ಪರಿಚಯ84: ಸಾರ್ವಕಾಲಿಕ ಪುಸ್ತಕಗಳು

ಲೇಖಕರು: ಮನೋಜ್ ದಾಸ್      

ಕನ್ನಡಕ್ಕೆ: ಎಂ. ಗೋಪಾಲಕೃಷ್ಣ ಅಡಿಗ
ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
 4ನೇ ಮುದ್ರಣ: 2004          ಪುಟ: 64         ಬೆಲೆ: ರೂ.15/-

ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು. ಸುಕುಮಾರ್ ಚಟರ್ಜಿ ರಚಿಸಿದ ಚಂದದ ಚಿತ್ರಗಳು ಪುಸ್ತಕಕ್ಕೆ ಮೆರುಗು ನೀಡಿವೆ.

ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಪುರಾಣಗಳು, ತಿರುಕುರಳ್, ಕಥಾಸರಿತ್ಸಾಗರ, ಪಂಚತಂತ್ರ ಮತ್ತು ಜಾತಕ ಕತೆಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ಪರಿಚಯಿಸಲಾಗಿದೆ.

ಮೊದಲನೆಯ ಅಧ್ಯಾಯದಲ್ಲಿ ಪುಸ್ತಕಗಳ ಸಂಗ್ರಹಗಳನ್ನು ನಾಶಪಡಿಸುವ ಮೂಲಕ ಮಾನವ ಕುಲದ ಸಾವಿರಾರು ವರುಷಗಳ ಜ್ನಾನಸಂಪತ್ತನ್ನು ನಾಶಪಡಿಸಲು ಪ್ರಯತ್ನಿಸಿದ ದುಷ್ಟರು ಹಾಗೂ ಮೂರ್ಖರ ಬಗ್ಗೆ ಪ್ರಸ್ತಾಪಿಸಲಾಗಿದೆ. ಎರಡು ಸಾವಿರ ವರುಷಗಳ ಹಿಂದೆ ಚೀನಾದ ಚಕ್ರವರ್ತಿಯಾಗಿದ್ದ ಹ್ಸಿ ಹ್ವಾಂಗ್ ಟಿ ಎಂಬಾತನಿಗೆ ಬಹಳ ಓದುವ ತನ್ನ ಪ್ರಜೆಗಳ ಬಗ್ಗೆಯೇ ಕೋಪ! “ಸುಮ್ಮನೆ ಏನೇನೋ ಓದಿ ತಲೆ ಕೆಡಿಸಿಕೊಳ್ಳುವ ಅಗತ್ಯ ತನ್ನ ಪ್ರಜೆಗಳಿಗಿಲ್ಲ" ಎಂದು ಎಲ್ಲ ಪುಸ್ತಕಗಳನ್ನೂ ನಾಶಪಡಿಸಲು ಆದೇಶವಿತ್ತ. ಆಗಿನ ಕಾಲದ ಪುಸ್ತಕಗಳೆಂದರೆ ಶಬ್ದಗಳನ್ನು ಕೆತ್ತಿದ್ದ ಮರದ ತುಂಡುಗಳು. ಅವನ್ನೆಲ್ಲ ಸುಟ್ಟು ಹಾಕಿಸಿದ. ಆದರೆ ಅವನು ಸತ್ತ ನಂತರ, ಕೆಲವೇ ವರುಷಗಳಲ್ಲಿ ಆ ಪುಸ್ತಕಗಳೆಲ್ಲ ಮರದ ತುಂಡುಗಳಲ್ಲಿ ಮತ್ತೆ ಕಾಣಿಸಿಕೊಂಡವು. ಅವನ್ನು ಇವತ್ತಿನ ವರೆಗೂ ಜಗತ್ತಿನ ಎಲ್ಲ ದೇಶಗಳ ಜನರು ಓದುತ್ತ ಬಂದಿದ್ದಾರೆ.

ಶತಶತಮಾನಗಳ ಜ್ನಾನಭಂಡಾರಗಳಾದ ಪುಸ್ತಕಗಳನ್ನು ನಾಶ ಮಾಡುವ ನೀಚ ಕೆಲಸ ಮತ್ತೆಯೂ ಜಗತ್ತಿನ ಚರಿತ್ರೆಯಲ್ಲಿ ದಾಖಲಾಗಿದೆ. ಅವುಗಳಲ್ಲಿ ಮುಖ್ಯವಾದದ್ದು ಏಳನೆಯ ಶತಮಾನದಲ್ಲಿ ಜ್ನಾನಪ್ರಸಾರದಲ್ಲಿ ಜಗತ್ತಿನಲ್ಲೇ ಉತ್ತುಂಗದ ಸ್ಥಾನ ಪಡೆದಿದ್ದ ಭಾರತದ ನಲಂದಾ ವಿಶ್ವವಿದ್ಯಾಲಯದ ವಿಶಾಲ ಪುಸ್ತಕ ಭಂಡಾರದ ಮೂರು ವಿಭಾಗಗಳನ್ನು ನಾಶ ಮಾಡಿದ್ದು.

