My Books
ಲೇಖಕರು: ಬಿ.ಎಸ್.ರುಕ್ಕಮ್ಮ
ಪ್ರಕಾಶಕರು: ಶ್ರೀ ಪ್ರಕಾಶನ, ನಂ.15, "ಎನ್" ಬ್ಲಾಕ್, ರಾಜಾಜಿ ನಗರ, ಬೆಂಗಳೂರು
ಮರುಮುದ್ರಣ: 1999, ಪುಟ:78, ಬೆಲೆ: ರೂ.15
ನಾವರಿಯದ ಲೋಕವೊಂದಿದೆ. ಅದು ಕೀಟಗಳ ಹುಟ್ಟು-ಬದುಕು-ಸಾವಿನ ಲೋಕ. ಈ ಅದ್ಭುತ ಲೋಕವನ್ನು ಭೂಲೋಕದ ಜನರಿಗೆ ಪರಿಚಯಿಸಿದವನು ಫ್ರೆಂಚ್ ಕೀಟಶಾಸ್ತ್ರಜ್ನ ಮತ್ತು ಪ್ರಸಿದ್ಧ ಲೇಖಕ ಜೀನ್ ಹೆನ್ರಿ ಫೇಬರ್. ಅದನ್ನೂ ಫೇಬರನನ್ನೂ ಕನ್ನಡಿಗರಿಗೆ ಪರಿಚಯಿಸಿದವರು ಬಿ.ಎಸ್. ರುಕ್ಕಮ್ಮ.
ಮಕ್ಕಳಾದ ಬಾಲು, ವಸಂತಿ ಮತ್ತು ಪುಟ್ಟ ಬಾಲಕ ಶ್ರೀನಿವಾಸನೊಡನೆ ಅವರ ಹಿರಿಯಕ್ಕ ಶ್ರೀಮತಿ ನಡೆಸುವ ಸಂಭಾಷಣೆಯ ರೂಪದಲ್ಲಿ ಫೇಬರನ ಕೀಟಲೋಕದ ವಿಸ್ಮಯಗಳನ್ನು ಈ ಪುಸ್ತಕದಲ್ಲಿ ಲೇಖಕಿ ತೆರೆದಿಡುತ್ತಾರೆ.
“ಅಬ್ಬಬ್ಬಾ, ನನ್ನ ಕೆನ್ನೆ ಪಕ್ಕದಲ್ಲೇ ಹಾರೋಯ್ತು. ಕೆಂಪುದು. ಸದ್ಯ ಕಚ್ಚಲಿಲ್ಲ. ಅಕ್ಕ, ಅದೆಂಥ ಹುಳು?” ಎಂಬ ಪ್ರಶ್ನೆಗೆ ಉತ್ತರವಾಗಿ "ಅದು ಕಣಜ (ಡಿಗ್ಗರ್ ವಾಸ್ಪ್). ಅವುಗಳ ಕಥೆ ಸೊಗಸು. ಅದು ನೆಲ ತೋಡಿ ಗೂಡು ಮಾಡುತ್ತೆ ...” ಎಂಬ ಮಾತಿನೊಂದಿಗೆ "ಶ್ರೀಮತಿ ಕಣಜ" ಎಂಬ ಅಧ್ಯಾಯ ಆರಂಭಿಸುತ್ತಾರೆ. “ಅವುಗಳಲ್ಲಿ ಕಣಜದ ಹೆಂಡತಿ ನೆಲ ತೋಡುತ್ತದೆ. ಗಂಡು ಕಣಜ ಏನೂ ಮಾಡೋಲ್ಲ. ಉಂಡಾಡಿ ಗುಂಡ …ತಾನು ಮಕರಂದವನ್ನು ಕುಡಿದು ಬದುಕಿದರೂ, ಮಕ್ಕಳಿಗೆ ಮಾಂಸ ಬೇಕು ಎನ್ನುವುದು ಅದಕ್ಕೆ ಗೊತ್ತು. ಆದ್ದರಿಂದ ತನ್ನಿಂದ ಎರಡರಷ್ಟು ಭಾರವಾದ ದೊಡ್ಡ ಜೀರುಂಡೆಯನ್ನು ಹೊತ್ತು ಗೂಡಿಗೆ ತರುತ್ತದೆ”ಎಂದು ಕತೆ ಮುಂದುವರಿಸುತ್ತಾರೆ.
