ಪರಿಚಯ49: ನಮ್ಮ ಮರಗಳು

ಲೇಖಕರು: ಎಚ್. ಆರ್. ಕೃಷ್ಣಮೂರ್ತಿ
ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ನಾನ ಪರಿಷತ್ತು,
              ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಆವರಣ, ಬೆಂಗಳೂರು
ಪ್ರಕಟಣೆ: 1996       ಪುಟ: 168        ಬೆಲೆ: ರೂ.25/-          
                          
"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ 103 ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ “ಮರಗಳ ಒಡನಾಟ”  ಎಂಬ ಮೊದಲ ಅಧ್ಯಾಯ.

ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ ಜೀವಿಗಳನ್ನು ನಾವು ಹೇಗೆ ಕಾಣಬೇಕು?" "ಎಲ್ಲಿವೆ ಅಂಥ ಜೀವಿಗಳು?" ಎಂಬ ಪ್ರಶ್ನೆಗೆ ಉತ್ತರವಾಗಿ ಸಾವಿರಾರು ವರುಷ ಬದುಕಿರುವ ಮರಗಳನ್ನು ಉದಾಹರಿಸುತ್ತಾರೆ:
(1) ಡೆಹ್ರಾಡೂನಿನ ಅರಣ್ಯ ಸಂಶೋಧನಾ ಸಂಸ್ಠೆಯ ಆವರಣದಲ್ಲಿರುವ ದೇವದಾರು ಮರ. ಇದು ಹುಟ್ಟಿದ್ದು 12ನೆಯ ಶತಮಾನದಲ್ಲಿ. (2) ಯುಎಸ್‍ಎ ದೇಶದ ಕ್ಯಾಲಿಫೋರ್ನಿಯ ರಾಜ್ಯದ ರೆಡ್‍ವುಡ್ ಸಿಕೋಯ ವೃಕ್ಷಗಳು. ಅವುಗಳಲ್ಲಿ ಒಂದು ವೃಕ್ಷ ಜನ್ಮ ತಾಳಿದ್ದು ಬುದ್ಧ ಹುಟ್ಟುವ ಸಾವಿರ ವರ್ಷಗಳ ಮುಂಚೆ.

"ದೀರ್ಘಾಯುಷ್ಯವೊಂದೇ ವೃಕ್ಷ ಪ್ರವಂಚದಲ್ಲಿನ ಏಕೈಕ ಆಶ್ಚರ್ಯದ ಸಂಗತಿಯಲ್ಲ. ಅದು ಅಚ್ಚರಿ ಹುಟ್ಟಿಸುವ ಅಸಂಖ್ಯ ವಿಷಯಗಳ ಆಗರ" ಎನ್ನುತ್ತಾ ಅವನ್ನು ಪರಿಚಯಿಸಲು ಶುರು ಹಚ್ಚುತ್ತಾರೆ ಲೇಖಕರು, "ನಮ್ಮ ಮರಗಳು" ಪುಸ್ತಕದಲ್ಲಿ.

ಬಿಳಿಗಿರಿರಂಗನ ಬೆಟ್ಟದ ಕಾಡಿನಲ್ಲಿರುವ ದೈತ್ಯಾಕಾರದ ಸಂಪಿಗೆ ಮರದ ಬುಡದಲ್ಲಿ ಕುಳಿತಿದ್ದಾಗ, ಹತ್ತು ವರ್ಷದ ಅಭಿ ಎಂಬ ಹುಡುಗ ಕೇಳುವ ಪ್ರಶ್ನೆ: "ಇಂತಹ ದೊಡ್ಡ ಮರದಲ್ಲಿರುವ ಅಷ್ಟೂ ಎಲೆಗಳಿಗೆ  ನೀರು ಹೇಗೆ ಸರಬರಾಜಾಗುತ್ತದೆ?" ಈ ಪ್ರಶ್ನೆಯಿಂದಾಗಿ ಅಲ್ಲಿ ಆರಂಭವಾಯಿತು ಪ್ರಶ್ನೆಗಳ ಸುರಿಮಳೆ. ನೀರು, ಬೇರುಗಳಿಂದ ಪ್ರಾರಂಭವಾದ ಪ್ರಶ್ನೆಗಳು ಎಲೆ, ಹೂ, ಹಣ್ಣು, ಬೀಜ, ತೊಗಟೆಗಳಿಗೆಲ್ಲ ವ್ಯಾಪಿಸಿದವು. ಅವೆಲ್ಲ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿವೆ, ಈ ಪುಸ್ತಕದ ಅಧ್ಯಾಯಗಳು.

