ಲೇಖಕರು: ಡಾ. ಮೀನಗುಂಡಿ ಸುಬ್ರಹ್ಮಣ್ಯಂ
ಪ್ರಕಾಶಕರು; ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: 1993 ಹತ್ತನೇ ಮುದ್ರಣ: 2023 ಪುಟ: 160 ಬೆಲೆ: ರೂ. 175/-
ಮೈಸೂರಿನ ಪ್ರಸಿದ್ಧ ಕೌನ್ಸಿಲರ್ ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಹತ್ತು ಸಮಸ್ಯಾವರ್ತನೆಗಳನ್ನು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. 1996ರಲ್ಲಿ ನಾನು ಓದಿದ್ದ ಈ ಪುಸ್ತಕವನ್ನು ಓದಬೇಕೆಂದು ಕಳೆದ ಸುಮಾರು ಮೂರು ದಶಕಗಳಲ್ಲಿ ಸಾವಿರಾರು ಜನರಿಗೆ ನಾನು ಶಿಫಾರಸ್ ಮಾಡಿದ್ದೇನೆ. ಯಾಕೆಂದರೆ, ಪುಸ್ತಕದ ಶೀರ್ಷಿಕೆ, “ಈ ವರ್ತನೆಗಳು ನಿಮ್ಮಲ್ಲಿ ಇವೆಯೇ?” ಎಂದು ಕೇಳುತ್ತಿಲ್ಲ, ಬದಲಾಗಿ “... ಎಷ್ಟಿವೆ?” ಎಂದು ಕೇಳುತ್ತಿದೆ.
“ಅದು ಯಾಕೆ?" ಎಂಬುದನ್ನು ಲೇಖಕರು ಮುನ್ನುಡಿಯಲ್ಲಿ ವಿವರಿಸಿದ್ದಾರೆ: “ಇಲ್ಲಿ ಎರಡು ಬಗೆಯ ಸಮಸ್ಯಾವರ್ತನೆಯ ಚಿತ್ರಣಗಳಿವೆ - ವೈಯುಕ್ತಿಕ ಅನಿಸಿಕೆಗಳಿಂದಾಗಿ ಜೀವನ ಸುಖದ ಮಟ್ಟ ಕೆಳಗಿಳಿಸಿಕೊಂಡು “ನನಗೆ ಮಾನಸಿಕ ಸಮಸ್ಯೆ" ಎಂದು ತಾನೇ ಚೀಟಿ ಅಂಟಿಸಿಕೊಂಡು ಕುಳಿತುಕೊಳ್ಳುವುದು (ಇಂಟ್ರಾ ಪರ್ಸನಲ್ ಡಿಸ್ಟರ್ಬೆನ್ಸ್) ಮತ್ತು ಸಂಪರ್ಕ ಶೈಲಿಯ ನ್ಯೂನತೆಯಿಂದಾಗಿ ಪರಸ್ಪರ ಸಂಬಂಧದಲ್ಲಿ ಕಹಿ ಸೃಷ್ಟಿಸಿಕೊಂಡು "ಆ ಇನ್ನೊಬ್ಬರಿಂದಾಗಿ ತನಗೆ ಸುಖವಿಲ್ಲ” ಎಂದು ಪ್ರತಿಪಾದಿಸುತ್ತ ಕುಳಿತುಕೊಳ್ಳುವುದು (ಇಂಟರ್ ಪರ್ಸನಲ್ ಡಿಸ್ಟರ್ಬೆನ್ಸ್).
ಇಲ್ಲಿ ಬರುವ ವ್ಯಕ್ತಿಗಳ ಸಮಸ್ಯಾ ವರ್ತನೆಗಳನ್ನು, ನೀವು, ನಿಮ್ಮ ಸಹವರ್ತಿಗಳಲ್ಲಿ ಗುರುತಿಸಬಹುದು. ಅದು ಅರೆ ಪರಿಣಾಮಕಾರಿ ಓದು. ಇಲ್ಲಿ ಬರುವ ವ್ಯಕ್ತಿಗಳಲ್ಲಿ ನಿಮ್ಮನ್ನು ನೀವೇ ಗುರುತಿಸಿಕೊಂಡಿರಾದರೆ ಅದು ಪರಿಣಾಮಕಾರಿ ಓದು.
