Agriculture and Rural Development
ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ.
ಹೋದೊಡನೆ ನಮ್ಮನ್ನೆಲ್ಲ ಆ ಹಳ್ಳಿಯವರು ಕರೆದೊಯ್ದದ್ದು ನಾಗೇಶ ಹೆಗಡೆಯವರ ಕುಟುಂಬದ ಮನೆಗೆ. ಅಲ್ಲಿ ನಮ್ಮನ್ನು ಕೂರಿಸಿ, ಹೊಟ್ಟೆತುಂಬ ಉಪಾಹಾರ ಬಡಿಸಿದ ರೀತಿಯಲ್ಲೇ ಆ ಹಳ್ಳಿಯವರ ಪರಸ್ಪರ ಸಹಕಾರದ ಬಾಳುವೆಯ ಚಿತ್ರಣ ನಮಗೆ ಸಿಕ್ಕಿತ್ತು.
ಅನಂತರ ನಮ್ಮನ್ನೆಲ್ಲ ಕುಳ್ಳಿರಿಸಿ, ಸಚ್ಚಿದಾನಂದ ತಮ್ಮ ಊರಿನ ಮಳೆನೀರಿನ ಕತೆ ಹೇಳಿದರು, "ವರುಷದಿಂದ ವರುಷಕ್ಕೆ ನಮ್ಮ ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಇಳೀತಿತ್ತು. ನಮ್ಮ ಅಡಿಕೆ ತೋಟ ಉಳಿಸಿಕೊಳ್ಳೋದು ಹ್ಯಾಗಂತ ಚಿಂತೆ ಹತ್ತಿತ್ತು. ಎರಡು ವರುಷದ ಮುಂಚೆ ಒಂದಿನ ನಮ್ಮ ಹಾಲಿನ ಡೈರಿಯಲ್ಲಿ ಮಾತಾಡ್ತಿರಬೇಕಾದ್ರೆ ಶ್ರೀಪಡ್ರೆಯವರ ’ನೆಲ ಜಲ ಉಳಿಸಿ’ ಪುಸ್ತಕದ ಮಾತು ಬಂತು. ಅದೇ ನಮಗೆ ಸ್ಫೂರ್ತಿ. ಅನಂತರದ ಭಾನುವಾರದಿಂದಲೇ ನಮ್ಮ ಸೊಪ್ಪಿನ ಬೆಟ್ಟದಲ್ಲಿ ಕೆಲಸ ಶುರು ಮಾಡಿದ್ವಿ.ಒಂದೆರಡು ತಿಂಗಳು ಹೆಚ್ಚು ಜನ ಬರಲಿಲ್ಲ. ಆ ಮೇಲೆ ಭಾನುವಾರ ಬಂತಂದ್ರೆ ನಮ್ಮ ಊರಿನ ಜನ ಹಾರೆ ತಗೊಂಡು ಸೊಪ್ಪಿನ ಬೆಟ್ಟಕ್ಕೆ ಹೋಗ್ಲಿಕ್ಕೆ ಶುರು ಮಾಡಿದ್ರು. ಈಗ ಪ್ರತಿ ಭಾನುವಾರಾನೂ ಅಲ್ಲಿ ಅನ ಸೇರ್ತೀವಿ. ಇಂಗುಗುಂಡಿ ಮಾಡ್ತೀವಿ. ಅರ್ಧ ತಾಸಿನಲ್ಲಿ ಎರಡು ಸೆಂಟಿಮೀಟರ್ ಮಳೆ ಬಿದ್ದರೂ ನಮ್ಮ ಸೊಪ್ಪಿನ ಬೆಟ್ಟದಿಂದ ನೀರು ಹರಿದು ಹೋಗಬಾರದು. ಅಲ್ಲೇ ಇಂಗಬೇಕು ಅನ್ನೋದು ನಮ್ಮ ಗುರಿ. ಒಂದೇ ವರುಷದಲ್ಲಿ ಅದನ್ನ ಸಾಧಿಸಿದ್ದೇವೆ."
ಕಡೂರಿನಿಂದ ಚಿಕ್ಕಮಗಳೂರಿನ ಹಾದಿಯಲ್ಲಿ ೧೧ ಕಿಮೀ. ಸಾಗಿದಾಗ ಎಡಬದಿಯಲ್ಲಿ ಕಾಣಿಸಿತು ’ರಾಮನಹಳ್ಳಿ’ ಫಲಕ. ಅಲ್ಲಿ ಎಡಕ್ಕೆ ತಿರುಗಿ ೨ ಕಿಮೀ. ಮುಂದೆ ಹೋಗಿ ನಿಂತದ್ದು ಪ್ರವೀಣರ ಹೊಲದಲ್ಲಿ. ಅಂದು, ಮೇ ೧೯, ೨೦೦೪ರಂದು, ಅಲ್ಲಿ ನಾನು ಬೈಕಿನಿಂದಿಳಿದಾಗ ಕಾಣಿಸಿದ್ದು ಅಗಲವಾದ ತೋಡಿಗೆ ಅಡ್ಡವಾಗಿ ಕಟ್ಟಿದ್ದ ೨೦ ಅಡಿಗಳುದ್ದದ ಕಲ್ಲು-ಸಿಮೆಂಟಿನ ತಡೆಗಟ್ಟ.
