ಪರಿಚಯ53: ಎಚ್ಚೆಸ್ವಿ ಅನಾತ್ಮ ಕಥನ

ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ
ಪ್ರಕಾಶಕರು: ಗುಲ್ಮೊಹರ್, ಬೆಂಗಳೂರು
ಪ್ರಕಟ: 2010          ಪುಟ: 200           ಬೆಲೆ: ರೂ. 130/-

ಎಚ್. ಎಸ್. ವೆಂಕಟೇಶಮೂರ್ತಿಯವರ ಆತ್ಮಕಥನಾತ್ಮಕವಾದ ಆಪ್ತ ಪ್ರಬಂಧಗಳ ಸಂಪುಟ "ಅನಾತ್ಮ ಕಥನ.” ಇವನ್ನು ಓದುತ್ತಿದ್ದಂತೆ, ಇವು ನಮ್ಮದೇ ಅನುಭವ ಅನಿಸುತ್ತದೆ. ಹಾಗಿದೆ ಎಚ್.ಎಸ್. ವಿ. ಅವರ ಮನಮುಟ್ಟುವ ಮತ್ತು ಹೃದಯಕ್ಕೇ ಇಳಿಯುವ ಶೈಲಿ. ಜೊತೆಗೆ ಈ ಬರಹಗಳಿಗಾಗಿ ಅವರು ತಮ್ಮ ಅನುಭವದಿಂದ ಆಯ್ದುಕೊಂಡ ಸಂಗತಿಗಳೂ ಅಂಥವೇ.

ಕನ್ನಡಿಗರ ಮೆಚ್ಚಿನ ಕವಿಗಳಲ್ಲಿ ಒಬ್ಬರಾಗಿರುವ ಎಚ್.ಎಸ್.ವಿ. ಅವರು ಜನಿಸಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೋದಿಗ್ಗೆರೆಯಲ್ಲಿ. ಆರಂಭದ ಮೂವತ್ತು ವರುಷ ಅವರು ಗ್ರಾಮ ಪರಿಸರದಲ್ಲೇ ಬೆಳೆದವರು. ಅಲ್ಲಿನ ಅನುಭವಗಳ ಗಾಢ ಛಾಯೆ ಅವರ ಹಲವು ಬರಹಗಳಲ್ಲಿ ಕಾಣಿಸುತ್ತದೆ. ಮಲ್ಲಾಡಿಹಳ್ಳಿಯ ಶಾಲೆಯಲ್ಲಿ ತಮ್ಮ ಅಧ್ಯಾಪನ ವೃತ್ತಿ ಶುರು ಮಾಡಿದ ಎಚ್.ಎಸ್.ವಿ. ಅವರು, ಅನಂತರ 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ಇಸವಿ 2000ದಲ್ಲಿ ನಿವೃತ್ತರಾಗಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯದ ಆಳವಾದ ಅಧ್ಯಯನದ ಛಾಯೆ ಅವರ ಬರವಣಿಗೆಯಲ್ಲಿ ಎದ್ದು ಕಾಣಿಸುತ್ತದೆ. ಹಲವಾರು ನಾಟಕಗಳನ್ನು ರಚಿಸಿರುವ ಎಚ್.ಎಸ್.ವಿ. ಅವರು ಮಕ್ಕಳಿಗಾಗಿಯೂ ಕವನ, ಕತೆ, ನಾಟಕಗಳನ್ನು ಬರೆದಿದ್ದಾರೆ.

