Agriculture and Rural Development

ಚಿಕ್ಕಮಗಳೂರಿನಿಂದ ಕೆ.ಬಿದರೆಗೆ ಬಸ್ಸಿನಲ್ಲಿ ಎರಡೂವರೆ ಗಂಟೆಗಳ ಪ್ರಯಾಣ. ಕಡೂರಿನಲ್ಲಿ ಬಸ್ ಬದಲಾಯಿಸಿ ಅಂದು ಕೆ.ಬಿದರೆ ತಲಪಿದಾಗ ಬಿಸಿಲೇರುತ್ತಿತ್ತು. ಹಿರಿಯರಾದ ಟಿ.ಬಿ. ಕುಮಾರಪ್ಪ ನಮಗಾಗಿ ಕಾದಿದ್ದರು.

ಅಲ್ಲಿ ಕುಮಾರಪ್ಪನವರದು ೨೭ ಎಕ್ರೆಗಳ ತೆಂಗಿನ ತೋಟ. ೩೫ ವರುಷಗಳ ಮುನ್ನ ಅವರು ಅಲ್ಲಿ ತೋಟ ಮಾಡಿದಾಗ ಕೊರೆಸಿದ್ದು ಒಂದೇ ಕೊಳವೆಬಾವಿ. ಅದರಲ್ಲಿ ೧೦೦ ಅಡಿ ಆಳದಲ್ಲೇ ಸೊಂಪಾಗಿ ನೀರು ಸಿಕ್ಕಿತ್ತು. ಆದರೆ ೨೦೦೦ ವರುಷದಿಂದೀಚೆಗೆ ಅದರಲ್ಲಿ ನೀರು ಕಡಿಮೆ ಆಗ್ತಾ ಬಂದು, ೨೦೦೪ರಲ್ಲಿ ಕೇವಲ ೨ ಇಂಚು ನೀರು ಸಿಗತೊಡಗಿತು. ಹಾಗಾಗಿ ಆ ಅವಧಿಯಲ್ಲಿ ಇನ್ನೂ ಏಳು ಕೊಳವೆಬಾವಿ ಕೊರೆಸಿದರು. ಇವುಗಳಲ್ಲಿ ನೀರು ಸಿಗಬೇಕಾದರೆ ೨೦೦ ಅಡಿಗೂ ಅಧಿಕ ಆಳ ಕೊರೆಸಬೇಕಾಯಿತು. ಇಷ್ಟು ಆಳಕ್ಕೆ ಕೊರೆಸಿದರೂ ಆ ಏಳು ಕೊಳವೆಬಾವಿಗಳಲ್ಲಿ ಸಿಗುತ್ತಿರೋದು ಕೇವಲ ೧ರಿಂದ ೨ ಇಂಚು ನೀರು. ಇವನ್ನೆಲ್ಲ ಒಂದಕ್ಕೊಂದು ಜೋಡಿಸಿಕೊಂಡು ತೋಟಕ್ಕೆ ನೀರು ಹಾಯಿಸುವ ವ್ಯವಸ್ಠೆ ಮಾಡಿಕೊಂಡಿದ್ದಾರೆ. ಅದೇನಿದ್ದರೂ ಅಂತರ್ಜಲ ಮಟ್ಟ ಕುಸಿದಿರುವಾಗಲೂ ಕುಮಾರಪ್ಪನವರ ೧೭೦೦ ತೆಂಗಿನ ಮರಗಳು ಹಸುರುಹಸುರಾಗಿದ್ದು ವಾರ್ಷಿಕ ೩ ಲಕ್ಷ ತೆಂಗಿನಕಾಯಿಗಳ ಇಳುವರಿ ನೀಡುತ್ತಿವೆ. ಇದಕ್ಕೇನು ಕಾರಣ?

ಕಡೂರಿನಿಂದ ಕುಮಾರಪ್ಪನವರ ತೋಟಕ್ಕೆ ಹೋಗುವಾಗ ಹಾದಿಯುದ್ದಕ್ಕೂ ಅಕ್ಕಪಕ್ಕದ ತೆಂಗಿನ ತೋಟಗಳನ್ನು ಗಮನಿಸುತ್ತಿದ್ದೆ. ಬಹುಪಾಲು ತೋಟಗಳಲ್ಲಿ ತೆಂಗಿನಮರಗಳು ನೀರಿಲ್ಲದೆ ಒಣಗಿದ್ದವು. ನುಸಿಪೀಡೆಯ ಹೊಡೆತವಂತೂ ಎದ್ದು ಕಾಣುತ್ತಿತ್ತು. ಆ ತೋಟಗಳಿಗೆ ಹೋಲಿಸಿದಾಗ ಅವೇ ಸಮಸ್ಯೆಗಳಿದ್ದರೂ ಕುಮಾರಪ್ಪನವರ ತೋಟದ ತೆಂಗಿನಮರಗಳು ಚೆನ್ನಾಗಿದ್ದವು.

ಇದಕ್ಕೆ ಕಾರಣ ಏನು? ಎಂದು ನಾನು ಕೇಳಿದಾಗ ಹಿರಿಯರಾದ ಕುಮಾರಪ್ಪನವರು ನನ್ನನ್ನು ಮನೆಯ ಹಿಂಭಾಗಕ್ಕೆ ಕರೆದೊಯ್ದರು. ಅಲ್ಲಿ ತೆಂಗಿನ ಸಿಪ್ಪೆಯ ಹುಡಿ ತುಂಬಿದ್ದ ಒಂದು ಹೊಂಡ. ಅದರ ಉದ್ದ ೨೦ ಅಡಿ, ಅಗಲ ೧೦ ಅಡಿ. ಅದರ ಮೇಲ್ಭಾಗದ ಪದರವನ್ನೆತ್ತಿ ತೋರಿಸುತ್ತ ಕುಮಾರಪ್ಪ ಹೇಳಿದರು, "ಕಾರಣ ಇಲ್ಲಿದೆ ನೋಡಿ." ಅಲ್ಲಿ ಕಂಡದ್ದು ರಾಶಿರಾಶಿ ಎರೆಹುಳಗಳು.

