ಪುಸ್ತಕ: ಲಾಲ್ ಬಹದ್ದೂರ್ ಶಾಸ್ತ್ರಿ
ಲೇಖಕ: ಅಡ್ಡೂರು ಕೃಷ್ಣ ರಾವ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು
ಮೊದಲನೇ ಮುದ್ರಣ: ೨೦೧೮, ಪುಟ:೪೮, ಬೆಲೆ: ರೂ.೩೦
ಲಾಲ್ ಬಹದ್ದೂರ್ ಶಾಸ್ತ್ರಿ ಎಂದೊಡನೆ ನಮಗೆಲ್ಲರಿಗೂ ನೆನಪಿಗೆ ಬರುವ ಘೋಷಣೆ, “ಜೈ ಜವಾನ್, ಜೈ ಕಿಸಾನ್”. ಚೀನಾದೊಡನೆ ೧೯೬೨ರಲ್ಲಿ ನಡೆದ ಯುದ್ಧದಲ್ಲಿ ಹೀನಾಯವಾಗಿ ಸೋತು, ಆಹಾರ ಪದಾರ್ಥಗಳ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದ ದೇಶದಲ್ಲಿ ಧೈರ್ಯ, ಸ್ಥೈರ್ಯವನ್ನು ತುಂಬಲು ಅವರು ನೀಡಿದ ಈ ಘೋಷವಾಕ್ಯ
ದೇಶದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿದ್ದಂತೂ ನಿಜ.
ಭಾರತ ದೇಶದ ಎರಡನೆಯ ಪ್ರಧಾನ ಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನಿಸಿದ್ದು ಉತ್ತರಪ್ರದೇಶದ ಮೊಗಲಸರಾಯ್ ನಗರದ ಅತ್ಯಂತ ಬಡ ಕುಟುಂಬದಲ್ಲಿ. ಕೇವಲ ತಮ್ಮ ದೇಶಭಕ್ತಿ, ಸೇವೆ ಮತ್ತು ದಕ್ಷತೆಯ ಬಲದಿಂದ ಆ ಉನ್ನತ ಸ್ಥಾನಕ್ಕೆ ಏರಿದವರು ಶಾಸ್ತ್ರಿ.
ಸಿಡುಬು ಕಾಯಿಲೆಯಿಂದ ನರಳುತ್ತಿದ್ದ ಮಗಳು ಸಾವಿನಂಚಿನಲ್ಲಿದ್ದಾಗ, ಬ್ರಿಟಿಷರು ನೀಡಿದ ಷರತ್ತುಬದ್ಧ ಪೆರೋಲನ್ನು ನಿರಾಕರಿಸಿದ ಧೀಮಂತ, ಅನಂತರ, ಷರತ್ತು ರಹಿತ ಪೆರೋಲ್ ಪಡೆದು ಮನೆಗೆ ಬರುವಷ್ಟರಲ್ಲಿ ಮಗಳು ಕೊನೆಯುಸಿರು ಎಳೆದಿದ್ದಳು. ಅವಳ ಅಂತಿಮ ಕ್ರಿಯೆ ಮುಗಿಸಿ, ಪೆರೋಲ್ ಮುಗಿಯುವ ಮುನ್ನವೇ ಪುನಃ ಜೈಲು ಸೇರಿದವರು. ಮುಂದೆ ರೈಲ್ವೇ ಮಂತ್ರಿಯಾಗಿದ್ದಾಗ ಎರಡು ಭೀಕರ ರೈಲು ಅಪಘಾತಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದವರು.
ದೇಶದಲ್ಲಿ ಆಹಾರದ ಕೊರತೆ ನೀಗಿಸಲು “ಶಾಸ್ತ್ರಿ ವ್ರತ” ಘೋಷಿಸಿದವರು. ಇವರ ಕರೆಗೆ ದೇಶಬಾಂಧವರ ಅಭೂತಪೂರ್ವ ಸ್ಪಂದನ. ಲಕ್ಷಗಟ್ಟಲೆ ಜನರು ಸೋಮವಾರ ರಾತ್ರಿ ಉಪವಾಸವಿದ್ದರು.
ಜನವರಿ ೧೯೬೫ರಲ್ಲಿ ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಸಾರಿತು. ಶಾಸ್ತ್ರಿಯವರ “ಜೈ ಜವಾನ್” ಘೋಷಣೆಗೆ ಸ್ಪಂದಿಸಿದ ಭಾರತೀಯ ಸೈನ್ಯವು ಅಪ್ರತಿಮವಾಗಿ ಹೋರಾಡಿ ಪಾಕಿಸ್ತಾನವನ್ನು ಮಣಿಸಿತು. ಅಷ್ಟರಲ್ಲಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉ-ಥಾಂಟ್ ವಿನಂತಿಯಂತೆ ಯುದ್ಧ ನಿಲ್ಲಿಸಿದರು ಶಾಸ್ತ್ರಿ.
ಅನಂತರ, ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದರು. ಮಹಾನ್ ನಾಯಕನೊಬ್ಬನನ್ನು ಕಳೆದುಕೊಂಡಿತು ಭಾರತ ದೇಶ. ಅವರು ತೀರಿಕೊಂಡಾಗ ಕುಟುಂಬಕ್ಕಾಗಿ ಹಣವನ್ನಾಗಲೀ, ಆಸ್ತಿಯನ್ನಾಗಲೀ ಉಳಿಸಿಟ್ಟಿರಲಿಲ್ಲ; ಅವರಿಗೊಂದು ಸ್ವಂತ ಮನೆಯೂ ಇರಲಿಲ್ಲ!
ಲಾಲ್ ಬಹದ್ದೂರ್ ಶಾಸ್ತ್ರಿಯವರದು ಇಂದಿನವರು ನಂಬಲಿಕ್ಕಾಗದ ಸರಳ, ಪ್ರಾಮಾಣಿಕ ಬದುಕು. ಅವರು ಕಾಯಕವೇ ಕೈಲಾಸವೆಂದು ನಂಬಿ, ಅದರಂತೆ ಬದುಕಿದವರು. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಗಾದೆಯ ಮಾತಿಗೆ ಅನ್ವರ್ಥವಾಗಿ ಬಾಳಿದವರು. ಅವರ ಬದುಕನ್ನು ಈ ಪುಟ್ಟ ಪುಸ್ತಕದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ ಅಡ್ಡೂರು ಕೃಷ್ಣ ರಾವ್.