ಈ ಬರಹಗಳಿಗೆ ಪೀಠಿಕೆಯಾಗಿ ಎಚ್.ಎಸ್.ವಿ. ಅವರ ಮಾತುಗಳು: "ನನ್ನ ಬಗ್ಗೆ ನಾನೇ ಆತ್ಮಕಥನದ ಶೈಲಿಯಲ್ಲಿ ಏನನ್ನಾದರೂ ಬರೆಯುವುದು ಎಂದರೆ ತೀವ್ರವಾದ ಎದೆಗುದಿಯ ಸಂಗತಿ. ಅಪ್ರಯತ್ನವಾಗಿ ಅಲ್ಲಿಲ್ಲಿ ಅಂಥ ಬರವಣಿಗೆ ನನ್ನ ಕವಿತೆ ಕಥೆ ನಾಟಕಗಳ ಮೂಲಕ ಛದ್ಮವೇಷದಲ್ಲಿ ಆಗುತ್ತಲೇ ಬಂದಿದೆ. ಇಷ್ಟಾಗಿಯೂ ನನ್ನ ಸುತ್ತಲ ಜಗತ್ತಿನ ಬಗ್ಗೆ ಬೆಟ್ಟಿಟ್ಟು ಬರೆಯಲಿಕ್ಕಿದೆ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಈ ಜಗತ್ತಲ್ಲಿ ನನ್ನ ಆತ್ಮೀಯ ವ್ಯಕ್ತಿಗಳಿದ್ದಾರೆ; ಘಟನೆಗಳಿದ್ದಾವೆ; ರಸ ರುಚಿ ಸ್ಪರ್ಶಗಳಿದ್ದಾವೆ. ಆ ಸುತ್ತುಗೊಟ್ಟ ಜಗತ್ತಲ್ಲಿ ನಾನೂ ಇದ್ದೇನೆ ಎಂದರೆ ಇದ್ದೇನೆ. ನನ್ನನ್ನು ರೂಪಿಸಿದ ಸಂದರ್ಭಗಳು ಇವು."

“ಮತ್ತೆ ಊರಿನತ್ತ" ಅಧ್ಯಾಯದಲ್ಲಿ ಬಸ್ಸಿನ ಚಾಲಕ ಅಳಸಿಂಗ್ರಿಯ ಪ್ರೇಯಸಿ ಬೇರೊಬ್ಬನನ್ನು ಮದುವೆಯಾದ ಪ್ರಸಂಗವನ್ನು ಹೃದಯಂಗಮವಾಗಿ ಬರೆದಿದ್ದಾರೆ. ಆಕೆಯನ್ನು ಮದುವೆಯಾದ ರಂಗಾಚಾರಿ ಆ ಮದುವೆಯ ಸ್ವೀಟ್ ಅಳಸಿಂಗ್ರಿಗೆ ಬೇರೊಬ್ಬರ ಮೂಲಕ ಕಳಿಸಿಕೊಟ್ಟಾಗ, ಪ್ರಯಾಣಿಕರು ತುಂಬಿದ್ದ ಬಸ್ಸಿನ ಚಾಲಕನಾಗಿ ಕುಳಿತಿದ್ದ ಅಳಸಿಂಗ್ರಿ ಏನು ಮಾಡಿದ? ಮುಂದೇನಾಯಿತು? ಎಂಬುದನ್ನು ಇಲ್ಲಿನಂತೆ ವರ್ಣಿಸಲು ಎಚ್.ಎಸ್.ವಿ. ಅವರಿಗೆ ಮಾತ್ರ ಸಾಧ್ಯ.

“ಸ್ವಲ್ಪ ಹಣ ಮತ್ತು ಒಬ್ಬ ಮನುಷ್ಯ” ಅಧ್ಯಾಯದಲ್ಲಿ, ತಮಗೆ ಇಬ್ಬರು ಹೇಗೆ ಮೋಸ ಮಾಡಿದರೆಂಬುದನ್ನು ದಾಖಲಿಸಿದ್ದಾರೆ. ಅವರಲ್ಲೊಬ್ಬ ಚಾಲಾಕಿ ಮುದುಕ, ಇನ್ನೊಬ್ಬ ಇವರ ಬರಹಗಳನ್ನು ಮೆಚ್ಚುವಂತೆ ನಟಿಸಿದವನು. ಅವರ ವಂಚನೆಯಿಂದಾಗಿ ಆದ ನಷ್ಟಕ್ಕಿಂತಲೂ ತಾನು ಕಳೆದುಕೊಂಡದ್ದು ಮನುಷ್ಯರನ್ನು ಎಂಬ ವಿಷಾದವೇ ದಟ್ಟವಾಗಿದೆ ಈ ಬರಹದಲ್ಲಿ.

