ಪರಿಚಯ86: ಭಾರತದ ಹಬ್ಬಗಳು

ಅನುವಾದಕರು: ಎ.ಆರ್. ರಂಗರಾವ್
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
5ನೇ ಮರುಮುದ್ರಣ:2015            ಪುಟ: 120        ಬೆಲೆ: ರೂ. 70/-

ಭಾರತ ಹಬ್ಬಗಳ ದೇಶ. ಇಲ್ಲಿ ಮಳೆಗಾಲದ ಹೊರತಾಗಿ ವರುಷದುದ್ದಕ್ಕೂ ಹಬ್ಬಗಳ ಸಂಭ್ರಮ. ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ವಿವಿಧ ಧರ್ಮದವರು ಆಚರಿಸುವ 15 ಹಬ್ಬಗಳನ್ನು ಪರಿಚಯಿಸಲಾಗಿದೆ. ವಿವಿಧ ಲೇಖಕರು ಬರೆದಿರುವ ಮಾಹಿತಿಪೂರ್ಣ ಲೇಖನಗಳನ್ನು ಎ.ಆರ್. ರಂಗರಾವ್ ಸರಳ ಭಾಷೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಬುದ್ಧ ಪೂರ್ಣಿಮಾ, ಬಿಹು, ರಥ ಯಾತ್ರೆ, ರಕ್ಷಾ ಬಂಧನ್, ಓಣಂ, ಈದ್, ಗಣೇಶ ಚತುರ್ಥಿ, ದುರ್ಗಾ ಪೂಜೆ, ದಸರಾ, ದೀಪಾವಳಿ, ಕ್ರಿಸ್‌ಮಸ್, ಲೋಡಿ, ಪೊಂಗಲ್, ಹೋಳಿ, ನವರೋಜ್ - ಈ ಹಬ್ಬಗಳ ಬಗ್ಗೆ ನಮಗೆ ಸಾಮಾನ್ಯವಾಗಿ ತಿಳಿಯದ ಸಂಗತಿಗಳನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದೆ.

ರಾಜ ಶುದ್ಧೋದನ ಮತ್ತು ರಾಣಿ ಮಹಾಮಾಯ ಇವರ ಮಗನಾಗಿ ಹುಟ್ಟಿದ ಸಿದ್ಧಾರ್ಥನಿಗೆ ಬಾಲ್ಯದಿಂದಲೂ ಆಟ-ಬೇಟೆಗಳಲ್ಲಿ ಆಸಕ್ತಿಯಿಲ್ಲ. ಮಡದಿ ಯಶೋಧರ ಮತ್ತು ಮಗ ರಾಹುಲ ಇವರ ಬಗೆಗಿನ ತುಡಿತಕ್ಕಿಂತ ಬದುಕಿನ ಸತ್ಯಶೋಧನೆಯ ತುಡಿತವೇ ಆತನಲ್ಲಿ ಹೆಚ್ಚಾಗಿತ್ತು. ಜೀವನದ ದುಃಖ ನಿವಾರಣೆಯ ದಾರಿಯ ಶೋಧಕ್ಕಾಗಿ ಸಂಕಲ್ಪ ತೊಟ್ಟ ಆತ ಸನ್ಯಾಸಿಯಾಗಲು ನಿರ್ಧರಿಸಿ, ಒಂದು ದಿನ ರಾತ್ರಿ ಜಗವೆಲ್ಲ ಮಲಗಿರಲು ಅರಮನೆ ತೊರೆದು ಹೊರಟ. ಕೊನೆಗೆ ಬೋಧಿವೃಕ್ಷದ ನೆರಳಿನಲ್ಲಿ ತಪಸ್ಸು ಮಾಡುತ್ತಿದ್ದಾಗ 35ನೇ ಜನ್ಮದಿನವಾದ ವೈಶಾಖ ಹುಣ್ಣಿಮೆಯಂದು ಅವನಿಗೆ ಜ್ನಾನೋದಯವಾಯಿತು. ದಿವ್ಯಜ್ನಾನ ಪಡೆದ ಆತ ಗೌತಮಬುದ್ಧನಾದ. ತನ್ನ ಜ್ನಾನವನ್ನು ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಸಲು ಆತ ಅಭಿಯಾನ ಆರಂಭಿಸಿದ. ಬುದ್ಧನ ಜನ್ಮದಿನವನ್ನೇ ಬೌದ್ಧರು ಬುದ್ಧಪೂರ್ಣಿಮೆಯಾಗಿ ಆಚರಿಸುತ್ತಾರೆ.