ನೀರಿಗಾಗಿ ಪರದಾಟದ ಕತೆಗಳನ್ನು ಕೇಳಿದ್ದೇವೆ; ಹೋರಾಟದ ಕತೆಗಳನ್ನೂ ಕೇಳಿದ್ದೇವೆ. ನೀರಿಗಾಗಿ ಕೊಲೆ ಮಾಡಿದ ಕತೆ ಗೊತ್ತೇ?

ಈ ಕರಾಳ ಪ್ರಕರಣ ನಡೆದದ್ದು ಭೋಪಾಲದ ಷಹಜೇಹಾನ್‍ಬಾದ್ ಪ್ರದೇಶದಲ್ಲಿ, ೧೩ ಮೇ ೨೦೦೯ರಂದು. ಅಲ್ಲಿನ ಸಂಜಯನಗರ ಬಸ್ತಿಯಲ್ಲಿ ಕುಡಿಯುವ ನೀರಿಗಾಗಿ ಆರಂಭವಾದ ಜಗಳ ಅವಸಾನವಾದದ್ದು ಚೂರಿ ಇರಿತದಿಂದ ಒಂದೇ ಕುಟುಂಬದ ತಂದೆ-ತಾಯಿ-ಮಗನ ಕೊಲೆಯಲ್ಲಿ! ಕೊಲೆಯಾದವರು ಜೀವನ್ ಮಾಳವೀಯ (೪೩ ವರುಷ), ಅವರ ಪತ್ನಿ ಸವಿತಾ ಮತ್ತು ಮಗ ರಾಜು (೧೯ ವರುಷ). ಕೊಲೆ ಮಾಡಿದವರು ದೀನೂ ಮತ್ತು ಅವನ ಸಂಗಡಿಗರು.

ಸಂಜಯನಗರಕ್ಕೆ ಮುನಿಸಿಪಾಲಿಟಿ ನೀರಿನ ಸರಬರಾಜು ವ್ಯವಸ್ಠೆ ಇಲ್ಲ. ಹಾಗಾಗಿ, ಆ ಕಾಲೋನಿಯ ನಿವಾಸಿಗಳು ರಸ್ತೆಯ ಮಧ್ಯದಲ್ಲೇ ಹೊಂಡ ತೋಡಿ, ಅಲ್ಲಿ ಹಾದು ಹೋಗುವ ನೆಲದಾಳದ ನೀರಿನ ಪೈಪಿಗೆ ಹಾದಿ ಮಾಡಿದ್ದಾರೆ. ಆ ಪೈಪಿಗೆ ಒಂದು ತೂತು ಕೊರೆದು, ಅದರಿಂದ ಕಾನೂನುಬಾಹಿರವಾಗಿ ಅವರು ನೀರು ಸೆಳೆಯುತ್ತಾರೆ. ನೀರು ಬರುತ್ತಿದ್ದುದು ಎರಡು ದಿನಗಳಿಗೊಮ್ಮೆ, ಅದೂ ಕೇವಲ ೧೫ ನಿಮಿಷಗಳ ಅವಧಿಗೆ. ಅಲ್ಲಿನ ಸುಮಾರು ೨೦೦ ನಿವಾಸಿಗಳು ಅಲ್ಪಾವಧಿಯಲ್ಲಿ ಸಿಗುವ ನೀರಿಗಾಗಿ ಪರದಾಡುವ ದೃಶ್ಯ ಕಲ್ಪಿಸಿಕೊಳ್ಳಿರಿ.

ಮಾಳವೀಯ ಕುಟುಂಬದ ಮನೆ ಆ ಹೊಂಡದ ಎದುರಿನಲ್ಲೇ ಇದೆ. ಹಾಗಾಗಿ, ಯಾವಾಗಲೂ ನೀರು ಬಂದಾಗ ನೀರು ಸೆಳೆಯುತ್ತಿದ್ದವರಲ್ಲಿ ಸವಿತಾಳೇ ಮೊದಲಿಗಳು. ಇದರಿಂದಾಗಿ, ಅವಳಿಗೂ ಕೆಲವು ಮನೆಗಳಾಚೆಯ ದೀನೂನ ಪತ್ನಿ ರೇಖಾಳಿಗೂ ಯಾವತ್ತೂ ಜಗಳ.

ಮೇ ೧೩ರ ಮುಂಚಿನ ೩ ದಿನಗಳಲ್ಲಿ ಪೈಪಿನಲ್ಲಿ ನೀರು ಬಂದಿರಲಿಲ್ಲ. ಎಲ್ಲ ನಿವಾಸಿಗಳಲ್ಲೂ ನೀರಿನ ನಿರೀಕ್ಷೆ ,  ನೀರು ಬಾರದ್ದಕ್ಕಾಗಿ ಚಡಪಡಿಕೆ, ಅಸಹನೆ. "ನೀರು ಬಂತೇ?" ಎಂದು ಆಗಾಗ ಹೊಂಡವನ್ನು ಇಣುಕಿ ನೋಡುತ್ತಿದ್ದರು.

ಬಾವಿಗೆ ಮಳೆ ನೀರಿಂಗಿಸಿದರೆ ಪ್ರಯೋಜನ ಇದೆಯೇ? ಈ ಪ್ರಶ್ನೆ ಕೇಳುವವರು ಹಲವರು. ಇದಕ್ಕೆ ಉತ್ತರ ಸಿಗಬೇಕೆಂದಾದರೆ, ಬಾವಿಗೆ ಮಳೆ ನೀರಿಂಗಿಸುವವರ ಬಾವಿಯನ್ನು ಕಣ್ಣಾರೆ ಕಾಣಬೇಕು.