ಆ ವಾರ ಸುರಿದ ಮಳೆ ನೀರನ್ನೆಲ್ಲ ತಡೆಗಟ್ಟ ೨೦ ಅಡಿಗಳ ಆಳಕ್ಕೆ ತಡೆದು ನಿಲ್ಲಿಸಿತ್ತು. ಅದನ್ನ್ಜು ತೋರಿಸುತ್ತಾ "ಇಲ್ಲಿರೋ ನೀರು ನೋಡಿ ಧೈರ್ಯ ಬಂದಿದೆ. ಇಷ್ಟು ನೀರಿಂಗಿದರೆ ನನ್ನ ಬೋರ್‍ವೆಲ್‍ನಲ್ಲಿ ನೀರು ಸಿಗ್ತದೆ. ಇಲ್ಲದಿದ್ರೆ ನನ್ನ ಎರಡು ವರ್ಷಗಳ ಅಡಿಕೆ ಸಸಿಗಳನ್ನು ಉಳಿಸಿಕೊಳ್ಳೋದೇ ಕಷ್ಟ ಆಗ್ತಿತ್ತು" ಎಂದರು ಕಡೂರಿನ ವಿ.ಎಸ್. ಪ್ರವೀಣ್.
ಅವರ ಜಮೀನಿನಿಂದ ೩ ಕಿಮೀ. ದೂರದಲ್ಲಿ ಬೆಟ್ಟ. ಮಳೆ ಬಂದಾಗ ಅಲ್ಲಿಂದ ಪ್ರವೀಣರ ಜಮೀನಿನತ್ತ ರಭಸದಲ್ಲಿ ಹರಿದುಬರುತ್ತದೆ ಮಳೆನೀರು. "ಆ ಬೆಟ್ಟದ ಇಳಿಜಾರಿನಲ್ಲೂ ಹೀಗೆ ತಡೆಗಟ್ಟ ಕಟ್ಟಿದ್ದಾರಾ?" ಕೇಳಿದೆ. "ನಾಲ್ಕು ಕಡೆ ಕಟ್ಟಿದ್ರು ಸಾರ್, ಆದರೆ ಈಗ ಒಂದೂ ಉಳಿದಿಲ್ಲ" ಎಂದರು.
"ಏನಾಯಿತು? ಮಳೆಗೆ ಕೊಚ್ಚಿ ಹೋಯಿತೇ?" ಎಂಬ ನನ್ನ ಪ್ರಶ್ನೆಗೆ ಪ್ರವೀಣ್ ದೀರ್ಘ ಉಸಿರೆಳೆದುಕೊಂಡು ಉತ್ತರಿಸಿದರು, "ಅದೊಂದು ದೊಡ್ಡ ಕತೆ. ಜಲಾನಯನ ಅಭಿವೃದ್ಧಿ ಇಲಾಖೆಯವರು ತಡೆಗಟ್ಟ ಕಟ್ಟಿಸಿದ್ದು ನಿಜ. ಆದರೆ ಆಶ್ರಯ ಯೋಜನೆಯಲ್ಲಿ ಸ್ವಂತ ಮನೆ ಕಟ್ಟಬೇಕೆಂದಿದ್ದ ಹಳ್ಳಿ ಜನಕ್ಕೆ ಆ ತಡೆಗಟ್ಟದ ಕಲ್ಲುಗಳ ಮೇಲೆ ಕಣ್ಣು ಬಿತ್ತು. ಅವರು ಮನೆಯ ತಳಪಾಯ ಕಟ್ಟಿದ್ರೆ ಅವ್ರಿಗೆ ಹತ್ತು ಸಾವಿರ ರೂಪಾಯಿ ಗ್ರಾಮ ಪಂಚಾಯತಿನಿಂದ ಮಂಜೂರಾಗ್ತದೆ. ಆದರೆ ಮನೆಯ ತಳಪಾಯಕ್ಕೆ ಕಲ್ಲು ಬೇಕಲ್ಲ? ಈ ತಡೆಗಟ್ಟಗಳ ಕಲ್ಲುಗಳನ್ನೇ ಕಿತ್ತು ಒಯ್ತಾರೆ ಜನ. ನನ್ನ ಜಮೀನಿನಲ್ಲಿ ಕಟ್ಟಿಸಿದ ತಡೆಗಟ್ಟವೂ ಆ ಇಲಾಖೆಯ ಕಾರ್ಯಕ್ರಮದ್ದು. ಇದರ ಕಲ್ಲುಗಳನ್ನೂ ಕಿತ್ತು ಒಯ್ಯಲು ಎತ್ತಿನಗಾಡಿ ಕಟ್ಟಿಕೊಂಡು ಬಂದಿದ್ರು ಜನ. ನಾಲ್ಕು ಸಲ ಬಂದಿದ್ರು ಸಾರ್. ನನ್ನ ಜಮೀನು ನೋಡ್ಕೋತಾನಲ್ಲ ಹರೀಶ, ಅವನಿಲ್ಲೇ ಇರ್ತಾನೆ. ಹಾಗಾಗಿ ನನ್ನ ತಡೆಗಟ್ಟ ಇನ್ನೂ ಇದೆ."
ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಇಲಾಖೆ ಒದಗಿಸಿದ್ದ ಒಟ್ಟು ಅನುದಾನ ರೂಪಾಯಿ ೪೮೩ ಕೋಟಿಗಳಲ್ಲಿ ರೂಪಾಯಿ ೩೯೯ ಕೋಟಿ ವೆಚ್ಚ ಮಾಡಲಾಗಿದೆ.
ಸರಕಾರದ ಇಂತಹ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.
ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.
ಉತ್ತರಕನ್ನಡದ ಯಲ್ಲಾಪುರದ ಹತ್ತಿರದ ಕವಡಿಕೆರೆ ಹಳ್ಳಿಯಲ್ಲಿ ಅಂದು ಮುಸ್ಸಂಜೆಯ ಹೊತ್ತು. ಆಗಷ್ಟೇ ಆ ಮನೆ ಹೊಕ್ಕಿದ್ದೆವು. ಆಗಂತುಕರಾದ ನಮ್ಮನ್ನು ’ಏನು ಈ ಕಡೆ ಬಂದದ್ದು’ ಎಂದು ವಿಚಾರಿಸಿದವರು ಗಣಪತಿ ನಾರಾಯಣ ಭಟ್ಟರು. "ಇಡಗುಂದಿಯ ಸ್ನೇಹಸಾಗರ ಶಾಲೆಗೆ ತರಬೇತಿಗಾಗಿ ಬಂದೋರು ನಾವು. ನಿಮ್ ಹಳ್ಳಿಗೆ ಬಂದು ನಿಮ್ಮನ್ನೆಲ್ಲ ಕಾಣ್‍ಬೇಕಂತ ಬಂದಿದೀವಿ" ಎಂದು ಪರಿಚಯಿಸಿಕೊಂಡೆವು ನಾವು ನಾಲ್ವರು. "ನಮ್ ಹಳ್ಳೀಲಿ ಅಂತಾ ವಿಶೇಷವೇನಿಲ್ಲ ಬಿಡಿ’ ಎನ್ನುತ್ತಾ ನಮ್ಮನ್ನು ಬೆಂಚಿನಲ್ಲಿ ಕೂರಿಸಿ, ಅವರು ನಿಂತುಕೊಂಡೇ ನಮ್ಮೊಂದಿಗೆ ಮಾತಿಗಿಳಿದರು.
ಅದು ಹಳೆಯ ಮನೆ. ಹೆಂಚಿನ ಚಾವಣಿ. ಮಣ್ಣು ತೇದು ಮಾಡಿದ ನೆಲ. ಮನೆಯೆದುರಿನ ಅಡಿಕೆ ತೋಟದಲ್ಲಿ ಎತ್ತರಕ್ಕೆ ಬೆಳೆದು ನಿಂತ ಅಡಿಕೆ ಗಿಡಗಳು. ಸಹಜವಾಗಿಯೇ ಅಡಿಕೆ ಕೃಷಿಯ ಸ್ಥಿತಿಗತಿ ಬಗ್ಗೆ ಕೇಳಿದೆವು. "ನಿಮಗೆ ಗೊತ್ತಲ್ಲ. ಅಡಿಕೆ ದರ ಕ್ವಿಂಟಾಲಿಗೆ ೧೨,೦೦೦ ರೂಪಾಯಿ ಇದ್ದದ್ದು ೬,೦೦೦ ರೂಪಾಯಿಗೆ ಇಳಿದಿದೆ. ಮುಂಚೆ ಅಡಿಕೆ ಜೊತೆ ಬಾಳೆ, ಏಲಕ್ಕಿ, ಕಾಳುಮೆಣಸು ಬೆಳೀತಿದ್ದೆವು. ಅದೆಲ್ಲದ್ರಿಂದ ಬರೋ ಆದಾಯ ನಮ್ ಮನೆ ಖರ್ಚಿಗೆ ಸಾಕಾಗ್ತಿತ್ತು. ಈಗ ಹಾಗಿಲ್ಲ. ಹತ್ತು ವರ್ಷಂದೀಚೆಗೆ ಎಲ್ಲರ ತೋಟದಲ್ಲಿ ಪಣಿಯೂರು ಕಾಳುಮೆಣಸಿನ ಬಳ್ಳಿ ಕಟ್ಟೆ ರೋಗಕ್ಕೆ ಬಲಿಯಾಗಿದೆ. ಹೊಸ ಗಿಡ ಹಚ್ಚಿದ್ರೆ ಐದಾರು ಅಡಿ ಬೆಳೀತದೆ. ಮತ್ತೆ ಸಾಯ್ತದೆ. ಇದಕ್ಕೆ ಬಾಳೆ ಕೃಷಿ ಕಾರಣವೇ ಗೊತ್ತಿಲ್ಲ. ಬಳ್ಳಿ ಉಳಿಸಲು ಸುಣ್ಣ ಹಾಕಿ ನೋಡಿ ಆಯ್ತು. ಆದರೆ ಕಾಳುಮೆಣಸು ಬಳ್ಳಿ ಉಳಿಯೋದಿಲ್ಲ. ಏಲಕ್ಕಿ ಗಿಡಗಳೂ ಸತ್ ಹೋಗಿವೆ" ಎಂದು ಬದಲಾದ ಸ್ಠಿತಿಯ ಚಿತ್ರಣ ನೀಡಿದರು.