ಬಿಹು ಅಸ್ಸಾಂನ ಜನರ ಬಹು ದೊಡ್ಡ ಹಬ್ಬ. ಜಾತಿ-ಮತಗಳ ಬೇಧ-ಭಾವವಿಲ್ಲದೇ ಎಲ್ಲ ವರ್ಗಗಳ ಜನರು ಸಂತೋಷದಿಂದ ಆಚರಿಸುವ ಹಬ್ಬ ಇದು. ಅಸ್ಸಾಮೀಯರು ಮೂರು ಬಿಹು ಹಬ್ಬ ಆಚರಿಸುತ್ತಾರೆ: ಎಪ್ರಿಲ್‌ನಲ್ಲಿ ಬೊಹಾಗ್ ಬಿಹು (ವಸಂತ ಕಾಲ), ಅಕ್ಟೋಬರಿನಲ್ಲಿ ಕಟಿ ಬಿಹು (ಚಳಿಗಾಲ) ಮತ್ತು ಜನವರಿಯಲ್ಲಿ ಮಾಘ್ ಬಿಹು. ಇವುಗಳಲ್ಲಿ ಬೊಹಾಗ್ ಬಿಹುಗೆ ಹೆಚ್ಚು ಮಹತ್ವ. ಇದರಲ್ಲಿ ವಸಂತೋತ್ಸವ, ಹೊಸ ವರುಷ ಮತ್ತು ರೈತರ ಹಬ್ಬ ಮೂರೂ ಸೇರಿಕೊಂಡಿವೆ. ಅಸ್ಸಾಮೀಯರ ಪಂಚಾಂಗದ ಮೊದಲ ತಿಂಗಳು ಬೊಹಾಗ್. ಆದ್ದರಿಂದ ಎಪ್ರಿಲ್‌ನ ಬಿಹು ಹಬ್ಬಕ್ಕೆ ಆ ಹೆಸರು. ಜೊತೆಗೆ ಇದು ಬೇಸಾಯದ ಕೆಲಸ ಶುರು ಆಗುವುದರ ಸಂಕೇತ. ಇದರಲ್ಲಿ ಅನುಸರಿಸುವ ವಿಧಿಗಳು ಮುಖ್ಯವಾಗಿ ಬೇಸಾಯಕ್ಕೆ ಸಂಬಂಧಿಸಿದವುಗಳು. ಇದರ ಆಚರಣೆಯ ವಿಶೇಷ ಬಿಹು ಹಾಡುಗಳ ಹಾಡುವಿಕೆ ಮತ್ತು ಕುಣಿತಗಳು. ಈ ಹಾಡುಗಳ ಮುಖ್ಯ ವಿಷಯ ಪ್ರಣಯ. ಲಯಬದ್ಧವಾದ ಈ ಜಾನಪದ ಗೀತೆಗಳು, ಸಂಗೀತ ವಾದ್ಯಗಳ ಹಿಮ್ಮೇಳದೊಂದಿಗೆ ಮನಮೋಹಕ.

