಿ ಭಾರತವು (ಚೀನಾವನ್ನು ಹಿಂದಿಕ್ಕಿ) ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ. ಈ ಸನ್ನಿವೇಶದಲ್ಲಿ ಇಂತಹ ಪುಸ್ತಕವೊಂದರ ಅಧ್ಯಯನವು ಭಾರತವು ಹಾದು ಬಂದಿರುವ ಹಾದಿಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕ. ಯಾಕೆಂದರೆ ಭಾರತದ ವಿವಿಧ ಪ್ರದೇಶಗಳ ಹತ್ತು ಹಳ್ಳಿಗಳ 50 ವರುಷಗಳ ಹಿಂದಿನ ಚಿತ್ರಣವನ್ನು ಈ ಪುಸ್ತಕ ನಮಗೆ ಒದಗಿಸುತ್ತದೆ.
ಪ್ರಸಿದ್ಧ ಸಾಮಾಜಿಕ ಶಾಸ್ತ್ರಜ್ನರಾದ ಲೇಖಕರು ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: "ನಮ್ಮ ದೇಶದಲ್ಲಿ ಸುಮಾರು 5,58,000 ಹಳ್ಳಿಗಳಿದ್ದು ಈ ಹಳ್ಳಿಗಳಲ್ಲಿ ದೇಶದ ಜನಸಂಖ್ಯೆಯ ಶೇಕಡ 80ರಷ್ಟು ಜನ ವಾಸವಾಗಿದ್ದಾರೆ. ಇವರೆಲ್ಲರ ಮುಖ್ಯ ವೃತ್ತಿಯು ಒಕ್ಕಲುತನವೆ ಆಗಿದೆ. ಪಾಶ್ಚಿಮಾತ್ಯರ ದೃಷ್ಟಿಯಿಂದ ಈ ಹಳ್ಳಿಗಳನ್ನು, ಇಲ್ಲಿ ವಾಸವಾಗಿರುವ ಜನತೆಯ ಬದುಕನ್ನು ನಿರೀಕ್ಷಿಸಿದಾಗ ಭಾರತವು ಕಡುದಾರಿದ್ರ್ಯದಿಂದಲು ತಮ್ಮನ್ನೆ ತಾವು ಪೋಷಿಸಿಕೊಳ್ಳಲಾಗದ ಜನತೆಯಿಂದಲೂ ತುಂಬಿದ ನಾಡೆಂದು ಗೋಚರವಾಗುವುದು. ಹೀಗೆ ಬಡತನ, ಕೊರತೆಯ ಬಾಳು ಜನರನ್ನು ಆವರಿಸಿದ್ದರೂ ಈ ಜನತೆ ಶತಮಾನಗಳ ಪರ್ಯಂತ ತೃಪ್ತಿಯ ಜೀವನವನ್ನು ಪೋಷಿಸಿಕೊಂಡು ಪ್ರಾಚೀನ ಸಂಸ್ಕೃತಿಯೊಂದರ ಹಿರಿಯ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರ ಧರ್ಮ, ಆಚಾರ ರೂಢಿಗಳು, ನಿಷ್ಠೆನಂಬುಗೆಗಳು ಬಾಳಿನ ವಿವಿಧ ಕ್ಷೇತ್ರಗಳನ್ನೆಲ್ಲ ಆವರಿಸಿ, ಪರಂಪರೆಯ ಜಾಡಿನಲ್ಲಿ ಇವರನ್ನು ಕಷ್ಟಸಂಕೋಲೆಗಳ ಮಧ್ಯೆ ಕೈಹಿಡಿದು ಇಲ್ಲಿಯ ವರೆಗೂ ಕರೆದು ತಂದಿವೆ.
ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆತ ಅನಂತರ ಭಾರತೀಯರ, ಮುಖ್ಯವಾಗಿ ಈ ಹಳ್ಳಿಗರ ಉದ್ಧಾರಕ್ಕೆಂದು ಪ್ರಜಾರಾಜ್ಯವು ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡಿತು. ಈ ಯೋಜನೆಗಳು ನಮ್ಮ ರೈತರ ಬದುಕಿನಲ್ಲಿ ಕ್ರಾಂತಿಯನ್ನು ಸಾಧಿಸುವುದಕ್ಕೆ ಬಂದಿವೆ. ನಮ್ಮ ಹಳ್ಳಿಗಾಡಿನ ವ್ಯಕ್ತಿತ್ವವನ್ನೇ ಬದಲಿಸಲು ಈ ಯೋಜನೆಗಳ ಮೂಲಕ ವಿವಿಧ ಬಗೆಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯತ್ನಿಸುತ್ತಿವೆ.….
