My Books

Saturday, August 19, 2023 - 12:42

ಲೇಖಕರು: ಹೊಯಿಸಳ (ಅರಗ ಲಕ್ಷ್ಮಣರಾಯರು)
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು
ಪ್ರಕಟಣೆ: 1999          ಪುಟ: 137         ಬೆಲೆ: ರೂ. 50/-

ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡಿದ ಪ್ರಮುಖರಲ್ಲೊಬ್ಬರು ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಣಣರಾಯರು. (ಜನನ 2-5-1893) ಅವರು ಆರಂಭದ ಶಿಕ್ಷಣ ಪಡೆದದ್ದು ಹುಟ್ಟೂರು ನರಸಿಂಹರಾಜಪುರದಲ್ಲಿ. ಮೈಸೂರಿನಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನಂತರ, ಮದನಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಕಲಿತು ಬಿ.ಎ. ಪದವೀಧರರಾದರು.  ತದನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ 1922ರಲ್ಲಿ ಅಧ್ಯಾಪಕರಾಗಿ ನೇಮಕವಾದ ಹೊಯಿಸಳರು ನಿವೃತ್ತಿಯ ವರೆಗೂ ಅದೇ ವೃತ್ತಿಯಲ್ಲಿ ದುಡಿದರು. ಅವರು ಮಕ್ಕಳ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಮಕ್ಕಳಿಗಾಗಿ ಬೋಧನೆಯ ಜೊತೆಗೆ ಸಾಹಿತ್ಯ ಸೃಷ್ಟಿ ಮಾಡಬೇಕೆಂಬ ತುಡಿತದಿಂದ “ಹೊಯಿಸಳ" ಕಾವ್ಯನಾಮದಲ್ಲಿ ಕತೆಕವನಗಳನ್ನು ಬರೆಯಲು ಶುರುವಿಟ್ಟರು.

Saturday, August 19, 2023 - 12:38

ಸಂಕಲನ: ಬಿ.ಎಸ್. ರುಕ್ಕಮ್ಮ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ನಾಲ್ಕನೆಯ ಮುದ್ರಣ: 2002          ಪುಟ: 64          ಬೆಲೆ: ರೂ.10/-

ಬಿ.ಎಸ್. ರುಕ್ಕಮ್ಮ ಅವರ ಈ ಮಕ್ಕಳ ಕತೆಗಳ ಸಂಕಲನದಲ್ಲಿ ಹತ್ತು ಮಕ್ಕಳ ಕತೆಗಳಿವೆ. ಇವೆಲ್ಲವೂ ವಿವಿಧ ಲೇಖಕರು ಬರೆದ ಮಕ್ಕಳ ಕುತೂಹಲ ಕೆರಳಿಸುವ ಕತೆಗಳು.

ಮೊದಲನೆಯ ಕತೆ “ಜಾಣರು ತೋಡಿದ ಬಾವಿ”. ಪರೋಪಕಾರಿ ಗಣಪತಿ ಮತ್ತು ಅವನ ಗೆಳೆಯ ಧನಪ್ಪನ ಕತೆ. ತನ್ನ ಹೊಲದಲ್ಲಿ ಬಾವಿ ತೋಡಲು ಹೊರಟ ಧನಪ್ಪನಿಗೆ ಗಣಪತಿಯ ಸಹಾಯ. ಇಬ್ಬರೂ ಹತ್ತಡಿ ಆಳದ ಬಾವಿ ತೋಡುತ್ತಾರೆ. ಅನಂತರ, ಮಳೆ ಬಂದರೆ ಬಾವಿಯಿಂದ ತೆಗೆದ ಮಣ್ಣೆಲ್ಲ ಕೊಚ್ಚಿ ಹೋಗುತ್ತದೆ ಎಂಬ ಆತಂಕ ಧನಪ್ಪನಿಗೆ. ಹಾಗಾಗಿ ಎರಡನೇ ಬಾವಿ ತೋಡಿ ಅದರಲ್ಲಿ ಮೊದಲನೆಯ ಬಾವಿಯ ಮಣ್ಣನ್ನು ತುಂಬಿಸುತ್ತಾರೆ. ಈಗ, ಎರಡನೇ ಬಾವಿಯ ಮಣ್ಣು ಮಳೆಗೆ ಕೊಚ್ಚಿ ಹೋಗುತ್ತದೆಂಬ ಆತಂಕ ಧನಪ್ಪನಿಗೆ. ಅವರು ಮೂರ್ಖತನದಿಂದ ಮೂರನೇ ಬಾವಿ ತೋಡುತ್ತಾರೆ!