ಅಡಿಕೆ ಗಿಡಗಳಿಗೆ ಇವರ ಪೋಷಣೆ ವರುಷಕ್ಕೆ ಗಿಡಕ್ಕೆ ಒಂದು ಬುಟ್ಟಿ ಗೊಬ್ಬರ ಮತ್ತು ನೀರು, ಇಷ್ಟೇ. ಅದೇ ರೀತಿ, ಕೊಳೆ ರೋಗ ಹತೋಟಿಗೆ ಬೋರ್ಡೋ ಸಿಂಪರಣೆ ಮಾತ್ರ; ಜುಲೈ ಮತ್ತು ಒಕ್ಟೋಬರ್ ಆರಂಭದಲ್ಲಿ, ವರುಷಕ್ಕೆ ಎರಡು ಸಲ. ತನ್ನ ಸಣ್ಣ ತೋಟದಿಂದ ಇವರು ವರುಷಕ್ಕೆ ಎರಡರಿಂದ ಎರಡೂವರೆ ಕ್ವಿಂಟಾಲ್ ಒಣ ಅಡಿಕೆ ಪಡೆಯುತ್ತಾರೆ, ಅಷ್ಟೇ.
ಚಿಟಿಲ್....ಚಿಟಿಲ್....ಠಳಾರ್....ಕಣ್ಣು ಕೋರೈಸುವ ಮಿಂಚು. ದಢಲ್....ದಢಲ್....ದಢಾರ್....ಕಿವಿಗಡಚಿಕ್ಕುವ ಗುಡುಗು. ಭರ್....ಭರ್....ಭಸಾಲ್....ಆಕಾಶವೇ ಕಳಚಿಬಿದ್ದಂತೆ ಸುರಿಯುವ ಮಳೆ.
ಈ ವಿಸ್ಮಯವನ್ನು ಎವೆಯಿಕ್ಕದೆ ನೋಡುತ್ತಿದ್ದ ಪುಟ್ಟ ಮಗು ಮಳೆಯತ್ತ ಬೆರಳು ತೋರಿ ಕೇಳುತ್ತದೆ, "ಅಜ್ಜಾ, ಅದೇನು?" ಅಜ್ಜನ ಉತ್ತರ, "ಮಗೂ, ಅದು ಮಳೆ. ಆಕಾಶದಿಂದ ಬರ್ತಾ ಇದೆ." ಮಗು ಪುನಃ ಕೇಳ್ತದೆ, "ಅದು ಹೇಗೆ ಬರ್ತದೆ, ಅಜ್ಜಾ?" ಅಜ್ಜ ಯೋಚಿಸುತ್ತಾರೆ. ’ನೈಋತ್ಯ ಮಾರುತ ಮಳೆ ತರುತ್ತದೆ’ ಅನ್ನಲೇ? ಛೇ, ಹಾಗಲ್ಲ, ಮಗುವಿನ ಭಾಷೆಯಲ್ಲೇ ಹೇಳಬೇಕು ಅಂದುಕೊಳ್ತಾರೆ.
ಮಗುವಿನ ಕೈಗೊಂದು ಸ್ಟೀಲ್ ಲೋಟ ಕೊಟ್ಟು, ’ಹೇಳ್ತೇನೆ, ಇದನ್ನ ಫ್ರಿಜ್‍ನಲ್ಲಿಡು’ ಅಂತಾರೆ. ಅನಂತರ ಅಜ್ಜ - ಮೊಮ್ಮಗ ಮಳೆ ನೋಡ್ತಾ ಕೂರ್ತಾರೆ. ಐದು ನಿಮಿಷಗಳ ಬಳಿಕ ’ಆ ಲೋಟ ತಾ’ ಎಂದು ತರಿಸ್ತಾರೆ. ’ಅದನ್ನ ಮೇಜಿನ ಮೇಲಿಟ್ಟು ನೋಡ್ತಾ ಇರು’ ಅಂತಾರೆ. ಇನ್ನೂ ಐದು ನಿಮಿಷಗಳು ಸರಿಯುತ್ತವೆ. "ಏನಾಯ್ತು ಮಗೂ" ಅಜ್ಜ ಕೇಳ್ತಾರೆ. ಮಗು ಲೋಟ ತೋರಿಸ್ತಾ ಕುಪ್ಪಳಿಸುತ್ತಾ ಹೇಳ್ತದೆ, "ಅಜ್ಜಾ, ಲೋಟದಲ್ಲಿ ನೀರು ಬಂದಿದೆ." ಅಜ್ಜ ಮುಗುಳು ನಗುತ್ತಾ "ಮಳೆ ಹೀಗೇ ಬರ್ತದೆ" ಅಂತಾರೆ. ಮಗುವೂ ಮುಗುಳು ನಗುತ್ತದೆ. ಅದಕ್ಕೆ ಅರ್ಥವಾಗಿತ್ತು.
ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡಿದೆಯೇ?
