ಲೇಖಕರು: ಶಿವಾನಂದ ಕಳವೆ
ಪ್ರಕಾಶಕರು: ಮಿತ್ರ ಮಾಧ್ಯಮ, ಬೆಂಗಳೂರು
ಪ್ರಕಟ: 2001 ಪುಟ: 120 ಬೆಲೆ: ರೂ.36/-
“ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು. ಅವರು ಫೆಬ್ರವರಿ 18ರಿಂದ ಮಾರ್ಚ್ 16ರ ವರೆಗೆ ಆಗ ಭಟ್ಕಳದಿಂದ ಬನವಾಸಿಯ ವರೆಗೆ ಕೃಷಿ - ಕಾಡು - ಜನಜೀವನದ ಬಗೆಗೆ ಅಧ್ಯಯನ ನಡೆಸಿದರು. ಸರಿಯಾಗಿ 200 ವರ್ಷಗಳ ಬಳಿಕ ಬುಕಾನನ್ ಮಾರ್ಗದಲ್ಲಿ ಮರುಪ್ರಯಾಣ ನಡೆಸಿರುವೆ…" ಆ ಮರುಪ್ರಯಾಣದ ದಾಖಲಾತಿ ಈ ಪುಸ್ತಕ. ಆದ್ದರಿಂದ ಇದು ತೀರಾ ಅಪರೂಪದ ಪುಸ್ತಕ.
2001ರಲ್ಲಿ ಪ್ರಕಟವಾದ ಇದು ಕೇವಲ ಮರುಪ್ರಯಾಣದ ದಾಖಲಾತಿ ಮಾತ್ರವಲ್ಲ ಎಂಬುದನ್ನು ಲೇಖಕರು “ಕಾಲಮಾನದ ಮೊದಲು" ಬರಹದಲ್ಲಿ ಸ್ಪಷ್ಟ ಪಡಿಸುತ್ತಾರೆ: "ನಿಜವಾಗಿ ಈ ಪ್ರವಾಸ ಯೋಜನೆ ರೂಪುಗೊಂಡದ್ದು ಕ್ರಿ.ಶ. 1999ರ ನವಂಬರಿನಲ್ಲಿ. ಎರಡು ಶತಮಾನಗಳ ಬಳಿಕ ವಿದೇಶಿ ಪ್ರವಾಸಿಯ ಜಾಡು ಹಿಡಿದು ಹೊರಡುವ ಮುನ್ನ ದಾರಿ ಖರ್ಚಿಗೆ ಅರಿವಿನ ಬುತ್ತಿ ಹೊರಬೇಕಿತ್ತು. ಹಾಗಾಗಿ ಹಳೆಯ ದಾಖಲೆಗಳನ್ನು ಓದುತ್ತ ಕುಳಿತಾಗಲೆಲ್ಲ (ಲೇಖಕರ ಉತ್ತರಕನ್ನಡದ ಮೂಲೆಮೂಲೆಗಳ ತಿರುಗಾಟದಲ್ಲಿ) ಹಳ್ಳಿಗಾಡಿನ ಜನ ಹೇಳುತ್ತಿದ್ದ ಮಾತುಗಳು ಇತಿಹಾಸ ಕೌತುಕಗಳ ಮಧ್ಯೆ ಇಣುಕಿದವು. ಅವರು ನಗುತ್ತ ಹಂಚಿಕೊಂಡ ನೋವುಗಳಲ್ಲಿ ಮರೆತ ಕಾಲವನ್ನು ಸಲೀಸಾಗಿ ಪಾತ್ರೆಯಲ್ಲಿ ಹಿಡಿದಿಡುವ ತವಕವಿತ್ತು. ಅಲ್ಲಿ ನಿಕ್ಕಿಯಾಗಿ ಇದ್ದುದು ಸಂಕಟ, ಸಂಭ್ರಮ, ವೈರುಧ್ಯ, ಸೋಜಿಗ, ತಮಾಷೆಯ ಪ್ರಸಂಗಗಳು. ನಿಜದ ಇತಿಹಾಸದಲ್ಲಿ ಅವಕ್ಕೆ ಇದ್ದದ್ದು ಇಕ್ಕಟ್ಟಿನ ಜಾಗ…" ಇಲ್ಲಿನ 42 ಬರಹಗಳಲ್ಲಿವೆ: ಆಯಾ ಜಾಗಕ್ಕೆ ಸರಿಯಾಗಿ 200 ವರುಷಗಳ ನಂತರ ಭೇಟಿಯಿತ್ತಾಗ ಕಂಡದ್ದನ್ನು ದಾಖಲಿಸಿದ್ದರ ಜೊತೆಗೆ, ಆ ಸಂದರ್ಭದಲ್ಲಿ ಮತ್ತು ಮುಂಚೆ ಯಾವತ್ತೋ ಯಾರೊಂದಿಗೋ ತಿರುಗಾಟದ ಹಾದಿಗುಂಟ ಹರಟೆ ಹೊಡೆಯುವಾಗ ದಕ್ಕಿದ ಅನುಭವಗಳು. ಯಾಕೆಂದರೆ, ಅಲೆಮಾರಿಯಂತೆ ತಿರುಗಾಡುವಾಗ "ದಾರಿಯಲ್ಲಿ ಜೊತೆಯಾದವರು ಅಕ್ಕರೆಯಲ್ಲಿ ದಾರಿ ಖರ್ಚಿಗೆಂದು ಎತ್ತಿಕೊಟ್ಟ ಕಾಲಮಾನದ ಕತೆಗಳನ್ನು.... ಎಲ್ಲ ಮರೆಯುವ ಮುನ್ನ ನೆಲದ ಮಾತುಗಳು ಒಂದಿಷ್ಟಾದರೂ ಈಚೆ ಬರಲೆಂದು” ಲೇಖಕರು ಬರೆದಿಡುತ್ತಿದ್ದರು.
ಪುಸ್ತಕದ ಮುನ್ನುಡಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರೂ, ಖ್ಯಾತ ಇತಿಹಾಸ ಸಂಶೊಧಕರೂ ಆದ ಡಾ. ಸೂರ್ಯನಾಥ ಕಾಮತರು ಹೀಗೆಂದು ಬರೆದಿದ್ದಾರೆ: “ಬ್ರಿಟಿಷರ ಕಾಲದಲ್ಲಿ ಕಟ್ಟುನಿಟ್ಟಿನ ಅರಣ್ಯ ಕಾನೂನಿನಿಂದಾಗಿ ಉತ್ತರಕನ್ನಡದ ರೈತರಿಗೆ ಅಪಾರ ನಷ್ಟವಾಗಿ, ಹಿಂಸೆಯಾಗಿ 1887ರಲ್ಲಿ ವನದುಃಖ ನಿವಾರಣ ಸಂಘ ಸ್ಥಾಪಿಸಿದ್ದರು. “ಕಾನಡಾ ಧುರೀಣ” ಪತ್ರಿಕೆ ಇದಕ್ಕಾಗಿ - ವನದುಃಖಗಳ ನಿವಾರಣೆಗಾಗಿ - 1916ರ ಸುಮಾರಿಗೆ ಆರಂಭವಾಯಿತು. ಈ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ರೈತರು ವಹಿಸಿದ ಪಾತ್ರ ದೊಡ್ಡದು. ಅದಕ್ಕೆ ಅರಣ್ಯ ಇಲಾಖೆಯ ದೌರ್ಜನ್ಯವೂ ಒಂದು ಕಾರಣ. ಕೃಷಿಯ ಬಗ್ಗೆ, ಅರಣ್ಯ ರಕ್ಷಣೆಯ ಬಗ್ಗೆ ಬೇರೆಬೇರೆ ಕಾಲದಲ್ಲಿ ನಡೆದ ಪ್ರಯೋಗಗಳು, ನಿರ್ಣಯಗಳು, ಧೋರಣೆಗಳು, ನೀತಿಗಳು, ಇವುಗಳ ಸಾಫಲ್ಯ, ವೈಫಲ್ಯ, ಇವುಗಳ ಮೈಕ್ರೋಲೆವೆಲ್ (ತಳಮಟ್ಟದ) ಮಾಹಿತಿಯನ್ನು ಜನರ ಬಾಯಿಗಳಿಂದ, ಸರಕಾರಿ ದಾಖಲೆಗಳಿಂದ, ಈ ಬಗೆಗಿನ ಪುಸ್ತಕಗಳಿಂದ, ಪತ್ರಿಕೆಗಳಿಂದ, ಬಹಳ ಪರಿಶ್ರಮಪೂರ್ವಕ ಇಲ್ಲಿ ಲೇಖಕರು ಸಂಗ್ರಹಿಸಿದ್ದಾರೆ. …. ಜನಸಮುದಾಯದ ಸಂಕಲಿತ ಅನುಭವವೇ ಇತಿಹಾಸ. ಇಂಥ ಅನುಭವಗಳ ಸಂಕಲನಕ್ಕೆ ಈಗಿರುವಷ್ಟು ಅನುಕೂಲ ಹಿಂದಿರಲಿಲ್ಲ. ಶ್ರೀ ಶಿವಾನಂದ ಕಳವೆಯವರು ಇಂಥ ಅನುಭವಗಳ ಜೇನುಗೂಡು ಕಟ್ಟುವ ಹೆಜ್ಜೇನಾಗಿ ದುಡಿಯುತ್ತಿರುವುದಕ್ಕಾಗಿ ನಮ್ಮ ಕೃತಜ್ನತೆಗೆ ಪಾತ್ರರು."
