ಲೇಖಕರು: ಬಿ. ಎಂ. ಶ್ರೀ.
ಪ್ರಕಾಶಕರು: ಕಾವ್ಯಾಲಯ, ಮೈಸೂರು
ಪ್ರಕಟಣೆಯ ವರುಷ: 1926 ಪುಟ: 35 + 112 ಬೆಲೆ: ರೂ. 18/-
ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು.
ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ: “ಯಾರ ಸಂತೋಷಕ್ಕಾಗಿ ಮೊದಲು ನಾನು ಈ ಗೀತಗಳನ್ನು ಬರೆದೆನೋ ಆ ಕಣ್ಣುಗಳು ಬೇಗ ಮುಚ್ಚಿ ಹೋಗಿ, ಕೆಲವು ವರ್ಷ ಗ್ರಂಥ ನನ್ನಲ್ಲಿಯೇ ಉಳಿದುಕೊಂಡಿತು…… ಇಂಗ್ಲಿಷ್ ಕಾವ್ಯಮಾರ್ಗವನ್ನು ಕನ್ನಡಿಗರು ಈ ಸಣ್ಣ ಗ್ರಂಥದಿಂದ ಸ್ವಲ್ಪ ಮಟ್ಟಿಗೆ ತಿಳಿಯಬಹುದಾಗಿದೆ. “ಭಾಷಾಂತರಕಾರರು ಕೊಲೆಗಾರರು” ಎಂದು ಪಾಶ್ಚಾತ್ಯರಲ್ಲಿ ಒಂದು ಗಾದೆಯುಂಟು. ಆ ಅಪವಾದವನ್ನು ತಪ್ಪಿಸಿಕೊಂಡಿರುವೆ-ನೆಂದು ನಾನು ತಿಳಿದುಕೊಂಡಿಲ್ಲ. ಆದರೆ, ನನ್ನ ಬುದ್ಧಿ ಬಲವಿರುವ ಮಟ್ಟಿಗೂ ಮೂಲವನ್ನು ಪ್ರತಿಬಿಂಬಿಸುವ ಕರ್ತವ್ಯವನ್ನೇ ಮುಂದಿಟ್ಟುಕೊಂಡು ಕೆಲಸಮಾಡಿದ್ದೇನೆ……. “
ನಾನು ೧೯೭೧ನೆಯ ಇಸವಿಯಲ್ಲಿ ಪಿ.ಯು.ಸಿ. ಓದುತ್ತಿದ್ದಾಗ ಈ ಸಂಕಲನದ “ಕಾರಿಹೆಗ್ಗಡೆಯ ಮಗಳು” ಎಂಬ ಕವನ (ಕ್ಯಾಂಪ್‌ಬೆಲ್ ಕವಿಯ ಲಾರ್ಡ್ ಉಲ್ಲಿನ್ಸ್ ಡಾಟರ್ ಕವನದ ಅನುವಾದ) ಇಂಗ್ಲಿಷ್ ಪಠ್ಯಪುಸ್ತಕದಲ್ಲಿತ್ತು. ಒಂದೇ ಓದಿಗೆ ಕನ್ನಡ ಬಲ್ಲವರ ಮನಸೂರೆಗೊಳ್ಳುವ ಕವನ ಅದು. ಬಿ.ಎಂ.ಶ್ರೀ.ಯವರ ಅನುವಾದದ ಹಿರಿಮೆಗೆ ಇದುವೇ ನಿದರ್ಶನ.