ಮೂರು ಪಂಚವಾರ್ಷಿಕ ಯೋಜನೆಗಳು ಮುಗಿಯುತ್ತ ಬಂದವು; ನಾಲ್ಕನೆಯ ಯೋಜನೆ ಸಿದ್ಧವಾಗಿದೆ. ಈ ಒಂದೂವರೆ ದಶಕದ ಅವಧಿಯಲ್ಲಿ ನಡೆದ ಚಟುವಟಿಕೆಗಳು ನಮ್ಮ ಹಳ್ಳಿಗರ ಬದುಕನ್ನು ನಿರ್ದಿಷ್ಟವಾಗಿ ಬದಲಾಯಿಸಿವೆ. ಮತ್ತು ಈ ಬದಲಾವಣೆ ನಿರ್ದಿಷ್ಟ ಗುರಿಯತ್ತ ದೃಢತೆಯಿಂದ, ತೀವ್ರಗತಿಯಿಂದ ಸಾಗಿದೆ. ಹೆಚ್ಚೆಂದರೆ ಇನ್ನೆರಡು ಯೋಜನೆಗಳ ಕಾಲಾವಧಿಯಲ್ಲಿ ಭಾರತದ ಹಳ್ಳಿಗರ ಜೀವನವು ಗುರುತಿಸದಷ್ಟು ಬದಲಾಗುವುದೆಂದು ನಂಬಲಾಗಿದೆ.”
ಈ ಹಳ್ಳಿಗಳನ್ನು ಈಗ ಶಾಸ್ತ್ರೋಕ್ತವಾಗಿ ಅಭ್ಯಸಿಸುವ ಅಗತ್ಯವಿದೆ ಎನ್ನುತ್ತಾ ಅದರ ಮುಖ್ಯ ಕಾರಣವನ್ನು ಲೇಖಕರು ಹೀಗೆ ವಿವರಿಸುತ್ತಾರೆ: “ಭಾರತದ ಹಳ್ಳಿಗಳು ಈ ನಾಡಿನ ಪ್ರಾಚೀನ ಸಂಸ್ಕೃತಿಯನ್ನು, ಈ ಸಂಸ್ಕೃತಿಯಲ್ಲಿ ಅಡಕವಾಗಿರುವ ಅಪೂರ್ವ ಮೌಲ್ಯಗಳನ್ನು ಕಾಲಪುರುಷನ ಕ್ರೂರ ದಬ್ಬಾಳಿಕೆಯಿಂದ ರಕ್ಷಿಸಿಕೊಂಡು ಬಂದಿವೆ. … ಭಾರತದ ಹಳ್ಳಿಗಳು ಶೀಘ್ರಗತಿಯಿಂದ ಬದಲಾಗುತ್ತಿರುವ ಈ ಕಾಲದಲ್ಲಿ ಅವನ್ನು ಕೂಲಂಕಷವಾಗಿ, ಶಾಸ್ತ್ರೋಕ್ತವಾಗಿ ಅಭ್ಯಸಿಸಿ ಅವುಗಳ ವ್ಯಕ್ತಿತ್ವವನ್ನು ರೂಪಿಸುವ ಅವಶ್ಯಕತೆ ಎಂದಿಗಿಂತಲೂ ಈಗ ಹೆಚ್ಚಾಗಿದೆ. ನಾವೀಗ ಈ ಹಳ್ಳಿಗಳನ್ನು ಅಭ್ಯಸಿಸದಿದ್ದರೆ ಇವುಗಳ ಮಧ್ಯದಲ್ಲಿ ರಕ್ಷಿತವಾಗಿರುವ ಮೌಲ್ಯಗಳ ಹಿರಿಮೆ, ಇವುಗಳ ವ್ಯಕ್ತಿತ್ವ ಬಹುಬೇಗ ಸ್ಮೃತಿಪಥದಿಂದ ಮರೆಯಾಗುವವು. ಹೀಗೆ ಆದರೆ ಭಾರತೀಯರು ಕ್ರಿಯಾತೀತವಾದ ಸಾಂಸ್ಕೃತಿಕ ಸಂಪತ್ತಿಗೆ ಎರವಾಗಿ ತಮ್ಮ ಪೂರ್ವಜರನ್ನು, ತಮ್ಮನ್ನು, ತಮ್ಮ ಭಾವೀ ಸಂತಾನವನ್ನು ವಂಚಿಸುವರು. ನಮ್ಮ ತಂದೆ ತಾಯಂದಿರು, ಅಜ್ಜ ಮುತ್ತಜ್ಜಂದಿರು ಹೇಗಿದ್ದರು, ಅವರು ಹೇಗೆ ಬಾಳಿದರು ಎಂದು ಕೇಳುವುದಕ್ಕೆ ನಾವು ಇಷ್ಟ ಪಡುವುದಿಲ್ಲವೆ? ಅವರ ಜೀವನದ ಹೋರಾಟ, ಅವರು ರಕ್ಷಿಸಿಕೊಂಡು ಬಂದ ಗುಣಗಳನ್ನು