ಈಗ ಬೇಸಗೆ ಮುಗಿಯುತ್ತಿದೆ. ಜೊತೆಗೆ ಮಾವಿನ ಹಂಗಾಮು ಮುಗಿಯುತ್ತಿದೆ. ಇನ್ನಷ್ಟು ಕಾಲ ಮಾವು ತಿನ್ನಲು ಸಿಗಬೇಕಾದರೆ ಏನು ಮಾಡಬೇಕು? ಮಾವಿನ ರಸಪಾಕ ಮಾಡಿಟ್ಟರೆ ಒಂದು ತಿಂಗಳು ಉಳಿದೀತು. ಮಾವಿನ ರಸ ಬಿಸಿಲಿನಲ್ಲಿ ಒಣಗಿಸಿ ಮಾಂಬಳ ಮಾಡಿಟ್ಟರೆ ಒಂದು ವರುಷ ಉಳಿದೀತು. ಮಾವಿನ ಉಪ್ಪಿನಕಾಯಿ ಮಾಡಿಟ್ಟರೆ ಎರಡು ವರುಷ ಉಳಿದೀತು.
ಹಾಗೆಯೇ, ಮಳೆನೀರು ಉಳಿಸಲು ನೂರಾರು ದಾರಿಗಳಿವೆ. ಈ ದಾರಿಗಳ ಗುರಿ - ಮಳೆ ನೀರಿಂಗಿಸುವುದು. ಇಲ್ಲಿದೆ ಅದರ ಸರಳ ಸೂತ್ರ: ಓಡುವ ನೀರನ್ನು ನಡೆಯುವಂತೆ ಮಾಡಿ; ನಡೆಯುವ ನೀರನ್ನು ತೆವಳುವಂತೆ ಮಾಡಿ; ತೆವಳುವ ನೀರನ್ನು ನಿಲ್ಲಿಸಿ; ನಿಂತ ನೀರನ್ನು ಇಂಗಿಸಿ.
ಈ ಸರಳ ಸೂತ್ರ ಬಳಸಿ ಯಶಸ್ವಿಯಾದವರ ಅನುಭವ ತಿಳಿಯೋಣ. ದಕ್ಷಿಣಕನ್ನಡದ ವಿಟ್ಲ ಗುಡ್ಡಗಳ ಊರು. ಅಲ್ಲಿನ ಪೇಟೆಯ ಎತ್ತರದ ಜಾಗದಲ್ಲಿದೆ ಇಗರ್ಜಿ. ಅದರ ಧರ್ಮಗುರು ಫಾ. ಬೆನೆಡಿಕ್ಟ್ ರೇಗೋ ಮಳೆನೀರಿಂಗಿಸಲಿಕ್ಕಾಗಿ ಅನುಸರಿಸಿದ್ದು ಇದೇ ಸೂತ್ರ. ಚರ್ಚಿನ ಕಟ್ಟಡದ ಸುತ್ತಲೂ "u" ಆಕಾರದ ಕಣಿ ತೋಡಿಸಿದರು. ಈ ಕಣಿಯೊಳಗೆ ಅಲ್ಲಲ್ಲಿ ದೊಡ್ಡ ತೊಟ್ಟಿಲಿನಂತಹ ಗುಂಡಿಗಳು. ಚರ್ಚಿನ ಚಾವಣಿ ಮತ್ತು ಅಂಗಳದಲ್ಲಿ ಬಿದ್ದ ಮಳೆನೀರೆಲ್ಲ ಈ ಕಣಿಗೆ ಹರಿದು ಬಂದು ನಿಧಾನವಾಗಿ ಇಂಗುತ್ತದೆ - ಲಕ್ಷಲಕ್ಷ ಲೀಟರ್. (ದಕ್ಷಿಣಕನ್ನಡದಲ್ಲಿ ಸರಾಸರಿ ಮಳೆ ೪,೦೦೦ ಮಿಮೀ. ಅಂದರೆ ಅಲ್ಲಿ ಪ್ರತಿ ಸೆಂಟ್ಸ್ (೪೦ ಚ.ಮೀ.) ಜಾಗದಲ್ಲಿ ವರುಷಕ್ಕೆ ಬೀಳುವ ಮಳೆ ೧.೬ ಲಕ್ಷ ಲೀಟರ್)
ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದಿಗಳನ್ನು ಗಮನಿಸಿದ್ದೀರಾ?
ಇದರ ಬದಲಾಗಿ ಬೇರೇನಾದರೂ ಮಾಡಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ. ಉದಾಹರಣೆಗೆ ಜನರಲ್ಲಿ ಜಲಜಾಗೃತಿ ಪಸರಿಸಬಹುದು. ಅದು ಹೇಗೆ? ಇಲ್ಲಿವೆ ಎರಡು ನಿದರ್ಶನಗಳು.
ಅಕ್ತೋಬರ್ ೨೦೦೩ರ ಒಂದು ದಿನ, ಮಂಗಳೂರಿನಿಂದ ೨೧ ಕಿಮೀ ದೂರದ ಬಿ.ಸಿ.ರೋಡ್ ಹತ್ತಿರದ ಜೋಡುಮಾರ್ಗದಲ್ಲಿ ಗೃಹಪ್ರವೇಶ ಸಮಾರಂಭ. ಪೂರ್ವಾಹ್ನ ಆಮಂತ್ರಿತರು, ಬಂಧುಗಳು ನೆರೆದಿದ್ದರು. ಅಲ್ಲಲ್ಲಿ ಕುಳಿತು ಮಾತಾಡುತ್ತಿದ್ದರು. ಅಷ್ತರಲ್ಲಿ ಅಲ್ಲಿ "ನೆಲ ಜಲ ಉಳಿಸುವ ನೂರಾರು ದಾರಿಗಳ" ವರ್ಣಪಾರದರ್ಶಿಕೆಗಳ ಪ್ರದರ್ಶನ ಆರಂಭವಾಯಿತು. ನಡೆಸಿಕೊಟ್ಟವರು "ನೆಲಜಲ ಉಳಿಸಿ" ಆಂದೋಲನದ ನೇತಾರ ’ಶ್ರೀ’ಪಡ್ರೆ.