ಸಂಪಾದಕರು: ಎಸ್. ಜಿ. ಸಿದ್ಧರಾಮಯ್ಯ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ವಸಂತ ಕುಂಜ, ನವದೆಹಲಿ
ಪ್ರಕಟಣೆ: 2016 ಪುಟ: 175 ಬೆಲೆ: ರೂ. 170/-
ಕನ್ನಡದ ಯುವ ಕತೆಗಾರರು ಬರೆದ 14 ಕತೆಗಳ ಸಂಕಲನ ಇದು. ಇಂತಹ ಸಂಕಲನಗಳು ವಿರಳವಾಗುತ್ತಿರುವ ಕಾಲದಲ್ಲಿ, ಇದನ್ನು “ನವಲೇಖನ ಮಾಲೆ"ಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದೆ.
ಕಳೆದ ಒಂದು ನೂರು ವರುಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ ಎಂಬ ಸಾಹಿತ್ಯ ಪ್ರಕಾರ ವಿಸ್ತಾರವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಮುಖ್ಯ ಕಾರಣ ಇಂಗ್ಲಿಷ್ ಸಾಹಿತ್ಯದ ಪ್ರಭಾವ. ಅದಕ್ಕಿಂತಲೂ ಮುಂಚೆ ಕನ್ನಡದಲ್ಲಿ ಸಣ್ಣ ಕತೆಯಂತಹ ಬರಹಗಳು ಇದ್ದವು. ಆದರೆ ಅವು ನೀತಿಬೋಧನೆಗೆ ಸೀಮಿತವಾಗಿದ್ದವು. ಕಳೆದ ಶತಮಾನದಲ್ಲಿ ನಮ್ಮ ಸಮಾಜದಲ್ಲಿ ಆಗಿರುವ ಬದಲಾವಣೆಗಳ ಪರಿಣಾಮ ಕನ್ನಡ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಆರಂಭದಲ್ಲಿ ಇಂಗ್ಲಿಷ್ ಸಣ್ಣಕತೆಗಳ ಅನುವಾದ ಹಾಗೂ ಭಾವಾನುವಾದದಿಂದ ಶುರುವಾದ ಬದಲಾವಣೆಯ ಪ್ರವಾಹ, ನಮ್ಮ ನೆಲದ ಭಾಷೆ ಹಾಗೂ ಬದುಕಿನ ಸತ್ವವನ್ನು ಹೀರಿಕೊಂಡು, ವ್ಯಾಪಕವಾಗಿ ಬೆಳೆಯಿತು.
ಮೂಲ ಲೇಖಕರು: ಪಂಡಿತ ವಿಷ್ಣು ಶರ್ಮ
ಸಂಕಲನ - ಸಂಪಾದನೆ: ಕುನ್ವರ್ ಅನಿಲ್ ಕುಮಾರ್
ಕನ್ನಡಾನುವಾದ: ಚಿರಂಜೀವಿ
ಪ್ರಕಾಶಕರು: ವಸಂತ ಪ್ರಕಾಶನ, ಜಯನಗರ, ಬೆಂಗಳೂರು
ಪ್ರಕಟ: 2010 ಪುಟ: 40 ಬೆಲೆ: ರೂ.70/-
ನಮ್ಮಲ್ಲಿ ಹಲವರಿಗೆ ಪಂಚತಂತ್ರದ ಕತೆಗಳು ಗೊತ್ತು. ಆದರೆ, “ಒಂದು ಪಂಚತಂತ್ರದ ಕತೆ ಹೇಳಿ” ಎಂದರೆ ಬಹುಪಾಲು ಜನರು ತಡವರಿಸುತ್ತಾರೆ. ಅಂಥವರೆಲ್ಲ ಪಂಚತಂತ್ರದ ಕತೆಗಳನ್ನು ಕಲಿತು, ಮಕ್ಕಳಿಗೆ ಹೇಳುವ ಕೌಶಲ್ಯ ಬೆಳೆಸಿಕೊಳ್ಳಲು ಈ ಪುಸ್ತಕ ಸಹಾಯಕ. ಯಾಕೆಂದರೆ, ಇದರಲ್ಲಿರುವುದು 18 ಕತೆಗಳು ಮತ್ತು ಪ್ರತಿಯೊಂದು ಕತೆಗೆ ಒಂದು ಅಥವಾ ಎರಡು ಬಣ್ಣದ ಚಿತ್ರಗಳನ್ನು ಮುದ್ರಿಸಿರುವುದರಿಂದ ಕತೆಗಳನ್ನು ನೆನಪಿಟ್ಟುಕೊಳ್ಳಲು ಅನುಕೂಲ.