ಕಂಡು ನಾವು ಹರ್ಷಿಸುವುದಿಲ್ಲವೆ? ಹಾಗೆಯೇ ನಮ್ಮ ಬಗೆಗೂ ಕೇಳಿ ತಿಳಿಯಲು, ಹರ್ಷಿಸಲು ನಮ್ಮ ಸಂತಾನ ಇಷ್ಟ ಪಡುವುದು. … ಆದುದರಿಂದ ನಾವಿಂದು ಈಗಿನ ಜನಪದದ ಬದುಕನ್ನು ಇದ್ದಕ್ಕಿದ್ದಂತೆ ಚಿತ್ರಿಸಿ ಅದನ್ನು ಕಾಲಪುರುಷನ ಭದ್ರಸಂದುಕದಲ್ಲಿ ಇರಿಸುವ ವ್ಯವಸ್ಥೆ ಮಾಡಬೇಕಾಗಿದೆ. ಈ ಹೊಣೆಯನ್ನು ತಪ್ಪಿಸಿಕೊಂಡರೆ ನಾವು ಅಪರಾಧಿಗಳಾಗುತ್ತೇವೆ.”
ಕಳೆದ ನೂರು ವರುಷಗಳಿಂದಲೂ ಭಾರತದ ಹಳ್ಳಿಗಳನ್ನು ಅಭ್ಯಸಿಸುವ ಯತ್ನಗಳು ನಡೆದಿವೆ ಎಂಬುದನ್ನು ಮುನ್ನುಡಿಯಲ್ಲಿ ಲೇಖಕರು ತಿಳಿಸುತ್ತಾರೆ. “ಆದರೆ ತೀರ ಇತ್ತೀಚೆಗೆ, ಎಂದರೆ ಒಂದು ದಶಕದಿಂದ ಸಮಾಜವಿಜ್ನಾನಿಗಳು, ಸಾಮಾಜಿಕ ಮಾನವಶಾಸ್ತ್ರಜ್ನರು ನಡೆಸಿದ ಅಭ್ಯಾಸಗಳು ಭಾರತದ ಹಳ್ಳಿಗಳ ಬಗೆಗೆ ಇದು ವರೆಗೂ ಸಾಗಿ ಬಂದಿರುವ ತಪ್ಪು ಕಲ್ಪನೆಗಳನ್ನು ತಿದ್ದಲು ನೆರವಾಗಿವೆ” ಎಂಬುದನ್ನೂ ತಿಳಿಸುತ್ತಾರೆ.
ಉದಾಹರಣೆಗೆ, ಸ್ವಭಾವತಃ ಭಾರತದ ಹಳ್ಳಿಗರು ಬದಲಾವಣೆಗೆ ವಿರೋಧಿಗಳಲ್ಲ ಎಂಬ ಸಂಗತಿ. ಇದಕ್ಕೆ ಸಾಕ್ಷಿ ಈ ಪುಸ್ತಕದಲ್ಲಿ ದಾಖಲಾಗಿರುವ ಹತ್ತು ಹಳ್ಳಿಗಳು: ಇಂದ್ರಪುರ (ಗುಜರಾತದ ಹಳ್ಳಿ); ಉಂಬ್ರೋಲಿ (ಮಹಾರಾಷ್ಟ್ರದ ಹಳ್ಳಿ); ಕಸೋಲ (ಕುಲುಪ್ರದೇಶದ ಹಳ್ಳಿ); ಕುಮುದವಲ್ಲಿ (ಆಂಧ್ರಪ್ರದೇಶದ ಹಳ್ಳಿ); ಗೋಯಿಂದವಾಲ (ಪಂಜಾಬದ ಹಳ್ಳಿ); ಪದ್ಮಪುರ (ಒರಿಸ್ಸಾದ ಹಳ್ಳಿ); ಬಾರಿತೊಲಾ (ಬಿಹಾರದ ಹಳ್ಳಿ); ರಾಯನಪೇಟೆ (ತಮಿಳುನಾಡಿನ ಹಳ್ಳಿ); ವಾಘೋರಾ (ರಾಜಸ್ಥಾನದ ಹಳ್ಳಿ); ಶಿವಪುರ (ಮೈಸೂರು ರಾಜ್ಯದ ಹಳ್ಳಿ. ಇದರ ಮೂಲ ಹೆಸರನ್ನು ಗುಪ್ತವಾಗಿಡಲಾಗಿದೆ.) ಭಾರತದ ಉದ್ದಗಲದ ಈ ಹತ್ತು ಹಳ್ಳಿಗಳ ಚಿತ್ರಣವನ್ನು 16 ಆಧಾರಗ್ರಂಥಗಳ ಮಾಹಿತಿಯನ್ನು ಆಧರಿಸಿ ಈ ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿದೆ.