“ಶ್ರೀಮಂತೆ ಆರಿಸಿಕೊಂಡ ಹುಡುಗಿ” ಎಂಬ ಎರಡನೆಯ ಕತೆಯಲ್ಲಿ ಸಿರಿವಂತ ಮಹಿಳೆಯೊಬ್ಬಳಿಂದ ಸೊಸೆಯ ಹುಡುಕಾಟ. ಅವಳು ಪಕ್ಕದ ಹಳ್ಳಿಯಲ್ಲಿ ತನ್ನ ಹುಡುಕಾಟ ಮುಂದುವರಿಸುತ್ತಾಳೆ. ಅಲ್ಲಿನ ಶಾನುಭಾಗರ ಮಗಳು, ಸಿರಿವಂತಳ ಷರತ್ತನ್ನು ಜಾಣತನದಿಂದ ಪೂರೈಸಿ, ಆಕೆಯ ಮನಗೆಲ್ಲುತ್ತಾಳೆ.  

ಮೂರನೇ ಕತೆ “ಮಳೆರಾಯನ ಗುಟ್ಟು”. ಅನಂತರದ ಕತೆ “ಪಂಚಾಮೃತ". ಇದು ಮಂಗಮ್ಮನ ಚತುರ ಮಗಳು ಚೆಂಗಮ್ಮ ಕಾಡಿನಲ್ಲಿ ಒಂದು ಕರಡಿಗೆ ಸಹಾಯ ಮಾಡುವ ಕತೆ. ಐದನೆಯ ಕತೆ “ಆಡಿನ ಆಟ". ಕುಳ್ಳ ಆಡು ಸೊಪ್ಪು ಸಿಗದಿದ್ದಾಗ, ಎತ್ತರದ ಜಿರಾಫೆಯನ್ನು ರೇಗಿಸಿ, ಸೊಪ್ಪು ಪಡೆಯುವ ಕತೆ.

“ಪೂರ್ಣಿಮಾ ಚಂದ್ರಲೋಕಕ್ಕೆ ಹೋದದ್ದು ಆರನೆಯ ಕತೆ. ಮುಂದಿನ ಕತೆ, "ಸಿಗಡಿ ಯಾಕೆ ಒಣಗಲಿಲ್ಲ?” ಎಂಬ ಪಂಜೆ ಮಂಗೇಶರಾಯರ ಸುಪ್ರಸಿದ್ಧ ಕತೆ.

Saturday, August 19, 2023 - 12:35

ಲೇಖಕರು: ಕೃಷ್ಣ ಚೈತನ್ಯ
ಕನ್ನಡಕ್ಕೆ: ಹೆಚ್. ಕೆ. ರಾಮಕೃಷ್ಣ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
5ನೇ ಮರುಮುದ್ರಣ: 2015         ಪುಟ: 64         ಬೆಲೆ: ರೂ.45/-

ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ.

ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ. ಇಂತಹ ಪ್ರತಿಯೊಂದು ಪುನರ್ಜನ್ಮದ ಕತೆಯನ್ನು ಜಾತಕ (ಜನ್ಮ) ಕತೆಯೆಂದು ಕರೆಯಲಾಗಿದೆ. ಕಾಲಕ್ರಮೇಣ ಈ ಎಲ್ಲ ಕತೆಗಳನ್ನು ಪಾಳಿ ಭಾಷೆಯಲ್ಲಿ ಬರೆಯಲಾಯಿತು (ಹಿಂದೆ ಮಗಧ - ಈಗಿನ ಬಿಹಾರ - ರಾಜ್ಯದ ಜನರ ಭಾಷೆ). ಐನೂರಕ್ಕೂ ಹೆಚ್ಚು ಜಾತಕ ಕತೆಗಳಿವೆ. ಅಜಂತಾ ಗುಹಾ ದೇವಾಲಯಗಳಲ್ಲಿ ಹೆಚ್ಚುಕಡಿಮೆ ಈ ಎಲ್ಲ ಕತೆಗಳನ್ನೂ ವರ್ಣ ಚಿತ್ರಗಳಲ್ಲಿ ನಿರೂಪಿಸಲಾಗಿದೆ.

