ಪುಸ್ತಕ: ಮನಸ್ಸಿನ ಮ್ಯಾಜಿಕ್
(ಪುಸ್ತಕ ಪರಿಚಯ ಭಾಗ ೨)
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ: ೨೦೧೪, ಪುಟ: ೧೨೦, ಬೆಲೆ: ರೂ.೫೫
“ಮನಸ್ಸಿನ ಮ್ಯಾಜಿಕ್” ಮನಸ್ಸು ಮತ್ತು ಅದರ ವಿವಿಧ ಆಯಾಮಗಳ ಬಗ್ಗೆ ಅಡ್ಡೂರು ಕೃಷ್ಣ ರಾಯರ ಮೊದಲ ಪುಸ್ತಕ. ಎರಡೇ ವರುಷಗಳಲ್ಲಿ ಎರಡು ಬಾರಿ ಮರುಮುದ್ರಣವಾದ ಪುಸ್ತಕ.
ಪುಸ್ತಕದ ಆರಂಭದಲ್ಲಿ ಅವರು ಈ ಪುಸ್ತಕದ ಉದ್ದೇಶದ ಬಗ್ಗೆ ಹೀಗೆ ಬರೆದಿದ್ದಾರೆ:
“ಆಸಕ್ತಿಯ ವಿಷಯದ ಪುಸ್ತಕಗಳ ಓದು, ದಿನಚರಿ ಬರಹ, ಹೊಸ ಭಾಷೆಯ ಕಲಿಕೆ, ಪ್ರವಾಸದಿಂದ ಹೊಸ ಅನುಭವ ಗಳಿಕೆ, ದಿನನಿತ್ಯದ ನಡಿಗೆ, ಯೋಗಾಸನಗಳ ಅಭ್ಯಾಸ, ಧ್ಯಾನ ಅಥವಾ ಬೇರೆ ಯಾವುದೇ ಇರಲಿ. ಅದನ್ನು ಇಂದಿನಿಂದಲೇ ಶುರು ಮಾಡಿ, ಹಂತಹಂತವಾಗಿ ಪ್ರಗತಿಯ ಹಾದಿಯಲ್ಲಿ ಸಾಗಿ, ನೀವು ಜೀವನದಲ್ಲಿ ಸಾಧನೆ ಮಾಡಬಹುದು. ಇದರ ಬೀಜಮಂತ್ರ ನಿಮ್ಮ ಮನಸ್ಸಿನಲ್ಲಿದೆ. ಇಂತಹ ಹತ್ತಾರು ಸಾಧನೆಗಳಿಗೆ ನಿಮ್ಮ ಮನಸ್ಸಿನ ತಾಕತ್ತು ಹಾಗೂ ಲಾಸ್ಯಗಳನ್ನು ಹೇಗೆ ದುಡಿಸಿ ಕೊಳ್ಳಬಹುದು ಎಂಬುದನ್ನು ತಿಳಿಸುವುದು ಈ ಪುಸ್ತಕದ ಉದ್ದೇಶ.”
ಇದನ್ನು ಸಮರ್ಥಿಸಲಿಕ್ಕಾಗಿ, “ಸಾಧನೆಯ ಚಿಮ್ಮುಹಲಗೆ” ಎಂಬ ಎರಡನೇ ಅಧ್ಯಾಯದ ಕೊನೆಗೆ ಅವರು ಬರೆದಿರುವ ಒಂದು ಸ್ಫೂರ್ತಿದಾಯಕ ಕತೆ ಹೀಗಿದೆ:
ಇದೊಂದು ದಂತಕತೆ. ಒಬ್ಬಾತ ಗಿಡುಗನ ಮರಿಯನ್ನು ಅದರ ಗೂಡಿನಿಂದ ಎತ್ತಿ ತಂದ. ಅದರ ಕಾಲಿಗೆ ಹಗ್ಗ ಬಿಗಿದು, ನೆಲದ ಗೂಟವೊಂದಕ್ಕೆ ಕಟ್ಟಿದ. ದಿನದಿನವೂ ತಿನ್ನಲು ಕೊಟ್ಟು, ನೀರು ಕುಡಿಸಿ ಅದನ್ನು ಬೆಳೆಸಿದ. ಆ ಗಿಡುಗನ ಮರಿ ಒಂದು ದಿನವೂ ರೆಕ್ಕೆ ಬಿಚ್ಚಿ ಹಾರಲಿಲ್ಲ. ಹಗ್ಗದ ಬಂಧನವೇ ತನ್ನ ಬದುಕೆಂದು ಭಾವಿಸಿ ಬೆಳೆಯುತ್ತಿತ್ತು. ಅದೊಂದು ದಿನ ನೀಲಾಕಾಶದಲ್ಲಿ ದೊಡ್ಡ ಗಿಡುಗವೊಂದು ಕಾಣಿಸಿತು - ಚಿಕ್ಕ ಚುಕ್ಕಿಯಂತೆ. ಅನಂತರ ಪ್ರತಿದಿನವೂ ಅಲ್ಲಿ ಆ ದೊಡ್ಡ ಗಿಡುಗದ ದರ್ಶನ. ಮರಿಗಿಡುಗದ ನೆತ್ತಿಯ ಮೇಲೆಯೇ ಐದಾರು ಬಾರಿ ಸುತ್ತಿ ಕಣ್ಮರೆಯಾಗುವ ವಿಚಿತ್ರ ಆಟ. ದಿನದಿಂದ ದಿನಕ್ಕೆ ಅದರ ಹಾರಾಟ ಮರಿಗಿಡುಗಕ್ಕೆ ಹತ್ತಿರಹತ್ತಿರ. ಕೊನೆಗೊಂದು ದಿನ, ಆ ದೊಡ್ಡ ಗಿಡುಗ ತೀರಾ ಕೆಳಕ್ಕಿಳಿದು, ಮರಿಗಿಡುಗಕ್ಕೆ ತನ್ನ ರೆಕ್ಕೆ ಚಕ್ಕನೆ ತಗಲಿಸಿತು. ತಕ್ಷಣ ಅದು ಗಗನಕ್ಕೇರಿ ಮಾಯವಾಯಿತು. ಆ ಕ್ಷಣದಲ್ಲಿ ಮರಿಗಿಡುಗದ ಮೈಯಲ್ಲಿ ವಿದ್ಯುತ್ ಸಂಚಾರ. ಒಮ್ಮೆಲೇ ಅದು ತನ್ನ ರೆಕ್ಕೆಗಳನ್ನು ಹರಡಿ, ರಪರಪನೆ ಬಡಿಯುತ್ತ ನೆಲದಿಂದ ಮೇಲಕ್ಕೆ ಚಿಮ್ಮಿತು. ಆ ರಭಸಕ್ಕೆ ಕಿತ್ತು ಬಂತು ನೆಲದ ಗೂಟ. ಆಕಾಶಕ್ಕೇರಿದ ಮರಿಗಿಡುಗ ಹೊಸ ಬದುಕಿನತ್ತ ಹಾರಿತು.
ನಮ್ಮನ್ನು ನೆಲದ ಗೂಟಕ್ಕೆ ಬಿಗಿದವರು ಯಾರು? ಯಾರೇ ಬಿಗಿದಿರಲಿ, ಆ ಗೂಟ ಕಿತ್ತೊಗೆಯಬಲ್ಲ ಚೇತನ ನಮ್ಮಲ್ಲಿದೆ, ಅಲ್ಲವೇ?