ಈ ಹಳ್ಳಿಗಳ ಅಭ್ಯಾಸದಿಂದ ಬದಲಾಗುತ್ತಿರುವ ಹಳ್ಳಿಗಾಡಿನ ಜೀವನದ ಬಗೆಗೆ ಆಶ್ಚರ್ಯಕರವಾದ ಆದರೂ ನಿಜವಾದ ವಿವರಗಳು ಬೆಳಕಿಗೆ ಬಂದಿವೆ. ಉದಾಹರಣೆಗೆ ಭಾರತದ ಹಳ್ಳಿಗಳ ಬದುಕಿನಲ್ಲಿ ಜಾತಿ ಪದ್ಧತಿಯ ಪ್ರಭಾವ.
ಇದರ ಬಗ್ಗೆ ಲೇಖಕರು ಮುನ್ನುಡಿಯಲ್ಲಿ ನೀಡಿರುವ ಮಾಹಿತಿ: "ನಮ್ಮ ಸಮಾಜದ ರಚನೆಯು ಜಾತಿಪದ್ಧತಿಯನ್ನು ಆಧರಿಸಿ ಉಂಟಾಗಿದೆ. ಆದುದರಿಂದಲೇ ಜಾತಿಯ ಸೂತ್ರಗಳು ಸಮಾಜಜೀವನದ ಎಲ್ಲ ಕ್ಷೇತ್ರಗಳನ್ನು ಆವರಿಸಿವೆ. ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಅದು ನಿಕಟವಾದ ತಳಕು ಹಾಕಿಕೊಂಡಿದೆ. … ನಮ್ಮ ನಾಡಿನ ಎಂಟೂ ದಿಕ್ಕಿನಲ್ಲಿರುವ ಹಳ್ಳಿಗಳಲ್ಲಿ ಇಂದು ಜಾತಿಯ ತಳಹದಿಯ ಮೇಲೆ ತೀವ್ರವಾದ ಸ್ಪರ್ಧೆ ನಡೆದು ಅದರ ದುಷ್ಪರಿಣಾಮಗಳು ಎಲ್ಲ ಕಡೆಗೂ ತಲೆಯೆತ್ತಿವೆ. ಈ ದುಷ್ಪರಿಣಾಮಗಳನ್ನು ಜಾತಿವಾದದ ಫಲವೆಂದು ಹೇಳಬಹುದು. ಪ್ರಾಚೀನ ಕಾಲದಿಂದಲೂ ಈ ಬಗೆಯ ಘರ್ಷಣೆಗಳಿದ್ದವು. ಆದರ ಪ್ರಸ್ತುತಗಾತ್ರದಲ್ಲಿ, ಆಳ ಹಾಗೂ ವ್ಯಾಪ್ತಿಯಲ್ಲಿ ಸ್ಪರ್ಧೆವೈರಗಳು ನಡೆದಂತೆ ಭಾರತದಲ್ಲಿ ಈ ಹಿಂದೆ ಎಂದಿಗೂ ನಡೆದಿರಲಿಲ್ಲವೆಂಬ ಅಭಿಪ್ರಾಯವನ್ನು ಸಾಮಾನ್ಯ ಮಾನವಶಾಸ್ತ್ರದ ಅಭ್ಯಾಸಿಗಳು ವ್ಯಕ್ತಪಡಿಸಿದ್ದಾರೆ. ...