ಮೊದಲನೆಯದು ರೊಹಂತ ಎಂಬ ಹೆಸರಿನ ಕಪ್ಪು ಗಂಡು ಜಿಂಕೆಯ ಕತೆ. ಈ ವರ್ಗದ ಜಿಂಕೆಗಳ ಸೂಕ್ಷ್ಮ ದೃಷ್ಟಿ ಮತ್ತು ಚುರುಕಾದ ಕಾಲುಗಳು ಇವುಗಳಿಗೆ ರಕ್ಷಣೆ ನೀಡುವ ಮುಖ್ಯ ಸಾಧನಗಳು. ಜಗತ್ತಿನ ಅತ್ಯಂತ ವೇಗಶಾಲಿ ಪ್ರಾಣಿಗಳಲ್ಲಿ ಒಂದಾದ ಇವು ಗಂಟೆ 65 ಕಿಮೀ ವೇಗದಲ್ಲಿ ಓಡಬಲ್ಲವು.

Saturday, August 19, 2023 - 12:31

ಲೇಖಕರು: ಅನಂತ ದೇವ್ ಶರ್ಮ ಮತ್ತು ಇತರರು
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಮೊದಲ ಮುದ್ರಣ: 1994          ಪುಟ: 108          ಬೆಲೆ: ರೂ.110/-

ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ.
ಇವನ್ನು ಎಲ್. ಎಸ್. ಶೇಷಗಿರಿರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ.

ವಿಶೇಷ ಬಹುಮಾನ (ಅಸ್ಸಾಮಿ) ಕತೆ ವಿದ್ಯಾರ್ಥಿಯೊಬ್ಬ ತುಂಟನಂತೆ ಕಂಡರೂ ಅಂತಃಕರಣದ ಹುಡುಗ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಆತನನ್ನು ಶಿಕ್ಷಿಸಿದ ಮುಖ್ಯೋಪಾಧ್ಯಾಯರೇ ಅವನ ಸನ್ನಡತೆ ಕಂಡಾಗ ಬೆನ್ನು ತಟ್ಟುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಅತ್ಯುತ್ತಮ ಗುಣನಡತೆಗಾಗಿ ಅವನಿಗೇ ವಿಶೇಷ ಬಹುಮಾನ ನೀಡುತ್ತಾರೆ. ವ್ಯಕ್ತಿಯೊಬ್ಬನು ಏನು ಮಾಡುತ್ತಾನೆ ಎಂಬುದರಿಂದ ಅವನ ಗುಣನಡತೆ ಅಳೆಯಬೇಕು ಎಂಬ ದೊಡ್ಡ ಪಾಠ ಇದರಲ್ಲಿದೆ.

ಎರಡನೆಯದು ಸತ್ಯಜಿತ್ ರೇ ಬರೆದಿರುವ ಹಸಿದ ಸೆಪ್ಟೊಪಸ್ ಎಂಬ ಬಂಗಾಳಿ ಕತೆ. ಮಾಂಸಾಹಾರಿ ಸಸ್ಯಗಳ ಸಂಗ್ರಾಹಕನೊಬ್ಬ ದಕ್ಷಿಣ ಅಮೇರಿಕಾದ ಕಾಡಿನಿಂದ ಭಯಂಕರ ಮಾಂಸಾಹಾರಿ ಸಸ್ಯವೊಂದನ್ನು ಬಂಗಾಳದ ತನ್ನ ಮನೆಗೆ ತಂದು ಸಾಕುತ್ತಿದ್ದ. ರಕ್ಕಸನಂತೆ ಬೆಳೆದ ಅದರಿಂದ ಏನೆಲ್ಲ ಅನಾಹುತಗಳಾದವು ಎಂಬ ರೋಚಕ ವಿವರಗಳಿರುವ ಕತೆ.

Saturday, August 19, 2023 - 12:28

ನಿರೂಪಣೆ: ನಿಕ್ ಗ್ರೀವ್ಸ್
ಕನ್ನಡ ಅನುವಾದ: ಟಿ.ಸಿ. ಪೂರ್ಣಿಮಾ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪ್ರಕಟ: 1988        ಪುಟ:  143       ಬೆಲೆ: ರೂ.90/-