“ರೂಬಿ ಎಂಬ ಪ್ರಾಣಿಪುತ್ರಿ” ಅವರ ಕುಟುಂಬದ ಎಲ್ಲರ ಮನಗೆದ್ದಿದ್ದ ನಾಯಿಯ ಬಗೆಗಿನ ಆಪ್ತ ಬರಹ. “ಗಿಳಿ ಮತ್ತು ಪಂಜರ” ಅಧ್ಯಾಯದಲ್ಲಿ ತಮ್ಮ ಆಪ್ತ ಸ್ನೇಹಿತ ರಂಗಧಾಮನ ಕಾಡಿನ ಮನೆಗೆ ಹೋದಾಗ, ಆತನ ಮೇಲಧಿಕಾರಿಯ ಮನೆಮಂದಿಯ ಮೆಚ್ಚಿನ ಪಂಜರದ ಗಿಳಿ ಕಾಣೆಯಾಗಿ, ಅದನ್ನು ದಿನವಿಡೀ ಆತ ಹುಡುಕುವ ಫಜೀತಿಯನ್ನು ತಿಳಿಸುತ್ತಾರೆ. ಆ ಸಂದರ್ಭದಲ್ಲಿ ತನ್ನ ಗೆಳೆಯ ಎಂತಹ ಮಾನಸಿಕ ವೇದನೆ ಅನುಭವಿಸುತ್ತಿದ್ದ ಎಂಬುದನ್ನು ನವಿರಾಗಿ ಬರೆಯುತ್ತಾರೆ. ಎಡರೆಕ್ಕೆಗೆ ಬಂಗಾರದ ರಿಂಗ್ ಹಾಕಿದ್ದ ಆ ಗಿಳಿ ಕೊನೆಗೂ ಕಾಣಸಿಕ್ಕಿತಂತೆ. ಆದರೆ, ಅದು ಎತ್ತರದ ಮರಗಳ ರೆಂಬೆಗಳಲ್ಲಿ ನೂರಾರು ಗಿಳಿಗಳೊಂದಿಗಿತ್ತು. ಆಗ ರಂಗಧಾಮ ಮೇಲಧಿಕಾರಿಗೆ ಹೇಳಿದ ಸಾಂತ್ವನದ ಮಾತು: “ಯಾಕ್ಸಾರ್ ಬೇಜಾರ್ ಮಾಡ್ಕೋಳ್ತೀರಿ … ಪಂಜರ ದೊಡ್ಡದಾಯಿತು ಅಷ್ಟೇ … ಗಿಳಿ ಇದ್ದ ಹಾಗೇನೇ ಇದೆ … ಸರಿ ತಾನೇ?"

"ಸೀತಜ್ಜಿಯ ಬಂಗಾರದ ಸರ” ಅಧ್ಯಾಯದಲ್ಲಿದೆ ಒಂದು ಮನಕಲಕುವ ಅನುಭವ. ಎಚ್.ಎಸ್.ವಿ. ಅವರ ಅಜ್ಜಿ ಸೀತಜ್ಜಿಗೆ ನೂರು ವರುಷ ತುಂಬಲಿದೆ ಎಂದು ಕುಟುಂಬದವರೆಲ್ಲ ಸೇರಿ ಅಂದಾಜು ಮಾಡುತ್ತಾರೆ. (ಯಾಕೆಂದರೆ, ಅವರ ಹುಟ್ಟಿದ ದಿನ ದಾಖಲಾಗಿದ್ದ ಯಾವ ದಾಖಲೆಯೂ ಇರಲಿಲ್ಲ.) ಅವರಿಗೆ ಉಡುಗೊರೆಯಾಗಿ ಕೊಡಲಿಕ್ಕಾಗಿ ಬಂಗಾರದ ಸರವನ್ನು ತನ್ನೂರಿಗೊಯ್ದ ಎಚ್.ಎಸ್.ವಿ. ಅವರು ಆ ಅಪೂರ್ವ ಅನುಭವವನ್ನು ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ.