ಇದಕ್ಕೆ, ತೀ. ನಂ. ಶ್ರೀಕಂಠಯ್ಯ ಬರೆದ (26 ಪುಟ) ಪ್ರಸ್ತಾವನೆಯ ಆಯ್ದ ಭಾಗ: “ಕನ್ನಡದ ಹಿಂದಿನ ಪರಂಪರೆಯಲ್ಲಿ ದೀರ್ಘ ಕಾವ್ಯಗಳೇ ತುಂಬಿರುವುದನ್ನು ಕಂಡವರಿಗೆ ಇಂಗ್ಲಿಷಿನ ಅಡಕವಾದ ಭಾವಗೀತಗಳ ಮೇಲೆ ಮೋಹ ಅಧಿಕವಾಗುವುದು ಸಹಜ. ….. ಅಂತೂ ಪ್ರೇಮ, ದೇಶಭಕ್ತಿ, ಶೌರ್ಯ, ಪ್ರಕೃತಿಸೌಂದರ್ಯ, ಸುಖ, ದುಃಖ, ರಾಗ, ದ್ವೇಷ, ಜಿಜ್ನಾಸೆ, ಶ್ರದ್ಧೆ ಮೊದಲಾದ ವಿವಿಧ ವಿಷಯಗಳನ್ನು ಕುರಿತು ಆಯಾ ಸಮಯದ ಪ್ರಚೋದನೆಗೆ ಇಂಬುಗೊಟ್ಟು ಸ್ವತಂತ್ರ ರೀತಿಯಲ್ಲಿ ಇಂಗ್ಲಿಷ್ ಕವಿಗಳು ರಚಿಸಿದ ಭಾವಗೀತಗಳನ್ನು “ಶ್ರೀ"ಯವರು ರಮ್ಯವಾದ ಅನುವಾದಗಳಲ್ಲಿ ನಮ್ಮ ಜನರ ಮುಂದಿಟ್ಟರು. ಈ ಮೊದಲೇ ಕನ್ನಡದಲ್ಲಿ ಕೆಲವು ಭಾವಗೀತಗಳು ಉದಿಸಿದ್ದುವು; ಇನ್ನು ಮುಂದಂತೂ ಭಾವಗೀತಗಳ ಯುಗವೇ ಪ್ರವರ್ತಿಸಿತು.
ಎಲ್ಲಕ್ಕೂ ಮಿಗಿಲಾಗಿ “ಶ್ರೀ"ಯವರಿಂದ ಕನ್ನಡಕ್ಕೆ ಆದ ಪರಮೋಪಕಾರವೆಂದರೆ, “ಇಂಗ್ಲಿಷ್ ಗೀತಗಳ"ಲ್ಲಿ ಛಂದಸ್ಸಿನ ಹೊಸದೊಂದು ಹೆದ್ದಾರಿಯನ್ನೇ ತೆರೆದದ್ದು; ಕನ್ನಡ ಕಾವ್ಯದ ಚರಿತ್ರೆಯಲ್ಲಿ ಅವರ ಹೆಸರು ಚಿರಸ್ಮರಣೀಯವಾಗಿ ನಿಲ್ಲುವುದು ಮುಖ್ಯವಾಗಿ ಇದರಿಂದ. ….. ಬಿ. ಎಂ. ಶ್ರೀಕಂಠಯ್ಯನವರು “ಇಂಗ್ಲಿಷ್ ಗೀತಗಳ”ನ್ನು ರಚಿಸಿ ಕನ್ನಡದ ಕಾವ್ಯಸಂಪತ್ತನ್ನು ಬೆಳೆಸುವುದರ ಜೊತೆಗೆ ಹೊಸಗನ್ನಡದ ಕವಿಕುಲವನ್ನೂ ಬೆಳೆಸಿದರು……"
“ಕಾಣಿಕೆ" ಕವನದಲ್ಲಿ ತಾನು ಇಂಗ್ಲಿಷ್ ಕವಿತೆಗಳ ಅನುವಾದದ ಕಾಯಕ ಕೈಗೆತ್ತಿಕೊಂಡ ಉದ್ದೇಶವನ್ನು ಬಿ. ಎಂ. ಶ್ರೀ. ಸ್ಪಷ್ಟ ಪಡಿಸಿರುವ ಪರಿ:
“ಹೀಗೆ ನನಗೆ ಹಬ್ಬವಾಗಿ,
ಇನಿಯರಿಬ್ಬರನ್ನು ತೂಗಿ,
ಇವಳ ಸೊಬಗನವಳು ತೊಟ್ಟು,
ನೋಡ ಬಯಸಿದೆ;
ಅವಳ ತೊಡಿಗೆ ಇವಳಿಗಿಟ್ಟು
ಹಾಡ ಬಯಸಿದೆ.”