ಈ ಎರಡೂ ಬಗೆಯ ಓದನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಲು ನಾನು ಸಾಕ್ಷಿಯಾಗಿದ್ದ ಒಂದು ಘಟನೆ ವಿವರಿಸುತ್ತೇನೆ - ದೂರ ಪ್ರಯಾಣದ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತವನೊಬ್ಬ ತಾನು ಓದುತ್ತಿದ್ದ ನಿಯತಕಾಲಿಕೆಯನ್ನು ಮಡಚುತ್ತ ಪಕ್ಕದವನಿಗೆ ಹೇಳಿದ, “... ಚೆನ್ನಾಗಿ ಬರ್ದಿದಾನೆ ಗಾಯತ್ರಿ ಕಥೇನ (ಪುಸ್ತಕದ ಮೊದಲ ವೃತ್ತಾಂತ) … ನನ್ನ ಮಗಳೂ ಅವಳ ತರಾನೇ ಹಠಮಾರಿ… ಮನೆಗೆ ಹೋದಾಗ ಅವಳಿಗೆ ಇದನ್ನು ಕೊಟ್ಟು ಓದಿಸ್ತೇನೆ... ಒಂದಷ್ಟು ಬುದ್ಧಿ ಕಲೀತಾಳ ನೋಡೋಣ”
ಪಕ್ಕದವನು ಹೇಳಿದ, “ಲೋ ಶೀನ, ಅದ್ನ ಓದಿ ಬುದ್ಧಿ ಕಲೀಬೇಕಾದ್ದು ನಿನ್ನ ಮಗಳಲ್ಲ, ನೀನು ಕಣೋ ನೀನು… ನಾನೂ ಆ ನಾಗರಾಜನ (ಗಾಯತ್ರಿಯ ತಂದೆ) ತರಾ ತಂದೆ ಅಂತ ಈ ಗಾಯತ್ರಿ ಕತೆ ಓದಿದಾಗ್ಲೇ ಗೊತ್ತಾದದ್ದು…" ಎರಡನೆಯವನದ್ದು ಪರಿಣಾಮಕಾರಿ ಓದು.
ಈ ಪುಸ್ತಕ ಓದಿ ನಿಮ್ಮ ಕೆಲವಾದರೂ ಸಮಸ್ಯಾವರ್ತನೆಗಳನ್ನು, ಕನಿಷ್ಠ ಒಂದಾದರೂ ಸರಿಯೆ - ಬದಲಾಯಿಸಿಕೊಂಡಿರಿ ಎಂದಾದರೆ ನನಗೆ ಸಂತೋಷ…"
ಪುಸ್ತಕದ ಹತ್ತು ವೃತ್ತಾಂತಗಳ ಶೀರ್ಷಿಕೆಗಳು:
1.ನಾಗರಾಜ - ಗಾಯತ್ರಿ
2.ಕೆಟ್ಟಂಕ್ಲ್ - ವಿಜೇತ
3.ಬರ್ಟಿ - ಪ್ರೆಟ್ಟಿ
4.ವೇದಾ - ವಿಜೇತ
5.ಅಪ್ಪುಮಾಮ - ಹೆಂಡತಿ ಮಕ್ಕಳು
6.ಶ್ವೇತಾ - ಪ್ರೀತಮ್
7.ಕೋಯಿ - ಕೋಯಿ
8.ಶ್ರೀಪತಿರಾಯರು - ಉರಿಸಿಂಗ
9.ರಾಧಾ - ರವಿ
10.ಚಂಡವ್ಯಾಘ್ರ - ಸರ್ ಪುಣ್ಯಕೋಟಿ
ಈ ಮೇಲಿನ ಒಂದೊಂದು ವೃತ್ತಾಂತವೂ ಓದುತ್ತಿದ್ದಂತೆ ನಮ್ಮನ್ನು ನಖಶಿಖಾಂತ ಅಲುಗಾಡಿಸಿ ಬಿಡುತ್ತದೆ. ನಮ್ಮ ಸಮಸ್ಯಾವರ್ತನೆಗಳನ್ನು ಬದಲಾಯಿಸಿಕೊಳ್ಳದೆ ಹಲವಾರು ದಶಕಗಳಿಂದ ನಮ್ಮ ಬದುಕನ್ನು ನಾವೇ ನರಕ ಮಾಡಿಕೊಂಡಿರುವುದು ಅರಿವಿಗೆ ಬರುತ್ತಲೇ ಪಶ್ಚಾತ್ತಾಪವಾಗುತ್ತದೆ.