“ರಂಗಣ್ಣನ ರಸಯಾತ್ರೆ” ಅಧ್ಯಾಯದ ಹೂರಣ ಸೊಪ್ಪಿನ ಹುಳಿ. ಎಚ್.ಎಸ್.ವಿ. ಅವರ ಆತ್ಮೀಯ ರಂಗಣ್ಣ. ಅವನಿಗೆ ದಿನದಿನವೂ ಊಟಕ್ಕೆ ಸೊಪ್ಪಿನ ಹುಳಿ ಬೇಕೇಬೇಕು. ಆದರೆ ಬೆಂಗಳೂರಿನಂತಹ ಮಹಾನಗರಿಯಲ್ಲಿ ದಿನಕ್ಕೊಂದು ತರಹದ ಸೊಪ್ಪು ಎಲ್ಲಿಂದ ಸಿಗಬೇಕು? ಕೊನೆಗೆ ಎಚ್.ಎಸ್.ವಿ. ಅವರು ರಂಗಣ್ಣನನ್ನು ತಮ್ಮೂರಿಗೆ ಕರೆದೊಯ್ದು, ತನ್ನ ಅಜ್ಜಿಮುತ್ತಜ್ಜಿಯವರ ಪಾರಂಪರಿಕ ಪಾಕವಿದ್ಯೆಯ ವಿಶೇಷಗಳಾದ ವಿವಿಧ ಸೊಪ್ಪಿನ ಹುಳಿಗಳನ್ನು ಮಾಡಿಸಿ, ಉಣಿಸಿ ರಂಗಣ್ಣನ ಅನುಭವಲೋಕವನ್ನು ವಿಸ್ತರಿಸುವ ಕಥನವೇ ಈ ಅಧ್ಯಾಯ.

ಎಚ್.ಎಸ್.ವಿ. ಅವರು ತಮ್ಮ ಅನುಭವಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಅದರಿಂದಾಗಿ ನಮಗೆ ಅವು ಇಷ್ಟವಾಗುತ್ತವೆ. ಉದಾಹರಣೆಗೆ, “ಪ್ರಿಯ ಎನ್ನುವ ಪರಮ ಮುಗ್ಧೆ” ಅಧ್ಯಾಯದಲ್ಲಿ, ಅವರ ವಿದ್ಯಾರ್ಥಿನಿಯೊಬ್ಬಳ ಮುಗ್ಧ ವರ್ತನೆಯ ಬಗ್ಗೆ ಬರೆದಿದ್ದಾರೆ. ಚೆಲುವಾಗಿದ್ದ ಆ ಹದಿನೆಂಟರ ತರುಣಿ, ಇವರ ವಿರುದ್ಧ ಕಾಲೇಜು ಪ್ರಿನ್ಸಿಪಾಲರಿಗೆ ಲಿಖಿತ ದೂರು ಕೊಟ್ಟಿದ್ದಳು. ಪ್ರಿನ್ಸಿಪಾಲರು ಇವರನ್ನು ಕಚೇರಿಗೆ ಕರೆದು ಆ ಕಂಪ್ಲೇಂಟ್ ತೋರಿಸಿದಾಗ, ಇವರಿಗೆ "ಅದನ್ನೋದಿ ಅಳಬೇಕೋ ನಗಬೇಕೋ ತಿಳಿಯಲಿಲ್ಲ."