ಇಲ್ಲಿನ 42 ಬರಹಗಳನ್ನು "ಹಕೀಕತ್ತು", "ಜಂಗಲ್ ದರ್ಬಾರ್” ಮತ್ತು “ಪೀಕ್ ಪಹಣಿ” ಎಂಬ ಮೂರು ಭಾಗಗಳಲ್ಲಿ ಲೇಖಕರು ಪ್ರಸ್ತುತಪಡಿಸಿದ್ದಾರೆ. ಅವುಗಳಲ್ಲಿ ಬಹುಪಾಲು ಬರಹಗಳು ಕನ್ನಡ ಸಾಹಿತ್ಯದಲ್ಲಿ ಬೇರೆಲ್ಲಿಯೂ ಓದಲು ಸಿಗದ ಮಾಹಿತಿ ಕಣಜಗಳು. ಮುಂದೊಂದು ದಿನ ಉತ್ತರಕನ್ನಡದ ಇತಿಹಾಸದ ದಾಖಲಾತಿಗೆ ಬಲ ನೀಡಬಲ್ಲ ಬರಹಗಳು. ಪುಸ್ತಕದ ಕೊನೆಯಲ್ಲಿ ಪಟ್ಟಿ ಮಾಡಿರುವ 33 ಆಕರ ಗ್ರಂಥಗಳೇ ಲೇಖಕರ ಅಧ್ಯಯನದ ಪುರಾವೆ. ಆದರೂ “ಕಾಲದ ಕೆಲವು ಕತೆಗಳನ್ನು ಅರಿಯಲು ಇದು ನೆರವಾಗಬಹುದು. ಹಾಗಂತ ಇದೇನು ಸಮಗ್ರ ಮಾಹಿತಿ ಕಣಜವಲ್ಲ. ಕಣದಲ್ಲಿ ಹರಗಿಟ್ಟ ಸುಗ್ಗಿಯ ಅಂದಾಜು ಗೊತ್ತಿಲ್ಲದೇ ಕಣಜ ಕಟ್ಟತೊಡಗಿದ ಉಮೇದಿ ರೈತನ ಒಂದು ಅವಸರ ಅಷ್ಟೇ” ಎಂದು ವಿನಯದಿಂದ ಬರೆದುಕೊಂಡಿದ್ದಾರೆ ಶಿವಾನಂದ ಕಳವೆ.