ಅದಕ್ಕಾಗಿಯೇ ಹೋಗಿದ್ದೆ, ೨೯ ಜೂನ್ ೨೦೦೯ರಂದು, ಮಂಗಳೂರಿನ ಖಾಸಗಿ ಪಶುವೈದ್ಯ ಡಾ. ಮನೋಹರ ಉಪಾಧ್ಯರ ಮನೆಗೆ. ಯಾಕೆಂದರೆ, ಅವರು ತನ್ನ ಮನೆಯ ಬಾವಿಗೆ ೨೦೦೧ರಿಂದ ನೇರವಾಗಿ ಮಳೆನೀರು ಇಂಗಿಸುತ್ತಿದ್ದಾರೆ. ಮಂಗಳೂರಿನ ಹೊರವಲಯದ "ಬೆಂದೂರ್ ವೆಲ್" ವೃತ್ತ ಐದು ರಸ್ತೆಗಳು ಕೂಡುವ ವಿಶಾಲ ವೃತ್ತ. ಅಲ್ಲಿಂದ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಕಿಮೀ ಸಾಗಿದಾಗ, ಮರೋಳಿಯಲ್ಲಿ ಎಡಬದಿಯಲ್ಲಿ ಎರಡು ಫಲಕಗಳು ಕಾಣಿಸಿದವು: (೧) ಸೂರ್ಯನಾರಾಯಣ ದೇವಸ್ಥಾನಕ್ಕೆ ದಾರಿ (೨) ಪಶುಚಿಕಿತ್ಸಾಲಯಕ್ಕೆ ದಾರಿ. ಆ ದಾರಿಯಲ್ಲಿ ೦.೭ ಕಿಮೀ ಸಾಗಿದಾಗ, ದೊಡ್ಡ ಆಲದಮರ ದಾಟಿದೊಡನೆ ಎದುರಿಗಿತ್ತು, ಡಾ. ಉಪಾಧ್ಯರ ಪಶುಚಿಕಿತ್ಸಾಲಯ.

ಅದು ೩೫ ಸೆಂಟ್ಸ್ ವಿಸ್ತಾರದ ಕಂಪೌಂಡ್. ಪಶುಚಿಕಿತ್ಸಾಲಯದ ಹಿಂಬದಿಯಲ್ಲಿ ಅವರ ಮನೆ. ಮನೆಯ ಚಾವಣಿಯ ವಿಸ್ತೀರ್ಣ ೧,೬೦೦ ಚದರಡಿ. ಮನೆ ಕಟ್ಟಿಸುವಾಗ ಬಾವಿ ತೋಡಿಸಿದ್ದರು. ೩೮ ಅಡಿ ಆಳದಲ್ಲಿ ಸಿಕ್ಕಿತ್ತು ಬಂಡೆ. ಅದನ್ನು ಒಡೆಸಿದರೆ ಸುತ್ತಲಿನ ಮನೆಗಳಿಗೆ ಅಪಾಯ ಸಂಭವ. ಹಾಗಾಗಿ ಒಡೆಸಲಿಲ್ಲ. ಆ ಬಾವಿಯಲ್ಲಿ ಬೇಸಗೆ ಕೊನೆಯಲ್ಲಿ ಕೇವಲ ಒಂದಡಿ ನೀರು.

ಬಾವಿ ತೋಡಿಸಿದ, ನಂತರದ ವರುಷದಲ್ಲಿ ಮಳೆ ಹೊಯ್ಯೋದು ಕಂಡಾಗ, ಮನೆಯ ಚಾವಣಿ ನೀರನ್ನೆಲ್ಲ ಬಾವಿಗೆ ಇಳಿಸಿದರೆ ಹೇಗೆ? ಎಂಬ ಯೋಚನೆ. ಸುಮಾರು ರೂಪಾಯಿ ೩,೦೦೦ ವೆಚ್ಚದಲ್ಲಿ ಪೈಪ್‍ಗಳ ಜಾಲ ಜೋಡಣೆ. ಎರಡನೆಯ ಮಹಡಿಯ ಚಾವಣಿಯ ಎರಡೂ ಬದಿಗಳಿಗೆ ದಂಬೆಯಂತೆ ಅರ್ಧ-ಕತ್ತರಿಸಿದ ಪಿವಿಸಿ ಪೈಪ್‍ಗಳ ಜೋಡಣೆ. ಅವೆರಡನ್ನೂ ಜೊತೆಗೂಡಿಸಿ, ಒಂದೇ ಪಿವಿಸಿ ಪೈಪಿನ ಮುಖಾಂತರ ನೆಲಮಟ್ಟಕ್ಕೆ ಇಳಿಸಿದರು. ಅಲ್ಲಿಂದ ನೆಲದಾಳದಲ್ಲಿ ಪೈಪ್ ಹಾಯಿಸಿ, ನೇರವಾಗಿ ಬಾವಿಯೊಳಕ್ಕೆ ಮಳೆನೀರು ಬೀಳುವಂತೆ ಪೈಪ್ ಇರಿಸಿದರು.

ಊರು ರಾಣಿಬೆನ್ನೂರು. ಅಲ್ಲಿಂದ ಸುಮಾರು ೧೦ ಕಿಮೀ ದೂರದ ಒಂದು ಹಳ್ಳಿ. ಅಲ್ಲಿನ ೨೦ ಕಡು ಬಡತನದ ಕುಟುಂಬಗಳಿಗೆ ಸರಕಾರ ತಲಾ ಒಂದೆಕ್ರೆ ಜಮೀನು ನೀಡಿತು. ಅವರೆಲ್ಲ ಪರಿಶಿಷ್ಟ ವರ್ಗದವರು.

ಕೇವಲ ಜಮೀನು ನೀಡಿದರೆ ಅವರ ಉದ್ಧಾರ ಆಗದು ತಾನೇ? ಅದಕ್ಕಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಕಾರ ಹಣ ಸಹಾಯದ ಯೋಜನೆ ರೂಪಿಸಲಾಯಿತು: ಬ್ಯಾಂಕಿನಿಂದ ಶೇಕಡಾ ೪ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಮತ್ತು ಗುಂಪಿಗೆ ಸಾಲ ನೀಡುವ ಕಾರಣ ಯೋಜನಾ ವೆಚ್ಚದ ಶೇಕಡಾ ೫೦ ಸಹಾಯಧನ. ಇದು ’ವ್ಯತ್ಯಾಸ ಬಡ್ಡಿ ದರ’ (ಡಿ.ಆರ್. ಐ.) ಸಾಲವಾದ್ದರಿಂದ ಸಾಲಕ್ಕೆ ಚಕ್ರಬಡ್ಡಿ ವಿಧಿಸುವಂತಿಲ್ಲ ಹಾಗೂ ಸೊತ್ತುಗಳ ವಿಮೆಯ ವೆಚ್ಚವನ್ನು ಬ್ಯಾಂಕ್ ಭರಿಸತಕ್ಕದ್ದು.