ಮೂರನೆಯ ಅಧ್ಯಾಯ "ಮರಗಳ ಗುರುತು." ಇದು ಮರಗಳನ್ನು ಗುರುತಿಸಲಿಕ್ಕಾಗಿ ಲೈಂಗಿಕ ಹಾಗೂ ಅಲೈಂಗಿಕ ಭಾಗಗಳನ್ನು ಬಳಸಬಹುದು. ಹೂ ಮತ್ತು ಹಣ್ಣು ಲೈಂಗಿಕ ಭಾಗವಾದರ, ಎಲೆ, ಕಾಂಡ ಹಾಗೂ ತೊಗಟೆ ಅಲೈಂಗಿಕ ಭಾಗಗಳು. ಹೂ ಅಥವಾ ಹಣ್ಣು ವರ್ಷದ ಎಲ್ಲ ಋತುಗಳಲ್ಲಿ ಇರುವುದಿಲ್ಲ. ಆದ್ದರಿಂದ  ಆಯಾ ಋತುವಿನಲ್ಲಿ ಎದ್ದು ಕಾಣುವ ಭಾಗಗಳನ್ನು ಅವಲಂಬಿಸಿ ಮರಗಳನ್ನು ಗುರುತಿಸಬೇಕು. ಅದಕ್ಕಾಗಿ ಎಲೆಗಳ ಆಕಾರ, ರೆಂಬೆಯಲ್ಲಿ ಎಲೆಗಳ ಜೋಡಣೆಯನ್ನು ಈ ಅಧ್ಯಾಯದಲ್ಲಿ ಸರಳವಾಗಿ ರೇಖಾಚಿತ್ರಗಳ ಮೂಲಕ ವಿವರಿಸಲಾಗಿದೆ.

ಮರ ಬೆಳೆದು ಕಾಂಡ ದಪ್ಪವಾದಂತೆ ಹೊರ ತೊಗಟೆ ಬಿರಿಯಲು ಪ್ರಾರಂಭ. ಬಿರಿದ ತೊಗಟೆಯ ವಿನ್ಯಾಸ ಅಥವಾ ತೊಗಟೆಯ ಮೇಲೆ ಕಾಣಿಸುವ ಗುರುತು ಮರದ ಗುರುತಿನ ಪಟ್ಟಿಯಾಗುತ್ತದೆ. ಉದಾಹರಣೆಗೆ ಮತ್ತಿ ಮರವನ್ನು ಮೊಸಳೆ ಚರ್ಮದ ಮರ ಎನ್ನುತ್ತಾರೆ. ಯಾಕೆಂದರೆ ಅದರ ಬಿರಿದ ತೊಗಟೆಯ ವಿನ್ಯಾಸ ಮೊಸಳೆ ಚರ್ಮವನ್ನೇ ಹೋಲುತ್ತದೆ. ಬೂರುಗದ ತೊಗಟೆಯಲ್ಲಿ ಮುಳ್ಳುಗಳಿರುತ್ತವೆ. ನೀಲಗಿರಿ ಮರದಲ್ಲಿ ತೊಗಟೆ ಉದ್ದವಾದ ಹಾಳೆಯಂತೆ ಹರಿದು ಒಳಗಿನ ನಯವಾದ ಭಾಗ ಎದ್ದು ಕಾಣುತ್ತದೆ.