ಆಹಾರಕ್ಕಾಗಿ ಆಗಿನ ಕಾಲದಲ್ಲಿ ಜನರ ಪರದಾಟವನ್ನು "ತಾಳೆ ತಿಂದವನು ಬಾಳಿಯಾನು” ಬರಹದಲ್ಲಿ ಹೀಗೆ ದಾಖಲಿಸಿದ್ದಾರೆ: “ಕರಾವಳಿಯ ಹಿಂದುಳಿದ ಜನಾಂಗಗಳ ಜನ ತಾಳೆ ಮರದ ಹಿಟ್ಟು ತೆಗೆದು ಗಂಜಿ ಮಾಡಿ ಬದುಕುತ್ತಿದ್ದರು. ಹೊನ್ನಾವರ (ತೊಳಸಾಣಿ) ಹಾಗೂ ಕುಮಟಾ (ಯಾಣ)ದ ಕಾಡುಗಳಲ್ಲಿ ತಾಳೆಮರಗಳು ಹೇರಳವಾಗಿದ್ದವು. ಮರ ಕಡಿದು ಮರದ ಕಾಂಡವನ್ನು ಸೀಳಿ ಹಿಟ್ಟನ್ನು ಸಂಗ್ರಹಿಸುವುದು ಪದ್ಧತಿ. ಒಂದು ಮರದಿಂದ ಸುಮಾರು ಎರಡು ಕ್ವಿಂಟಾಲ್ ಹಿಟ್ಟು ದೊರೆಯುತ್ತಿತ್ತು. ಅದನ್ನು ಒಣಗಿಸಿ ಸಂಗ್ರಹಿಸಿಟ್ಟು ನಿತ್ಯ ಅಷ್ಟಿಷ್ಟಾಗಿ ಬಳಸುತ್ತಿದ್ದರು... ಬರಗಾಲ ಸಂದರ್ಭದಲ್ಲಿ ಜನ ಯಾವ ಆಹಾರ ತಿನ್ನುತ್ತಿದ್ದರು ಎಂಬುದನ್ನು ಬ್ರಿಟಿಷ್ ಸರಕಾರ ದಾಖಲಿಸುತ್ತಿತ್ತು. ಮುಂದೆ ಬರಗಾಲ ಬಂದಾಗ ಜನ ಹೇಗೆ ಬದುಕಬಹುದೆಂಬುದಕ್ಕೆ ಇಂತಹ ದಾಖಲಾತಿ ಮಾರ್ಗದರ್ಶಕ. ಬಾಳೆಹಣ್ಣಿನ ತೋಟೆ (ಸಿಪ್ಪೆ), ಬಾಳೆಕಾಯಿ, ಬಾಳೆಹೂ, ತೊಂಡಿಕಾಯಿ, ಮುಳಗಳ್ಳಿಕಾಯಿ, ಅಡವಿ ಬಾಳೆ ದಿಂಡು, ಹರಿವಾಳ (ಹಾಲವಾಣ)ದ ಬೀಜವನ್ನು ಕುದಿಸಿ ಉಸುಳಿಯ ಹಾಗೇ ತಿನ್ನುವುದು, ಬಿದಿರಿನ ಮೊಳಕೆ, ಸೂರ್ಮಾಂಡವೆಂಬ ತಾಳೆ ಮರದ ಮೊಳಕೆ ಹೀಗೆ ಪಟ್ಟಿ ಬೆಳೆಯುತ್ತದೆ.”
ಪ್ಲೇಗ್ ರೋಗದಿಂದಾಗಿ ಶಿರಸಿ ಪಟ್ಟಣವೇ ನಿರ್ಜನವಾದ ವಿವರಗಳು “1900 ಹುಟ್ಟಿದಾಗ ಶಿರಸಿ ನಿರ್ಜನ" ಬರಹದಲ್ಲಿವೆ: “ಶಿರಸಿ, ಕ್ರಿ.ಶ. 1900 ಜನವರಿ 1. ಹೌದು, ದಿನಾಂಕ ಸರಿಯಾಗಿಯೇ ಇದೆ. ಅನುಮಾನ ಬೇಡ. ಅಂದು ಪೇಟೆಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಊರಿನ ಜನರೆಲ್ಲ ಮನೆಯಿಂದ ಹೊರಬಿದ್ದು ದೂರ ಹೋಗಿದ್ದರು. ಮನೆಗಳಿಗೆ ಹೊದಿಸಿದ ಎಲ್ಲ ಹೆಂಚುಗಳನ್ನು ತೆಗೆದಿರಿಸಲಾಗಿತ್ತು. ಚೆನ್ನಾಗಿ ಮನೆಯೊಳಕ್ಕೆ ಗಾಳಿ, ಬೆಳಕು ಬರಲು ಈ ವ್ಯವಸ್ಥೆ. ಹೊಸ ಶತಮಾನದ ಸೂರ್ಯ ಮನೆಯ ಮೂಲೆಮೂಲೆಗಳ ಕತ್ತಲು ಕಳೆಯಲಿ ಎಂದು ಸ್ವಾಗತದ ಹೊಸ ಪರಿ ಹೀಗಿತ್ತೇ? … ಕತೆ ಸ್ವಾಗತದ್ದಲ್ಲ, ಸಾವಿನ ಸಂಕಟದ್ದು. ಕ್ರಿ.