ಆದರೆ, ನಮ್ಮ ಸಮಸ್ಯಾವರ್ತನೆಗಳನ್ನು ಬದಲಾಯಿಸಿಕೊಳ್ಳಲು ನಮ್ಮಲ್ಲಿ ಎಷ್ಟು ಜನರು ತಯಾರಿದ್ದೇವೆ? ಹಲವರು ತಯಾರಿಲ್ಲ. ಯಾಕೆಂದರೆ ನಮ್ಮ ಅಹಂ ಅಡ್ಡ ಬರುತ್ತದೆ. ತಪ್ಪನ್ನು ಒಪ್ಪಿಕೊಳ್ಳಲು ಕಲಿತರೆ ಬದುಕು ಎಷ್ಟು ನಿರಾಳವಾದೀತು, ಅಲ್ಲವೇ?
ಉದಾಹರಣೆಗೆ, “ಕೋಯಿ - ಕೋಯಿ” ಎಂಬ ವೃತ್ತಾಂತವನ್ನು ಗಮನಿಸಿ. ಒಂದು ಕಾಲೇಜಿನಲ್ಲಿ ಕೋಯಿ ಇಂಗ್ಲಿಷ್ ಅಧ್ಯಾಪಕ (ವಯಸ್ಸು 25). ಆತನೇ ಹೇಳಿಕೊಳ್ಳುವಂತೆ ಆತ ವಿಪರೀತ ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್ (ಕೀಳರಿಮೆ)ಯಿಂದ ಬಳಲುತ್ತಿದ್ದಾನೆ. ಆತ ಏನು ಅನುಭವಿಸುತ್ತಿದ್ದಾನೆ ಎಂದು ಡಾ. ಸುಬ್ರಹ್ಮಣ್ಯಂ ಪ್ರಶ್ನಿಸಿದಾಗ ಅವನು ಉತ್ತರಿಸಲು ಶುರು ಮಾಡಿದ: "ಯಾವುದೇ ಕೆಲಸ ಶುರು ಮಾಡಲಿರುವಾಗ “ಇದನ್ನು ಮುಗಿಸಲಾರೆ, ಇದು ನನ್ನಿಂದ ಆಗಲಿಕ್ಕಿಲ್ಲ, ನಾನೊಬ್ಬ ನಿಷ್ಪ್ರಯೋಜಕ” ಎಂಬ ಯೋಚನೆ ಮೂಡುತ್ತಿರುತ್ತದೆ…" ಆ ವರ್ತನೆಯನ್ನು ಅವನು ಯಾರಿಂದ ಕಲಿತ ಎಂಬುದನ್ನು ಡಾ. ಸುಬ್ರಹ್ಮಣ್ಯಂ ಅವನಿಂದಲೇ ಹೇಳಿಸುತ್ತಾರೆ. ಅವನು ಏನು ಮಾಡಿದದ್ರೆ ಈ ಹಿಂಸೆಯಿಂದ ಪಾರಾಗಬಹುದು ಎಂಬುದನ್ನೂ ಅವನಿಂದಲೇ ಹೇಳಿಸುತ್ತಾರೆ. ಅಂತಿಮವಾಗಿ, ಬಾಲ್ಯದಿಂದಲೂ ಅನುಭವಿಸುತ್ತಿದ್ದ “ಕೀಳರಿಮೆ"ಯಿಂದ ಹೇಗೆ ಪಾರಾಗುವುದು ಎಂಬುದನ್ನು ಕೋಯಿ ಕೆಲವೇ ನಿಮಿಷಗಳಲ್ಲಿ ಕಲಿತು, ಹೊಸ ಬದುಕಿನತ್ತ ಹೆಜ್ಜೆ ಯಿಡುತ್ತಾನೆ.