(ಉದಾಹರಣೆಗೆ) ಮೈಸೂರು ರಾಜ್ಯದಲ್ಲಿ ಬಹುಸಂಖ್ಯಾತರಾದ ಲಿಂಗಾಯತ ಒಕ್ಕಲಿಗರಲ್ಲಿ ಸ್ಪರ್ಧೆ ನಡೆದರೆ, ಕೇರಳದಲ್ಲಿ ನಾಯರ್, ಕ್ರಿಶ್ಚಿಯನ್ ಮತ್ತು ಇಜವನ್ನರಲ್ಲಿ, ಆಂಧ್ರದಲ್ಲಿ ರೆಡ್ಡಿ ಮತ್ತು ಕಮ್ಮಾ ಜಾತಿಗಳ ನಡುವೆ, ಮದರಾಸಿನಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರರೊಳಗೆ, ಮಹಾರಾಷ್ಟ್ರದಲ್ಲಿ ಮರಾಟರು, ಬ್ರಾಹ್ಮಣರು ಮತ್ತು ಮಹಾರರ ಮಧ್ಯೆ, ಗುಜರಾತದಲ್ಲಿ ಬನಿಯ, ಪಟೆದಾರ ಮತ್ತು ಕೋಳಿಗಳs ಮಧ್ಯೆ, ಬಿಹಾರದಲ್ಲಿ ಭೂಮಿಹಾರ್, ಕಾಯಸ್ಥ ಮತ್ತು ರಜಪೂತರು, ಉತ್ತರಪ್ರದೇಶದಲ್ಲಿ ರಜಪೂತ ಮತ್ತು ಚಮಾರರು, ಪಂಜಾಬದಲ್ಲಿ ಹೀದೂ ಮತ್ತು ಶೀಖರು ಇವರುಗಳೊಳಗೆ ನಡೆದುಬಂದಿರುವ ರಾಜಕೀಯ ಕಲಹ ಹಾಗೂ ಸ್ಪರ್ಧೆಗಳು ಆಧುನಿಕ ಭಾರತದಲ್ಲಿ ತೀವ್ರವಾಗಿ ತಲೆಯೆತ್ತಿರುವ ಜಾತಿವಾದದ ದುಷ್ಟ ಪರಿಣಾಮಗಳಾಗಿವೆ.”
ಈ ಪುಸ್ತಕದಲ್ಲಿ ದಾಖಲಾಗಿರುವ, ಭಾರತದ 10 ಹಳ್ಳಿಗಳ ಸಾಮಾಜಿಕ - ಆರ್ಥಿಕ - ರಾಜಕೀಯ - ಸಾಂಸ್ಕೃತಿಕ ವಿವರಗಳನ್ನು ಅಧ್ಯಯನ ಮಾಡಿದ ನಂತರ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು: ಶೈಕ್ಷಣಿಕ, ಆರೋಗ್ಯ ಹಾಗೂ ತಂತ್ರಜ್ನಾನದ ಕ್ಷೇತ್ರಗಳಲ್ಲಿ ದಾಪುಗಾಲಿಟ್ಟಿರುವ ಭಾರತದಲ್ಲಿ ಇಂದಿಗೂ ಭಿನ್ನ ಜಾತಿಯ ಗಂಡುಹೆಣ್ಣು ಪರಸ್ಪರ ಪ್ರೀತಿಸಿ ಮದುವೆಯಾದರೆ, ಅವರಿಬ್ಬರನ್ನೂ ಹೆತ್ತವರು ಅಥವಾ ಕುಟುಂಬದವರು ಕೊಲೆ ಮಾಡುವ ಪ್ರಕರಣಗಳು ಮರುಕಳಿಸುತ್ತಿರುವುದು ಯಾಕೆ?
ಆ ಎಲ್ಲ ಕ್ರಾಂತಿಕಾರಕ ಬದಲಾವಣೆಗಳು, ಭಾರತದಲ್ಲಿ ಬೇರುಬಿಟ್ಟಿರುವ “ಜಾತಿಪದ್ಧತಿ"ಯನ್ನು ಬದಲಾಯಿಸಿ, ಜನಜೀವನದಲ್ಲಿ ನೆಮ್ಮದಿ ನೆಲೆಸುವಂತಹ ಸಾಮಾಜಿಕ ಬದಲಾವಣೆ ತರಬೇಕಾದರೆ, ನಮ್ಮಲ್ಲಿ ಪ್ರತಿಯೊಬ್ಬರ ಕರ್ತವ್ಯ ಏನು? ಆ ಮಹಾನ್ ಕರ್ತವ್ಯಪಾಲನೆಗೆ ನಾವು ಪ್ರತಿಯೊಬ್ಬರೂ ತಯಾರಾಗದಿದ್ದರೆ, ಇನ್ನು 75 ವರುಷಗಳು ದಾಟಿದರೂ ನಮ್ಮ ಬದುಕು ಹೀಗೆಯೇ ಇದ್ದೀತು, ಅಲ್ಲವೇ?