ಐದನೆಯ ಅಧ್ಯಾಯ "ಪರಿಚಿತ ಮರಗಳು."  ಇದರಲ್ಲಿದೆ ಆಲ, ಅರಳಿ, ಹುಣಸೆ, ಬೇವು, ಹಲಸು, ಮಾವು ಮತ್ತು ನೇರಳೆ ಮರಗಳ ಪರಿಚಯ. ಇವು ನಮಗೆಲ್ಲರಿಗೂ ತಿಳಿದಿರುವ ಮರಗಳು. ಆದರೆ ಈ ಅಧ್ಯಾಯದಲ್ಲಿ ನಮಗೆ ತಿಳಿದಿರದ ಹಲವು ಸಂಗತಿಗಳಿವೆ. ಉದಾಹರಣೆಗೆ  ಆಲದ ಹೂವಿನ ಪ್ರಪಂಚ. ಅದನ್ನು ಹೀಗೆ ವಿವರಿಸುತ್ತಾರೆ ಲೇಖಕರು: "ಆಲದ ಹೂವು ಉಳಿದವುಗಳಂತೆ ಎದ್ದು ಕಾಣುವುದಿಲ್ಲ. ಎಪ್ರಿಲ್ - ಜೂನ್ ಸುಮಾರಿಗೆ ಆಲದ ಮರ ಕಡು ಕೆಂಪು "ಹಣ್ಣು"ಗಳಿಂದ ತುಂಬಿ ಹೋಗುತ್ತದೆ. ಆದರೆ ಹಣ್ಣಿನಂತೆ ಕಂಡರೂ ಅವು ಹಣ್ಣಲ್ಲ. ಅವನ್ನು "ಫಿಗ್" ಎನ್ನುತ್ತಾರೆ. ಅದು ಸಾವಿರಾರು ಸಣ್ಣಸಣ್ಣ ಗಂಡು ಮತ್ತು ಹೆಣ್ಣು ಹೂಗಳನ್ನು ಮುಚ್ಚಿರುವ ಮಾಂಸಲವಾದ ಬಟ್ಟಲು." ಹಾಗಾದರೆ ಈ ಹೂಗಳಲ್ಲಿ ಪರಾಗಸ್ಪರ್ಶ ಹೇಗೆ? ಅದು ಸೂಕ್ಷ್ಮವಾದ ಕಣಜ (ಕೀಟ)ಗಳಿಂದ!

ಮುಂದಿನ ಅಧ್ಯಾಯ "ಹೂತುಂಬಿದ ಮರಗಳು". ಇದರಲ್ಲಿ ಕೆಂಪು ಬೂರುಗ, ಮುತ್ತುಗ, ಪಾಲಿವಾಣ, ಹಳದಿ ಗುಲ್‍ಮೊಹರ್ ಮತ್ತು ಮಳೆಮರಗಳ  ಪರಿಚಯ. ಚಳಿಗಾಲದಲ್ಲಿ ಎಲೆಗಳನ್ನೆಲ್ಲ ಕಳಚಿ ವಿಕಾರವಾಗಿ ಕಾಣಿಸುವ ಮುತ್ತುಗ, ಫೆಬ್ರವರಿ - ಮಾರ್ಚಿನಲ್ಲಿ ಪ್ರಜ್ವಲಿಸುವ ಕಿತ್ತಳೆ ಹೂಗಳಿಂದ ತುಂಬಿ ಸರ್ವಾಂಗ ಸುಂದರವಾಗುವುದು ಪ್ರಕೃತಿಯ ಸೋಜಿಗ. ಹೂವಿನಿಂದ ಮುಚ್ಚಿದ ಮರವನ್ನು  ದೂರದಿಂದ ನೋಡಿದಾಗ, ಇಡೀ ಮರ ಬೆಂಕಿಯಿಂದ ಉರಿಯುವ ನೋಟ. ಇಂತಹ ಅನೇಕ ಮರಗಳು ಒಟ್ಟಿಗಿದ್ದಾಗ ಕಾಡಿಗೆ ಕಾಡೇ ಹೊತ್ತಿ ಉರಿಯುವಂತೆ ಕಾಣಿಸುತ್ತದೆ. ಅದಕ್ಕೆ ಮುತ್ತುಗಕ್ಕೆ "ವನಜ್ವಾಲೆ" ಅಥವಾ "ಫ್ಲೇಮ್ ಆಫ್ ದಿ ಫಾರೆಸ್ಟ್" ಎಂಬ ಹೆಸರು ಎಂದು ವಿವರಿಸುತ್ತಾರೆ ಕೃಷ್ಣಮೂರ್ತಿಯವರು.  1757ರ ಪ್ಲಾಸೀ ಕದನಕ್ಕೂ ಮುತ್ತುಗದ ಮರಕ್ಕೂ ಇರುವ ಚಾರಿತ್ರಿಕ ಸಂಬಂಧವನ್ನು ತಿಳಿಸುತ್ತಾರೆ. ಮುತ್ತುಗದ ಹಿಂದಿ ಹೆಸರು ಪಲಾಸ್. ಕದನ ನಡೆದ ಹಳ್ಳಿಯ ಬಳಿ ನೂರಾರು ಪಲಾಸ್ ಮರಗಳು ಇದ್ದ ಕಾರಣ ಅದಕ್ಕೆ "ಪ್ಲಾಸೀ ಕದನ"ವೆಂಬ ಹೆಸರು ಬಂತು.