ಹಾಗೆಯೇ, ಪುರಾತನ ನಗರ ಅಲೆಗ್ಸಾಂಡ್ರಿಯಾದ ದೊಡ್ಡ ಗ್ರಂಥಾಲಯದಲ್ಲಿದ್ದ ಸಾವಿರಾರು ಕೈಬರಹದ ಪುಸ್ತಕಗಳನ್ನು ಏಳನೆಯ ಶತಮಾನದಲ್ಲಿ ಸುಟ್ಟು ಬೂದಿ ಮಾಡಿದ್ದು ಜಗತ್ತಿನ ಚರಿತ್ರೆಯ ಇನ್ನೊಂದು ಕರಾಳ ಘಟನೆ. ಆ ಅಮೂಲ್ಯ ಗ್ರಂಥಾಲಯವನ್ನು ನಾಶ ಮಾಡಿದ ಧಾಳಿಕಾರನ ಮೂರ್ಖ ವಾದ ಹೀಗಿತ್ತು: “ಅಲ್ಲಿದ್ದ ಅಸಂಖ್ಯ ಪುಸ್ತಕಗಳು ತನ್ನ ಪವಿತ್ರ ಧರ್ಮಗ್ರಂಥದಲ್ಲಿ ಇದ್ದದ್ದನ್ನು ಹೇಳುವುದಿಲ್ಲವಾದರೆ ಅವು ಈ ಜಗತ್ತಿನಲ್ಲಿ ಇರಬಾರದು; ಒಂದು ವೇಳೆ ಅವು ತನ್ನ ಧರ್ಮ ಗ್ರಂಥದಲ್ಲಿ ಆಗಲೇ ಹೇಳಿದ್ದನ್ನು ಮತ್ತೆ ಹೇಳುವಂಥವುಗಳಾದರೆ ಈ ಜಗತ್ತಿನಲ್ಲಿ ಅವು ಇರುವ ಅಗತ್ಯವಿಲ್ಲ."

ಆದ್ದರಿಂದಲೇ, ನಮ್ಮ ಪುರಾತನ ಋಷಿಮುನಿಗಳು ತಾವು ಆವಿಷ್ಕರಿಸಿದ ಹಾಗೂ ಅರ್ಥಮಾಡಿಕೊಂಡ ಅಪಾರ ಜ್ನಾನಸಂಪತ್ತನ್ನು ಮುಂದಿನ ತಲೆಮಾರುಗಳಿಗೆ ದಾಟಿಸಲು ಕಂಡುಕೊಂಡ ಪರಿಣಾಮಕಾರಿ ವಿಧಾನ: ಅವನ್ನು ಕಂಠಪಾಠ ಮಾಡುವುದು. ಹಲವರು ಅಭಿಪ್ರಾಯದಂತೆ, ಈ ಜಗತ್ತಿನಲ್ಲೇ ಅತ್ಯಂತ ಪುರಾತನ ಗ್ರಂಥಗಳು ವೇದಗಳು. ಅವುಗಳ ಪದ್ಯಗಳನ್ನು ದೀರ್ಘ ಕಾಲದ ವರೆಗೆ ಬರೆದಿಟ್ಟಿರಲಿಲ್ಲ. ಬಾಯಿಪಾಠ ಮಾಡುವ ಮೂಲಕವೇ ಅವನ್ನು ತಂದೆಯಿಂದ ಮಗನಿಗೆ, ಗುರುವಿನಿಂದ ಶಿಷ್ಯನಿಗೆ ದಾಟಿಸಿ, ಸಾವಿರಾರು ವರುಷ ರಕ್ಷಿಸಲಾಯಿತು. ಹಾಗಾಗಿ ಪುಸ್ತಕಗಳಿಗೆ ಸಾವಿಲ್ಲ.