ಅಲ್ಲೊಂದು ಕೊಳವೆಬಾವಿ ಕೊರೆದು, ಅವರ ಜಮೀನಿಗೆ ನೀರು ಒದಗಿಸುವ ಯೋಜನೆ. ಈ ನೀರಿನಿಂದ ಅವರೆಲ್ಲರೂ ಅರ್ಧ ಎಕ್ರೆ ಜಮೀನಿನಲ್ಲಿ ತರಕಾರಿ ಬೆಳೆಯಬೇಕು. ಉಳಿದರ್ಧ ಜಮೀನಿನಲ್ಲಿ ಮಳೆಗಾಲದಲ್ಲಿ ಜೋಳ ಬೆಳೆಯಬೇಕು. ಯಾವ ರೀತಿಯಲ್ಲಿ ಲೆಕ್ಕಾಚಾರ ಮಾಡಿದರೂ ಈ ಯೋಜನೆ ಯಶಸ್ವಿ ಆಗಬೇಕಿತ್ತು.

ಆದರೆ ಆದದ್ದೇನು? ಕೊಳವೆಬಾವಿಯ ಸಬ್‍ಮರ್‍ಸಿಬಲ್ ಪಂಪಿಗೆ ವಿದ್ಯುತ್ ಸಂಪರ್ಕ ನೀಡಲು (ಆಗಿನ) ಕರ್ನಾಟಕ ವಿದ್ಯುತ್ ನಿಗಮ ತಡ ಮಾಡಿತು. ಅಷ್ಟರಲ್ಲಿ ಕೊಳವೆಬಾವಿಯೊಳಗೆ ಕಿಡಿಗೇಡಿಗಳು ಕಲ್ಲು ಹಾಕಿದರು. ಆ ಕೊಳವೆಬಾವಿ ರಿಪೇರಿ ಮಾಡಲು ಸಾಧ್ಯವಿಲ್ಲದಂತಾಯಿತು. ನೀರು ಹಾಯಿಸಲಿಕ್ಕಾಗಿ ಖರೀದಿಸಿ ತಂದು ಜಮೀನಿನಲ್ಲಿ ಇಡಲಾಗಿದ್ದ ಪೈಪ್‍ಗಳೂ ಕೆಲವೇ ದಿನಗಳಲ್ಲಿ ಕಳವಾದವು. ಅಂತೂ ಆ ಬಡವರಿಗೆ ಕೊಳವೆಬಾವಿ ನೀರು ದಕ್ಕಲಿಲ್ಲ. ಆ ಹಳ್ಳಿಗೆ ನಾನು ಹೋಗಿದ್ದಾಗ, ಆ ಬಡವರ ಮುಖಗಳಲ್ಲಿ ಹತಾಶೆ ಮಡುಗಟ್ಟಿತ್ತು.

ಅವರು ಪುನಃ ಆ ಹಳ್ಳಿಯ ಜಮೀನ್ದಾರರ ಹೊಲಗಳಲ್ಲಿ ಕೂಲಿಗಳಾಗಿ ದುಡಿಯತೊಡಗಿದರು. ಅವರು ಇದೆಲ್ಲ ಬೆಳವಣಿಗೆಗಳ ಮುನ್ನ ಹಾಗೆಯೇ ಬದುಕುತ್ತಿದ್ದರು. ಅವರೆಲ್ಲರೂ ತಮ್ಮ ಕಾಲ ಮೇಲೆ ತಾವು ನಿಂತರೆ, ಹೊಲಗಳಿಗೆ ಕೂಲಿಯಾಳುಗಳು ಸಿಗಲಿಕ್ಕಿಲ್ಲ ಎಂಬ ಕಾರಣಕ್ಕಾಗಿ ಆ ಕೊಳವೆಬಾವಿಯೊಳಗೆ ಕಲ್ಲುಗಳನ್ನು ಹಾಕಲಾಯಿತೇ?

"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಹಳ್ಳಿ ಎಸ್. ಬಿದರೆ. ಅಲ್ಲಿಗೆ ತಲಪಲು ಚಿಕ್ಕಮಗಳೂರಿನಿಂದ ಹೊರಟು, ಮಾಗಡಿ ಮತ್ತು ಕಳಸಾಪುರ ದಾಟಿ ೩೬ ಕಿಮೀ ದೂರ ಸಾಗಬೇಕು. ಹಳ್ಳಿಗೆ ಮರಳಿದ ಶೋಬನಬಾಬುವಿಗೆ ಹಲವರು ಅದೇ ರೀತಿ ಉಪದೇಶ ಮಾಡುತ್ತಿದ್ದಾಗ ಅವರು ಕೈಗೊಂಡ ನಿರ್ಧಾರವನ್ನು ಅವರ ಮಾತಿನಲ್ಲೇ ಕೇಳಿ, "ಇನ್ನೊಂದು ಬೋರ್‍ವೆಲ್ ಕೊರೆಸಬಾರದು; ಮಳೆನೀರಿನಿಂದ ಮತ್ತು ಈಗಿರುವ ಬೋರ್‍ವೆಲ್‍ನ ನೀರಿನಿಂದಲೇ ಬೇಸಾಯ ಮಾಡಬೇಕೆಂದು ನಿರ್ಧರಿಸಿದೆ."

