ಮೂರು ಗುಡ್ಡಗಳಲ್ಲಿ ಬಾಲ್ಯದ ದಿನಗಳು


೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದೆವು. ಬಸ್ಸಿನಲ್ಲಿ ಒಂದೂವರೆ ತಾಸು ಪ್ರಯಾಣಿಸಿ, ಇಳಿಯುತ್ತಿದ್ದದ್ದು ಗುರುಪುರದಲ್ಲಿ. ಅಲ್ಲಿಂದ ಅಡ್ಡೂರಿಗೆ ಮೂರು ಕಿಮೀ ನಡಿಗೆಯ ಹಾದಿ. ಕಾಲುಸಂಕಗಳನ್ನು ಹಾದು, ಗದ್ದೆಗಳ ಹುಣಿಗಳಲ್ಲಿ ಸಾಗಿ, ಅಡ್ಡೂರು ಹತ್ತಿರವಾಗುತ್ತಿದ್ದಂತೆ ಕೈಬೀಸಿ ಕರೆಯುತ್ತಿದ್ದವು ಅಲ್ಲಿನ ಮೂರು ಗುಡ್ಡಗಳು. ಆದರೆ ಆಗಲೇ ಎಂಭತ್ತು ವರುಷ ಹಳೆಯದಾದ "ಅಡ್ಡೂರು ಮನೆ" ತಲಪಿದಾಗ ಕತ್ತಲಾಗಿರುತ್ತಿತ್ತು. ಹಾಗಾಗಿ ಗುಡ್ಡಗಳ ಸುತ್ತಾಟಕ್ಕೆ ಇನ್ನೊಂದು ದಿನ ಕಾಯಬೇಕಾಗುತ್ತಿತ್ತು.

ಮರುದಿನ ಸಂಜೆಯಾಗುತ್ತಿದ್ದಂತೆ ನಮ್ಮ ಗುಡ್ಡ ಸುತ್ತಾಟ ಶುರು. ಹೊರಡುವಾಗ ಅಮ್ಮನ ಎಚ್ಚರಿಕೆ "ಗುಡ್ಡೆಲೆ ಕಣ್ಣಂಡು ಹೋಗ್ಗು, ಬಿದ್ದು ಗಾಯ ಮಾಡಿಣಲೆ". ನಮ್ಮ ಜೊತೆಗೇ ಸವಾರಿ ಹೊರಡುತ್ತಿತ್ತು ಮನೆ ನಾಯಿ "ಕೂರ". ಮನೆಯ ಹಿಂಬದಿಯ ಹಟ್ಟಿ ದಾಟಿ, ಕಾಲುಹಾದಿಯಲ್ಲಿ ಐದು ನಿಮಿಷ ನಡೆದರೆ ಸಿಗುತ್ತಿತ್ತು ಕಲ್ಲುಗುಡ್ಡ. ಗುಡ್ಡದಲ್ಲಿ ಹಲವು ಗೇರು ಮರಗಳು. ಗೇರು ಹಣ್ಣೆಲ್ಲ ಬಾವಲಿಗಳ ಹಾಗೂ ಹಾದಿಹೋಕರ ಪಾಲು. ಕೆಲವೊಮ್ಮೆ ಹಾದಿಯಲ್ಲಿ ಉದ್ದ ಬಾಲದ ಕರಿ ಮುಖದ ಮಂಗಗಳ ದರ್ಶನ. ಹಳ್ಳಿಗರ ಭಾಷೆಯಲ್ಲಿ ಅವು "ಮುಜ್ಜು". ನಮ್ಮನ್ನು ಕಂಡರೆ ಅವಕ್ಕೆ ಹೆದರಿಕೆಯೇ ಇಲ್ಲ. ಮರದಲ್ಲಿ ಕೂತು ನಮ್ಮತ್ತ ಪಿಳಿಪಿಳಿ ನೋಡುವ ಅವನ್ನು ಓಡಿಸುವುದೇ ನಮಗೊಂದು ಆಟ. ಕಲ್ಲೆಸೆದರೆ ಅಥವಾ ಡಬ್ಬ ಬಡಿದು ಸದ್ದು ಮಾಡಿದರೆ ರೆಂಬೆಯಿಂದ ರೆಂಬೆಗೆ ಹಾರಿ ದೂರದ ಮರವೇರುತ್ತಿದ್ದವು.