ಶ. 1892ರಲ್ಲಿ ಮೈಲಿ ಬೇನೆಯ ಪ್ರಥಮ ದರ್ಶನ ಮಾಡಿದ ಶಿರಸಿಗೆ ಕ್ರಿ.ಶ. 1899ರ ಅಕ್ಟೋಬರಿನಲ್ಲಿ ಪ್ಲೇಗ್ ಬಂತು. ಹಲವರು ಸಾವನ್ನಪ್ಪಿದರು. … ಪ್ಲೇಗ್ ನಿಯಂತ್ರಣಕ್ಕೆ ಪ್ರಯತ್ನಗಳು ಆರಂಭವಾದವು. ಕ್ರಿ.ಶ.1899ನೇ ಅಕ್ಟೋಬರ್ 15ರ ಒಳಗಾಗಿ ನಗರದ ಎಲ್ಲರೂ ರೋಗ ನಿರೋಧಕ ಚುಚ್ಚುಮದ್ದು ಪಡೆಯಬೇಕೆಂದು ಜಿಲ್ಲಾ ನ್ಯಾಯಾಧೀಶರು ಆಜ್ನೆ ಹೊರಡಿಸಿದರು. “ನಮಗೆ ಸೂಜಿ ಚಿಕಿತ್ಸೆ ಬೇಡವೇ ಬೇಡ" ಎಂದು ಜನ ವಿರೋಧಿಸಿದರು. ಚುಚ್ಚುಮದ್ದು ಪಡೆಯದಿದ್ದವರು ನಗರದ ಹೊರಗಿನ ಶಿಬಿರಗಳಲ್ಲಿ ವಾಸಿಸಬೇಕೆಂದು ಸೂಚಿಸಲಾಯಿತು. ಹಾಗಾಗಿ ಮನೆಗಳನ್ನು ಖಾಲಿ ಮಾಡಿ ಜನ ಶಿಬಿರಗಳಿಗೆ ಹೋದರು…. ಐದು ತಿಂಗಳ ತರುವಾಯ ಕ್ರಿ.ಶ. 1900 ಮಾರ್ಚ್ 24ರಂದು ಅವರೆಲ್ಲ ಶಿರಸಿಗೆ ಮರಳಿದರು.”
"ತಹಶೀಲ್ದಾರ ಕಚೇರಿಯಲ್ಲಿ ಮಂಗನ ಬಾಲ ಎಣಿಕೆ”, “ಉಣುಗು ಕೊಲ್ಲುವ ಇಂಗ್ಲಿಷ್ ಯಂತ್ರ” - ಈಗಿನ ಕಾಲಘಟ್ಟದಲ್ಲಿ ನಂಬಲು ಸಾಧ್ಯವಿಲ್ಲದ ಘಟನೆಗಳ ವಿವರಗಳಿರುವ ಇಂತಹ ಹಲವಾರು ಲೇಖನಗಳು ನಮ್ಮನ್ನು ಯೋಚನೆಗೆ ಹಚ್ಚುತ್ತವೆ.
ಆಗಿನ ಕಾಲದಲ್ಲಿ ಬ್ರಿಟಿಷರಿಂದ ಆಗುತ್ತಿದ್ದ ದೌರ್ಜನ್ಯಗಳನ್ನೂ ಅನ್ಯಾಯಗಳನ್ನೂ ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸಿರುವ ಬರಹಗಳೂ ಈ ಪುಸ್ತಕದಲ್ಲಿವೆ. (ಗಮನಿಸಿ: ಅಂತಹ ಒಂದು ಬರಹ: “ನ್ಯಾಯಾಲಯದ ಮೆಟ್ಟಿಲೇರಿದ ಬಿಟ್ಟಿಗಾಡಿ”. ಇದನ್ನು “ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿಗಾಡಿ ಪ್ರಕರಣಗಳು” ಎಂಬ ಶೀರ್ಷಿಕೆಯಲ್ಲಿ “ಸಂಪದ”ದಲ್ಲಿ ಸ್ವಾತಂತ್ರ್ಯ ದಿನವಾದ 15-08-2023ರಂದು ಪ್ರಕಟಿಸಲಾಗಿದೆ.)