ನಿಕ್ ಗ್ರೀವ್ಸ್ ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿ ನಿರೂಪಿಸಿದ ಆಫ್ರಿಕಾದ 36 ದಂತಕತೆಗಳ ಮತ್ತು ಜನಪದ ಕತೆಗಳ ಸಂಕಲನ ಇದು. ಇಂಗ್ಲೆಂಡಿನಲ್ಲಿ ಹುಟ್ಟಿದ ಅವರು ಅಲ್ಲೇ ಶಿಕ್ಷಣ ಪಡೆದರು. ಅವರ ಕಾಲೇಜು ವ್ಯಾಸಂಗ ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದೊಡ್ಡ ಗಣಿ ಪ್ರದೇಶದಲ್ಲಿ ದುಡಿಯಲು ದಕ್ಷಿಣ ಆಫ್ರಿಕಾಕ್ಕೆ ಹೋದರು. ತಮ್ಮ ಕೆಲಸದ ನಿಮಿತ್ತ ದಕ್ಷಿಣ ಮತ್ತು ನೈಋತ್ಯ ಆಫ್ರಿಕಾ, ಜಿಂಬಾಬ್ವೆ ಮತ್ತು ಬೊಟ್ಸ್‌-ವಾನಾ ದೇಶಗಳ ಕುಗ್ರಾಮಗಳಿಗೆ ಹೋಗಬೇಕಾಯಿತು. ಈ ಅವಧಿಯಲ್ಲಿ ಆಫ್ರಿಕಾದ ವನ್ಯಜೀವಿ ವೈವಿಧ್ಯತೆಯ ಅಧ್ಯಯನದಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡರು. ಅವರು ಇಲ್ಲಿ ನಿರೂಪಿಸಿದ ಕತೆಗಳೇ ಇದಕ್ಕೆ ಪುರಾವೆ. ಟಿ.ಸಿ. ಪೂರ್ಣಿಮಾ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಇದರ ಗ್ರಂಥಸೂಚಿಯಲ್ಲಿ ಪಟ್ಟಿ ಮಾಡಿರುವ ಪುಸ್ತಕಗಳೂ ಅವರ ಅಧ್ಯಯನದ ಸೂಚಿ: ಆಫ್ರಿಕನ್ ಮಿಥ್ಸ್ ಆಂಡ್ ಲೆಜೆಂಡ್ಸ್; ಆನಿಮಲ್ಸ್ ಆಫ್ ರೊಡೇಸಿಯಾ; ಬಂಟು ಫೋಕ್‌ಲೋರ್; ಬರ್ಡ್ಸ್ ಆಫ್ ಸೌತ್ ಆಫ್ರಿಕಾ; ಲೆಜೆಂಡರಿ ಆಫ್ರಿಕಾ; ಸೈನ್ಸ್ ಆಫ್ ದ ವೈಲ್ಡ್; ಸೌತ್ ಆಫ್ರಿಕನ್ ಫೋಕ್ ಟೇಲ್ಸ್; ಟೇಲ್ಸ್ ಫ್ರಮ್ ದ ಒಕಾವಾಂಗೊ; ಜುಲು ಫೈರ್ ಸೈಡ್ ಟೇಲ್ಸ್ ಇತ್ಯಾದಿ.

ಸಿಂಹ, ಕಡಿಮಾ ಮೊಲ, ಚಿರತೆ, ಚಿರ್ಚ, ಕಾಡುನಾಯಿ, ಕತ್ತೆಕಿರುಬ, ನರಿ, ಆನೆ, ಖಡ್ಗಮೃಗ, ನೀರ್ಗುದುರೆ, ಕಾಡುಕೋಣ, ಬಬುನ್ ಕೋತಿ, ಜಿರಾಫೆ, ನೀರುಜಿಂಕೆ, ಮೊಸಳೆ, ಜೀಬ್ರಾ, ಸೆಸಬಿ ಹರಿಣ, ಕಾಡುಹಂದಿ, ಆಮೆ, ಹೈರಾಕ್ಸ್ ಮೊಲ, ಉಷ್ಟ್ರ ಪಕ್ಷಿ - ಈ ಪ್ರಾಣಿಗಳಿಗೆ ಸಂಬಂಧಿಸಿದ ಕತೆಗಳು ಇದರಲ್ಲಿವೆ.

Saturday, August 19, 2023 - 12:24

ನಿರೂಪಣೆ: ನಿಕ್ ಗ್ರೀವ್ಸ್
ಕನ್ನಡ ಅನುವಾದ: ಕೃಷ್ಣಮೂರ್ತಿ ಚಂದರ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪ್ರಕಟ: 2006          ಪುಟ: 140          ಬೆಲೆ: ರೂ.120/-

ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಹೋದರು. ತಮ್ಮ ಉದ್ಯೋಗದ ಸಲುವಾಗಿ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್-ವಾನಾ ಹಾಗೂ ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು.