ಗುಡ್ಡದ ತುದಿಯಲ್ಲಿ ಎರಡಾಳೆತ್ತರದ ಎರಡು ಕಲ್ಲುಗಳು. ಒಂದು ಕಲ್ಲಿನಲ್ಲಿ ತುಸು ತಗ್ಗಿನ ಜಾಗ. ಅದಕ್ಕೆ ಬೆನ್ನಾನಿಸಿ ಪಶ್ಚಿಮಕ್ಕೆ ಮುಖ ಮಾಡಿ ಕೂತರೆ ಸುತ್ತಲಿನ ವಿಹಂಗಮ ನೋಟ. ದೂರದಲ್ಲಿ ಅಡ್ಡೂರನ್ನು ಸುತ್ತಿ ಬಳಸಿ ಸಾಗುವ ಗುರುಪುರ ನದಿ. ಬೇಸಿಗೆಯಲ್ಲಿ ನೀರಿನ ಹರಿವಿಲ್ಲದೆ ನದಿಯ ಪಾತ್ರದಲ್ಲಿ ಕೇವಲ ಮರಳಿನ ರಾಶಿ.

ಕಲ್ಲುಗುಡ್ಡದಿಂದ ನದಿಯ ವರೆಗೂ ಸಾಲುಸಾಲು ಗದ್ದೆಗಳು. ಗದ್ದೆಗಳಲ್ಲಿ ಕೊಯ್ಲಿಗೆ ತಯಾರಾಗಿದ್ದ "ಕೊಳಕೆ" (ಬೇಸಿಗೆ) ಭತ್ತದ ಪೈರು. ನಡುನಡುವೆ ಕೊಯ್ಲು ಮುಗಿದಿದ್ದ ಬೋಳುಬೋಳಾದ ಗದ್ದೆಗಳು. ಕೆಲವು ಗದ್ದೆಗಳಲ್ಲಿ ಹರಡಿದ್ದ ಸೌತೆಕಾಯಿ ಬಿಳಲುಗಳು. ಅವುಗಳಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತ ಮಾಗುತ್ತಿದ್ದ ಸೌತೆಕಾಯಿಗಳು. ಗುಡ್ಡದ ತಳದಲ್ಲಿ ಬಲಭಾಗದಲ್ಲಿ ನೀರು ತುಂಬಿದ ಹೊಂಡಗಳು. ಅವೆಲ್ಲ ಆವೆ (ಜೇಡಿ) ಮಣ್ಣು ಅಗೆದು ತೆಗೆದಾಗ (ಮಂಗಳೂರಿನ ಹಂಚಿನ ಕಾರ್ಖಾನೆಗಳಿಗಾಗಿ) ಉಂಟಾದ ಹೊಂಡಗಳು. ಆ ಹೊಂಡಗಳ ನೀರಿನಲ್ಲಿ ಆಟವಾಡುವ ಮಕ್ಕಳು. ನೀಲಿ ಆಕಾಶದತ್ತ ಕತ್ತೆತ್ತೆ ನೋಡಿದರೆ ವಿರಳವಾಗಿ ಸಾಗುವ ಬಿಳಿಬಿಳಿ ಮೋಡಗಳು. ಇವನ್ನೆಲ್ಲ ವಿಸ್ಮಯದಿಂದ ನೋಡುತ್ತಿದ್ದಂತೆ ಕತ್ತಲಾಗುತ್ತಿತ್ತು. ಎದುರಿನ ಕುರ್ಚಿಗುಡ್ಡ ಹತ್ತುವ ಕಾರ್ಯಕ್ರಮ ಮರುದಿನಕ್ಕೆ ಮುಂದೂಡಿ ಮನೆಗೆ ಮರಳುತ್ತಿದ್ದೆವು.

