ಲೇಖಕರು: ಪೊಳಲಿ ನಿತ್ಯಾನಂದ ಕಾರಂತ
ಪ್ರಕಾಶಕರು: ಪುರುಷೋತ್ತಮ ಮರಕಡ, ಡೆಟ್ರೋಯ್ಟ್, ಯು.ಎಸ್.ಎ.
ಪ್ರಕಟ: 2021 ಪುಟ: 276 ಬೆಲೆ: ರೂ.150/-
ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು 20 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.
ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್ ಸಂಕಣ್ಣ, ಧರ್ಮಧಾರೆ ಮತ್ತು ರಾಮರಕ್ಷಾ ಹೋಮ ವಿಶ್ವರೂಪ ದರ್ಶನ. ಯಕ್ಷಗಾನದ ದೊಡ್ಡ ಅಭಿಮಾನಿ ಹಾಗೂ ಇದರ ಪ್ರಕಾಶಕರಾದ ತಮ್ಮ ಅಳಿಯ ಪುರುಷೋತ್ತಮ ಮರಕಡ, ಇನ್ನೊಬ್ಬ ಅಳಿಯ ಸಿದ್ಧಾರ್ಥ ರಾವ್ ಮತ್ತು ಮಗಳಂದಿರಾದ ಭವಾನಿ ಮತ್ತು ಭಾರ್ಗವಿ ಇವರ ಒತ್ತಾಯದಿಂದಾಗಿ ಈ ಸಂಪುಟ ಬೆಳಕು ಕಂಡಿದೆ ಎಂದು ನಿತ್ಯಾನಂದ ಕಾರಂತರು ಬರೆದುಕೊಂಡಿದ್ದಾರೆ. ಇತರ ಪ್ರಸಂಗಗಳ ಹಸ್ತಪ್ರತಿಗಳು ಕಾಣೆಯಾಗಿರುವುದು ಬೇಸರದ ಸಂಗತಿ.
ಡಾ. ಎಂ. ಪ್ರಭಾಕರ ಜೋಶಿಯವರು “ನಲ್ನುಡಿ"ಯಲ್ಲಿ ನಿತ್ಯಾನಂದ ಕಾರಂತರನ್ನು ಪರಿಚಯಿಸಿದ ಪರಿ: “ಕಾರಂತರು 1980 - 2000 ಅವಧಿಯಲ್ಲಿ ಓರ್ವ ಪ್ರಮುಖ ಯಕ್ಷಗಾನ ಪ್ರಸಂಗಕರ್ತರಾಗಿ ವ್ಯಾವಸಾಯಿಕ ರಂಗಭೂಮಿಯಲ್ಲಿ ಖ್ಯಾತಿ ಗಳಿಸಿದ ಕೃತಿಗಳನ್ನು ನೀಡಿದ ಕವಿ. ಕಥಾರೂಪ, ಸನ್ನಿವೇಶ ನಿರ್ಮಾಣ, ರಂಗದ ನಡೆ, ನಾಟಕೀಯತೆ, ಗೇಯತೆ, ಸರಳ ಸುಂದರ ಅಭಿವ್ಯಕ್ತಿಯ ಗುಣಗಳೆಲ್ಲ ಚೆನ್ನಾಗಿ ಇರುವ ಅವರ ಪ್ರಸಂಗಗಳು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಒಳ್ಳೆಯ ಕೃತಿಗಳೆನಿಸಿವೆ. ಅವರ ಸತ್ಯದಪ್ಪೆ ಚೆನ್ನಮ್ಮ, ಕಾಂತು ಕಬೇದಿ, ಸಾಮ್ರಾಟ್ ಸಂಕಣ್ಣ, ಧರ್ಮಧಾರೆ, ನಾಡಕೇದಗೆ ಪ್ರಸಂಗಗಳೆಲ್ಲ ರಂಗದಲ್ಲಿ ದಶಕಗಳ ಕಾಲ ಮೆರೆದ ಕೃತಿಗಳು. ತಮ್ಮ ವಾತ್ಸಲ್ಯ, ಭಾವನಾತ್ಮಕತೆಗಳಿಂದ ಜನಮನವನ್ನು ತಟ್ಟಿದ ರಚನೆಗಳು.”
