ಲೇಖಕರು: ಕೈಯ್ಯಾರ ಕೆ. ರೈ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ವರುಷ: 2011 ಪುಟ: 36 + 287 ಬೆಲೆ: ರೂ.75/-
ಕೈಯ್ಯಾರರ “ಶತಮಾನದ ಗಾನ” ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕನ್ನಡದ 100 ಮೇರುಕೃತಿಗಳಲ್ಲೊಂದಾಗಿ ಆಯ್ಕೆಯಾಗಿ ಮರುಮುದ್ರಣವಾದ ಕವನ ಸಂಕಲನ. ಕೈಯ್ಯಾರರು ಕವಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಈಗ ಕೇರಳದ ಭಾಗವಾಗಿರುವ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಹೋರಾಟದ ನಾಯಕರಾಗಿ ಗುರುತಿಸಲ್ಪಟ್ಟವರು.
ಅವರ 111 ಕವನಗಳು ಈ ಸಂಪುಟದಲ್ಲಿವೆ. ಜೂನ್ 1986ರ ಇದರ ಮೊದಲ ಮುದ್ರಣದ ಪ್ರತಿಗಳು ಒಂದು ವರುಷದಲ್ಲಿಯೇ ಮುಗಿದು ಹೋಗಿದ್ದವು. ಮುನ್ನುಡಿಯಲ್ಲಿ ಕೈಯ್ಯಾರರು “ಇಲ್ಲಿ ನೂರಕ್ಕೂ ಮಿಕ್ಕಿದ ಕವನಗಳು ಇರುವುದರಿಂದ, ಆ ಸಂಖ್ಯಾಸಂಕೇತವಾಗಿಯೂ, ಈ ಶತಮಾನದ ಕಾಲಾವಧಿ, ಕವಿಯ ಬದುಕಿಗೆ ನೀಡಿದ ನೋವು ನಲಿವುಗಳ ಅಭಿವ್ಯಕ್ತಿಯ ದ್ಯೋತಕವಾಗಿಯೂ ಕೃತಿಗೆ “ಶತಮಾನದ ಗಾನ” ಎಂಬೀ ಹೆಸರು ಸಂದಿದೆ" ಎಂದು ತಿಳಿಸಿದ್ದಾರೆ.
ಮುಂದುವರಿದು ಮುನ್ನುಡಿಯಲ್ಲಿ ಕೈಯ್ಯಾರರು ಬರೆದಿದ್ದಾರೆ, “ಇವಿಷ್ಟು ಆಯ್ದ ಕವನಗಳೆಂದು ಹೇಳಲಾರೆ. ಆಯ್ಕೆ ಶತಮಾನದ ಲೆಕ್ಕಕ್ಕೆ ಹೊರತು ತರತಮ ಯೋಗ್ಯತೆಯ ದೃಷ್ಟಿಯಿಂದಲ್ಲ. ಹೆತ್ತವರಿಗೆ ತಮ್ಮ ಎಲ್ಲಾ ಮಕ್ಕಳಲ್ಲೂ ಒಂದೇ ತೆರನ ವಾತ್ಸಲ್ಯ. ಕವಿಗೂ ಅಂತೆಯೇ…" ಮುನ್ನುಡಿಯ ಮುಕ್ತಾಯದಲ್ಲಿವೆ ಅವರ ವಿನಯದ ಹಾಗೂ ಕನ್ನಡಾಭಿಮಾನದ ಮಾತುಗಳು: "ಕನ್ನಡದ ಈ ಹಿರಿಯ (ಕವಿಗಳ) ಪಂಕ್ತಿಯಲ್ಲಿ ನಾನು ಅತ್ಯಂತ ಕಿರಿಯನು. ಹೆಬ್ಬೆರಳು ತೋರುಬೆರಳು ನಡುವೆರಳುಗಳ ಸಾಲಿನಲ್ಲಿ ಕೇವಲ ಕಿರುಬೆರಳಿನಂತಿರುವವನು. ಆದರೂ ಅದೇ ಕನ್ನಡದ ಕುಲಗೋತ್ರಕ್ಕೆ ಸೇರಿದವನೆಂಬ ಅಭಿಮಾನ ನನ್ನದು."