ಮರುದಿನ ಬಿಸಿಲು ಇಳಿಯುತ್ತಿದ್ದಂತೆ ಕುರ್ಚಿಗುಡ್ಡ ಏರುವ ಹುರುಪು. ಅಮ್ಮ ಪುನಃ ಎಚ್ಚರಿಸುತ್ತಿದ್ದರು "ಕತ್ತಲೆ ಆಪ್ತಿಗೆ ಮನೆಗೆ ಬಂದಾಗ್ಗು. ನಿಮ್‍ಗೆ ಗುಡ್ಡೆಗೆ ಹೋದ್ರೆ ಮನೆಗೆ ಬಪ್ಪುಗೆ ಹೊತ್ತಿಲ್ಲೆ ಗೊತ್ತಿಲ್ಲೆ." ಕಲ್ಲುಗುಡ್ಡೆ ದಾಟಿ ಕುರ್ಚಿಗುಡ್ಡೆಗೆ ಸಾಗುವಾಗ ನಮ್ಮ ಕಣ್ಣ ನೋಟವೆಲ್ಲ ಗೇರುಮರಗಳತ್ತ - ಗೇರುಹಣ್ಣು ಸಿಕ್ಕೀತೇ ಎಂಬ ಹುಡುಕಾಟ.

ಕಲ್ಲುಗುಡ್ಡ ಏರಿ ಇಳಿದು, ಅದರಾಚೆಗಿದ್ದ ಇನ್ನೂ ಎತ್ತರದ ಕುರ್ಚಿಗುಡ್ಡಕ್ಕೆ ಸಾಗುತ್ತಿತ್ತು ನಮ್ಮ ಸವಾರಿ. ಆ ಗುಡ್ಡದಲ್ಲಿ ಎಲ್ಲಿ ಕಂಡರಲ್ಲಿ ಕೇಪಳೆ ಹೂಗಳ ಗಿಡಗಳು. ಬಿರುಬಿಸಿಲಿಗೂ ಬಾಡದೆ ಹಸುರಾಗಿರುವ ಅವುಗಳ ಎಲೆಗಳು. ಹಸುರೆಲೆಗಳ ನಡುನಡುವೆ ಗೊಂಚಲುಗೊಂಚಲು ಕಡುಗೆಂಪು ಹೂಗಳು. ಕೆಲವು ಹೂಗಿಡಗಳಲ್ಲಿ ಕಡಲೆ ಗಾತ್ರದ ದುಂಡಗಿನ ಕೆಂಪು ಹಣ್ಣುಗಳು. ಹಣ್ಣು ಕಿತ್ತು ಬಾಯಿಗಿಟ್ಟು ಅಂದು ಚಪ್ಪರಿಸುತ್ತಿದ್ದಾಗಿನ ರುಚಿ ಇನ್ನೂ ನೆನಪಿನಲ್ಲಿ ತಾಜಾ.

ಹಳ್ಳಿಯ ಜನ ನಡೆದು ನಡೆದು ಮೂಡಿದ್ದ ಕಾಲುಹಾದಿಯಲ್ಲಿ ಸುತ್ತು ಬಳಸಿ ತಲಪುತ್ತಿದ್ದೆವು ಕುರ್ಚಿಗುಡ್ಡದ ನೆತ್ತಿಯನ್ನು. ಅಲ್ಲಿದ್ದ ಎರಡಾಳೆತ್ತರದ ಕಲ್ಲನ್ನು ಏರುವುದೇ ದೊಡ್ಡ ಸವಾಲು. ಕಷ್ಟಪಟ್ಟು ಕಲ್ಲೇರಿದರೆ ಅದರಲ್ಲೊಂದು ಥೇಟ್ ಕುರ್ಚಿಯಂತಿರುವ ತಗ್ಗು. ಯಾವ ರಾಜಕಾರಣಿಗೂ ಬೇಡವಾದ ಆ ಕಲ್ಲಿನ ಪೀಠ, ನಮಗೆ ಪುಕ್ಕಟೆ ದಕ್ಕಿದ ಆಸನ. ಅದರಲ್ಲಿ ಕೂರಲು ನಮ್ಮೊಳಗೆ ಪೈಪೋಟಿ. ಅಷ್ಟರಲ್ಲಿ ದೂರದ ಅರಬಿ ಸಮುದ್ರದಲ್ಲಿ ಸೂರ್ಯ ಮುಳುಗುತ್ತಿದ್ದ. ಮುಸ್ಸಂಜೆ ದಾಟಿ ಕತ್ತಲು ಆವರಿಸುತ್ತಿತ್ತು. ಅಮ್ಮನ ಬೈಗುಳ ಬೇಡವೆಂದು ಮನೆಯತ್ತ ನಮ್ಮ ಓಟ ಶುರು.