ಈ ಪುಸ್ತಕದಲ್ಲಿ ವೇದಗಳನ್ನು ಪರಿಚಯಿಸುವ ಪರಿ ಹೀಗಿದೆ: “ಅತ್ಯುನ್ನತವಾದ ಸಂಗತಿಗಳನ್ನು ತಿಳಿಯಲು ಮಾಡಿದ ಪ್ರಯತ್ನಗಳು, ಗಂಭೀರ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳು - ಇವೇ ಹೆಚ್ಚುಕಡಿಮೆ ವಸ್ತುವಾಗಿರುವ ಗ್ರಂಥಗಳು ವೇದಗಳು; ದೇವರು, ಆನಂದ, ಸತ್ಯ ಎಂದರೇನು ಎಂದು ತಿಳಿಯಲು ನಡೆಸಿದ ಹೋರಾಟದ ಫಲ.” ಬೇರೆಬೇರೆ ದೇವತೆಗಳನ್ನು ಹೊಗಳುವ ಸೂಕ್ತಗಳೂ, ಯಜ್ನಕ್ಕೆ ಸಂಬಂಧಿಸಿದ ಬೇರೆಬೇರೆ ಕರ್ಮಾಂಗಗಳನ್ನು ಸಂಸ್ಕಾರಗಳನ್ನೂ ವಿವರಿಸುವ ಗದ್ಯ ಭಾಗಗಳು, ಅಮೂರ್ತ ಚಿಂತನದ ಅತ್ಯುನ್ನತ ಮಟ್ಟವನ್ನು ಸೂಚಿಸುವ ಅನೇಕ ತಾತ್ವಿಕ ಸೂಕ್ತಗಳೂ ವೇದಗಳಲ್ಲಿವೆ.
ಮಹಾ ಋಷಿಯೂ ಕವಿಯೂ ಆದ ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದರು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ. ಯಾವುದೇ ಒಂದು ಮತವನ್ನಾಗಲೀ ನಂಬಿಕೆಯನ್ನಾಗಲೀ ವೇದಗಳು ಬೋಧಿಸುವುದಿಲ್ಲ. ವೇದಗಳೆಂದರೆ ಋಷಿಗಳ ಅಂತರಂಗದ ಅನುಭವಗಳ ದಾಖಲೆಗಳು. “ವೇದಗಳ ಭಾಷೆ ತುಂಬ ಪ್ರೌಢವಾದುದು. ಬಹಳ ಕಡಿಮೆ ಶಬ್ದಗಳಲ್ಲಿ ಬಹಳ ಹೆಚ್ಚು ಅರ್ಥವನ್ನು ವ್ಯಕ್ತಗೊಳಿಸಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಈ ರೀತಿಯ ಪ್ರೌಢತೆ ಬರಬೇಕಾದರೆ ಒಂದು ಭಾಷೆ ಬಹಳ ಕಾಲದಿಂದ ಬಳಕೆಯಲ್ಲಿರಬೇಕು. ಅಂಥ ಭಾಷೆ ಬೆಳೆಸಲು ಶ್ರೇಷ್ಠ ನಾಗರಿಕತೆಗೆ ಮಾತ್ರ ಸಾಧ್ಯ.”

ಉಪನಿಷತ್ತುಗಳನ್ನು ಹೀಗೆ ಪರಿಚಯಿಸಲಾಗಿದೆ: “ಭಾರತದ ಸಾಹಿತ್ಯ ಪರಂಪರೆಯಲ್ಲಿ ಉಪನಿಷತ್ತುಗಳಿಗೆ ವೇದಗಳ ಅನಂತರದ ಮುಖ್ಯ ಸ್ಥಾನ. ಒಟ್ಟು 108 ಉಪನಿಷತ್ತುಗಳಿವೆ. ಅನೇಕ ವಿದ್ವಾಂಸರು ಅವನ್ನು ವೇದಾಂತ (ವೇದಗಳ ಕೊನೆ) ಎಂದು ಕರೆಯುತ್ತಾರೆ. ಆದರೆ ವೇದಗಳಲ್ಲಿರುವ ಕೆಲವು ವಿಚಾರಗಳ ವಿವರಣೆಗಳು ಇವು ಎಂದು ಭಾವಿಸುವುದು ಹೆಚ್ಚು ಸರಿಯಾದುದು. ಪ್ರತಿ ಉಪನಿಷತ್ತಿನ ವಸ್ತುವೂ ಯಾವುದಾದರೊಂದು ವೇದಕ್ಕೆ ಸಂಬಂಧಪಟ್ಟಿರುತ್ತದೆ. ಅವುಗಳಲ್ಲಿ ಮುಖ್ಯವಾದುವು ಈಶ, ಕೇನ, ಕಥ, ಮಂಡೂಕ, ಮಾಂಡೂಕ್ಯ ಮತ್ತು ಪ್ರಶ್ನೆ. “ನಿನ್ನನ್ನು ನೀನು ತಿಳಿದುಕೋ” ಎಂಬುದೇ, ಸ್ಥೂಲವಾಗಿ ಹೇಳುವುದಾದರೆ, ಉಪನಿಷತ್ತು ಮತ್ತು ವೇದಗಳ ಸಂದೇಶ.”