ಈ ಅವಧಿಯಲ್ಲಿ ಅವರು ವನ್ಯಜೀವಿಗಳ ವೈವಿಧ್ಯತೆ ಮತ್ತು ಜೀವನಕ್ರಮಗಳ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡರು. ಅವುಗಳ ಬಗ್ಗೆ ವಿಪುಲ ಮಾಹಿತಿಯನ್ನೂ ಅವುಗಳಿಗೆ ಸಂಬಂಧಿಸಿದ ಜಾನಪದ ಹಾಗೂ ದಂತಕತೆಗಳನ್ನೂ ಸಂಗ್ರಹಿಸಿದರು. ಪುಸ್ತಕದ ಕೊನೆಯ ಪುಟದಲ್ಲಿರುವ ಗ್ರಂಥಸೂಚಿಯಲ್ಲಿ ಅವರು ಪಟ್ಟಿ ಮಾಡಿರುವ ಪುಸ್ತಕಗಳು ಅವರ ಅಧ್ಯಯನದ ಸೂಚಿ: ಆಫ್ರಿಕನ್ ಮಿಥ್ಸ್ ಆಂಡ್ ಲೆಜೆಂಡ್ಸ್; ಬಂಟು ಫೋಕ್‌ಲೋರ್; ಬರ್ಡ್ಸ್ ಆಫ್ ಆಫ್ರಿಕಾ (3 ಸಂಪುಟಗಳು); ಫೋಕ್ ಟೇಲ್ಸ್ ಫ್ರಮ್ ಆಲ್ ನೇಷನ್ಸ್; ಲೆಜೆಂಡರಿ ಆಫ್ರಿಕಾ; ಸೌತ್ ಆಫ್ರಿಕನ್ ಫೋಕ್ ಟೇಲ್ಸ್; ಸ್ವಾಜಿ ಫೈರ್-ಸೈಡ್ ಟೇಲ್ಸ್ ಇತ್ಯಾದಿ.

ಈ ಪುಸ್ತಕದ 30 ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಕೃಷ್ಣಮೂರ್ತಿ ಚಂದರ್. ತಾನು ನಿರೂಪಿಸಿದ “ನೀರ್ಗುದುರೆಗೆ ರೋಮವಿದ್ದಾಗ” ಎಂಬ ಇಂತಹದೇ ಇನ್ನೊಂದು ಪುಸ್ತಕಕ್ಕೆ ಈ ಪುಸ್ತಕ ಪೂರಕ ಎಂದು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

Saturday, August 19, 2023 - 12:18

ಲೇಖಕರು: ಮೀರ್ ನಜಬತ್ ಆಲಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್. ನವದೆಹಲಿ
9ನೇ ಮುದ್ರಣ: 2015         ಪುಟ: 64          ಬೆಲೆ: ರೂ.40/-

ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ ಅಪಾಯಕಾರಿ ಸೂಕ್ಷ್ಮಜೀವಿಯನ್ನೂ ನಿಯಂತ್ರಿಸಿದ ವೈದ್ಯಕೀಯ ಬೆಳವಣಿಗೆಗಳು ಇತ್ಯಾದಿ.

ಇವುಗಳಲ್ಲಿ ಏನೇನೂ ವಿಶೇಷವಿಲ್ಲ; ಇವೆಲ್ಲ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗ ಎಂದು ನಮಗೆ ಅನಿಸುತ್ತದೆ. ಆದರೆ, ಐದಾರು ಶತಮಾನಗಳ ಮುಂಚೆ ಪರಿಸ್ಥಿತಿ ಹೇಗಿದ್ದಿರಬಹುದು? ಸಾವಿರಾರು ವರುಷಗಳ ಮುಂಚೆ ಮಾನವರು ಕಾಡುಮೇಡುಗಳಲ್ಲಿ ವಾಸ ಮಾಡುತ್ತಿದ್ದಾಗ, ಇವು ಯಾವುದೇ ಸವಲತ್ತುಗಳು ಲಭ್ಯವಿಲ್ಲದಿದ್ದಾಗ ಬದುಕು ಹೇಗಿದ್ದಿರಬಹುದು? ಅದನ್ನೆಲ್ಲ ಈಗ ಕಲ್ಪಿಸುವುದೂ ಬಹಳ ಕಷ್ಟ.