ಮಾರನೆಯ ದಿನ ಮೂರನೆಯ ಗುಡ್ಡದ ಅಂದರೆ ಬೊಬ್ಬರ್ಯನ ಗುಡ್ಡದ ಸುತ್ತಾಟಕ್ಕಾಗಿ ಬೆಳಗ್ಗೆಯಿಂದಲೇ ನಮ್ಮ ತಯಾರಿ. ಕಳೆದ ವರುಷ ಹೋಗಿದ್ದಾಗ ಅಲ್ಲಿ ಏನೇನು ನೋಡಿದ್ದೆವೆಂಬ ನೆನಪು. ಅಮ್ಮ ಮರೆಯದೆ ಎಚ್ಚರಿಸುತ್ತಿದ್ದರು, "ಕಣ್ಣಂಡು ಹೋಯಿನಿ, ಹಾವುಗೀವು ಇಕ್ಕು. ಗುಡ್ಡೆಲೆ ಭೂತದ ಗುಡಿಯೊಳಗೆ ಹೋಗಲೆ. ನಾ ಹೇಳಿದು ನೆಂಪಿರಡು."

ಇದು ಕುರ್ಚಿಗುಡ್ಡೆಗಿಂತಲೂ ಎತ್ತರದ ಗುಡ್ಡ. ಗುಡ್ಡವೇರಲು ಕಡಿದಾದ ಹಾದಿ. ಹಾದಿಯಲ್ಲಿ ಹಲಸು, ಮಾವು, ಗೇರು, ನೇರಳೆ, ಪೆಜಕಾಯಿ ಮರಗಳು. ಕುರುಚಲು ಗಿಡಗಳು. ಇಲ್ಲೂ ನೂರಾರು ಕೇಪಳೆ ಗಿಡಗಳು. ಅಲ್ಲಲ್ಲಿ ಗೆದ್ದಲು ಹುತ್ತಗಳು. ಕಲ್ಲು ತುಂಬಿದ ಹಾದಿಯಲ್ಲಿ ಗುಡ್ಡವೇರುವಾಗ ಏದುಸಿರು. ಸುಧಾರಿಸಿಕೊಳ್ಳಲು ನೆಲದಲ್ಲೇ ಕೂರಲು ಮನವೊಪ್ಪದು. ಯಾವುದಾದರೂ ಮರದ ಗೆಲ್ಲನ್ನೇರಿ ಕೂತಾಗಲೇ ಸಮಾಧಾನ. ಹಾಗೆ ಕೂತಾಗ ಗುಡ್ಡವನ್ನು ಬಳಸಿ ಸಾಗುವ ರಸ್ತೆಯಲ್ಲಿ ಅಪರೂಪಕ್ಕೊಮ್ಮೆ ಕಾಣಿಸುತ್ತಿದ್ದ ಲಾರಿ.

ಬೊಬ್ಬರ್ಯನ ಗುಡ್ಡದ ಹಾದಿಯಲ್ಲಿ ಓತಿ ಕಾಣಲು ಸಿಕ್ಕೇ ಸಿಗುತ್ತಿತ್ತು. ಕೆಲವೊಮ್ಮೆ ಕೇರೆ ಹಾವು ಎದುರಾಗುತ್ತಿತ್ತು. ಆಗೆಲ್ಲ ಅಮ್ಮನ ಎಚ್ಚರಿಕೆಯ ನೆನಪು. ಅಲ್ಲಲ್ಲಿ ಮೂಗಿನಿಂದ ಮೂಸಿ ನೋಡುತ್ತ ಮುಂದೆ ಸಾಗುತ್ತಿದ್ದ ನಾಯಿ "ಕೂರ" ಹಾವು ಕಂಡೊಡನೆ ಬೊಗಳುತ್ತಿತ್ತು. ಅನಂತರ ನಮ್ಮಿಂದ ಹಿಂದುಳಿದರೂ ಮತ್ತೆ ಓಡೋಡಿ ಬರುತ್ತಿತ್ತು.