ಇಂಗ್ಲಿಷಿನಲ್ಲಿ ದೆಹಲಿಯ ಮನೋಜ್ ಪಬ್ಲಿಕೇಷನ್ಸ್ ಪ್ರಕಟಿಸಿದ ಈ ಪುಸ್ತಕವನ್ನು ಕನ್ನಡದಲ್ಲಿ ಪ್ರಕಟಿಸಿದವರು ವಸಂತ ಪ್ರಕಾಶನ. ಈ ಕತೆಗಳ ಕನ್ನಡಾನುವಾದ ಚಿರಂಜೀವಿ ಅವರಿಂದ. ಇದರ ಪ್ರತಿಯೊಂದು ಕತೆಯ ಕೊನೆಯಲ್ಲಿ “ಕತೆಯ ನೀತಿ”ಯನ್ನು ಮುದ್ರಿಸಲಾಗಿದೆ. ಇದರಿಂದಾಗಿ, ಕತೆಗಳನ್ನು ಓದುವ ಅಥವಾ ಕೇಳುವ ಮಕ್ಕಳಿಗೆ ಜೀವನದ ನೀತಿಯೊಂದನ್ನು ಬಹುಕಾಲ ನೆನಪಿಟ್ಟುಕೊಳ್ಳಲು ಸಾಧ್ಯ.
ಇದರಲ್ಲಿನ ಕೆಲವು ಕತೆಗಳು ನನ್ನ ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿದ್ದ ಕಾರಣ ಅವು ಚೆನ್ನಾಗಿ ನೆನಪಿವೆ. ಇದರಿಂದ ಇಂತಹ ನೀತಿ ಕತೆಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸುವುದು ಅತ್ಯಗತ್ಯ ಎಂಬುದು ಸ್ಪಷ್ಟವಾಗುತ್ತದೆ.
ವಿವರಣೆ: ಪ್ರೊ. ಜಿ. ವೆಂಕಟಸುಬ್ಬಯ್ಯ
ಪ್ರಕಾಶಕರು: ಪ್ರಿಸಮ್ ಬುಕ್ಸ್ ಪ್ರೈ. ಲಿ., ಬೆಂಗಳೂರು
ಪ್ರಕಟಣೆ: 1917 ಪುಟ: 128 ಬೆಲೆ: ರೂ. 160/-
ಪ್ರತಿಯೊಬ್ಬರ ಮನೆಯಲ್ಲಿ ಇರಲೇ ಬೇಕಾದ ಪುಸ್ತಕವಿದು. ಯಾಕೆಂದರೆ ಭಾರತದ ಪಾರಂಪರಿಕ ಮಹಾಕಾವ್ಯ ರಾಮಾಯಣದ ಪರಿಚಯವನ್ನು ಸರಳವಾಗಿ ಮಕ್ಕಳಿಗೆ ಮಾಡಿಕೊಡಬಲ್ಲ ಪುಸ್ತಕವಿದು.
ಈ ಪುಸ್ತಕದ ಎಡಭಾಗದ ಪುಟಗಳಲ್ಲಿ ರಾಮಾಯಣದ 60 ಘಟನೆಗಳ ವರ್ಣಚಿತ್ರಗಳಿವೆ; ಪ್ರತಿಯೊಂದು ಚಿತ್ರದ ಘಟನೆಯ ವಿವರಣೆ ಬಲಭಾಗದ 60 ಪುಟಗಳಲ್ಲಿವೆ. ಈ ಚಂದದ ಚಿತ್ರಗಳನ್ನು ಒಂದು ಶತಮಾನದ (1916) ಮುಂಚೆ ರಚಿಸಿದವರು ಭವಾನರಾವ್ ಶ್ರೀನಿವಾಸರಾವ್ ಊರ್ಫ ಬಾಳಸಾಹೇಬ ಪಂಡಿತ ಪಂತ ಪ್ರತಿನಿಧಿ, ಬಿ.ಎ., ಸಂಸ್ಥಾನ ಔಂಧ.