ಗೃಹಪ್ರವೇಶ ಸಮಾರಂಭದಲ್ಲಿ "ನೆಲಜಲ ಉಳಿಸಿ" ಮಾಹಿತಿ ಕಾರ್ಯಕ್ರಮ ಈ ತನಕ ಕಂಡುಕೇಳಿರದ ಸಂಗತಿ ಅಲ್ಲವೇ? ಆದರೆ ಇದು ಇಂದಿನ ಅಗತ್ಯ ಎಂಬುದನ್ನು ಕಾರ್ಯಕ್ರಮದ ಬಳಿಕ ಅಲ್ಲಿ ಜರಗಿದ ಪ್ರಶ್ನೋತ್ತರವೇ ಸಾಬೀತು ಪಡಿಸಿತು. ಅಲ್ಲಿ ಸೇರಿದ್ದ ೯೦೦ ಜನರಲ್ಲಿ ಪ್ರಶ್ನೆಗಳನ್ನು ಕೇಳಿ ಕೇಳಿ ವಿಷಯ ತಿಳಿದುಕೊಂಡವರು ಅನೇಕರು. ಅವರೆಲ್ಲರೂ ತಮ್ಮ ತಮ್ಮ ಜಮೀನಿನಲ್ಲಿ, ಮನೆಗಳಲ್ಲಿ ಜಲ ಮರುಪೂರಣ ಮಾಡಲು ಪಣ ತೊಟ್ಟರು.
ವಿನೂತನ ಜಲಜಾಗೃತಿ ಕಾರ್ಯಕ್ರಮ ಏರ್ಪಡಿಸಿದವರು ಮನೆಯೊಡೆಯರಾದ ದಂಪತಿ ಡಾ.ಸುಂದರೇಶ್ ಮತ್ತು ಡಾ. ಜಾನಕಿ. ಇಂತಹ ಐಡಿಯಾ ಹೇಗೆ ಹೊಳೆಯಿತೆಂಬ ಪ್ರಶ್ನೆಗೆ ಸುಂದರೇಶ್ ಅವರ ಉತ್ತರ: "ಇಂತಹ ಸಮಾರಂಭಗಳಲ್ಲಿ ನೂರಾರು ಜನರು ಒಂದೆಡೆ ಸೇರುತ್ತಾರೆ. ಆದರೆ ಊಟದ ತನಕ ಹಾಳುಹರಟೆಯಲ್ಲೇ ಅವರ ಹೊತ್ತು ಕಳೆಯುತ್ತದೆ. ಅದರ ಬದಲಾಗಿ ಉಪಯುಕ್ತ ವಿಷಯವೊಂದನ್ನು ಅತಿಥಿಗಳಿಗೆ ತಿಳಿಸುವ ವ್ಯವಸ್ಥೆ ಮಾಡೋಣ ಅನ್ನಿಸಿತು. ತಟಕ್ಕನೆ ನನಗೆ ನೆನಪಾದದ್ದು ನಾನು ನೋಡಿದ್ದ ಶ್ರೀಪಡ್ರೆಯವರ ನೀರಿನ ಷೋ."
ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು.
ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆಯ ರೈತ ಉಮ್ಮಪ್ಪ ಯಾನೆ ಉಮೇಶ ಪೂಜಾರಿ (೫೦) ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಉಮ್ಮಪ್ಪ ಅವರು ಕೆಲವು ದಿನಗಳ ಹಿಂದೆ ತನ್ನ ತೋಟದಲ್ಲಿ ಬೋರ್‍ವೆಲ್ ತೋಡಿಸಿದ್ದರು. ಸುಮಾರು ೭೦ ಸಾವಿರ ರೂಪಾಯಿ ಸಾಲ ಮಾಡಿ ತೋಡಿಸಿದ ಬೋರ್‍ವೆಲ್ ನಲ್ಲಿ ನೀರು ಸಿಗದೇ ಇದ್ದ ಕಾರಣ ಅವರು ಚಿಂತಿತರಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರಿ, ಇಬ್ಬರು ಪುತ್ರರು ಇದ್ದಾರೆ."
ಇದನ್ನೋದಿದಾಗ ನನಗೆ ನೆನಪಾದದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಕಾಡಕೋಳಿ ಮನೆಯ ದೇವರು ಭಟ್ ಸೋದರರು. ಅಲ್ಲಿಗೆ ಹೋಗಿದ್ದಾಗ ಅವರು ಹೇಳಿದ್ದ ಮಾತು, "ಎರಡು ವರುಷ ಮುಂಚೆ ನಾವು ನಮ್ಮ ಅಡಿಕೆ ತೋಟ ಮಾರಿ ಊರು ಬಿಟ್ಟು ಹೋಗೋದಂತ ಮಾಡಿದ್ವು. ಈಗ ಧೈರ್ಯ ಬಂದಿದೆ. ಒಂದು ವರುಷ ಮಳೆ ಬಾರದಿದ್ರೂ ತೊಂದರೆ ಇಲ್ಲ. ನಮ್ಮ ಅಡಿಕೆ ತೋಟ ಉಳಿಸಿಕೊಳ್ತೇವೆ."