* * * * *
ನ್ಯಾಯಾಲಯದ ಮೆಟ್ಟಿಲೇರಿದ ಬಿಟ್ಟಿಗಾಡಿ
‘ಶಿರಸಿಯ ಬಿಡಕಿಬೈಲು ಬ್ರಿಟಿಷರ ಪಾಲಿಗೆ "ಬಿಟ್ಟಿಗಾಡಿಯ ಬೈಲು" ಆಗಿತ್ತು. ಪೇಟೆ ತಿರುಗಾಟ, ಕೃಷಿ ಉತ್ಪನ್ನಗಳ ಸಾಗಾಟಗಳಿಗಾಗಿ ಆ ಕಾಲದಲ್ಲಿ ಚಕ್ಕಡಿ ಗಾಡಿಗಳ ಬಳಕೆ. ಸಾಲು ಹಚ್ಚಿ ಶಿರಸಿಗೆ ಬಂದ ಗಾಡಿಗಳು ಕೆಲಸ ಮುಗಿಸಿ ಪುನಃ ವಾಪಸ್ಸು. ಆ ವೇಳೆಗೆ ಬ್ರಿಟಿಷ್ ಅಧಿಕಾರಿಗಳು, ಕಲೆಕ್ಟರು ಯಾರಾದರೂ ನಗರದಲ್ಲಿ ಎದುರಾದರೆ ಮುಗಿಯಿತು. ಅವರ ತಿರುಗಾಟಕ್ಕೆ, ಸಾಮಾನು - ಸರಂಜಾಮುಗಳ ಸಾಗಾಟಕ್ಕೆ ರೈತರ ಗಾಡಿಗಳ ಪುಕ್ಕಟೆ ಬಳಕೆ. … ಬಿಟ್ಟಿ ಗಾಡಿಯಲ್ಲಿ ತಿರುಗುವುದು ಸಲೀಸಾಗಿ ರೂಢಿಯಾಗಿತ್ತು. ಅದರಲ್ಲೂ ರೈತರೆಂದರೆ ಕೇಳಬೇಕೇ? ದೌರ್ಜನ್ಯದ ಹತ್ತು ಹಲವು ಅವತಾರಗಳು. ಇದು ರೈತರ ಪಾಲಿಗೆ ದೊಡ್ಡ ಪೀಡೆಯಾಗಿದ್ದರೂ ಪರಿಹಾರವಿರಲಿಲ್ಲ. ಉಸಿರೆತ್ತದೆ ಜನ ಸಹಿಸಿದ್ದರು.
ಶಿರಸಿಯ ಅಕದಾಸ ಗಣಪತಿ ಭಟ್ಟರು ಉತ್ತರ ಕರ್ನಾಟಕದ ಬಿಟ್ಟಿಗಾಡಿ ಸಮಸ್ಯೆಗೊಂದು ಶಾಶ್ವತ ಪರಿಹಾರ ತೋರಿಸಿದವರು. ಬಿಟ್ಟಿಗಾಡಿ ಬಳಕೆಯನ್ನು ರದ್ದು ಪಡಿಸಲು ನ್ಯಾಯಾಲಯ ಹೋರಾಟ ಮಾಡಿದವರು.