ಇದರ ನಿರೂಪಣೆಯನ್ನು ಬರೆದಿರುವ ಪ್ರೊ. ಜಿ. ವೆಂಕಟಸುಬ್ಬಯ್ಯ ಮುನ್ನುಡಿಯಲ್ಲಿ ಹೀಗೆಂದು ನಿವೇದಿಸಿಕೊಂಡಿದ್ದಾರೆ: “ನನಗೆ ಒಂದು ಹಳೆಯ ಪುಸ್ತಕ ಸಿಕ್ಕಿತು. ಅದರ ಹೆಸರು “ಚಿತ್ರ ರಾಮಾಯಣ.” 1916ರಲ್ಲಿ ಪ್ರಕಟವಾದ ಅದು ಬೊಂಬಾಯಿಯ ಬ್ರಿಟಿಷ್ ಛಾಪಖಾನೆಯಲ್ಲಿ ಛಾಪಿಸಲ್ಪಟ್ಟಿತ್ತು. ಅದಕ್ಕೆ ವಿಜಾಪುರದ ರಾಮಚಂದ್ರ ಮಧ್ವ ಮಹಿಷಿ ಎನ್ನುವವರು ಒಂದು ಪ್ರಸ್ತಾವನೆಯನ್ನು ಬರೆದಿದ್ದಾರೆ. …
ಈ ಪುಸ್ತಕದಲ್ಲಿ 60 ವರ್ಣ ಚಿತ್ರಗಳಿವೆ. … ಎಡಗಡೆಯ ಚಿತ್ರವನ್ನು ನೋಡಿ ಬಲಗಡೆಯ ನಿರೂಪಣೆಯನ್ನು ಓದಿ ಪುಸ್ತಕವನ್ನು ಪೂರೈಸಿದರೆ ರಾಮಾಯಣದ ಕಥೆ ಸಂಗ್ರಹವಾಗಿ ಸಿಗುತ್ತದೆ. ಇದರಲ್ಲಿ ರಾಮಾಯಣದ ಆರು ಕಾಂಡಗಳ ಕಥೆಯನ್ನು ಓದಬಹುದು. ಉತ್ತರಕಾಂಡದ ಕಥೆಯನ್ನು ತೆಗೆದುಕೊಂಡಿಲ್ಲ. ಅದು ವಾಲ್ಮೀಕಿಯು ಬರೆದದ್ದಲ್ಲ ಎಂಬ ನಂಬಿಕೆಯಿದೆ.
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
20ನೆಯ ಮುದ್ರಣ: 2009 ಪುಟ: 141 ಬೆಲೆ: ರೂ. 78/-
ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ.
ಇದರಲ್ಲಿರುವ 14 ಅಧ್ಯಾಯಗಳು ಒಂದಕ್ಕಿಂತ ಒಂದು ಕುತೂಹಲಕಾರಿ. ಕಾಡಿಗೆ ನಾವು ಹೋಗಿ ನೋಡಿದರೂ ನಮಗೆ ಕಾಣಿಸದ ಹಲವಾರು ನೋಟಗಳನ್ನು, ಸೂಕ್ಷ್ಮ ವಿವರಗಳನ್ನು ಇದರಲ್ಲಿ ದಾಖಲಿಸಿದ್ದಾರ ತೇಜಸ್ವಿಯವರು - ತಮ್ಮದೇ ಹಾಸ್ಯಭರಿತ ಶೈಲಿಯಲ್ಲಿ. ಹಾಗೆಯೇ ತಮ್ಮ ಒಡನಾಟಕ್ಕೆ ಬಂದ ಮಾಸ್ತಿ, ಬೈರ, ಮಾರ, ಎಂಗ್ಟ, ಕಾಳಪ್ಪ, ಮೇಸ್ತ್ರಿ ಸೀನಪ್ಪ ಹಾಗೂ ಇತರ ಹಳ್ಳಿಗರ ವರ್ತನೆಗಳನ್ನು ‘ಇದ್ದದ್ದು ಇದ್ದ ಹಾಗೆಯೇ" ಬರೆಯುವ ಮೂಲಕ ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಹೊಸ ದಾರಿಗಳನ್ನೂ ಇಲ್ಲಿ ತೋರಿದ್ದಾರೆ.
ಅವರ ಸಾಕು ನಾಯಿ “ಕಿವಿ" ಹಲವು ಅಧ್ಯಾಯಗಳಲ್ಲಿ ಒಂದು ಪಾತ್ರವೇ ಆಗಿದೆ. ಮೊದಲ ಅಧ್ಯಾಯದಲ್ಲಿ ಅದನ್ನು ತೇಜಸ್ವಿಯವರು ಪರಿಚಯಿಸುವ ಪರಿ: 'ಕರ್ವಾಲೋ ಕಾದಂಬರಿಯಲ್ಲಿ ಬಂದಿರುವ ಕಿವಿ ಎನ್ನುವ ನಾಯಿ ಒಂದು ಕಾಲದಲ್ಲಿ ನನ್ನೊಡನೆ ಇದ್ದ ಅಸಾಧಾರಣ ಬುದ್ಧಿಯ ಶಿಕಾರಿ ನಾಯಿ. ಸ್ಪಾನಿಯಲ್ ಜಾತಿಯ ನಾಯಿ ಆದ ಕಾರಣ ಅದರ ಕಿವಿ ಸುಮಾರು ಅರ್ಧ ಅಡಿಗಿಂತ ಉದ್ದ ಇದ್ದು ತಲೆಯ ಪಕ್ಕದಲ್ಲಿ ವಿಸ್ತಾರವಾಗಿ ಇಳಿ ಬಿದ್ದಿತ್ತು. ಆದ್ದರಿಂದ ಅದಕ್ಕೆ ಕಿವಿ ಎನ್ನುವ ಹೆಸರು ಬಂದಿದ್ದು. …" ಹಾಗೆಯೇ, ಮಾನೀಟರ್ (ಉಡು), ಹಕ್ಕಿಮರಿಗಳು, ಹಾವು, ಕುಕ್ಕುಟ, ಕಪ್ಪೆ, ಆಮೆ, ಕಾಡುಹಂದಿ, ಮಂಗಗಳು ಇತ್ಯಾದಿ ಪ್ರಾಣಿಪಕ್ಷಿಗಳೂ ವಿವಿಧ ಅಧ್ಯಾಯಗಳಲ್ಲಿ ಪಾತ್ರಧಾರಿಗಳಾಗಿವೆ.