ಈ ಸಂಕಲನಕ್ಕೆ 19 ಪುಟಗಳ ದೀರ್ಘ ಸಮೀಕ್ಷೆ ಬರೆದವರು ವೆಂಕಟರಾಜ ಪುಣಿಂಚತ್ತಾಯ. ಅವರು ಇದನ್ನು ಹೀಗೆಂದು ಪರಿಚಯಿಸಿದ್ದಾರೆ: “ಮನುಷ್ಯ ಜೀವನದ ವಿವಿಧ ಭಾವ ಸಂಘರ್ಷಗಳನ್ನು, ವೈಯುಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆ ಪ್ರತಿಕ್ರಿಯೆಗಳನ್ನು, ನೋವು-ನಲಿವುಗಳನ್ನು, ವಿಷಾದ ಆಶಾವಾದಗಳನ್ನು ಕಾವ್ಯಮುಖದಲ್ಲಿ ಅಭಿವ್ಯಕ್ತಿಗೊಳಿಸುವ ಸಂಪುಟ.” ಅವರು ಗುರುತಿಸಿರುವ ಕೈಯ್ಯಾರರ ಕವಿತೆಗಳ ವಿಶಿಷ್ಟ ಗುಣಗಳು: “ಸತ್ವಯುತವಾದ ಭಾಷೆ, ಶ್ರುತಿ ಮಧುರವಾದ ಪದಶೈಲಿ, ಓದಿದೊಡನೆ ಹೃದ್ಗತವಾಗುವ ಗುಣವುಳ್ಳ ವಾಕ್ಯಪುಂಜಗಳು.”
“ಭಾರತೀಯ ಕಾವ್ಯಮೀಮಾಂಸೆಯನ್ನು ಚೆನ್ನಾಗಿ ಅರಗಿಸಿಕೊಂಡ ಕಯ್ಯಾರರು ಶುದ್ಧ ಭಾರತೀಯ ಕವಿ. ಅಲಂಕಾರ, ಗುಣ, ವಕ್ರೋಕ್ತಿ, ಧ್ವನಿಗಳು ಇವರ ಕವಿತೆಗಳಿಗೆ ಜೀವ ತುಂಬುತ್ತವೆ” ಎನ್ನುವ ಪುಣಿಂಚತ್ತಾಯರು ಕೈಯ್ಯಾರರ ಕಾವ್ಯಸ್ಫೂರ್ತಿಯ ಮೂಲಸೆಲೆ ಮತ್ತು ಹಾಡುಗಳ ಫಲಶ್ರುತಿಯ ಬಗ್ಗೆ ಹೀಗೆಂದು ಬರೆದಿದ್ದಾರೆ: “ಕೈಯ್ಯಾರರ ಕಾವ್ಯಸ್ಪೂರ್ತಿ ಹುಟ್ಟಿದ್ದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ. ಪರದಾಸ್ಯದ ಕೊಳೆಯಲ್ಲಿ ಒರಗಿರುವ ಭಾರತೀಯರನ್ನು ಎಚ್ಚರಿಸಲು ತಮ್ಮ ಕವನಗಳ ಮೂಲಕ ಅವರು ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿದರು. ಜನಮನದಲ್ಲಿ ದೇಶಾಭಿಮಾನದ ಸ್ಫೂರ್ತಿ ಉಕ್ಕೇರುವಂತೆ ಹಾಡಬಯಸಿದರು:
“ನವಭಾವ ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ….. ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ ಕ್ರಾಂತಿಕಿಡಿ ಕೆರಳಬೇಕು” ("ಹೊಸ ಹಾಡು" ಕವನದಲ್ಲಿ)
"ತನ್ನ ಹಾಡಿನ ಫಲಶ್ರುತಿ ಹೀಗಿದ್ದರೆ ಮಾತ್ರ ಕವಿಗೆ ತೃಪ್ತಿ. ನಾಲ್ಕು ದಶಕಗಳ ಹಿಂದೆಯೇ (1940ರ ದಶಕದಲ್ಲಿ) ಕಾಳಿಂಗರಾಯರೇ ಮೊದಲಾದ ಗಮಕಿಗಳ ಕಂಠದಿಂದ ಮೊಳಗಿದ್ದ ಈ ಹಾಡು ಸಮಗ್ರ ಕನ್ನಡನಾಡನ್ನೇ ಜಾಗೃತಿಗೊಳಿಸಿತು. ಕನ್ನಡಿಗರ ಮೈಮನಗಳಲ್ಲಿ ಪುಳಕವನ್ನು ಹುಟ್ಟಿಸಿತ್ತು. ಈ ಹಾಡಿನ ಮೂಲಕ ಕೈಯ್ಯಾರರ ಕಾವ್ಯ ಶೈಲಿ ಆ ಕಾಲದಲ್ಲಿ ಕೋಟಿ ಕೋಟಿ ಕನ್ನಡಿಗರ ಹೃದಯಗಳಲ್ಲಿ ಮಾರ್ದನಿಗೊಂಡಿತ್ತು” ಎಂದು ಪುಣಿಂಚತ್ತಾಯರು ದಾಖಲಿಸಿದ್ದಾರೆ.