ಅನಂತರದ ಅಧ್ಯಾಯದಲ್ಲಿ "ಮನಮೋಹಕ ತರು"ಗಳ ಪರಿಚಯ. ಅವು ಗುಲ್‍ಮೊಹರ್ (ಕತ್ತಿಕಾಯಿ), ಜಕರಾಂಡ, ಹೊಳೆದಾಸವಾಳ, ಕಕ್ಕೆ ಮತ್ತು ನೀರುಕಾಯಿ (ಪಿಚಕಾರಿ ಮರ, ಕಾರಂಜಿ ಮರ) ಮರಗಳು. ನಮ್ಮ ದೇಶದ ಎಲ್ಲ ನಗರಗಳ ರಸ್ತೆಗಳ ಬದಿಯಲ್ಲಿರುವ ಬೆಡಗಿನ ಮರ ಗುಲ್‍ಮೊಹರ್ ನಮ್ಮ ದೇಶದ್ದಲ್ಲ, ಮಡಗಾಸ್ಕರ್‍ನಿಂದ ಬಂದದ್ದು ಎಂಬಂತಹ ಕುತೂಹಲ ಕೆರಳಿಸುವ ಮಾಹಿತಿ ಇಲ್ಲಿದೆ. ಮುಂದಿನ ಅಧ್ಯಾಯದಲ್ಲಿ ಬೆಂಗಳೂರಿನ ಲಾಲ್‍ಬಾಗಿನ ವಿಶೇಷ ಮರಗಳ ಪರಿಚಯ: ಕಂಚುವಾಳ, ಆನೆಕಾಯಿ, ನಾಗಲಿಂಗ, ಕೃಷ್ಣನ ಬೆಣ್ಣೆಬಟ್ಟಲು ಮತ್ತು ಬೆಟ್ಟದ ಕಣಗಲು.