ಪಂಜಾಬಿನ ಹಳ್ಳಿಗಳಲ್ಲಿ ಆಚರಿಸುವ ಹಬ್ಬ ಲೋಡಿ. ರೈತರಿಗೆ ಲೋಡಿ ಹಬ್ಬದಿಂದ ಹೊಸ ಹಣಕಾಸು ವರುಷ ಶುರು. ಹಬ್ಬದ ಕೆಲವು ದಿನಗಳ ಮುಂಚೆ, ಪ್ರತಿ ದಿನವೂ ಹಳ್ಳಿಯ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಮನೆಮನೆಗೆ ಹೋಗಿ ಬೆರಣಿ ಸಂಗ್ರಹಿಸುತ್ತಾರೆ. ಪುಷ್ಯ ಮಾಸದ ಕೊನೆಯ ದಿನ ಆ ಬೆರಣಿ ಎಲ್ಲ ರಾಶಿ ಮಾಡಿ, ರಾತ್ರಿ ಬೆಂಕಿ ಹಾಕುತ್ತಾರೆ. ಇದು ಸೂರ್ಯನಿಗೆ ಗೌರವ ಸೂಚಿಸುವುದರ ಸಂಕೇತ. ಈ ಬೆಂಕಿಯಿಂದ ಏಳುವ ಜ್ವಾಲೆಗಳು ಸೂರ್ಯನಿಗೆ ತಮ್ಮ ಸಂದೇಶವನ್ನು ತಲಪಿಸುತ್ತವೆಂದು ಜನರು ನಂಬುತ್ತಾರೆ. ಲೋಡಿಯ ಮರುದಿನ ಅಂದರೆ ಮಾಘ ಮಾಸದ ಮೊದಲ ದಿ ಸೂರ್ಯನ ಶಾಖ ಹೆಚ್ಚಾಗಿ, ಮೈ ನಡುಗಿಸುವ ಚಳಿ ಮರೆಯಾಗುತ್ತದೆ ಎಂಬುದು ಗಮನಾರ್ಹ. ಲೋಡಿಯ ಬೆಂಕಿಯ ಮುಂದೆ ನಿಂತು ದಂಪತಿಗಳು ತಮಗೆ ಮಕ್ಕಳಾಗಬೇಕೆಂದು ಬೇಡಿಕೊಂಡರೆ, ತಂದೆ-ತಾಯಿಯರು ಹೆಣ್ಣು ಮಕ್ಕಳಿಗೆ ಒಳ್ಳೆಯ ಗಂಡಂದಿರು ಸಿಗಲೆಂದು ಪ್ರಾರ್ಥಿಸುತ್ತಾರೆ. ಮನೆಮನೆಗಳಲ್ಲಿ ಹಬ್ಬದ ಹರುಷ ತುಂಬಿತುಳುಕುತ್ತದೆ. ಬೆಂಕಿಯ ಬಳಿ ಸೇರಿದ  ಕೆಲವರು ಹಾಡಲು ಶುರು ಮಾಡುತ್ತಾರೆ. ಹಾಡುವಿಕೆ ಮುಂಜಾನೆಯ ವರೆಗೂ ಸಾಗುತ್ತದೆ. ಯುವಜನರು ಕುಣಿದು ಮೈಮರೆಯುತ್ತಾರೆ.   

ಭಾರತದ ಅಲ್ಪಸಂಖ್ಯಾತರಾದ ಪಾರ್ಸಿಗಳ ಹೊಸ ವರುಷ ಆರಂಭದ ಹಬ್ಬ ನವರೋಜ್. ಇವರು 1,200 ವರುಷಗಳ ಹಿಂದೆ ಪರ್ಶಿಯಾದಲ್ಲಿ ಧಾರ್ಮಿಕ ಕಿರುಕುಳ ತಾಳಲಾಗದೆ ಭಾರತಕ್ಕೆ ವಲಸೆ ಬಂದವರು. ಗುಜರಾತಿನ ಕೆಲವು ಭಾಗಗಳಲ್ಲಿ ಮತ್ತು ಮುಂಬೈಯಲ್ಲಿ ನೆಲೆಸಿದರು. ಇವರು ಪಾಲಿಸುವ ಧರ್ಮ ಜೊರಾಸ್ಟ್ರಿಯನ್. ಪ್ರತಿ ವರುಷ ಮಾರ್ಚ್ 21ರಂದು ನವರೋಜ್ ಹಬ್ಬದ ಆಚರಣೆ. ಇದು ವಸಂತ ಮಾಸದ ಮೊದಲ ದಿನ ಅಂದರೆ ಸೂರ್ಯನು ವಿಷವೃತ್ತವನ್ನು ಹಾದು ಹೋಗುವ ದಿನ. ಅವತ್ತು ಒಬ್ಬರಿಗೊಬ್ಬರು ಶುಭಾಶಯ ಹೇಳುವರು; ಸಿಹಿ ತಿಂಡಿಗಳನ್ನು ಹಂಚುವರು. ಅಗ್ನಿದೇವರ ಗುಡಿಗಳಲ್ಲಿ ಎಲ್ಲರೂ ಸೇರಿ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನವರೋಜ್ ಹಬ್ಬದ ಆಚರಣೆಯಲ್ಲಿ ಮಕ್ಕಳದೇ ಮುಖ್ಯ ಪಾತ್ರ.

ಈ ಪುಸ್ತಕದಲ್ಲಿ ಮಾಹಿತಿ ಒದಗಿಸಿರುವ ರಕ್ಷಾ ಬಂಧನ, ಗಣೇಶ ಚತುರ್ಥಿ, ದಸರಾ, ದೀಪಾವಳಿ, ಓಣಂ, ಪೊಂಗಲ್, ಈದ್, ಕ್ರಿಸ್‌ಮಸ್ ಇತ್ಯಾದಿ ಹಬ್ಬಗಳ ಬಗ್ಗೆ ನಮಗೆ ಸಾಕಷ್ಟು ಸಂಗತಿಗಳು ತಿಳಿದೇ ಇವೆ, ಅಲ್ಲವೇ?