ಮುಂದಿನ ಮೂರು ಅಧ್ಯಾಯಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳನ್ನು ಸರಳವಾಗಿ ಪರಿಚಯಿಸಲಾಗಿದೆ. ಇವುಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಸ್ಥೂಲವಾಗಿ ತಿಳಿದಿದೆ ಎಂಬುದು ನಮಗೆ ಅಭಿಮಾನದ ಸಂಗತಿ.  

ಇದರಲ್ಲಿ ಪರಿಚಯಿಸಲಾಗಿರುವ ಮಗದೊಂದು ಪುಸ್ತಕ: ತಿರುಕ್ಕುರಳ್. ಇದನ್ನು ಸಣ್ಣಸಣ್ಣ ಪದ್ಯಗಳಾಗಿ ರಚಿಸಿದ ಜ್ನಾನಿ ತಿರುವಳ್ಳುವರ್. ಈಗಿನ ಚೆನ್ನೈ ಮಹಾನಗರದ ಮೈಲಾಪುರದಲ್ಲಿ ವಾಸವಾಗಿದ್ದ ಈತ ನೇಕಾರನಾಗಿದ್ದ ಎಂದು ಪ್ರತೀತಿ. “ಈ ಪದ್ಯಗಳು ಒಳಗೊಂಡಿರುವ ಸತ್ಯಕ್ಕೂ ಅವುಗಳ ಅಭಿವ್ಯಕ್ತಿಯ ಶಕ್ತಿಗೂ ಸಮಾನವಾದುದು ಭಾರತದ ಸಾಹಿತ್ಯದಲ್ಲಿ ಬೇರೆಲ್ಲೂ ಕಾಣ ಸಿಗದು." “ತಿರು” ಎಂದರೆ ಪವಿತ್ರವಾದುದು, “ಕುರಳ್" ಎಂದರೆ ಸಣ್ಣ ಪದ್ಯ - ಖಂಡ. ಈ ಕೃತಿಯಲ್ಲಿ ಪ್ರತಿಯೊಂದರಲ್ಲೂ ಹತ್ತು ಹತ್ತು ದ್ವಿಪದಿಗಳಿರುವ 133 ಅಧ್ಯಾಯಗಳಿವೆ. ಜೀವನದ ವಿವಿಧ ಸನ್ನಿವೇಶಗಳಿಗೂ, ಮನುಷ್ಯನು ಎದುರಿಸಬಹುದಾದ ವಿಭಿನ್ನ ಪ್ರಸಂಗಗಳಿಗೂ ಸೂಕ್ತ ಉಪದೇಶ ಇದರಲ್ಲಿದೆ.

ನಂತರದ ಎರಡು ಅಧ್ಯಾಯಗಳು ಕಥಾಸರಿತ್ಸಾಗರ ಮತ್ತು ಪಂಚತಂತ್ರದ ಬಗ್ಗೆ. ಕಥಾಸರಿತ್ಸಾಗರಕ್ಕೆ ಭಾರತದ ಎಲ್ಲ ಭಾಗಗಳಿಂದಲೂ ನೂರಾರು ಕಥೆಗಳು ಬಂದು ಸೇರಿಕೊಂಡಿವೆ. ಆದ್ದರಿಂದಲೇ ಇದಕ್ಕೆ ಕಥಾಸರಿತ್ಸಾಗರ ಎಂದರೆ “ಕಥೆಗಳ ನದಿಗಳಿಂದ ಆದ ಸಾಗರ” ಎಂಬ ಅನ್ವರ್ಥ ಹೆಸರು. ಇದು ಜಗತ್ತಿನ ಅತ್ಯಂತ ಪುರಾತನ ಕಥಾಸಂಗ್ರಹ ಎನ್ನಲಾಗಿದೆ.