"ರೈತನ ಮಿತ್ರರು" ಒಂಭತ್ತನೆಯ ಅಧ್ಯಾಯ. ಇದರಲ್ಲಿ ಹೊಂಗೆ, ಕರಿಜಾಲಿ, ಗ್ಲಿರಿಸಿಡಿಯ, ಹಿಪ್ಪೆ ಮತ್ತು ನುಗ್ಗೆ ಮರಗಳ ಪರಿಚಯ. ಕನ್ನಡದಲ್ಲಿ ಹೆಸರೇ ಇಲ್ಲದ ಗ್ಲಿರಿಸಿಡಿಯವನ್ನು ಲೇಖಕರು ಪರಿಚಯಿಸುವ ಪರಿ ಹೀಗಿದೆ:"ಮಧ್ಯ ಅಮೆರಿಕಾದ ಗ್ವಾಟೆಮಾಲದಿಂದ ಸಿಲೋನ್ ಮಾರ್ಗವಾಗಿ 1915ರ ಸುಮಾರಿಗೆ ನಮ್ಮ ದೇಶಕ್ಕೆ ಬಂದ ಗ್ಲಿರಿಸಿಡಿಯ ಸಣ್ಣ ಮರ. ತ್ವರಿತಗತಿಯಲ್ಲಿ ಬೆಳೆಯುವ ಮರದಲ್ಲಿ ಎದುರುಬದುರು ಎಲೆಗಳ ಜೋಡಣೆ. ಅಂಡಾಕಾರದ ಬಿಡಿ ಎಲೆಗಳ ಮೇಲ್ಭಾಗ ಹಸುರು. ತಳಭಾಗ ಬಿಳಿಹಸುರು. ನಸುಗೆಂಪು ಬಣ್ಣದ ಹೂಗಳು ಚಿಕ್ಕವು. ಹಿಮ್ಮುಖವಾಗಿ ಬಾಗುವ 20 ಮಿಮೀ ಉದ್ದದ ದಳಗಳಲ್ಲಿ ಎದ್ದು ಕಾಣುವ ಎರಡು ಹಾಲೆಗಳು ಮತ್ತು ಎಲೆಯ ತಳಭಾಗದಲ್ಲಿರುವ ಕಪ್ಪು ಚುಕ್ಕೆಗಳು ಮರವನ್ನು ಗುರುತಿಸಲು ಸಹಾಯಕ.”

ಕೊನೆಯ ಅಧ್ಯಾಯ, "ಮರ - ಸಮಗ್ರ ಅಧ್ಯಯನ." ಮರದ ಎತ್ತರ, ನೆತ್ತಿಯ ವಿಸ್ತೀರ್ಣ, ವಯಸ್ಸು, ಮರದ ಜೀವಿಪ್ರಪಂಚ - ಇವನ್ನೆಲ್ಲ ವಿವರವಾಗಿ ಅಧ್ಯಯನ ಮಾಡುವ ಸರಳ ವಿಧಾನಗಳನ್ನು ತಿಳಿಸುವ ಅಧ್ಯಾಯ.
ಪ್ರತಿಯೊಂದು ಅಧ್ಯಾಯದಲ್ಲಿಯೂ ರೇಖಾಚಿತ್ರಗಳು - ಇವುಗಳ ಸಹಾಯದಿಂದ ಅದರಲ್ಲಿ ಪರಿಚಯಿಸಿದ  ಎಲ್ಲ ಮರಗಳನ್ನು ಓದುಗರೇ ಗುರುತಿಸಲು ಸಾಧ್ಯ. ಕೊನೆಯಲ್ಲಿ, ಪುಸ್ತಕದಲ್ಲಿ ಪರಿಚಯಿಸಿದ 58 ಮರಗಳ ಕನ್ನಡದ ಹೆಸರು, ಇಂಗ್ಲಿಷ್ ಹೆಸರು ಮತ್ತು ಸಸ್ಯಶಾಸ್ತ್ರೀಯ ನಾಮಧೇಯದ ಪಟ್ಟಿ.

ನಮ್ಮ ಮಕ್ಕಳಿಗೆ ನಮ್ಮೂರಿನ ಮರಗಳನ್ನಾದರೂ ನಾವು ಪರಿಚಯಿಸಬೇಡವೇ? "ನಮಗೇ ಗೊತ್ತಿಲ್ಲ" ಎಂಬ ಕೊರಗು ಬೇಡ. ಇಲ್ಲಿದೆ ಒಂದು ಸರಳ ಕೈಪಿಡಿ. ಈ ಪುಸ್ತಕ ಕೈಗೆತ್ತಿಕೊಳ್ಳೋಣ, ನಾವೂ ಕಲಿತು, ನಮ್ಮ ಮಕ್ಕಳಿಗೂ ಮರಗಳ ಬಗ್ಗೆ ಕಲಿಸೋಣ.