“ಮುದ್ದಿನ ಕುರಿಮರಿ" ಕವನದ (ವರ್ಡ್ಸ್ ವರ್ತ್ ಕವಿಯ "ದ ಪೆಟ್ ಲಾಂಬ್” ಕವಿತೆಯ ಅನುವಾದ) ಮೊದಲ ನಾಲ್ಕು ಸಾಲುಗಳ ಪದಲಾಸ್ಯವನ್ನು ಗಮನಿಸಿ:
“ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು;
“ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು;
ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು
ನೊರೆಯ ಬಿಳುಪು ಕುರಿಯ ಮರಿಯ ತಡವುತಿದ್ದಳು.”
"ನನ್ನ ಪ್ರೇಮದ ಹುಡುಗಿ” ಕವನದ (ಬರ್ನ್ಸ್ ಕವಿಯ ಓ ಮೈ ಲವ್ಸ್ ಲೈಕ್ ಎ ರೆಡ್, ರೆಡ್ ರೋಸ್ ಅನುವಾದ) ಆರಂಭ:
"ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು,
ತಾವರೆಯ ಹೊಸ ಅರಳ ಹೊಳೆವ ಕೆಂಪು.
ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು,
ಕೊಳಲು ಮೋಹಿಸಿ ನುಡಿವ ಗಾನದಿಂಪು.”
“ಕಾರಿಹೆಗ್ಗಡೆಯ ಮಗಳು” ಕವನ ಹೀಗೆ ಶುರುವಾಗುತ್ತದೆ:
ಪಡುವದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಂಡನು;
ತಡೆಯದೀಗಲೆ ಗಡುವ ಹಾಯಿಸು,
ಕೊಡುವೆ ಕೇಳಿದ ಹೊನ್ನನು.
"ಪ್ರಾರ್ಥನೆ" ಕವನದ (ನ್ಯೂಮನ್ ಅವರ ಲೀಡ್ ಕೈನ್‌ಡ್ಲಿ ಲೈಟ್) ಮೊದಲ ಭಾಗ ಹೀಗಿದೆ:
ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,
ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,
ಕೈಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳೆನೊಡನೆಯೆ - ಸಾಕು ನನಗೊಂದು ಹೆಜ್ಜೆ.
ಕನ್ನಡ ಕವನ ಲೋಕದಲ್ಲಿ ಆಸಕ್ತಿ ಇರುವವರೆಲ್ಲ ಓದಿ ಆಸ್ವಾದಿಸಲೇ ಬೇಕಾದ ಪುಸ್ತಕ “ಇಂಗ್ಲಿಷ್ ಗೀತಗಳು”. ಜೊತೆಗೆ, ಅನುವಾದ ಅಂದರೇನು? ಅನುವಾದ ಹೇಗಿರಬೇಕು? ಎರಡೂ ಭಾಷೆಗಳ ಮೇಲೆ ಪ್ರಭುತ್ವವಿದ್ದಾಗ ಮಾತ್ರ ಅನುವಾದ ಹೇಗೆ ಅದ್ಭುತವಾಗಿ ಮೂಡಿ ಬರಲು ಸಾಧ್ಯ ಎಂಬುದನ್ನು ಮತ್ತೆಮತ್ತೆ ಮನಮುಟ್ಟುವಂತೆ ತೋರಿಸುವ ಕವನಗಳ ಸಂಕಲನವಿದು.
* * * * *
(ಗಮನಿಸಿ: ಈ ಸಂಕಲನದ "ಹೇಳದಿರು ಹೋರಾಡಿ ಫಲವಿಲ್ಲವೆಂದು” ಕವಿತೆಯನ್ನು ಪ್ರತ್ಯೇಕವಾಗಿ “ಸಂಪದ” ಅಂತರ್ಜಾಲ ತಾಣದಲ್ಲಿ 10-02-2022ರಂದು ಪ್ರಕಟಿಸಿದ್ದು, ಅದಕ್ಕೆ ಬರೆದ ಪೀಠಿಕೆ ಇಲ್ಲಿದೆ: )
"ಹೇಳದಿರು ಹೋರಾಡಿ ಫಲವಿಲ್ಲವೆಂದು” - ಬಿ. ಎಂ. ಶ್ರೀ. ಕವನ
ಇವತ್ತು (10-02-2022) "ಸಂಪದ"ದ "ಪುಸ್ತಕ ಪರಿಚಯ” ವಿಭಾಗದಲ್ಲಿ, ಕನ್ನಡದ ಕಾವ್ಯಲೋಕದಲ್ಲಿ ಹೊಸ ಹೆದ್ದಾರಿಯೊಂದನ್ನು ತೆರೆದ ಬಿ. ಎಂ. ಶ್ರೀಕಂಠಯ್ಯ ಅವರ “ಇಂಗ್ಲಿಷ್ ಗೀತಗಳು” ಕವನ ಸಂಕಲನವನ್ನು ಪರಿಚಯಿಸಿದ್ದೇನೆ. ಅದು 1926ರಲ್ಲಿ ಪ್ರಕಟವಾದ ಕವನ ಸಂಕಲನ.