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿ ಪುರಂ, ಮೈಸೂರು
14ನೇ ಮುದ್ರಣ: 2008 ಪುಟ: 118 ಬೆಲೆ: ರೂ.69/-
ಕನ್ನಡದ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ನಾಲ್ಕು ಪ್ರಖ್ಯಾತ ಕತೆಗಳ ಸಂಕಲನ ಇದು. ಮೊದಲನೆಯ ಕತೆ “ಕಿರಗೂರಿನ ಗಯ್ಯಾಳಿಗಳು” ಇದರ ನಾಟಕದ ರೂಪಾಂತರ ಹಲವು ಬಾರಿ ರಂಗಸ್ಥಳದ ಮೇಲೆ ಪ್ರದರ್ಶಿತವಾಗಿದೆ. “ಕೃಷ್ಣೇಗೌಡನ ಆನೆ” ಕತೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
ಮಲೆನಾಡಿನ ಮೂಲೆಯ ಹಳ್ಳಿ ಕಿರಗೂರು. ಅಲ್ಲಿನ ಆಗುಹೋಗುಗಳ ಕಥನ “ಕಿರಗೂರಿನ ಗಯ್ಯಾಳಿಗಳು”. ತೇಜಸ್ವಿಯವರು ಮೂಡಿಗೆರೆಯ ಹತ್ತಿರ ಕಾಫಿ ಎಸ್ಟೇಟಿನಲ್ಲಿ ವಾಸಿಸುತ್ತಾ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದವರು. ಹಳ್ಳಿ ಬದುಕಿನ ಸೂಕ್ಷ್ಮ ಅವಲೋಕನದಿಂದಾಗಿಯೇ ಅವರಿಗೆ ಇಂತಹ ಕತೆ ಬರೆಯಲು ಸಾಧ್ಯವಾಗಿದೆ. ಅರಣ್ಯ ಇಲಾಖೆ, ರೆವಿನ್ಯೂ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಅವರ ಭ್ರಷ್ಟಾಚಾರ, ಅವರು ಹಳ್ಳಿಯ ಜನರನ್ನು ಹೆದರಿಸುವ, ಸುಲಿಯುವ, ಶೋಷಿಸುವ ಪರಿ; ಹಳ್ಳಿಯ ಜಾತಿ ರಾಜಕೀಯ; ಮದ್ಯದ ದಾಸರಾಗುವ ಹಳ್ಳಿಗರು; ಗಂಡಸರಿಂದ ಹೆಂಗಸರ ಶೋಷಣೆ, ಅದರ ವಿವಿಧ ಆಯಾಮಗಳು - ಇವನ್ನೆಲ್ಲ ನಮ್ಮ ಕಣ್ಣಿಗೆ ಕಟ್ಟುವಂತೆ ಈ ಕತೆಯಲ್ಲಿ ಚಿತ್ರಿಸಲಾಗಿದೆ. ಕತೆಯ ಮುಕ್ತಾಯದಲ್ಲಿ ಹಳ್ಳಿಯ ಹೆಂಗಸರು “ಅಬಲೆಯರು" ಎಂಬ ಹಣೆಪಟ್ಟಿ ಕಿತ್ತೆಸೆದು ಗಂಡಸರ ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ಸಿಡಿದೇಳುವ ವಿವರಗಳಂತೂ ತೇಜಸ್ವಿಯವರ ಸಮರ್ಥ ಲೇಖನಿಯಲ್ಲಿ ಮುಗಿಲ ಮಿಂಚಿನಂತೆ ಮೂಡಿ ಬಂದಿವೆ.