ನಾಗರಿಕತೆ ಬೆಳೆದಂತೆ, ಮನುಷ್ಯ ಕೆಲವು ಸಾಧನಗಳನ್ನು ಆವಿಷ್ಕರಿಸಿದ. ಅವುಗಳಿಂದಾಗಿ ನಮ್ಮ ಬದುಕೇ ಬದಲಾಯಿತು. ಅವುಗಳಲ್ಲಿ ಮುಖ್ಯವಾದವು: ಚಕ್ರ, ಉಗಿ ಎಂಜಿನು, ಸೂಕ್ಷ್ಮದರ್ಶಕ ಮತ್ತು ಮುದ್ರಣ ಯಂತ್ರ. ಇವನ್ನು ಮಕ್ಕಳಿಗೆ  ಪರಿಚಯಿಸುವ ಪುಸ್ತಕ ಇದು.

Saturday, August 19, 2023 - 12:13

ಲೇಖಕರು: ಆಬಿದ್ ಸುರತಿ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪ್ರಕಟ: 2010          ಪುಟ: 107         ಬೆಲೆ: ರೂ. 90/-

ಆಬಿದ್ ಸುರತಿ ಅವರ ನವಾಬ್ ರಂಗೀಲೆ ಎಂಬ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಡಿ. ಎನ್. ಶ್ರೀನಾಥ್. ಇದಕ್ಕೆ ಚಂದದ ಚಿತ್ರಗಳನ್ನು ಬರೆದಿದ್ದಾರೆ ಆಬಿದ್ ಸುರತಿ. ಮಕ್ಕಳ ಪುಸ್ತಕವಾದರೂ ಹಿರಿಯರನ್ನೂ ಚಿಂತನೆಗೆ ಹಚ್ಚುವ ಪುಸ್ತಕವಿದು.

ಭಾರತ - ಪಾಕಿಸ್ಥಾನದ ಗಡಿಯ ಪಕ್ಕದ ನಗಡಾಪುರದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸರಣಿಯ ಕಥನ ಇದು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನಗಡಾಪುರ ರಾಜ್ಯ ನಮ್ಮ ದೇಶದೊಂದಿಗೆ ಸೇರಬೇಕಾಯಿತು. ಅದರೊಂದಿಗೆ ನವಾಬನ ನವಾಬಗಿರಿ ಅಂತ್ಯವಾಗಿತ್ತು. ಆದರೆ ಆ ರಾಜ್ಯದ ಪ್ರಜೆಗಳು ಇನ್ನೂ ಇದ್ದರು. ಅಲ್ಲಿನ ಹಿರಿಯರು ಇಂದಿಗೂ ರಸಿಕ ನವಾಬನನ್ನು ಗೌರವದಿಂದ ಕಾಣುತ್ತಿದ್ದರು …. ನವಾಬಗಿರಿಯೊಂದೇ ಅಲ್ಲ, ಕಾಲದೊಂದಿಗೆ ಎಲ್ಲವೂ ಬದಲಾದವು. ಈಗ ರಸಿಕ ನವಾಬರು ಒಂದು ಚಿಕ್ಕ ಮನೆಯಲ್ಲಿ ತಮ್ಮ ರಸಿಕ ಬೇಗಂಳೊಂದಿಗೆ ವಾಸಿಸುತ್ತಾರೆ. ಕೋಳಿಗಳನ್ನು ಸಾಕುವುದರಿಂದ ಹಿಡಿದು ಸಿಂಹದ ಶಿಕಾರಿ ಮಾಡುವುದು - ಹೀಗೆ ಯಾವಕೆಲಸವೇ ಆಗಿರಲಿ, ಮಾಡುತ್ತಾರೆ. ಆದರೂ ಅವರು ದುಃಖಿಯಾಗಿಲ್ಲ …. ಬಾಯಿಯಲ್ಲಿ ಬೀಡಾ ಜಗಿಯುತ್ತಾ ತಮ್ಮ ಪರಾಕ್ರಮದ ಕಥೆಯನ್ನು ಹೇಳುತ್ತಾರೆ - ಎಂಬ ವಿವರಗಳೊಂದಿಗೆ ಕಥನ ಶುರು.