ಇಲ್ಲಿನ ವೃತ್ತಾಂತಗಳನ್ನು ನನ್ನ ನಲುವತ್ತು ವರುಷಗಳ ವೃತ್ತಿ ಜೀವನದಲ್ಲಿ ಸಾವಿರಾರು ತರಬೇತಿ ಶಿಬಿರಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇನೆ. ಅವನ್ನು ಕೇಳುತ್ತಿದ್ದಂತೆ ಭಾಗಿಗಳು ದಂಗು ಬಡಿದು ಹೋಗಿದ್ದಾರೆ. ನೂರಾರು ಜನರು ತರಬೇತಿ ಶಿಬಿರಗಳ ನಂತರ ನನ್ನನ್ನು ಸಂಪರ್ಕಿಸಿ, ತಾವು ಈ ಪುಸ್ತಕವನ್ನು ಖರೀದಿಸಿ ಓದಿರುವುದಾಗಿಯೂ, ತಮ್ಮ ಸಮಸ್ಯಾವರ್ತನೆಗಳನ್ನು ಬದಲಾಯಿಸಿಕೊಂಡಿರುವುದಾಗಿಯೂ ನನಗೆ ತಿಳಿಸಿದ್ದಾರೆ. ಇದು ಈ ಪುಸ್ತಕದ ಅದ್ಭುತ ಪರಿಣಾಮದ ಪುರಾವೆ.
ಈ ಅಪರೂಪದ ಪುಸ್ತಕದ ಭಾಷೆಯ ಬಗ್ಗೆ ಒಂದು ಮಾತು ಬರೆಯಲೇ ಬೇಕು: ಡಾ. ಮೀನಗುಂಡಿ ಸುಬ್ರಹ್ಮಣ್ಯಂ ಅವರ ಬರಹಗಳಲ್ಲಿ ಒಂದೇ ಒಂದು ಅನಗತ್ಯ ಪದವೂ ಇಲ್ಲ ಮತ್ತು ಈ ಬರಹಗಳ ಯಾವುದೇ ಪದವನ್ನೂ ಬದಲಾಯಿಸಲು ಸಾಧ್ಯವಿಲ್ಲ. ಅಷ್ಟು ಬಿಗಿಯಾದ, ಅಚ್ಚುಕಟ್ಟಾದ ಭಾಷೆ! “ಇದ್ದದ್ದನ್ನು ಇದ್ದ ಹಾಗೆ ಬರೆಯುವುದು ಹೇಗೆ?” ಎಂಬುದಕ್ಕೆ ಅದ್ಭುತ ಉದಾಹರಣೆ ಈ ಬರಹಗಳು.
ಡಾ. ಮೀನಗುಂಡಿ ಸುಬ್ರಹ್ಮಣ್ಯಂ ನೂರಾರು ಕೌನ್ಸೆಲಿಂಗ್ ಶಿಬಿರಗಳು ಮತ್ತು ಕೌನ್ಸೆಲಿಂಗ್ ಚಿಕಿತ್ಸಾ ಅವಧಿಗಳ ಮೂಲಕ ಸಾವಿರಾರು ಜನರ ಬದುಕು ಬದಲಾಯಿಸಿದವರು. ಅವರ ಮಂತ್ರದಂಡ - ಸಮಸ್ಯಾವರ್ತನೆಯ ನೇರಾನೇರ ವಿಶ್ಲೇಷಣೆ. ಈಗ ಅವರು ಇಲ್ಲವಾದರೂ ಅವರು ಬರೆದಿರುವ ಮೂರು ಪುಸ್ತಕಗಳು ನಮಗೆ ಜೀವನ ಸುಖದ ಮಟ್ಟ ಉತ್ತಮವಾಗಿಸಲು ದಾರಿದೀಪದಂತಿವೆ: ಈ ಪುಸ್ತಕ, ಇದರ ಭಾಗ -2: “ಮಡದಿ ಮತ್ತೊಬ್ಬ ಚೆಲುವಗೆ" ಮತ್ತು "ಮನಸ್ಸು ಇಲ್ಲದ ಮಾರ್ಗ.”