ತಮ್ಮ ಅಡಿಕೆ ತೋಟದ ಮೇಲ್ಭಾಗದ ಗುಡ್ಡದಲ್ಲಿ ನೀರಿಂಗಿಸುವ ಸಮತಲ ಅಗಳು ತೋರಿಸುತ್ತಾ ಅವರು ಕೇಳಿದ ಪ್ರಶ್ನೆ, "ಇದರ ಉದ್ದ ಎಷ್ಟು ಹೇಳಿ?" ಎಲ್ಲರ ಕಣ್ಣಂದಾಜಿನ ಲೆಕ್ಕ ತಪ್ಪಿತ್ತು. ಕೆಲವರು ಹೆಜ್ಜೆಗಳಿಂದ ಅಳೆಯುತ್ತಿದ್ದಂತೆ ಶ್ರೀಪತಿ ದೇವರು ಭಟ್ ಉತ್ತರ ಹೇಳಿಬಿಟ್ಟರು, "ಇಪ್ಪತ್ತು ಅಡಿ." ತಕ್ಷಣ ಹೊರಬಿತ್ತು ಎರಡನೆಯ ಪ್ರಶ್ನೆ, "ಇದರ ಅಗಲ ನಾಲ್ಕಡಿ, ಆಳ ೩ ಅಡಿ. ಇದರಲ್ಲಿ ಎಷ್ಟು ನೀರು ಹಿಡೀತದೆ?" ಉತ್ತರಿಸಲು ನಾವು ತಡಕಾಡುತ್ತಿರುವಾಗ "ಹೆಚ್ಚುಕಮ್ಮಿ ೫ ಸಾವಿರ ಲೀಟರ್ ನೀರು ಹಿಡೀತದೆ. ಇಂತಹ ನಲುವತ್ತು ಅಗಳು ಮಾಡಿಸಿದ್ದೇವೆ. ಅಲ್ಲಿಗೆ ಎಷ್ಟು ಮಳೆ ನೀರು ಈ ಗುಡ್ಡದಲ್ಲಿ ಕೊಯ್ಲಾಗುತ್ತದೆ, ನೀವೇ ಲೆಕ್ಕ ಹಾಕಿ" ಎಂದು ಸವಾಲೆಸೆದರು ಶ್ರೀಪತಿ ಭಟ್.
ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಬಿದ್ದ ಸ್ಥಳ - ಚಿರಾಪುಂಜಿ. ಆಗಸ್ಟ್ ೧೮೮೦ರಿಂದ ಜುಲೈ ೧೮೮೧ರ ವರೆಗೆ ಬಿದ್ದ ಮಳೆ ೨೨,೯೮೭ ಮಿಮೀ. ಗಿನ್ನೆಸ್ ಪುಸ್ತಕದಲ್ಲಿ ಇನ್ನೊಂದು ದಾಖಲೆಯೂ ಚಿರಾಪುಂಜಿಯ ಹೆಸರಿನಲ್ಲಿದೆ: ಒಂದೇ ದಿನದಲ್ಲಿ ಅತ್ಯಧಿಕ ಮಳೆ ಬಿದ್ದ ಸ್ಥಳ ಅದು. ೧೯೭೪ರ ಅದೊಂದು ದಿನ ಪ್ರಳಯವಾದಂತೆ ಮಳೆ ಹೊಯ್ದಿತ್ತು - ೨,೪೫೫ ಮಿಮೀ.
"ಹೌದು, ಅದೊಂದು ಕಾಲವಿತ್ತು. ಮಳೆ ಶುರುವಾಯಿತೆಂದರೆ ಆಕಾಶವೇ ಕಳಚಿ ಬಿದ್ದಂತೆ ಮಳೆ ಹೊಯ್ಯುತ್ತಿತ್ತು. ಮೂರು ದಿನ ಸುರಿದರೂ ಮಳೆ ನಿಲ್ಲದಿದ್ದರೆ, ಅದು ಒಂಭತ್ತು ದಿನಗಳ ವರೆಗೆ ಎಡೆಬಿಡದೆ ಸುರಿಯುವ ಮಳೆ ಎಂದು ನಮಗೆ ಗೊತ್ತಾಗುತ್ತಿತ್ತು. ಆಗ ಮುಂದಿನ ಬೆಳೆಗಾಗಿ ಹೊಲಗಳಲ್ಲಿ ನೆಡುವ ಕೆಲಸ ಶುರು ಮಾಡುತ್ತಿದ್ದೆವು" ಎಂದು ನೆನಪು ಮಾಡಿಕೊಳ್ಳುತ್ತಾರೆ, ೭೫ ವರುಷಗಳ ಮುದುಕ.