“ಲಲ್ಲೂ ತಮ್ಮಾ ಶುರು ಮಾಡು" ಎಂಬ ಮೊದಲ ಅಧ್ಯಾಯದಲ್ಲಿ, ಡಕಾಯಿತ ಭೂತನಾಥನನ್ನು ಬಂಧಿಸಿ ತರಲು ಕಾಡಿಗೆ ಹೋದ ರಸಿಕ ನವಾಬರಿಗೆ ಆತ ಯಾರೆಂಬುದೇ ತಿಳಿದಿಲ್ಲ. ಕೊನೆಗೆ ಆತನನ್ನೇ ಮನೆಗೆ ಕರೆ ತಂದು ಊಟ ಹಾಕುತ್ತಾರೆ! ಆ ರಾತ್ರಿ ಆತ ಇವರ ಮನೆಯ ಚಿನ್ನಾಭರಣಗಳನ್ನು ದರೋಡೆ ಮಾಡಿ ಹೋಗುತ್ತಾನೆ.

Saturday, August 19, 2023 - 12:10

ಲೇಖಕಿ: ಪದ್ಮಾ ಶ್ರೀರಾಮ
ಪ್ರಕಾಶಕರು: ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ವರುಷ: 2009         ಪುಟ: 122       ಬೆಲೆ: ರೂ.78/-

ಕನ್ನಡದಲ್ಲಿ ಪ್ರಕಟವಾಗಿರುವ ಗಿಡಮರಬಳ್ಳಿಗಳ ಮಾಹಿತಿ ನೀಡುವ ಪುಸ್ತಕಗಳು ವಿರಳ. ಅಂತಹ ವಿರಳ ಪುಸ್ತಕಗಳ ಸಾಲಿಗೆ ಸೇರಿದೆ ಪದ್ಮಾ ಶ್ರೀರಾಮ ಅವರ “ಗಿಡಗಂಟೆಯಾ ಕೊರಳು". “ಮಯೂರ" ಮಾಸಪತ್ರಿಕೆಯಲ್ಲಿ 20 ತಿಂಗಳುಗಳ ಕಾಲ ನಿರಂತರವಾಗಿ ಪ್ರಕಟವಾದ ಅವರ ಸಸ್ಯ ಲೇಖನಗಳೂ, ಕಸ್ತೂರಿ, ಕರ್ಮವೀರ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳೂ ಇದರಲ್ಲಿವೆ.

ಸುಮ ಸಂಕುಲದ ಅಂಕುರಾದ್ಭುತ ಎಂಬ ಮೊದಲ ಲೇಖನವು ಪರಕೀಯ ಪರಾಗಸ್ಪರ್ಶ ಕ್ರಿಯೆಗಾಗಿ ಸಸ್ಯಗಳು ಅಳವಡಿಸಿಕೊಂಡಿರುವ ಚತುರ ಹಾಗೂ ವಿಸ್ಮಯಕಾರಿ ವಿಧಾನಗಳನ್ನು ವಿವರಿಸುತ್ತದೆ. ಆರಂ ಲಿಲ್ಲಿ ಹೂ ಪರಾಗಸ್ಪರ್ಶಕ್ಕಾಗಿ ಜೀರುಂಡೆಯನ್ನು ಆಕರ್ಷಿಸುವ, ಒಂದು ದಿನ ಬಂಧಿಸಿಡುವ ಮತ್ತು ಬಿಡುಗಡೆ ಮಾಡುವ ವಿವರಗಳು ಆಸಕ್ತಿದಾಯಕ. ಅದೇ ರೀತಿಯಲ್ಲಿ, ಆಫ್ರಿಸ್ ಆರ್ಕಿಡ್ ಹೂ ಹೆಣ್ಣು ಕಣಜವನ್ನು ಹೋಲುವ ಲ್ಯಾಬೆಲ್ಲಂ (ವಿಶೇಷ ದಳದ) ಮೂಲಕ ಗಂಡು ಕಣಜವನ್ನು ಆಕರ್ಷಿಸುವ ಬಗೆ ಅಚ್ಚರಿದಾಯಕ. ಬ್ಲಾಕಿಯಾ ಕ್ಲೊರಾಂತ ಎಂಬ ಉಷ್ಣವಲಯದ ಪುಟ್ಟ ಪುಷ್ಪವಂತೂ ಜಾಣ್ಮೆಯಿಂದ ಇಲಿಗಳ ಮೂಲಕ ಪರಾಗಸ್ಪರ್ಶ ಮಾಡಿಕೊಳ್ಳುವ ತಂತ್ರವಂತೂ ವಿಸ್ಮಯದಾಯಕ.