ನಿತ್ಯಾನಂದ ಕಾರಂತರು ದಿ. ಪೊಳಲಿ ಶಂಕರನಾರಾಯಣ ಶಾಸ್ತ್ರಿ ಮತ್ತು ದಿ. ಶ್ರೀಮತಿ ಗೌರಮ್ಮ ಅವರ ಪುತ್ರ. ಶಾಸ್ತ್ರಿಗಳು ತಾಳಮದ್ದಲೆಯ ನವೋದಯದ ನೇತಾರರಲ್ಲಿ ಒಬ್ಬರು. ಹಾಗಾಗಿ ನಿತ್ಯಾನಂದ ಕಾರಂತರು ಬಾಲ್ಯದಿಂದಲೇ ತಾಳಮದ್ದಲೆ ಮತ್ತು ಯಕ್ಷಗಾನದ ಪ್ರಭಾವಲಯದಲ್ಲಿ ಬೆಳೆದವರು. “ನನ್ನುಡಿ"ಯಲ್ಲಿ ತಾನು ಯಕ್ಷಗಾನ ಪ್ರಸಂಗಗಳನ್ನು ಬರೆಯಬೇಕಾಗಿ ಬಂದ ಪ್ರಸಂಗಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎರಡು ಪ್ರಸಂಗಗಳನ್ನು ಬರೆದ ಹಿನ್ನೆಲೆಯನ್ನು ಹೀಗೆ ದಾಖಲಿಸಿದ್ದಾರೆ: "ಕಾವೂರು ಕೇಶವನವರು…. ಸತ್ಯದಪ್ಪೆ ಚೆನ್ನಮ್ಮ ಎಂಬ ಶೀರ್ಷಿಕೆಯಲ್ಲಿ ನಾಲ್ಕು ಪುಟದ ಕಥೆ ನೀಡಿ ಪ್ರಸಂಗ ಬರೆಯಲು ಒತ್ತಾಯಿಸಿದರು. ಪ್ರಸಂಗ ಬರೆದೆ. ಇದೇ ಸಮಯದಲ್ಲಿ ಪುತ್ತೂರು ಮೇಳದ ವ್ಯವಸ್ಥಾಪಕ ಪ್ರಸಿದ್ಧ ವೇಷಧಾರಿ ಪುತ್ತೂರು ಶ್ರೀಧರ ಭಂಡಾರಿಯವರು ನಾಡಕೇದಗೆ ಎಂಬ ಪ್ರಸಂಗವನ್ನು ಬರೆಸಿದರು. ಎರಡೂ ಪ್ರಸಂಗಗಳು ಆ ವರುಷ ಜಯಭೇರಿ ಬಾರಿಸಿದವು. ಸತ್ಯದಪ್ಪೆ ಚೆನ್ನಮ್ಮ ಒಂದು ದಾಖಲೆಯನ್ನೇ ನಿರ್ಮಿಸಿತು. ಒಂದು ಪ್ರದರ್ಶನದಿಂದ ಇನ್ನೊಂದು ಪ್ರದರ್ಶನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಟಿಕೇಟು ಇಲ್ಲದೆ ಜನ ಹಿಂದು ಹೋದದ್ದು, ಡೇರೆ ಬಿಚ್ಚಿದ್ದು ಎಲ್ಲ ನಡೆಯಿತು. ಅದೇ ವರುಷ ಉಡುಪಿಯ ರಾಗತರಂಗವೆಂಬ ಸಂಸ್ಥೆ ಆ ವರುಷದ ಹೊಸ ಪ್ರಸಂಗಗಳ ಸ್ಪರ್ಧೆ ಏರ್ಪಡಿಸಿತ್ತು.... ಸತ್ಯದಪ್ಪೆ ಚೆನ್ನಮ್ಮ ಪ್ರಥಮ, ನಾಡಕೇದಗೆ ದ್ವಿತೀಯ ಬಹುಮಾನ ಪಡೆಯಿತು. ಎರಡೂ ಪ್ರಸಂಗಗಳು ನನ್ನದಾಗಿತ್ತು."
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಎ.ಜಿ.ಎಮ್. ಆಗಿ ನಿವೃತ್ತರಾದ ನಿತ್ಯಾನಂದ ಕಾರಂತರು ಕಳೆದ ಒಂದು ದಶಕದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಲ್ಲಿಸಿದ ಸೇವೆ ಉಲ್ಲೇಖಾರ್ಹ. ಹಲವು ಸಾಹಿತ್ಯ ಸಮ್ಮೇಳನಗಳ ಸ್ಮರಣ ಸಂಚಿಕೆಗಳು ಇವರ ಸಂಪಾದಕತ್ವದಲ್ಲಿ ಪ್ರಕಟವಾಗಿವೆ. 9-2-2021ರಂದು ಜರಗಿದ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರ ವಿದ್ವತ್ ಹಾಗೂ ಸೇವೆಗೆ ಸಂದ ಗೌರವ. ಕೂಟ ಮಹಾ ಜಗತ್ತಿನ ಮಂಗಳೂರು ಅಂಗಸಂಸ್ಥೆಯ ಮಾಸಪತ್ರಿಕೆ “ಕೂಟವಾಣಿ”ಯ ಪ್ರಧಾನ ಸಂಪಾದಕರಾಗಿ ಹಲವಾರು ವರುಷ ಸೇವೆ ಸಲ್ಲಿಸಿದ್ದರು.