ಈ ಯುವಕ ತನ್ನ ನಿರ್ಧಾರಕ್ಕೆ ಅನುಗುಣವಾಗಿ ಬೇಸಾಯ ಮಾಡಿಕೊಂಡಿದ್ದಾಗ ಬರಸಿಡಿಲಿನಂತೆ ಬಂದೆರಗಿತು ಬರಗಾಲ. ಒಂದಲ್ಲ, ಎರಡಲ್ಲ, ಸತತ ಮೂರು ವರುಷಗಳ ಬರಗಾಲ. ೨೦೦೧ರಿಂದ ೨೦೦೪ರ ವರೆಗೆ ಎಸ್. ಬಿದರೆ ಹಳ್ಳಿಗೂ ಶೋಬನಬಾಬುವಿಗೂ ಅಗ್ನಿಪರೀಕ್ಷೆಯ ಕಾಲ. ಒಂದೆಡೆ ಬರಗಾಲದ ಹೊಡೆತ, ಇನ್ನೊಂದೆಡೆ ತೆಂಗಿನಮರಗಳಿಗೆ ನುಸಿರೋಗದ ಪೀಡೆ. ಇವರ ಒಂದೂವರೆ ಎಕ್ರೆ ತೋಟದ ೩೦ ವರುಷ ಹಳೆಯ ತೆಂಗಿನಮರಗಳೆಲ್ಲ ನುಸಿರೋಗದಿಂದ ಸೊರಗಿದವು. "ನಮ್ಮ ತೋಟದ ತೆಂಗಿನಮರಗಳಿಂದ ಐದು ಟನ್ ಕೊಬ್ಬರಿ ಸಿಗುತ್ತಿತ್ತು. ೨೦೦೩ರಲಿ ಸಿಕ್ಕಿದ್ದು ಒಂದು ಟನ್ ಮಾತ್ರ" ಎಂದು ನನ್ನೊಡನೆ ಮಾತಾಡುತ್ತಾ ತನಗಾದ ನಷ್ಟದ ಚಿತ್ರಣ ನೀಡಿದರು ಶೋಬನಬಾಬು.

ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.

ಕರ್ನಾಟಕದಲ್ಲಿ ಇಂತಹ ಹಲವು ಬಾಂದಾರಗಳಿವೆ. ಇದರದ್ದೇನು ವಿಶೇಷ? ಇದು ಹಳ್ಳಿಗರು ೩ ತಿಂಗಳ ಶ್ರಮದಾನದಿಂದ ಕಟ್ಟಿದ ಬಾಂದಾರ. ಸರ್ವೋದಯ ಮಹಾಸಂಘದ ಅಧ್ಯಕ್ಷರಾದ ಬಸವಣ್ಣಿಪ್ಪ ಅಂಗಡಿ ಶ್ರಮದಾನದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹೇಳಿದರು,"ಇದನ್ನ ನಾವು ಕಟ್ಟಿದ್ದು ೧೯೯೯ರಲ್ಲಿ. ಇಪ್ಪತ್ತೆರಡು ಹಳ್ಳಿಗಳಿಂದ ಜನ ಬರ್ತಿದ್ರು ನೋಡ್ರೀ, ಬುತ್ತಿ ಕಟ್‍ಕೊಂಡ್ ಬರ್ತಿದ್ರು. ಐನೂರು ಆಜೂಬಾಜು ಜನ ಸೇರ್ತಿದ್ರು. ಇಲ್ಲಿ ಜಾತ್ರೆ ಇದ್ದಂಗಿರ್ತಿತ್ತು. ಎಲ್ರೂ ಒಟ್ಟಾಗಿ ಕೆಲ್ಸ ಮಾಡೋರು, ಒಟ್ಟಾಗಿ ಉಣ್ಣೋರು. ಬಾಂದಾರ ಕಟ್ಟಿ ಮುಗಿಸೋದಕ್ಕೆ ೩ ತಿಂಗಳು ಬೇಕಾಯ್ತು, ನೋಡ್ರೀ."

ಹಳ್ಳಿಗರು ಒಟ್ಟು ಸೇರಿದರೆ ಜಲಸಂರಕ್ಷಣೆ ಹೇಗೆ ಮಾಡಬಹುದೆಂಬುದಕ್ಕೆ ಹಾರೋಗೇರಿ ಬಾಂದಾರ ಒಂದು ಮಾದರಿ. ಅದರ ಉದ್ದ ೧೪೦ ಅಡಿ, ಎತ್ತರ ೧೨ ಅಡಿ. ಅದರಲ್ಲಿ ೨೦ ಲಕ್ಷ ಲೀಟರ್ ನೀರು ಸಂಗ್ರಹಿಸಲು ಸಾಧ್ಯ. ಮೊದಲು ಒಂದು ಇಂಚು ದಪ್ಪದ ಫೆರ್ರೋ ಸಿಮೆಂಟ್ ತಡೆಗೋಡೆ ನಿರ್ಮಿಸಿ, ಅನಂತರ ಅದರ ಎರಡೂ ಬದಿಗಳಲ್ಲಿ ಕಲ್ಲುಮಣ್ಣು ಹೇರಿ ಬಾಂದಾರ ರಚಿಸಲಾಗಿದೆ. ಅದಕ್ಕೆ ತಗಲಿದ ಒಟ್ಟು ವೆಚ್ಚ ರೂಪಾಯಿ ೬೦,೦೦೦.

ಆ ಬಾಂದಾರದ ನೀರಿನಿಂದ ಸುತ್ತಲಿನ ೧೫ ರೈತರಿಗೆ ಕೃಷಿಗೆ ಪ್ರಯೋಜನವಾಗಿದೆ. ಅಲ್ಲಿನ ಬೋರ್‍ವೆಲ್‍ಗಳ ನೀರಿನ ಉತ್ಪತ್ತಿ ಹೆಚ್ಚಿದೆ. ಸರಾಸರಿ ೯೩೯ ಮಿಮೀ ವಾರ್ಷಿಕ ಮಳೆಯ ಆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ.