ಗುಡ್ಡದ ತುದಿಯಲ್ಲಿ ಮಟ್ಟಸ ಜಾಗ. ಅಲ್ಲೊಂದು ಹಳೆಯ ಮಾವಿನ ಮರ. ಅದರ ನೆರಳಿನಲ್ಲಿ ಬೊಬ್ಬರ್ಯ ಭೂತದ ಗುಡಿ. ಅದರೊಳಗೊಂದು ಮರದ ಉಯ್ಯಾಲೆ. ಗುಡಿಯ ಬಾಗಿಲು ತೆರೆಯುವುದು ವರುಷಕ್ಕೊಮ್ಮೆ ಮಾತ್ರ. ಮೇ ತಿಂಗಳಿನಲ್ಲಿ ಒಂದು ದಿನ ಮುಸ್ಸಂಜೆ ಗುಡಿಯ ಬಾಗಿಲು ತೆರೆಯುತ್ತಾರೆ ಭಟ್ಟರು. ಅಂದು "ಭೂತಕ್ಕೆ ಬಳಸುವ" (ಬಡಿಸುವ) ಆಚರಣೆ. ವಿಶೇಷವಾಗಿ ಮಾಡಿದ ಅಕ್ಕಿ ಸೇಮೇಟು (ಶ್ಯಾವಿಗೆ) ಭೂತಕ್ಕೆ ವಿಧಿವಿಧಾನದಂತೆ ಅರ್ಪಣೆ. ಆ ಗುಡ್ಡಕ್ಕೆ ಏರುವಾಗ ಮತ್ತು ಇಳಿಯುವಾಗ ಬೊಬ್ಬರ್ಯ ಭೂತದ ಕತೆಗಳದ್ದೇ ನೆನಪು. ಒಮ್ಮೆ ಕತ್ತಲಿನಲ್ಲಿ ಲಾರಿಯೊಂದು ಗುಡ್ಡದ ಪಕ್ಕದಲ್ಲಿ ಸಾಗುವಾಗ ಲಾರಿ ಚಾಲಕನಿಗೆ ಎದುರಿನಲ್ಲಿ ವಿಚಿತ್ರ ಆಕಾರವೊಂದು ಕಾಣಿಸಿತಂತೆ. ಅವನು ಗಕ್ಕನೆ ಬ್ರೇಕ್ ಹಾಕಿ, ಕಣ್ಮುಚ್ಚಿ ತೆರೆಯುವಾಗ ಅದು ಕಣ್ಮರೆಯಾಯಿತಂತೆ.

ಕತ್ತಲಾಗುತ್ತಿದ್ದಂತೆ ಗೂಡಿಗೆ ಮರಳುವ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳುತ್ತ ನಾವೂ ಮನೆಯತ್ತ ಹೆಜ್ಜೆ ಹಾಕುತ್ತಿದ್ದೆವು. ಆಗ ಹಳೆಯ ಮನೆಯಲ್ಲಿ ಚಿಮಿಣಿ ಹಾಗೂ ಲ್ಯಾಂಪ್‍ಗಳನ್ನು ಅಮ್ಮ ಹಚ್ಚುತ್ತಿದ್ದಂತೆ ಮನೆಯೆಲ್ಲ ಬೆಳಕಾಗುತ್ತಿತ್ತು. ಭೂತದ ಅಂಜಿಕೆ ತತ್ಕಾಲಕ್ಕೆ ದೂರವಾದರೂ, ಆ ದೀಪಗಳ ಮಂದ ಬೆಳಕಿನಲ್ಲಿ ಬೊಬ್ಬರ್ಯನ ನಿಗೂಢತೆ ಬೆಳೆಯುತ್ತಿತ್ತು.

ಈಗ ಯಾವುದೇ ಗುಡ್ಡ ಕಂಡಾಗ ನನಗೆ ಅಡ್ಡೂರಿನ ಮೂರು ಗುಡ್ಡಗಳ ನೆನಪು. ಆ ಗುಡ್ಡಗಳಲ್ಲಿ ಅಡ್ಡಾಡುತ್ತಾ ಕಳೆದ ಬಾಲ್ಯದ ದಿನಗಳ ಗಾಢ ಸ್ಮರಣೆ. ಅಡ್ಡೂರಿನ ಗುಡ್ಡಗಳಲ್ಲಿ ಇಂದಿಗೂ ಹಸುರು ಉಳಿದಿದೆ. ಆದರೆ ಆ ಗುಡ್ಡಗಳಲ್ಲಿ ಅಡ್ಡಾಡ ಬೇಕಾದ ಮಕ್ಕಳ ಬಾಲ್ಯ ಎಲ್ಲೋ ಕಳೆದು ಹೋಗುತ್ತಿದೆ.