ಅದು ಸುಮಾರು ಕ್ರಿ.ಶ. 1922-23ರ ಕಾಲ. ಆ ವೇಳೆಗೆ ಕಾರವಾರದಿಂದ ಬ್ರಿಟಿಷ್ ಕಲೆಕ್ಟರ್ ಶಿರಸಿಗೆ ಬಂದಿದ್ದರು. ಸಾಮಾನ್ಯವಾಗಿ ಆ ಕಾಲದಲ್ಲಿ ಬಸ್ಸು, ಜೀಪುಗಳಂತಹ ವಾಹನ ಸೌಕರ್ಯವಿಲ್ಲ. ಕಲೆಕ್ಟರ್ ಮಾತ್ರ ಕಾರು ಬಳಸುವವರು. ಕಲೆಕ್ಟರ್ ಪ್ರವಾಸವೆಂದರೆ ಅವರ ಜೊತೆ ಸಹಾಯಕರು, ಸಿಬ್ಬಂದಿಗಳ ಸಾಲು. ಸಾಮಾನು ಸರಂಜಾವುಗಳ ಹೊರೆ. ಇವನ್ನು ಶಿರಸಿಯಿಂದ ಕಾರವಾರಕ್ಕೆ ಸಾಗಿಸಲು ರೈತರ ಎತ್ತಿನ ಗಾಡಿಗಳನ್ನು ಬಿಟ್ಟಿಯಾಗಿ ಬಳಸುವ ಕ್ರಮ. ಅವತ್ತು ಆದದ್ದು ಅಷ್ಟೇ. ಕಲೆಕ್ಟರ್-ರಿಗೆ ಕರವಾರಕ್ಕೆ ಹೋಗಲು ಕಾರು ಇತ್ತು. ಆದರೆ ಸಿಪಾಯಿಗಳಿಗೆ ಹೋಗಲು ಎತ್ತಿನ ಗಾಡಿ ಬೇಕಿತ್ತು. ಸಿಪಾಯಿಯೊಬ್ಬ ಶಿರಸಿಯ ಚೆನ್ನಪಟ್ಟಣದ ಸನಿಹ ಒಂದು ಗಾಡಿ ನಿಲ್ಲಿಸಿದ. ಆ ಗಾಡಿಯಲ್ಲಿ ಬಡ ರೈತನೊಬ್ಬ ಮನೆಯತ್ತ ಅವಸರದಿಂದ ಸಾಗಿದ್ದ. ಮನೆಮಂದಿಗೆ ಅನಾರೋಗ್ಯವಿದ್ದುದರಿಂದ ಆತ ಔಷಧಿಯೊಂದಿಗೆ ಹೊರಟಿದ್ದ. ಆ ವೇಳೆಗೆ ಸಿಪಾಯಿ ಗಾಡಿ ತಡೆದದ್ದರಿಂದ ಆತ ತನ್ನ ತೊಂದರೆ, ತಾಪತ್ರಯಗಳನ್ನು ಪರಿಪರಿಯಾಗಿ ತಿಳಿಸಿದ. ತಕ್ಷಣ ಮನೆಗೆ ಹೋಗಬೇಕಾದ ಅನಿವಾರ್ಯತೆಯನ್ನು ತಿಳಿಸಿದ. ಆದರೆ ಸಿಪಾಯಿ ರೈತನ ಮಾತು ಕೇಳದೆ ಸರ್ಕಾರಿ ಬಂಗಲೆಯತ್ತ ಬರುವಂತೆ ದಬಾಯಿಸಿದ. ಗಾಡಿ ಆಳುವಿನ ಕೈಯಿಂದ ಬಾರುಕೋಲು ಕಸಿದುಕೊಂಡು ಎತ್ತಿನ ಮುಖಕ್ಕೆ ಸಿಪಾಯಿ ಚೆನ್ನಾಗಿ ಬಾರಿಸಿದ. ಎತ್ತಿನ ಕಣ್ಣುಗುಡ್ದೆಗೆ ಪೆಟ್ಟು ಬಿದ್ದು ಧಾರಾಕಾರವಾಗಿ ರಕ್ತ ಸುರಿಯಲಾರಂಭಿಸಿತು.
ಆದರೂ ನಿರ್ದಯಿ ಸಿಪಾಯಿ ಗಾಡಿಯನ್ನು ಬಂಗ್ಲೆಗೆ ಹೊಡೆಯುವಂತೆ ಗದರಿಸುತ್ತಿದ್ದ. ಕಂಗಾಲಾದ ರೈತ ಗೋಳೋ ಎಂದು ಅಳತೊಡಗಿದ. ಆ ವೇಳೆಗೆ ಅಡಿಕೆ ವಕಾರಿಯಲ್ಲಿದ್ದ ಅಕದಾಸ ಭಟ್ಟರು ಅಳುವ ಧ್ವನಿ ಕೇಳಿ ಸ್ಥಳಕ್ಕೆ ಹೋದರು. ಯಮದೂತನಂತಿದ್ದ ಸಿಪಾಯಿಯನ್ನು ಹಿಂದೆ ದೂಡಿ ರೈತನಿಗೆ ಗಾಡಿ ಹೊಡೆದುಕೊಂಡು ಮನೆಗೆ ಹೋಗುವಂತೆ ಹೇಳಿದರು. ಇದು ಸಿಪಾಯಿಯನ್ನು ಕೆರಳಿಸಿತು. ಆತ ಘಟನೆಯನ್ನು ತಕ್ಷಣ ಬಂಗ್ಲೆಯಲ್ಲಿದ್ದ ಕಲೆಕ್ಟರ್ ಗಮನಕ್ಕೆ ತಂದ. ಕೂಡಲೇ ಕಲೆಕ್ಟರ್ ನಾಲ್ಕಾರು ರಕ್ಷಕರೊಂದಿಗೆ ಕಾರಿನಲ್ಲಿ ಸ್ಥಳಕ್ಕೆ ಬಂದರು.