ಸಂಕಲನದ ಮೊದಲ ಕವನ “ಲಹರಿ"ಯಲ್ಲಿಯೇ ಕೈಯ್ಯಾರರು ತಮ್ಮ ಕಾವ್ಯಸ್ಫೂರ್ತಿ ತನಗೇ ಅಚ್ಚರಿ ಹುಟ್ಟಿಸುವ ಅನುಭವ ಎಂದು ಹೇಳಿಕೊಂಡಿದ್ದಾರೆ:
ಎತ್ತಣಿಂದಲೀ ಲಹರಿಯುನ್ಮೇಷ? ಎಂಥ ಸುಂದರದ ಸ್ವಪ್ನ ಸಂತೋಷ!
ಯಾರು ಮಿಡಿವರೆನ್ನೆದೆಯ ತಂತಿಯನು? ರಾಗ ರಂಜಿಸುವುದು;
ಯಾರು ನುಡಿಸುವರು ಕವನಪಂಕ್ತಿಯನು? ಹಾಡು ಗುಂಜಿಸಿಹುದು.
ಕಾಳರಾತ್ರಿಯಲಿ ಮಿಂಚು ಹೊಳೆದಂತೆ, ಮರಣಗರ್ಭದಲಿ ಅಮೃತಶಿಶುವಂತೆ,
ಪಾಪಿಯಜಮಿಳಗೆ ಮೋಕ್ಷ ದೊರೆತಂತೆ, ಕಠಿಣ ಶಿಲೆಯಲ್ಲಿ ಮೂರ್ತಿ ಕಡೆದಂತೆ,
ಎತ್ತಣಿಂದಲೀ ಲಹರಿಯುನ್ಮೇಷ? …..
ಮಣ್ಣಮುದ್ದೆಯಲಿ ಬೊಂಬೆ ಸಮೆದಂತೆ, ಓಟೆ ತೂತಿನಲಿ ಸಪ್ತಸ್ವರದಂತೆ,
ಕೊಳಕು ಗದ್ದೆಯಲಿ ಬೆಳೆಯು ಬಂದಂತೆ, ಕೆಸರ ಕೊಳದಲ್ಲಿ ಕಮಲ ನಿಂದಂತೆ,
ಎತ್ತಣಿಂದಲೀ ಲಹರಿಯುನ್ಮೇಷ?
ಆಶಾಭಾವನೆಯಿಂದ ಬದುಕಿನ ಎಲ್ಲ ಸಂಕಟ ಎದುರಿಸಬಹುದೆಂಬುದು “ಬೆಳ್ಳಿ ಹಾಡು" ಕವನದಲ್ಲಿ ಅವರ ಸಂದೇಶ:
“ಬೆಳ್ಳಿ ಮೂಡುವ ಕಾಲವನೆ ಕಾದು ಕುಳಿತಿದ್ದೆ, ಕತ್ತಲೆಯ ಕೊಳೆ ತೊಳೆದು ಬೆಳ್ಳಿ ಬೆಳಗಿದುದು" ಎಂದು ಶುರುವಾಗುವ ಕವನದ ಮುಕ್ತಾಯ: “ಕಳೆದ ಕಾಲವ ನೆನೆದು ಕಳವಳಿಸಿ ಫಲವಿಲ್ಲ, ಬಿದ್ದ ಹಣ್ಣೆಂದಿಗೂ ಮರಳಿ ಮರಕಿಲ್ಲ;
ಸುದಿನ ಸೂರ್ಯೋದಯವ ಕಾಂಬ ನಂಬುಗೆಯೊಂದು, ಬಗೆಯರಳಿರುವುದಿಂದು - ಬಾಳ್ವೆ ಹಿರಿದೆಂದು.”
ಕೈಯ್ಯಾರರ ಬಗ್ಗೆ ಗಮನಿಸಲೇ ಬೇಕಾದ ಒಂದು ಸಂಗತಿ: ಕಾವ್ಯಕೃಷಿಯಂತೆ ಕೃಷಿಯೂ ಅವರಿಗೆ ಬಹಳ ಪ್ರಿಯವಾದ ವೃತ್ತಿ.
“ಪುನರ್ನವ" ಕವನದಲ್ಲಿ ಅವರು ಇದನ್ನು ದಾಖಲಿಸಿ, “ಮರುಹುಟ್ಟು ಬಂದರೂ ಇದೆ ದುಡಿತವೆನಗಿರಲಿ” ಎನ್ನುತ್ತಾರೆ:
"ನಾನು ಮಣ್ಣಿನಮಗನು - ಮಂದಾರಮಾಲೆಯೆನೆ ನೊಗನೇಗಿಲು ಹೊತ್ತು ತಿರುಗುವವನು;
ಹೊಲನೆಲವನುಳುವವನು - ಕೆಸರಿನಲಿ ಕಸದಲ್ಲಿ ಗೊಬ್ಬರದ ಗುಂಡಿಯಲಿ ದುಡಿಯುವವನು …..