ಲೇಖಕರು: ಕುವೆಂಪು
ಪ್ರಕಾಶಕರು: ಉದಯರವಿ ಪ್ರಕಾಶನ, ಮೈಸೂರು
ಮೊದಲ ಮುದ್ರಣ: 1940 14ನೇ ಮುದ್ರಣ: 2009 ಪುಟ: 82 ಬೆಲೆ: ರೂ.60/-
ರಾಷ್ಟ್ರಕವಿ ಕುವೆಂಪು ಅವರ ಎಂಟು ಕತೆಗಳ ಸಂಕಲನ ಇದು. ಎಂಟು ದಶಕಗಳ ಮುಂಚೆ ಬರೆದ ಸಣ್ಣ ಕತೆಗಳಾದರೂ ಇವು ಇಂದಿಗೂ ಪ್ರಸ್ತುತ.
ಮೊದಲ ಕತೆ "ನನ್ನ ದೇವರು". ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಯುವತಿಯೊಬ್ಬಳ ಮನದ ತುಮುಲಗಳ ಕತೆಯಿದು. ಭೀಷಣ ಜ್ವರದಿಂದ ಅವಳ ಪತಿ ತೀರಿಕೊಂಡರು. ಅವಳ ಸ್ವಗತ ಆ ಸಂದರ್ಭದ ದಾರುಣತೆಯನ್ನು ಹೀಗೆ ತಿಳಿಸುತ್ತದೆ: “ಮರುದಿನದಲ್ಲಿ ಶ್ಮಶಾನದಲ್ಲಿ ನನ್ನ ಕೈಬಳೆ ಒಡೆದರು. ನನ್ನ ಮೈಮೇಲಿದ್ದ ಆಭರಣಗಳನ್ನೆಲ್ಲ ತೆಗೆದರು. ಮಂಗಲಸೂತ್ರ ಬಿಚ್ಚಿದರು. … ನಾನು ಮಾವನ ಮನೆಗೆ ಬಂದ ಒಂದು ವರುಷದಲ್ಲಿಯೆ ನನ್ನ ಸಕಲ ಸೌಭಾಗ್ಯವೂ ಬದಿದಾಯಿತು. ನನಗಾಗ ಹದಿನೈದು ತುಂಬಿತ್ತು …" ಕ್ರಮೇಣ ಅವಳಲ್ಲಿ ಕೌಮಾರ್ಯ ತುಂಬಿ ತುಳುಕತೊಡಗಿತು. ಅವಳ ಭಾವನಿಗೆ ಆಗ 27 ವರುಷ ವಯಸ್ಸು. (ಅವಳ ಪತಿಗಿಂತ ಮೂರು ವರುಷ ಹಿರಿಯರು). ಸಜ್ಜನರೂ ವಿದ್ಯಾವಂತರೂ ಆಗಿದ್ದ ಅವರು ಮದುವೆ ಆಗಿರಲಿಲ್ಲ. ಅವರ ಬಗ್ಗೆ ಈಕೆಗೆ ಗೌರವ ಭಾವ. ಆದರೆ ದಿನಗಳೆದಂತೆ ಮನಸ್ಸಿನ ದೌರ್ಬಲ್ಯ ಇವಳನ್ನು ತುಯ್ಯತೊಡಗಿತು. ಆ ತಾಕಲಾಟಗಳನ್ನು ಸಮರ್ಥವಾಗಿ ಚಿತ್ರಿಸಿರುವ ಕತೆ ಇದು.
ಲೇಖಕರು: ರಸ್ಕಿನ್ ಬಾಂಡ್
ಕನ್ನಡಕ್ಕೆ: ಅಹಲ್ಯಾ ಚಿಂತಾಮಣಿ
ಚಿತ್ರಗಳು: ಸುದ್ಧಸತ್ವ ಬಸು
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಮರುಮುದ್ರಣ: 2004 ಪುಟ: 96 ಬೆಲೆ: ರೂ. 25/-
ಭಾರತದ ಜನಪ್ರಿಯ ಮಕ್ಕಳ ಪುಸ್ತಕಗಳ ಲೇಖಕರಾದ ರಸ್ಕಿನ್ ಬಾಂಡ್ ಅವರ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಅಹಲ್ಯಾ ಚಿಂತಾಮಣಿ. ರಸ್ಕಿನರ ಹಲವಾರು ಇಂಗ್ಲಿಷ್ ಪುಸ್ತಕಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದವಾಗಿವೆ.
