ಲೇಖಕರು: ಎಮ್.ಎಸ್. ಶ್ರೀರಾಮ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ವರುಷ: 2010 ಪುಟ: 136 ಬೆಲೆ: ರೂ.95/-
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.
ಈ ಎಲ್ಲ ಅನುಭವಗಳಿಂದ ಇದರಲ್ಲಿನ ಕತೆಗಳನ್ನು ರೂಪಿಸಲು ಅವರಿಗೆ ಸಹಾಯವಾಗಿದೆ. ಮೊದಲನೆಯ ಕತೆ “ಲಾಟರಿ". ಇದು ಸಂಕಲನದ ಅತಿ ದೀರ್ಘ ಕತೆ (40 ಪುಟ) ಮೈಸೂರಿನಲ್ಲಿ ಸುಮಾರು ನಲುವತ್ತು ವರುಷ ಉದ್ಯೋಗ ನಿರ್ವಹಿಸಿ, ನಿವೃತ್ತರಾದ ಭಾಸ್ಕರರಾಯರು ಮಧ್ಯಮವರ್ಗದವರು. "ಅವರ ಬದುಕಿನಲ್ಲಿ ಯಾವ ದೊಡ್ಡ ಏರುಪೇರೂ ಆಗಿರಲಿಲ್ಲ” ಎಂಬ ವಾಕ್ಯದಿಂದಲೇ ಕತೆ ಶುರು. ಇದೀಗ ಹೈದರಾಬಾದಿನಲ್ಲಿ ಮಗ ಶ್ರಾವಣನೊಂದಿಗೆ ಅವರ ಜೀವನ.
ಅವರದು ಯಾರೊಂದಿಗೂ ಬೆರೆಯದೆ, ಯಾರೊಂದಿಗೂ ಹೆಚ್ಚು ಮಾತನಾಡದೆ ಸಾಗುತ್ತಿರುವ ಏಕತಾನದ ನಿವೃತ್ತ ಜೀವನ. ಈ ಏಕತಾನತೆಯಿಂದ ಪಾರಾಗಲಿಕ್ಕಾಗಿ ಅವರು ಬೆಳಗ್ಗೆ ವಾಕಿಂಗ್ ಶುರು ಮಾಡುತ್ತಾರೆ. ಅದೊಂದು ದಿನ "ಲಾಫ್ಟರ್ ಕ್ಲಬ್” ಸದಸ್ಯರು ಉದ್ಯಾನದಲ್ಲಿ “ಹೋಹೋಹೋ" ಎಂದು ಜೋರಾಗಿ ನಗೋದನ್ನು ಕಂಡು ಅಚ್ಚರಿ. ನಂತರ ಆ ಕ್ಲಬ್ ಸೇರಿ, ಇತರ ಸದಸ್ಯರೊಂದಿಗೆ ಬೆಳಗ್ಗೆ ನಗುವ ಪರಿಪಾಠ ಆರಂಭ. ಅದಾದ ನಂತರ, ಆ ಉದ್ಯಾನದಲ್ಲಿ ವಾಕಿಂಗ್ ಮಾಡಿ ಮಗನ ಮನೆಗೆ ಮರುಳುವಾಗ ಒಂದೂವರೆ ಗಂಟೆ ದಾಟಿರುತ್ತದೆ. ಹೀಗೆ ವಾಕಿಂಗ್ ಮಾಡುವಾಗ ಪ್ರತಿಭಾ ರೆಡ್ಡಿ ಎಂಬ ವಿಧವೆ ಅವರನ್ನು ಮಾತನಾಡಿಸುತ್ತಾಳೆ. ಅನಂತರ ದಿನದಿನವೂ ಅವರಿಗೆ ಹೊಸಹೊಸ ಅನುಭವಗಳು. ತನ್ನ ಆ ವರೆಗಿನ ಜೀವನದಲ್ಲಿ ತಾನೇ ವಿಧಿಸಿಕೊಂಡಿದ್ದ ಸೀಮೆಗಳನ್ನು ಭಾಸ್ಕರರಾಯರು ಒಂದೊಂದಾಗಿ ಉಲ್ಲಂಘಿಸುತ್ತಾ ಸಾಗುವುದೇ ಕತೆಯ ಹೂರಣ.