ಸಸ್ಯಶಾಮಲೆ ದೇವಿ, ಹರಸೆನ್ನ ನೀನೋವಿ, ಮರುಹುಟ್ಟು ಬಂದರೂ ನಿನ್ನುದರದಿ;
ಇದೆ ದುಡಿತವೆನಗಿರಲಿ - ನೇಗಿಲಿನ ಹಿಡಿತದಲಿ ಬಲಗೊಟ್ಟು ಬದುಕಿಸೈ, ನೀನೆ ದಯದಿ”
ಕೈಯ್ಯಾರರ ಮೂರು ಜನಮನಗೆದ್ದ ಕವನಗಳ ಆರಂಭದ ಸಾಲುಗಳು ಹೀಗಿವೆ:
(ಕವನ) ಐಕ್ಯಗಾನ
ಐಕ್ಯವೊಂದೇ ಮಂತ್ರ, ಐಕ್ಯದಿಂದೆ ಸ್ವತಂತ್ರ, ಐಕ್ಯಗಾನದಿ ರಾಷ್ಟ್ರ ತೇಲುತಿರಲಿ!
“ಭಾರತದೆ ಮಮಜನ್ಮ ಸ್ವಾತಂತ್ರ್ಯವೇ ಧರ್ಮ” - ಒಕ್ಕೊರಲಿನುದ್ಘೋಷ ಕೇಳುತಿರಲಿ!
ನಾಡಹಬ್ಬದ ಹಾಡು
ಕನ್ನಡಂ ಕನ್ನಡಂ ಕನ್ನಡಧ್ವಾನಮ್ ಹೊನ್ನ ಕನ್ನಡ ನಾಡಹಬ್ಬದೀಗಾನಮ್,
ಕನ್ನಡದ ತೊರೆಯಿಂದ ನೊರೆಯಿಂದ ಮೊರೆಯಿಂದ ಕನ್ನಡದ ಕಡಲಿಂದ ಸಂಭ್ರಮಾಹ್ವಾನಮ್
ಎನ್ನೆದೆ ತಂತಿಯ ದಿನದಿನ ಮಿಡಿವುದು
ಕನ್ನಡವೆಂದರೆ ನನ್ನೆದೆ ನಲಿವುದು ಕನ್ನಡ ನಡೆನುಡಿ ಮನಕೆ ಮೆಚ್ಚಿಹುದು;
ಕನ್ನಡ ಕನ್ನಡ ಕನ್ನಡವೆನುವುದು, ಎನ್ನೆದೆ ತಂತಿಯ ದಿನ ದಿನ ಮಿಡಿವುದು!
“ಸ್ವಗತ" ಕವನ ಕೈಯ್ಯಾರರ ಆತ್ಮಕಥನ. “ಕ್ರಾಂತಿಕಾಲದ ಕುಮಾರಕನಾಗಿ ಹುಟ್ಟಿದೆನು - ಮೊದಲಿನ ಮಹಾಯುದ್ಧ ಮಸಗುವಂದು; ಕ್ರಿಸ್ತಾಬ್ಧ ಸಾಹಸ್ರದೊಂಬತ್ತುನೂರ ಹದಿನೈದನೆಯ ವರ್ಷದಲಿ ಜೂನೆಂಟರಂದು” ಎಂದು ಶುರುವಾಗುತ್ತದೆ. ಅವರ ಬದುಕಿನ ಏರಿಳಿತಗಳನ್ನೂ ನೋವುನಲಿವುಗಳನ್ನೂ ಕಾವ್ಯಭಾಷೆಯಲ್ಲಿ ದಾಖಲಿಸುತ್ತಾ ಮುಂದುವರಿಯುವ ಈ ಕವನವನ್ನು ಅವರು ಬರೆದದ್ದು 1942ರಲ್ಲಿ. ಮುಕ್ತಾಯದಲ್ಲಿ ಅವರು ನೀಡುವ ಭರವಸೆ:
“ಸ್ವಗತಗಳ ನಾನಿಷ್ಟೆ ಹೇಳಿದೆನು, ಮುಂದೊಮ್ಮೆ ಆತ್ಮಗೀತವ ಹಿಗ್ಗಿ ಹಾಡಲುಂಟು;
ಎನ್ನಲಿಹ ದೌರ್ಜನ್ಯವೆನ್ನೆದೆಯ ದೌರ್ಬಲ್ಯ ಕಿತ್ತು - ಎದೆ ಹಿಗ್ಗಿ ನಾಂ ಹಾಡಲುಂಟು.”
ನೂರು ವರುಷಗಳ ತುಂಬು ಬದುಕು ಬದುಕಿದ ಪುಣ್ಯವಂತ ಕವಿ ಕಯ್ಯಾರರು ಈ ಭರವಸೆಯನ್ನು ಈಡೇರಿಸಿಯೇ 9 ಆಗಸ್ಟ್ 2015ರಂದು ನಮ್ಮನ್ನಗಲಿದರು.