“ಇವು ಅಚ್ಚ ಕನ್ನಡದ ಕವನಗಳೇ” ಎಂದು ಅನಿಸುವಂತೆ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವುದೇ ಅವರ ಪ್ರತಿಭೆ, ಎರಡೂ ಭಾಷೆಗಳ ಮೇಲಿನ ಅವರ ಪ್ರಭುತ್ವ ಮತ್ತು ಸೃಜನಶೀಲತೆಯ ಪುರಾವೆ. ಆ ಸಂಕಲನದ ಯಾವುದೇ ಕವಿತೆಯನ್ನು ಓದಿದರೂ "ಅನುವಾದಿಸಿದರೆ ಹೀಗಿರಬೇಕು" ಎಂದು ಅನಿಸುವುದು ಖಂಡಿತ.
ಅದರಿಂದ ಆಯ್ದ, ಕ್ಲೋ ಕವಿಯ "ಸೇ ನಾಟ್ ದ ಸ್ಟ್ರಗಲ್ ನಾಟ್ ಎವೆಯ್‌ಲೆತ್” ಕವಿತೆಯ ಅನುವಾದ
"ಹೇಳದಿರು ಹೋರಾಡಿ ಫಲವಿಲ್ಲವೆಂದು" ಇಲ್ಲಿದೆ:
ಹೇಳದಿರು ಹೋರಾಡಿ ಫಲವಿಲ್ಲವೆಂದು;
ತೋಳ ದಣಿಸಿದೆ ಬರಿದೆ ಘಾಸಿಯಾಯ್ತೆಂದು;
ಗೆಲ್ಲುವುದು ಕಾಣೆ, ಹಗೆ ಹಿಮ್ಮೆಟ್ಟನೆಂದು;
ಎಲ್ಲ ಇದ್ದಂತಿಹುದು - ಅಲ್ಲಾಡದೆಂದು.
ನೆಚ್ಚಿ ಕೆಡುವೊಡೆ ಕೆಚ್ಚು, ಸೆಡದಳುಕು ಕೆಡದೆ?
ಮುಚ್ಚಿ ಆ ಹೊಗೆಯೊಳಗೆ, ಈ ಗಳಿಗೆ, ಬಿಡದೆ
ನಿನ್ನ ಕೆಳೆಯರು ಹಗೆಯ ತರುಬುತಿರಬಹುದು -
ನಿನ್ನ ಬೆಂಬಲವಿದ್ದು, ಕಳದ ಗೆಲಬಹುದು!
ತೆರೆ ಬಳಲಿ, ಹೊಯ್ದು ಹೊಯ್ದುರುಳುರುಳಿ, ಚೆಲ್ಲಿ
ಬೆರಳುನೆಲವನು ಕೊಳದೆ ಕುದಿಯುತಿಹುದಿಲ್ಲಿ -
ಬಲುಹಿಂದೆ, ಕೊರಕಲಲಿ, ಕೋವಿನಲಿ ತೂರಿ
ಉಲಿಯದೆಯೆ ಬಾರದೇ ಕಡಲಲೆಯ ಬೀರಿ!
ಬೆಳಗಾಗ ಮೂಡದೆಸೆಬಾಗಿಲೊಳೆ ಬರದು,
ಬೆಳಕು ತಾ ಬರುವಂದು, ಹೊಸಬೆಳಕು ಹರಿದು;
ಮುಂದೆ ಮೆಲ್ಲಗೆ ಮೆಲ್ಲಗೇರುವುದು ಹೊತ್ತು -
ಹಿಂದೆ ಪಡುವಲು ನೋಡು - ನೆಲದ ಸಂಪತ್ತು!