ಅಕದಾಸರಿಗೆ ಗುಂಡಿಕ್ಕಲು ಕಲೆಕ್ಟರ್ ಪಿಸೂಲು ಎತ್ತುವಷ್ಟರಲ್ಲಿ ಅಕದಾಸರು ಅವರ ಕೈಸಂದನ್ನು ಗಟ್ಟಿಯಾಗಿ ಹಿಡಿದು ದೊಡ್ಡದಾಗಿ ಕೂಗಿದರು. ಹತ್ತಿರದಲ್ಲಿದ್ದ ಹೂಡ್ಲಮನೆ ನಾರಾಯಣ ಹೆಗಡೆ (ಅಡಿಕೆ ವ್ಯಾಪಾರಸ್ಥರು)ಯವರು ಅಲ್ಲಿಗೆ ಬಂದರು. ಹಾಗೆ ಅಕ್ಕಪಕ್ಕದವರೆಲ್ಲ ಸೇರಿದ್ದರಿಂದ ಕಲೆಕ್ಟರ್ ನಿಧಾನಕ್ಕೆ ಪಿಸ್ತೂಲು ಕೆಳಗಿಳಿಸಿ, ಮುಂಬೈಗೆ ಹೋದರು. ಈ ಪ್ರಕರಣದಿಂದ ಅಕದಾಸರನ್ನು “ರಾಜದ್ರೋಹಿ"ಗಳೆಂದು ಕಲೆಕ್ಟರ್ ಖಟ್ಲೆ ಹಾಕಿದರು. ಅನಂತರ ಅವರು ಇಂಗ್ಲೆಂಡಿಗೆ ಮರಳಿದರು. ನಂತರ ಬೇರೊಬ್ಬ ಕಲೆಕ್ಟರ್-ರ ನೇಮಕವಾಯಿತು.
ನ್ಯಾಯಾಲಯದಲ್ಲಿ ಖಟ್ಲೆಯ ವಿಚಾರಣೆ ನಡೆದು ಅಕದಾಸರ ಮನೆತನವೆಲ್ಲ ರಾಜದ್ರೋಹಿಗಳೆಂದು ತೀರ್ಮಾನವಾಯಿತು. ಆಗ ತಾನೇ ಮುನ್ಸಿಫರೆಂದು ನೇಮಕರಾಗಿದ್ದ ಅಕದಾಸರ ತಮ್ಮ ಎಸ್.ಎನ್. ಅಕದಾಸರನ್ನು ಸಸ್ಪೆಂಡ್ ಮಾಡಲಾಯಿತು. ಮುಂದೆ ಈ “ಬಿಟ್ಟಿಗಾಡಿ ಪ್ರಕರಣ” ಹೈಕೋರ್ಟಿನ ಮೆಟ್ಟಲೇರಿ ಅಕದಾಸರದೇ ನ್ಯಾಯವೆಂದು ತೀರ್ಮಾನವಾಯಿತು. ಇಡೀ ಉತ್ತರ ಕರ್ನಾಟಕದಲ್ಲಿ ಬಿಟ್ಟಿಗಾಡಿ ರದ್ದಾಯಿತು. ಇದರಿಂದಾಗಿ ಸಂತೋಷ ಪಟ್ಟ ಬೈಲುಸೀಮೆಯ ಜನ ಅಕದಾಸರ ಬಗ್ಗೆ ಆ ಕಾಲದಲ್ಲಿ ಲಾವಣಿ ಕಟ್ಟಿ ಹಾಡಿದರಂತೆ.