“ಪಂಚತಂತ್ರ"ದ ಕೆಲವು ಕಥೆಗಳಾದರೂ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿದೆ. ಇವನ್ನು ರಚಿಸಿದಾತ ವಿಷ್ಣುಶರ್ಮ ಎಂಬ ವಿದ್ವಾಂಸ. ರಾಜನೊಬ್ಬನ ಮೂವರು ಗಂಡು ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಲಕ್ಷ್ಯ ನೀಡದೆ ಸೋಮಾರಿಗಳಾಗಿ ಬೆಳೆಯುತ್ತಿದ್ದರು. ರಾಜನ ವಿನಂತಿಯಂತೆ ಅವರಿಗೆ ವಿದ್ಯಾಭ್ಯಾಸ ನೀಡಲು ಮುಂದೆ ಬಂದವನೇ ವಿಷ್ಣುಶರ್ಮ. ಅದಕ್ಕಾಗಿ ಆತ ಅನುಸರಿಸಿದ ವಿಧಾನ “ಕತೆಗಳ ಮೂಲಕ ಶಿಕ್ಷಣ”. ಇದೆಷ್ಟು ಪರಿಣಾಮಕಾರಿ ವಿಧಾನ ಎಂಬುದು ನಮ್ಮ ಬಾಲ್ಯದಲ್ಲಿ ಇದರ ಕೆಲವಾದರೂ ಕಥೆಗಳನ್ನು ಕೇಳಿ ಖುಷಿಪಟ್ಟ ನಮಗೆಲ್ಲರಿಗೂ ತಿಳಿದಿದೆ, ಯಾಕೆಂದರೆ ಆ ಕಥೆಗಳ ನೀತಿ ಈಗಲೂ ನೆನಪಿದೆ.  

“ಜಾತಕಗಳು" ಅಧ್ಯಾಯ ಬುದ್ಧನ ಜಾತಕ ಕಥೆಗಳ ಪರಿಚಯ. ಒಟ್ಟು 457 ಜಾತಕ ಕಥೆಗಳಿವೆ. ಇವೆಲ್ಲವೂ ಬೌದ್ಧಧರ್ಮ ಸಂಸ್ಥಾಪಕನಾದ ಬುದ್ಧನು ಹೇಳಿದ ಕಥೆಗಳೆಂದು ಪ್ರತೀತಿ. ಪ್ರತಿ ಕಥೆಯಲ್ಲಿಯೂ ಒಂದು ನೀತಿ ಇದೆ. ಪ್ರತಿಯೊಂದು ಕಥೆಯೂ ನಮಗೆ ಜೀವನವನ್ನು ಇನ್ನೂ ಚೆನ್ನಾಗಿ ತಿಳಿಯಲು ಮತ್ತು ನಾವು ಇನ್ನೂ ಚೆನ್ನಾಗಿ ಬದುಕಲು ಸಹಾಯ ಮಾಡುತ್ತವೆ.

ಕೊನೆಯ ಅಧ್ಯಾಯ ಪರಿಚಯಿಸುವ ಗ್ರಂಥ “ಅರ್ಥಶಾಸ್ತ್ರ”. ಇದು ಮಹಾನ್ ಮೇಧಾವಿ ಚಾಣಕ್ಯ ರಚಿಸಿದ ಗ್ರಂಥ. ಇವನು ಚಂದ್ರಗುಪ್ತನು ಮಗಧ ರಾಜ್ಯದ ದೊರೆಯಾಗಲು ಕಾರಣನಾದವನು. ಕೌಟಿಲ್ಯ ಎಂಬ ಹೆಸರಿನಿಂದಲೂ ಈತ ಪ್ರಸಿದ್ಧ. ಇವನ “ಅರ್ಥಶಾಸ್ತ್ರ”, ಈ ಮೇಲಿನ ಇತರ ಎಲ್ಲ ಗ್ರಂಥಗಳಿಗಿಂತ ಭಿನ್ನವಾದುದು. ಭಾರತದ ಜ್ನಾನ ಸಂಪತ್ತು ಕೇವಲ ಅಧ್ಯಾತ್ಮ, ವೇದಾಂತ, ಕಥೆ, ಕಾವ್ಯ ಮಾತ್ರವಲ್ಲ; ಅದು ಜೀವನದ ಎಲ್ಲ ಅಂಗಗಳನ್ನೂ ಒಳಗೊಂಡಿದೆ ಎಂಬುದಕ್ಕೆ ಪುರಾವೆ “ಅರ್ಥಶಾಸ್ತ್ರ". ಇದರಲ್ಲಿವೆ ರಾಜನೀತಿ, ಸಮಾಜ ವಿಜ್ನಾನ, ಕಾನೂನು, ವಾಣಿಜ್ಯ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ಒಳನೋಟಗಳು.