ಈ ಸಂಕಲನದ ಇನ್ನೊಂದು ನೀಳ್ಗತೆ “ಶಾರದಾ ಮೇಡಂ ಆಬ್ಸೆಂಟು”. ಶಾಸಗಿ ಶಾಲೆಯೊಂದಕ್ಕೆ ದೊಡ್ಡ ಡೊನೇಷನ್ ಕೊಟ್ಟು ತಮ್ಮ ಮಗನನ್ನು ಸೇರಿಸಿದ್ದರು ತಂದೆತಾಯಿ. ಒಂದು ದಿನ ಅವನು ಸಂಜೆ ಮನೆಗೆ ಹಿಂತಿರುಗಿ, ಹೀಗೆ ಘೋಷಿಸುತ್ತಾನೆ: ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಶಾರದಾ ಮೇಡಂ ಒಂದು ವಾರದಿಂದ ಆಬ್ಸೆಂಟ್, ಈಗಿನ ಶೀಲಾ ಮೇಡಂ ನನಗೆ ಇಷ್ಟವಿಲ್ಲ. ಹಾಗಾಗಿ, ನಾಳೆಯಿಂದ ನಾನೂ ಸ್ಕೂಲಿಗೆ ಆಬ್ಸೆಂಟ್. ಅವನ ಹೆತ್ತವರು “ಶಾರದಾ ಮೇಡಂ ಯಾಕೆ ಶಾಲೆಗೆ ಬರುತ್ತಿಲ್ಲ?” ಎಂಬುದನ್ನು ತಿಳಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ನಿಜ ಸಂಗತಿ ಏನೆಂದರೆ ಅದರ ಕಾರಣ ಆ ಸ್ಕೂಲಿನ ಮೆನೇಜ್‌ಮೆಂಟಿನವರಿಗೂ ಗೊತ್ತಿಲ್ಲ. ಈ ಸಂಗತಿ ಹೇಗೆ ಸಂಕೀರ್ಣವಾಗುತ್ತಾ ಹೋಗುತ್ತದೆ ಎಂಬುದನ್ನು ವಿವರಿಸುತ್ತಾ ಕತೆ ಬೆಳೆಯುತ್ತದೆ.
“ಹೋಗುವುದೆಲ್ಲಿಗೆ?" ಕತೆ ಕಳೆದ ಆರು ತಿಂಗಳಿನಿಂದ ಪ್ರತೀ ಶನಿವಾರ ಪೊಲೀಸ್ ಠಾಣೆಗೆ ಅಲೆಯುತ್ತಿರುವ ವಿಶುವಿನ ಕತೆ. ಆತನ ಮನೆಯಿಂದ ಟಿವಿ ಮತ್ತು ವಿಸಿಆರ್ ಕಳವಾದ ಬಗ್ಗೆ ಎಫ್.ಐ.ಆರ್. ದಾಖಲಾಗಿದ್ದು, ಅದರ ತನಿಖೆಯ ಪ್ರಗತಿ ತಿಳಿಯಲಿಕ್ಕಾಗಿ ಅವನ ಠಾಣೆ ಭೇಟಿ. ಈ ಸಲ ಹೋದಾಗ ಅಲ್ಲಿ ತೆರೆದುಕೊಳ್ಳುತ್ತದೆ ಒಂದು ಶಿಶುವನ್ನು ಅದರ ತಾಯಿಯೇ ಬಿಟ್ಟು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣ. ಆಗ, ಅಲ್ಲಿನ ಠಾಣಾಧಿಕಾರಿಯ ಇನ್ನೊಂದು ಮುಖದ ದರ್ಶನ.
"ನಿಲ್ದಾಣ" ಕತೆಯಲ್ಲಿ ಬಷೀರ್ ಮತ್ತು ಹಸ್‌ಮುಖ್ ಎರಡು ಧ್ರುವಗಳು. ಬಾಲ್ಯ ಕಳೆದುಕೊಂಡ ಮಕ್ಕಳಿಗೆ ಬಾಲ್ಯದ ಸಂತೋಷ ಒದಗಿಸಲು ಬಷೀರನ ಪ್ರಯತ್ನ. ಆದರೆ, ಅದೇ ಮಕ್ಕಳನ್ನು ಶೋಷಣೆ ಮಾಡುತ್ತಿರುವ ಹಸ್‌ಮುಖನಿಗೆ ಬಷೀರನ ಬಗ್ಗೆ ಅನುಮಾನ. ಹಾಗಾಗಿ, ಬಷೀರನಿಗೆ ವಾರಕ್ಕೊಮ್ಮೆ ಧಮಕಿ ಹಾಕುವ ಹಸ್‌ಮುಖ್, ಬಷೀರನನ್ನು ತನ್ನ ದಾರಿಯಿಂದ ತೊಲಗಿಸಲು ಜಾಲ ಹೆಣೆಯುವ ಕತೆ. ಚಲನಚಿತ್ರ ನಟನೊಬ್ಬನ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕತೆ “ಅಂತರಂಗ". ಕೊನೆಯ ಕತೆ “ಸ್ಟಾಕಿ", ಅದೇ ಹೆಸರಿನ ನಾಯಿಯೊಂದನ್ನು ಸಾಕಿದ ಕುಟುಂಬದ ಸದಸ್ಯರು ಅದಕ್ಕೆ ಅನಾರೋಗ್ಯ ಆದಾಗ ಎದುರಿಸುವ ದ್ವಂದ್ವಗಳ ಸುತ್ತ ಹೆಣೆದಿರುವ ಕತೆ.