"ಮುಂಚೆ ನಾವೆಲ್ಲ ಹೊಲದಲ್ಲಿ ಅಲ್ಲಲ್ಲಿ ಬದುಗಳನ್ನ ಮಾಡ್ತಿದ್ವಿ. ಒಂದೆಕ್ರೆಗೆ ನಾಲ್ಕು ಬದು ಆದ್ರೂ ಇರೋದು. ಈವಾಗ ನಾವೆಲ್ಲ ಸೋಮಾರಿಗಳಾಗಿದ್ದೀವಿ. ನಮ್ ಹೊಲ ಉಳುಮೆಗೆ ಎತ್ತುಗಳೇ ಇಲ್ಲ ಅನ್ನೋ ಹಾಗಾಗಿದೆ. ಆದರೆ ಉಳುಮೆ ಮಾಡ್ಬೇಕಲ್ಲ? ಅದಕ್ಕೆ ಟ್ರಾಕ್ಟರ್ ತರಿಸ್ತೀವಿ. ಟ್ರಾಕ್ಟರ್‍ನೋನು ಉಳುಮೆ ಮಾಡ್ಬೇಕಾರೆ ಈ ಬದುಗಳು ಅಡ್ಡ ಬರ್ತವೆ. ಅದಕ್ಕೆ ಬದುಗಳ್‍ನೆಲ್ಲ ಕಿತ್ ಹಾಕ್ತೀವಿ. ಹಿಂಗಾಗಿ ಈಗ ಒಂದೆಕ್ರೆಯೊಳ್ಗೆ ಒಂದ್ ಬದೂನೂ ಇರಲ್ಲ. ಅಡ್ಡ ಮಳೆ ಬಂದ್ರೆ ನೀರು ಹಂಗೇ ಕೊಚ್‍ಕೊಂಡು ಹೋಗ್‍ತೈತೆ. ಹಿಂಗಾದ್ರೆ ನಮ್ ಹೊಲದಾಗೆ ನೀರಿಂಗೋದು ಹೆಂಗೆ?" ಎಂದು ಲಕ್ಯದ ಹಿರಿಯರಾದ ಮರಿಗೌಡರು ಪ್ರಶ್ನಿಸಿದಾಗ ಅಲ್ಲಿ ಮೌನ ನೆಲೆಸಿತ್ತು.

ಆ ಪ್ರಶ್ನೆಗೆ ಉತ್ತರವೆಂಬಂತೆ ಅವರು ಹೇಳಿದ ಮಾತು,"ಮುಂಚೆ ಹಿಂಗಾರಿನಲ್ಲಿ ಉಳುಮೆ ಮಾಡಿ, ಮಾಗಿಯಲ್ಲಿ ಅಡ್ಡ ಮಳೆ ಬಂದ್ರೆ ನೀರೆಲ್ಲ ಮಣ್ಣು ಕುಡಿಯೋ ಹಂಗೆ ಮಾಡ್ತಿದ್ವಿ." ಅದನ್ನು ಕೇಳುತ್ತಿದ್ದಂತೆ ದಶಕಗಳ ಹಿಂದೆ ಬಯಲು ಸೀಮೆಯಲ್ಲಿ ಮಳೆ ನೀರಿಂಗಿಸುತ್ತಿದ್ದ ಪರಿ ನಮ್ಮ ಕಣ್ಣಿಗೆ ಕಟ್ಟಿತು. ಅವರ ಮುಂದಿನ ಮಾತು ನಮ್ಮನ್ನು ಬಡಿದೆಬ್ಬಿಸಿತು,"ನಮ್ ಹಳೆ ಪದ್ಧತಿಗಳನ್ನ ಉಳಿಸ್ಕೋಬೇಕಾಗಿದೆ. ಇಲ್ಲಾಂದ್ರೆ ನಮ್ ಮಕ್ಳಿಗೆ ಕುಡಿಯೋಕ್ಕು ನೀರಿಲ್ಲ, ನಮ್ ಹೊಲಕ್ಕೂ ನೀರಿಲ್ಲ ಅಂತಾಗ್ತದೆ"

ಚಿಕ್ಕಮಗಳೂರಿನಿಂದ ೧೦ ಕಿಮೀ ದೂರದ ಲಕ್ಯದಲ್ಲಿ ಅಂದು ಸುಮಾರು ಇನ್ನೂರು ಹಳ್ಳಿಗರು ಶಿಸ್ತಿನಿಂದ ಕುಳಿತ್ತಿದ್ದರು - ಅರುಣೋದಯ ರೈತ ಮತ್ತು ಬ್ಯಾಂಕ್ ಮಿತ್ರಕೂಟವು (ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್ ಪ್ರಾಯೋಜಿತ) ಏರ್ಪಡಿಸಿದ "ಮಳೆನೀರ ಕೊಯ್ಲು ಮತ್ತು ಕೊಳವೆಬಾವಿ ಜಲ ಮರುಪೂರಣ" ವಿಚಾರಸಂಕಿರಣದಲ್ಲಿ. ಅವರಲ್ಲಿ ಅರೆಪಾಲು ಮಹಿಳೆಯರು.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ. ಹಾಗಂತ ರೈತರಿಗೆ ನೀರಾವರಿ ಶುಲ್ಕ ವಿನಾಯ್ತಿ ಮಾಡಿದರೇ? ಅದನ್ನೂ ಮಾಡಲಿಲ್ಲ.

ತುಂಗಾ ಏತ ನೀರಾವರಿ ಯೋಜನೆ ಕಾರ್ಯಗತವಾದದ್ದು ೧೯೭೨ರಲ್ಲಿ. ಕೆ. ಕಣಬೂರು ಗ್ರಾಮದ ೧೦೧೮ ಎಕ್ರೆ ಜಮೀನಿಗೆ ನೀರು ಒದಗಿಸಲಿಕ್ಕಾಗಿ. ಅಲ್ಲಿಂದ ೫ ಕಿ.ಮೀ. ದೂರದ ಕೊರಲುಕೊಪ್ಪದ ಜಮೀನಿಗೂ ಆಗ ನೀರು ಹರಿಸುವ ಯೋಜನೆ ಮಾಡಲಾಗಿತ್ತು. ಆದರೆ ಗದ್ದೆಗಳಿಗೆ ನೀರು ಹರಿಸಲು ಕಾಲುವೆ ನಿರ್ಮಿಸಲಿಲ್ಲ. ಇದರಿಂದಾಗಿ ಇಲ್ಲಿನ ತೋಟಗಳು ಒಣಗಿ ಹೋದವು ಎಂಬುದು ಗ್ರಾಮದ ಹಿರಿಯರ ದೂರು.