ಚಿತ್ರಗಳಿರುವ ಈ ಪುಸ್ತಕದಲ್ಲಿವೆ ಎರಡು ಭಾಗಗಳು: ಅಂಕಲ್ ಕೆನ್ ಮತ್ತು ಪಲಾಯನದ ಸಾಹಸ ಯಾತ್ರೆ. ಮೊದಲ ಭಾಗದ ಆರು ಅಧ್ಯಾಯಗಳಲ್ಲಿ ಲೇಖಕರು ತನ್ನ ಮಾವ ಕೆನ್ ಅವರ ವಿಚಿತ್ರ ಸ್ವಭಾವಗಳನ್ನು ಪರಿಚಯಿಸುತ್ತಾರೆ. "ಸೋಮಾರಿ ಅಂಕಲ್ ಕೆನ್” ಅಧ್ಯಾಯದಲ್ಲಿ, ಆ ಆಸಾಮಿಯ ಬಗ್ಗೆ ಅವರು ಬರೆದಿರುವ ಕೆಲವು ಮಾತುಗಳು: (ಬೆಟ್ಟದ ತಾಣಕ್ಕೆ ಹೋಗಿದ್ದ ಕೆನ್ ಅಂಕಲ್‌ಗೆ ದಾರಿ ತಪ್ಪಿ, ಒಯ್ದ ಆಹಾರ ಮುಗಿದು, ಸುಸ್ತಾಗಿ ಮನೆಗೆ ಮರಳಿದ ಬಳಿಕ ಎರಡು ದಿನ ರಸ್ಕಿನ್ ಮತ್ತು ಅಜ್ಜಿ ಅಂಕಲ್ ಮನೆಗೆ ಊಟ ಒಯ್ದು ಕೊಡುತ್ತಿದ್ದರು. ಆ ಸಂದರ್ಭದಲ್ಲಿ) "ಅವರಿಗೆ ಸ್ವಲ್ಪವೂ ಕೃತಜ್ನತೆ ಇರಲಿಲ್ಲ. ನನಗನ್ನಿಸುತ್ತೆ ಕೆಲವು ಅಂಕಲ್‌ಗಳು ಯಾವಾಗಲೂ ಅದೇ ತರಹ ಇರುತ್ತಾರೆ. ಅವರು ಎಂದೂ ಬದಲಾಗುವುದಿಲ್ಲ.”
ಲೇಖಕರು: ಎಂ. ಚೊಕ್ಸಿ ಮತ್ತು ಪಿ.ಎಂ. ಜೋಷಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಆರನೇ ಮುದ್ರಣ: 2000 ಪುಟ: 64 + 64 ಬೆಲೆ: ರೂ. 10/- ಮತ್ತು ರೂ. 9/-
ಪುರಾತನ ಕಾಲದ ಕತೆಗಳನ್ನು ಮಕ್ಕಳಿಗಾಗಿ ಸಾದರ ಪಡಿಸಿದ್ದಾರೆ ಎಂ. ಚೋಕ್ಸಿ ಮತ್ತು ಪಿ. ಎಂ. ಜೋಷಿಯವರು. ಆ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಎಂ.ವಿ. ನಾರಾಯಣ ರಾವ್. ಕತೆಗಳಿಗೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಪುಲಕ್ ಬಿಶ್ವಾಸ್. ಇದು ಎರಡು ಭಾಗಗಳಲ್ಲಿ ಮುದ್ರಣವಾಗಿರುವ ಪುಸ್ತಕ.
ಮೊದಲ ಕತೆ "ಆ ಪುರಾತನ ಮೊಹೆಂಜೊದಾರೋ ನಗರದಲ್ಲಿ”. ಐದು ಸಾವಿರ ವರುಷ ಹಿಂದಿನ ಕಾಲದಲ್ಲಿ ಅಲ್ಲಿನ ಜನಜೀವನ ಹೇಗಿತ್ತು ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಸುವ ಕತೆ. ಹುಡುಗರ ತಂಡವೊಂದು ಕೆಲವರ ಮನೆಗೆ ಭೇಟಿ ನೀಡುತ್ತದೆ. ಆ ಮೂಲಕ ಮೊಹೆಂಜೊದಾರೋ ನಗರದಲ್ಲಿ ವಿವಿಧ ವೃತ್ತಿಯ ಜನರು ಏನೇನು ಮಾಡುತ್ತಿದ್ದರು ಎಂಬುದು ಓದುಗರಿಗೆ ತಿಳಿಯುತ್ತದೆ. ವೀರೋಚನನ ಮಗ ಹೈರಾಪ ತಂದೆಯ ಕಾರ್ಖಾನೆಗೆ ಹೋಗುತ್ತಾನೆ. ಅಲ್ಲಿ ಬಳಪದ ಕಲ್ಲುಗಳ ರಾಶಿ. ವೀರೋಚನ ಬಳಪದ ಕಲ್ಲುಗಳಲ್ಲಿ ಗುಂಡಗಿನ ಅಥವಾ ಆಯತಾಕಾರದ ಮುದ್ರೆ (ಮೊಹರು)ಗಳನ್ನು ಕೆತ್ತುವವನು. ನಗರದ ವರ್ತಕರೂ ಇತರರೂ ತಮ್ಮ ಗುರುತು ಸೂಚಿಸಲು ಈ ಮೊಹರುಗಳನ್ನು ಬಳಸುತ್ತಿದ್ದರು. ನೌಕೆಯಲ್ಲಿ ದೂರದ ದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಿ ಬರುತ್ತಿದ್ದವನು ಕಾಪರ್ದಿ. ಅವನು ಖರ್ಜೂರ ಮತ್ತು ಇತರ ವಸ್ತುಗಳನ್ನು ತರುತ್ತಿದ್ದ. ತನ್ನ ಬಳಿ ಬಂದ ಹುಡುಗರಿಗೆ ಈಜಿಪ್ಟಿನ ಪಿರಮಿಡ್ಡುಗಳ ಬಗ್ಗೆ ತಿಳಿಸಿದ.