ಚಿರಾಪುಂಜಿಯಿಂದ ಕೆಲವು ಕಿಮೀ ದೂರದ ಹಳ್ಳಿ ಟಿರ್‍ನಾದಲ್ಲಿ ತನ್ನ ಬಾಲ್ಯದ ದಿನಗಳಲ್ಲಿ ಹಾಗೆ ಮಳೆ ಹೊಯ್ಯುತ್ತಿದ್ದ ನೆನಪುಗಳು ಅವನಲ್ಲಿ ಮಾಸಿಲ್ಲ. ಆಗ ಮಳೆಗಾಲದಲ್ಲಿ ಕಿತ್ತಳೆ, ಗೆಣಸು, ವೀಳ್ಯದೆಲೆ ಬಳ್ಳಿ, ಕಾಫಿ ಗಿಡಗಳು, ಕೇನೆ ಗೆಡ್ಡೆಗಳು ಇವನ್ನೆಲ್ಲ ನೆಡುತ್ತಿದ್ದರಂತೆ. "ಆಗ ನಮಗೆ ಈಗಿನಂತೆ ಆಹಾರದ ಚಿಂತೆ ಇರಲಿಲ್ಲ. ಈಗ ಎಲ್ಲವೂ ತಲೆಕೆಳಗಾಗಿದೆ," ಎನ್ನುತ್ತಾನೆ ಆ ಹಿರಿಯ ಆಕಾಶ ದಿಟ್ಟಿಸುತ್ತಾ.
ಹೌದು, ಈಗ ಎಲ್ಲವೂ ತಲೆಕೆಳಗಾಗಿದೆ. ಗೌಹಾತಿಯ ಪ್ರಾದೇಶಿಕ ಹವಾಮಾನ ಕೇಂದ್ರದ ದಾಖಲೆಗಳ ಪ್ರಕಾರ, ಕಳೆದ ದಶಕದಲ್ಲಿ ಚಿರಾಪುಂಜಿಯ ವಾರ್ಷಿಕ ಸರಾಸರಿ ಮಳೆ ಪ್ರಮಾಣ ೧೧,೦೭೦ ಮಿಮೀ. ೨೦೦೬ರಲ್ಲಿ ಬಿದ್ದ ಮಳೆ ಕೇವಲ ೮,೭೩೦ ಮಿಮೀ. ಅಂದರೆ ಸರಾಸರಿ ಮಳೆಗಿಂತಲೂ ಶೇಕಡಾ ೩೫ ಕಡಿಮೆ.
"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ ರೂಪಾಯಿ ೨೧೧ ಕೋಟಿ ಬಿಡುಗಡೆ ಮಾಡಿದೆ" - ಇದು ೨೭ ಮಾರ್ಚ್ ೨೦೦೯ರಂದು ಕರ್ನಾಟಕದ ಹಲವು ವಾರ್ತಾಪತ್ರಿಕೆಗಳಲ್ಲಿ ಮುಖಪುಟ ಸುದ್ದಿ.
"ರಾಜ್ಯದ ೪೫ ಹಳ್ಳಿಗಳಿಗೆ ಟ್ಯಾಂಕರುಗಳಲ್ಲಿ ಕುಡಿಯುವ ನೀರು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ" ಎಂಬ ಸುದ್ದಿ ಓದುತ್ತಿದ್ದಂತೆ ೫ ವರುಷಗಳ ಮುಂಚಿನ ಒಂದಿನ ನೆನಪಾಯಿತು.ಅಂದು ೨೭ ಫೆಬ್ರವರಿ ೨೦೦೪. ಬಿಸಿಲು ಚುರುಕಾಗಿತ್ತು. ಬೆಳಗ್ಗೆ ೯ರ ಹೊತ್ತಿಗೆ ಕಡೂರು ಹತ್ತಿರದ ಬಿಳೇಕಲ್ಲು ಹಳ್ಳಿಗೆ ಹೋಗಿದ್ದಾಗ, ಹಳ್ಳಿಯ ಕೆಲವರು ಎತ್ತಿನ ಗಾಡಿಗಳಲ್ಲಿ ಬಟ್ಟೆ ಹೇರಿಕೊಂಡು ಹೊರಟಿದ್ದರು, "ಇದೇನು ಗುಳೇ ಹೊರಟಿದ್ದಾರಾ?" ಎಂದು ಕೇಳಿದೆ, ಶಾಲಾ ಮಾಸ್ಟರ್ ಪಾಂಡುರಂಗಪ್ಪನವರನ್ನು. "ಇಲ್ಲ ಸಾರ್, ಬಟ್ಟೆ ಒಗೀಲಿಕ್ಕೆ ಅಯ್ಯನ ಕೆರೆಗೆ ಹೊರಟಿದ್ದಾರೆ" ಎಂದರು.
"ಅಲ್ಲಿಂದ ಕಾಲುವೇಲಿ ನಿಮ್ ಹಳ್ಳಿಗೆ ನೀರು ಬರಾಕಿಲ್ವಾ?" ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ, "ಅಯ್ಯೋ, ಆ ಕಾಲ ಹೋಯ್ತು. ಕಾಲುವೇಲಿ ನೀರ್ ಬಿಡೋದು ಬಂದ್ ಮಾಡ್ಯಾರೆ. ಈಗ ಅಯ್ಯನ ಕೆರೆ ನೀರು ಏನಿದ್ರೂ ಜನರಿಗೆ ಬಟ್ಟೆ ಒಗೀಲಿಕ್ಕೆ ಮತ್ತು ಜಾನುವಾರುಗಳಿಗೆ ಕುಡೀಲಿಕ್ಕೆ ಮಾತ್ರ. ನಾನು ಹುಟ್ಟಿದ್ಮೇಲೆ ಹಿಂಗಾಗಿದ್ದು ಇದೇ ಮೊದಲು".