ರೈತರ ಜಮೀನಿಗೆ ನೀರು ಒದಗಿಸದಿದ್ದರೂ ನೀರಾವರಿ ಇಲಾಖೆ ಪ್ರತಿ ವರುಷ ನೀರಾವರಿ ಶುಲ್ಕ ವಿಧಿಸುತ್ತಾ ಬಂತು. "ಇದು ಅನ್ಯಾಯ" ಎಂದು ರೈತರು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರು. ಇದಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲೇ ಇಲ್ಲ. ಕ್ರಮೇಣ ಹಲವು ವರುಷಗಳ "ಶುಲ್ಕ ಬಾಕಿ" ಸಾವಿರಾರು ರೂಪಾಯಿಗಳಿಗೆ ಬೆಳೆಯಿತು. ಕೊನೆಗೆ ತಹಶೀಲ್ದಾರರಿಂದ ರೈತರಿಗೆ ಬಂದ ನೋಟೀಸ್‍ನಲ್ಲಿ "ಶುಲ್ಕ ಬಾಕಿ ಕಟ್ಟದಿದ್ದರೆ ಜಮೀನು ಹರಾಜು ಹಾಕಲಾಗುವುದು" ಎಂಬ ಬೆದರಿಕೆ!

"ನೀರಾವರಿ ಇಲಾಖೆ ಪ್ರಕಾರ ಕೊರಲುಕೊಪ್ಪಕ್ಕೆ ನೀರು ಸರಬರಾಜಾಗುತ್ತಿದ್ದು ಅದನ್ನು ಬಳಸಿ ರೈತರು ಬೆಳೆ ಬೆಳೆದಿದ್ದಾರೆ. ಅವರಿಗೆ ವರುಷಕ್ಕೆ ಒಂದು ಎಕ್ರೆಗೆ ೭೫ ರೂಪಾಯಿಗಳಂತೆ ನೀರಾವರಿ ಶುಲ್ಕ ಮತ್ತು ೪ ರೂಪಾಯಿ ನಿರ್ವಹಣಾ ವೆಚ್ಚ ವಿಧಿಸಲಾಗುತ್ತಿತ್ತು. ಆದರೆ ಶುಲ್ಕ ಪಾವತಿಸದ ರೈತರ ನಿರ್ಲಕ್ಷ್ಯದಿಂದಾಗಿ ಬಾಕಿ ಮಾಡಿದ ತೆರಿಗೆ ದೊಡ್ಡ ಮೊತ್ತವಾಗಿ ಬೆಳೆದಿದೆ" ಎಂಬುದು ತಹಶೀಲ್ದಾರರ ಅಂಬೋಣ.

ಅಂದು ಪ್ರಸನ್ನರ ಮಾಗಡಿ ಮನೆಯಿಂದ ತೋಟಕ್ಕೆ ನಡೆದು ಹೊರಟಾಗ ಕತ್ತಲಾಗಲು ಇನ್ನೂ ಒಂದು ತಾಸಿತ್ತು. ಆಗಷ್ಟೇ ಕುಡಿದಿದ್ದ ಕಾಫಿಯ ಘಮದ ಗುಂಗಿನಲ್ಲಿ ಅವರ ಕಾಫಿ ತೋಟದತ್ತ ಹೆಜ್ಜೆ ಹಾಕಿದೆವು. ಮನೆಯೆದುರಿನ ಗೇಟು ದಾಟಿ, ಬೇಲೂರು ರಸ್ತೆಗೆ ಬಂದಾಗ ಪಕ್ಕದಲ್ಲಿರುವ ಹಲಸುಲಿಗೆ ಬಸ್‍ಸ್ಟಾಪ್ ತೋರಿಸುತ್ತಾ ಪ್ರಸನ್ನ ಹೇಳಿದರು, "ಇಲ್ಲಿಂದ ಸಕಲೇಶಪುರ ಬಹಳ ಹತ್ತಿರ, ಐದೇ ಕಿಲೋಮೀಟರ್". ಬೇಲೂರು ರಸ್ತೆ  ಹಾದು, ಅದರಾಚೆಗಿನ ಪ್ರಸನ್ನರ ಐದೆಕ್ರೆ ರೊಬಸ್ಟ ಕಾಫಿ ತೋಟ ತಲಪಿದೆವು.

ಅಲ್ಲಿ ಇಳಿಜಾರಿಗೆ ಅಡ್ಡವಾಗಿ ಸಾಲುಸಾಲಾಗಿ ೧೦ ಅಡಿಗಳ ಅಂತರದಲ್ಲಿ ತೋಡಿದ್ದ ಇಂಗುಗುಂಡಿಗಳನ್ನು ತೋರಿಸಿದರು ಪ್ರಸನ್ನ. ಹೊಸದಾಗಿ ತೋಟ ಮಾಡಿದ ಆರಂಭದ ವರುಷಗಳಲ್ಲಿ ಮಳೆ ಬಂದಾಗ ಅವರ ತೋಟದಿಂದ ಮಳೆನೀರು ರಭಸದಿಂದ ತೊರೆಯಾಗಿ ಹೊರಕ್ಕೆ ಹರಿಯುತ್ತಿತ್ತು. ಈಗ ಮಳೆ ಬಂದರೆ ಒಂದು ಹನಿ ನೀರೂ ಹೊರಕ್ಕೆ ಹರಿದು ಹೋಗುತ್ತಿಲ್ಲ. "ಇದು ಇಂಗುಗುಂಡಿಗಳ ಇಂದ್ರಜಾಲ" ಎನ್ನುತ್ತಲೇ ಪ್ರಸನ್ನ ಅದರ ಗುಟ್ಟು ರಟ್ಟು ಮಾಡಿದರು. ಜೂನ್‍ನಲ್ಲಿ ಮಳೆ ಶುರು ಆಗುವಾಗ, ಇಂಗುಗುಂಡಿಗಳ ಕಸಕಡ್ಡಿ ತೆಗೆದು, ಅವನ್ನು ನೀರಿಂಗಿಸಲು ತಯಾರು ಮಾಡಬೇಕು. ನವಂಬರ್‍ನಲ್ಲಿ ಇಂಗುಗುಂಡಿಗಳಿಗೆ ಪುನಹ ಕಸಕಡ್ಡಿ ತುಂಬಿ ಅವುಗಳಿಂದ ನೀರು ಆವಿಯಾಗದಂತೆ ಮಾಡಬೇಕು. ಇದರ ಪೇಟೆಂಟ್ ತಮ್ಮ ಹಳೆಯ ತಲೆಮಾರುಗಳ ಹಿರಿಯರದ್ದು ಎನ್ನಲು ಮರೆಯಲಿಲ್ಲ ಪ್ರಸನ್ನ.