ಲೇಖಕರು: ಸುಂದರ್ ಸರುಕ್ಕೈ
ಕನ್ನಡಕ್ಕೆ: ಮಾಧವ ಚಿಪ್ಪಳಿ, ಚಿತ್ರಗಳು: ಪ್ರಿಯಾ ಕುರಿಯನ್
ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ
ಪ್ರಕಟ: 2021 ಪುಟ: 80 ಬೆಲೆ: ರೂ. 260/-
ಇದೊಂದು ಅಪರೂಪದ ಪುಸ್ತಕ. ಸುಂದರ್ ಸರುಕ್ಕೈ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಮಾಧವ ಚಿಪ್ಪಳಿ. ನೋಡುವುದು, ಯೋಚನೆ, ಓದುವುದು, ಬರೆಯುವುದು, ಗಣಿತ, ಕಲೆ, ಒಳ್ಳೆಯತನ, ಕಲಿಯುವುದು - ಎಂಬ ಎಂಟು ಅಧ್ಯಾಯಗಳಲ್ಲಿ ಈ ಮೂಲಭೂತ ಸಂಗತಿಗಳ ಬಗ್ಗೆ ಸರಳವಾಗಿ ವಿವರಿಸಲಾಗಿದೆ.
ಪುಸ್ತಕದ ಪ್ರಸ್ತಾವನೆಯಲ್ಲಿ “ಮಕ್ಕಳಿಗಾಗಿ" ಮತ್ತು “ದೊಡ್ಡವರಿಗಾಗಿ" ಎಂಬ ಎರಡು ಭಾಗಗಳಿವೆ. “ಮಕ್ಕಳಿಗಾಗಿ” ಭಾಗದಲ್ಲಿ ಬರೆದಿರುವ ಕೆಲವು ವಿಷಯಗಳು ಹೀಗಿವೆ: “ಈ ಪುಸ್ತಕವು ನಿಮಗೆ ತಾತ್ತ್ವಿಕವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ತತ್ತ್ವಶಾಸ್ತ್ರ ಎಂದರೆ ಅದು ವಿಜ್ನಾನ, ಗಣಿತಗಳಂತೆ ಮತ್ತೊಂದು ವಿಷಯ ಮಾತ್ರವಲ್ಲ, ಅದು ಯೋಚನೆ ಮಾಡುವ ಒಂದು ಮಾರ್ಗ - ನಮ್ಮ ಜಗತ್ತಿನ ಕುರಿತು ಯೋಚಿಸುವ ಮತ್ತು ಮನುಷ್ಯರಾಗಿರುವ ನಾವು ಯಾರು ಎಂದು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗ. ನಾವು ಕಲಿಯುವ ಉಳಿದ ಎಲ್ಲ ವಿಷಯಗಳ ಅಡಿಪಾಯ ತತ್ತ್ವಶಾಸ್ತ್ರ. ಪ್ರಾಚೀನ ಸಂಸ್ಕೃತಿಗಳಲ್ಲಿ ಮೊಟ್ಟಮೊದಲು ವಿಕಾಸಗೊಂಡ ಶಾಸ್ತ್ರ ಇದು ….. ವಿಜ್ನಾನ, ಕಲೆ ಮುಂತಾದ ವಿಷಯಗಳು ತತ್ತ್ವಶಾಸ್ತ್ರದಿಂದಲೇ ಹುಟ್ಟಿದವು. ಹಾಗಾಗಿ ಅವು ತತ್ತ್ವಶಾಸ್ತ್ರದ ಮಕ್ಕಳಿದ್ದಂತೆ ….."