Saturday, August 19, 2023 - 12:05

ಲೇಖಕರು: ಆಯುರ್ವೇದ ಪರಿಣತರು
ಪ್ರಕಾಶಕರು: ಶ್ರೀ ಬೈಧ್ಯನಾಥ್ ಆಯುರ್ವೇದ ಭವನ ಪ್ರೈ. ಲಿ., ಗ್ರೇಟ್ ನಾಗ್ ರೋಡ್, ನಾಗಪುರ
ಪುಟ: 178        ಬೆಲೆ: ರೂ. 25/-

ಈ ಉಪಯುಕ್ತ ಪುಸ್ತಕದ ಉಪಶೀರ್ಷಿಕೆ: ಔಷಧಿಗಳ ಗುಣ, ಉಪಯೋಗ ಮತ್ತು ಸೇವಿಸುವ ವಿಧಾನಗಳು. ಜೊತೆಗೆ “ವೈದ್ಯರ ಉಪಯೋಗಕ್ಕಾಗಿ ಮಾತ್ರ" ಎಂಬ ಎಚ್ಚರಿಕೆ ಮುಖಪುಟದಲ್ಲೇ ಇದೆ.

ಗಮನಾರ್ಹ ಸಂಗತಿಯೆಂದರೆ ಇದರ ಕನ್ನಡ ಆವೃತ್ತಿಯ 25,000 ಪ್ರತಿಗಳನ್ನು ಮುದ್ರಿಸಲಾಗಿದೆ! ಕನ್ನಡದ ಪುಸ್ತಕಗಳ ಒಂದು ಸಾವಿರ ಪ್ರತಿಗಳನ್ನು ಮುದ್ರಿಸುವುದನ್ನು ನಿಯಮದಂತೆ ಪಾಲಿಸಲಾಗುತ್ತದೆ (ಇದಕ್ಕೆ ಕೆಲವು ವಿನಾಯ್ತಿಗಳಿವೆ). ಯಾಕೆಂದರೆ, ಬಹುಪಾಲು ಪುಸ್ತಕಗಳ ಒಂದು ಸಾವಿರ ಪ್ರತಿಗಳು ಮಾರಾಟವಾಗಲು 3ರಿಂದ 10 ವರುಷ ತಗಲುತ್ತದೆ! ಹಾಗಿರುವಾಗ, ವೈದ್ಯರು ಮಾತ್ರ ಓದುಗರಾಗಿರುವ ಈ ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ಮುದ್ರಿಸಿದ್ದು ಪ್ರಕಾಶಕರ ಸಾಹಸ.

ಪ್ರಕಾಶಕರು ಆಯುರ್ವೇದಕ್ಕೆ ಸಂಬಂಧಿಸಿದ ಇತರ 43 ಪುಸ್ತಕಗಳನ್ನು ಸಂಸ್ಕೃತ, ಹಿಂದಿ ಭಾಷೆಗಳಲ್ಲಿಯೂ 11 ಪುಸ್ತಕಗಳನ್ನು ಇಂಗ್ಲಿಷಿನಲ್ಲಿಯೂ ಪ್ರಕಟಿಸಿದ್ದಾರೆ ಎಂಬುದು ಗಮನಾರ್ಹ. ಇವುಗಳ ಬಗ್ಗೆ ಚುಟುಕು ಮಾಹಿತಿ ಈ ಪುಸ್ತಕದಲ್ಲಿ ಲಭ್ಯ.

ಆಯುರ್ವೇದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಶ್ರೀ ಬೈಧ್ಯನಾಥ ಆಯುರ್ವೇದ ಭವನ ದೊಡ್ದ ಹೆಸರು. ಅವರ ನೂರಾರು ರಸಭಸ್ಮ, ಬಟಿ, ಗುಗ್ಗುಲು, ಚೂರ್ಣ, ಆಸವರಿಷ್ಟ ಹಾಗೂ ಪೇಟೆಂಟ್ ಔಷಧಿಗಳ ರೋಗಾಧಿಕಾರ ಮತ್ತು ಪ್ರಯೋಗ ವಿಧಿಗಳನ್ನು ಸಮಗ್ರವಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಔಷಧೀಯ ತೈಲಗಳು, ಅಂಜನ, ವರ್ತಿ-ಸುರ್ಮ-ಮಂಜನ, ಘೃತ, ಶರಬತ್ - ಅರ್ಕ - ಪಾನಕಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

Pages