ರೊಬಸ್ಟ ಕಾಪಿ ತೋಟದ ಗುಡ್ಡವಿಳಿದಾಗ ಕಂಡದ್ದು ವಿಸ್ತಾರವಾದ ಹತ್ತೆಕ್ರೆ ಸಮತಟ್ಟು ಪ್ರದೇಶ. ಪ್ರಸನ್ನ ಅದನ್ನು ಖರೀದಿಸುವಾಗ ಅದು ಭತ್ತದ ಗದ್ದೆಯಾಗಿತ್ತು. ಈಗ ಅಲ್ಲಿ ಅಡಿಕೆ ಗಿಡಗಳು.

ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ ಮಳೆನೀರು ಸಂಗ್ರಹಿಸಿ, ಕೃಷಿಗಾಗಿ ಬಳಸಿ.

ಆದರೆ ಈ ಬಗ್ಗೆ ನಾವೆಲ್ಲರೂ ಕೇಳಲೇ ಬೇಕಾದ ಪ್ರಶ್ನೆಗಳಿವೆ: ಕೋಟಿಗಟ್ಟಲೆ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಲಾಶಯಗಳಿಂದ ಆಗಿರುವ ಪ್ರಯೋಜನಗಳೇನು? ಅವುಗಳ ನಿರ್ಮಾಣದ ಮುಂಚೆ ಆಶ್ವಾಸನೆ ನೀಡಿದ್ದ ಪ್ರಯೋಜನಗಳು ಸಿಕ್ಕಿವೆಯೇ?

ಭಾರತದಲ್ಲಿರುವ ಬೃಹತ್ ಜಲಾಶಯಗಳ ಸಂಖ್ಯೆ ೪,೦೦೦ಕ್ಕಿಂತ ಅಧಿಕ. ಇವುಗಳಲ್ಲಿ ಕೇವಲ ೭೬ ಜಲಾಶಯಗಳ ಬಗ್ಗೆ ಕೇಂದ್ರ ಜಲಮಂಡಲಿ ಮಾಹಿತಿ ಸಂಗ್ರಹಿಸುತ್ತಿದೆ. ಮಂಡಲಿಯ ವಾರ್ತಾಪತ್ರವು ಈ ಜಲಾಶಯಗಳ ಪ್ರಯೋಜನದ ಬಗ್ಗೆ ಬೆಳಕು ಚೆಲ್ಲುತ್ತದೆ. ಹನ್ನೆರಡು ವರುಷಗಳ (೧೯೯೪ರಿಂದ ೨೦೦೫) ಮಾಹಿತಿಯ ಪರೀಕ್ಷೆಯಿಂದ ತಿಳಿದು ಬರುವ ಸತ್ಯಾಂಶಗಳು ಹೀಗಿವೆ:
*  ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ೩೬.೨೫ ಬಿಲಿಯನ್ ಘನ ಮೀಟರ್ (ಬಿಘಮೀ) ಸಂಗ್ರಹ ಸಾಮರ್ಥ್ಯದಲ್ಲಿ ಮಳೆನೀರು ತುಂಬುವುದೇ ಇಲ್ಲ. ಕೇಂದ್ರ ಜಲಮಂಡಲಿ ಮಾಹಿತಿ ಪಡೆಯುತ್ತಿರುವುದು ಕೇವಲ ೧೩೩ ಬಿಘಮೀ ಸಂಗ್ರಹ ಸಾಮರ್ಥ್ಯದ ಬಗ್ಗೆ. ಅದರಲ್ಲೇ ಹೀಗಾಗುತ್ತಿದೆ.
*  ಇದರರ್ಥ ಏನು? ಪ್ರತಿ ವರುಷ, ಸರಾಸರಿ ಲೆಕ್ಕದಲ್ಲಿ ರೂಪಾಯಿ ೩೭,೭೯೩ ಕೋಟಿ ವೆಚ್ಚದ ಸಂಗ್ರಹ ಸಾಮರ್ಥ್ಯ ಉಪಯೋಗ ಆಗುತ್ತಿಲ್ಲ.
*  ಆ ೧೨ ವರುಷಗಳ ಅವಧಿಯಲ್ಲಿ, ಏಳು ವರುಷಗಳಲ್ಲಿ ಮಳೆ ಚೆನ್ನಾಗಿತ್ತು. ಅಂದರೆ ಸರಾಸರಿಗೆ ಸಮವಾಗಿತ್ತು ಅಥವಾ ಸರಾಸರಿಗಿಂತ ಜಾಸ್ತಿಯಾಗಿತ್ತು. ಆದರೂ ಹೀಗಾಗಿದೆ.

ಅಗಾಧವಾದ ಬಂಡವಾಳ ಹೂಡಿಕೆಯಿಂದ ಸಿಗಬೇಕಾದ ಪ್ರಯೋಜನ ಯಾಕೆ ಸಿಗುತ್ತಿಲ್ಲ? ನಮ್ಮ ದೇಶದ ಎರಡು ಬೃಹತ್ ಜಲಾಶಯಗಳ ಮಾಹಿತಿ ಪರಿಶೀಲಿಸೋಣ:
ಭಾಕ್ರಾ ಅಣೆಕಟ್ಟು: ೧೯೮೯ರಿಂದ ೨೦೦೫ರ ವರೆಗೆ ೫೧೪ ಮೀಟರ್ ಎತ್ತರದ ಈ ಜಲಾಶಯ ಯಾವುದೇ ವರುಷ ಭರ್ತಿಯಾಗಿಲ್ಲ.

Pages